ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಆತ್ಮ ಋಣ

ಗುರುರಾಜ ಕರಜಗಿ ಅಂಕಣ
Last Updated 10 ಮೇ 2022, 16:43 IST
ಅಕ್ಷರ ಗಾತ್ರ

ಹತ್ಯೆಯೋ ಹನ್ಯತೆಯೊ ವಿಜಯವೊ ಪರಿಭವವೊ |
ಕ್ಷತ್ರಿಯಂ ಸ್ವಾರ್ಥಮಂ ಗಣಿಸುವನೆ ರಣದೊಳ್ ? ||
ಕೃತ್ಯನಿರ್ಣಯ ಬಾಹ್ಯಲಾಭನಷ್ಟದಿನಲ್ಲ |
ಆತ್ಮ ಋಣವದು ಜಗಕೆ – ಮಂಕುತಿಮ್ಮ || 624 ||

ಪದ-ಅರ್ಥ: ಹತ್ಯೆಯೋ=ಕೊಲೆಯೋ, ಹನ್ಯತೆಯೋ=ಕೊಲೆಯಾಗುವುದೊ, ಪರಿಭವವೊ=ಸೋಲೋ, ಕ್ಷತ್ರಿಯಂ=ಸೈನಿಕ, ಸ್ವಾರ್ಥಮಂ=ಸ್ವಾರ್ಥವನ್ನು, ಕೃತ್ಯನಿರ್ಣಯ=ಕಾರ್ಯದ ತೀರ್ಮಾನ, ಬಾಹ್ಯಲಾಭನಷ್ಟದಿನಲ್ಲ=ಬಾಹ್ಯ+ಲಾಭ+ನಷ್ಟದಿನಲ್ಲ (ನಷ್ಟದಿಂದಲ್ಲ)

ವಾಚ್ಯಾರ್ಥ: ಕೊಲ್ಲುವುದೊ, ಕೊಲ್ಲಿಸಿಕೊಳ್ಳುವುದೊ, ವಿಜಯವೊ, ಸೋಲೋ, ಏನಾದರಾಗಲಿ, ಯುದ್ಧಭೂಮಿಯಲ್ಲಿ ಕ್ಷತ್ರಿಯ ಸ್ವಾರ್ಥವನ್ನು ಕಾಣುತ್ತಾನೆಯೇ? ಅಲ್ಲಿ ಮಾಡಬೇಕಾದ+ ಕಾರ್ಯಕ್ಕೆ ತೀರ್ಮಾನಗಳನ್ನು ತೆಗೆದುಕೊಳ್ಳುವುದು
ಲಾಭ ನಷ್ಟದ ಯೋಚನೆಯಿಂದಲ್ಲ, ಅದು ಆತ ಜಗತ್ತಿಗೆ ಸಲ್ಲಿಸಬೇಕಾದ ಆತ್ಮ ಋಣ.

ವಿವರಣೆ: ಜೊನಾಸ್‌ನ ತಂದೆ-ತಾಯಂದಿರು ಲಂಡನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಪಕ್ಕದ ಮನೆಯಲ್ಲಿ ಜೊನಾಸ್‌ನ ವಾರಿಗೆಯ ಹುಡುಗ ಪೌಲ. ಇಬ್ಬರೂ ಹುಡುಗರು ಜೊತೆಯಾಗಿಯೇ ಶಾಲೆಗೆ ಹೋದರು. ಅವರ ಸ್ನೇಹ ಉಳಿದವರಿಗೆ ಮಾದರಿ ಯಾಗಿತ್ತು. ಅವರನ್ನು ಎಲ್ಲರೂ ಸಹೋದರರೆಂದೇ ತಿಳಿದಿದ್ದರು. 1930ಕ್ಕೆ ಜೊನಾಸ್‌ನ ತಂದೆ ಜರ್ಮನಿಯ ಬರ್ಲಿನ್‌ಗೆ ಮರಳಿದರು. ಜೊನಾಸ್ ಅಲ್ಲಿಯೇ ಕಾಲೇಜು ಸೇರಿದ. ನಂತರ ಆತನಿಗೆ ಅತ್ಯಂತ ಪ್ರಿಯವಾದ ಮಿಲಿಟರಿ ಸೇರಿ 1939ಕ್ಕೆ ಆತ ಮೇಜರ್ ಆಗಿ ಒಂದು ತುಕಡಿಯ ನಾಯಕನಾದ. ಎರಡನೇ ಮಹಾಯುದ್ಧ ಪ್ರಾರಂಭವಾಯಿತು. ಜೊನಾಸ್‌ನನ್ನು ಇಂಗ್ಲೆಂಡಿನ ಗಡಿಗೆ ಕಳುಹಿಸಲಾಯಿತು. ಯುದ್ಧ ಘನಘೋರವಾಗಿತ್ತು. ಅಂದು ರಾತ್ರಿ ಬೆಳದಿಂಗಳಿದೆ. ಜೊನಾಸ್‌ನ ತಂಡ ಇದ್ದದ್ದು ಕಣಿವೆಯಲ್ಲಿ. ಅದನ್ನು ಏರಿದರೆ ವೈರಿಗಳ ಪಾಳೆಯ. ಅದನ್ನು ಧ್ವಂಸ ಮಾಡಿದರೆ ವಿಜಯ ಖಂಡಿತ. ಜೊನಾಸ್ ಮೇಲೇರುತ್ತಿದ್ದಂತೆ, ಮೇಲೆ ಯಾರೋ ಸುಳಿದಾಡಿದಂತಾಯ್ತು. ಒಬ್ಬ ಬ್ರಿಟಿಶ್ ಸೈನಿಕ ಬರುತ್ತಿದ್ದಾನೆ. ಅವನು ತೀರ ಹತ್ತಿರ ಬರುವವರೆಗೆ ಜೊನಾಸ್ ಕಾಯ್ದ. ಮುಂದೆ ಬ್ರಿಟಿಶ್ ಸೈನಿಕ ಸರಿದಾಗ ಒಂದೇ ಕ್ಷಣ ಬೆಳದಿಂಗಳು ಅವನ ಮುಖದ ಮೇಲೆ ಹೊಳೆಯಿತು. ಹೌದು ಅವನೇ ಪೌಲ. ತನ್ನ ಆತ್ಮೀಯ ಗೆಳೆಯ. ಈಗ ಏನು ಮಾಡುವುದು? ಒಂದು ಕ್ಷಣ ತಡೆದರೆ ತನ್ನ ತಂಡ ನಿರ್ನಾಮವಾಗುತ್ತದೆ. ಜೊನಾಸ್ ಮನಸ್ಸು ಕಲ್ಲು ಮಾಡಿಕೊಂಡ. ಅರೆ ಕ್ಷಣದಲ್ಲಿ ಮೇಲೆ ಹಾರಿ ಬ್ರಿಟಿಶ್ ಸೈನಿಕನ, ತನ್ನ ಪ್ರಾಣ ಸ್ನೇಹಿತನ ಕತ್ತನ್ನು ಕತ್ತರಿಸಿಬಿಟ್ಟ!

ಜೊನಾಸ್‌ನ ಮನಸ್ಸಿನಲ್ಲಿ ಒಂದು ಕ್ಷಣದ ದ್ವಂದ್ವ. ಒಂದೆಡೆಗೆ ಆತ್ಮೀಯ ಸ್ನೇಹಿತ, ಮತ್ತೊಂದೆಡೆಗೆ ತನ್ನ ದೇಶದ ಗೌರವ. ಸೈನಿಕನಿಗೆ ದೇಶದ ಗೌರವ ದೊಡ್ಡದಾಯಿತೇ ವಿನಃ ಸ್ನೇಹಿತನ ಪ್ರೇಮ ಸೆಳೆಯಲಿಲ್ಲ.

ಯುದ್ಧಭೂಮಿಯಲ್ಲಿ ಸೈನಿಕನ ಕರ್ತವ್ಯ, ತನ್ನ ದೇಶದ ಘನತೆಗೆ, ರಕ್ಷಣೆಗೆ ಹೋರಾಡುವುದು. ಜೊನಾಸ್ ಒಂದು ನಿಮಿಷ ತಡ ಮಾಡಿದ್ದರೆ ಅವನ ಪ್ರಾಣವೇ ಹೋಗಬಹುದಿತ್ತು. ಯುದ್ಧದಲ್ಲಿ ಸೈನಿಕನಿಗೆ ಎರಡೇ ಆಯ್ಕೆಗಳು ಕೊಲ್ಲುವುದು ಇಲ್ಲವೇ ಕೊಲ್ಪಲ್ಪಡುವುದು. ಯುದ್ಧದ ಪರಿಣಾಮ ವಿಜಯವೋ, ಸೋಲೋ ಎಂಬುದನ್ನು ಸೈನಿಕನು ಚಿಂತಿಸಲಾರ. ಆ ಗಳಿಗೆಗೆ ಯಾವ ನಿರ್ಣಯ ತೆಗೆದುಕೊಂಡರೂ ಅದು ದೇಶಕ್ಕಾಗಿ. ಅಲ್ಲಿ ಲಾಭ-ನಷ್ಟದ ಯಾವ ಯೋಚನೆಯೂ ಇಲ್ಲ. ಸ್ವಾರ್ಥದ ವಿಚಾರ ಅಲ್ಲಿ ಸುಳಿಯುವುದೂ ಸಾಧ್ಯವಿಲ್ಲ.

ಮನುಷ್ಯ ಬದುಕಿನಲ್ಲಿ ತ್ಯಾಗ ಮಾಡಬಹುದು. ಅವನು ಮಾಡಬಹುದಾದ ಅತ್ಯಂತ ಹಿರಿದಾದ ತ್ಯಾಗವೆಂದರೆ ಪ್ರಾಣತ್ಯಾಗ. ಇದಕ್ಕಿಂತದೊಡ್ಡ ತ್ಯಾಗವಿಲ್ಲ. ಸೈನಿಕ ತನ್ನ ಜೀವವನ್ನೇ ಪಣವಾಗಿಟ್ಟು ಜಗತ್ತಿಗೆ ತನ್ನ ಆತ್ಮ ಋಣವನ್ನು ತೀರಿಸುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT