ಶನಿವಾರ, ಸೆಪ್ಟೆಂಬರ್ 19, 2020
22 °C

ಮಹಾಭಾರತ ಕಲಿಸುವ ಹೂಡಿಕೆ ಪಾಠ

ನರಸಿಂಹ ಬಿ. Updated:

ಅಕ್ಷರ ಗಾತ್ರ : | |

ಭಾರತದ ಧಾರ್ಮಿಕ, ತಾತ್ವಿಕ ಹಾಗೂ ಪೌರಾಣಿಕ ಮಹಾಕಾವ್ಯಗಳ ಪೈಕಿ ಮಹಾಭಾರತಕ್ಕೆ ಪ್ರಮುಖ ಸ್ಥಾನ. ಚಿಂತನೆಗೆ ಒಳಪಡಿಸಿದಷ್ಟೂ ಈ ಮಹಾಕಾವ್ಯ ಹೊಸ ಒಳನೋಟಗಳನ್ನು ತೆರೆದಿಡುತ್ತದೆ. ನಿತ್ಯದ ಬದುಕಿನ ಹಲವು ಸಂದರ್ಭಗಳಲ್ಲಿ ಮಹಾಭಾರತದ ಪ್ರಸಂಗಗಳು ಚರ್ಚೆಯ ಮುನ್ನೆಲೆಗೆ ಬರುತ್ತವೆ. ವಿಶೇಷವೆಂದರೆ ಈ ಮಹಾಕಾವ್ಯದ ಹಲವು ಸನ್ನಿವೇಶಗಳು ಹೂಡಿಕೆಯ ನೀತಿ ಪಾಠವನ್ನೂ ಪರೋಕ್ಷವಾಗಿ ಹೇಳುತ್ತವೆ.

ಏಕಲವ್ಯ ಬಿಲ್ಲು ವಿದ್ಯೆ ಸಿದ್ಧಿಸಿಕೊಳ್ಳುವ ಸಲುವಾಗಿ ಗುರು ದ್ರೋಣಾಚಾರ್ಯರ ಬಳಿಗೆ ಬರುತ್ತಾನೆ. ಆದರೆ, ತಮ್ಮ ಮೆಚ್ಚಿನ ಶಿಷ್ಯ ಅರ್ಜುನನನ್ನು ಜಗತ್ತಿನ ಶ್ರೇಷ್ಠ ಬಿಲ್ಲುಗಾರನನ್ನಾಗಿ ಮಾಡುವ ಪಣ ತೊಟ್ಟಿದ್ದ ದ್ರೋಣಾಚಾರ್ಯರು, ಕ್ಷತ್ರಿಯರಲ್ಲದೆ ಮತ್ಯಾರಿಗೂ ಬಿಲ್ಲು ವಿದ್ಯೆ ಹೇಳಿಕೊಡುವುದಿಲ್ಲ ಎಂದು ಹೇಳಿ ಏಕಲವ್ಯನನ್ನು ಶಿಷ್ಯನಾಗಿ ಸ್ವೀಕರಿಸಲು ನಿರಾಕರಿಸುತ್ತಾರೆ. ಧೃತಿಗೆಡದ ಏಕಲವ್ಯ, ದಿನವೂ ದೂರದಲ್ಲಿ ನಿಂತು ದ್ರೋಣಾಚಾರ್ಯರು ಕೌರವರಿಗೆ, ಪಾಂಡವರಿಗೆ ಹೇಳಿಕೊಡುತ್ತಿದ್ದ ವಿದ್ಯೆಯನ್ನು ಮನನ ಮಾಡಿಕೊಂಡು, ಕಾಡಿಗೆ ಮರಳಿ ದ್ರೋಣರ ಮಣ್ಣಿನ ಮೂರ್ತಿಯನ್ನು ಮಾಡಿ ಅವರನ್ನೇ ತನ್ನ ಮಾನಸ ಗುರುವೆಂದು ನಂಬಿ ಬಿಲ್ಲು ವಿದ್ಯೆ ಯನ್ನು ಕರಗತ ಮಾಡಿಕೊಳ್ಳುತ್ತಾನೆ. ನಂತರ ತನ್ನ ಇಚ್ಛಾಶಕ್ತಿಯ ಬಲದಿಂದಲೇ ಏಕಲವ್ಯನು ಅರ್ಜುನನ ಸರಿ ಸಮಾನವಾಗಿ ಬಿಲ್ಲು ವಿದ್ಯೆ ಕೌಶಲ್ಯವನ್ನು ಹೊಂದುತ್ತಾನೆ.

ಹೂಡಿಕೆಗೆ ಬೇಕು ಜ್ಞಾನ ಸಂಪತ್ತು: ಕಲಿಕೆಗೆ ಪ್ರಯತ್ನ, ಶ್ರದ್ಧೆ ಬಹಳ ಮುಖ್ಯ ಎನ್ನುವುದು ಇಲ್ಲಿನ ನೀತಿಪಾಠ. ಹಣ ಹೂಡಿಕೆ ಮಾಡುವ ವಿಚಾರದಲ್ಲೂ ಅಷ್ಟೇ, ಅರಿವೇ ಗುರು. ಅರೆ ಬರೆ ಮಾಹಿತಿ ತಿಳಿದುಕೊಂಡು ಹೂಡಿಕೆ ನಿರ್ಧಾರಕ್ಕೆ ಬಂದರೆ ಸಂಕಷ್ಟ ಕಟ್ಟಿಟ್ಟ ಬುತ್ತಿ. ಬಹುತೇಕರಲ್ಲಿ ಹೂಡಿಕೆ ಉತ್ಪನ್ನಗಳ ಬಗ್ಗೆ ಇರುವ ಮಾಹಿತಿ ಕೊರತೆ ಅಥವಾ ಅಜ್ಞಾನವೇ ಸಂಪತ್ತು ಗಳಿಕೆಗೆ ಅಡ್ಡಿಯಾಗಿದೆ. ಉಳಿತಾಯ, ಹೂಡಿಕೆ, ಗಳಿಕೆ, ಸಾಲ ಪಡೆದುಕೊಳ್ಳುವಿಕೆಯ ಸರಿಯಾದ ಕ್ರಮಗಳ ಬಗ್ಗೆ ಅರಿತುಕೊಂಡರೆ ಅದೇ ಹೂಡಿಕೆದಾರರ ಪಾಲಿನ ದಿವ್ಯಾಸ್ತ್ರವಾಗಿರಲಿದೆ.

ಗುರಿ ಆಧಾರಿತ ಯೋಜನೆ ಮತ್ತು ಕಲಿಕೆ: ಶಿಷ್ಯರ ವಿದ್ಯೆಯನ್ನು ಪರೀಕ್ಷಿಸಲು ದ್ರೋಣಾಚಾರ್ಯರು ಮಾವಿನ ಮರದ ಮೇಲೊಂದು ಗಿಳಿಯ ಆಕೃತಿಯನ್ನಿಟ್ಟು ಧರ್ಮರಾಯನನ್ನು ಕರೆದು, ‘ಆ ಪಕ್ಷಿಗೆ ಗುರಿ ಇಡು’ ಎಂದರು. ಗುರಿ ಹಿಡಿದ ಧರ್ಮರಾಯನನ್ನು ದ್ರೋಣರು ‘ಅಲ್ಲಿ ನಿನಗೇನುಕಾಣಿಸುತ್ತಿದೆ ಹೇಳು’ ಎಂದರು. ‘ಮಾವಿನ ಮರ, ಮರದ ಕೊಂಬೆ, ಬಣ್ಣದ ಗಿಳಿ ಎಲ್ಲವೂ ಕಾಣುತ್ತಿದೆ ಗುರುವರ್ಯಾ" ಎಂದನು ಯುದಿಷ್ಟರ. ಅನಂತರ ದುರ್ಯೋಧನನನ್ನು ಕರೆದು ಅದೇ ಪ್ರಶ್ನೆಯನ್ನು ಕೇಳಿದರು. ಆತನೂ ಮರ, ಕೊಂಬೆ, ಗಿಳಿ ಎಲ್ಲಾ ಸ್ಪಷ್ಟವಾಗಿ ಕಾಣುತ್ತಿವೆ ಎಂದನು. ದುಶ್ಯಾಸನ, ಭೀಮ, ನಕುಲ, ಸಹದೇವ, ಕೌರವಾದಿಗಳೆಲ್ಲರೂ ಅದೇ ಉತ್ತರವನ್ನು ಹೇಳಿದರು. ಕೊನೆಗೆ ಅರ್ಜುನನನ್ನು ಕರೆದು ಅದೇ ಪ್ರಶ್ನೆ ಕೇಳಿದರು. ಅರ್ಜುನ– ‘ನನಗೆ ಗಿಳಿಯ ಕಣ್ಣೊಂದು ಬಿಟ್ಟು ಬೇರೇನೂ ಕಾಣುತ್ತಿಲ್ಲ ಗುರುವರ್ಯಾ’ ಎಂದನು. ದ್ರೋಣರು ಅರ್ಜುನನ ಬೆನ್ನು ತಟ್ಟಿದರು.

ಈ ಸನ್ನಿವೇಶದ ನೀತಿಪಾಠ ಹೂಡಿಕೆಗೂ ಅನ್ವಯಿಸುತ್ತದೆ. ಹೂಡಿಕೆ ಮಾಡುವಾಗ ನಮಗೆ ಸ್ಪಷ್ಟವಾದ ಗುರಿ ಇರಬೇಕು. ಮಾರುಕಟ್ಟೆಯ ಏರಿಳಿತಗಳನ್ನು ಮೀರಿ ಹಣವನ್ನು ಗಳಿಸಿ ಆರ್ಥಿಕ ಗುರಿಗಳನ್ನು ಮುಟ್ಟುವ ಬಗ್ಗೆ ಅರಿತುಕೊಳ್ಳಬೇಕು. ಷೇರುಪೇಟೆಯಲ್ಲಾಗುವ ತಾತ್ಕಾಲಿಕ ತಲ್ಲಣಗಳಿಂದ ವಿಚಲಿತರಾಗಬಾರದು. ಅಗತ್ಯವೆನಿಸಿದಾಗ ಹಣಕಾಸು ತಜ್ಞರ ನೆರವು ಪಡೆಯಬೇಕು.

ಅರ್ಥಮಾಡಿಕೊಳ್ಳದೆ ಹೂಡಿಕೆ ಮಾಡಬೇಡಿ: ಮಹಾಭಾರತದಲ್ಲಿ ಅಭಿಮನ್ಯು ಚಕ್ರವ್ಯೂಹ ಭೇದಿಸಿದ. ಆದರೆ ವಂಚನೆಗೆ ಇಳಗಾಗಿ ಅದರಿಂದ ಹೊರಬರಲು ಗೊತ್ತಾಗದೆ ವೀರಮರಣ ಹೊಂದಿದ. ಹೂಡಿಕೆ ವಿಚಾರದಲ್ಲೂ ಅಷ್ಟೇ. ಯಾರೋ ಹೇಳಿದರು ಎಂದು ಪೂರ್ವಾಪರ ಯೋಚಿಸದೆ ಹಣ ತೊಡಗಿಸಿದರೆ ಮೋಸದ ಚಕ್ರವ್ಯೂಹದೊಳಗೆ ಸಿಲುಕಿ ನೀವು ಪರದಾಡುವ ಸ್ಥಿತಿ ಬರಬಹುದು. ಆದ್ದರಿಂದ ಅಳೆದು ತೂಗಿ ಹೂಡಿಕೆ ಉತ್ಪನ್ನಗಳ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡು ಮುನ್ನಡೆಯಿರಿ.

ಚುನಾವಣೆ ಫಲಿತಾಂಶದತ್ತ ಪೇಟೆಯ ನೋಟ

ಮುಂದಿನ ಒಂದು ವಾರದ ಅವಧಿಯಲ್ಲಿ ಷೇರುಪೇಟೆ ಸೂಚ್ಯಂಕಗಳು ಭಾರಿ ಏರಿಳಿತ ಕಾಣುವುದು ನಿಶ್ಚಿತ ಎನ್ನಬಹುದು. ಕೇಂದ್ರದಲ್ಲಿ ಯಾವ ಸರ್ಕಾರ ಅಧಿಕಾರಕ್ಕೆ ಬರಲಿದೆ ಎನ್ನುವುದನ್ನು ಮಾರುಕಟ್ಟೆ ಕಾತುರದಿಂದ ಎದುರು ನೋಡುತ್ತಿದೆ. ಹೂಡಿಕೆದಾರರು ಯಾವ ಸರ್ಕಾರ ಅಧಿಕಾರಕ್ಕೆ ಬಂದರೆ ಲಾಭ , ಯಾವ ಸರ್ಕಾರ ಚುಕ್ಕಾಣಿ ಹಿಡಿದರೆ ನಷ್ಟ ಎನ್ನುವ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ.

ಈ ಬೆಳವಣಿಗೆಗಳ ಜತೆ ಜತೆಗೆ, ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿಕೂಲ ವಿದ್ಯಮಾನಗಳ ಹೊರತಾಗಿಯೂ ಕಳೆದ ವಾರ ಸೆನ್ಸೆಕ್ಸ್ ಶೇ 1.2 ರಷ್ಟು (37,930) ಏರಿಕೆ ಕಂಡರೆ , ನಿಫ್ಟಿ (50) ಶೇ 1.1 ರಷ್ಟು (11,407) ಮುನ್ನಡೆ ದಾಖಲಿಸಿದೆ. ಲೋಕಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಗೆ ಪೂರ್ವಭಾವಿಯಾಗಿ ಪೇಟೆಯಲ್ಲಿ ಖರೀದಿ ಭರಾಟೆ ಜೋರಾಗಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ.

ಪ್ರಮುಖ ಸಂಗತಿ: ಬಜಾಜ್ ಫೈನಾನ್ಸ್ ತನ್ನ ತ್ರೈಮಾಸಿಕ ವರದಿಯಲ್ಲಿ ಶೇ 57 ರಷ್ಟು ಲಾಭಾಂಶ ದಾಖಲಿಸಿದ ಹಿನ್ನೆಲೆಯಲ್ಲಿ ಕಂಪನಿಯ ಷೇರುಗಳು ಶೇ 13 ರಷ್ಟು ಏರಿಕೆ ದಾಖಲಿಸಿವೆ.

ಆರ್‌ಬಿಐನ ನಿವೃತ್ತ ಡೆಪ್ಯುಟಿ ಗವರ್ನರ್ ಆರ್. ಗಾಂಧಿ ಅವರನ್ನು ಯೆಸ್ ಬ್ಯಾಂಕ್ ನಿರ್ದೇಶಕ ಮಂಡಳಿಗೆ ಎರಡು ವರ್ಷಗಳ ಅವಧಿಗೆ ನೇಮಕಗೊಳಿಸಿ ಆರ್‌ಬಿಐ ಆದೇಶ ಹೊರಡಿಸಿದ ಹಿನ್ನೆಲೆಯಲ್ಲಿ ಕಂಪನಿ ಷೇರುಗಳು ಶೇ 19 ರಷ್ಟು ಕುಸಿದಿವೆ. ಸನ್ ಫಾರ್ಮಾ ವಿರುದ್ಧ ಕಾನೂನು ಸಮರ ನಡೆಯುತ್ತಿರುವುದರಿಂದ ಕಂಪನಿಯ ಷೇರುಗಳು ಶೇ 5.6 ರಷ್ಟು ಹಿನ್ನಡೆ ಕಂಡಿವೆ.

ಏಪ್ರಿಲ್‌ನಲ್ಲಿ ಸಂಸ್ಥೆಯ ಒಟ್ಟು ಸಗಟು ಮಾರಾಟದಲ್ಲಿ ಶೇ 22 ರಷ್ಟು ಹಿನ್ನಡೆ ಆಗಿರುವುದರಿಂದ ಟಾಟಾ ಮೋಟರ್ಸ್ ನ ಷೇರುಗಳು ಶೇ 5 ರಷ್ಟು ಕುಸಿದಿವೆ.

ಏರಿಕೆ-ಇಳಿಕೆ: ನಿಫ್ಟಿ(50) ಸೂಚ್ಯಂಕದಲ್ಲಿ ಬಜಾಜ್ ಫೈನಾನ್ಸ್ (ಶೇ 13), ಬಜಾಜ್ ಫಿನ್ ಸರ್ವ್ (ಶೇ 8.25), ಟೈಟಾನ್ (ಶೇ 5.16) , ಹೀರೊ ಮೋಟೊಕಾರ್ಪ್ (ಶೇ 4.60), ಕೋಟಕ್‌ ಮಹೀಂದ್ರಾ (ಶೇ 4.42) , ಭಾರತ್ ಪೆಟ್ರೋಲಿಯಂ (ಶೇ 3.65) ರಷ್ಟು ಗಳಿಕೆ ಕಂಡು ಮುಂಚೂಣಿಯಲ್ಲಿವೆ.

ಗೇಲ್ ಇಂಡಿಯಾ (-2.49), ಟೆಕ್ ಮಹೀಂದ್ರಾ (-2.91), ಗ್ರಾಸಿಮ್ ಇಂಡಸ್ಟ್ರೀಸ್ (-3.34), ಟಾಟಾ ಸ್ಟೀಲ್ (-3.56) , ಜೆಎಸ್‌ಡಬ್ಲ್ಯು ಸ್ಟೀಲ್ (-3.81) ಹಿನ್ನಡೆ ಅನುಭವಿಸಿವೆ.

ಮುನ್ನೋಟ: ಮತಗಟ್ಟೆ ಸಮೀಕ್ಷೆಗಳು, ಮೇ 23 ರಂದು ಹೊರಬೀಳಲಿರುವ ಚುನಾವಣೆ ಫಲಿತಾಂಶ ಸೇರಿ ಕೆಲ ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶಗಳು ಮಾರುಕಟ್ಟೆಯ ದಿಕ್ಕು ನಿರ್ಧರಿಸಲಿವೆ.

ಟೆಕ್ ಮಹೀಂದ್ರಾ, ಟಾಟಾ ಮೋಟರ್ಸ್, ಬಿಪಿಸಿಎಲ್, ಎಚ್‌ಪಿಸಿಎಲ್, ಸಿಪ್ಲಾ, ಬ್ಯಾಂಕ್ ಆಫ್ ಬರೋಡಾ, ಜಿಂದಾಲ್ ಸ್ಟೀಲ್ ಮತ್ತು ಪವರ್, ಡಿಎಲ್‌ಎಫ್, ಜೆಎಸ್‌ಡಬ್ಲ್ಯು ಕಂಪನಿಗಳು ತ್ರೈಮಾಸಿ ಸಾಧನೆ ಪ್ರಕಟಿಸಲಿವೆ.

(ಲೇಖಕ, ಇಂಡಿಯನ್‌ಮನಿಡಾಟ್‌ಕಾಂ’ನ ಉಪಾಧ್ಯಕ್ಷ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು