ಗುರುವಾರ , ಜುಲೈ 7, 2022
23 °C

ಬೆರಗಿನ ಬೆಳಕು: ತ್ರಿವಿಕ್ರಮನಿಗೇಕೆ ಏಣಿ?

ಗುರುರಾಜ ಕರಜಗಿ Updated:

ಅಕ್ಷರ ಗಾತ್ರ : | |

ವೇದಗಳು ಶಾಸ್ತ್ರಗಳು ಲೋಕನೀತಿಗಳೆಲ್ಲ |
ಹಾದಿತೋರಲು ನಿಶಿಯೊಳುರಿವ ಪಂಜುಗಳು ||
ಸೌಧವೇರಿದವಂಗೆ, ನಭವ ಸೇರದವಂಗೆ |
ಬೀದಿಬೆಳಕಿಂದೇನೊ? – ಮಂಕುತಿಮ್ಮ || 523 ||

ಪದ-ಅರ್ಥ: ನಿಶಿಯೊಳುರಿವ=ನಿಶಿಯೊಳು(ಕತ್ತಲೆಯಲ್ಲಿ)+ಉರಿವ, ಸೌಧವೇರಿದವಂಗೆ=ಸೌಧ (ಮನೆ)+ಏರಿದವಂಗೆ(ಏರಿದವನಿಗೆ), ನಭ=ಆಕಾಶ.

ವಾಚ್ಯಾರ್ಥ: ವೇದಗಳು, ಶಾಸ್ತ್ರಗಳು, ಲೋಕದ ನೀತಿಗಳು, ಮನುಷ್ಯನಿಗೆ ದಾರಿ ತೋರಲು, ರಾತ್ರಿಯಲ್ಲಿ ಬಳಸುವ ಪಂಜುಗಳಿದ್ದಂತೆ. ಆದರೆ ಮನೆ ಸೇರಿ ಮಾಳಿಗೆ ಏರಿದವನಿಗೆ, ಆಕಾಶವನ್ನು ಸೇರಿದವನಿಗೆ, ಈ ಬೀದಿಯ ಬೆಳಕಿನಿಂದ ಯಾವ ಪ್ರಯೋಜನ?

ವಿವರಣೆ: ಕತ್ತಲೆಯಲ್ಲಿ ನಡೆಯುತ್ತ ಹೋಗುವವನಿಗೆ ಟಾರ್ಚ್‌ನ ಅವಶ್ಯಕತೆ ಇದೆ. ಯಾಕೆಂದರೆ ಅದಿಲ್ಲದೆ ಅವನ ಪ್ರವಾಸ ಕಷ್ಟ ಮತ್ತು ಕಣ್ಣಿಗೆ ಕಾಣದ್ದರಿಂದ ಅಪಾಯದ ಸಾಧ್ಯತೆ ಹೆಚ್ಚು. ಆದರೆ ಮನೆಯಲ್ಲಿ, ಬೆಳಕಿನಲ್ಲಿ ಕುಳಿತವನಿಗೆ ಟಾರ್ಚ್‌ ಅವಶ್ಯಕತೆಯೇ ಇಲ್ಲ. ಆಕಾಶದಲ್ಲಿ ವಿಮಾನದಲ್ಲಿ ಹಾರುವವನಿಗೆ ಬೀದಿ ದೀಪದ ಗೊಡವೆ ಏಕೆ?

ಅದೇ ರೀತಿ ಅಧ್ಯಾತ್ಮದಲ್ಲಿ ಮುಂದುವರೆಯುವುದಕ್ಕೆ ಸಾಧಕನಿಗೆ ಸಾಧನಗಳು ಬೇಕು. ವೇದಗಳು ಉಪನಿಷತ್ತುಗಳು, ಶಾಸ್ತ್ರಗಳು, ವಚನಗಳು, ಧರ್ಮಗ್ರಂಥಗಳು ಇವೆಲ್ಲ ಸಾಧನಗಳು. ಇವುಗಳನ್ನು ಅಭ್ಯಾಸ ಮಾಡುತ್ತ ಹಂತಹಂತವಾಗಿ ವ್ಯಕ್ತಿ ಮೇಲಕ್ಕೇರುತ್ತಾನೆ. ಇದು ಸಾಮಾನ್ಯ ಜನರ ದಾರಿ. ಆದರೆ ಕೆಲವರು ಇವು ಯಾವುದನ್ನು ಗಣಿಸದಲೆ ಥಟ್ಟೆಂದು ಹಾರಿ ಎತ್ತರಕ್ಕೇರಿಬಿಡುತ್ತಾರೆ. ಜೈನ ಸಂಪ್ರದಾಯದಲ್ಲಿ ಒಬ್ಬ ವ್ಯಕ್ತಿ ಮುನಿಯಾಗಬೇಕಾದರೆ ಹಲವಾರು ಹಂತಗಳನ್ನು, ಸ್ವಪರೀಕ್ಷೆಗಳನ್ನು ದಾಟಿ ಬರಬೇಕು. ಅದೊಂದು ಅತ್ಯಂತ ಕಠಿಣವಾದ ದಾರಿ. ಆದರೆ ಭಗವಾನ್ ಮಹಾವೀರರಿಗೆ ಇದಾವುದೂ ಬೇಕಾಗಲಿಲ್ಲ. ಅವರು ನೇರವಾಗಿ ಜ್ಞಾನೋದಯ ಪಡೆದು ತೀರ್ಥಂಕರರಾದರು. ಆದರೆ ಉಳಿದವರು ಮೇಲೇರಲು ‘ಅಷ್ಟಸೋಪಾನ’ಗಳನ್ನು ಏರಬೇಕು. ಅವುಗಳೊಡನೆ ಸತ್ಯ, ಅಹಿಂಸೆಗಳನ್ನು ಪಾಲಿಸಬೇಕು.

ವೈದಿಕ ಸಂಪ್ರದಾಯದಲ್ಲೂ ಸನ್ಯಾಸಿಯಾಗಲು ಅನೇಕ ನಿಯಮಗಳಿವೆ. ಎಲ್ಲ ನಿಯಮಾಚರಣೆಗಳ ನಂತರ ಸನ್ಯಾಸ ದೀಕ್ಷೆ ದೊರಕುತ್ತದೆ. ಆದರೆ ಆಚಾರ್ಯ ಶಂಕರರಿಗೆ ಇದಾವುದೂ ಬೇಕಾಗಲಿಲ್ಲ. ಮೊಸಳೆ ಕಾಲು ಹಿಡಿದ ನೆಪವೊಂದೆ ಸಾಕಾಯಿತು. ಮರುಕ್ಷಣವೇ ಸನ್ಯಾಸ. ತ್ರಿವಿಕ್ರಮನಿಗೆ ಮೆಟ್ಟಿಲುಗಳೇಕೆ?

ಶ್ರೀ ರಾಮಕೃಷ್ಣ ಪರಮಹಂಸರು ವೇದಗಳನ್ನು, ಉಪನಿಷತ್ತುಗಳನ್ನು, ಶಾಸ್ತ್ರಗಳನ್ನು ಓದಲಿಲ್ಲ. ಅವರು ಇವು ಯಾವುವನ್ನೂ ಓದಲಿಲ್ಲವೆಂದು ಜನರು ಗೇಲಿ ಮಾಡಿದರು. ಆದರೆ ಶ್ರೀರಾಮಕೃಷ್ಣರು ಭಕ್ತಿಯೊಂದನ್ನೇ ಗಟ್ಟಿಯಾಗಿ ಹಿಡಿದುಕೊಂಡು ಅಧ್ಯಾತ್ಮದ ಸಮುದ್ರದಲ್ಲಿ ಹಾರಿಬಿಟ್ಟರು. ಅವರು ಉಪನಿಷತ್ತುಗಳನ್ನು ಓದದೆ ಹೋದರೂ. ಅವರು ಮಾತನಾಡಿದ್ದೆಲ್ಲ ಉಪನಿಷತ್ತಾಯಿತು. ಅದು ರಾಮಕೃಷ್ಣೋಪನಿಷತ್ತಾಯಿತು. ರಮಣ ಮಹರ್ಷಿಗಳೂ ಹೀಗೆಯೇ ಗರುಡಗಮನರಾದವರು. ಅವರು ವಿಷದಪಡಿಸಿದ ಅಮೂಲ್ಯ ತಮಿಳು ಕೃತಿ ‘ಉಳ್ಳದು ನಾರ್ಪದು’. ಅದರಲ್ಲಿ ಅವರು ಹೇಳುತ್ತಾರೆ,

“ಮಣ್ಮೈನಿಲ್ವೆ ನಿನ್ರುಪೊಯ್ಮೈ ತೀರ್ನ್ದಾರ್ ತಿಯಂಗೊವರೋ ತೇರ್”

‘ತನ್ನ ನೈಜ ಆತ್ಮಸ್ವರೂಪದ ಅನುಭವದ ಸ್ಥಿತಿಯಲ್ಲಿ ನೆಲೆ ನಿಂತು ಅದರಿಂದ ಮಾಯೆಯಾಗಿರುವ ಅಜ್ಞಾನದ ನಿದ್ರೆಯನ್ನು ಕಳೆದುಕೊಂಡ ಜೀವನ್ಮುಕ್ತರು, ಸಿದ್ಧಿಗಳಲ್ಲಿ ಆಸೆ ಇಟ್ಟುಕೊಳ್ಳುವರೇನು? ನಿರ್ಧರಿಸು’.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು