ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ನಿನಗೆ ನೀನೇ ಗುರು

Published 9 ಜುಲೈ 2023, 18:43 IST
Last Updated 9 ಜುಲೈ 2023, 18:43 IST
ಅಕ್ಷರ ಗಾತ್ರ

ನಿನಗಾರು ಗುರುವಹರು ? ನೀನೊಬ್ಬ ತಬ್ಬಲಿಗ? |
ಉಣುತ ದಾರಿಯ ಕೆಲದಿ ಸಿಕ್ಕಿದೆಂಜಲನು ||
ದಿನವ ಕಳೆ; ಗುರುಶಿಷ್ಯಪಟ್ಟಗಳು ನಿನಗೇಕೆ ? |
ನಿನಗೆ ನೀನೇ ಗುರುವೊ – ಮಂಕುತಿಮ್ಮ || 923 ||

ಪದ-ಅರ್ಥ: ತಬ್ಬಲಿಗ=ಅನಾಥ, ಕೆಲದಿ=ಪಕ್ಕದಲ್ಲಿ, ಸಿಕ್ಕಿದೆಂಜಲನು=ಸಿಕ್ಕಿದ+ಎಂಜಲನು.
ವಾಚ್ಯಾರ್ಥ: ನಿನಗೆ ಗುರು ಯಾರಿದ್ದಾರೆ? ನೀನೊಬ್ಬ ಗತಿಯಿಲ್ಲದವ. ದಾರಿಯ ಬದಿಯಲ್ಲಿ ಸಿಕ್ಕ ಎಂಜಲನ್ನು ತಿಂದು ದಿನಗಳನ್ನು ಕಳೆ. ಗುರು-ಶಿಷ್ಯ ಎಂಬ ಹಿರಿಮೆಗಳು ನಿನಗೇಕೆ? ನಿನಗೆ ನೀನೇ ಗುರು.
ವಿವರಣೆ: ನಾವು ಹುಟ್ಟಿದಾಗ ನಮಗೆ ಅಕ್ಷರ, ಸಂಖ್ಯೆ, ವಿಚಾರ ಯಾವುದೂ ಗೊತ್ತಿರಲಿಲ್ಲ. ನಿಧಾನವಾಗಿ ಬೆಳೆಯುತ್ತ ಬಂದಂತೆ ಮನೆಯಲ್ಲಿ, ಶಾಲೆಯಲ್ಲಿ, ಕಾಲೇಜುಗಳಲ್ಲಿ, ಸಮಾಜದಲ್ಲಿ, ವ್ಯವಹರಿಸುತ್ತ ಅವೆಲ್ಲ ಒಂದೊAದಾಗಿ ಮೂಡಿ ಬಂದವು. ಅವೆಲ್ಲ ನಮಗೆ ಮತ್ತೊಬ್ಬರು ನೀಡಿದವುಗಳು. ಅದಕ್ಕೇ ಅವು ಎಂಜಲುಗಳು. ಇನ್ನೊಬ್ಬರು ಬಳಸಿ, ನಮಗೆ ನೀಡಿದಂಥವುಗಳು. ಯಾವವೂ ನಮ್ಮ ಸ್ವತಂತ್ರ ಸೃಷ್ಟಿಯಲ್ಲ. ನಮಗೆ ದೊರಕಿದ
ಅಕ್ಷರಗಳನ್ನು, ದೊರೆತ ಚಿಂತನೆಯ ಆಧಾರದ ಮೇಲೆ ಬೇರೆ ಬೇರೆ ರೀತಿಯಲ್ಲಿ ಜೋಡಿಸುತ್ತ, ಅದು ನಮ್ಮದೇ ಸಿದ್ಧಾಂತ ಎಂದು ಸಂಭ್ರಮ ಪಟ್ಟೆವು. ಅದಕ್ಕೇ ಕಗ್ಗ ಎಚ್ಚರಿಕೆ ನೀಡುತ್ತದೆ. ನೀನೊಬ್ಬ ತಬ್ಬಲಿ. ನೀನು ಬದುಕಿನ ದಾರಿಯಲ್ಲಿ ನಡೆಯುತ್ತ, ಹಿರಿಯರು, ಮೊದಲು ದಾರಿಯಲ್ಲಿ ಸಾಗಿದವರು ಕೊಟ್ಟ ಜ್ಞಾನವನ್ನು, ಎಂಜಲನ್ನು ಸ್ವೀಕರಿಸಿ ಸಾಗು. ನೀವು ಗುರುವಾಗುವುದೂ ಬೇಡ, ಶಿಷ್ಯನಾಗಿ ಉಳಿಯುವುದೂ ಬೇಡ. ಎಲ್ಲ ಕ್ಷೇತ್ರಗಳಂತೆ ಅಧ್ಯಾತ್ಮಿಕ ಕ್ಷೇತ್ರಗಳಲ್ಲಿಯೂ ಮಾರ್ಗದರ್ಶಿಗಳ ಅಗತ್ಯವಿದೆ. ಆದರೆ ನಮ್ಮ ಅಧ್ಯಾತ್ಮಿಕ ಪರಂಪರೆಯಲ್ಲಿ ಗುರು ಎಂದರೆ ಒಬ್ಬ ವ್ಯಕ್ತಿಯಲ್ಲ. ಅದೊಂದು ತತ್ವ. ಯಾಕೆಂದರೆ ಎಲ್ಲ ಗುರುಗಳೂ ಮನುಷ್ಯರೇ ಆಗಿರುವುದರಿಂದ ಅವರು ಪರಿಪೂರ್ಣರಲ್ಲ. ಅವರಲ್ಲಿಯೂ ಮಾನವ ಸಹಜ ದೌರ್ಬಲ್ಯಗಳಿರುವುದು ಸರಿಯೆ. ಆದ್ದರಿಂದ ಅವರು ತತ್ವವನ್ನು ಸಂಪೂರ್ಣವಾಗಿ ಮೈತಾಳಲಾರರು. ಅದಕ್ಕೇ ಬುದ್ಧ ಹೇಳಿದ, “ಇನ್ನೊಬ್ಬರು ಹೇಳಿದ್ದೆಂದು,
ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವೆಂದು, ಹಿಂದಿನ ಗ್ರಂಥಗಳಲ್ಲಿ ಉಕ್ತವಾಗಿದೆಯೆಂದು, ಗುರುಗಳು   ಹೇಳಿದ ಮಾತು ಎಂದು, ಯಾವುದನ್ನೂ ಒಪ್ಪಿಕೊಳ್ಳಬೇಡ. ನಿಮಗೆ ನೀವೇ ಜ್ಞಾನದೇವಿಗೆಗಳಾಗಿ – ಅತ್ತಾಹಿ ಆತ್ತನೋ ನಾಥೋ (ನಿನಗೆ ನೀನೇ ಗುರು)”. ಶರಣರು ಗುರು-ಶಿಷ್ಯರು ಅರಿವಿನ ಎರಡು ವಿಭಿನ್ನ ಸ್ಥಿತಿಗಳು ಎಂದು ಗುರುತಿಸಿದರು. ಪಾಠ ಹೇಳಿದವನು ಗುರುವಲ್ಲ, ನನ್ನ ಮನಸ್ಸನ್ನು ಜಾಗ್ರತಗೊಳಿಸಿದವನು ಗುರು ಎನ್ನುತ್ತಾಳೆ ಶರಣೆ ಮಸಣಮ್ಮ. ಅಲ್ಲಮ ಪ್ರಭುವಂತೂ, “ನೀನೇ ಸ್ವಯಂಜ್ಯೋತಿ ಪ್ರಕಾಶವೆಂದರಿಯಲು, ನಿನಗೆ ನೀನೇ ಗುರುವಲ್ಲದೆ, ನಿನ್ನಿಂಧಿಕವಪ್ಪ ಗುರುವುಂಟೇ?” ಎಂದು ಪ್ರಶ್ನಿಸುತ್ತಾನೆ. “ಉದ್ಧರೇತ್ ಆತ್ಮನಾತ್ಮಾನಂ” ಎನ್ನುವ ಮಾತು, ನಿನ್ನ ಉದ್ಧಾರಕ್ಕೆ ನೀನೇ ಕಾರಣ, ಇನ್ನೊಬ್ಬರನ್ನು ಹುಡುಕಿಕೊಂಡು ಹೋಗಬೇಡ ಎನ್ನುತ್ತದೆ. ಬುದ್ಧ ಹೇಳಿದ ಮಾತು, “ಓ ಆನಂದ, ನಿಮಗೆ ನೀವೇ ದೀವಿಗೆಗಳಾಗಿ. ಆ ಯಾರೊಬ್ಬರ ಆಶ್ರಯಬೇಡ, ಸತ್ಯವನ್ನೇ ಧೃಢವಾಗಿ ನಂಬಿ, ನಿಮ್ಮ ನಿರ್ವಾಣವನ್ನು ನೀವೇ ಸಾಧಿಸಿಕೊಳ್ಳಿ”. ಅದೇ ಕಗ್ಗದ ಆಶಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT