ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ಗೆ ಸಿಗುತ್ತಾ ವಿಮೆ ಮೊತ್ತ?

Last Updated 29 ಮಾರ್ಚ್ 2020, 20:00 IST
ಅಕ್ಷರ ಗಾತ್ರ
ADVERTISEMENT
""

ಜೀವ ವಿಮೆ (ಲೈಫ್ ಇನ್ಶುರೆನ್ಸ್) ಕಂಪನಿಗಳು ಕೋವಿಡ್- 19ನಿಂದ ಮೃತಪಟ್ಟವರಿಗೆ ವಿಮೆ ಪರಿಹಾರ ಮೊತ್ತ (ಸಮ್ ಅಷೂರ್ಡ್) ನೀಡುತ್ತವೆಯೇ. ಜನರಲ್ ಲೈಫ್ ಇನ್ಶುರೆನ್ಸ್ ಮತ್ತು ಟರ್ಮ್ ಲೈಫ್ ಇನ್ಶುರೆನ್ಸ್‌ ಪಾಲಿಸಿಗಳನ್ನು ಈಗಾಗಲೇ ಪಡೆದಿರುವ ಗ್ರಾಹಕರು ಕೇಳುತ್ತಿರುವ ಪ್ರಶ್ನೆ ಇದು. ಇದಕ್ಕೆ ಸ್ಪಷ್ಟ ಉತ್ತರ ನೀಡುವ ಜತೆಗೆ ಹೊಸದಾಗಿ ಲೈಫ್ ಇನ್ಶುರೆನ್ಸ್ ಪಾಲಿಸಿ ಖರೀದಿಸಬೇಕು ಎಂದು ತೀರ್ಮಾನಿಸಿರುವವರು ಸದ್ಯ ಏನು ಮಾಡಬೇಕು ಎನ್ನುವ ಬಗ್ಗೆ ಮಾಹಿತಿ ಇಲ್ಲಿದೆ.

ಈಗಾಗಲೇ ಪಾಲಿಸಿ ಇದ್ದರೆ ಕವರೇಜ್ ಲಭ್ಯ: ಜನರಲ್ ಲೈಫ್ ಇನ್ಶುರೆನ್ಸ್‌ (ಜೀವ ವಿಮೆ) ಅಥವಾ ಟರ್ಮ್ ಲೈಫ್ ಇನ್ಶುರೆನ್ಸ್‌ ಪಾಲಿಸಿಗಳನ್ನು ಈಗಾಗಲೇ ಪಡೆದಿರುವ ಗ್ರಾಹಕರಿಗೆ ಸಮ್ ಅಷೂರ್ಡ್ ಕವರೇಜ್‌ನಲ್ಲಿ ಯಾವುದೇ ತೊಂದರೆಯಾಗುವುದಿಲ್ಲ.

ವ್ಯಕ್ತಿಯ ಆಕಸ್ಮಿಕ ಸಾವಿನಿಂದ ಆತನ ಕುಟುಂಬಕ್ಕೆ ಹಣಕಾಸಿನ ತೊಂದರೆ ಎದುರಾಗಬಾರದು ಎನ್ನುವ ಕಾರಣಕ್ಕೆ ಲೈಫ್ ಇನ್ಶುರೆನ್ಸ್‌ ಅಥವಾ ಟರ್ಮ್ ಲೈಫ್ ಇನ್ಶುರೆನ್ಸ್‌ ಪಡೆದುಕೊಳ್ಳಲಾಗುತ್ತದೆ. ಒಂದೊಮ್ಮೆ ಲೈಫ್ ಇನ್ಶುರೆನ್ಸ್‌ ಅಥವಾ ಟರ್ಮ್ ಇನ್ಶುರೆನ್ಸ್‌ ಅನ್ನು ಈಗಾಗಲೇ ಪಡೆದಿರುವ ಯಾವುದೇ ವ್ಯಕ್ತಿ ಕೋವಿಡ್-19 ನಿಂದಾಗಿ ಸಾವನ್ನಪ್ಪಿದರೆ ಬೇರೆಯ ಪ್ರಕರಣಗಳಲ್ಲಿ ಸಮ್ ಅಷೂರ್ಡ್ ಮೊತ್ತ ನೀಡುವಂತೆ ಇಲ್ಲೂ ಕೂಡ ಸಮ್ ಅಷೂರ್ಡ್ ಮೊತ್ತವನ್ನು ನಾಮಿನಿಗೆ ( ನಾಮನಿರ್ದೇಶಗೊಂಡಿರುವ ವ್ಯಕ್ತಿಗೆ ) ನೀಡಲಾಗುತ್ತದೆ.

ಉದಾಹರಣೆ: ವ್ಯಕ್ತಿಯೊಬ್ಬ ₹ 1 ಕೋಟಿ ಮೊತ್ತದ ಟರ್ಮ್ ಲೈಫ್ ಇನ್ಶುರೆನ್ಸ್‌ ಪಡೆದಿರುತ್ತಾನೆ ಎಂದಿಟ್ಟುಕೊಳ್ಳೋಣ. ಆ ವ್ಯಕ್ತಿ ವಿಮೆ ಪಾಲಿಸಿಗೆ ಪತ್ನಿಯನು ನಾಮಿನಿಯನ್ನಾಗಿ ಮಾಡಿರುತ್ತಾರೆ ಎಂದು ಭಾವಿಸೋಣ. ಈ ಸಂದರ್ಭದಲ್ಲಿ ಕೋವಿಡ್ ನಿಂದಾಗಿ ಪಾಲಿಸಿ ಪಡೆದಿರುವ ವ್ಯಕ್ತಿ ಆಕಸ್ಮಾತಾಗಿ ಮೃತಪಟ್ಟರೆ ಇನ್ಶುರೆನ್ಸ್‌ ಕಂಪನಿಯು ₹ 1 ಕೋಟಿ ಸಮ್ ಅಷೂರ್ಡ್ ಮೊತ್ತವನ್ನು ಪತ್ನಿಗೆ ನೀಡುತ್ತದೆ.

ಸಾಮಾನ್ಯ ಸಂದರ್ಭಗಳಲ್ಲಿ ಕ್ಲೇಮ್ ಪ್ರಕ್ರಿಯೆ ಹೇಗೆ ಇರುವುದೋ ಅದೇ ರೀತಿ ಕೋವಿಡ್ ಪ್ರಕರಣಗಳಲ್ಲೂ ಇರಲಿದೆ. ಈ ನಡುವೆ ಕೋವಿಡ್ -19 ಕ್ಲೇಮ್ ಪ್ರಕರಣಗಳನ್ನು ಚುರುಕಾಗಿ ಇತ್ಯರ್ಥಪಡಿಸಬೇಕು ಎಂದು ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ ಡಿಎಐ) ಕೂಡ ತಾಕೀತು ಮಾಡಿದೆ.

ಹೊಸದಾಗಿ ಪಾಲಿಸಿ ಖರೀದಿಸುವವರು ಗಮನಿಸಿ: ಹೊಸದಾಗಿ ಟರ್ಮ್ ಲೈಫ್ ಇನ್ಶುರೆನ್ಸ್‌ ಪಡೆಯಲು ತೀರ್ಮಾನಿಸಿರುವವರು ಕೋವಿಡ್ -19 ಸೋಂಕಿಗೆ ಒಳಗಾಗಿದ್ದರೆ ನಿಮ್ಮ ಅರ್ಜಿಯನ್ನು ಇನ್ಶುರೆನ್ಸ್‌ ಕಂಪನಿ ತಿರಸ್ಕರಿಸುವ ಅಥವಾ ತಡೆ ಹಿಡಿಯುವ ಸಾಧ್ಯತೆ ಹೆಚ್ಚಿರುತ್ತದೆ.

ಸದ್ಯಕ್ಕೆ ಪಾಲಿಸಿ ಖರೀದಿಸಬೇಕು ಎನ್ನುವವರು ಇನ್ಶುರೆನ್ಸ್‌ ಅರ್ಜಿಯಲ್ಲಿ ನಿಮ್ಮ ಆರೋಗ್ಯದ ಸ್ಥಿತಿಗತಿಯ ವಾಸ್ತವಿಕ ಮಾಹಿತಿಯನ್ನು ತಪ್ಪಿಲ್ಲದೆ ಒದಗಿಸಬೇಕು. ಇದಾದ ಮೇಲೆ ಇನ್ಶುರೆನ್ಸ್‌ ಕಂಪನಿ ನಿರ್ದಿಷ್ಟ ವ್ಯಕ್ತಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುತ್ತದೆ. ಎಲ್ಲಾ ಮಾಹಿತಿ ಸೂಕ್ತವಾಗಿದೆ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದಾದಲ್ಲಿ ಟರ್ಮ್ ಲೈಫ್ ಇನ್ಶುರೆನ್ಸ್‌ ಸಿಗುತ್ತದೆ.

ಕೋವಿಡ್ ಇರಬಹುದು ಎನ್ನುವ ಕಾರಣಕ್ಕೆ ಟರ್ಮ್ ಲೈಫ್ ಇನ್ಶುರೆನ್ಸ್‌ ನೀಡುವಾಗ ವ್ಯಕ್ತಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸುವುದಿಲ್ಲ. ಯಾವುದೇ ಸಾಮಾನ್ಯ ಸ್ಥಿತಿಯಲ್ಲೂ ಟರ್ಮ್ ಲೈಫ್ ಇನ್ಶುರೆನ್ಸ್‌ಗೆ ವೈದ್ಯಕೀಯ ತಪಾಸಣೆ ಇದ್ದೇ ಇರುತ್ತದೆ. ಸದ್ಯ ಕೋವಿಡ್‌ನಿಂದಾಗಿ ತಪಾಸಣೆ ಕೇಂದ್ರಗಳು ಸಹ ಮುಚ್ಚಿರುವುದರಿಂದ ಪಾಲಿಸಿ ನೀಡುವ ಪ್ರಕ್ರಿಯೆ ಕೊಂಚ ತಡವಾಗುತ್ತಿದೆ.

ಎನ್‌ಆರ್‌ಐಗಳಿಗೆ ಪಾಲಿಸಿ ಕಷ್ಟ: ಕೋವಿಡ್ವ್ಯಾಪಕವಾಗಿ ಹರಡುತ್ತಿರುವ ಕಾರಣ ಅನಿವಾಸಿ ಭಾರತೀಯರಿಗೆ (ಎನ್‌ಆರ್‌ಐ) ಟರ್ಮ್ ಲೈಫ್ ಇನ್ಶುರೆನ್ಸ್‌ ಪಾಲಿಸಿ ನೀಡಲು ಇನ್ಶುರೆನ್ಸ್‌ ಕಂಪನಿಗಳು ಹಿಂಜರಿಯುತ್ತಿವೆ. ಇತ್ತೀಚೆಗೆ ಎನ್‌ಆರ್‌ಐ ಗಳು ಸಲ್ಲಿಸಿರುವ ಅನೇಕ ಅರ್ಜಿಗಳನ್ನು ಇನ್ಶುರೆನ್ಸ್‌ ಕಂಪನಿಗಳು ತಡೆ ಹಿಡಿದಿವೆ ಅಥವಾ ತಿರಸ್ಕರಿಸಿವೆ ಎಂಬ ಮಾಹಿತಿ ಇದೆ.

ಪೇಟೆಯಲ್ಲಿ ಅನಿರ್ದಿಷ್ಟಾವಧಿ ಅನಿಶ್ಚಿತತೆ
‘ಕೊರೊನಾ–2’ ವೈರಸ್‌ ವ್ಯಾಪಕವಾಗಿ ಹರಡುತ್ತಿರುವುದನ್ನು ಗಮನಿಸಿದಾಗ ಷೇರು ಪೇಟೆಯಲ್ಲಿ ಅನಿಶ್ಚಿತ ವಾತಾವರಣ ಅನಿರ್ದಿಷ್ಟಾವಧಿ ಮುಂದುವರಿಯುವುದು ಖಚಿತವಾಗಿದೆ. ಸೊರಗಿರುವ ಆರ್ಥಿಕತೆಗೆ ಬಲ ತುಂಬುವ ನಿಟ್ಟಿನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಮಾಡಿರುವ ಘೋಷಣೆಗಳು ಕೂಡ ಪೇಟೆಯಲ್ಲಿ ಖರೀದಿ ಉತ್ಸಾಹ ತರುವಲ್ಲಿ ಸಫಲವಾಗಿಲ್ಲ. ಇದರ ಮಧ್ಯೆ ಮೂಡೀಸ್ ರೇಟಿಂಗ್ ಏಜೆನ್ಸಿ ಭಾರತದ 2020ರ ಜಿಡಿಪಿ ಬೆಳವಣಿಗೆ ದರವನ್ನು ಶೇ 5.3 ರಿಂದ ಶೇ 2.5 ಕ್ಕೆ ಇಳಿಕೆ ಮಾಡಿರುವುದು ಸಹ ಹೂಡಿಕೆದಾರರ ಉತ್ಸಾಹ ಕುಗ್ಗಿಸಿದೆ. ಸದ್ಯ ಮಾರುಕಟ್ಟೆಯ ಸ್ಥಿತಿ ‘ಕಾಲಾಯ ತಸ್ಮೈ ನಮಃ’ ಎನ್ನುವಂತಾಗಿದೆ.

29,815 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್ ವಾರದ ಅವಧಿಯಲ್ಲಿ ಶೇ 0.33 ರಷ್ಟು ಕುಸಿದಿದೆ. 8,660 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ (50) ಸೂಚ್ಯಂಕ ಶೇ 0.97 ರಷ್ಟು ತಗ್ಗಿದೆ. ಸೆನ್ಸೆಕ್ಸ್‌ನ ಸ್ಮಾಲ್ ಕ್ಯಾಪ್, ಮಿಡ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ ಶೇ 6, ಶೇ 5.4 ಮತ್ತು ಶೇ 1.28 ರಷ್ಟು ಕುಸಿತ ದಾಖಲಿಸಿವೆ.

ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 7,165 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ದೇಶಿಯ ಸಾಂಸ್ಥಿಕ ಹೂಡಿಕೆದಾರರು ₹ 4,307 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಮಾರ್ಚ್‌ನಲ್ಲಿ ಒಟ್ಟಾರೆಯಾಗಿ ₹ 58,408.15 ಕೋಟಿ ಮೌಲ್ಯದ ಷೇರುಗಳನ್ನು ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಮಾರಾಟ ಮಾಡಿದ್ದಾರೆ.

ವಲಯವಾರು: ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ -8.46, ಲೋಹ ವಲಯ ಶೇ -8.15, ವಾಹನ ತಯಾರಿಕಾ ವಲಯ ಶೇ -8.03 ಮತ್ತು ಮಾಧ್ಯಮ ವಲಯ ಶೇ -6.51 ರಷ್ಟು ಕುಸಿದಿವೆ.

ಏರಿಕೆ- ಇಳಿಕೆ: ಸೆನ್ಸೆಕ್ಸ್ ಲಾರ್ಜ್ ಕ್ಯಾಪ್ ಷೇರುಗಳ ಪೈಕಿ ಪಿರಮಲ್ ಎಂಟರ್‌ಪ್ರೈಸಸ್ ಶೇ 24.08, ಇಂಟರ್ ಗ್ಲೋಬ್ ಏವಿಯೇಷನ್ ಶೇ 17.96, ಅರಬಿಂದೊ ಫಾರ್ಮಾ ಶೇ 13.05, ಇನ್ಫೊಸಿಸ್ ಶೇ 11.73, ನ್ಯೂ ಇಂಡಿಯಾ ಅಶ್ಯುರೆನ್ಸ್ ಕಂಪನಿ ಶೇ 11.06 ರಷ್ಟು ಜಿಗಿದಿವೆ. ಬಜಾಜ್ ಫಿನ್ ಸರ್ವ್ ಶೇ 21.83, ಎಚ್ ಪಿಸಿಎಲ್ ಶೇ 18.85, ಆ್ಯಕ್ಸಿಸ್ ಬ್ಯಾಂಕ್ ಶೇ 16.03, ವೇದಾಂತ ಶೇ 15.33, ಎಸಿಸಿ ಶೇ 15.16 ರಷ್ಟು ತಗ್ಗಿವೆ.

ಮುನ್ನೋಟ: ಕೋವಿಡ್ ಕಾರಣದಿಂದ ದೇಶದಾದ್ಯಂತ ದಿಗ್ಬಂಧನ ಜಾರಿಗೆ ಬಂದ ಮೊದಲ ಮೂರು ದಿನಗಳ ಕಾಲ ಷೇರುಪೇಟೆ ಸಕಾರಾತ್ಮಕವಾಗಿ ಕಂಡುಬಂತು. ಆದರೆ ಈ ಸಕಾರಾತ್ಮಕತೆ ತಾತ್ಕಾಲಿಕ ಎನ್ನುವುದು ಸ್ಪಷ್ಟ.

ಈ ವಾರ ಕೋವಿಡ್‌ನ ವಿಚಾರವಾಗಿ ಏನೆಲ್ಲಾ ಬೆಳವಣಿಗೆಗಳು ಆಗುತ್ತವೋ ಅದರ ನೇರ ಪರಿಣಾಮ ಮಾರುಕಟ್ಟೆಯ ಮೇಲೆ ಆಗಲಿದೆ. ಸದ್ಯದ ಮಟ್ಟಿಗೆ ಪೇಟೆ ಚೇತರಿಸಿಕೊಳ್ಳುವ ಯಾವುದೇ ಲಕ್ಷಣಗಳು ಇಲ್ಲ. ಇನ್ನಷ್ಟು ದಿನ ಪೇಟೆಯ ಓಟವು ಯಾರ ಎಣಿಕೆಗೂ ಸಿಗುವುದಿಲ್ಲ. ಹೀಗಾಗಿ ಹೂಡಿಕೆದಾರರು ಸಾಕಷ್ಟು ಲೆಕ್ಕಾಚಾರ ಮಾಡಿ ಸುರಕ್ಷಿತ ಹಾದಿಯಲ್ಲಿ ಮುಂದುವರಿಯುವುದು ಸೂಕ್ತ.

ಕ್ಲೆಯಾನ್‌ ಡಿಸೋಜ,ಸುವಿಷನ್ ಹೋಲ್ಡಿಂಗ್ಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT