ಗುರುವಾರ , ಮಾರ್ಚ್ 23, 2023
23 °C

ಗುರುರಾಜ ಕರಜಗಿ ಅಂಕಣ – ಬೆರಗಿನ ಬೆಳಕು| ಆತ್ಮದರ್ಶನಿಯ ಲಕ್ಷಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದ್ವೈತವೇನದ್ವೈತವೇನಾತ್ಮದರ್ಶನಿಗೆ ? |
ಶ್ರೌತಾದಿವಿಧಿಯೇನು ? ತಪನಿಯಮವೇನು ? ||
ನೀತಿ ಸರ್ವಾತ್ಮಮತಿಯದರಿನಮಿತ ಪ್ರೀತಿ |
ಭೀತಿಯಿಲ್ಲದನವನು – ಮಂಕುತಿಮ್ಮ || 809 ||

ಪದ-ಅರ್ಥ: ದ್ವೈತವೇನದ್ವೈತವೇನಾತ್ಮದರ್ಶನಿಗೆ =ದ್ವೈತವೇನು+ಅದ್ವೈತವೇನು+ಆತ್ಮದರ್ಶನಿಗೆ(ಆತ್ಮದರ್ಶನವಾದವನಿಗೆ), ಶ್ರೌತಾದಿವಿಧಿಯೇನು+ಶ್ರೌತಾದಿ(ಶ್ರುತಿಗಳ)+ವಿಧಿ+ಏನು, ಸರ್ವಾತ್ಮಮತಿಯದರಿನಮಿತ ಪ್ರೀತಿ=ಸರ್ವಾತ್ಮಮತಿ+ಅದರಿನ್(ಅದರಿಂದ)+ಅಮಿತ ಪ್ರೀತಿ, ಭೀತಿಯಿಲ್ಲದವನು=ಭೀತಿ+ಇಲ್ಲದನ್(ಇರದವನು)+ಅವನು

ವಾಚ್ಯಾರ್ಥ: ಆತ್ಮದರ್ಶನವಾದವನಿಗೆ ದ್ವೈತವೇನು, ಅದ್ವೈತವೇನು? ಅವನಿಗೆ ಶ್ರುತಿಗಳು ವಿಧಿಸಿರುವ ನಿಯಮಗಳು, ತಪಸ್ಸು ಬೇಕೇ? ನೀತಿ ಮತ್ತು ಎಲ್ಲರಲ್ಲೂ ಪರಸತ್ವದ ದರ್ಶನದಿಂದ ಮತ್ತು ಅದರಿಂದ ದೊರೆತ ಅಮಿತವಾದ ಪ್ರೀತಿಯಿಂದ ಆತ ಭಯರಹಿತನಾಗಿರುತ್ತಾನೆ.

ವಿವರಣೆ: ನಮ್ಮಲ್ಲಿ ವೇದಾಂತದ ಮತ ಪ್ರಭೇದಗಳಿವೆ. ಅವುಗಳಲ್ಲಿ ಎರಡರ ಬಗ್ಗೆ ಕಗ್ಗ ಹೇಳುತ್ತದೆ. ಒಂದು ದ್ವೈತ, ಮತ್ತೊಂದು ಅದ್ವೈತ. ಎರಡರಲ್ಲೂ ಅಡಕವಾಗಿರುವ ಸತ್ಕಾಮ ಪರಮಾರ್ಥದ್ದು. ನಾನು ಮತ್ತು ಪರಮಾತ್ಮ ಎಂಬುದುಬೇರೆ ಬೇರೆ. ಜೀವನೊಬ್ಬ ಭಕ್ತ. ಅವನು ಭಗವಂತನ ಸಮೀಪಕ್ಕೆ ಹೋಗಬಹುದೇ ವಿನ: ಅವನೇ ಭಗವಂತನಾಗಲಾರ.ಇದು ದ್ವೈತ. ಅದ್ವೈತದಲ್ಲಿ ತಾನು ಬೇರೆ, ಪರಮಾತ್ಮ ಬೇರೆ ಎಂಬ ಭೇದ ಅಳಿಸಿಹೋಗುತ್ತದೆ. ತಾನೇ ಭಗವಂತನ ಅಂಶ,‘ಅಹಂ ಬ್ರಹ್ಮಾಸ್ಮಿ’ ಎಂಬುದು ಅದ್ವೈತದ ತಾತ್ಪರ್ಯ. ವೇದ ಶಾಸ್ತ್ರಗಳು ಎರಡಕ್ಕೂ ಪ್ರಮಾಣ. ಎರಡರ ಉದ್ದೇಶವೂ ಆತ್ಮದರ್ಶನ. ಎರಡು ದಾರಿಗಳು. ಗುರಿ ಒಂದೇ. ಒಬ್ಬ ಜಿಜ್ಞಾಸು ನದಿಯ ಪ್ರವಾಹದಲ್ಲಿ ಬಿದ್ದ ಎಂದಿಟ್ಟುಕೊಳ್ಳೋಣ. ಅವನು ಉಸಿರುಕಟ್ಟಿಕೊಂಡು ಒದ್ದಾಡುತ್ತ, ಕೊಚ್ಚಿಹೋಗುತ್ತಿದ್ದಾನೆ. ದಂಡೆಯಲ್ಲಿದ್ದ ಕೆಲವು ಸಜ್ಜನರು ಅವನನ್ನು ಪಾರುಮಾಡಬೇಕೆಂಬ ಕನಿಕರದಿಂದ ಹಗ್ಗಗಳನ್ನು ಎಸೆಯುತ್ತಾರೆ. ಅವನು ಯಾವುದನ್ನಾದರೂ ಗಟ್ಟಿಯಾಗಿಹಿಡಿದುಕೊಂಡರೆ ಅವರು ಎಳೆದು ದಂಡೆಗೆ ತಂದು ಬದುಕಿಸಿಯಾರು. ಆದರೆ ಅವನು ಎರಡು ಹಗ್ಗಗಳಿವೆಯಲ್ಲ?ಯಾವುದನ್ನು ಹಿಡಿದರೆ ಹೆಚ್ಚು ಕ್ಷೇಮ? ಹಗ್ಗದ ತುದಿಯನ್ನು ಹಿಡಿಯಬೇಕೆ? ಜಾರಿಹೋದರೇನು ಗತಿ? ಮಧ್ಯದ ಭಾಗವನ್ನು ಹಿಡಿಯಲೆ? ಒಂದೇ ಕೈಸಾಕೇ? ಎರಡರಿಂದಲೂ ಹಿಡಿಯಲೆ? ಹೀಗೆ ವಿಚಾರಮಾಡುತ್ತ ತಡಮಾಡಿದರೆ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗುತ್ತಾನೆ. ಅಂತೆಯೇ ಆತ್ಮದರ್ಶನದ ಅಪೇಕ್ಷೆಯುಳ್ಳವನು ತನಗೆ ಯಾವ ಅನುಭವವು ಸತ್ಯವೆಂದು ತೋರುತ್ತದೋ ಅದನ್ನು ಗಟ್ಟಿಯಾಗಿ ಹಿಡಿದುಕೊಂಡು ಮುಂದೆ ಸಾಗಬೇಕು. ಅದಕ್ಕೇ ಕೃಷ್ಣ ಭಗವದ್ಗೀತೆಯಲ್ಲಿ “ವಿಮೃಶ್ಯೇತಶೇಷೇಣ ಯಥೇಚ್ಛಸಿ ತಥಾ ಕುರು” ಎನ್ನುತ್ತಾನೆ. ಹಾಗೆಂದರೆ ಯಾವುದು ನಿನ್ನ ಮನಸ್ಸಿಗೆ ಸರಿ ಎನ್ನಿಸುತ್ತದೋ ಅದನ್ನು ವಿಮರ್ಶೆಮಾಡಿ, ನಿನಗೆ ಸರಿ ತೋರಿದಂತೆ ಮಾಡು.

ಆತ್ಮದರ್ಶನವಾದ ಮೇಲೆ ಯಾವ ದಾರಿಯೇನು? ಗಮ್ಯವನ್ನು ಸೇರಿದ್ದಾಯಿತಲ್ಲ! ಅವನಿಗೆ ಆಗ ಶಾಸ್ತ್ರಗಳು ಹೇಳಿದ ವಿಧಿಗಳು, ತಪ ನಿಯಮಗಳು ಬೇಕಿಲ್ಲ. ಯಾಕೆಂದರೆ ಅವೆಲ್ಲ ಗಮ್ಯವನ್ನು ತಲುಪಲು ಬೇಕಾದ ದಿಕ್ಕುಸೂಚಿಗಳು. ಆತ್ಮದರ್ಶನಿಗೆ ಎಲ್ಲೆಲ್ಲಿಯೂ ಬ್ರಹ್ಮಸಾಕ್ಷಾತ್ಕಾರವೇ ಆಗಿರುವುದರಿಂದ ಎಲ್ಲದರ ಬಗ್ಗೆ ಪ್ರೀತಿ ಮತ್ತು ಯಾವುದರ ಬಗ್ಗೆಯೂ ಭಯವಿಲ್ಲ. ಅವನು ಎಲ್ಲ ಮಜಲುಗಳನ್ನು ದಾಟಿದವನು. ಅವನಿಗೆ ಪ್ರಪಂಚದ ಯಾವುದರ ಬಗ್ಗೆಯೂ ಭಯವಿಲ್ಲ ಮತ್ತು ಅವನಿಂದ ಪ್ರಪಂಚಕ್ಕೆ ಯಾವ ತೊಂದರೆಯಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು