ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುರಾಜ ಕರಜಗಿ ಅಂಕಣ–ಬೆರಗಿನ ಬೆಳಕು| ಕ್ಷೇಮಕರವಾದ ಬಂಧುಪ್ರೇಮ

Last Updated 15 ಸೆಪ್ಟೆಂಬರ್ 2021, 19:30 IST
ಅಕ್ಷರ ಗಾತ್ರ

ರಾಮನುಂ ಭರತನುಂ ತಬ್ಬಿಕೊಂಡತ್ತಂದು |
ಪ್ರೇಮಾಶ್ರುವುಕ್ಕೆ ನದಿಯಾಗಿ ಪರಿದಂದು ||
ಸೀಮೆಯಂ ಮುಟ್ಟಿತಲ ಬಾಂಧವ್ಯ ಸೌಂದರ್ಯ |
ಕ್ಷೇಮವದು ಜೀವಕ್ಕೆ – ಮಂಕುತಿಮ್ಮ || 461 ||

ಪದ-ಅರ್ಥ: ತಬ್ಬಿಕೊಂಡತ್ತಂದು=ತಬ್ಬಿಕೊಂಡು+ಅತ್ತಂದು(ಅತ್ತಾಗ), ಪ್ರೇಮಾಶ್ರುವುಕ್ಕೆ=
ಪ್ರೇಮಾಶ್ರು (ಪ್ರೇಮದ ಕಣ್ಣೀರು)+ಉಕ್ಕಿ, ಪರಿದಂದು=ಹರಿದಂದು, ಸೀಮೆಯಂ=ಸೀಮೆಯನ್ನು (ಗಡಿಯನ್ನು, ಮಿತಿಯನ್ನು).

ವಾಚ್ಯಾರ್ಥ: ರಾಮ ಮತ್ತು ಭರತರು ತಬ್ಬಿಕೊಂಡು ಅತ್ತಾಗ, ಅವರ ಪ್ರೇಮದ ಕಣ್ಣೀರು ಹರಿದು ನದಿಯಾದಾಗ, ಬಾಂಧವ್ಯದ ಸೌಂದರ್ಯವೆನ್ನುವುದು ತನ್ನ ಗರಿಮೆಯ ಗಡಿಯನ್ನು ಮುಟ್ಟಿತು. ಅದು ಜೀವಕ್ಕೆ ಕ್ಷೇಮಕರವಾದದ್ದು.

ವಿವರಣೆ: ಭಾರತೀಯ ಸಂಸ್ಕೃತಿಯ ಮೂಲಸ್ರೋತಗಳಲ್ಲಿ ರಾಮಾಯಣ ಪ್ರಮುಖವಾದದ್ದು. ಅದರಲ್ಲಿ ಅನೇಕ ರಸಘಟ್ಟಗಳು. ಒಂದಕ್ಕಿಂತ ಒಂದು ಶ್ರೇಷ್ಠವಾದವುಗಳು. ಶ್ರೀರಾಮನನ್ನು ಕಾಣಲು ಓಡಿ ಚಿತ್ರಕೂಟಕ್ಕೆ ಬಂದ ಭರತ. ರಾಮ-ಭರತರ ಮಿಲನ, ಪ್ರಪಂಚ ಸಾಹಿತ್ಯದಲ್ಲೇ ಸರಿ ಮಿಗಿಲಿಲ್ಲದ ಬಾಂಧವ್ಯ ಪ್ರೇಮದ ಉದಾಹರಣೆ. ಅದು ಪರಮಾದರ್ಶದ ಎರಡು ಮಹೋನ್ನತ ಶಿಖರಗಳ ನಡುವಿನ ತಾಕಲಾಟ. ಅಲ್ಲಿ ಭರತನ ತ್ಯಾಗ ದೊಡ್ಡದೋ, ರಾಮನ ತ್ಯಾಗ ದೊಡ್ಡದೋ ಎಂದು ತೀರ್ಮಾನ ಮಾಡಲಾದೀತೇ? ಇಬ್ಬರಿಬ್ಬರಲ್ಲಿ ಅತ್ಯುನ್ನತರಾರು? ಆ ಮಹಾಪುರುಷರ ಸ್ವಭಾವದ ಔನ್ನತ್ಯವನ್ನು ನಮ್ಮ ತಿಳಿವಳಿಕೆಯ ಮಾನದಂಡದಿಂದ ಅಳೆಯುವುದು ಸಾಧ್ಯವಿಲ್ಲ. ನಾವು ಅವರಿಬ್ಬರಿಗೂ ದೂರದಿಂದ ತಲೆಬಾಗಿ ಕೈಮುಗಿಯ ತಕ್ಕವರು.

ಕೇಕಯದಿಂದ ಓಡಿ ಬಂದ ಭರತನಿಗೆ ತಂದೆಯ ಸಾವಿನ ಸುದ್ದಿ ಮೊದಲನೆಯ ಆಘಾತ. ನಂತರ ತನಗಾಗಿ ರಾಜ್ಯತ್ಯಾಗ ಮಾಡಿ ಅರಣ್ಯಕ್ಕೆ ಹೋದ ರಾಮನ ವಿಷಯ ವಜ್ರಾಘಾತ. ಅಷ್ಟು ದೂರದಿಂದ – ಕೇಕಯದಿಂದ ಅಯೋಧ್ಯೆಗೆ, ಅಯೋಧ್ಯೆಯಿಂದ ಚಿತ್ರಕೂಟಕ್ಕೆ ಎಳೆಗರುವಿನಂತೆ ಧಾವಿಸಿ ಬಂದು ಅಣ್ಣನ ಪಾದದ ಮೇಲೆ ಬಿದ್ದಿದ್ದಾನೆ. ಆಕ್ರಂದನ ಬಿಟ್ಟು ಬೇರೊಂದು ಮಾತು ಬಾಯಿಯಿಂದ ಬರುತ್ತಿಲ್ಲ.

ಇಬ್ಬರೂ ಒಂದೊಂದು ರೀತಿಯಲ್ಲಿ ಸಿಂಹಾಸನಕ್ಕೆ ಹಕ್ಕುದಾರರೆ. ಮಂಥರೆ ಕೈಕೇಯಿಗೆ ಹೇಳಿಕೊಡದಿದ್ದರೆ, ಕೋಸಲ ರಾಜ್ಯದ ಸಿಂಹಾಸನ, ದೇಶ ಸಂಪ್ರದಾಯದಂತೆ ಶ್ರೀರಾಮನಿಗೇ ದೊರಕಬೇಕಾಗಿತ್ತು. ಆದರೆ ರಾಮ ಪಿತೃವಾಕ್ಯ ಪರಿಪಾಲನೆಗಾಗಿ ಅದನ್ನು ತ್ಯಾಗ ಮಾಡಿ ನಡೆದಿದ್ದ. ಭರತನಿಗೆ ಈ ಸಿಂಹಾಸನ ಎರಡು ಬಾರಿ ಪ್ರದತ್ತವಾಗಿತ್ತು. ಮೊದಲನೆಯ ಬಾರಿಗೆ, ದಶರಥ ಕೈಕೇಯಿಯನ್ನು ಮದುವೆಯಾಗುವಾಗ, ಅವಳ ಮಗನೇ ಮುಂದೆ ರಾಜನಾಗುತ್ತಾನೆಂದು ಮಾತುಕೊಟ್ಟಾಗ ಅವನಿಗೆ ದಕ್ಕಿತ್ತು. ಎರಡನೆಯ ಬಾರಿಗೆ ಕೈಕೇಯಿಯ ಮಾತಿಗೆ ಅನಿವಾರ್ಯವಾಗಿ ಒಪ್ಪಿಗೆಕೊಟ್ಟ ದಶರಥನ ಮಾತಿನಿಂದ ದೊರೆತಿತ್ತು. ಈಗ ಇಬ್ಬರೂ ತಮಗೆ ಸಿಂಹಾಸನಬೇಡ ಎಂದು ವಾದ ಮಾಡುವುದು ಅತ್ಯಂತ ಅವರ್ಣನೀಯವಾದದ್ದು. ಸಿಂಹಾಸನಕ್ಕಾಗಿ ಪರಸ್ಪರ ಕಾದಾಡಿದ, ಬಂಧುವನ್ನು ಕೊಲ್ಲಿಸಿದ ಸಾವಿರಾರು ಪ್ರಸಂಗಗಳನ್ನು ಕಂಡ ಪ್ರಪಂಚಕ್ಕೆ ಈ ತ್ಯಾಗವೀರರ ಬಂಧುಪ್ರೇಮ ನಂಬಲಸಾಧ್ಯವಾದದ್ದು.

ಈ ಕಗ್ಗ ಅದನ್ನು ತುಂಬ ಚೆನ್ನಾಗಿ ವರ್ಣಿಸುತ್ತದೆ. ಶ್ರೀರಾಮ, ಭರತರು ಪರಸ್ಪರ ತಬ್ಬಿಕೊಂಡು ಅತ್ತಾಗ ಅವರ ಕಣ್ಣೀರು ನದಿಯಾಗಿ ಹರಿಯಿತಂತೆ. ಈ ಭ್ರಾತೃಪ್ರೇಮ ಬಾಂಧವ್ಯ ಸೌಂದರ್ಯದ ಎಂದೂ ತಲುಪಲಾಗದ ಪರಮಸೀಮೆ. ಇಂಥ ಅವ್ಯಾಜವಾದ ಬಂಧುಪ್ರೇಮ ಜೀವಕ್ಕೆ ಕ್ಷೇಮಕರವಾದದ್ದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT