ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವೇಕಿಗಳ ನಡೆ

Last Updated 5 ಆಗಸ್ಟ್ 2018, 19:17 IST
ಅಕ್ಷರ ಗಾತ್ರ

ವಾರಣಾಸಿಯಲ್ಲಿ ಬ್ರಹ್ಮದತ್ತ ರಾಜ್ಯಭಾರ ಮಾಡುವಾಗ ಬೋಧಿಸತ್ವ ಭೋಜಾಜಾನೀಯ ಎಂಬ ಹೆಸರಿನ ಶ್ರೇಷ್ಠ ತಳಿಯ ಅಶ್ವವಾಗಿದ್ದ. ಅದರ ಅಪೂರ್ವವಾದ ಲಕ್ಷಣಗಳಿಂದ ಅದನ್ನು ಮಾಂಗಲೀಕ ಅಶ್ವ ಎಂದು ಎಲ್ಲರೂ ಗೌರವಿಸುತ್ತಿದ್ದರು. ಅದಕ್ಕೆ ಸರ್ವಅಲಂಕಾರಗಳನ್ನು ಮಾಡಲಾಗಿತ್ತು. ಅದರ ಆಹಾರ ಚಿನ್ನದ ತಟ್ಟೆಯಲ್ಲೇ. ಅತ್ಯಂತ ರಸವತ್ತಾದ ಊಟ, ಅದರ ಮೈಗೆ ಬೆಲೆಬಾಳುವ ಚಿನ್ನದ ಆಭರಣಗಳು, ಸುಗಂಧ ಲೇಪನ. ಅದು ನಿಂತುಕೊಳ್ಳುವುದು ಕೆಂಪು ರತ್ನಗಂಬಳಿಯ ಮೇಲೆಯೇ. ಸುತ್ತಲೂ ಪುಷ್ಪಮಾಲೆಗಳು, ಸುಗಂಧ ತೈಲಗಳಿಂದ ಉರಿಯುವ ದೀಪಗಳು! ಆ ಕುದುರೆ ರಾಜನ ಮಂಗಳದ ಪ್ರತೀಕವಾಗಿತ್ತು.

ವಾರಣಾಸಿ ಅತ್ಯಂತ ಸಮೃದ್ಧ ದೇಶವಾದ್ದರಿಂದ ಸುತ್ತಲಿನ ಏಳುಮಂದಿ ರಾಜರು ಒಗ್ಗಟ್ಟಾಗಿ ದಾಳಿ ಮಾಡಲು ನಿರ್ಧರಿಸಿದರು. ಯುದ್ಧ ಮಾಡು, ಇಲ್ಲವೇ ಶರಣಾಗು ಎಂಬ ಸಂದೇಶವನ್ನು ಬ್ರಹ್ಮದತ್ತನಿಗೆ ಕಳುಹಿಸಿದರು. ಮಂತ್ರಿಗಳು ರಾಜನಿಗೆ ಸಲಹೆ ನೀಡಿದರು, ‘ನೀವು ನೇರವಾಗಿ ಯುದ್ಧಕ್ಕೆ ಹೋಗುವುದು ಸರಿಯಲ್ಲ. ಮೊದಲೊಬ್ಬ ಸಮರ್ಥ ಅಶ್ವಾರೋಹಿಯನ್ನು ಕಳುಹಿಸೋಣ, ಅವನಿಂದ ಆಗದಿದ್ದರೆ ತಾವು ಹೊರಡಬಹುದು’. ರಾಜ ಒಪ್ಪಿದ. ದೇಶದ ಅತ್ಯಂತ ಸಮರ್ಥ ಅಶ್ವಾರೋಹಿಯನ್ನು ಆಯ್ದು ಅವನಿಂದ ಈ ಕಾರ್ಯ ಸಾಧ್ಯವೇ? ಎಂದು ಕೇಳಿದರು. ಆತ, ‘ನನಗೆ ಭೋಜಾಜಾನೀಯ ಅಶ್ವವನ್ನು ಕೊಟ್ಟರೆ ಏಳೇನು, ಎಪ್ಪತ್ತು ರಾಜರನ್ನು ಹಿಡಿದೇನು’ ಎಂದ.

ರಾಜ ಭೋಜಾಜಾನೀಯಕ್ಕೆ ಪೂಜೆ ಮಾಡಿ ಕಳುಹಿಸಿದ. ಕುದುರೆಯ ಅಪ್ರತಿಮ ಕುಶಲತೆ, ಅಶ್ವಾರೋಹಿಯ ಸಾಮರ್ಥ್ಯ ಅದ್ಭುತವಾಗಿದ್ದವು. ಮಿಂಚಿನವೇಗದಲ್ಲಿ ನುಗ್ಗಿ ಸೈನಿಕರು ನೋಡುತ್ತಿದ್ದಂತೆ ಮೊದಲನೇ ರಾಜನನ್ನು ಹಿಡಿದು ತನ್ನ ಸೈನ್ಯಕ್ಕೆ ಒಪ್ಪಿಸಿದ ಆಶ್ವಾರೋಹಿ. ಮರಳಿ ರಾಜ್ಯಕ್ಕೆ ಬರದೇ ಅದೇ ಮಿಂಚಿನ ವೇಗದಲ್ಲಿ ಚಲಿಸಿ ಇನ್ನೂ ಐದು ರಾಜರನ್ನು ಹಿಡಿದು ಒಪ್ಪಿಸಿದ.

ಆ ಹೊತ್ತಿಗೆ ಮಾಂಗಲಿಕ ಅಶ್ವಕ್ಕೆ ಬಲವಾದ ಗಾಯವಾಯಿತು. ಅದು ಮಗ್ಗುಲಾಗಿ ಮಲಗಿಬಿಟ್ಟಿತು. ಅನಿವಾರ್ಯವಾಗಿ ಅಶ್ವಾರೋಹಿ ಬೇರೆ ಕುದುರೆಯನ್ನು ಸಿದ್ಧಮಾಡತೊಡಗಿದ. ಭೋಜಾಜಾನೀಯ ಅದನ್ನು ಗಮನಿಸಿತು. ಆ ಇನ್ನೊಂದು ಕುದುರೆಯಿಂದ ಕೊನೆಯ ರಾಜನನ್ನು ಹಿಡಿಯುವುದು ಅಸಾಧ್ಯ. ಅಶ್ವಾರೋಹಿಯೂ ಬದುಕುವುದಿಲ್ಲ. ತನ್ನಿಂದ ಮಾತ್ರ ಅದು ಸಾಧ್ಯವೆಂಬುದನ್ನು ಅರಿತು, ‘ಅಶ್ವಾರೋಹಿ, ಬೇರೆ ಕುದುರೆಯನ್ನು ಬಿಡು. ನನಗೇ ಔಷಧಿಯ ಪಟ್ಟಿ ಹಾಕು. ನಾನೇ ಬರುತ್ತೇನೆ’ ಎಂದಿತು. ಅಂತೆಯೇ ಕಷ್ಟಪಟ್ಟು ಮೇಲೆದ್ದು ಅಶ್ವಾರೋಹಿಯನ್ನು ಕೂಡ್ರಿಸಿಕೊಂಡು ಮತ್ತದೇ ವೇಗದಿಂದ ಚಲಿಸಿ ಏಳನೆಯ ರಾಜನನ್ನು ಹಿಡಿಯಿತು. ಎಲ್ಲರನ್ನೂ ವಾರಣಾಸಿಗೆ ಹಿಡಿದು ತಂದಾಗ, ‘ರಾಜಾ, ಈ ರಾಜರನ್ನು ಕೊಲ್ಲಬೇಡ, ಅವರನ್ನು ಪ್ರೀತಿಯಿಂದ ಗೆಲ್ಲು. ಯುದ್ಧದ ಕೀರ್ತಿಯನ್ನು ನನಗೆ ಕೊಡಬೇಡ, ಅಶ್ವಾರೋಹಿಗೆ ಕೊಡು. ಧರ್ಮದಿಂದ, ನ್ಯಾಯದಿಂದ ನಿಷ್ಪಕ್ಷವಾಗಿ ಕಾರ್ಯಮಾಡು’ ಎಂದು ಹೇಳಿ ಅಲಂಕಾರಗಳನ್ನು ಬಿಚ್ಚಿಸಿಕೊಂಡ ತಕ್ಷಣ ಕುಸಿದುಬಿದ್ದು ಮರಣಹೊಂದಿತು. ಬ್ರಹ್ಮದತ್ತ, ಕುದುರೆ ಹೇಳಿದಂತೆಯೇ ವಿಶ್ವಾಸದಿಂದ ರಾಜ್ಯಭಾರ ಮಾಡಿದ.

ವಿವೇಕಿಗಳು ಎಂದಿಗೂ ಗೊಣಗುವುದಿಲ್ಲ. ಕೆಲಸಗಳನ್ನು ಅರ್ಧಕ್ಕೆ ಬಿಡುವುದಿಲ್ಲ. ತಮ್ಮ ಶಕ್ತಿ ಕುಂದಿದರೂ ಕೊನೆಯ ಕ್ಷಣದವರೆಗೆ ಸಂಪೂರ್ಣ ಪ್ರಯತ್ನಮಾಡುತ್ತಲೇ ಇರುತ್ತಾರೆ. ಮೆಚ್ಚುಗೆ ಕೇವಲ ತಮಗೇ ಬರಬೇಕೆಂಬ ಅಪೇಕ್ಷೆ ಅವರದ್ದಲ್ಲ. ಕಾರ್ಯಸಂಪನ್ನವಾಗುವುದು ಅವರ ಪ್ರಥಮ ಆದ್ಯತೆ. ಅಂಥವರು ಸಮಾಜದ ನೇತಾರರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT