ಶುಕ್ರವಾರ, ಜುಲೈ 23, 2021
20 °C

ಗುರುರಾಜ ಕರಜಗಿ ಅಂಕಣ–ಬೆರಗಿನ ಬೆಳಕು| ಮೋಹ-ದಾಹ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹೊರಗೆ ಹೊಳೆವೊಂದು ಹೊಳಪಿನ
ಕಿರಣವೆನ್ನೆದೆಯೊ |
ಳುರಿಯನೆಬ್ಬಿಸಿ ಹೊಗೆಯನೆರಚಿ ಕಣ್ಗಳಿಗೆ ||
ಕೆರಳಿಪುದು ಕರಣಗಳ, ಮರಳಿಪುದು ಹರಣಗಳ |
ಹೊರಮೋಹವೊಳದಾಹ – ಮಂಕುತಿಮ್ಮ

ಪದ-ಅರ್ಥ: ಹೊಳೆವೊಂದು=ಹೊಳೆವ+ಒಂದು, ಕಿರಣವೆನ್ನೆದೆಯೊಳುರಿಯನೆಬ್ಬಿಸಿ=ಕಿರಣ+
ಎನ್ನ+ಎದೆಯೊಳು+ಉರಿಯನ್ನು+ಎಬ್ಬಿಸಿ, ಹೊಗೆಯನೆರಚಿ=ಹೊಗೆಯನು+ಎರಚಿ(ಚೆಲ್ಲಿ), ಕರಣಗಳ=ಇಂದ್ರಿಯಗಳ, ಹೊರಮೋಹವೊಳದಾಹ=ಹೊರಮೋಹ+ಒಳದಾಹ.

ವಾಚ್ಯಾರ್ಥ: ಹೊರಗೆ ಹೊಳೆಯುವ ಹೊಳಪಿನ ಕಿರಣವೊಂದು ನನ್ನ ಹೃದಯದಲ್ಲಿ ಉರಿಯನ್ನು ಏಳಿಸಿ, ಅದರ ಹೊಗೆ ನನ್ನ ಕಣ್ಣುಗಳನ್ನು ಮಂದಗೊಳಿಸಿ, ಇಂದ್ರಿಯಗಳನ್ನು ಕೆಣಕುತ್ತದೆ, ಪ್ರಾಣಗಳನ್ನು ಕಳೆಯುತ್ತದೆ. ಹೊರಗಿನ ಮೋಹದಿಂದ ಒಳಗೆ ದಾಹ.

ವಿವರಣೆ: ಪಕ್ಕದ ಮನೆಯವರು ಉದ್ದವಾದ ಕಾರು ತರುವವರೆಗೆ ನಮ್ಮ ಮನೆಯಲ್ಲಿ ನೆಮ್ಮದಿ ಇತ್ತು ಎಂಬ ಒಂದು ಸುಂದರವಾದ ಮಾತಿದೆ. ಕಾರು ನಮ್ಮದಲ್ಲ, ಪಕ್ಕದವರದು. ಆದರೆ ಅದರ ಸೊಬಗು, ಹೊಳಪು, ನಮ್ಮ ಮನಸ್ಸನ್ನು ಸೆಳೆಯುತ್ತದೆ. ಇದುವರೆಗೂ ಸುಂದರವಾಗಿ ಕಾಣುತ್ತಿದ್ದ ನಮ್ಮ ಕಾರು ಹಳೆಯದಾಗಿ, ವಸ್ತು ಸಂಗ್ರಹಾಲಯದ ವಸ್ತುವಾಗಿ, ಹೀನವಾಗಿ ಕಾಣತೊಡಗುತ್ತದೆ. ಪಕ್ಕದ ಮನೆಯವರ ಕಾರಿಗಿಂತ ಗೇಣು ಉದ್ದದ ಕಾರು ತರಲೇಬೇಕೆಂಬ ಆಸೆ ಹುಟ್ಟುತ್ತದೆ. ಅದಕ್ಕಾಗಿ ಪ್ರಯಾಸ, ಪ್ರಾಮಾಣಿಕವಾಗಿ ಅದನ್ನ ಪಡೆಯಲು ಅಸಾಧ್ಯವೆನ್ನಿಸಿದಾಗ ಗುರಿ ಮುಖ್ಯವಾಗಿ, ನೀತಿ ಜಾರಿ ಹೋಗುತ್ತದೆ. ಬದುಕು ತಳಮಳವಾಗುತ್ತದೆ. ಕಾರು ಒಂದು ಉದಾಹರಣೆ ಮಾತ್ರ. ಇಂಥ, ಇದಕ್ಕಿಂತ ಪ್ರಬಲವಾದ ಸೆಳೆತಗಳು ಬೇಕಾದಷ್ಟಿವೆ.

ರಾವಣ ಸಾಮಾನ್ಯನಲ್ಲ. ಆತ ಮಹಾಬ್ರಾಹ್ಮಣ. ಪ್ರಸಿದ್ಧವಾದ ರುದ್ರಾಭಿಷೇಕವಿಧಿಯನ್ನು ರಚನೆ ಮಾಡಿದವನು ರಾವಣ. ಮಹಾಶಿವಭಕ್ತ. ತನ್ನ ಎದೆಯನ್ನು ಸೀಳಿಕೊಂಡು, ನರಗಳನ್ನು ಹೊರಗೆಳೆದು, ಅವುಗಳನ್ನು ತಂತಿಯಂತೆ ಮೀಟಿ, ಹಾಡಿ, ಈಶ್ವರನನ್ನು ಒಲಿಸಿಕೊಂಡು, ಅವನ ಆತ್ಮಲಿಂಗವನ್ನು ಪಡೆದವನು ಅವನೊಬ್ಬನೆ. ಅವನು ವೇದಾಧಿಕಾರಿ. ಅವನಿಗೆ ಧರ್ಮ ಯಾವುದು, ಅಧರ್ಮ ಯಾವುದು ಎಂಬುದು ತಿಳಿದಿಲ್ಲ ಎನ್ನೋಣವೆ? ಅವನಿಗೆ ಕೇವಲ ಶಾಸ್ತ್ರಬಲ ಮಾತ್ರ ಇರಲಿಲ್ಲ, ಅಪಾರವಾದ ಶಸ್ತ್ರ ಹಾಗೂ ದೇಹಬಲವಿತ್ತು. ಆತ ಅದಮ್ಯನಾಗಿದ್ದ. ಆದರೆ ಸೋದರಿ ಶೂರ್ಪನಖಿ ಬಿಡಿಸಿದ ಸುಂದರ ಸೀತೆಯ ರೂಪ ಅವನ ಮನವನ್ನು ಕೆತ್ತಿತು. ಆಕೆಯನ್ನು ಕಂಡಾಗಲಂತೂ, ಅದರ ಸೆಳೆತ ಅವನಲ್ಲಿ ಕಾಮದಾಹವನ್ನು ಕೆರಳಿಸಿ, ಜ್ಞಾನವನ್ನು, ವಿವೇಕವನ್ನು ಕಳೆದುಬಿಟ್ಟಿತು. ಧರ್ಮಾಂಧನಾಗಿ, ಖಳನಾಯಕನಾಗಿ ತನ್ನದೇ ಸಮೃದ್ಧ ದೇಶದ ನೆಲದ ಮೇಲೆ ಬಿದ್ದು ಸಾಯುವಂತಾಯಿತು.

ಈ ಕಗ್ಗದ ಸಂದೇಶ ಇದೇ. ಹೊರಗೆ ಯಾವುದೋ ರೂಪ, ಆಸೆ ಹೊಳಪನ್ನು ಉಕ್ಕಿಸಿ, ಹೃದಯದಲ್ಲಿ ಉರಿಯನ್ನು ಎಬ್ಬಿಸುತ್ತದೆ, ಅದರ ಹೊಗೆ ಕಣ್ಣುಗಳನ್ನು ಆವರಿಸಿ, ದೃಷ್ಟಿಯನ್ನು ಮಂಕುಗೊಳಿಸುತ್ತದೆ. ಇಂದ್ರಿಯಗಳು ತಾಳ ತಪ್ಪಿ ಕುಣಿಯುತ್ತವೆ, ಶಕ್ತಿಗಳನ್ನು ಕಳೆದುಬಿಡುತ್ತವೆ. ನಮ್ಮ ಅಂತರಂಗದ ನಾಳಗಳು ತುಂಬ ತೆಳುವಾದ ಪೊರೆಯಿಂದ ಆದವುಗಳು. ಪೊರೆಯ ಬದಿಯಲ್ಲಿ ಯಾವುದೇ ಪ್ರಚೋದನೆ ಸಾಗಿ ಬಂದರೆ, ಅದು ನಾಳದ ಪೊರೆಯನ್ನು ಒತ್ತಿ, ಅದರೊಳಗೆ ಸೋಸಿ ಹೋಗಿ ಅಲ್ಲಿ ನಿದ್ರಿಸುತ್ತಿದ್ದ ಭಾವನೆಯ ಅಣುಗಳನ್ನು ಕೆಣಕಿ ಕೆರಳಿಸುತ್ತವೆ. ಹೊರಗೆ ಹುಟ್ಟಿದ ಮೋಹ, ಒಳಗೆ ದಾಹವಾಗಿ ಕಾಡುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು