ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡುಮನಸ್ಸಿನ ನಿಜರೂಪ ತೆರೆದಿಟ್ಟ ಅಭಿಯಾನ

Last Updated 22 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

#MeToo ಅಭಿಯಾನ ಏನನ್ನು ಸಾಧಿಸಿತು ಎಂಬ ಪ್ರಶ್ನೆ ಕೇಳಿದರೆ ಅದಕ್ಕೆ ಅನೇಕ ಉತ್ತರಗಳಿರಬಹುದು. ಲೈಂಗಿಕ ಶೋಷಣೆಯ ವಿವಿಧ ಸ್ವರೂಪಗಳನ್ನು ಅದು ತೆರೆದಿಟ್ಟಿತು. ಶೋಷಕರ ಮುಖವಾಡಗಳನ್ನು ಕಳಚಿತು ಎಂಬುದೆಲ್ಲಾ ಉತ್ತರಗಳೇ. ಇವೆಲ್ಲಕ್ಕಿಂತ ಮುಖ್ಯವಾದುದು ಈ ಆಂದೋಲನ ವಿಶ್ವವ್ಯಾಪಿಯಾಗಿ ಗಂಡು ಮನಸ್ಸಿನ ನಿಜ ರೂಪವನ್ನು ತೆರೆದಿಟ್ಟದ್ದು.

ಎರಡು ವರ್ಷಗಳ ಹಿಂದೆ ಈ ಆಂದೋಲನ ಆರಂಭವಾದ ಹೊತ್ತಿನಲ್ಲಿ ತಾವು ಅನುಭವಿಸಿದ ಲೈಂಗಿಕ ಶೋಷಣೆ ಕುರಿತು ಬರೆದಿದ್ದ ಲಾರಾ ಗಿಯಾನಿನೋ ತನ್ನ ಮೇಲೆ ನಡೆದ ಆನ್‌ಲೈನ್ ದಾಳಿಯ ತೀವ್ರತೆಯನ್ನು ವಿವರಿಸುವುದು ಹೀಗೆ: ‘ನಾನು ‘ಮೀ-ಟೂ’ ಎಂದು ಹೇಳಲೇಬಾರದಿತ್ತು. ನಾನು ಬಾಯಿ ಮುಚ್ಚಿಕೊಂಡಿರಬೇಕಿತ್ತು ಅಂದುಕೊಂಡೆ’. ಭಾರತದಲ್ಲಿ ಮೀ-ಟೂ ಎಂದವರ ಸ್ಥಿತಿಯೂ ಇದಕ್ಕಿಂತ ಭಿನ್ನವಲ್ಲ. ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತಂತೆ ಬರುತ್ತಿರುವ ಪ್ರತಿಕ್ರಿಯೆಗಳನ್ನು ನೋಡಿದರೆ ತನುಶ್ರೀ ದತ್ತಾ ಅವರಿಂದ ಆರಂಭಿಸಿ ಶ್ರುತಿ ಹರಿಹರನ್ ತನಕದ ಎಲ್ಲರೂ ‘ಬಾಯಿ ಮುಚ್ಚಿಕೊಂಡಿರಬೇಕಿತ್ತು’ ಎಂದು ಭಾವಿಸಿದ್ದರೆ ಅದರಲ್ಲಿ ಆಶ್ಚರ್ಯ ಪಡುವಂಥದ್ದೇನೂ ಇಲ್ಲ.

ಎಂ.ಜೆ. ಅಕ್ಬರ್ ತರಹದ ಪ್ರಭಾವಶಾಲಿಗಳು ರಾಜೀನಾಮೆ ಕೊಡುವಂಥ ಪರಿಸ್ಥಿತಿ ಉದ್ಭವಿಸಿದ್ದರೆ ಅದು ಅವರ ಮೇಲೆ ಆರೋಪ ಹೊರಿಸಿದವರ ಅದೃಷ್ಟ ಮಾತ್ರ ಅನ್ನಿಸುತ್ತದೆ. ಸಾಂಸ್ಥಿಕ ವ್ಯವಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದವರು ರಾಜೀನಾಮೆ ಕೊಟ್ಟದ್ದು ಕಾನೂನಾತ್ಮಕ ಅನಿವಾರ್ಯತೆಗಳಿಂದಲೇ ಹೊರತು ನೈತಿಕ ಕಾರಣಗಳಿಗಾಗಿ ಅಲ್ಲ ಎಂಬುದನ್ನಿಲ್ಲಿ ಮರೆಯಲಾಗದು.

ತನುಶ್ರೀಯಿಂದ ಶ್ರುತಿ ಹರಿಹರನ್ ತನಕದ ಸಿನಿಮಾ ತಾರೆಗಳಿಗೆ ಈ ಅದೃಷ್ಟವೂ ಇಲ್ಲ. ಏಕೆಂದರೆ ಅವರು ಕೆಲಸ ಮಾಡುತ್ತಿರುವ ಉದ್ಯಮದಲ್ಲಿ ‘ಅದೆಲ್ಲಾ ಮಾಮೂಲು. ಅದರಲ್ಲೇನು ವಿಶೇಷ’ ಎಂದು ಹೆಚ್ಚಿನವರು ಪ್ರಶ್ನಿಸುವಂಥ ಮನೋಭಾವವೊಂದು ವ್ಯಾಪಕವಾಗಿದೆ. ತನುಶ್ರೀ, ಸಂಗೀತ, ಶ್ರುತಿ ‘ಇದೇಕೆ ಮಾಮೂಲು ಸಂಗತಿಯಾಗಬೇಕು’ ಎಂದು ಪ್ರಶ್ನಿಸುತ್ತಿದ್ದಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಲೂ ನಾವು ಮುಂದಾಗುವುದಿಲ್ಲ. ಇದು ಸಂಭವಿಸಿದಾಗಲೇ ಏಕೆ ಹೇಳಲಿಲ್ಲ? ಆಗ ಏಕೆ ದೂರು ಕೊಡಲಿಲ್ಲ? ಇದೊಂದು ಬ್ಲ್ಯಾಕ್‌ಮೇಲ್ ತಂತ್ರ ಎಂಬ ತೀರ್ಮಾನಗಳಿಗೆ ಬಂದು ಚರ್ಚಿಸುವ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುತ್ತೇವೆ.

ಇದು #MeToo ಅಭಿಯಾನಕ್ಕೆ ಮಾತ್ರ ಸೀಮಿತವಾಗಿರುವ ಸಂಗತಿಯಲ್ಲ. ವರದಕ್ಷಿಣೆ ನಿಷೇಧ ಕಾಯ್ದೆ, ಕೌಟುಂಬಿಕ ದೌರ್ಜನ್ಯ ನಿಷೇಧ ಕಾಯ್ದೆ ಇಂಥವುಗಳ ಸುತ್ತ ನಡೆಯುವ ಸಾಮಾಜಿಕ ಜಾಲತಾಣಗಳ ಚರ್ಚೆಗಳೂ ಹೆಚ್ಚು ಕಡಿಮೆ ಇದೇ ಹಾದಿಯಲ್ಲಿರುತ್ತವೆ. ಅನೇಕ ಕಾನೂನುಗಳ ದುರುಪಯೋಗ ನಡೆಯುತ್ತದೆ. ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ಕಾನೂನುಗಳನ್ನೂ ಲಂಚ ಪಡೆಯುವುದಕ್ಕೋಸ್ಕರವೇ ಅಪಬಳಕೆ ಮಾಡಲಾಗುತ್ತದೆ. ಪೊಲೀಸ್ ಠಾಣೆಗೆ ದೂರು ಕೊಡಲು ಅಥವಾ ಆರೋಪಿಯಾಗಿ ಹೋದರೂ ಲಂಚ ಬಿಚ್ಚಲೇಬೇಕಾದ ಅನಿವಾರ್ಯತೆ ಇದೆ. ಇವೆಲ್ಲಾ ನಿತ್ಯದ ಮತ್ತು ಬಹುಪಾಲು ಜನರನ್ನು ಕಾಡುವ ಸಂಗತಿಗಳು. ಆದರೆ ಅವುಗಳ ಬಗ್ಗೆ ಯಾವತ್ತೂ ಚರ್ಚಿಸದವರು ಕೌಟುಂಬಿಕ ದೌರ್ಜನ್ಯ ಕಾಯ್ದೆಯ ದುರ್ಬಳಕೆ, ವರದಕ್ಷಿಣೆ ನಿಷೇಧ ಕಾಯ್ದೆಯ ದುರ್ಬಳಕೆಯ ಬಗ್ಗೆ ವಾಚಾಳಿಗಳಾಗುತ್ತಾರೆ.

ಮಹಿಳೆಯರು ತಮ್ಮ ವಿರುದ್ಧ ನಡೆದ ಲೈಂಗಿಕ ಶೋಷಣೆಯನ್ನು ತಡೆಯುವಲ್ಲಿ ಕಾನೂನುಗಳು ವಿಫಲವಾದವು, ಸಮಾಜ ವಿಫಲವಾಯಿತು. ಮುಖ್ಯವಾಹಿನಿಯ ಮಾಧ್ಯಮಗಳೂ ಗಮನಿಸಲಿಲ್ಲ ಅಥವಾ ತಮ್ಮ ಧ್ವನಿಯನ್ನು ಆಲಿಸಲು ಸಿದ್ಧವಿಲ್ಲ ಎಂಬ ಕಾರಣಕ್ಕೆ ಸಾಮಾಜಿಕ ಜಾಲತಾಣಗಳ ಮೊರೆ ಹೋದರು. ಹೇಳಿಕೊಳ್ಳುವುದಕ್ಕೆ ಒಂದಾದರೂ ವೇದಿಕೆಯಿದೆಯಲ್ಲ ಎಂಬುದು ಅವರ ಭಾವನೆಯಾಗಿರಬಹುದು. #MeToo ಟ್ರೆಂಡ್ ಆಯಿತು. ಆದರೆ ಆಮೇಲೆ ನಡೆದದ್ದೇನು? ಇದಕ್ಕೆ ಆಗಲೇ ಲಾರಾ ಗಿಯಾನಿನೋ ಉತ್ತರ ಕೊಟ್ಟಿದ್ದಾರೆ- ‘ಬಾಯಿ ಮುಚ್ಚಿಕೊಂಡಿದ್ದರೆ ಒಳ್ಳೆಯದಿತ್ತು’.

ವಿಶ್ವವ್ಯಾಪಿಯಾಗಿ ಒಟ್ಟು ಇಂಟರ್ನೆಟ್ ಬಳಕೆದಾರರಲ್ಲಿರುವ ಮಹಿಳೆಯರ ಪ್ರಮಾಣ ಶೇಕಡ 44 ಮಾತ್ರ ಎಂದು 2017ರ ಯುನಿಸೆಫ್ ವರದಿ ಹೇಳುತ್ತದೆ. ಭಾರತದಲ್ಲಿ ಈ ಪ್ರಮಾಣ ಶೇ 29 ಮಾತ್ರ. ಭಾರತದ ಸಾಮಾಜಿಕ ಜಾಲತಾಣ ಬಳಕೆದಾರರಲ್ಲಿ ಶೇ 24ರಷ್ಟು ಮಾತ್ರ ಎಂದು ‘ವಿ ಆರ್ ಸೋಷಿಯಲ್’ ಎಂಬ ಯುನೈಟೆಡ್ ಕಿಂಗ್‌ಡಂನ ಸಂಸ್ಥೆಯ ವರದಿ ಹೇಳುತ್ತದೆ. ಇರುವ ಮಹಿಳೆಯರ ಸಂಖ್ಯೆಯ ಪ್ರಮಾಣವೇ ಕಡಿಮೆ. ಅಂಥದ್ದರಲ್ಲಿ ಅವರು ಕಹಿಯಾದ ಸತ್ಯಗಳನ್ನು ಹೇಳಿ ಜಯಿಸಿಕೊಳ್ಳುವುದು ಮತ್ತೂ ಕಷ್ಟ ಎಂಬುದು #MeToo ಅಭಿಯಾನಕ್ಕೆ ಬರುತ್ತಿರುವ ಗಂಡು ಮನಸ್ಸಿನ ಪ್ರತಿಕ್ರಿಯೆಗಳೇ ಹೇಳುತ್ತಿವೆ.

ದುರದೃಷ್ಟವಶಾತ್ ಈ ಬಗೆಯ ಪ್ರತಿಕ್ರಿಯೆಗಳು ಕೇವಲ #MeToo ಪ್ರಕರಣಗಳಿಗೆ ಸೀಮಿತವಾದುದೇನೂ ಅಲ್ಲ. ಆನ್‌ಲೈನ್ ಜಗತ್ತಿನಲ್ಲಿ ಹೆಣ್ಣು ಎಂಬ ಗುರುತಿನೊಂದಿಗೆ ಏನು ಮಾಡಿದರೂ ಈ ಬಗೆಯ ಕಿರುಕುಳವನ್ನು ಅನುಭವಿಸಲೇಬೇಕು ಎಂಬುದು ಈಗಾಗಲೇ ಸಾಬೀತಾಗಿದೆ. ಪತ್ರಕರ್ತೆಯರು, ರಾಜಕಾರಣ ಮತ್ತು ಸಾಮಾಜಿಕ ಸಂಘಟನೆಗಳಲ್ಲಿರುವ ಮಹಿಳೆಯರು ಸಾಮಾಜಿಕ ಜಾಲತಾಣಗಳಲ್ಲಿದ್ದರೆ, ಮುಖ್ಯವಾಹಿನಿಯ ಅಭಿಪ್ರಾಯಕ್ಕಿಂತ ಭಿನ್ನವಾದುದನ್ನು ಮಂಡಿಸಿದರೆ ಅತ್ಯಾಚಾರದ ಬೆದರಿಕೆ ಎಂಬುದು ಈ ಸಾಮಾನ್ಯ ವಿಚಾರವಾಗಿಟ್ಟಿದೆ. ಹೀಗೆ ಬೆದರಿಕೆ ಒಡ್ಡುವವರು ಟ್ರೋಲ್‌ಗಳೇ ಆಗಿರಬೇಕೆಂದೇನೂ ಅಲ್ಲ. ಹೆಸರು, ವಿಳಾಸ, ದೂರವಾಣಿ ಸಂಖ್ಯೆ ಮತ್ತು ತಾವು ಕೆಲಸ ಮಾಡುವ ಕಂಪನಿಯ ವಿಳಾಸಗಳನ್ನೂ ಹೊಂದಿರುವ, ಮುಖತಃ ಸಿಕ್ಕರೆ ಅತ್ಯಂತ ಸುಸಂಸ್ಕೃತವಾಗಿ ಮಾತನಾಡಬಲ್ಲವರೇ ಆಗಿರುತ್ತಾರೆ ಎಂಬುದು ಮತ್ತೊಂದು ಚೋದ್ಯ. ತನುಶ್ರೀ ದತ್ತಾ ಮತ್ತು ಶ್ರುತಿ ಹರಿಹರನ್ ಇಬ್ಬರೂ ತಾವು ಕೆಲಸ ಮಾಡುತ್ತಿರುವ ಉದ್ಯಮದಲ್ಲಿ ಸಾಕಷ್ಟು ಪ್ರಖ್ಯಾತರಾಗಿರುವ ನಾಯಕ ನಟರ ಮೇಲೆ ಲೈಂಗಿಕ ಕಿರುಕುಳದ ಆರೋಪ ಹೊರಿಸಿದರು. ತಾವು ಕಿರುಕುಳ ಅನುಭವಿಸಿ ಬಹು ಕಾಲವಾದ ನಂತರ ಮಾಡಿದ ಆರೋಪವಿದು. ಸಿನಿಮಾ ರಂಗದಲ್ಲಿ ನಡೆಯುವ ಲೈಂಗಿಕ ಶೋಷಣೆಯ ವಿಚಾರ ಅನೇಕ ಕುಟುಕು ಕಾರ್ಯಾಚರಣೆಗಳ ಮೂಲಕ ಈಗಾಗಲೇ ಹೊರಬಂದಿದೆ. ಅನೇಕ ಚಲನಚಿತ್ರ ತಾರೆಯವರ ಜೀವನ ಚರಿತ್ರೆ, ಆತ್ಮಕಥೆಗಳಲ್ಲಿಯೂ ಇಂಥ ಪ್ರಕರಣಗಳ ಪಟ್ಟಿಯಿದೆ. ಹಾಗೆಯೇ ‘ಸಿನಿಮಾ ಕ್ಷೇತ್ರದಲ್ಲಿ ಇಂಥದ್ದೆಲ್ಲಾ ಮಾಮೂಲು’ ಎಂಬ ‘ಸಾಮಾನ್ಯ ಜ್ಞಾನ’ವೂ ಇದೆ. ಇಂಥದ್ದೊಂದು ವಾತಾವರಣದಲ್ಲಿ ಸಿನಿಮಾ ನಟಿ ಲೈಂಗಿಕ ಕಿರುಕುಳದ ಆರೋಪ ಮಾಡಿದಾಗ ಅದಕ್ಕೆ ಪ್ರಬುದ್ಧ ಸಮಾಜವೊಂದು ಸಂವೇದನಾಶೀಲವಾಗಿ ಪ್ರತಿಕ್ರಿಯಿಸಬೇಕಿತ್ತು ಎಂದು ನಿರೀಕ್ಷಿಸುವುದರಲ್ಲಿ ತಪ್ಪಿದೆಯೇ?

ಸಾಮಾಜಿಕ ಜಾಲತಾಣಗಳಲ್ಲಿರುವ ಹೆಚ್ಚಿನವರು ಸಂವೇದನಾಶೀಲತೆಯನ್ನು ಕಳೆದುಕೊಂಡಂತೆ ಆರ್ಭಟಿಸಿದ್ದು ಈ ತಾಣಗಳು ಗಂಡು ಮನಸ್ಸಿನ ಆಡೊಂಬಲವಾಗಿರುವುದನ್ನು ಸೂಚಿಸಿದವು. ಶ್ರುತಿ ಹರಿಹರನ್ ಪ್ರಕರಣದಲ್ಲಿ ಮುಖ್ಯವಾಹಿನಿಯ ಮಾಧ್ಯಮಗಳಲ್ಲೂ ಇದು ಪ್ರತಿಫಲಿಸಿತು. ಇನ್ನೂ ದುರದೃಷ್ಟಕರ ಸಂಗತಿಯೆಂದರೆ ನಿರ್ಭಯಾ ಪ್ರಕರಣ ನಡೆದಾಗ ಅತ್ಯಾಚಾರಿಗಳನ್ನು, ಲೈಂಗಿಕ ಶೋಷಕರನ್ನು ಗಲ್ಲಿಗೇರಿಸಬೇಕೆಂದು ಗಂಟಲು ಹರಿದುಕೊಳ್ಳುತ್ತಿದ್ದವರೇ ತಮ್ಮ ಲೈಂಗಿಕ ಶೋಷಣೆಯ ಕಥೆ ಹೇಳಿದವರ ಮೇಲೆ ಅತ್ಯಾಚಾರಿಗಳಂತೆ ಏರಿ ಹೋದರು. ಇಬ್ಬರು ನಾಯಕ ನಟರ ದೈವಭಕ್ತಿಯಿಂದ ಆರಂಭಿಸಿ ರಾಜಕೀಯ ಆಯ್ಕೆಗಳ ತನಕ ಎಲ್ಲವೂ ಅವರ ನಿರಪರಾಧಿತ್ವದ ಸಂಕೇತಗಳಂತೆಯೂ ಆರೋಪ ಹೊರಿಸಿದವರ ಹೆಣ್ತನವೇ ಅವರ ಆರೋಪ ಸುಳ್ಳಾಗಿರುವುದಕ್ಕೆ ಸಾಕ್ಷಿ ಎಂಬಂತೆಯೂ ಬಿಂಬಿಸಲಾಯಿತು.

ಎಲ್ಲಾ ಸಂಘಟಿತ ಉದ್ಯಮಗಳಿಗೂ ಅನ್ವಯಿಸುವ ವಿಶಾಖಾ ಮಾರ್ಗದರ್ಶಿ ಸೂತ್ರಗಳ ಅನ್ವಯ ಇರಲೇಬೇಕಾದ ಆಂತರಿಕ ದೂರು ಸಮಿತಿಯನ್ನು ಯಾವ ಸಿನಿಮಾ ನಿರ್ಮಾಣ ಕಂಪನಿಯೂ ಹೊಂದಿಲ್ಲ ಎಂಬ ವಿಚಾರವನ್ನು ಯಾರೂ ಎತ್ತಲಿಲ್ಲ. ಅಂದೇ ದೂರು ಕೊಡಬೇಕಾಗಿತ್ತು ಎಂಬ ಕಾನೂನಿನ ವಾದ ಮಂಡಿಸುವವರಿಗೂ ಇದು ಹೊಳೆಯಲಿಲ್ಲ. ಅಷ್ಟೇಕೆ ಈ ಮಹಿಳೆಯರಿಬ್ಬರಿಗೆ ಸಂಶಯದ ಲಾಭವನ್ನು ಕೊಡುವುದಕ್ಕೂ ಒಪ್ಪಲಾರದವರೇ ಹೆಚ್ಚಿದ್ದರು. ಇವೆಲ್ಲವೂ ಕೊನೆಗೂ ಸೂಚಿಸುವುದು ಅದನ್ನೇ. ನಾವು ಬೀದಿಗಳನ್ನು ಮಹಿಳೆಯರಿಗೆ ಸುರಕ್ಷಿತವಾಗಿಡುವುದರಲ್ಲಿ ಸೋತಂತೆ, ಕೆಲಸ ಸ್ಥಳಗಳನ್ನು ಲಿಂಗ ಅಸಮಾನತೆಯಿಂದ ಮುಕ್ತಗೊಳಿಸುವುದಕ್ಕೆ ಸೋತಂತೆ, ಸಾಮಾಜಿಕ ಜಾಲತಾಣಗಳನ್ನು ಮಹಿಳೆಯ ಮುಕ್ತ ಅಭಿವ್ಯಕ್ತಿಗೆ ನಿಲುಕಲಾರದ ಸ್ಥಳವನ್ನಾಗಿ ಮಾಡಿಬಿಟ್ಟಿದ್ದೇವೆ ಅಷ್ಟೇ. ಆದರೂ ಮಹಿಳೆಯರು ಸೋತು ಗೆದ್ದಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಹುಸಂಖ್ಯೆಯಲ್ಲಿರುವ ಗಂಡಸರು ನಿಜಕ್ಕೂ ಎಂಥಾ ಮನಃಸ್ಥಿತಿಯವರು ಎಂದು ಅವರ ತಾಯಿ, ಅಕ್ಕ, ತಂಗಿ, ಪತ್ನಿ ಮತ್ತು ಮಕ್ಕಳೆದುರೇ ಅನಾವರಣಗೊಳಿಸಿದ್ದಾರೆ. ಅಷ್ಟರಮಟ್ಟಿಗೆ #MeToo ಯಶಸ್ವಿಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT