ಬುಧವಾರ, ಅಕ್ಟೋಬರ್ 28, 2020
17 °C

ಬೆರಗಿನ ಬೆಳಕು: ಪ್ರೀತಿಯ ಅಮೃತ ಕ್ಷಣ

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ಹಿಂದೆ ವಾರಾಣಸಿಯನ್ನು ಭಲ್ಲಾಟಿಯಾ ಎಂಬ ರಾಜ ಆಳುತ್ತಿದ್ದ. ಅವನಿಗೊಮ್ಮೆ ತಾಜಾ ಜಿಂಕೆಯ ಮಾಂಸವನ್ನು ಕೆಂಡದಲ್ಲಿ ಸುಟ್ಟು ತಿನ್ನಬೇಕೆಂಬ ಆಸೆಯಾಯಿತು. ಅವನು ತಕ್ಷಣ ದೇಶವನ್ನು ಅಮಾತ್ಯರ ಜವಾಬ್ದಾರಿಗೆ ಒಪ್ಪಿಸಿ ತನ್ನ ಆಯುಧಗಳನ್ನು ತೆಗೆದುಕೊಂಡು ಕಾಡಿಗೆ ಹೊರಟ. ಅವನ ಜೊತೆಗೆ ನಾಲ್ಕಾರು ಗಟ್ಟಿಯಾದ ಯೋಧರು ತಮ್ಮ ತರಬೇತಾದ ಬೇಟೆ ನಾಯಿಗಳನ್ನು ಕರೆದುಕೊಂಡು ನಡೆದರು. ಅವನು ಹಿಮಾಲಯಕ್ಕೆ ಬಂದು ಗಂಗಾನದಿಯ ತೀರದಲ್ಲಿಯೇ ನಡೆಯುತ್ತ ನೀರು ಕುಡಿಯಲು ಬಂದ ಜಿಂಕೆ, ಹಂದಿಗಳನ್ನು ಹೊಡೆದು ಅವುಗಳ ಮಾಂಸವನ್ನು ತಿಂದ. ಹಾಗೆಯೇ ಮುಂದುವರೆದಾಗ ಗಂಗೆಯನ್ನು ಸೇರುವ ಒಂದು ಸಣ್ಣ ನದಿ ಬಂದಿತು. ಅಲ್ಲಿ ನೀರಿನ ಆಳ ಹೆಚ್ಚಿಲ್ಲ. ಹೆಚ್ಚು ನೀರು ಬಂದಾಗ ಎದೆ ಮಟ್ಟಕ್ಕೆ ಬರುತ್ತದೆ. ನೀರು ಕಡಿಮೆಯಾದಾಗ ಮೊಳಕಾಲಿನವರೆಗೆ ಬರುತ್ತದೆ. ಅದೊಂದು ಬಹಳ ಸುಂದರವಾದ ಪ್ರದೇಶ. ಅಲ್ಲಿ ನೂರಾರು ತರಹದ ಮೀನುಗಳು. ನದಿಯ ತೀರದಲ್ಲಿ ಬೆಳ್ಳಿಯ ಪುಡಿ ಹರಡಿದಂತೆ ಬಿಳಿಯ ಮರಳು. ಎರಡೂ ದಂಡೆಗಳ ಮೇಲೆ ಹೂವಿನ ಗಿಡಗಳು. ನೂರಾರು ತರಹದ, ಬಣ್ಣದ ಹೂಗಳು. ಅನೇಕ ಬಗೆಯ ಹಣ್ಣಿನ ಗಿಡಗಳೂ ಅಲ್ಲಿದ್ದವು. ಆ ಹೂವು ಹಣ್ಣುಗಳಿಗಾಗಿ ಸಾವಿರಾರು ದುಂಬಿಗಳು, ಹಕ್ಕಿಗಳು!

ಭಲ್ಲಾಟಿಯಾ ರಾಜ ಅಲ್ಲೊಂದು ವಿಚಿತ್ರವನ್ನು ಕಂಡ. ನದಿಯ ದಂಡೆಯಲ್ಲಿ ಒಂದು ಕಿನ್ನರ ದಂಪತಿಗಳ ಜೋಡಿ ಇತ್ತು. ಅವರು ಮನುಷ್ಯಾಕಾರದ ಪುಟ್ಟಪುಟ್ಟ ಜೀವಿಗಳು. ಅವರು ಸುಮಾರು ಎರಡಡಿ ಎತ್ತರವಿದ್ದಿರಬಹುದು. ಗಂಡ-ಹೆಂಡತಿಯರಿಬ್ಬರೂ ಒಬ್ಬರನ್ನೊಬ್ಬರು ಆಲಂಗಿಸುತ್ತಿದ್ದರು, ಚುಂಬಿಸುತ್ತಿದ್ದರು, ಆದರೆ ಸತತವಾಗಿ ಅಳುತ್ತಿದ್ದರು. ಇಬ್ಬರೂ ಸಂತೋಷವಾಗಿರುವಂತೆ ತೋರುತ್ತಾರೆ, ಪ್ರಿಯರೂ ಆಗಿರುವಂತೆ ಕಾಣುತ್ತದೆ. ಆದರೆ ಈ ಅಳು ಏಕೆ? ಅವರನ್ನೇ ಕೇಳುವುದು ವಾಸಿ ಎಂದುಕೊಂಡು ತನ್ನ ಕೈಯಲ್ಲಿದ್ದ ಆಯುಧಗಳನ್ನು ಜೊತೆಗಾರರಿಗೆ ಕೊಟ್ಟುಬಿಟ್ಟು, ಹೆಜ್ಜೆಯ ಸಪ್ಪಳವಾಗದಂತೆ ನಡೆದು ಅವರ ಬಳಿ ಹೋದ. ಅವರನ್ನು ಕೇಳಿದ, ‘ನೀವು ಯಾರು? ಮನುಷ್ಯರೇ, ಪ್ರಾಣಿಗಳೇ? ಯಾಕೆ ಅಳುತ್ತಿದ್ದೀರಿ?’ ಕಿನ್ನರ ಮೌನವಾಗಿಬಿಟ್ಟ. ಆದರೆ ಕಿನ್ನರಿ ಮಾತನಾಡಿದಳು, ‘ನಾವು ಈ ಪರ್ವತ ಪ್ರದೇಶದಲ್ಲಿ ವಾಸವಾಗಿರುವ ವಿಶೇಷ ಮನುಷ್ಯರು. ಮೃಗಗಳು ನಮ್ಮನ್ನು ಮನುಷ್ಯರೆಂದು ಭಾವಿಸುತ್ತವೆ, ಮನುಷ್ಯರು ನಮ್ಮನ್ನು ಕುಬ್ಜರೆಂದು ಬೇಟೆಯಾಡುತ್ತಾರೆ’. ರಾಜ ಕೇಳಿದ, ‘ಅದು ಸರಿ, ನೀವಿಬ್ಬರೂ ಜೊತೆಗೇ ಇದ್ದೀರಿ. ಆದರೆ ಅಳುವುದೇಕೆ?’. ಕಿನ್ನರಿ ಮತ್ತೆ ಮಾತನಾಡಿದಳು, ‘ಮೊನ್ನೆಯ ದಿನ ನದಿ ದಂಡೆಯಲ್ಲಿದ್ದಾಗ ನಾನು ಹೂವುಗಳನ್ನು ಆರಿಸುತ್ತಿದ್ದೆ. ನಾನು ಮಾಲಿನಿಯಾದರೆ ನನ್ನ ಗಂಡ ಮಾಲಾಧಾರಿಯಾಗುತ್ತಾನೆ ಎಂದು ಯೋಚಿಸುತ್ತ, ಪೂರ್ತಿ ಅರಳಿದ, ಸುಂದರವಾದ ಹೂಗಳನ್ನು ಆರಿಸುತ್ತಿದ್ದೆ. ಆಗ ನನ್ನ ಗಂಡ ನದಿಯಲ್ಲಿ ನೀರು ಕಡಿಮೆ ಇದೆ ಬಾ ಎಂದು ಕರೆಯುತ್ತ ನದಿಯನ್ನು ದಾಟಿದ. ನಾನು ಹೂವುಗಳನ್ನು ಆರಿಸುವಾಗ ಕೊಂಚ ತಡವಾಯಿತು. ಆಗ ಮತ್ತೆ ಪ್ರವಾಹ ಬಂದಿತು. ನನ್ನ ಗಂಡ ನದಿಯ ಆ ಬದಿಗೆ, ನಾನು ಈ ಬದಿಗೆ. ಇಡೀ ರಾತ್ರಿ ಒಬ್ಬರನ್ನೊಬ್ಬರು ನೋಡುತ್ತ, ಅಳುತ್ತ ಕಳೆದೆವು. ಇಂದು ಪ್ರವಾಹ ಇಳಿದಾಗ ಮತ್ತೆ ಒಂದುಗೂಡಿದೆವು. ಆದರೆ ನಮ್ಮ ಬದುಕಿನಲ್ಲಿ ಒಂದು ದಿನ ಇಬ್ಬರೂ ಜೊತೆಗಿರದೆ ಕಳೆದು ಹೋಯಿತಲ್ಲ ಎಂಬ ದುಃಖದಿಂದ ಅಳುತ್ತಿದ್ದೇವೆ’. ರಾಜ ಆಶ್ಚರ್ಯಪಟ್ಟ. ಇವರು ಒಂದು ದಿನ ಬಿಟ್ಟು ಇದ್ದದ್ದಕ್ಕೆ ಇಷ್ಟು ದುಃಖಪಡುತ್ತಾರಲ್ಲ, ನಾನು ಈ ಜಿಂಕೆಯ ಮಾಂಸಕ್ಕಾಗಿ ಇಡೀ ಪರಿವಾರದ ಪ್ರೀತಿಯನ್ನು ಬಿಟ್ಟು ಬಂದೆನಲ್ಲ ಎಂದು ಚಿಂತಿಸಿ, ತಕ್ಷಣವೇ ವಾರಾಣಸಿಯ ಅರಮನೆಗೆ ಹೊರಟು ಹೋದ.

ಪ್ರೀತಿಯ ಪ್ರತಿಯೊಂದು ಗಳಿಗೆಯೂ ಅಪೂರ್ವ. ಅದನ್ನು ಕಳೆದುಕೊಳ್ಳಬಾರದು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.