ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆತುಹೋದ ಜೀವಾಮೃತ

Last Updated 2 ಅಕ್ಟೋಬರ್ 2019, 19:28 IST
ಅಕ್ಷರ ಗಾತ್ರ

ದೇವದಾನವರರಣರಂಗ ಮಾನವ ಹೃದಯ |
ಭಾವರಾಗ ಹಠಂಗಳವರ ಸೇನೆಗಳು ||
ಭೂವಿಭವಜಯಗಳ ಭ್ರಾಂತಿಯಲಿ ಮರೆಯುವರು |
ಜೀವಾಮೃತವನವರು– ಮಂಕುತಿಮ್ಮ || 192 ||

ಪದ-ಅರ್ಥ: ಹಠಂಗಳವರ=ಹಠಂಗಳು(ಹಟಗಳು)+ಅವರ, ಭೂವಿಭವಜಯಗಳ=ಭೂ(ಭೂಮಿ)+ವಿಭವ(ಏಳಿಗೆ,ಉನ್ನತಿ)+ಜಯಗಳ.

ವಾಚ್ಯಾರ್ಥ: ಮನುಷ್ಯನ ಹೃದಯ ದೇವತೆಗಳ ಮತ್ತು ರಾಕ್ಷಸರ ರಣರಂಗ. ಭಾವಗಳು, ರಾಗ ದ್ವೇಷಗಳು, ಹಠಗಳು ಇವೇ ಅವರ ಸೇನೆಗಳು. ಭೂಮಿಯನ್ನು, ಐಶ್ವರ್ಯವನ್ನು ಮತ್ತು ಯಶಸ್ಸಿನ ಭ್ರಾಂತಿಯಲ್ಲಿ ಅವರು ತಮ್ಮ ಜೀವನಕ್ಕೆ ಮುಖ್ಯವಾಗಿ ಬೇಕಾದ ಅಮೃತವನ್ನೇ ಮರೆತುಬಿಡುತ್ತಾರೆ.

ವಿವರಣೆ: ಅಜ್ಜ, ಮೊಮ್ಮಗನಿಗೆ ಹೇಳುತ್ತಿದ್ದ, ‘ಮಗೂ ನಿನ್ನ ಹೃದಯದಲ್ಲಿ ಎರಡು ಬಲಿತ ತೋಳಗಳಿವೆ. ಒಂದು ಕರಿಯದು. ಅದು ಯಾವಾಗಲೂ ಹಲ್ಲು ತೆರೆದುಕೊಂಡೇ ಯಾರನ್ನು ಕಚ್ಚಲಿ ಎಂದು ಸಿಟ್ಟಿನಿಂದ, ದ್ವೇಷದಿಂದ ಅಬ್ಬರಿಸಿ ಕಾಯುತ್ತಿರುತ್ತದೆ. ಮತ್ತೊಂದು ಬಿಳಿಯ ತೋಳ. ಅದೂ ಬಲಶಾಲಿಯೇ. ಆದರೆ, ಅದು ಶಾಂತವಾಗಿ ಉಳಿದು ತನ್ನಪಾಡಿನ ಕೆಲಸವನ್ನು ಮಾಡುತ್ತಿರುತ್ತದೆ. ಆದರೆ ಈ ಎರಡೂ ತೋಳಗಳ ನಡುವೆ ಸದಾಕಾಲದ ಜಗಳ ನಡೆದೇಇರುತ್ತದೆ’. ಬಾಯಿ ತೆರೆದುಕೊಂಡುಕಥೆ ಕೇಳುತ್ತಿದ್ದ ಹುಡುಗಆತಂಕದಿಂದ ಕೇಳಿದ, ‘ಅಜ್ಜಾ, ಇವೆರಡರಲ್ಲಿಯಾವುದುಗೆಲ್ಲುತ್ತದೆ?’. ಅಜ್ಜಮಗುವಿನ ಕಣ್ಣುಗಳನ್ನೇ ದಿಟ್ಟಿಸುತ್ತ ಹೇಳಿದ, ‘ಮಗೂ, ಯಾವುದಕ್ಕೆ ನೀನು ಆಹಾರವನ್ನು ಹೆಚ್ಚು ಹಾಕುತ್ತೀಯೋ, ಅದೇಗೆಲ್ಲುತ್ತದೆ’. ಈ ಎರಡೂ ತೋಳಗಳು ನಮ್ಮಲ್ಲೇ ಇವೆ. ಒಂದು ರಾಕ್ಷಸೀ ಗುಣದ ಕಪ್ಪು ತೋಳ, ಮತ್ತೊಂದು ದೈವೀಗುಣದ ಬಿಳೀ ತೋಳ. ಈ ಕಗ್ಗ ಅದನ್ನು, ‘ದೇವದಾನವರ ರಣರಂಗ ಮಾನವ ಹೃದಯ’ ಎನ್ನುತ್ತದೆ. ಹೌದು. ನಮ್ಮ ಹೃದಯದಲ್ಲಿ ನಿತ್ಯವೂ ಹೋರಾಟ. ಒಳ್ಳೆಯದು, ಕೆಟ್ಟದ್ದರ ನಡುವೆ, ಸರಿ ತಪ್ಪುಗಳ ನಡುವೆ, ನ್ಯಾಯ ಅನ್ಯಾಯಗಳ ನಡುವೆ.

ಈ ದೇವತೆಗಳು ಹಾಗೂ ರಾಕ್ಷಸರ ಸೇನೆ ಯಾವುದು? ಇವೇ ನಮ್ಮ ಭಾವಗಳು, ರಾಗದ್ವೇಷಗಳು ಮತ್ತು ಹಠಗಳು. ನಮ್ಮ ಭಾವಗಳು ಅಂದರೆ ನಮ್ಮ ಅಭಿಪ್ರಾಯಗಳೇ ಜಗತ್ತನ್ನು ಸುಂದರವಾಗಿಇಲ್ಲವೆ ವಿಕಾರವಾಗಿ ನೋಡುವಂತೆ ಮಾಡುತ್ತವೆ. ದ್ರೋಣಾಚಾರ್ಯರು ಒಮ್ಮೆ ದುರ್ಯೋಧನ ಮತ್ತು ಧರ್ಮರಾಜರಿಗೆ ನಗರವನ್ನು ಸುತ್ತಿ ಜನರ ಬಗ್ಗೆ ತಿಳಿದುಕೊಂಡು ಬರಲು ಹೇಳಿದರು. ದುರ್ಯೋಧನ ಬಂದು ಹೇಳಿದ, ‘ನಗರದಲ್ಲಿ ಎಲ್ಲರೂ ಮೋಸಗಾರರೇ. ಒಬ್ಬ ಒಳ್ಳೆಯ ವ್ಯಕ್ತಿಯೂ ನನಗೆ ಕಾಣಲಿಲ್ಲ’. ಧರ್ಮರಾಜನೂ ಅದೇ ನಗರದಲ್ಲಿ ತಿರುಗಾಡಿ ಬಂದು ಹೇಳಿದ, ‘ಗುರುಗಳೇ, ನಮ್ಮ ನಗರ ಅತ್ಯಂತ ಧರ್ಮಿಷ್ಠವಾದ ನಗರ. ನನಗೆ ಒಬ್ಬನಾದರೂ ಅಧರ್ಮಿ ಹಾಗೂ ಕೆಟ್ಟ ಮನುಷ್ಯಕಾಣಬರಲಿಲ್ಲ’ ಎಂದನು. ಅದಕ್ಕೆ ಆಚಾರ್ಯರು ಹೇಳಿದರು, ‘ನಿಮ್ಮ, ನಿಮ್ಮ ಭಾವದಂತೆ ಜಗತ್ತು’. ಇದರಂತೆಯೇ ನಮ್ಮಲ್ಲಿತುಂಬಿರುವ ರಾಗ, ದ್ವೇಷಗಳು ಪ್ರಪಂಚದ ವಿಷಯದಲ್ಲಿ ನಮ್ಮ ಚಿಂತನೆಗಳನ್ನು ಬದಲಾಯಿಸಿ ಬಿಡುತ್ತವೆ. ಸಾತ್ವಿಕವಾದ ಹಠದಿಂದ ಮಾಡಿದ ಪರಿಶ್ರಮ ಕ್ಷತ್ರಿಯ ರಾಜ ಕೌಶಿಕನನ್ನು ಬ್ರಹ್ಮರ್ಷಿಯನ್ನಾಗಿಸಿತು. ಅಂತೆಯೇ ತಾಮಸಿಕವಾದ ಹಠ ಚಕ್ರವರ್ತಿಯಾಗಿ ಬದುಕಬಹುದಾದ ದುರ್ಯೋಧನನನ್ನು ಅಸಹಾಯಕನಾಗಿ ವೈಶಂಪಾಯನ ಕೊಳದ ತೀರದಲ್ಲಿ ಬಿದ್ದು ಸಾಯುವಂತೆ ಮಾಡಿತು.

ಮನುಷ್ಯರು ಈ ಸೇನೆಗಳಾದ ಭಾವ, ರಾಗ, ಹಠಗಳಿಂದ ಭೂಮಿಯನ್ನು, ಐಶ್ವರ್ಯವನ್ನು, ಸದಾಕಾಲದ ವಿಜಯವನ್ನು ಗಳಿಸುತ್ತೇವೆಂಬ ಭ್ರಮೆಯಲ್ಲಿ ಮುಳುಗಿ ಹೋಗಿ ಶಾಂತಿ, ಸಂತೃಪ್ತಿ, ಸಹಯೋಗ, ಪ್ರೇಮಗಳೆಂಬ ಜೀವಾಮೃತ ವನ್ನು ಮರೆತು ಬಿಡುತ್ತಿರಲ್ಲ ಎಂದು ಕಗ್ಗ ಕೊರಗುತ್ತದೆ.→v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT