ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿಯ ತೆರಿಗೆ

Last Updated 10 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ತೆರಿಗೆಗಳು ಹಲವುಂಟು ಪ್ರಕೃತಿಗಂ ಸಲ್ಲುವುವು |

ತೆರದೆ ನೀಂ ಮರೆಯೆ ದಂಡಿಪಳಾಕೆ ಮುನಿದು||

ಕರಣಂಗಳಾಕೆಯವು ಮಿತದೊಳವುಗಳ ಬಳಸಿ|

ತೆರು ಸಲುವ ಬಾಡಿಗೆಯ – ಮಂಕುತಿಮ್ಮ |⇒248||

ಪದ-ಅರ್ಥ: ದಂಡಿಪಳಾಕೆ=ದಂಡಿಪಳು+ಆಕೆ, ಕರಣಂಗಳಾಕೆಯವು=ಕರಣಂಗಳು+ಆಕೆಯವು, ಮಿತದೊಳವುಗಳ=ಮಿತದೊಳು+ಅವುಗಳ, ತೆರು=ನೀಡು.

ವಾಚ್ಯಾರ್ಥ: ಪ್ರಕೃತಿಗೆ ಸಲ್ಲಬೇಕಾದ ತೆರಿಗೆಗಳು ಹಲವಾರು ಇವೆ. ನೀನು ಅವುಗಳನ್ನು ಕೊಡದೆ ಮರೆತರೆ ಸಿಟ್ಟಿನಿಂದ ದಂಡಿಸುತ್ತಾಳೆ. ನಿನಗಿರುವ ಸಾಧನಗಳು ಆಕೆಯವು. ಅವುಗಳನ್ನು ಮಿತವಾಗಿ ಬಳಸಿ, ಕೊಡಬೇಕಾದ ಬಾಡಿಗೆಯನ್ನು ಕೊಡು.

ವಿವರಣೆ: ಇದು ತುಂಬ ಅರ್ಥಪೂರ್ಣವಾದ ಕಗ್ಗ. ಹಿಂದೆಂದಿಗಿಂತಲೂ ಹೆಚ್ಚು ಪ್ರಸ್ತುತವಾದ ಚಿಂತನೆ ಇದರಲ್ಲಿದೆ. ಪ್ರಕೃತಿ ಮತ್ತು ಮನುಷ್ಯರದು ಪರಸ್ಪರ ಅನ್ಯೋನ್ಯಶ್ರಯವಾದ ಸಂಬಂಧ. ಆ ಸಂಬಂಧ ಪರಸ್ಪರ ಪೂರಕವಾಗಿರಬೇಕು.

ನಾವು ವ್ಯಾವಹಾರಿಕ ಬದುಕಿನಲ್ಲಿ ಪಡೆದ ಹಣಕ್ಕೆ ಪ್ರತಿಯಾಗಿ ಇಂತಿಷ್ಟು ಹಣವನ್ನು ಸರ್ಕಾರಕ್ಕೆ ತೆರಿಗೆಯಾಗಿ ಕಟ್ಟಬೇಕು. ಸರ್ಕಾರ ನಮಗೆ ಒದಗಿಸುವ ರಸ್ತೆ, ವಿದ್ಯುತ್‌, ನೀರು, ವಾಹನ ಸೌಕರ್ಯಗಳ ಯೋಜನೆಗೆ ಕಾಣಿಕೆಯಾಗಿ ನೀಡುವ ನಮ್ಮ ಆದಾಯದ ಭಾಗವೇ ತೆರಿಗೆ, ಅದನ್ನು ನೀಡದಿದ್ದರೆ ಸರ್ಕಾರ ನಮಗೆ ಶಿಕ್ಷೆ ನೀಡುತ್ತದೆ.

ಸರ್ಕಾರ ನೀಡುವ ಸಾಧನ ಸೌಕರ್ಯಗಳು ನಮ್ಮ ಕಣ್ಣಿಗೆ ಕಾಣುತ್ತವೆ. ಆದರೆ ಪ್ರಕೃತಿ ನಮಗೆ ನೀಡುವ ಸಾಧನಗಳು, ಸೌಕರ್ಯಗಳು ಗಮನಕ್ಕೆ ಬರದೆ ಹೋಗುವುದು ದುರ್ದೈವ. ಯಾವ ಸರ್ಕಾರವೂ ಕೊಡಲಾಗದ, ಬದುಕಿಗೆ ಅತ್ಯಂತ ಅವಶ್ಯವಾದ ಸೌಲಭ್ಯಗಳನ್ನು ಪ್ರಕೃತಿ ಕೊಡುತ್ತದೆ. ಸೂರ್ಯನ ಬೆಳಕು ನಮಗೆ ಜೀವನಾಧಾರವಾದದ್ದು. ಸೂರ್ಯನಿಲ್ಲದೆ ಬದುಕೇ ಸಾಧ್ಯವಿಲ್ಲ. ಗಿಡಮರಗಳು ನಾವು ಉಸಿರಾಡುವ ಆಮ್ಲಜನಕವನ್ನು ಕೊಡುವುದಲ್ಲದೆ ಈ ವಿಶ್ವದ ಉಷ್ಣತೆಯನ್ನು ಹತೋಟಿಯಲ್ಲಿಡುತ್ತವೆ. ಅವುಗಳಿಲ್ಲದೆ ನಾವು ಕ್ಷಣಕಾಲವಾದರೂ ಇರುವುದು ಸಾಧ್ಯವೆ? ಪ್ರಕೃತಿ ನಮಗೆ ತುಂಬ ಧಾರಾಳವಾಗಿ ನೀಡಿದ ನೀರು ನಮಗೆ ಜೀವಜಲ. ಭೂಮಿಯನ್ನು ಬಗೆದು ಬಗೆದು ಹೊರತೆಗೆದ ಲಕ್ಷಾಂತರ ವಸ್ತುಗಳು ಕಲ್ಪನಾತೀತವಾದ ಅನುಕೂಲತೆಗಳನ್ನು ಒದಗಿಸಿವೆ. ಅವೆಲ್ಲ ಪ್ರಕೃತಿಯ ಕಾಣಿಕೆಗಳೇ.

ಸರ್ಕಾರಕ್ಕೆ ತೆರಿಗೆ ಕಟ್ಟುವ ನಾವು, ಹೀಗೆ ತುಂಬ ತೆರೆದ ಮನಸ್ಸಿನಿಂದ ಪ್ರಕೃತಿ ನಮಗೆ ಕೊಡಮಾಡಿರುವ ಅನೇಕಾನೇಕ ಸೌಲಭ್ಯಗಳಿಗೆ ತೆರಿಗೆ ಕಟ್ಟುವುದು ಬೇಡವೇ? ತೆರಿಗೆಯನ್ನು ಎಲ್ಲಿ, ಹೇಗೆ ಕಟ್ಟಬೇಕು? ಕಟ್ಟದೇ ಹೋದರೆ ಪ್ರಕೃತಿ ಕೋಪದಿಂದ ನಮ್ಮನ್ನು ದಂಡಿಸುತ್ತಾಳೆ. ಆಕೆ ಸ್ವಲ್ಪ ಕೋಪಗೊಂಡರೆ ಪ್ರಪಂಚವೇ ತಲೆಕೆಳಗಾಗುತ್ತದೆ, ಎಲ್ಲ ವ್ಯವಸ್ಥೆಗಳು ಕುಸಿದುಬೀಳುತ್ತವೆ. ಒಂದು ಭೂಕಂಪ, ಒಂದು ಸುನಾಮಿ, ಭೀಕರ ಬರಗಾಲ, ಕಲ್ಪನಾತೀತವಾದ ಅತಿವೃಷ್ಟಿ, ಪ್ರವಾಹಗಳು ನಾವು ಕಟ್ಟದ ತೆರಿಗೆಗಾಗಿ ಆಕೆ ತೋರಿದ ನಸು ಮುನಿಸುಗಳು.

ಒಂದು ವಿಷಯವನ್ನು ನಾವು ಸದಾ ಜ್ಞಾಪಕದಲ್ಲಿಡಬೇಕು. ಪ್ರಕೃತಿ ಕೊಡಮಾಡಿದ ಸಾಧನಗಳು, ಅನುಕೂಲತೆಗಳೆಲ್ಲ ಆಕೆಯವು, ನಮ್ಮದಲ್ಲ. ಅವುಗಳನ್ನು ನಾವು ಮಿತವಾಗಿ ಬಳಸಬೇಕು. ಅವುಗಳ ದುರ್ಬಳಕೆಯನ್ನು ನಾವು ಮಾಡುತ್ತಲೇ ಬಂದಿದ್ದೇವೆ. ಆಕಾಶವನ್ನು ಕಸದಿಂದ ತುಂಬಿದ್ದೇವೆ, ಭೂಮಿಯನ್ನು ಬಗೆದು ಬರಿದು ಮಾಡಿದ್ದೇವೆ, ಮರ-ಗಿಡಗಳನ್ನು ಸವರಿ ಬಿಟ್ಟಿದ್ದೇವೆ, ಹರಿಯುವ ನೀರನ್ನು ಕಟ್ಟಿದ್ದೇವೆ, ನದಿಗಳನ್ನು, ವಿಷದ ಕೂಪಗಳನ್ನಾಗಿಸಿದ್ದೇವೆ. ಆಕೆ ನೀಡಿದ ಸಾಧನಗಳನ್ನು ಮಿತವಾಗಿ ಬಳಸುವುದನ್ನು ಕಲಿಯಬೇಕು. ಪ್ರಕೃತಿಯ ಸಾಧನಗಳನ್ನು ಮಿತವಾಗಿ ಬಳಸುತ್ತ, ಅವುಗಳನ್ನು ವೃದ್ಧಿಸುವಂತೆ ಮಾಡುವುದೇ ನಾವು ಪ್ರಕೃತಿಗೆ ನೀಡಲೇಬೇಕಾದ ಬಾಡಿಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT