ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ| ನಗರದ ಜೀವವೈವಿಧ್ಯಕ್ಕೆ ಬೇಕಿದೆ ರಕ್ಷಣೆ

ಈ ಕುರಿತು ನಮ್ಮ ನೀತಿ ನಿರೂಪಕರಲ್ಲಿ ಕಾಳಜಿ ಕೊರತೆಯೇಕೆ?
Last Updated 22 ಜನವರಿ 2023, 22:48 IST
ಅಕ್ಷರ ಗಾತ್ರ

ಬೆಂಗಳೂರಿನ ಸ್ಯಾಂಕಿ ರಸ್ತೆಯ ಬಳಿ ಮೇಲ್ಸೇತುವೆ ನಿರ್ಮಾಣ ಮತ್ತು ರಸ್ತೆ ವಿಸ್ತರಣೆಗಾಗಿ, ನೂರಾರು ವರ್ಷ ಹಳೆಯದಾದ ಪಾರಂಪರಿಕ ಮರಗಳನ್ನು ಕಡಿಯಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ನಿರ್ಧರಿಸಿದೆ. ಇದನ್ನು ವಿರೋಧಿಸಿರುವ ಸ್ಥಳೀಯರು, ಪರಿಸರಪ್ರಿಯರು ಪ್ರತಿಭಟನೆಗೆ ಇಳಿದಿದ್ದಾರೆ. ಎಳೆಯ ವಿದ್ಯಾರ್ಥಿಗಳು ಮುಖ್ಯಮಂತ್ರಿಗೆ ಪತ್ರ ಬರೆದು, ಯೋಜನೆ ಕೈಬಿಡುವಂತೆ ಮನವಿ ಮಾಡಿದ್ದಾರೆ. ಈ ನಿರ್ಧಾರದ ವಿರುದ್ಧ ಕೆಲವು ಸಂಘಟನೆಗಳು ಸಹಿ ಸಂಗ್ರಹ ಅಭಿಯಾನ ಶುರು ಮಾಡಿವೆ.

ಗುರುರಾಜ್‌ ಎಸ್‌. ದಾವಣಗೆರೆ
ಗುರುರಾಜ್‌ ಎಸ್‌. ದಾವಣಗೆರೆ

ಸ್ಯಾಂಕಿ ಕೆರೆಯ ದಂಡೆಗೆ ಗಟ್ಟಿತನ ನೀಡಿರುವ ಮರಗಳನ್ನು ತೆರವುಗೊಳಿಸುವುದು ಕೆರೆಯ ಅಸ್ತಿತ್ವಕ್ಕೆ ಅಪಾಯ ತರುತ್ತದೆ ಎಂಬುದು ಪರಿಸರ ತಜ್ಞರ ಅಭಿಪ್ರಾಯ. ಮರಗಳನ್ನು ಸ್ಥಳಾಂತರಗೊಳಿಸುವ ಸಾಧ್ಯತೆ ಕುರಿತು ಪ್ರಶ್ನಿಸಿರುವ ಕೆಲವು ಹಿರಿಯ ನಾಗರಿಕರು, ‘ಇದು ಬೇರೆ ರಸ್ತೆಗಳಂತಲ್ಲ, ಕೆರೆಯ ದಂಡೆಯ ರಸ್ತೆಯಾದ್ದರಿಂದ ಬೃಹತ್ ಭಾರದ ಸೇತುವೆ ಮತ್ತು ರಸ್ತೆ ವಿಸ್ತರಣೆಗಾಗಿ ಮರ ಕಡಿದರೆ ಕೆರೆ ದಂಡೆ ಶಿಥಿಲವಾಗಿ ಕೆರೆ ಒಡೆಯುವ ಅಪಾಯ ಹೆಚ್ಚಾಗುತ್ತದೆ, ಅಲ್ಲಿನ ಹಸಿರು ಪರಿಸರ ಮಾಯವಾಗುತ್ತದೆ, ನಮಗದು ಬೇಡ’ ಎನ್ನುತ್ತಾರೆ. ಹಕ್ಕಿಗಳನ್ನು ಉಳಿಸಬೇಕು ಎನ್ನುವ ವಿದ್ಯಾರ್ಥಿಯೊಬ್ಬ, ‘ಅಂಕಲ್, ಮರ ಕಡಿದರೆ ಇಲ್ಲಿರುವ ಮರಗಳಲ್ಲಿ ಗೂಡು ಕಟ್ಟಿರುವ ಪಕ್ಷಿ, ಕೀಟ, ಜೇಡ, ಹಲ್ಲಿ, ಬಾವಲಿಗಳ ಮನೆ ಇಲ್ಲದಂತಾಗುವುದಲ್ಲವೇ’ ಎಂದು ಮುಗ್ಧವಾಗಿ ಪ್ರಶ್ನಿಸುತ್ತಾನೆ. ‘ಕಾಡಿನಲ್ಲಿರುವ ಜೀವವೈವಿಧ್ಯ ಕಾಯಲು ಅರಣ್ಯಪಾಲಕರು ಇರುತ್ತಾರೆ, ನಗರದ ಜೀವವೈವಿಧ್ಯ ಕಾಪಾಡುವವರು ಯಾರು?’ ಎಂದು ಇನ್ನೊಬ್ಬ ಹುಡುಗಿ ಕೇಳುತ್ತಾಳೆ.

ಜೀವವೈವಿಧ್ಯ ಎಂದಾಕ್ಷಣ ನಿತ್ಯಹರಿದ್ವರ್ಣ ಕಾಡು, ಹುಲ್ಲುಗಾವಲು, ಸಾಗರ, ನದಿ, ಸರೋವರ, ಮರುಭೂಮಿ, ಕುರುಚಲು ಕಾಡು, ಬೆಟ್ಟ, ಬೋಳುಗುಡ್ಡ, ಕಣಿವೆ, ಕಂದರ, ತೊರೆ, ಕೆರೆ, ನೆಡುತೋಪು, ಕಾಲುವೆ, ದೇವರಕಾಡು, ಕಾಂಡ್ಲಾ, ಶೋಲಾ, ಅರಾವಳಿ, ಹಿಮಾಲಯ, ಅಂಟಾರ್ಕ್ಟಿಕ, ಗ್ರೇಟ್ ಬ್ಯಾರಿಯರ್‌ ರೀಫ್‌, ಪಶ್ಚಿಮಘಟ್ಟ, ಪಕ್ಷಿ, ಪತಂಗ, ಪ್ರಾಣಿ, ಹಾವು, ತರಿ ಭೂಮಿಗಳು ಕಣ್ಣ ಮುಂದೆ ಬರುತ್ತವೆ. ಹುಲಿ, ಆನೆ, ಪಾಂಡಾ, ಚಿರತೆ, ಘರಿಯಾಲ್ ಮೊಸಳೆ, ಘೇಂಡಾಮೃಗ, ಚೀತಾ, ಕಾಳಿಂಗಸರ್ಪ, ವಲಸೆ ಹಕ್ಕಿ, ಔಷಧ ಸಸ್ಯಗಳ ಬಗ್ಗೆ ಕಾಳಜಿ ಶುರುವಾಗುತ್ತದೆ. ಜಲಮೂಲಗಳ ಸಂರಕ್ಷಣೆ, ಅರಣ್ಯ ಒತ್ತುವರಿ, ಕಾಳ್ಗಿಚ್ಚು, ಕಳ್ಳಬೇಟೆ, ಟ್ರೀ ಫೆಲ್ಲಿಂಗ್, ಮರ ಕಡಿತ, ಮಾನವ– ವನ್ಯಜೀವಿ ಸಂಘರ್ಷ, ಜಾನುವಾರು ಬಲಿ, ಅರಣ್ಯ ಇಲಾಖೆಯ ಕಾರ್ಯವೈಖರಿ ಕುರಿತು ವಿಸ್ತೃತ ಚರ್ಚೆಗಳಾಗುತ್ತವೆ. ಆದರೆ ಜನ ಒತ್ತೊತ್ತಾಗಿ ವಾಸಿಸುವ, ತಮ್ಮದೇ ಜೀವಿ ಪರಿಸರವನ್ನು ಹೊಂದಿರುವ ನಗರಗಳ ಜೀವವೈವಿಧ್ಯದ ಕುರಿತು ಯಾರೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ.

ಅಂಕಿ ಅಂಶಗಳಂತೆ, ವಿಶ್ವದ ಒಟ್ಟು ಜನಸಂಖ್ಯೆ ಯಲ್ಲಿ 430 ಕೋಟಿ ಜನ ನಗರಗಳಲ್ಲಿ ವಾಸಿಸುತ್ತಿದ್ದಾರೆ. ನಗರಗಳಂತೂ ಜನರಿಂದ ಕಿಕ್ಕಿರಿದು ತುಂಬಿದ್ದು, ನೀರು, ಶುದ್ಧ ಗಾಳಿ, ರಸ್ತೆ ಸಂಪರ್ಕ, ಉದ್ಯಾನ, ಮನರಂಜನೆಗಾಗಿ ತಮ್ಮ ಸುತ್ತಲಿನ ಪರಿಸರವನ್ನೇ ಅವಲಂಬಿಸಿದ್ದಾರೆ. ಅವರ ಅಗತ್ಯಗಳನ್ನು ಪೂರೈಸುವ ಕೆರೆ, ಪಾರ್ಕು, ರಸ್ತೆ ಬದಿಯ ಮರ, ತಾರಸಿ ತೋಟ, ಮನೆಯ ಮುಂದಿನ ಕೈತೋಟ, ಓಡಾಡಲು ಬಳಸುವ ವಾಹನ, ಸಾಕುಪ್ರಾಣಿಗಳು, ತಿನ್ನುವ ಆಹಾರ, ವಾಸಿಸುವ ಮನೆ, ಅದರ ಸುತ್ತಲಿನ ಬೀದಿ, ರಸ್ತೆ, ಸುತ್ತಲಿನ ಗ್ರಾಮಗಳು, ಹೊರವಲಯದ ಕಾಡು, ಹಕ್ಕಿ, ಕ್ರಿಮಿಕೀಟ, ಪ್ರಾಣಿ- ಪಕ್ಷಿಗಳದ್ದೇ ಒಂದು ಪರಿಸರಜಾಲ ಸೃಷ್ಟಿಯಾಗಿರುತ್ತದೆ. ನಗರಗಳ ಬೃಹತ್ ಹಸಿರು ಉದ್ಯಾನಗಳು, ಕೃಷಿ- ತೋಟಗಾರಿಕೆ ಕಾಲೇಜುಗಳ ಸಾವಿರಾರು ಹೆಕ್ಟೇರ್‌ಗಳ ಹಸಿರು, ವನ್ಯಜೀವಿ ಸಂರಕ್ಷಣೆಗೆಂದು ನಗರಕ್ಕಂಟಿಕೊಂಡ ಕಾಡುಗಳಲ್ಲಿ ಸ್ಥಾಪಿಸಲಾದ ರಾಷ್ಟ್ರೀಯ ಉದ್ಯಾನಗಳು ಆಮ್ಲಜನಕದ ಟ್ಯಾಂಕ್‍ಗಳಂತಿದ್ದು, ವಾಹನ, ಕಾರ್ಖಾನೆ, ಜನ ಎಬ್ಬಿಸುವ ಮಸಿ, ದೂಳನ್ನು ಹೀರಿಕೊಂಡು, ಉಸಿರಾಡುವ ಗಾಳಿಯ ವಿಷವನ್ನು ದೊಡ್ಡ ಮಟ್ಟದಲ್ಲಿ ಶುದ್ಧೀಕರಿಸುತ್ತ ಜನ– ಜಾನುವಾರುಗಳ ಆರೋಗ್ಯ ಕಾಪಾಡುತ್ತಿವೆ. ಕಾಡಿನ ಪ್ರಾಣಿಗಳ ರಕ್ಷಣೆ, ಕಾಡಿನ ಜೀವಿವೈವಿಧ್ಯ ಮತ್ತು ಅವುಗಳ ಪ್ರಾಮುಖ್ಯದ ಪ್ರಾಥಮಿಕ ಪಾಠ ಹೇಳಿಕೊಡುತ್ತವೆ.

ಹಸಿರನ್ನು ನುಂಗುವ ಕೆಲಸ ದೇಶದಾದ್ಯಂತ ಅವ್ಯಾಹತವಾಗಿ ನಡೆಯುತ್ತಿದೆ. ಕೇಂದ್ರ ಪರಿಸರ ಸಚಿವಾಲಯವು ಎರಡು ವರ್ಷಗಳ ಹಿಂದೆ ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯನ್ನು 268.4 ಚದರ ಕಿಲೊಮೀಟರ್‌ನಿಂದ 168.4 ಚದರ ಕಿಲೊಮೀಟರ್‌ಗೆ ಇಳಿಸುವ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಕೆಲವು ಪರಿಸರ ಸಂಘಟನೆಗಳು ಕೋರ್ಟ್‌ ಮೆಟ್ಟಿಲೇರಿವೆ. 5 ಚದರ ಕಿ.ಮೀ. ವ್ಯಾಪ್ತಿಯ ಚೆನ್ನೈನ ಗಿಂಡಿ ರಾಷ್ಟ್ರೀಯ ಉದ್ಯಾನವು ಕೃಷ್ಣಮೃಗ, ಚುಕ್ಕೆ ಜಿಂಕೆ, ವಿವಿಧ ಜಾತಿಯ ಪಕ್ಷಿ, ಚಿಟ್ಟೆಗಳು, ಸಾವಿರಾರು ಹಾವು, ಕೀಟ, ಜೇಡಗಳ ತಾಣವಾಗಿ ವರ್ಷಕ್ಕೆ 7 ಲಕ್ಷ ಜನರನ್ನು ಆಕರ್ಷಿಸುತ್ತಿತ್ತು. ಈಗ ಅದರ ವ್ಯಾಪ್ತಿ 2.7 ಚದರ ಕಿ.ಮೀ.ಗೆ ಇಳಿದಿದೆ.

ಅಡ್ಯಾರ್ ನದಿಯ 42 ಕಿ.ಮೀ. ಉದ್ದದ ದಂಡೆಯನ್ನು ಪುನರ್‌ನಿರ್ಮಿಸುವ ಕಾರ್ಯಕ್ಕೆ ಕೈಹಾಕಿರುವ ಗ್ರೇಟರ್ ಚೆನ್ನೈ ಕಾರ್ಪೊರೇಷನ್, ನದಿ ದಂಡೆಯಲ್ಲೇ ಇರುವ ಕೊಟ್ಟೂರಪುರಂ ಟ್ರೀ ಪಾರ್ಕ್‌ನ ಸಾವಿರಾರು ಮರಗಳನ್ನು ಕಡಿದುಹಾಕಿದೆ. ಸುಪ್ರೀಂ ಕೋರ್ಟ್‌ನ ತಡೆಯಾಜ್ಞೆ ಬರುವ ಮುನ್ನವೇ ಸ್ಥಳೀಯರ ವಿರೋಧವನ್ನು ಲೆಕ್ಕಿಸದೆ ರಾತ್ರೋರಾತ್ರಿ ಮುಂಬೈನ ಮೆಟ್ರೊ ರೈಲಿನ ಶೆಡ್ ನಿರ್ಮಾಣಕ್ಕಾಗಿ ಆರೇ ಮಿಲ್ಕ್ ಕಾಲೊನಿಯ ಅರಣ್ಯ ಪ್ರದೇಶದಲ್ಲಿ ಸಾವಿರಾರು ಮರಗಳಿಗೆ ಕೊಡಲಿ ಹಾಕಿದ ಸರ್ಕಾರ ಮತ್ತು ರೈಲು ನಿಗಮವು ಕಡಿದ ಮರಗಳ ಸ್ಥಳಾಂತರದ ನಾಟಕವನ್ನಾಡಿ, ಅದು ಯಶಸ್ವಿಯಾಗದೆ ಎಲ್ಲರಿಂದಲೂ ಛೀಮಾರಿ ಹಾಕಿಸಿಕೊಂಡವು. 50 ವರ್ಷಗಳ ಹಿಂದೆ ಮುಂಬೈನಲ್ಲಿ ಫಿಲ್ಮ್ ಸಿಟಿ ನಿರ್ಮಾಣಕ್ಕಾಗಿ 200 ಎಕರೆ ಕಾಡನ್ನು ಕಡಿಯಲಾಗಿತ್ತು.

ಸಮೂಹ ಮಾಧ್ಯಮಗಳು ಮರ ಕಡಿಯುವುದರ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತವೆ. ಬೆಂಗಳೂರಿನ ಕಬ್ಬನ್ ಪಾರ್ಕ್, ಲಾಲ್‌ಬಾಗ್, ಕೃಷಿ ವಿಶ್ವವಿದ್ಯಾಲಯ, ಭಾರತೀಯ ವಿಜ್ಞಾನ ಸಂಸ್ಥೆ, ಹೆಸರಘಟ್ಟ ಹುಲ್ಲುಗಾವಲು, ಕೆರೆಗಳು ಇಲ್ಲೆಲ್ಲಾ 200ಕ್ಕೂ ಹೆಚ್ಚು ಪಕ್ಷಿ ಪ್ರಭೇದ, ನೂರಕ್ಕೂ ಹೆಚ್ಚು ಜಾತಿಯ ಮರಗಳು, 150ಕ್ಕೂ ಹೆಚ್ಚು ಜಾತಿಯ ನೀರ ಹಕ್ಕಿಗಳು, ದಕ್ಕಿಣ ಭಾರತ ಮತ್ತು ಶ್ರೀಲಂಕಾಕ್ಕೆ ಮಾತ್ರ ಸೀಮಿತವಾದ ಕಾಡುಪಾಪ, ನೂರಾರು ಬಗೆಯ ಚಿಟ್ಟೆಗಳಿಗೆ ಸದೃಢ ಆವಾಸ ಕಲ್ಪಿಸಿವೆ. ರಸ್ತೆ ಬದಿಯ ಮರಗಳು ವಾತಾವರಣದ ಉಷ್ಣತೆಯನ್ನು 5.6 ಡಿಗ್ರಿ ಸೆಲ್ಸಿಯಸ್‌ವರೆಗೆ ಕಡಿಮೆ ಮಾಡುತ್ತಿವೆ ಮತ್ತು ನೆಲದ ಮೇಲ್ಮೈ ಉಷ್ಣತೆಯನ್ನು 27.5 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಗೊಳಿಸುತ್ತಿವೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ.

60 ವರ್ಷಗಳ ಹಿಂದೆ ಬೆಂಗಳೂರಿನ ಕೀಟ ತಜ್ಞರು ಪರಾವಲಂಬಿ ಕಣಜವನ್ನು ಪತ್ತೆ ಮಾಡಿದ್ದರು. ಅದೇ ವೇಳೆಗೆ ಅಮೆರಿಕದ ಟೆಕ್ಸಾಸ್ ಪ್ರಾಂತ್ಯದಲ್ಲಿ ಕಂಡುಬಂದ ನುಸಿಯೊಂದು ಅಲ್ಲಿನ ಹುಲ್ಲುಗಾವಲು ಮತ್ತು ದನಗಳಿಗೆ ಪ್ರಾಣಾಂತಿಕವಾಗಿ ಪರಿಣಮಿಸಿತ್ತು. ಇಲ್ಲಿ ಪತ್ತೆಯಾದ ಕಣಜವನ್ನು ಅಲ್ಲಿಗೆ ಕಳಿಸಿದಾಗ ನುಸಿ ನಿಯಂತ್ರಣಕ್ಕೆ ಬಂತು. ಹೆಣ್ಣೂರು ಪ್ರದೇಶದ ಕಾಡುಪಾಪಗಳು ರಸ್ತೆ ಬದಿಯ ಮರಗಳನ್ನು ಬಳಸಿಕೊಂಡು ಎಂಟು ಕಿಲೊಮೀಟರ್ ದೂರದ ಭಾರತೀಯ ವಿಜ್ಞಾನ ಸಂಸ್ಥೆಯ ಆವರಣಕ್ಕೆ ಬರುತ್ತಿದ್ದವು. ಮರಗಳು ಇಲ್ಲದ್ದರಿಂದ ಕಾಡುಪಾಪಗಳ ಆವಾಸ ತುಂಡಾಗಿದೆ.

ಮಾತೆತ್ತಿದರೆ ನಮ್ಮ ನಗರಗಳ ಜನಸಂಖ್ಯೆ ಹೆಚ್ಚು, ಅವರು ಬಳಸುವ ವಾಹನಗಳ ದಟ್ಟಣೆ ವಿಪರೀತವಾದ್ದ ರಿಂದ ರಸ್ತೆ ವಿಸ್ತರಣೆ, ಅಂಡರ್‌ಪಾಸ್ ಮತ್ತು ಫ್ಲೈಓವರ್ ನಿರ್ಮಾಣ ಅನಿವಾರ್ಯ ಎನ್ನುವುದು ನಗರಾಭಿವೃದ್ಧಿ ಅಧಿಕಾರಿಗಳ ವಾದ. ನಗರದ ಹಸಿರಿನ ಜೊತೆಗೆ ಜೀವ ವೈವಿಧ್ಯವನ್ನು ಕಾಪಾಡಿಕೊಂಡಿರುವ ಸಿಂಗಪುರ, ಕೇಪ್‌ಟೌನ್, ಗ್ರೋಗ್ರೀನ್ ಮತ್ತು ಸ್ಪಾಂಜ್ ಸಿಟಿ ಯೋಜನೆ ಹಮ್ಮಿಕೊಂಡಿರುವ ಚೀನಾದ ವುಹಾನ್, ಗ್ರೀನ್ ಸಿಟಿ ಪ್ರಶಸ್ತಿ ಪಡೆದಿರುವ ಹೈದರಾಬಾದ್, ಯುರೋಪಿನ ಮ್ಯಾಂಚೆಸ್ಟರ್, ಅಮೆರಿಕದ ವಾಷಿಂಗ್ಟನ್ ಡಿ.ಸಿ ನಮ್ಮ ಸರ್ಕಾರಗಳಿಗೆ ನೆನಪಾಗುವುದೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT