ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ನಿರ್ಭಯನಾದ ಪಾರಮಾರ್ಥಿಕ

Last Updated 12 ಜನವರಿ 2023, 19:31 IST
ಅಕ್ಷರ ಗಾತ್ರ

ಘೋರವನು ಮೋಹವನು ದೇವತೆಗಳಾಗಿಪರು |
ಭೀರು ಯಾಚಕರಾಸ್ಥೆ ತಪ್ಪದಿರಲೆಂದು ||
ಆರಿಂದಲೇ ಭೀತಿ, ಏಂ ಬಂದೊಡದ ಕೊಳುವ |
ಪಾರಮಾರ್ಥಿಕನಿಗೆಲೊ - ಮಂಕುತಿಮ್ಮ || 799 ||

ಪದ-ಅರ್ಥ: ದೇವತೆಗಳಾಗಿಪರು =ದೇವತೆಗಳಾಗಿದ್ದಾರೆ, ಭೀರು=ಭಯಪಡುವವರು, ಯಾಚಕರಾಸ್ಥೆ=ಯಾಚಕರ(ಬೇಡುವವರ)+ಆಸ್ಥೆ(ಆಸಕ್ತಿ), ತಪ್ಪದಿರಲೆಂದು=ತಪ್ಪದಿರಲಿ+ಎಂದು, ಆರಿಂದಲೇಂ=ಯಾರಿಂದಲೂ, ಏಂ=ಏನಾದರೂ, ಬಂದೊಡದ=ಬಂದೊಡೆ+ಅದ(ಅದನ್ನು), ಪಾರಮಾರ್ಥಿಕನಿಗೆಲೊ=ಪಾರಮಾರ್ಥಿಕನಿಗೆ+ಎಲೊ.


ವಾಚ್ಯಾರ್ಥ: ಭಯಪಡುವವರಿಗೆ, ಬೇಡುವವರಿಗೆ ಆಸಕ್ತಿ ತಪ್ಪದಿರಲಿ ಎಂದು, ಘೋರವಾದದ್ದನ್ನು, ಮೋಹವನ್ನು ದೇವತೆಗಳನ್ನಾಗಿ ಮಾಡಿದ್ದಾರೆ. ಏನಾದರೂ ಬರಲಿ, ಅದನ್ನು ಸ್ವೀಕರಿಸುತ್ತೇನೆ ಎಂಬ ಮನೋಭಾವದ ಪಾರಮಾರ್ಥಿಕನಿಗೆ ಯಾರ ಭಯ?

ವಿವರಣೆ: ಮನುಷ್ಯನಿಗೆ ದೊರೆತ ಅತ್ಯಂತ ಪ್ರಾಚೀನ ಕಾವ್ಯ ಋಗ್ವೇದ. ಇಲ್ಲಿಯಷ್ಟು ಅವಿಚ್ಛಿನವೂ, ಅತಿ ದೀರ್ಘಕಾಲಿಕವೂ ಆದ ಚಿಂತನೆ ಲೋಕದಲ್ಲಿ ಬೇರೆಲ್ಲಿಯೂ ದೊರೆಯುವುದಿಲ್ಲ. ಅಂದಿನ ದಾರ್ಶನಿಕರು ಪ್ರಕೃತಿಯನ್ನು ಆನಂದದಿಂದ, ಭಯದಿಂದ ಕಂಡರು. ಪ್ರಕೃತಿಯ ಸತತ ಬದಲಾಗುವ ರೂಪವನ್ನು ಕಂಡು ಬೆರಗಾದರು. ತಮ್ಮ ಬದುಕಿಗೆ ಅವೇ ಆಧಾರಸ್ಥಂಭಗಳು ಎಂದು ನಂಬಿದರು. ಬದುಕಿನ ಚಲನೆಗೆ ಕಾರಣವಾದ ಸೂರ್ಯ, ನೆಲತಂಪು ಮಾಡಿ ಬೆಳೆ ಬರುವಂತೆ ಮಾಡುವ ಮಳೆ, ಅನ್ನ ಕೊಡುವ ನೆಲ ಇವೆಲ್ಲ ದೇವತೆಗಳಾದವು. ಆಗಾಗ ಅವರನ್ನು ಹೆದರಿಸುವ, ಕಂಗಾಲುಮಾಡುವ ಮಿಂಚು, ಸಿಡಿಲುಗಳು, ಭೂಕಂಪ, ಉಲ್ಕಾಪಾತ, ಹಿಮಪಾತಗಳೂ ಅವರಿಗೆ ದೇವತೆಗಳಾದವು.

ಒಟ್ಟಿನಲ್ಲಿ ದೇವತೆಗಳೆಂದರೆ ಮಾನವ ರೂಪ ತಳೆದ ಪ್ರಕೃತಿಯ ಶಕ್ತಿಗಳು. ಮುಂದೆ ಮನುಷ್ಯನ ಚಿಂತನೆ ಬದಲಾಯಿತು. ದೇವತೆಗಳು ಮನಸ್ಸು ಮಾಡಿದರೆ ತಮಗೆ ಬೇಕಾದ್ದನ್ನು ನೀಡಬಲ್ಲರು ಎಂಬ ಭಾವನೆ ಬಲಿಯಿತು. ಆದ್ದರಿಂದ ಅವರನ್ನು ತೃಪ್ತಿಪಡಿಸಲು ಪ್ರಾರ್ಥನೆಗೆ ತೊಡಗಿದರು. ಮನುಷ್ಯ ದೇವತೆಗಳಿಂದ ಪಾಪಗಳನ್ನು ಮುಚ್ಚಿಡಲು ಸಾಧ್ಯವಿಲ್ಲ ಎಂಬುದು ನಂಬಿಕೆಯಾಯಿತು. ಆದ್ದರಿಂದ ನಮ್ಮನ್ನು ಪಾಪಗಳಿಂದ ನಮ್ಮ ಪಾರು ಮಾಡು ಎಂದು ಬೇಡತೊಡಗಿದರು. ದೇವತೆಗಳಲ್ಲಿಯೂ, ಸೌಂದರ್ಯದ, ಶಾಂತತೆಯ ಪ್ರತೀಕಗಳಾದವರು ಕೆಲವರಾದರೆ, ಘೋರ, ಕ್ರೂರ ರೂಪದವರು ಕೆಲವರಾದರು. ಅಂದರೆ ನಮ್ಮ ಮನಸ್ಸಿನಲ್ಲಿದ್ದ ಘೋರಗಳು, ಮೋಹಗಳನ್ನೇ ಮನುಷ್ಯ ದೇವತೆಗಳನ್ನಾಗಿಸಿದ. ಅವನಿಗೆ ಅವುಗಳ ಅವಶ್ಯಕತೆ ಕಂಡಿತ್ತು. ಹೆದುರುವವರಿಗೆ ಮತ್ತು ಸದಾ ಯಾಚಿಸುವವರಿಗೆ, ಅವರನ್ನು ಸಮಾಧಾನ ಪಡಿಸಲು, ತೃಪ್ತಪಡಿಸಲು ಈ ದೇವತೆಗಳ ಕಲ್ಪನೆ ಅವಶ್ಯವಾಗಿತ್ತು. ಆದರೆ ಏನಾದರೂ ಬರಲಿ, ಅದನ್ನು ಎದುರಿಸುತ್ತೇನೆ ಎಂಬ ಪಾರಮಾರ್ಥಿಕನಿಗೆ ದೇವತೆಗಳ ಅವಶ್ಯಕತೆ ಇಲ್ಲ. ಯಾಕೆಂದರೆ ಅವನು ಬೇಡುವವನೂ ಅಲ್ಲ, ಭಯಪಡುವವನೂ ಅಲ್ಲ. ಪರಮಾರ್ಥದಲ್ಲಿ ಮನಸಿಟ್ಟವನಿಗೆ ಲೋಕದ ಯಾವ ವ್ಯವಹಾರವೂ ಮೋಹವನ್ನಾಗಲೀ, ಭಯವನ್ನಾಗಲೀ ತರಲಾರದು. ಆದ್ದರಿಂದ ಅವನಿಗೆ ಯಾವುದರ ಭಯವೂ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT