ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಶ್ಲೇಷಣೆ| ಆಪದ್ಧನ ಸಂಗ್ರಹ: ಕುಸಿತದ ಸುತ್ತ

ವಿದೇಶಿ ವಿನಿಮಯ ಮೀಸಲು ಕರಗುತ್ತಾ ಹೋಗುವುದು ಒಂದು ಎಚ್ಚರಿಕೆಯ ಗಂಟೆ
Last Updated 20 ಜೂನ್ 2022, 19:45 IST
ಅಕ್ಷರ ಗಾತ್ರ

1991ರ ಜುಲೈ ತಿಂಗಳ ಒಂದು ಮಧ್ಯರಾತ್ರಿ. ಜಗವೆಲ್ಲ ಮಲಗಿತ್ತು. ಚಿನ್ನ ತುಂಬಿದ ಟ್ರಕ್ಕೊಂದು ಬಾಂಬೆ ವಿಮಾನ ನಿಲ್ದಾಣದ ಕಡೆಗೆ ಹೊರಟಿತ್ತು. ಇದ್ಕಕ್ಕಿದ್ದಂತೆ ಟೈರ್ ಪಂಚರ್. ನಡುರಾತ್ರಿಯ ನಿಶ್ಶಬ್ದದಿಂದಲೋ ಏನೊ ಶಬ್ದ ಜೋರಾಗಿಯೇ ಕೇಳಿಸಿತು. ಟ್ರಕ್‌ ಜೊತೆಯಲ್ಲೇ ಬರುತ್ತಿದ್ದ ವ್ಯಾನಿನಿಂದ ತಕ್ಷಣ ಹಲವು ಬಂದೂಕುಧಾರಿಗಳು ಇಳಿದು ಟ್ರಕ್ಕನ್ನು ಸುತ್ತುವರಿದು ನಿಂತರು.

ವೇಣುಗೋಪಾಲ್‌
ವೇಣುಗೋಪಾಲ್‌

‘ಕೆಜಿಎಫ್’ ಸಿನಿಮಾದ ಯಾವುದೋ ಚಿನ್ನದ ಸ್ಮಗ್ಲಿಂಗ್ ದೃಶ್ಯ ಅಂದುಕೊಳ್ಳಬೇಡಿ. ಖಂಡಿತಾ ಅಲ್ಲ. ಚಿನ್ನ ಸಾಗಿಸುತ್ತಿದ್ದುದು ಭಾರತದ ರಿಸರ್ವ್ ಬ್ಯಾಂಕ್. ದೇಶವನ್ನು ಆರ್ಥಿಕ ಬಿಕ್ಕಟ್ಟಿನಿಂದ ಪಾರು ಮಾಡಲು ತನ್ನಲ್ಲಿದ್ದ 47 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡಿನಲ್ಲಿ ಅಡವಿಟ್ಟು 40.5 ಕೋಟಿ ಡಾಲರ್ ಪಡೆದುಕೊಳ್ಳಲು ಅದನ್ನು ಸಾಗಿಸಲಾಗುತ್ತಿತ್ತು. ಸರ್ಕಾರದ ಹತಾಶೆ ಆ ಮಟ್ಟಕ್ಕಿತ್ತು. ವಿದೇಶಿ ವಿನಿಮಯ ಮೀಸಲು 351.4 ಕೋಟಿ ಡಾಲರುಗಳಿಗೆ ಕುಸಿದಿತ್ತು. ಎಣ್ಣೆ, ಗೊಬ್ಬರ ಇತ್ಯಾದಿ ಅತ್ಯಂತ ಅವಶ್ಯಕ ವಸ್ತುಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ಹಣ ಇರಲಿಲ್ಲ. ತೆಗೆದುಕೊಂಡ ಸಾಲಕ್ಕೆ ಬಡ್ಡಿಯನ್ನೂ ಕಟ್ಟಲಾಗದ ಸ್ಥಿತಿ. ಭಾರತವು ಜಗತ್ತಿನ ವಿಶ್ವಾಸ ಕಳೆದುಕೊಂಡಿತ್ತು. ಇನ್ಯಾವುದಾದರೂ ವಿದೇಶಿ ಬ್ಯಾಂಕು ನಮಗೆ ಗ್ಯಾರಂಟಿ ಕೊಡಬೇಕಿತ್ತು. ಅಂತಹ ಸಂಕಷ್ಟದಲ್ಲಿ ಚಿನ್ನ ಅಡವಿಟ್ಟು ಮಾನ ಉಳಿಸಿಕೊಳ್ಳುವುದಕ್ಕೆ ನಿರ್ಧರಿಸಲಾಗಿತ್ತು. ವೈ.ವಿ.ರೆಡ್ಡಿ ಅವರು ತಮ್ಮ ಪುಸ್ತಕ ‘ಅಡ್ವೈಸ್ ಆ್ಯಂಡ್ ಡಿಸ್ಸೆಂಟ್’ನಲ್ಲಿ ಅಂದಿನ ಈ ಪರಿಸ್ಥಿತಿಯನ್ನು ವಿವರವಾಗಿ ದಾಖಲಿಸಿದ್ದಾರೆ. ರಿಸರ್ವ್ ಬ್ಯಾಂಕಿನ ವಿದೇಶಿ ವಿನಿಮಯದ ಮೀಸಲಿನ ಚಿನ್ನ ಅಂದು ನೆರವಿಗೆ ಬಂದಿತ್ತು.

ವಿದೇಶಿ ವಿನಿಮಯ ಮೀಸಲು ಇರುವುದೇ ಆಪತ್ಕಾಲ
ದಲ್ಲಿ ನೆರವಾಗಲು, ಅಂತರರಾಷ್ಟ್ರೀಯ ಪಾವತಿಗಳನ್ನು ಮಾಡಲು, ವಿದೇಶಿ ವಿನಿಮಯದ ಸಂಕಷ್ಟ
ಗಳನ್ನು ಎದುರಿಸಲು, ಹಲವು ಹಣಕಾಸು ನೀತಿಗಳನ್ನು ಪಾಲಿಸಲು... ಹೀಗೆ ಹತ್ತು ಹಲವು ಕಾರಣಗಳಿಗಾಗಿ. ಶ್ರೀಲಂಕಾದಂತಹ ಕೆಲವು ದೇಶಗಳು ಇದನ್ನು ಖಾಲಿ ಮಾಡಿಕೊಂಡು ಇಂದು ದಿವಾಳಿಯಾಗಿವೆ. ಭಾರತದಲ್ಲಿ 2021ರ ಸೆಪ್ಟೆಂಬರ್ ತಿಂಗಳಿನಲ್ಲಿ ಅದು ಗರಿಷ್ಠ ಪ್ರಮಾಣದಲ್ಲಿತ್ತು. ಆಗ ಆರ್‌ಬಿಐ ಬಳಿ ಒಟ್ಟು 64,245.3 ಕೋಟಿ ಡಾಲರ್ ವಿದೇಶಿ ನಗದು ಮೀಸಲು ಇತ್ತು. ಅದು ಕ್ರಮೇಣ ಕರಗುತ್ತಾ ಜೂನ್ 10ರ ಹೊತ್ತಿಗೆ 59,645.9 ಕೋಟಿ ಡಾಲರ್‌ಗಳಾದವು. ಮೀಸಲು ನಿರಂತರವಾಗಿ ಕರಗುತ್ತಿ
ರುವುದರಿಂದ ಆತಂಕವುಂಟಾಗಿದೆ. ಈ ಮೀಸಲಿನಲ್ಲಿ ಚಿನ್ನ, ಸ್ಪೆಷಲ್‌ ಡ್ರಾಯಿಂಗ್‌ ರೈಟ್ಸ್‌ (ಎಸ್‍ಡಿಅರ್), ವಿದೇಶಿ ನಗದು ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮೀಸಲು ಸೇರಿರುತ್ತದೆ. ಅದನ್ನು ಡಾಲರಿನಲ್ಲಿ ಲೆಕ್ಕ ಹಾಕುತ್ತಾರೆ.

ಆರ್‌ಬಿಐ ಬಳಿ ಈಗ 760.42 ಟನ್ ಚಿನ್ನವಿದೆ. ಅದರ ಇಂದಿನ ಮೌಲ್ಯ 4,084 ಕೋಟಿ ಡಾಲರ್. ಒಟ್ಟು ವಿದೇಶಿ ವಿನಿಮಯ ಸಂಗ್ರಹದಲ್ಲಿ ಚಿನ್ನದ ಪಾಲು ಏಪ್ರಿಲ್‍ನಲ್ಲಿ ಶೇಕಡ 7ರಷ್ಟಿತ್ತು. ಆಗಾಗಆರ್‌ಬಿಐ ಚಿನ್ನ ಕೊಳ್ಳುವುದರಿಂದ ಅದರ ಪ್ರಮಾಣ ಹೆಚ್ಚು ಕಡಿಮೆ
ಯಾಗುತ್ತಿರುತ್ತದೆ. 2022ರಲ್ಲಿ ಅದು 65 ಟನ್ ಚಿನ್ನ ಖರೀದಿಸಿದೆ. ಹಾಗೆಯೇ ಚಿನ್ನದ ದರದಲ್ಲಿಯೂ
ಏರುಪೇರಾಗುತ್ತಿರುತ್ತದೆ.

ಎಸ್‌ಡಿಆರ್ ಎಂಬುದು ಐಎಂಎಫ್ ಸೃಷ್ಟಿಸಿದ ಅಂತರ
ರಾಷ್ಟ್ರೀಯ ಮೀಸಲು ಆಸ್ತಿ. ತನ್ನ ಸದಸ್ಯ ರಾಷ್ಟ್ರಗಳು ಇಟ್ಟುಕೊಂಡಿರುವ ವಿದೇಶಿ ವಿನಿಮಯ ಸಂಗ್ರಹಕ್ಕೆ ಪೂರಕವಾದ ಒಂದು ಮೀಸಲು ನಿಧಿ. ಇದು ಡಾಲರ್, ರೂಪಾಯಿಗಳಂತೆ ಒಂದು ಕರೆನ್ಸಿ ಅಲ್ಲ. ಅಮೆರಿಕದ ಡಾಲರ್, ಯುರೊ, ಜಪಾನಿನ ಯೆನ್ ಹಾಗೂ ಪೌಂಡ್‍ಸ್ಟರ್ಲಿಂಗ್ ಮತ್ತು ಚೀನಾದ ರೆನ್‍ಮಿನ್‍ಬಿ ಸೇರಿ ಆಗಿರುವ ಒಂದು ಸಂಗ್ರಹ. ಕೆಲವು ಮಾಪನಗಳನ್ನು ಆಧರಿಸಿ ಇದರ ಪ್ರಾಮುಖ್ಯವನ್ನು ನಿರ್ಧರಿಸಲಾಗುತ್ತದೆ. ಉದಾಹರಣೆಗೆ, ಒಂದು ನಾಣ್ಯದಲ್ಲಿ ನಡೆಯುವ ಒಟ್ಟು ವಿದೇಶಿ ವಿನಿಮಯ ವ್ಯವಹಾರವು ವಿದೇಶಿ ವಿನಿಮಯ ಸಂಗ್ರಹದಲ್ಲಿ ಆ ನಾಣ್ಯದ ಪ್ರಮಾಣ, ಆ ನಾಣ್ಯದಲ್ಲಿ ನಡೆಯುವ ಒಟ್ಟು ರಫ್ತಿನ ಪ್ರಮಾಣ ಇತ್ಯಾದಿಗಳನ್ನು ಆಧರಿಸಿ ಅದರ ಮೌಲ್ಯವನ್ನು ನಿರ್ಧರಿಸುತ್ತದೆ.

ಐಎಂಎಫ್, ಇತ್ತೀಚಿನ ಸಭೆಯಲ್ಲಿ ಚೀನಾದ ರೆನ್‍ಮಿನ್‍ಬಿಯ ಮೌಲ್ಯವನ್ನು ಹೆಚ್ಚಿಸಿದೆ. ಈಗ ಅದು ಡಾಲರ್‌ ಮತ್ತು ಯುರೊ ನಂತರ ಮೂರನೇ ಸ್ಥಾನದಲ್ಲಿದೆ. ಎಸ್‍ಡಿಆರ್ ಮೌಲ್ಯವೂ ಬದಲಾಗು
ತ್ತಿರುತ್ತದೆ. ಪ್ರತಿದಿನದ ಅದರ ಮೌಲ್ಯವನ್ನು ಐಎಂಎಫ್ ಪ್ರಕಟಿಸುತ್ತಿರುತ್ತದೆ. ವಿದೇಶಿ ಕರೆನ್ಸಿ ಅವಶ್ಯಕತೆಯಿರುವ ದೇಶವು ಇತರ ಐಎಂಎಫ್ ಸದಸ್ಯ ರಾಷ್ಟ್ರಗಳಿಗೆ ತಮ್ಮ ಬಳಿ ಇರುವ ಎಸ್‍ಡಿಆರ್ ನೀಡಿ ಅವುಗಳಿಂದ ತಮಗೆ ಬೇಕಾದ ವಿದೇಶಿ ಕರೆನ್ಸಿಯನ್ನು ಪಡೆದುಕೊಳ್ಳಬಹುದು.

ಒಂದು ದೇಶದ ಎಸ್‍ಡಿಆರ್ ಪ್ರಮಾಣವನ್ನು ಆ ದೇಶದ ಐಎಂಎಫ್ ಕೋಟಾವನ್ನು ಆಧರಿಸಿ
ನಿರ್ಧರಿಸಲಾಗುತ್ತದೆ. ಐಎಂಎಫ್‍ನ ಸದಸ್ಯರಾಗುವುದಕ್ಕೆ ವಿವಿಧ ದೇಶಗಳು ಐಎಂಎಫ್‍ನಲ್ಲಿ ಇಟ್ಟ ಠೇವಣಿಯನ್ನು ಆಧರಿಸಿ ಅವುಗಳ ಕೋಟಾ ನಿರ್ಧರಿಸುತ್ತಾರೆ. ಅದು ಆ ದೇಶದ ಜಿಡಿಪಿ ಇತ್ಯಾದಿ ಆರ್ಥಿಕ ಸ್ಥಿತಿಯನ್ನು ಆಧರಿಸಿ ನಿರ್ಧಾರವಾಗುತ್ತದೆ. ಅದನ್ನು ಆಧರಿಸಿ ಆ ದೇಶದ ಎಸ್‍ಡಿಆರ್ ನಿರ್ಧರಿತವಾಗುತ್ತದೆ.ಹೀಗಾಗಿ ಶ್ರೀಮಂತ ರಾಷ್ಟ್ರಗಳಿಗೆ ಹೆಚ್ಚು ಎಸ್‍ಡಿಆರ್ ದೊರಕುತ್ತದೆ.ಭಾರತದ ಕೋಟಾ ಶೇಕಡ 2.76 ಎಂದು ನಿರ್ಧರಿಸಲಾಗಿತ್ತು. ಅದನ್ನು ಆಧರಿಸಿ ಭಾರತಕ್ಕೆ 1311.4 ಕೋಟಿ ಡಾಲರ್ ಎಸ್‍ಡಿಆರ್ ವಿತರಣೆಯಾಗಿತ್ತು.

ವಿದೇಶಿ ವಿನಿಮಯ ಮೀಸಲಿನ ಪ್ರಮುಖ ಭಾಗವೆಂದರೆ, ವಿದೇಶಿ ನಗದು. 2021ರ ಸೆಪ್ಟೆಂಬರ್‌
ನಲ್ಲಿ ಅದು 57,798 ಕೋಟಿ ಡಾಲರ್‌ನಷ್ಟಿತ್ತು. ಆಗಿನಿಂದ ಅದು ಒಂದೇ ಸಮನೆ ಕುಸಿಯುತ್ತಿದೆ. 2022ರ ಜೂನ್‌ನಲ್ಲಿ 53,224 ಕೋಟಿ ಡಾಲರ್‌ಗಳಿಗೆ ಕುಸಿಯಿತು. ಈಗಲೂ ಕುಸಿತ ಮುಂದುವರಿದಿದೆ. ಅದಕ್ಕೆ ಹಲವು ಕಾರಣಗಳಿವೆ. ರಫ್ತಿಗಿಂತ ಆಮದು ಹೆಚ್ಚಾಗು
ತ್ತಿರುವುದರಿಂದ ವಿದೇಶಿ ವಿನಿಮಯದ ಬಳಕೆ ಹೆಚ್ಚುತ್ತಿದೆ. ಪೆಟ್ರೋಲ್ ಇತ್ಯಾದಿ ಪದಾರ್ಥಗಳ ಬೆಲೆ ಹೆಚ್ಚಾಗು
ತ್ತಿರುವುದರಿಂದ ಸ್ವಾಭಾವಿಕವಾಗಿಯೇ ಹೆಚ್ಚಿಗೆ ಡಾಲರ್ ತೆರಬೇಕಾಗುತ್ತದೆ. ನಾವು ಸಂಗ್ರಹಿಸಿರುವ ವಿದೇಶಿ ಹಣದ ಮೌಲ್ಯ ಕುಸಿದಾಗಲೂ ವಿದೇಶಿ ವಿನಿಮಯ ಮೀಸಲು ಪ್ರಮಾಣ ಇಳಿಯುತ್ತದೆ. ಉದಾಹರಣೆಗೆ, ನಾವು ವಿದೇಶಿ ವಿನಿಮಯದ ಒಂದು ಭಾಗವನ್ನು ಯುರೊದಲ್ಲಿ ಸಂಗ್ರಹಿಸಿ
ಇಟ್ಟಿದ್ದಾಗ, ಡಾಲರ್ ಎದುರು ಯುರೊದ ಮೌಲ್ಯ ಕುಸಿದರೆ, ವಿದೇಶಿ ವಿನಿಮಯದ ಮೀಸಲಿನ ಮೌಲ್ಯವೂ ಕಮ್ಮಿಯಾಗುತ್ತದೆ.

ವಿದೇಶಿ ವಿನಿಮಯಕ್ಕೆ ಇನ್ನೊಂದು ಹೊಡೆತ ವಿದೇಶಿ ಬಂಡವಾಳಿಗರಿಂದ ಬೀಳುತ್ತಿದೆ. ಅವರು ನಮ್ಮ ಮಾರುಕಟ್ಟೆಗಳಲ್ಲಿ ಹೂಡಿದ ಬಂಡವಾಳವನ್ನು ಹಿಂತೆಗೆದುಕೊಳ್ಳುತ್ತಿದ್ದಾರೆ. ಮೇ ತಿಂಗಳೊಂದರಲ್ಲೇ ₹ 36,518 ಕೋಟಿ ಮೌಲ್ಯದ ಹೂಡಿಕೆಯನ್ನು ಹಿಂತೆಗೆದುಕೊಂಡಿದ್ದರು. ಇದರ ಜೊತೆಗೆ ಹಣದುಬ್ಬರವೂ ಸೇರಿಕೊಂಡು ರೂಪಾಯಿ ಮೌಲ್ಯವೂ ಕುಸಿಯುತ್ತಿದೆ. ಇದನ್ನು ತಪ್ಪಿಸಲು ಆರ್‌ಬಿಐಗೆ ಇರುವ ಒಂದು ದಾರಿಯೆಂದರೆ, ಡಾಲರ್ ಮಾರಿ ರೂಪಾಯಿ ಖರೀದಿಸಿ ರೂಪಾಯಿಗೆ ಬೇಡಿಕೆ ಹೆಚ್ಚಿಸುವುದು. ಆಗಲೂ ಡಾಲರ್ ಸಂಗ್ರಹ ಕರಗುತ್ತದೆ.

ಅಮೆರಿಕ ತನ್ನ ಹಣದುಬ್ಬರವನ್ನು ನಿಯಂತ್ರಿಸಲು ಬಡ್ಡಿದರವನ್ನು ಹೆಚ್ಚಿಸುತ್ತಿದೆ. ಅದರ ಪರಿಣಾಮವಾಗಿ ಇಲ್ಲಿಂದ ಬಂಡವಾಳ ಅಮೆರಿಕಕ್ಕೆ ಮರಳುತ್ತದೆ. ಅನಿವಾರ್ಯವಾಗಿ ನಾವೂ ಬಡ್ಡಿದರ ಹೆಚ್ಚಿಸಬೇಕಾಗು
ತ್ತದೆ. ರೆಪೊ ದರ ಹೆಚ್ಚಿಸುವುದಕ್ಕೆ ಅದೂ
ಒಂದು ಕಾರಣ.

ಯಾವುದೇ ಒಂದು ದೇಶದ ವಿದೇಶಿ ವಿನಿಮಯ ಸಂಗ್ರಹ ಕರಗುತ್ತಾ ಹೋಗುವುದು ಒಂದು ಎಚ್ಚರಿಕೆಯ ಗಂಟೆ. ಅದು ದೇಶದ ಆರ್ಥಿಕತೆಯ ಹಲವು ಸಮಸ್ಯೆಗಳನ್ನು ಪ್ರತಿಧ್ವನಿಸುತ್ತಿರುತ್ತದೆ. ಅದಕ್ಕೆ ಸ್ಪಂದಿಸುವುದು ಸರ್ಕಾರದ ಜವಾಬ್ದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT