ಭಾನುವಾರ, ಆಗಸ್ಟ್ 1, 2021
26 °C
ಪಟೇಲ್‌ರಂತಹ ಮಹಾರಥಿಗಳನ್ನು ಇತಿಹಾಸದ ಅಡಿಟಿಪ್ಪಣಿಗೆ ತುಳಿದದ್ದು ಅಕ್ಷಮ್ಯ ಅಪರಾಧ

ಎರವಲು ಪ್ರಭಾವಳಿಯಲಿ ಮಿಂದ ‘ಪರಿವಾರ’

ಡಿ. ಉಮಾಪತಿ Updated:

ಅಕ್ಷರ ಗಾತ್ರ : | |

ಮೈತುಂಬ ಅವಹೇಳನವನ್ನೇ ಹೊದ್ದು ಬದುಕುತ್ತಿರುವ ದಲಿತರಂತೆಯೇ ಭರತವರ್ಷದ ಆದಿವಾಸಿಗಳ ತಬ್ಬಲಿತನಕ್ಕೂ ಕೊನೆ ಇಲ್ಲ. ಕಳೆದ ವಾರ ಗುಜರಾತಿನ ನರ್ಮದಾ ಕಣಿವೆಯ ಸಾವಿರಾರು ಆದಿವಾಸಿ ಕುಟುಂಬಗಳು ಒಲೆ ಹಚ್ಚಲಿಲ್ಲ. ಉಪವಾಸವಿದ್ದು ಸೂತಕ ಆಚರಿಸಿದವು. ಯುವಕರು ತಲೆ ಬೋಳಿಸಿಕೊಂಡರು. ಪ್ರತಿಭಟನೆಯ ಕಪ್ಪು ಬಲೂನುಗಳು ಹಿಂಡು ಹಿಂಡಾಗಿ ಗಗನಕ್ಕೆ ಚಿಮ್ಮಿದವು.

ಈ ಅಡವಿ, ನದಿ, ಝರಿ, ಜಲಪಾತ, ಜಮೀನು, ಬೇಸಾಯಗಳು ತಲೆತಲಾಂತರದಿಂದ ನಮ್ಮನ್ನು ಕಾದಿವೆ. ಇವನ್ನೆಲ್ಲ ನಾಶ ಮಾಡುತ್ತಿರುವಾಗ ನಾವು ಸಂಭ್ರಮ ಆಚರಿಸುವುದಾದರೂ ಹೇಗೆ, ಸಾವನ್ನು ಸಂಭ್ರಮಿಸಲಾದೀತೇ ಎಂಬುದು ಅವರ ಅಳಲು. ನಮ್ಮ ದೈವವಾದ ವರತಾ ಬಾಬಾ ಮಂದಿರದ ಅಸ್ಮಿತೆ ಅಳಿಸಿ ಹಾಕಿ ಸಾಧು ಬೆಟ್ ಎಂದು ಕರೆದು ಅಲ್ಲಿ ಸರ್ದಾರ್ ಪಟೇಲ್ ಪ್ರತಿಮೆ ಸ್ಥಾಪಿಸಲಾಯಿತು ಎನ್ನುವ ಆದಿವಾಸಿಗಳ ಮಾತಿಗೆ ಗ್ರಾಮಪಂಚಾಯಿತಿ ದಸ್ತಾವೇಜುಗಳ ಪುರಾವೆ ಉಂಟು.

ಸ್ವತಂತ್ರ ಭಾರತದ ಒಬ್ಬನೇ ಒಬ್ಬ ನಾಗರಿಕನೂ ಹಸಿದು ಮಲಗಬಾರದು ಎಂಬ ತಾಯಿಮನಸಿನ ಸರ್ದಾರ್ ಪಟೇಲ್ ದೈತ್ಯಪ್ರತಿಮೆಯೂ ಈ ಆದಿವಾಸಿಗಳಿಗಾಗಿ ಮರುಗಿರಬೇಕು. ಚೆಂದದ ಅನಾವರಣ ಉತ್ಸವವನ್ನು ಕೆಡಿಸಿಯಾರು ಎಂದು ಆದಿವಾಸಿ ನಾಯಕರನ್ನು ಹಿಂಡು ಹಿಂಡಾಗಿ ಬಂಧಿಸಿ ಜೈಲಿಗೆ ತಳ್ಳಲಾಯಿತು. ಪ್ರತಿಮೆಗೆ ನಮ್ಮ ವಿರೋಧವಿಲ್ಲ, ಆದರೆ ನಮ್ಮ ಇರವನ್ನೇ ಅಳಿಸಿ ಹಾಕಿದರೆ ಸುಮ್ಮನಿರಲಾದೀತೇ, ವಿನಾಕಾರಣ ನಮಗೆ ನಕ್ಸಲರು ಮತ್ತು ದೇಶದ್ರೋಹಿಗಳ ಹಣೆಪಟ್ಟಿ ಹಚ್ಚಲಾಗುತ್ತಿದೆ ಎಂಬುದು ಆದಿವಾಸಿ ನಾಯಕರ ಆಕ್ರೋಶ.

ಜನಸಮೂಹಗಳ ನಡುವಣ ರಾಜಕೀಯ- ಆರ್ಥಿಕ- ಸಾಮಾಜಿಕ- ಕೋಮುವಾದಿ ಕಂದರಗಳು ಹಿಂದೆಂದಿಗಿಂತಲೂ ಹಿರಿದು ಬಾಯಿ ತೆರೆದಿರುವ ದ್ವೇಷದ ದಿನಗಳಲ್ಲಿ ಜಗತ್ತಿನ ಅತಿ ಎತ್ತರದ ಏಕತೆಯ ಪ್ರತಿಮೆಯನ್ನು ಪ್ರಧಾನಿ ಮೋದಿ ಅನಾವರಣಗೊಳಿಸಿದ್ದಾರೆ. ದೇಶದ ಸಾಮಾಜಿಕ ಏಕತೆಯನ್ನು ಗಂಡಾಂತರಕ್ಕೆ ಒಡ್ಡುವ ಈ ಕಂದರಗಳನ್ನು ಕಿರಿದು ಮಾಡಬೇಕಿತ್ತು. ಆದರೆ ಅವುಗಳನ್ನು ಹಿರಿದು ಮಾಡುವ ಕೆಲಸದಲ್ಲಿ ಬಿಡುವಿಲ್ಲದೆ ತೊಡಗಿದ್ದಾರೆ ಮೋದಿ. ಮಾತು ಮತ್ತು ಕೃತಿಯ ನಡುವಿನ ಈ ಆಡು- ಆನೆಯ ಈ ಪ್ರಜ್ಞಾಪೂರ್ವಕ ಅಂತರ ಬಹು ಕ್ರೂರ ವಿಡಂಬನೆ. ಒಡೆದು ಆಳುವ ನೀತಿ ವಿಜೃಂಭಿಸಿದೆ. ವಿವಿಧತೆಯಲ್ಲಿ ಏಕತೆಯನ್ನು, ಏಕತೆಯಲ್ಲಿ ವಿವಿಧತೆಯನ್ನು ಕಾಣುವ ನೋಟಕ್ಕೆ ಎಳ್ಳುನೀರು ಬಿಡಲಾಗಿದೆ. ಮತ-ಪಂಥ- ಸಿದ್ಧಾಂತ- ಸಂಸ್ಕೃತಿಗಳ ಬಹುತ್ವವನ್ನು ತುಳಿದು ಹಾಕಲು ಹೊರಟವರು ನಿಜದ ಏಕತೆಯನ್ನು ಎಲ್ಲಿಂದ ತಂದಾರು? ಅದು ಅವರ ನಿಜ ಉದ್ದೇಶವೂ ಅಲ್ಲ.

ನರ್ಮದಾ ನದಿ ಕಣಿವೆಯ ಆದಿವಾಸಿ ಜನರ ಬದುಕುಗಳನ್ನು ಬುಡಮೇಲು ಮಾಡಿರುವ ಸರ್ದಾರ್ ಸರೋವರ ಜಲಾಶಯದ ಕ್ರೂರ ಪರಂಪರೆ ನಿಲ್ಲಬೇಕಿತ್ತು. ಆದರೆ ಪಟೇಲರ ಪ್ರತಿಮೆಯ ನಿರ್ಮಾಣದಲ್ಲೂ ಅದು ಮುಂದುವರೆದಿದೆ. ಪ್ರತಿಮೆ ನಿಂತಿರುವ ನೆಲ ಆದಿವಾಸಿಗಳ ಆಸ್ಥೆಯಪವಿತ್ರ ಭೂಮಿ. ಅವರಿಂದ ಕಿತ್ತುಕೊಂಡು ಹೋಟೆಲುಗಳು, ಹೆದ್ದಾರಿಗಳು, ಉದ್ಯಾನಗಳು, ಆಮೋದ- ಪ್ರಮೋದ ಸೌಲಭ್ಯಗಳು ಈ ಜಾಗದಲ್ಲಿ ತಲೆಯೆತ್ತುತ್ತಿವೆ.

ಸರಳತೆ, ವಿನಮ್ರತೆ, ತ್ಯಾಗದ ಗುಣಗಳನ್ನು ಮೈಗೂಡಿಸಿಕೊಂಡ ಪಟೇಲರು ಮೂರು ಸಾವಿರ ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಮ್ಮದೊಂದು ಪ್ರತಿಮೆ ಸ್ಥಾಪನೆಗೆ ನಿಶ್ಚಿತವಾಗಿ ಒಪ್ಪುತ್ತಿರಲಿಲ್ಲ. ಹಸಿವುಮುಕ್ತ ಭಾರತವನ್ನು ಬಯಸಿದ್ದ ಅವರು ಜೀವನಪರ್ಯಂತ ಕಟ್ಟಾ ಕಾಂಗ್ರೆಸ್ಸಿಗರು. ಧರ್ಮದ ದುರ್ಬಳಕೆಯನ್ನು ಸಹಿಸಿದವರಲ್ಲ. ಹಿಂದೂಗಳ ಕುರಿತು ನೆಹರೂಗಿಂತ ಹೆಚ್ಚು ಒಲವಿದ್ದರೂ ಕೋಮುವಾದಿಯಲ್ಲ. ಆರ್‌ಎಸ್‌ಎಸ್‌ ಅನ್ನು ದೇಶಪ್ರೇಮಿ ಸಂಘಟನೆಯೆಂದು ಕರೆದಿದ್ದ ಅವರು, ಗಾಂಧೀ ಹತ್ಯೆಯ ನಂತರ ಆ ಸಂಘಟನೆಯನ್ನು ನಿಷೇಧಿಸಿದವರು. 500ಕ್ಕೂ ಹೆಚ್ಚು ಅರಸೊತ್ತಿಗೆಗಳನ್ನು ಉಕ್ಕಿನ ಹಸ್ತದಿಂದ ಭಾರತ ಒಕ್ಕೂಟಕ್ಕೆ ಸೇರಿಸಿದ ಕೀರ್ತಿ ಅಂದಿನ ಗೃಹಮಂತ್ರಿ ಮತ್ತು ಉಪಪ್ರಧಾನಮಂತ್ರಿ ಸರ್ದಾರ್ ಪಟೇಲರದು. ಸ್ವಾತಂತ್ರ್ಯಾನಂತರ ದಶಕಗಳ ಕಾಲ ದೇಶವನ್ನು ಆಳಿತು ನೆಹರೂ- ಗಾಂಧಿ ಮನೆತನ. ಮನೆತನದ ಹೊರಗಿನ ಕಾಂಗ್ರೆಸ್ ಮಹಾರಥಿಗಳನ್ನು ಅಡಿಟಿಪ್ಪಣಿಗಳಿಗೆ ತುಳಿದು ಹಾಕಿದ್ದು ಈ ಮನೆತನ ತಿಳಿದೂ ತಿಳಿದೂ ಎಸಗಿದ ಅಕ್ಷಮ್ಯ ಅಪರಾಧ. ಸ್ವಾತಂತ್ರ್ಯ ಹೋರಾಟದ ಮೇರುಗಾಥೆಯಿಂದ ಹೊರಗುಳಿದಿದ್ದ ಆರ್‌ಎಸ್‌ಎಸ್ ಆ ಪರಂಪರೆಯನ್ನು ಎರವಲು ಪಡೆಯದೆ ವಿಧಿಯಿರಲಿಲ್ಲ. ದೇಶವನ್ನು ಕಾಂಗ್ರೆಸ್‌ಮುಕ್ತ ಆಗಿಸಲು ಹೊರಟಿರುವ ಮೋದಿ- ಅಮಿತ್ ಶಾ, ಅದೇ ಕಾಂಗ್ರೆಸ್‌ನ ಕಟ್ಟಾಳುಗಳನ್ನು ತಮ್ಮವರನ್ನಾಗಿಸಿಕೊಳ್ಳಲು ಹೊರಟಿದ್ದಾರೆ. ಈ ಸರಣಿಯಲ್ಲಿ ಅತಿ ಎತ್ತರದ ವ್ಯಕ್ತಿತ್ವ ಸರ್ದಾರ್ ಪಟೇಲರದು. ‘ಏಕತೆಯ ಈ ಪ್ರತಿಮೆ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭಭಾಯ್‌ ಪಟೇಲ್ ಅವರದಲ್ಲ, ಅದು ನರೇಂದ್ರ ಮೋದಿ, ಅಮಿತ್ ಶಾ, ಮೋಹನ್ ಭಾಗವತ್, ಕೆ.ಬಿ. ಹೆಡ್ಗೇವಾರ್, ಎಂ.ಎಸ್. ಗೋಳ್ವಾಲ್ಕರ್, ವಿ.ಡಿ. ಸಾವರ್ಕರ್‌ ಹಾಗೂ ನಾಥುರಾಮ ಗೋಡ್ಸೆ ಅವರಿಗೆಂದು ನಿರ್ಮಿಸಲಾಗಿರುವ ಸ್ಮಾರಕ’ ಎಂಬ ಸೃಜನಶೀಲ ಲೇಖಕ, ಅಂಕಣಕಾರ ರುಚಿರ್ ಜೋಷಿ ಮಾತುಗಳಲ್ಲಿ ಅರ್ಥವಿದೆ.

1949ರ ನವೆಂಬರ್‌ 25ರಂದು ಸಂಸತ್ತಿನಲ್ಲಿ ತಮ್ಮ ಕಟ್ಟಕಡೆಯ ಭಾಷಣ ಮಾಡಿದ ಬಾಬಾಸಾಹೇಬ ಅಂಬೇಡ್ಕರ್, ‘ಸಮಾನತೆ ಇಲ್ಲದೆ ಏಕತೆ ಅಸಾಧ್ಯ’ ಎಂದು ಪ್ರಖರವಾಗಿ ಪ್ರತಿಪಾದಿಸಿದ್ದರು. ‘ಸಾಮಾಜಿಕ ಜನತಂತ್ರದ ಅಡಿಪಾಯ ಇಲ್ಲದೆ ರಾಜಕೀಯ ಜನತಂತ್ರ ಬದುಕಿ ಬಾಳುವುದು ಅಸಾಧ್ಯ’ ಎಂದಿದ್ದರು.

‘ಸ್ವಾತಂತ್ರ್ಯ, ಸಮಾನತೆ ಹಾಗೂ ಸೋದರಭಾವಗಳನ್ನು ಮೂಲ ತತ್ವಗಳೆಂದು ಒಪ್ಪಿ ಬದುಕುವುದೇ ಸಾಮಾಜಿಕ ಜನತಂತ್ರ. ಸೋದರಭಾವ ಇಲ್ಲದ ಸ್ವಾತಂತ್ರ್ಯವು ಹಲವರಿಗಿಂತ ಕೆಲವರೇ ಶ್ರೇಷ್ಠರು ಎಂದು ಸಾಧಿಸುತ್ತದೆ. ಭಾರತೀಯ ಸಮಾಜದಲ್ಲಿ ಸಮಾನತೆ ಎನ್ನುವುದು ಸಾರಾಸಗಟಾಗಿ ಗೈರುಹಾಜರಾಗಿದೆ. 1950ರ ಜನವರಿ 26ರಂದು ಸ್ವತಂತ್ರ ಭಾರತದ ದಟ್ಟ ವೈರುಧ್ಯಗಳ ಬದುಕಿಗೆ ನಾವು ಅಡಿ ಇಡಲಿದ್ದೇವೆ. ರಾಜಕಾರಣದಲ್ಲಿ ಸಮಾನತೆ, ಸಾಮಾಜಿಕ ಹಾಗೂ ಆರ್ಥಿಕ ಬದುಕಿನಲ್ಲಿ ಅಸಮಾನತೆ ಮುಂದುವರೆಯಲಿದೆ. ಒಬ್ಬ ವ್ಯಕ್ತಿ-ಒಂದು ಮತ- ಒಂದು ಮೌಲ್ಯ ಎಂಬ ತತ್ವವನ್ನು ರಾಜಕಾರಣದಲ್ಲಿ ಗುರುತಿಸಲಿದ್ದೇವೆ. ಸಾಮಾಜಿಕ- ಆರ್ಥಿಕ ಬದುಕಿನಲ್ಲಿ ಈ ಮೌಲ್ಯದ ನಿರಾಕರಣೆಯನ್ನು ಮುಂದುವರೆಸಲಿದ್ದೇವೆ. ಈ ಅಸಮಾನತೆಯನ್ನು ಬಹುಕಾಲ ಮುಂದುವರೆಸಿದರೆ ರಾಜಕೀಯ ಜನತಂತ್ರ ಗಂಡಾಂತರಕ್ಕೆ ಸಿಲುಕಲಿದೆ. ಈ ವೈರುಧ್ಯವನ್ನು ಆದಷ್ಟು ಶೀಘ್ರ ನಿವಾರಿಸದೆ ಹೋದರೆ ಅಸಮಾನತೆಯ ಸಂಕಟಕ್ಕೆ ಗುರಿಯಾಗಿರುವವರು ರಾಜಕೀಯ ಜನತಂತ್ರದ ನಿರ್ಮಿತಿಯನ್ನು ಸಿಡಿಸಿ ಕೆಡವಲಿದ್ದಾರೆ.

ಎಲ್ಲ ಭಾರತೀಯರು ಒಂದು ಎಂಬ ಸೋದರಭಾವ ಇಲ್ಲದೆ ಸಾಮಾಜಿಕ ಬದುಕು ಗಟ್ಟಿಯಾಗುವುದಿಲ್ಲ, ಅದರಲ್ಲಿ ಏಕತೆ ಮೂಡುವುದಿಲ್ಲ. ಸಾಮಾಜಿಕ ಮತ್ತು ಮನೋವೈಜ್ಞಾನಿಕ ಗ್ರಹಿಕೆಯಲ್ಲಿ ನಾವು ಇನ್ನೂ ಒಂದು ದೇಶ ಆಗಿಲ್ಲ ಎಂಬುದನ್ನು ಎಷ್ಟು ಬೇಗ ಅರಿತರೆ ಅಷ್ಟು ಒಳ್ಳೆಯದು. ಆಗ ಮಾತ್ರವೇ ದೇಶವಾಗುವ ಅಗತ್ಯ ಕುರಿತು ಆಲೋಚಿಸುತ್ತೇವೆ ಮತ್ತು ಆ ಗುರಿಯ ಈಡೇರಿಕೆಗೆ ಮಾರ್ಗೋಪಾಯಗಳನ್ನು ಗಂಭೀರವಾಗಿ ಅರಸುತ್ತೇವೆ. ಈ ಗುರಿಯ ಈಡೇರಿಕೆ ಬಹು ಕಠಿಣ. ಸಂಯುಕ್ತ ಗಣರಾಜ್ಯಗಳಿಗಿಂತ (ಯುನೈಟೆಡ್ ಸ್ಟೇಟ್ಸ್ ಅಫ್ ಅಮೆರಿಕ) ಕಠಿಣ. ಅಲ್ಲಿ ಜಾತಿಯ ಸಮಸ್ಯೆ ಇರಲಿಲ್ಲ. ಭಾರತದಲ್ಲಿ ಜಾತಿಗಳಿವೆ. ಸಾಮಾಜಿಕ ಬದುಕಿನಲ್ಲಿ ಪ್ರತ್ಯೇಕತೆಯ ದೂರವನ್ನು, ಪರಸ್ಪರ ಅಸೂಯೆ ಮತ್ತು ವೈರತ್ವವನ್ನು ಮೂಡಿಸುವ ಕಾರಣ ಜಾತಿಗಳು ಅಪ್ಪಟ ದೇಶವಿರೋಧಿಗಳು. ವಾಸ್ತವದಲ್ಲಿಯೂ ನಾವು ದೇಶ ಆಗಬೇಕಿದ್ದರೆ ನಾವು ಈ ಕಷ್ಟಗಳನ್ನು ದಾಟಲೇಬೇಕಿದೆ. ನಾವು ನಿಜ ಅರ್ಥದಲ್ಲಿ ದೇಶವಾಗದೆ ಸೋದರಭಾವ ಮೂಡುವುದಿಲ್ಲ. ಸೋದರಭಾವ ಇಲ್ಲದ ಸಮಾನತೆ ಮತ್ತು ಸ್ವಾತಂತ್ರ್ಯಕ್ಕೆ ಯಾವ ಅರ್ಥವೂ ಇಲ್ಲ’ ಎಂದಿದ್ದರು. ಈ ಮಾತುಗಳು ಇಂದಿನ ಭಾರತದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ವಾಸ್ತವ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು