ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ಗೃಹ ಸಾಲ: 5 ತಪ್ಪು ಮಾಡಬೇಡಿ

Last Updated 12 ಮಾರ್ಚ್ 2023, 19:05 IST
ಅಕ್ಷರ ಗಾತ್ರ

ಸ್ವಂತದ್ದೊಂದು ಮನೆ ಎಲ್ಲರ ಕನಸು. ಉಳಿತಾಯ ಮಾಡಿ ಮನೆ ಖರೀದಿಸುವುದು ಕಷ್ಟವಾಗುವುದರಿಂದ ಹೆಚ್ಚಿನವರು ಗೃಹಸಾಲ ಪಡೆಯುತ್ತಾರೆ. ಮನೆ ಸಾಲಕ್ಕೆ ಮೊರೆಹೋಗುವಾಗ ಆತುರಕ್ಕೆ ಬಿದ್ದು ಕೆಲವು ತಪ್ಪುಗಳನ್ನು ಮಾಡುತ್ತಾರೆ. ಗೃಹಸಾಲ ಪಡೆಯುವಾಗ ಗಮನಿಸಲೇಬೇಕಾದ ಕೆಲವು ಅಂಶಗಳು ಇಲ್ಲಿವೆ.

1. ಹಲವು ಬ್ಯಾಂಕ್‌ಗಳಲ್ಲಿ ಅರ್ಜಿ ಸಲ್ಲಿಸಬೇಡಿ: ರವಿ ಕಳೆದ 10 ವರ್ಷಗಳಿಂದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಈಗ ಅವರು ಉತ್ತಮ ಉದ್ಯೋಗದಲ್ಲಿದ್ದು ಮನೆ ಖರೀದಿಸುವ ತೀರ್ಮಾನಕ್ಕೆ ಬಂದಿದ್ದಾರೆ. ಅದಕ್ಕಾಗಿ ರವಿ ‘ಎ’ ಎಂಬ ಬ್ಯಾಂಕಿಗೆ ಸೂಕ್ತ ದಾಖಲೆ ಒದಗಿಸಿ ಗೃಹಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಎಲ್ಲ ದಾಖಲೆಗಳನ್ನು ನೀಡಿದ ಬಳಿಕವೂ ಸಾಲ ಮಂಜೂರಾತಿ ವಿಳಂಬವಾದಾಗ ‘ಬ’ ಬ್ಯಾಂಕ್‌ನಲ್ಲಿ ಸಾಲಕ್ಕೆ ಅರ್ಜಿ ಹಾಕಿದರು. ಅಲ್ಲೂ ಪ್ರಕ್ರಿಯೆಗಳು ತಡವಾದಾಗ, ‘ಕ’ ಬ್ಯಾಂಕ್‌ ಮೊರೆಹೋದರು. ಆದರೆ, ಆ ಬ್ಯಾಂಕ್‌ನಿಂದಲೂ ಪ್ರತಿಕ್ರಿಯೆ ಸಿಗಲಿಲ್ಲ.

ಅನೇಕರು ಗೃಹಸಾಲಕ್ಕೆ ಬೇರೆ ಬೇರೆ ಬ್ಯಾಂಕ್‌ಗಳಲ್ಲಿ ಮೇಲಿಂದ ಮೇಲೆ ಅರ್ಜಿ ಸಲ್ಲಿಸಿ ಸಂಕಷ್ಟಕ್ಕೆ ಸಿಲುಕುತ್ತಾರೆ. ಸಾಲಕ್ಕಾಗಿ ಹೆಚ್ಚೆಚ್ಚು ಅರ್ಜಿಗಳನ್ನು ಸಲ್ಲಿಸಿದಾಗ ಕ್ರೆಡಿಟ್ ಸ್ಕೋರ್ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಸಾಲಕ್ಕಾಗಿ ಬ್ಯಾಂಕ್ ಅರ್ಜಿ ಸಲ್ಲಿಸಿದಾಗ, ಸಾಲ ಮಂಜೂರಾತಿ ವಿಳಂಬವಾದರೆ ಯಾವ ಕಾರಣಕ್ಕೆ ಸಮಸ್ಯೆಯಾಗುತ್ತಿದೆ ಎನ್ನುವುದನ್ನು ತಿಳಿದುಕೊಳ್ಳಿ. ಸಾಧ್ಯವಾದರೆ ಬ್ಯಾಂಕ್‌ನವರು ಕೇಳುವ ದಾಖಲೆಗಳನ್ನು ಒದಗಿಸಿ. ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ, ನಿಮ್ಮ ಆದಾಯಕ್ಕೆ ಎಷ್ಟು ಸಾಲ ಸಿಗಬಹುದು ಎನ್ನುವ ಅಂದಾಜು ಪಡೆದು ಮುಂದುವರಿಯಿರಿ. ಹೀಗೆ ಮಾಡಿದಾಗ ಕ್ರೆಡಿಟ್ ಸ್ಕೋರ್‌ಗೆ ತೊಂದರೆಯಾಗುವುದಿಲ್ಲ.

2. ಬ್ಯಾಂಕ್ ಶುಲ್ಕಗಳ ಬಗ್ಗೆ ಅರಿವಿರಲಿ: ಹಲವರು ಗೃಹ ಸಾಲ ಪಡೆಯುವಾಗ ಬಡ್ಡಿ ದರ ಮಾತ್ರ ಪರಿಗಣಿಸುತ್ತಾರೆ. ಆದರೆ ಬಡ್ಡಿ ದರವಷ್ಟೇ ಮುಖ್ಯವಾಗುವುದಿಲ್ಲ. ಸಾಲ ಪಡೆಯಲು ಎಷ್ಟು ನಿರ್ವಹಣಾ ಶುಲ್ಕ ಕಟ್ಟಬೇಕು, ಅವಧಿಗೆ ಮುನ್ನ ಸಾಲ ಮರುಪಾವತಿಗೆ ಶುಲ್ಕಗಳಿವೆಯೇ, ಕಂತು ತಡವಾಗಿ ಪಾವತಿಸಿದರೆ ದಂಡ ಎಷ್ಟು... ಹೀಗೆ ಎಲ್ಲ ಬಗೆಯ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕು. ಸಾಮಾನ್ಯವಾಗಿ ಸಾಲ ಮಂಜೂರಾತಿ ಶುಲ್ಕ ಶೇ 0.5ರಿಂದ ಶೇ 2ರಷ್ಟಿರುತ್ತದೆ.

ಇದು ಅಷ್ಟು ದೊಡ್ಡ ಮೊತ್ತ ಅನಿಸದೆ ಇರಬಹುದು, ಆದರೆ ದೊಡ್ಡ ಮೊತ್ತದ ಸಾಲ ಪಡೆದಾಗ ಶೇ 0.5ರಿಂದ ಶೇ 2ರಷ್ಟು ಕೂಡ ದುಬಾರಿ ಅನಿಸುತ್ತದೆ. ಉದಾಹರಣೆಗೆ ₹ 50 ಲಕ್ಷ ಸಾಲಕ್ಕೆ ಶೇ 0.5ರಷ್ಟು ಶುಲ್ಕವೆಂದರೆ, ₹ 25 ಸಾವಿರ ಆಗುತ್ತದೆ. ಹಾಗಾಗಿ ಯಾವ ಬ್ಯಾಂಕ್‌ನಲ್ಲಿ ಕಡಿಮೆ ಬಡ್ಡಿ ಮತ್ತು ಕಡಿಮೆ ನಿರ್ವಹಣಾ ಶುಲ್ಕವಿರುತ್ತದೋ ಅದನ್ನೇ ಪರಿಗಣಿಸಿ.

3. ಹೋಲಿಕೆ ಮಾಡಿ ನೋಡಿ: ಗೃಹಸಾಲವು ಅಡಮಾನ ಸಾಲದ ವ್ಯಾಪ್ತಿಗೆ ಬರುವುದರಿಂದ ಬ್ಯಾಂಕ್‌ಗಳು ಸ್ಪರ್ಧಾತ್ಮಕ ಬಡ್ಡಿ ದರಗಳಲ್ಲಿ ಸಾಲ ನೀಡುತ್ತವೆ. ಸಾಲಕ್ಕೆ ಅರ್ಜಿ ಸಲ್ಲಿಸುವ ಮುನ್ನ ಯಾವ ಬ್ಯಾಂಕ್‌ನಲ್ಲಿ ಯಾವೆಲ್ಲ ರೀತಿಯ ಯೋಜನೆಗಳಿವೆ ಎನ್ನುವ ಬಗ್ಗೆ ತಿಳಿಯಿರಿ. ನಂತರದಲ್ಲಿ ಯಾವ ಬ್ಯಾಂಕ್ ಕಡಿಮೆ ಬಡ್ಡಿ ದರ ಮತ್ತು ಕಡಿಮೆ ನಿರ್ವಹಣಾ ಶುಲ್ಕ ಪಡೆಯುತ್ತದೋ ಅದನ್ನೇ ಆಯ್ಕೆ ಮಾಡಿ. ಬಡ್ಡಿ ದರ ಕಡಿಮೆಯಿದ್ದಾಗ ಅನುಕೂಲ ಎಷ್ಟಿರುತ್ತದೆ ಎಂಬುದನ್ನು ಪಟ್ಟಿಯಲ್ಲಿ ವಿವರಿಸಲಾಗಿದೆ.

4. ದಾಖಲೆ ಓದಿ ಸಹಿ ಮಾಡಿ: ಬ್ಯಾಂಕ್ ಸಾಲ ಸಿಕ್ಕಿತು ಎನ್ನುವ ಧಾವಂತದಲ್ಲಿ ಅನೇಕರು ಪೂರ್ವಾಪರ ನೋಡದೆ ಬ್ಯಾಂಕ್ ದಾಖಲೆಗಳ ಮೇಲೆ ಸಹಿ ಹಾಕುತ್ತಾರೆ. ಆದರೆ, ಬ್ಯಾಂಕ್ ದಾಖಲೆಗಳನ್ನು ನಿಧಾನವಾಗಿ ಓದಿ ಅರ್ಥ ಮಾಡಿಕೊಂಡು ಮುಂದುವರಿಯುವುದು ಒಳ್ಳೆಯದು. ಬ್ಯಾಂಕ್ ಅರ್ಜಿಯನ್ನು ಓದುವುದರಿಂದ ನಿರ್ವಹಣಾ ಶುಲ್ಕ ಎಷ್ಟು, ಇಎಂಐ ಕಂತು ಎಷ್ಟು, ಎಷ್ಟು ಬಡ್ಡಿ ಕಟ್ಟಬೇಕು, ಎಷ್ಟು ವರ್ಷಕ್ಕೆ ಸಾಲ ನೀಡಲಾಗಿದೆ ಎಂಬ ಮಾಹಿತಿ ಸಿಗುತ್ತದೆ. ಇದರಿಂದ ಸಂಭಾವ್ಯ ಗೊಂದಲ ತಪ್ಪುತ್ತದೆ.

ಯಾವುದು ಉತ್ತಮ?: ಬ್ಯಾಂಕೇತರ ಹಣಕಾಸು ಸಂಸ್ಥೆಗಳೂ (ಎನ್‌ಬಿಎಫ್‌ಸಿ) ಗೃಹಸಾಲ ಕೊಡುತ್ತವೆ. ಅಲ್ಲಿ ಸಾಲ ಬೇಗ ಸಿಗುವುದಿದೆ. ರಾಷ್ಟ್ರೀಕೃತ ಅಥವಾ ಖಾಸಗಿ ಬ್ಯಾಂಕ್‌ಗಳಲ್ಲಿ ಸಾಲ ಮಂಜೂರಾತಿಗೆ ಇರುವ ಕಠಿಣ ನಿಯಮಗಳು ‘ಎನ್‌ಬಿಎಫ್‌ಸಿ’ಗಳಲ್ಲಿ ಇರುವುದಿಲ್ಲ. ಆದರೆ ಬ್ಯಾಂಕ್‌ಗಳಿಗೆ ಹೋಲಿಸಿದಾಗ ಎನ್‌ಬಿಎಫ್‌ಸಿ ಬಡ್ಡಿ ಜಾಸ್ತಿ ಇರುವ ಸಾಧ್ಯತೆ ಇರುತ್ತದೆ. ಗೃಹ ಸಾಲ ದೀರ್ಘಾವಧಿ ಸಾಲವಾಗಿರುವುದರಿಂದ, ರಾಷ್ಟ್ರೀಕೃತ ಅಥವಾ ಪ್ರಮುಖ ಖಾಸಗಿ ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ಉತ್ತಮವಾಗಬಹುದು.

ಬಡ್ಡಿ ದರ ಹೆಚ್ಚಳದ ಆತಂಕ
ಮಾರ್ಚ್ 10ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಕುಸಿತ ಕಂಡಿವೆ. 59,135 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 1.12ರಷ್ಟು ತಗ್ಗಿದೆ. 17,412 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ, ಶೇ 1.03ರಷ್ಟು ಇಳಿಕೆಯಾಗಿದೆ. ಅಮೆರಿಕದ ಫೆಡರಲ್ ರಿಸರ್ವ್‌ ಬಡ್ಡಿ ದರ ಹೆಚ್ಚಳ ಮಾಡಬಹುದು ಎಂಬ ನಿರೀಕ್ಷೆ, ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡು ಬಂದ ಮಾರಾಟದ ಒತ್ತಡ ಸೇರಿ ಹಲವು ಅಂಶಗಳು ಮಾರುಕಟ್ಟೆ ಕುಸಿತಕ್ಕೆ ಕಾರಣ.

ವಲಯವಾರು ಸೂಚ್ಯಂಕಗಳ ಪೈಕಿ, ನಿಫ್ಟಿ ರಿಯಲ್ ಎಸ್ಟೇಟ್ ಶೇ 3ರಷ್ಟು, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 2.8ರಷ್ಟು ಮತ್ತು ನಿಫ್ಟಿ ಬ್ಯಾಂಕ್ ಶೇ 2ರಷ್ಟು ಕುಸಿದಿವೆ. ನಿಫ್ಟಿ ಎನರ್ಜಿ ಸೂಚ್ಯಂಕ ಶೇ 2ರಷ್ಟು ಮತ್ತು ಅನಿಲ ಹಾಗೂ ತೈಲ ಸೂಚ್ಯಂಕ ಶೇ 1.6ರಷ್ಟು ಕುಸಿದಿವೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,769.68 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,211.97 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.

ನಿಫ್ಟಿಯಲ್ಲಿ ಎನ್‌ಟಿಪಿಸಿ ಶೇ 4.72ರಷ್ಟು, ಬಜಾಜ್ ಆಟೋ ಶೇ 2.41ರಷ್ಟು, ಪವರ್ ಗ್ರಿಡ್ ಶೇ 2ರಷ್ಟು, ಅದಾನಿ ಪೋರ್ಟ್ಸ್ ಶೇ 1.92ರಷ್ಟು ಮತ್ತು ಟಾಟಾ ಮೋಟರ್ಸ್ ಶೇ 1.83ರಷ್ಟು ಜಿಗಿದಿವೆ. ಬಜಾಜ್ ಫೈನಾನ್ಸ್ ಶೇ 3.70ರಷ್ಟು, ಮಹೀಂದ್ರ ಆ್ಯಂಡ್ ಮಹೀಂದ್ರ ಶೇ 3.30ರಷ್ಟು, ಐಸಿಐಸಿಐ ಬ್ಯಾಂಕ್ ಶೇ 2.98ರಷ್ಟು, ಕೋಟಕ್ ಮಹೀಂದ್ರ ಬ್ಯಾಂಕ್ ಶೇ 2.95ರಷ್ಟು ಮತ್ತು ಹಿಂಡಾಲ್ಕೊ ಶೇ 2.70ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ವಿರಾಟ್ ಕೇನ್ ಇಂಡಸ್ಟ್ರೀಸ್, ಮೋಡ್ಯುಲೆಕ್ಸ್ ಕನ್ಸ್‌ಟ್ರಕ್ಷನ್ ಟೆಕ್ನಾಲಜೀಸ್ ಸೇರಿ ಕೆಲ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸುತ್ತಿವೆ. ಜಾಗತಿಕ ವಿದ್ಯಮಾನಗಳ ಜೊತೆಗೆ ದೇಶಿಯ ಬೆಳವಣಿಗೆಗಳು ಷೇರುಪೇಟೆ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT