ಸೋಮವಾರ, ಜುಲೈ 4, 2022
22 °C

ಬೆರಗಿನ ಬೆಳಕು: ಜೀವಿಗಳ ಇಕ್ಕಟ್ಟು

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಮುಕ್ಕೋಟಿ ದೇವತೆಗಳಾಳುತಿಹ ಲೋಕದಲಿ |
ದಿಕ್ಕುಗಾಣದೆ ಜೀವಿಯಲೆವುದಚ್ಚರಿಯೇಂ ? ||
ಒಕ್ಕಟ್ಟನೊಡೆಯರೇ ಕಲಿಯದಿರೆ ನಮ್ಮ ಗತಿ - |
ಗಿಕ್ಕಟ್ಟು ತಪ್ಪುವುದೆ ? – ಮಂಕುತಿಮ್ಮ || 368 ||

ಪದ-ಅರ್ಥ: ಮುಕ್ಕೋಟಿ=ಮೂರು ಕೋಟಿ, ದೇವತೆಗಳಾಳುತಿಹ=ದೇವತೆಗಳು+ಆಳುತಿಹ, ಜೀವಿಯಲೆವುದಚ್ಚರಿಯೇಂ=ಜೀವಿ+ಅಲೆವುದು+ಅಚ್ಚರಿಯೇಂ(ಆಶ್ಚರ್ಯವೇ), ಒಕ್ಕೊಟ್ಟನೊಡೆಯರೇ=ಒಕ್ಕಟ್ಟನ್ನು(ಒಂದಾಗಿರುವುದನ್ನು)+ಒಡೆಯರೇ, ಗತಿಗಿಕ್ಕಟ್ಟು=ಗತಿಗೆ+ಇಕ್ಕಟ್ಟು(ಕಷ್ಟ, ಸಂಕಟ).

ವಾಚ್ಯಾರ್ಥ: ಮೂರು ಕೋಟಿ ದೇವತೆಗಳು ಆಳುತ್ತಿರುವ ಈ ಲೋಕದಲ್ಲಿ ಬದುಕುವ ಜೀವಿಗಳು ದಿಕ್ಕು ಕಾಣದೆ ತಿರುಗುತ್ತಿರುವುದು ಆಶ್ಚರ್ಯವೇ? ಯಜಮಾನರುಗಳಾದ ದೇವತೆಗಳೇ ಒಗ್ಗಟ್ಟಾಗಿ ಇರಲು ಕಲಿಯದಿದ್ದರೆ ಅವರನ್ನು ನಂಬಿದ ನಮಗೆ ಸಂಕಟ ತಪ್ಪೀತೇ?

ವಿವರಣೆ: ಮನುಷ್ಯ ಕಲ್ಪಿಸಿಕೊಂಡ ದೇವರ, ದೇವತೆಗಳ ಕಲ್ಪನೆ ಅತ್ಯಂತ ವಿಶಿಷ್ಟವಾದದ್ದು. ನಮ್ಮಲ್ಲಿ ಮೂರು ಕೋಟಿ ದೇವತೆಗಳು ಇದ್ದಾರೆಂಬ ನಂಬಿಕೆ. ಗಮನಿಸಿ ನೋಡಿ, ಎಲ್ಲೆಲ್ಲಿಯೂ ದೇವಸ್ಥಾನಗಳು. ಪ್ರತಿಯೊಂದು ಗ್ರಾಮದಲ್ಲೊಂದು ಗ್ರಾಮದೇವತೆ. ಯಾವುದೇ ಗುಡ್ಡ, ಪರ್ವತವನ್ನು ನೋಡಿ, ಅದರ ಮೇಲೊಂದು ದೇವಸ್ಥಾನವಿದೆ. ಅದೆಷ್ಟು ಬಗೆಯ ದೇವರುಗಳು! ಪುರುಷ ದೇವರುಗಳು, ಸ್ತ್ರೀ ದೇವರುಗಳು, ಪಶು, ಪಕ್ಷಿಗಳ ದೈವತ್ವದ ಗುಡಿಗಳು ಎಲ್ಲೆಲ್ಲಿಯೂ ಕಾಣಸಿಗುತ್ತವೆ. ಪ್ರತಿಯೊಂದು ದೇವತೆಯ ಬಗ್ಗೆ ಒಂದು ಸುರಮ್ಯ ಕಥೆ.

ದೇವರುಗಳಿಗೆ ನಮ್ಮ ಹಾಗೆಯೇ ಮದುವೆಯಾಗುತ್ತದೆ, ಮಕ್ಕಳಾಗುತ್ತಾರೆ. ಅವರೂ ನಮ್ಮ ಹಾಗೆಯೇ ಪರಿಸ್ಥಿತಿಗೆ ಸಿಕ್ಕು ಒದ್ದಾಡುತ್ತಾರೆ. ಆದರೂ ನಮಗೆ ದೈವವಾಗಿ ನಿಂತಿದ್ದಾರೆ. ನಮಗೆ ಪ್ರತಿಯೊಂದು ನದಿಯೂ ದೈವಸ್ವರೂಪ. ಪ್ರತಿಯೊಂದು ಮರ, ಪ್ರಾಣಿಗೆ ಒಂದು ದೈವದ ಆರೋಪ ಮಾಡಿದ್ದೇವೆ. ಬಹುಶಃ ಈ ಮೂರು ಕೋಟಿ ದೇವತೆಗಳು ಎಂಬ ಕಲ್ಪನೆ ಬಂದಾಗ, ನಮ್ಮ ಅರಿವಿನ ವಿಸ್ತಾರದಲ್ಲಿ ಮೂರು ಕೋಟಿ ಜನರು ಇದ್ದಿರಬಹುದೇನೋ! ಹಾಗೆಂದರೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ, ಪ್ರಾಣಿಯಲ್ಲಿ, ಪಕ್ಷಿಯಲ್ಲಿ, ಜೀವಿಯಲ್ಲಿ, ಮರ, ಗಿಡ, ಪಾಷಾಣ, ಮಣ್ಣು ಹೀಗೆ ಎಲ್ಲದರಲ್ಲೂ ದೈವತ್ವವನ್ನು ಕಂಡು ಗೌರವಿಸುವ ಸಂಸ್ಕೃತಿ ಆಗ ನಮ್ಮದಾಗಿತ್ತು ಎನ್ನಿಸುತ್ತದೆ.

ಅದು ಸುಂದರವಾಗಿತ್ತು. ಬರಬರುತ್ತಾ ಆ ದರ್ಶನ ಮರೆಯಾಗಿ ಕೇವಲ ಆಕೃತಿ, ವಿಗ್ರಹಗಳು ಮುಖ್ಯವಾಗತೊಡಗಿದವು. ಒಂದೊಂದು ದೇವತೆಯನ್ನು ನಂಬುವ ಒಂದೊಂದು ಪಂಗಡಗಳು ಸಿದ್ಧವಾದವು. ಅವುಗಳಲ್ಲಿ ಪೈಪೋಟಿ ಹೆಚ್ಚಿತು. ನಮ್ಮ ದೇವರು ಹೆಚ್ಚು ಜಾಗ್ರತವಾದದ್ದು ಹೆಮ್ಮೆ ಸ್ವಲ್ಪ ಹೆಚ್ಚೇ ಆಯಿತು. ಅದನ್ನು ತೋರಲು ಬಹುದೊಡ್ಡ ದೇವಸ್ಥಾನಗಳು ಹುಟ್ಟಿಕೊಂಡವು. ಎಷ್ಟು ಶಕ್ತಿಶಾಲಿಯಾದ ಪಂಗಡವೋ ಅಷ್ಟು ದೊಡ್ಡ ದೇವಸ್ಥಾನ. ಅದರ ಸುತ್ತ ಕಥೆಗಳು, ಪವಾಡಗಳು ಸೃಷ್ಟಿಯಾದವು.

ದೇವತೆಗಳ ನಡುವೆ ಭಿನ್ನಾಭಿಪ್ರಾಯ, ಪೈಪೋಟಿ ಇದೆಯೋ ಇಲ್ಲವೋ ತಿಳಿಯದು. ಆದರೆ ಹಿಂಬಾಲಕರ ನಡುವೆ ಮಾತ್ರ ತಕರಾರುಗಳು ಬಂದವು. ಆದ್ದರಿಂದ ಅಶಾಂತಿ, ಇಕ್ಕಟ್ಟು. ಇದನ್ನು ಕಗ್ಗ ತುಂಬ ಮಾರ್ಮಿಕವಾಗಿ ಹಾಸ್ಯದ ಲೇಪದಲ್ಲಿ ಹೇಳುತ್ತದೆ. ಹೀಗೆ ಮೂರು ಕೋಟಿ ದೇವತೆಗಳಿದ್ದಾಗ, ಅವರಲ್ಲೇ ಒಗ್ಗಟ್ಟು ಇಲ್ಲದಿದ್ದರೆ ಅವರನ್ನು ನಂಬಿದ ಜೀವಿಗಳ ಗತಿಯೇನು? ಅವರು ದಿಕ್ಕೆಟ್ಟು ಅಲೆಯುವುದೊಂದೇ ಗತಿ. ಹೀಗೆ ಒಡೆಯರೇ ಒಕ್ಕಟ್ಟನ್ನು ಕಲಿಯದಿದ್ದರೆ, ಅವರ ಹಿಂಬಾಲಕರಿಗೆ ಇಕ್ಕಟ್ಟು ಕಟ್ಟಿಟ್ಟದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು