ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆರಗಿನ ಬೆಳಕು: ಅನೂಹ್ಯ ಜೀವನ ಮಾರ್ಗ

Last Updated 10 ಅಕ್ಟೋಬರ್ 2022, 19:30 IST
ಅಕ್ಷರ ಗಾತ್ರ

ಆವ ಕಡೆ ಹಾರುವುದೊ! ಆವ ಕಡೆ ತಿರುಗುವುದೊ! ಆವಾಗಳಾವಕಡೆಗೆರಗುವುದೊ ಹಕ್ಕಿ ||
ನಾವುಮಂತೆಯೆ ಸೃಷ್ಟಿಕೃತ್ರಿಮದ ಕೈಗೊಂಬೆ |
ಜೀವನಮಾರ್ಗವನೂಹ್ಯ – ಮಂಕುತಿಮ್ಮ || 732 ||

ಪದ-ಅರ್ಥ: ಆವಾಗಳಾವಕಡೆಗೆರೆಗುವುದೊ=ಆವಗಳೆ+ಆವಕಡೆಗೆ+ಎರಗಂವುದೊ, ನಾವು ಮಂತೆಯೆ=ನಾವು (ನಾವೂ)+ಅಂತೆಯೆ,
ಜೀವನಮಾರ್ಗವನೂಹ್ಯ=ಜೀವನಮಾರ್ಗವು +ಅನೂಹ್ಯ(ಊಹಿಸಲು ಸಾಧ್ಯವಾಗದ್ದು).

ವಾಚ್ಯಾರ್ಥ: ಹಕ್ಕಿ ಯಾವ ಕಡೆಗೆ ಹಾರುವುದೊ, ಯಾವ ಕಡೆಗೆ ತಿರುಗುವುದೊ, ಯಾವಾಗ, ಯಾವ ಕಡೆಗೆ ಎರಗುವುದೋ ಹೇಳುವುದು ಕಷ್ಟ. ಅದರಂತೆಯೇ, ನಾವೂ ಸೃಷ್ಟಿಯ ಕೃತ್ರಿಮದ ಕೈಗೊಂಬೆಗಳು. ಜೀವನ ನಡೆಯುವ ಮಾರ್ಗ ಊಹಿಸಲ ಸಾಧ್ಯವಾದದ್ದು.

ವಿವರಣೆ: ಒಂದು ಹಕ್ಕಿಯ ಚಲನವಲನಗಳು ಹೀಗೆಯೇ ಎಂದು ಹೇಳುವುದು ಸಾಧ್ಯವಿಲ್ಲ. ಆಹಾರಕ್ಕಾಗಿ ಎಲ್ಲೆಲ್ಲಿಯೋ ಹೋಗುತ್ತದೆ, ಯಾವುದೋ ಭಯದಿಂದ ತಕ್ಷಣ ಹಾರಿ ಬೇರೆಡೆಗೆ ಸಾಗುತ್ತದೆ. ಅದರ ಹಾರಾಟ, ಚಟುವಟಿಕೆಗಳು ಅನಿಶ್ಚಿತವಾಗಿರುತ್ತವೆ. ಕಗ್ಗ ಹೇಳುತ್ತದೆ ಮನುಷ್ಯನ ಜೀವನದ ದಾರಿಯೂ ಹೀಗೆಯೇ ಅನೂಹ್ಯವಾದದ್ದು. ಬದುಕು ಹೀಗೆಯೇ ಆದೀತು ಎಂದು ಹೇಳುವುದು ಅಸಾಧ್ಯ. ಕೇರಳದ ಅತ್ಯಂತ ಬಡಕುಟುಂಬದಲ್ಲಿ ರಾತ್ರಿಯ ಊಟ ದೊರಕೀತೇ ಎಂಬ ಸ್ಥಿತಿಯಲ್ಲಿದ್ದ ಹುಡುಗನೊಬ್ಬ ರಾಷ್ಟ್ರಪತಿಯಾಗು
ತ್ತಾನೆ.ರೈತನ ಮಗನೊಬ್ಬ ಪ್ರಧಾನಮಂತ್ರಿಯಾಗುತ್ತಾನೆ. ಕೋಟಿ ಕೋಟಿ ಹಣವನ್ನು ಕಾಲಡಿಯಲ್ಲಿಟ್ಟುಕೊಂಡು ವ್ಯಾಪಾರದಲ್ಲಿ ಸಂಭ್ರಮಪಟ್ಟವನು ಪರದೇಶದ ಜೈಲುಗಳಲ್ಲಿ ಕೊಳೆಯುತ್ತಾನೆ, ಸನ್ಯಾಸಿಯಾಗಿ ಲೋಕಕ್ಕೆ ಮಾದರಿಯ ಬದುಕನ್ನು ಹೇಳಿಕೊಡುತ್ತಿದ್ದ ವ್ಯಕ್ತಿಮುಖಗೇಡಿಯಾಗಿ ತಿರಸ್ಕಾರಕ್ಕೆ ಒಳಗಾಗುತ್ತಾನೆ. ಇದೇ ಬದುಕಿನ ಅನೂಹ್ಯತೆ. ಬಸವ ಪುರಾಣ, ಶೂನ್ಯಸಂಪಾದನೆ ಮತ್ತು ಗೌರವಾಂಕನ ಮೋಳಿಗಯ್ಯನ ಪುರಾಣ ಗ್ರಂಥಗಳಲ್ಲಿ ದೊರೆಯುವ ಮಹಾದೇವ ಭೂಪಾಲನ ಕಥೆ, ವಿಧಿ ನಮ್ಮ ಬದುಕನ್ನು ತನ್ನಿಚ್ಛೆಯಂತೆ ಬದಲಿಸುವುದನ್ನು ತೋರಿಸುತ್ತದೆ. ದೂರದ ಕಾಶ್ಮೀರ. ಅಲ್ಲಿಯ ರಾಜ ಮಹಾದೇವ ಭೂಪಾಲ. ಅವನ ಪತ್ನಿ ಗಂಗಾದೇವಿ. ಅವನ ಶ್ರೀಮಂತಿಕೆ ಬೆರಗುಗೊಳಿಸುವಂಥದ್ದು. ಅದರೊಂದಿಗೆ ಹೃದಯಶ್ರೀಮಂತಿಕೆಯೂ ಅದ್ಭುತ. ಆತ ನಿತ್ಯ ಸಾವಿರಾರು ಜನರಿಗೆ ದಾಸೋಹವನ್ನು ಮಾಡುತ್ತಿದ್ದ. ಅವನ ಕಿವಿಗೆ ಬಸವಕಲ್ಯಾಣದ ಬಸವಣ್ಣನ ವಿಷಯ ಕಿವಿಗೆ ಬಿದ್ದು, ಅದನ್ನು ಕಾಣಲು ಪತ್ನಿಯೊಂದಿಗೆ ಬಂದ ಮಹಾದೇವ ಭೂಪಾಲ, ಬಸವಣ್ಣನ ಭಕ್ತಿಯ, ಪ್ರೇಮದ ಬಲೆಯಲ್ಲಿ ಸೇರಿಹೋಗಿ, ತಾನೂ ಶರಣನಾಗಿ ಅಲ್ಲಿಯೇ ನಿಂತುಬಿಟ್ಟ. ಕಟ್ಟಿಗೆ ಒಡೆದು, ಹೊತ್ತು ತಂದು ಮಾರಿ, ಬಂದ ಹಣದಲ್ಲಿ ದಾಸೋಹ ಮಾಡುತ್ತ, ಕನ್ನಡ ಕಲಿತು, ಅದ್ಭುತ ವಚನಗಳನ್ನು ರಚಿಸಿ, ಶಾಶ್ವತರಾದದ್ದು ಮೋಳಿಗೆ (ಕಟ್ಟಿಗೆಯ ಹೊರೆ) ಮಾರಯ್ಯ ಮತ್ತು ಮಹಾದೇವಿಯವರ ಜೀವನ ಗಾಥೆ. ಎಲ್ಲಿಯ ಕಾಶ್ಮೀರ, ಎಲ್ಲಿಯ ಬಸವಕಲ್ಯಾಣ? ಕತ್ತಿ, ಗುರಾಣಿ ಹಿಡಿದಿದ್ದ ರಾಜನ ಕೈಯಲ್ಲಿ ಇಷ್ಟಲಿಂಗ. ಕಿರೀಟ ಧರಿಸುತ್ತಿದ್ದ ತಲೆಯ ಮೇಲೆ ಕಟ್ಟಿಗೆಯ ಹೊರೆ. ರಾಜಾಜ್ಞೆಯನ್ನು ಬರೆಯುವ ಕೈಗಳಿಂದ ವಚನ ರಚನೆ. ರಾಜಕಾರ್ಯ ಮತ್ತು ದಾಸೋಹಗಳೆರಡರಲ್ಲೂ ಸಾರ್ಥಕ್ಯ ಕಂಡ ಚೇತನಗಳು. ಜೀವನದ ಕಲ್ಪನಾತೀತ ಬದಲಾವಣೆಗಳು ವಿಧಿಯ ಕೈವಾಡ. ನಾವು ಆ ಸೃಷ್ಟಿ ಕೃತ್ರಿಮದ ಕೈಯಲ್ಲಿದ್ದ ಗೊಂಬೆಗಳು ಮಾತ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT