ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳ ಮಾರುಕಟ್ಟೆ | ವಿಮೆ ಪ್ರೀಮಿಯಂ ಹೊರೆ ಇಳಿಸುವುದು ಹೇಗೆ?

Last Updated 20 ಜೂನ್ 2021, 19:45 IST
ಅಕ್ಷರ ಗಾತ್ರ

ಕೋವಿಡ್ ಸಾಂಕ್ರಾಮಿಕವು ಎಲ್ಲೆಡೆ ತನ್ನ ಕುರೂಪವನ್ನು ಪ್ರದರ್ಶಿಸಿದ ನಂತರದಲ್ಲಿ ಅವಧಿ ವಿಮೆ (ಟರ್ಮ್ ಲೈಫ್ ಇನ್ಶೂರೆನ್ಸ್) ಮತ್ತು ಆರೋಗ್ಯ ವಿಮೆ (ಹೆಲ್ತ್ ಇನ್ಶೂರೆನ್ಸ್) ಮಹತ್ವ ಬಹುತೇಕರಿಗೆ ಅರ್ಥವಾಗುತ್ತಿದೆ. ಕೆಟ್ಟ ಕಾಲದಲ್ಲಿ ವಿಮೆ ಸಹ ಕುಟುಂಬದ ಭವಿಷ್ಯದ ದೃಷ್ಟಿಯಿಂದ ಒಂದು ಒಳ್ಳೆಯ ಹೂಡಿಕೆಯೇ ಎಂಬುದನ್ನು ಪರಿಶೀಲಿಸುವ ಸಂದರ್ಭ ಈಗ ಸೃಷ್ಟಿಯಾಗಿದೆ. ಈ ಹೊತ್ತಿನಲ್ಲಿ ಈ ವಿಮಾ ಯೋಜನೆಗಳ ಪ್ರೀಮಿಯಂ ಮೊತ್ತವನ್ನು ತಗ್ಗಿಸಿಕೊಳ್ಳಲು ನೆರವಾಗುವ ಕೆಲವು ಸಲಹೆಗಳು ಇಲ್ಲಿವೆ.

ಆದಷ್ಟು ಬೇಗ ಅವಧಿ ವಿಮೆ ಖರೀದಿಸಿ: ಅವಧಿ ವಿಮೆ ಖರೀದಿಸುವಾಗ ವ್ಯಕ್ತಿಯ ವಯಸ್ಸು ಬಹಳ ಮುಖ್ಯವಾಗುತ್ತದೆ. ವ್ಯಕ್ತಿಯ ವಯಸ್ಸು ಕಡಿಮೆ ಇದ್ದಷ್ಟೂ ಪ್ರೀಮಿಯಂ ಕಡಿಮೆಯಾಗುತ್ತದೆ. ವ್ಯಕ್ತಿಯ ವಯಸ್ಸು ಹೆಚ್ಚಾದಂತೆ ಪ್ರೀಮಿಯಂ ಮೊತ್ತವೂ ಹೆಚ್ಚಾಗುತ್ತದೆ. ಹಾಗಾಗಿ ಸಾಧ್ಯವಾದಷ್ಟು ಬೇಗ, ಅಂದರೆ ಕೆಲಸಕ್ಕೆ ಸೇರಿದ ತಕ್ಷಣ ಅವಧಿ ವಿಮೆ ಖರೀದಿಸುವುದು ಒಳ್ಳೆಯದು. ವಯಸ್ಸಾದಂತೆಲ್ಲ ಆರೋಗ್ಯ ಸಮಸ್ಯೆಗಳು ಜಾಸ್ತಿ ಎನ್ನುವ ಅಂಶವನ್ನು ವಿಮಾ ಕಂಪನಿಗಳು ಗಣನೆಗೆ ತೆಗೆದುಕೊಳ್ಳುತ್ತವೆ. ಹಾಗಾಗಿ ವಯಸ್ಸಾದಂತೆ ಪ್ರೀಮಿಯಂ ಕೂಡ ತುಟ್ಟಿಯಾಗುತ್ತದೆ.

ಉದಾಹರಣೆಗೆ, ₹ 1 ಕೋಟಿ ಕವರೇಜ್ ಇರುವ ಅವಧಿ ವಿಮೆಯನ್ನುನಿಮ್ಮ 25ನೇ ವಯಸ್ಸಿನಲ್ಲಿ ಖರೀದಿಸಿದರೆ ₹ 7 ಸಾವಿರದಿಂದ ₹ 9 ಸಾವಿರದವರೆಗೆ ವಾರ್ಷಿಕ ಪ್ರೀಮಿಯಂ ಇರುತ್ತದೆ. ನೀವು 40 ವರ್ಷ ವಯಸ್ಸಾದ ಬಳಿಕ ಅವಧಿ ವಿಮೆ ಖರೀದಿಸಿದರೆ ವಾರ್ಷಿಕ ಪ್ರೀಮಿಯಂ ₹ 19 ಸಾವಿರದಿಂದ ₹ 25 ಸಾವಿರ ಆಗುತ್ತದೆ.

ಧೂಮಪಾನ, ಮದ್ಯಪಾನ ಮಾಡಬೇಡಿ: ಧೂಮಪಾನ, ಮದ್ಯಪಾನ ಮಾಡಿದರೆ ಅವಧಿ ವಿಮೆಯ ಪ್ರೀಮಿಯಂ ಮೊತ್ತ ಹೆಚ್ಚಳವಾಗುತ್ತದೆ. ಬೀಡಿ, ಸಿಗರೇಟು, ಸಿಗಾರ್, ಗುಟ್ಕಾ, ನಿಕೋಟಿನ್ ಚ್ಯೂಯಿಂಗ್ ಗಮ್ ಅಭ್ಯಾಸ ಇರುವವರಿಗೆ ಮತ್ತು ಮದ್ಯಪಾನ ಮಾಡುವವರಿಗೆ ವಿಮಾ ಕಂಪನಿಗಳು ಪ್ರೀಮಿಯಂ ಮೊತ್ತವನ್ನು ಹೆಚ್ಚಿಗೆ ನಿಗದಿ ಮಾಡುತ್ತವೆ. ಧೂಮಪಾನ ಮತ್ತು ಮದ್ಯಪಾನ ಮಾಡುವವರಿಗೆ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ, ವಿಮಾ ಕಂಪನಿಗಳು ಇಂಥವರಿಗೆ ಶೇ 20ರಿಂದ ಶೇ 50ರವರೆಗೂ ಹೆಚ್ಚುವರಿ ಪ್ರೀಮಿಯಂ ನಿಗದಿಪಡಿಸುವ ಸಾಧ್ಯತೆ ಇರುತ್ತದೆ.

ಆರೋಗ್ಯ ಕಾಪಾಡಿಕೊಳ್ಳಿ, ಕಡಿಮೆ ಪ್ರೀಮಿಯಂ ಕಟ್ಟಿ: ಇತ್ತೀಚೆಗೆ 31 ವರ್ಷ ವಯಸ್ಸಿನ ನನ್ನ ಸ್ನೇಹಿತರೊಬ್ಬರು ಅವಧಿ ವಿಮೆಗಾಗಿ ಖಾಸಗಿ ಕಂಪನಿಯೊಂದಕ್ಕೆ ಅರ್ಜಿ ಸಲ್ಲಿಸಿದ್ದರು. ಸಕ್ಕರೆ ಕಾಯಿಲೆ ಇರುವ ಕಾರಣ ಅವರಿಗೆ ವಿಮೆ ನಿರಾಕರಿಸಲಾಗಿದೆ. ಹೌದು, ಕೋವಿಡ್ ನಂತರದಲ್ಲಿ ವ್ಯಕ್ತಿಯ ಆರೋಗ್ಯ ಸ್ಥಿತಿಯ ಬಗ್ಗೆ ವಿಮಾ ಕಂಪನಿಗಳು ಹೆಚ್ಚು ಜಾಗರೂಕತೆಯಿಂದ ನಡೆದುಕೊಳ್ಳುತ್ತಿವೆ. ರಕ್ತದ ಒತ್ತಡ, ಸಕ್ಕರೆ ಕಾಯಿಲೆಯಂತಹ ಸಮಸ್ಯೆಗಳು ಇಲ್ಲದಿದ್ದರೆ ವಿಮಾ ಕಂಪನಿಗಳು ಪ್ರೀಮಿಯಂ ಮೊತ್ತ ತಗ್ಗಿಸುತ್ತವೆ. ಆರೋಗ್ಯ ಸಮಸ್ಯೆಗಳಿದ್ದರೆ ಪ್ರೀಮಿಯಂ ದರದಲ್ಲಿ ಶೇ 40ರಿಂದ ಶೇ 60ರವರೆಗೂ ಹೆಚ್ಚಳವಾಗುವ ಸಾಧ್ಯತೆ ಇರುತ್ತದೆ. ಗಂಭೀರ ಆರೋಗ್ಯ ಸಮಸ್ಯೆಗಳಿದ್ದರೆ ವಿಮೆ ಸಿಗದಿರುವ ಸಾಧ್ಯತೆಯೂ
ಇದೆ.

ಅವಿನಾಶ್ ಕೆ.ಟಿ.
ಅವಿನಾಶ್ ಕೆ.ಟಿ.

ಆರೋಗ್ಯ ವಿಮೆ ಕಡೆಗಣಿಸಬೇಡಿ: ‘ನನಗೇನಾಗುತ್ತೆ? ಗಟ್ಟಿಯಾಗಿದ್ದೇನೆ’ ಎಂದು ಭಂಡ ಧೈರ್ಯ ತೋರಿಸುವ ಬದಲು ನಿಮ್ಮ ಮತ್ತು ಕುಟುಂಬದ ಸುರಕ್ಷತೆಗಾಗಿ ಒಂದು ಆರೋಗ್ಯ ವಿಮೆ ಮಾಡಿಸಿಕೊಳ್ಳಿ. ನಿಮಗೆ, ನಿಮ್ಮನ್ನು ನಂಬಿದವರಿಗೆ, ಮಕ್ಕಳಿಗೆ ಆದಷ್ಟು ಬೇಗ ಒಂದು ಫ್ಯಾಮಿಲಿ ಫ್ಲೋಟರ್ ಆರೋಗ್ಯ ವಿಮೆ ಖರೀದಿಸಿ. ವಯಸ್ಸಾದ ತಂದೆ–ತಾಯಿಗೆ ಪ್ರತ್ಯೇಕ ವಿಮೆ ಮಾಡಿಸಿಕೊಳ್ಳಿ. ವಯಸ್ಸು ಚಿಕ್ಕದಿರುವಾಗ ಆರೋಗ್ಯ ವಿಮೆ ಪಡೆದರೆ ಪ್ರೀಮಿಯಂ ಮೊತ್ತ ಕಡಿಮೆ ಇರುತ್ತದೆ.

ಸರಿಹೊಂದುವ ಪ್ರೀಮಿಯಂ ಆಯ್ಕೆ ಮಾಡಿಕೊಳ್ಳಿ: ಅವಧಿ ವಿಮೆ ಪಡೆಯುವಾಗ ವಾರ್ಷಿಕ, ಅರೆ ವಾರ್ಷಿಕ ಮತ್ತು ತಿಂಗಳ ಪ್ರೀಮಿಯಂ ಕಟ್ಟಲು ಅವಕಾಶವಿರುತ್ತದೆ. ನಿಮಗೆ ಯಾವುದು ಸರಿಹೊಂದುತ್ತದೆಯೋ ಅದನ್ನು ಆಯ್ಕೆ ಮಾಡಿಕೊಳ್ಳಿ. ಕೆಲವು ಕಂಪನಿಗಳು ಒಂದೇ ಬಾರಿಗೆ ಪ್ರೀಮಿಯಂ ಪಾವತಿಸಲು ಹೇಳುತ್ತವೆ. ಮುಂದಿನ ಹತ್ತಿಪ್ಪತ್ತು ವರ್ಷಗಳ ಪ್ರೀಮಿಯಂ ಅನ್ನು ಒಂದೇ ಸಲಕ್ಕೆ ಕಟ್ಟುವ ಅವಕಾಶ ಮಾಡಿಕೊಡುತ್ತವೆ. ಅದರೆ ಇದರಿಂದ ಗ್ರಾಹಕರಿಗೆ ಅನುಕೂಲವಾಗುವುದಿಲ್ಲ.

ನಾಲ್ಕು ವಾರಗಳ ಗಳಿಕೆಯ ಓಟಕ್ಕೆ ಬ್ರೇಕ್
ಸತತ ನಾಲ್ಕು ವಾರಗಳ ಗಳಿಕೆಯ ಓಟವನ್ನು ಷೇರುಪೇಟೆ ಸೂಚ್ಯಂಕಗಳು ನಿಲ್ಲಿಸಿವೆ. ಮಾರುಕಟ್ಟೆಯು ಅನಿಶ್ಚಿತತೆಯ ಹಾದಿ ತುಳಿದಿದೆ. ಜೂನ್ 18ಕ್ಕೆ ಕೊನೆಯಾದ ವಾರದಲ್ಲಿ 52,344 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ಶೇ 0.24ರಷ್ಟು ಕುಸಿದಿದೆ. 15,344 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ವಾರದ ಅವಧಿಯಲ್ಲಿ ಶೇ 0.73ರಷ್ಟು ತಗ್ಗಿದೆ. ಬಿಎಸ್ಇ ಮಿಡ್ ಕ್ಯಾಪ್ ಶೇ 3ರಷ್ಟು ಇಳಿಕೆಯಾಗಿದ್ದರೆ ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 1.8ರಷ್ಟು ಕುಸಿದಿದೆ. ಜಾಗತಿಕ ಮಾರುಕಟ್ಟೆಗಳಲ್ಲಿ ಕಂಡುಬಂದ ನಕಾರಾತ್ಮಕತೆಯು ಸೂಚ್ಯಂಕಗಳಿಗೆ ಹೊಡೆತ ಕೊಟ್ಟಿದೆ.

ಆದರೆ ಉತ್ತಮ ಮುಂಗಾರು ಮತ್ತು ಕೋವಿಡ್ ಲಸಿಕೆ ಕಾರ್ಯದಲ್ಲಿನ ವೇಗ ಹೆಚ್ಚಿರುವುದು ಮಾರುಕಟ್ಟೆಯನ್ನು ಒಂದು ಹಂತಕ್ಕೆ ಕುಸಿಯದಂತೆ ನಿಲ್ಲಿಸುವಲ್ಲಿ ಸಹಾಯ ಮಾಡಿವೆ. ವಿಶೇಷವೆಂದರೆ ಈ ಎಲ್ಲ ಏರಿಳಿತಗಳ ಮಧ್ಯೆಯೂ ಜೂನ್ 15ರಂದು ಸೆನ್ಸೆಕ್ಸ್ ಮತ್ತು ನಿಫ್ಟಿ ಕ್ರಮವಾಗಿ 52,869 ಮತ್ತು 15,901 ಅಂಶಗಳನ್ನು ಮುಟ್ಟಿ ಸಾರ್ವಕಾಲಿಕ ದಾಖಲೆ ಬರೆದಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಲೋಹ ವಲಯ ಶೇ 6.6ರಷ್ಟು ಕುಸಿತ ಕಂಡಿದೆ. ರಿಯಲ್ ಎಸ್ಟೇಟ್ ವಲಯ ಶೇ 4ರಷ್ಟು ತಗ್ಗಿದೆ, ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 3.8ರಷ್ಟು ಇಳಿಕೆಯಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಕಳೆದ ವಾರ ₹ 1,060.73 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 487.79 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಹಿಂದುಸ್ಥಾನ್ ಯುನಿಲಿವರ್ ಶೇ 4ರಷ್ಟು, ಎಚ್‌ಡಿಎಫ್‌ಸಿ ಲೈಫ್ ಶೇ 4ರಷ್ಟು, ಇನ್ಫೊಸಿಸ್ ಶೇ 3.5ರಷ್ಟು, ಟಾಟಾ ಕನ್ಸೂಮರ್ ಶೇ 3.5ರಷ್ಟು, ಏಷ್ಯನ್ ಪೇಂಟ್ಸ್ ಶೇ 3ರಷ್ಟು ಜಿಗಿದಿವೆ. ಅದಾನಿ ಪೋರ್ಟ್ಸ್ ಶೇ 17ರಷ್ಟು, ಕೋಲ್ ಇಂಡಿಯಾ ಶೇ 10ರಷ್ಟು, ಜೆಎಸ್‌ಡಬ್ಲ್ಯೂ ಸ್ಟೀಲ್ ಶೇ 8ರಷ್ಟು, ಪವರ್ ಗ್ರಿಡ್ ಶೇ 6ರಷ್ಟು ಮತ್ತು ಹಿಂಡಾಲ್ಕೊ ಶೇ 5ರಷ್ಟು ಕುಸಿದಿವೆ.

ಮುನ್ನೋಟ: ಈ ವಾರ ಗೋಕುಲ್, ಡೆಲ್ಟಾ, ಎಚ್‌ಬಿಎಲ್ ಪವರ್, ಎಚ್‌ಬಿ ಸ್ಟಾಕ್, ಆಯಿಲ್ ಇಂಡಿಯಾ ಲಿಮಿಟೆಡ್, ಲ್ಯಾಕೋಸ್ಟಿ, ರಿಕೊ ಆಟೊ, ಬಿಇಎಲ್, ಡೋನಿಯರ್, ಎನ್‌ಎಂಡಿಸಿ, ಶೋಭಾ, ವಾಸ್ವಾನಿ, ಅಪೋಲೊ ಹಾಸ್ಪಿಟಲ್ಸ್, ಅಶೋಕ್ ಲೇಲ್ಯಾಂಡ್ ಸೇರಿ ಪ್ರಮುಖ ಕಂಪನಿಗಳು ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಜೂನ್ 23ರಿಂದ 25ರವರೆಗೆ ಇಂಡಿಯಾ ಪೆಸ್ಟಿಸೈಡ್ಸ್‌ನ ಐಪಿಒ ಇದೆ. ಸದ್ಯದ ಪರಿಸ್ಥಿತಿಯಲ್ಲಿ ಷೇರು ಪೇಟೆಯಲ್ಲಿ ಅನಿಶ್ಚಿತತೆ ಮುಂದುವರಿಯಲಿದೆ. ಉತ್ತಮ ಆರ್ಥಿಕ ಸ್ಥಿತಿ ಮತ್ತು ಭವಿಷ್ಯದ ಬಗ್ಗೆ ಸ್ಪಷ್ಟ ನೋಟ ಹೊಂದಿರುವ ಕಂಪನಿಗಳಲ್ಲಿ ಹೂಡಿಕೆ ಮಾಡುವುದನ್ನು ಮಾತ್ರ ಸದ್ಯ ಪರಿಗಣಿಸಬಹುದು.

(ಲೇಖಕ ಇಂಡಿಯನ್ ಮನಿ ಡಾಟ್ ಕಾಂನ ಹಣಕಾಸು ಸಲಹಾ ವಿಭಾಗದ ಮುಖ್ಯಸ್ಥ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT