ಭಾನುವಾರ, ಮೇ 29, 2022
30 °C

ಗುರುರಾಜ ಕರಜಗಿ ಅಂಕಣ- ಬೆರಗಿನ ಬೆಳಕು| ಪುರುಷತೆಯ ಸೇತುವೆ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಪರದೈವವನು ತೊರೆಯೆ ಗತಿ ನರನಿಗಿಲ್ಲ ದಿಟ |
ನರನಿಲ್ಲದಿರೆ ದೇವನನು ಕೇಳ್ಪರಾರು? ||
ಪುರುಷತೆಯೆ ಸೇತುವೆ ಮೃಗತ್ವದಿಂ ದಿವ್ಯತೆಗೆ |
ಮುರಿಯದಿರು ಸೇತುವೆಯ – ಮಂಕುತಿಮ್ಮ
⇒|| 529 ||

ಪದ-ಅರ್ಥ: ತೊರೆಯೆ=ಬಿಟ್ಟರೆ, ನರನಿಲ್ಲದಿರೆ=ನರನು+ಇಲ್ಲದಿರೆ, ಕೇಳ್ಪರಾರು=ಕೇಳ್ಪರು(ಕೇಳುವವರು)+ಯಾರು,

ವಾಚ್ಯಾರ್ಥ: ಭಗವಂತನನ್ನು ಬಿಟ್ಟರೆ ನರನಿಗೆ ಗತಿ ಇಲ್ಲ. ಅದು ಸರಿ. ನರನೇ ಇಲ್ಲದಿದ್ದರೆ ದೇವರನ್ನು ಕೇಳುವವರು ಯಾರು? ಪುರುಷತೆಯೆ ಮೃಗತ್ವಕ್ಕೂ, ದಿವ್ಯತೆಗೂ ಸೇತುವೆ. ಆ ಸೇತುವೆಯನ್ನು ಮುರಿಯದಿರು.

ವಿವರಣೆ: ದೇವರು ಎಂಬ ಕಲ್ಪನೆ ಬಹುಶಃ ಮನುಷ್ಯ ಎನ್ನುವ ಜೀವ ಭೂಮಿಗೆ ಬಂದಾಗಿನಿಂದಲೇ ಇರಬಹುದು. ನಾನೊಂದು ಮನೆಯನ್ನು ನೋಡುತ್ತೇನೆ. ಅದು ಇದೆ. ಆದ್ದರಿಂದ ಅದನ್ನು ಯಾರಾದರೂ ಕಟ್ಟಿಸಿರಲೇಬೇಕು ಎಂಬ ತೀರ್ಮಾನಕ್ಕೆ ಬರುತ್ತೇನೆ. ಅಂತೆಯೇ ಪ್ರಪಂಚದ ಪ್ರತಿಯೊಂದು ವಸ್ತುವೂ ಸೃಷ್ಟಿಯಾದ್ದರಿಂದ, ಸೃಷ್ಟಿಕರ್ತನೊಬ್ಬನಿರಲೇಬೇಕೆಂಬ ತಾರ್ಕಿಕ ತೀರ್ಮಾನಕ್ಕೆ ಮನುಷ್ಯ ಬಂದ. ಇಡೀ ಪ್ರಪಂಚವನ್ನೇ ಸೃಷ್ಟಿ ಮಾಡಿದ್ದರಿಂದ ಅವನು ಬಹಳ ದೊಡ್ಡವನು, ಅಸಾಧ್ಯ ಶಕ್ತಿವಂತನೂ ಆಗಿರಬೇಕೆಂಬ ನಂಬಿಕೆ ಬೆಳೆಯಿತು. ತಾನು ಕಲ್ಪಿಸಿಕೊಂಡ ದೇವರು ತುಂಬ ದೊಡ್ಡವನಾದ್ದರಿಂದ ಅವನ ಬಗ್ಗೆ ಗೌರವದ ಜೊತೆಗೆ ಭಯವೂ ಬಂದಿತು. ದೇವರು ರಕ್ಷಕ, ಉದ್ಧಾರಕನಾದ. ಅವನು ಭಯಕೃತ್. ಭಯನಾಶಕ. ಅಂದರೆ ಅವನು ಭಯವನ್ನು ಹುಟ್ಟಿಸುವವನೂ ಹೌದು, ಭಯನಾಶಕನೂ ಹೌದು. ಆದ್ದರಿಂದ ಗೌರವದಿಂದಾಗಲಿ, ಭಯದಿಂದಾಗಲಿ, ಅವನನ್ನು ಮನುಷ್ಯ ನೆನೆಯುತ್ತಲೇ ಇರುತ್ತಾನೆ. ಎಲ್ಲದಕ್ಕೂ ಕಾರಣನಾದ, ಸರ್ವಶಕ್ತನಾದ ಭಗವಂತನ ರಕ್ಷಣೆಯ ಅವಶ್ಯಕತೆಯನ್ನು ಮನಗಂಡ ಮನುಷ್ಯನಿಗೆ ದೇವರನ್ನು ಬಿಟ್ಟರೆ ಗತಿಯಿಲ್ಲ.

ಅದು ಸರಿ. ಮನುಷ್ಯನ ಕಲ್ಪನೆ ದೇವರು. ಮನುಷ್ಯನೇ ಇಲ್ಲದೆ ಹೋದರೆ, ದೇವರನ್ನು ಕೇಳುವವರಾರು?

ಕಗ್ಗದ ಮುಂದಿನ ಎರಡು ಸಾಲುಗಳು ತುಂಬ ಮಹತ್ವಪೂರ್ಣವಾದವು. ಮೃಗತ್ವಕ್ಕೂ, ದೇವತ್ವಕ್ಕೂ ಸೇತುವೆಯಾದದ್ದು ಪುರುಷತೆ ಎನ್ನುತ್ತದೆ. ಪುರುಷತೆ ಎನ್ನುವ ಪದ ಕೇವಲ ಪುರುಷರನ್ನುದ್ದೇಶಿಸಿದ್ದಲ್ಲ. ಅದೊಂದು ವಿಶೇಷ ಗುಣ. ಅದರಲ್ಲಿ ಶಿಸ್ತು, ಸಂಯಮ, ಪರಿಶ್ರಮ, ಚಿಂತನೆಗಳು ಸೇರಿವೆ. ಇವೆಲ್ಲ ಸೇರಿ ನೈತಿಕತೆಯಾಗುತ್ತದೆ. ನಾವು ಸಮಾಜದಲ್ಲಿ ಶಾಂತಿಯಿಂದ, ನೆಮ್ಮದಿಯಿಂದ ಸಹಬಾಳ್ವೆ ನಡೆಸುವುದಕ್ಕೆ ಇವು ಅತ್ಯಂತ ಅವಶ್ಯಕ. ನನಗೆ ಬೇಕು ಎನ್ನಿಸಿದ್ದನ್ನು ಕಸಿದುಕೊಳ್ಳುವುದು ಮೃಗೀಯ ನಡೆ. ನನ್ನ ಅಪೇಕ್ಷೆಗಳನ್ನು ತಡೆಹಿಡಿದು, ಮತ್ತೊಬ್ಬರಿಗೆ ಅದರಿಂದ ತೊಂದರೆಯಾಗದಂತೆ ನಡೆಯುವುದು ಸಂಯಮ. ನನಗಿಷ್ಟವಾಗದವರನ್ನು ಕೊಂದು ಹಾಕುವುದು ಮೃಗೀಯತೆ. ಅಂಥವರೊಡನೆಯೂ ಸಹಜೀವನ ನಡೆಸುವುದು ದಿವ್ಯತೆಯ ಲಕ್ಷಣ. ಎಲ್ಲ ಪ್ರಗತಿಯೂ ದಿವ್ಯತೆಯ ಅಭಿವ್ಯಕ್ತಿ. ಸ್ವಾಮಿ ವಿವೇಕಾನಂದರು ಹೇಳುತ್ತಾರೆ, ‘ಆತ್ಮದ ಅನಂತ ಶಕ್ತಿಯನ್ನು ಭೌತಿಕ ಪ್ರಪಂಚದ ಮೇಲೆ ಬೀರಿದರೆ ಭೌತಿಕ ಬೆಳವಣಿಗೆಯಾಗುತ್ತವೆ, ಅದನ್ನು ಆಲೋಚನಾ ಪ್ರಪಂಚದ ಮೇಲೆ ಬೀರಿದರೆ ಬುದ್ಧಿಯ ಬೆಳವಣಿಗೆಯಾಗುತ್ತದೆ, ಅದನ್ನು ತನ್ನ ಮೇಲೆಯೇ ಬೀರಿಕೊಂಡರೆ ಮಾನವನನ್ನು ದೇವನನ್ನಾಗಿ ಮಾಡುತ್ತದೆ’. ಈ ಆತ್ಮಶಕ್ತಿಯ ಅಭಿವ್ಯಕ್ತಿಯೇ ಪುರುಷತೆ. ಮೃಗತ್ವದಿಂದ ದೈವತ್ವಕ್ಕಿರುವ ಸೇತುವೆ ಈ ಪುರುಷತೆ. ಅದನ್ನು ಮುರಿಯಬಾರದು.  

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು