ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈ.ಜಿ.ಮುರಳೀಧರನ್ ಅಂಕಣ| ಗ್ರಾಹಕ ಹಕ್ಕು: ಚರ್ಚೆಯ ಬಲವಿರಲಿ

ಗ್ರಾಹಕ ಸಂರಕ್ಷಣಾ ನಿಯಮ: ಪರಿಣಾಮಕಾರಿ ಆಗಿಸಲು ಪಣತೊಡೋಣ
Last Updated 11 ಫೆಬ್ರುವರಿ 2021, 19:30 IST
ಅಕ್ಷರ ಗಾತ್ರ

ಆಡಳಿತದಲ್ಲಿ ಪಾರದರ್ಶಕತೆ ಅಳವಡಿಸಿಕೊಳ್ಳಲು ಮತ್ತು ಜನರ ಸಹಭಾಗಿತ್ವಕ್ಕೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒತ್ತು ಕೊಡಲಾಗಿದೆ. ಯಾವುದೇ ಜನಪರ ಕಾನೂನು, ಯೋಜನೆ, ನಿಯಮ ಜಾರಿಗೊಳಿಸುವ ಮುನ್ನ ಅದರ ಕರಡು ಮಸೂದೆಯನ್ನು ರಾಜ್ಯಪತ್ರದಲ್ಲಿ ಪ್ರಕಟಿಸಿ ಸಾರ್ವಜನಿಕರಿಂದ ಅಭಿಪ್ರಾಯ ಮತ್ತು ಸಲಹೆ–ಸೂಚನೆಗಳನ್ನು ಆಹ್ವಾನಿಸುವ ನಿಯಮವಿದೆ. ಇದಕ್ಕೆ 30 ದಿನಗಳು ಕಾಲಾವಕಾಶ ಕೊಡುವ ಪದ್ಧತಿಯೂ ಇದೆ. ಎಷ್ಟು ಮಂದಿ ನಾಗರಿಕರು ಈ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಾರೆ ಹಾಗೂ ಸರ್ಕಾರ ಎಷ್ಟರಮಟ್ಟಿಗೆ ಅವರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ ಎಂಬುದು ಇಲ್ಲಿ ಮುಖ್ಯವಲ್ಲ. ಆದರೆ ನಾಗರಿಕರಿಗೆ ತಮ್ಮ ನಿಲುವನ್ನು ವ್ಯಕ್ತಪಡಿಸಲು ಒಂದು ವೇದಿಕೆ ಇರಬೇಕಾದುದು ಪ್ರಜಾಪ್ರಭುತ್ವದ ಲಕ್ಷಣ.

ವೈ.ಜಿ.ಮುರಳೀಧರನ್
ವೈ.ಜಿ.ಮುರಳೀಧರನ್

ಆದರೆ ರಾಜ್ಯ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಗ್ರಾಹಕ ಸಂರಕ್ಷಣಾ ಅಧಿನಿಯಮಕ್ಕೆ ಸಂಬಂಧಪಟ್ಟ ನಿಯಮವನ್ನು ಇತ್ತೀಚೆಗೆ ಯಾವುದೇ ಪ್ರಚಾರ ನೀಡದೆ ರಾಜ್ಯಪತ್ರದಲ್ಲಿ ಪ್ರಕಟಿಸಿದೆ. 30 ದಿನಗಳ ಕಾಲಮಿತಿ ಈಗಾಗಲೇ ಮುಗಿದಿದೆ. ಸಾರ್ವಜನಿಕರು, ಗ್ರಾಹಕ ಸಂಘ–ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಕಾರಣ, ರಾಜ್ಯಪತ್ರದಲ್ಲಿ ಕರಡು ನಿಯಮ ಪ್ರಕಟವಾಗಿರುವ ಅಂಶವೇ ಹೆಚ್ಚು ಜನರಿಗೆ ತಿಳಿದಿಲ್ಲ. ಇಲಾಖೆಯು ನಿಯಮದ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿಲ್ಲ, ವೆಬ್ ಜಾಲತಾಣದಲ್ಲೂ ಪ್ರಕಟಿಸಿಲ್ಲ. ಇಲಾಖೆಯೇ ಸ್ಥಾಪಿಸಿರುವ ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರಗಳಿಗೂ ಈ ವಿಷಯ ತಿಳಿಸಿಲ್ಲ.

ಯಾವುದೇ ನಿಯಮವಾಗಲಿ, ಅದು ಮೂಲ ಕಾನೂನಿಗೆ ತಕ್ಕಂತೆ ಹಾಗೂ ಕಾನೂನಿನ ಮೂಲ ಉದ್ದೇಶವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವಂತೆ ಇರಬೇಕು. ಕೊನೇಪಕ್ಷ ಮೂಲ ಉದ್ದೇಶಕ್ಕೆ ಪೂರಕವಾಗಿರಬೇಕು. ಕರ್ನಾಟಕ ಪ್ರಕಟಿಸಿರುವ ನಿಯಮದಲ್ಲಿ ಈ ರೀತಿಯ ಉದ್ದೇಶಗಳು ವ್ಯಕ್ತವಾಗುತ್ತಿಲ್ಲ. ಗ್ರಾಹಕ ಸಂರಕ್ಷಣಾ ಕಾಯ್ದೆಯ ಪ್ರಕಾರ, ರಾಜ್ಯ ಸರ್ಕಾರವು ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಗ್ರಾಹಕ ಸಂರಕ್ಷಣಾ ಪರಿಷತ್ತುಗಳನ್ನು ಸ್ಥಾಪಿಸಬೇಕು. ಕಳೆದ 20 ವರ್ಷಗಳಿಂದ ಕರ್ನಾಟಕ ರಾಜ್ಯ ಗ್ರಾಹಕ ಸಂರಕ್ಷಣಾ ಪರಿಷತ್ತು ಅಸ್ತಿತ್ವದಲ್ಲಿಲ್ಲ. ಕೆಲವು ಜಿಲ್ಲಾ ಪರಿಷತ್ತುಗಳು ಸ್ಥಾಪನೆಗೊಂಡಿದ್ದರೂ ಸಭೆಗಳು ನಡೆದಿಲ್ಲ ಮತ್ತು ಪರಿಷತ್ತುಗಳ ಕಾಲಾವಧಿ ಮುಗಿದಿದೆ. ಆದರೆ, ಇಂತಿಷ್ಟು ದಿನಗಳ ಅವಧಿಯಲ್ಲಿ ರಾಜ್ಯ ಹಾಗೂ ಜಿಲ್ಲಾ ಪರಿಷತ್ತುಗಳನ್ನು ಸ್ಥಾಪಿಸಬೇಕೆಂಬ ಯಾವುದೇ ಉಲ್ಲೇಖ ಕರಡು ನಿಯಮದಲ್ಲಿ ಇಲ್ಲ.

ರಾಜ್ಯ ಮತ್ತು ಜಿಲ್ಲಾ ಪರಿಷತ್ತುಗಳು ಅಗತ್ಯವಾದಷ್ಟು ಸಭೆಗಳನ್ನು ನಡೆಸಬೇಕು, ವರ್ಷದಲ್ಲಿ ಕನಿಷ್ಠ ಎರಡು ಸಭೆಗಳನ್ನಾದರೂ ನಡೆಸಲೇಬೇಕೆಂದು ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 6(3) ಮತ್ತು 8(3) ಹೇಳುತ್ತದೆ. ಆದರೆ ರಾಜ್ಯದ ಕರಡು ನಿಯಮದಲ್ಲಿ ಸಭೆಗಳ ಬಗ್ಗೆ ಉಲ್ಲೇಖ ಇಲ್ಲದಿರುವುದು ಕಾನೂನಿಗೆ ವಿರುದ್ಧವಾಗಿದೆ. ಸಭೆಗಳನ್ನು ನಡೆಸಿ ಅದರ ನಿರ್ಧಾರಗಳ ಬಗ್ಗೆ ಕ್ರಮ ಕೈಗೊಳ್ಳದಿದ್ದಲ್ಲಿ ಪರಿಷತ್ತುಗಳ ಅಗತ್ಯವಾದರೂ ಏನು? ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತಿಗೆ ಸಂಬಂಧಪಟ್ಟ ನಿಯಮದಲ್ಲಿ ಮಹಿಳೆಯರಿಗೆ ಒಂದು ಸ್ಥಾನವನ್ನು ಮೀಸಲು ಇಡಲಾಗಿದೆ. ಎಪ್ಪತ್ತರ ದಶಕದಲ್ಲಿ ಕರ್ನಾಟಕವು ರಾಷ್ಟ್ರದಲ್ಲೇ ಪ್ರಥಮವಾಗಿ ರಾಜ್ಯ ಗ್ರಾಹಕ ಸಂರಕ್ಷಣಾ ಮಂಡಳಿ ಸ್ಥಾಪಿಸಿ, ಒಬ್ಬ ಮಹಿಳೆಯನ್ನು (ಜಾಜಿ ಮಂದಣ್ಣ) ಅಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಈಗ ರಾಜ್ಯ ಮತ್ತು ಜಿಲ್ಲಾ ಪರಿಷತ್ತಿಗೆ ಒಂದೆರಡು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲು ಇಡುವುದು ಕಷ್ಟವೇ?

ಗ್ರಾಹಕರ ಹಕ್ಕುಗಳನ್ನು ರಕ್ಷಿಸುವುದು ಈ ಪರಿಷತ್ತುಗಳ ಉದ್ದೇಶ. ಈ ಉದ್ದೇಶದ ಈಡೇರಿಕೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿದೆ. ಗ್ರಾಹಕ ಸಂರಕ್ಷಣೆಯ ಕ್ಷೇತ್ರದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಗಳು, ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಹಾಗೂ ವಿಶ್ವವಿದ್ಯಾಲಯಗಳಿಗೆ ಪರಿಷತ್ತಿನ ಸದಸ್ಯತ್ವ (ನಾನ್ ಅಫಿಶಿಯಲ್) ನೀಡುವ ಅವಕಾಶವಿದೆ. ಗ್ರಾಹಕ ಸಂರಕ್ಷಣಾ ಕ್ಷೇತ್ರದಲ್ಲಿ ನುರಿತ ತಜ್ಞರಿಂದ ಸಲಹೆ ಸೂಚನೆಗಳನ್ನು ಪಡೆಯಲು ಪರಿಷತ್ತುಗಳನ್ನು ಬಳಸಿಕೊಳ್ಳಬಹುದು. ಆದರೆ ಕರಡು ನಿಯಮದಲ್ಲಿ ನಾನ್ ಅಫಿಶಿಯಲ್ ಸದಸ್ಯರಿಗೆ ಕೇವಲ ನಾಲ್ಕು ಸ್ಥಾನಗಳನ್ನು ಮೀಸಲು ಇಡಲಾಗಿದೆ. ಈಗ 31 ಜಿಲ್ಲೆಗಳಿರುವ ರಾಜ್ಯಕ್ಕೆ ನಾಲ್ಕು ಸ್ಥಾನಗಳು ಅತಿ ಕಡಿಮೆ ಎನಿಸುತ್ತದೆ. ಅಲ್ಲದೆ ಗ್ರಾಹಕ ಸಂರಕ್ಷಣೆ ಮತ್ತು ಮಾಹಿತಿ ಹಂಚುವಿಕೆಯ ಜವಾಬ್ದಾರಿ ಹೊತ್ತಿರುವ 30 ಜಿಲ್ಲಾ ಗ್ರಾಹಕ ಮಾಹಿತಿ ಕೇಂದ್ರಗಳಿದ್ದು ಅವುಗಳಲ್ಲಿ ಕೆಲವು ಕೇಂದ್ರಗಳಿಗಾದರೂ ಅವಕಾಶ ನೀಡಬೇಕಿದೆ.

ರಾಜ್ಯ ಮತ್ತು ಜಿಲ್ಲಾ ಪರಿಷತ್ತಿಗೆ ನಾನ್ ಅಫಿಶಿಯಲ್ ಸದಸ್ಯರನ್ನು ಆಯ್ಕೆ ಮಾಡುವಾಗ ಕೆಲವು ನಿಯಮಗಳನ್ನು ಅನುಸರಿಸುವುದು ಕ್ಷೇಮ. ಕಾರಣ, ಈ ರೀತಿಯ ಪರಿಷತ್ತುಗಳಲ್ಲಿ ವಿಷಯ ತಜ್ಞರಿಗಿಂತ ರಾಜಕೀಯ ಪಕ್ಷದ ಕಾರ್ಯಕರ್ತರು ಸ್ಥಾನ ಪಡೆಯುವ ಸಾಧ್ಯತೆ ಇದೆ. ಪಕ್ಷದ ಕಾರ್ಯಕರ್ತರಲ್ಲಿ ತಜ್ಞರು ಇಲ್ಲವೆಂದು ಇದರ ಅರ್ಥವಲ್ಲ. ಅವರ ಜೊತೆಗೆ, ಪಕ್ಷಾತೀತವಾಗಿ ಗ್ರಾಹಕ ರಕ್ಷಣೆಯಲ್ಲಿ ತೊಡಗಿರುವವರಿಗೆ ಆದ್ಯತೆ ದೊರೆಯಬೇಕು. ವ್ಯಕ್ತಿಯಾಗಲಿ ಅಥವಾ ಸಂಸ್ಥೆಯಾಗಲಿ ಅವರು ಗ್ರಾಹಕ ಸಂರಕ್ಷಣೆ ಕ್ಷೇತ್ರದಲ್ಲಿ ಮಾಡಿರುವ ಕೆಲಸ, ಸಾಧನೆ, ಅವರಲ್ಲಿರುವ ಜ್ಞಾನ, ಅನುಭವವು ಸದಸ್ಯತ್ವಕ್ಕೆ ಆಧಾರವಾಗಿರಬೇಕು.

ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತಿನ ನಿಯಮದಲ್ಲಿ ತಜ್ಞರ ಸಮಿತಿಗಳನ್ನು (ವರ್ಕಿಂಗ್ ಗ್ರೂಪ್) ರಚಿಸುವ ಅವಕಾಶ ಕಲ್ಪಿಸಲಾಗಿದೆ. ಪರಿಷತ್ತಿನ ಸದಸ್ಯರಲ್ಲಿ ಕೆಲವು ತಜ್ಞರನ್ನು ಆಯ್ಕೆ ಮಾಡಿ ಗ್ರಾಹಕ ಸಂರಕ್ಷಣೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವರ್ಕಿಂಗ್ ಗ್ರೂಪ್‍ಗಳನ್ನು ಮಾಡಿ, ಅವರು ನೀಡುವ ಸಲಹೆ ಸೂಚನೆಗಳನ್ನು ಜಾರಿಗೊಳಿಸಿದಲ್ಲಿ ಗ್ರಾಹಕ ಸಂರಕ್ಷಣೆ ಮತ್ತಷ್ಟು ಪರಿಣಾಮಕಾರಿಯಾಗಬಲ್ಲದು. ಉದಾಹರಣೆಗೆ, ಕೇಂದ್ರ ಮಟ್ಟದಲ್ಲಿ ಆಹಾರ ಕಲಬೆರಕೆ, ಹಾದಿ ತಪ್ಪಿಸುವ ಜಾಹೀರಾತುಗಳು, ಹೂಡಿಕೆದಾರರ ರಕ್ಷಣೆಯಂತಹ ವಿಷಯಗಳ ಬಗ್ಗೆ ವರ್ಕಿಂಗ್ ಗ್ರೂಪ್‍ಗಳನ್ನು ರಚಿಸಲಾಗುತ್ತದೆ. ರಾಜ್ಯ ಸರ್ಕಾರ ಸಹ ವರ್ಕಿಂಗ್ ಗ್ರೂಪ್ ರಚಿಸುವ ನಿಯಮ ಸೇರಿಸಬೇಕು.

ಪ್ರಸ್ತುತ ಗ್ರಾಹಕ ಸಂರಕ್ಷಣೆ ಒಂದು ಸ್ವಯಂ ಸೇವೆ ಆಗಿದೆಯೇ ಹೊರತು ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿರುವವರು ಇಲ್ಲವೆಂದೇ ಹೇಳಬೇಕು. ಸಾಮಾಜಿಕ ಕಾಳಜಿ ಇರುವವರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಸ್ವಂತ ವೆಚ್ಚದಲ್ಲಿ ಬಹಳಷ್ಟು ಕೆಲಸ ಮಾಡುತ್ತಿದ್ದಾರೆ. ರಾಜ್ಯ ಸರ್ಕಾರದ ನಿಯಮದ ಪ್ರಕಾರ, ರಾಜ್ಯ ಪರಿಷತ್ತಿನ ಸಭೆಯಲ್ಲಿ ಭಾಗವಹಿಸುವ ಸದಸ್ಯರಿಗೆ ₹ 500 ಹಾಗೂ ಜಿಲ್ಲೆಯ ಮಟ್ಟದಲ್ಲಿ ₹ 300 ಭತ್ಯೆ ನೀಡಲಾಗುತ್ತದೆ. ಈ ಮೊತ್ತವನ್ನು ಯಾವ ಆಧಾರದ ಮೇಲೆ ನಿಗದಿಪಡಿಸಲಾಗಿದೆಯೋ ತಿಳಿಯುತ್ತಿಲ್ಲ. ಬೀದರ್, ಕಲಬುರ್ಗಿ, ಬಾಗಲಕೋಟೆ ಮುಂತಾದ ಸ್ಥಳಗಳಿಂದ ಬರುವವರಿಗೆ ಈ ಮೊತ್ತ ಹಾಸ್ಯಾಸ್ಪದವಾಗಿ ಕಂಡರೂ ಅಚ್ಚರಿಯಿಲ್ಲ. ಬಸ್, ರೈಲು ನಿಲ್ದಾಣದಿಂದ ವಿಧಾನಸೌಧ ತಲುಪುವುದಕ್ಕೆ ಈ ಮೊತ್ತ ಸಾಕಾಗಬಹುದು. ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತು ನಿಗದಿಪಡಿಸಿರುವ ಮೊತ್ತ ಎಷ್ಟು ಗೊತ್ತೇ? ಒಂದು ದಿನದ ಸಭೆಗೆ ₹ 5,000. ಇದರ ಜೊತೆಗೆ ಇತರ ಸ್ಥಳಗಳಿಂದ ದೆಹಲಿಗೆ ಬರುವ ಸದಸ್ಯರಿಗೆ ಎಕಾನಮಿ ಕ್ಲಾಸ್ ವಿಮಾನ ಪ್ರಯಾಣದ ವೆಚ್ಚ ನೀಡಲಾಗುವುದು. ರಾಜ್ಯ ಸರ್ಕಾರ ಇದೇ ಮಾದರಿ ಅನುಸರಿಸಲು ಆಗದಿದ್ದರೂ ಬಸ್, ರೈಲು ಪ್ರಯಾಣದ ವೆಚ್ಚದ ಜೊತೆಗೆ ಒಂದಿಷ್ಟು ಭತ್ಯೆ ನೀಡಬೇಕು.

ಲೇಖಕ: ಕೇಂದ್ರ ಗ್ರಾಹಕ ಸಂರಕ್ಷಣಾ ಪರಿಷತ್ತಿನ ಮಾಜಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT