ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಆನೆ ಕಲಿಸಿದ ಪಾಠ

Last Updated 26 ಮೇ 2020, 19:30 IST
ಅಕ್ಷರ ಗಾತ್ರ

ಹಿಂದೆ ಬ್ರಹ್ಮದತ್ತ ವಾರಾಣಸಿಯಲ್ಲಿ ರಾಜ್ಯಭಾರ ಮಾಡುತ್ತಿದ್ದಾಗ ಬೋಧಿಸತ್ವ ಹಿಮಾಯಲದಲ್ಲಿ ಒಂದು ಅತ್ಯಂತ ವಿಶೇಷ ಆನೆಯಾಗಿ ಹುಟ್ಟಿದ್ದ. ಆನೆಯದ್ದು ಅಪ್ಪಟ, ಹೊಳೆಯುವ ಬಿಳಿ ಬಣ್ಣ. ಅದು ತುಂಬ ಎತ್ತರವಾದ, ಗಂಭೀರವಾದ ಆನೆ. ಅದರ ತಾಯಿ ಆನೆ ಕುರುಡಾಗಿತ್ತು. ಬೋಧಿಸತ್ವ ಆನೆ ತನ್ನ ತಾಯಿಯನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿತ್ತು. ಅದಕ್ಕಾಗಿ ತನ್ನ ತಾಯಿಯನ್ನು ಕರೆದುಕೊಂಡು ಚಂಡೋರಣ ಪರ್ವತದ ಬಳಿಗೆ ಬಂದು, ಒಂದು ಸರೋವರದ ಪಕ್ಕದಲ್ಲೇ ಇದ್ದ ಗುಹೆಯಲ್ಲಿ ಇರಿಸಿತು. ತಾನೇ ಪರ್ವತ ಪ್ರದೇಶದಲ್ಲಿ ತಿರುಗಾಡಿ ರುಚಿ-ರುಚಿಯಾದ ಹಣ್ಣುಗಳು, ಕಬ್ಬು, ಹಸಿರು ಹುಲ್ಲುಗಳನ್ನು ತಂದು ತಾಯಿಗೆ ಕೊಡುತ್ತಿತ್ತು. ದಿನಾಲು ಸರೋವರಕ್ಕೆ ಕರೆದೊಯ್ದು ಆ ಸ್ವಚ್ಛ ನೀರಿನಲ್ಲಿ ಮಜ್ಜನವನ್ನು ಮಾಡಿಸುತ್ತಿತ್ತು.

ಒಂದು ದಿನ ಹೀಗೆ ಆಹಾರವನ್ನು ಹುಡುಕಿಕೊಂಡು ಹೋಗುವಾಗ ದಾರಿಯಲ್ಲಿ ಮನುಷ್ಯನೊಬ್ಬ ಕಂಗಾಲಾಗಿ ಕುಳಿತಿರುವುದನ್ನು ಕಂಡಿತು. ಆತ ಆನೆಯನ್ನು ಕಂಡು ಭಯದಿಂದ ಓಡತೊಡಗಿದ. ‘ನಿಲ್ಲು, ಓಡಬೇಡ. ಏನು ನಿನ್ನ ಸಮಸ್ಯೆ?’ ಎಂದು ಕೇಳಿತು. ಆತ ಅಳುತ್ತ ಹೇಳಿದ, ‘ಏಳು ದಿನಗಳಾದವು, ನಾನು ಕಾಡಿನಲ್ಲಿ ದಾರಿ ತಪ್ಪಿಸಿಕೊಂಡಿದ್ದೇನೆ. ನನ್ನ ಊರಿಗೆ ಹೇಗೆ ಹೋಗುವುದೆಂಬುದು ತಿಳಿಯುತ್ತಿಲ್ಲ’. ಆಗ ಆನೆ, ‘ಚಿಂತೆ ಮಾಡಬೇಡ. ನಾನು ನಿನ್ನನ್ನು ಮನುಷ್ಯರಿರುವ ನಗರದ ಹತ್ತಿರ ಬಿಡುತ್ತೇನೆ. ಅಲ್ಲಿಂದ ನಿನ್ನ ಮನೆ ಸೇರಿಕೋ’ ಎಂದು ಅವನನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ನಗರದ ಹತ್ತಿರಕ್ಕೆ ಬಿಟ್ಟು ಬಂದಿತು. ಆದರೆ ಆ ಪಾಪಿ ಮನುಷ್ಯ, ‘ಇಂಥ ಸುಂದರವಾದ, ಬಲಿಷ್ಠವಾದ ಹಾಗೂ ಸಾಧುವಾದ ಆನೆ ತುಂಬ ಅಪರೂಪದ್ದು. ಇದರ ಬಗ್ಗೆ ಯಾರಿಗಾದರೂ ತಿಳಿಸಿದರೆ ತನಗೆ ಸಾಕಷ್ಟು ಹಣ ದೊರಕಿತು’ ಎಂದು ಹೊಂಚು ಹಾಕಿದ. ಅದಕ್ಕೆ ಸರಿಯಾಗುವಂತೆ ಒಂದು ಸುದ್ದಿ ಬಂದಿತು. ರಾಜನ ಪಟ್ಟದಾನೆ ಸತ್ತು ಹೋಗಿದೆ ಮತ್ತು ರಾಜ ಅಂತಹ ರಾಜಲಕ್ಷಣಗಳನ್ನು ಹೊಂದಿದ ಆನೆಯನ್ನು ಹುಡುಕುತ್ತಿದ್ದಾನೆ. ಈ ಮನುಷ್ಯ ರಾಜನಿಗೆ ತಾನು ಕಾಡಿನಲ್ಲಿ ಕಂಡ ಅಪರೂಪದ ಆನೆಯ ಬಗ್ಗೆ ಹೇಳಿದ.

ತಕ್ಷಣ ರಾಜ ನೂರು ಆನೆಗಳನ್ನು ಮಾವುತರ ಜೊತೆಗೆ ಈ ಮನುಷ್ಯನ ಮಾರ್ಗದರ್ಶನದಲ್ಲಿ ಕಳುಹಿಸಿದ. ಆತ ಅವರನ್ನೆಲ್ಲ ಕರೆದುಕೊಂಡು ಸರೋವರದ ಬಳಿಗೆ ಹೋಗಿ ದೂರದಿಂದ ಆನೆಯನ್ನು ತೋರಿಸಿದ. ಬೋಧಿಸತ್ವ ಆನೆ ಅವರನ್ನೆಲ್ಲ ನೋಡಿತು. ಈ ಕೃತಘ್ನ ಮನುಷ್ಯನೇ ಇದಕ್ಕೆ ಕಾರಣವೆಂದು ಅದಕ್ಕೆ ತಿಳಿಯಿತು. ಅದು ಹೋರಾಡಿದರೆ ಈ ಎಲ್ಲ ಆನೆಗಳನ್ನು ಒಂದೇ ಏಟಿಗೆ ಹೊಡೆದು ಹಾಕಬಹುದಿತ್ತು. ಆದರೆ ಆನೆ ಬಹಳ ಪ್ರಯತ್ನದಿಂದ ಕೋಪ ಶಮನದ ವೃತವನ್ನು ಮಾಡುತ್ತಿತ್ತು. ಕೋಪ ಮಾಡಿಕೊಂಡು ಶೀಲವನ್ನು ಕಳೆದುಕೊಳ್ಳುವುದು ಬೇಡವೆಂದು ಅದು ಉಳಿದ ಆನೆಗಳ ಜೊತೆಗೆ ವಾರಾಣಸಿಗೆ ಹೋಯಿತು. ರಾಜ ಅದನ್ನು ಕಂಡು ಬಹಳ ಸಂತೋಷದಿಂದ ಪಟ್ಟದಾನೆಯನ್ನಾಗಿ ಮಾಡಿದ. ಆದರೆ ಆನೆ ಯಾವ ತಿನಿಸನ್ನು ತಿನ್ನಲಿಲ್ಲ, ನೀರು ಕುಡಿಯಲಿಲ್ಲ. ಎರಡು ದಿನ ಹೀಗೆಯೇ ಆದ ಮೇಲೆ ರಾಜ ಗಾಬರಿಯಾಗಿ ಕಾರಣ ಕೇಳಿದ. ಆಗ ಆನೆ, ‘ರಾಜ, ನಾನು ಇಲ್ಲಿಗೆ ಬಂದುಬಿಟ್ಟೆ. ಆದರೆ ನನ್ನ ಕುರುಡಿ ತಾಯಿ ಗುಹೆಯಲ್ಲಿ ಆಹಾರ, ನೀರಿಲ್ಲದೆ ಒದ್ದಾಡುತ್ತಿದ್ದಾಳೆ. ಹಾಗಿರುವಾಗ ನಾನು ಹೇಗೆ ತಿನ್ನಲಿ?’ ಎಂದಿತು. ರಾಜ ಆನೆಯ ಮಾತೃಭಕ್ತಿಯನ್ನು ಕಂಡು ಬಿಡುಗಡೆ ಮಾಡಿ ಮತ್ತೆ ಅರಣ್ಯಕ್ಕೆ ಕಳುಹಿಸಿದ. ಇದುವರೆಗೂ ತನ್ನ ತಾಯಿಯ ಆರೈಕೆ ಮಾಡದೆ ದೂರ ಇಟ್ಟಿದ್ದ ರಾಜ, ಆನೆಯಿಂದ ಪಾಠ ಕಲಿತು ಆಕೆಯನ್ನು ಮರಳಿ ಅರಮನೆಗೆ ಕರೆದುಕೊಂಡು ಬಂದು ಚೆನ್ನಾಗಿ ನೋಡಿಕೊಂಡು, ಸಂತೋಷ ನೀಡಿದ.

ಮನಸ್ಸಿದ್ದರೆ ಯಾರಾದರೂ, ಯಾವ ಪ್ರಾಣಿಯಾದರೂ, ಯಾವುದೇ ಘಟನೆಯಾದರೂ ಪಾಠ ಕಲಿಸೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT