ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು | ಬುದ್ಧಿಗೆ ನಿಲುಕದ ಪರತತ್ವ

ಗುರುರಾಜ ಕರಜಗಿ ಅಂಕಣ
Last Updated 11 ಆಗಸ್ಟ್ 2022, 22:30 IST
ಅಕ್ಷರ ಗಾತ್ರ

ಬರಿಯೋದು ಬರಿವಾದ ಬರಿಬುದ್ಧಿ ದೊರಕಿಸದು |
ಪರತತ್ತ್ವವನು ಬೇಕು ಬೇರೆ ಕಣ್ಣದಕೆ ||
ಚಿರದ ಮಮತಾವೇಷ್ಟಿತದ ಪೊರೆಯ ಹರಿದಂದು |
ಅರಳ್ಪುದರಿವಿನ ಕಣ್ಣು – ಮಂಕುತಿಮ್ಮ || 692 ||

ಪದ-ಅರ್ಥ: ಬರಿಯೋದು=ಬರೀ+ಓದು, ಕಣ್ಣದಕೆ=ಕಣ್ಣು+ಅದಕೆ, ಚಿರದ=ಶಾಶ್ವತತೆಯ, ಮಮತಾವೇಷ್ಟಿತದ=ನಾನು, ನನ್ನದು
ಎಂಬ ಮೋಹದ ಹೊದ್ದಿಕೆಯ, ಹರಿದಂದು=ಹರಿದ+ಅಂದು, ಅರಳ್ಪುದರಿವಿನ=ಅರಳ್ಪುದು(ಅರಳುವುದು)+ಅರಿವಿನ(ತಿಳಿವಿನ).

ವಾಚ್ಯಾರ್ಥ: ಬರಿಯ ಓದಿನಿಂದ, ವಾದದಿಂದ, ಬುದ್ಧಿಯಿಂದ ಪರತತ್ವವನ್ನು ತಿಳಿಯುವುದು ಅಸಾಧ್ಯ. ಅದಕ್ಕೆ ಬೇರೆ ಕಣ್ಣು ಬೇಕು. ಯಾವಾಗ ಶಾಶ್ವತತೆಯ, ಮೋಹದಾವರಣದ ಪೊರೆ ಕತ್ತರಿಸುತ್ತದೆಯೋ, ಅಂದು ತಿಳಿವಿನ ಕಣ್ಣು ಅರಳುತ್ತದೆ.

ವಿವರಣೆ: ಅರ್ಜುನನಿಗೆ ಕೃಷ್ಣನ ಅನಂತರೂಪವನ್ನು ನೋಡುವ ಬಯಕೆ. ಆದರೆ ಕೃಷ್ಣನಿಗೆ ಗೊತ್ತು, ಅರ್ಜುನನಿಗೆ ನೋಡುವ ಶಕ್ತಿ ಇಲ್ಲ. ಆದ್ದರಿಂದ ಹೇಳುತ್ತಾನೆ,
“ದಿವ್ಯಂ ದದಾಮಿ ತೇ ಚಕ್ಷಃ ಪಶ್ಯಮೇ ಯೋಗಮೈಶ್ವರಮ್ ||”

“ನಿನಗೆ ನಾನು ಅತಿಶಯವಾದ ಶಕ್ತಿಯುಳ್ಳ ಕಣ್ಣುಗಳನ್ನು ಕೊಡುತ್ತೇನೆ. ಅವುಗಳಿಂದ ನನ್ನ ಈಶ್ವರ ದಶೆಯ ಪ್ರಭಾವವನ್ನು ನೋಡು”. ಹಾಗೆಂದರೆ ಭಗವಂತ ಅರ್ಜುನನಿಗೆ ಬೇರೆ ಭೌತಿಕ ಕಣ್ಣುಗಳನ್ನು ಕೊಟ್ಟನೆಂದಲ್ಲ. ಅವನಿಗೆ ಹೊಸ ತೇಜವನ್ನು, ಅಧ್ಯಾತ್ಮಿಕ ಶಕ್ತಿಯನ್ನು ಕೊಟ್ಟ. ಅದರಿಂದ ಅರ್ಜುನನಿಗೆ ಭಗವಂತನ ವಿಶ್ವರೂಪವನ್ನು ನೋಡಲು ಸಾಧ್ಯವಾಯಿತು. ಅವನಿಗೆ ತತ್ವದರ್ಶನವಾಯಿತು. ಅದು ಏಕೆ ತತ್ವದರ್ಶನ ಅಷ್ಟು ಕಷ್ಟ? ಬುದ್ಧಿಗೆ ಅದೇಕೆ ನಿಲುಕುವುದಿಲ್ಲ? ಭಗವದ್ಗೀತೆಯ ಮೂರನೆಯ ಅಧ್ಯಾಯದಲ್ಲಿ ಒಂದು ಮಾತಿದೆ.

ಯೊ ಬುದ್ಧೇಃ ಪರತಸ್ತು ಸ ||
“ಪರವಸ್ತು, ಪರತತ್ವ, ಬುದ್ಧಿಯನ್ನು ಮೀರಿದ್ದು”. ಏಕೆಂದರೆ ನಮ್ಮ ಬುದ್ಧಿಯ ಕಾರ್ಯ ನಡೆಯುವುದು ಮನಸ್ಸಿನ ಪ್ರೇರಣೆಯಿಂದ. ಆದರೆ ಮನಸ್ಸು ತಿಳಿಯುವುದೇ ಇಂದ್ರಿಯಗಳ ಮೂಲಕ. ಆದ್ದರಿಂದ ಇಂದ್ರಿಯಗಳಿಂದ ಬಂದ ಸೂಚನೆಗಳಂತೆ ಮನಸ್ಸು, ಮನಸ್ಸಿನ ಪ್ರೇರಣೆಯಂತೆ ಬುದ್ಧಿ ಕೆಲಸ ಮಾಡುತ್ತದೆ. ಆದರೆ ಪರತತ್ವ ಬುದ್ಧಿಗಿಂತ ತುಂಬ ಮೇಲ್ಪಟ್ಟದ್ದು. ಆದ್ದರಿಂದ ಅದು ಇಂದ್ರಿಯಗಳ ಅಂಕೆಗೆ ಒಳಪಡಲಾರದು. ಇನ್ನೊಂದು ವಿಷಯವೆಂದರೆ ಬುದ್ಧಿಗೆ ತಿಳಿದದ್ದೆಲ್ಲ ಅನುಭವವಾಗುವುದಿಲ್ಲ. ಅದಕ್ಕೆ ಕಗ್ಗ ತಿಳಿಸುತ್ತದೆ, ಬರೀ ಓದಿನಿಂದ, ಬರೀ ತರ್ಕದಿಂದ, ಬರೀ ಬುದ್ಧಿಯ ವಿಚಕ್ಷಣೆಯಿಂದ ಪರತತ್ವವನ್ನು ತಿಳಿಯುವುದು ಸಾಧ್ಯವಿಲ್ಲ. ಅದನ್ನು ತಿಳಿಯಲು ಎರಡು ಸಾಧನೆಗಳು ಬೇಕು. ಮೊದಲನೆಯದು, ಶಾಶ್ವತತೆಯ ಹಂಬಲವನ್ನು ಬಿಡಬೇಕು. ತಾನು ಚಿರಂಜೀವಿ ಎನ್ನುವಂತೆ ಹಾರಾಡುವುದು ಬೇಡ. ಪ್ರಪಂಚದಲ್ಲಿ ಯಾರೂ ಶಾಶ್ವತರಲ್ಲ. ಎರಡನೆಯದು, ನಾನು, ನನ್ನದು ಎನ್ನುವ ಮೋಹದ ಪೊರೆ ನಮ್ಮನ್ನು ಬಿಗಿದು ಕಟ್ಟಿದೆ. ಅದರಿಂದಾಗಿ ನಮಗೆ ತತ್ವದರ್ಶನ ಸಾಧ್ಯವಾಗುತ್ತಿಲ್ಲ. ಎಂದು ನಮಗೆ ಈ ಮಮತೆಯ ಪೊರೆ ಹರಿಯುತ್ತದೋ ಅಂದೇ ನಮ್ಮ ತಿಳಿವಿನ ಕಣ್ಣು ಅರಳಿ ತತ್ವದರ್ಶನವಾದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT