ಶುಕ್ರವಾರ, ಸೆಪ್ಟೆಂಬರ್ 24, 2021
24 °C

ಹಣಕಾಸು ಸಾಕ್ಷರತೆ: ಎಷ್ಟಿರಬೇಕು ಮ್ಯೂಚುವಲ್‌ ಫಂಡ್ ಹೂಡಿಕೆ?

ಪ್ರಮೋದ್ ಬಿ.ಪಿ. Updated:

ಅಕ್ಷರ ಗಾತ್ರ : | |

ಮ್ಯೂಚುವಲ್ ಫಂಡ್‌ಗಳಲ್ಲಿ ಎಷ್ಟು ಹಣ ಹೂಡಿಕೆ ಮಾಡಬೇಕು ಎನ್ನುವುದು ಪ್ರತಿ ಹೂಡಿಕೆದಾರನ ಪ್ರಶ್ನೆ. ಒಬ್ಬೊಬ್ಬರ ಅಗತ್ಯಗಳು, ಆದಾಯ ಮಟ್ಟ, ಖರ್ಚು-ವೆಚ್ಚಗಳು ಭಿನ್ನವಾಗಿರುವುದರಿಂದ ಈ ಪ್ರಶ್ನೆಗೆ ಎಲ್ಲರಿಗೂ ಒಪ್ಪಿಗೆಯಾಗುವ ನಿರ್ದಿಷ್ಟ ಉತ್ತರವಿಲ್ಲ. ಆದಾಯದ ಇಂತಿಷ್ಟೇ ಭಾಗವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು ಎನ್ನುವ ಸೂತ್ರವೂ ಇಲ್ಲ. ಆದರೆ ಮ್ಯೂಚುವಲ್ ಫಂಡ್‌ಗಳಲ್ಲಿ ಎಷ್ಟು ಹೂಡಿಕೆ ಮಾಡಬೇಕು ಎಂಬುದನ್ನು ಕಂಡುಕೊಳ್ಳಲು ಕೆಲವು ಲೆಕ್ಕಾಚಾರಗಳಿವೆ. ಅವನ್ನು ಅರಿತು ಮುನ್ನಡೆದರೆ ನಿಮ್ಮ ಹೂಡಿಕೆಯ ಹಾದಿ ಸುಗಮ.

1) ನಿಮ್ಮ ಗುರಿ ತೀರ್ಮಾನಿಸಿ: ಪ್ರತಿ ವ್ಯಕ್ತಿಗೂ ಜೀವನದಲ್ಲಿ ಒಂದಿಷ್ಟು ಗುರಿಗಳಿರುತ್ತವೆ. ಕಾರು ಖರೀದಿ, ಮನೆ ಕಟ್ಟಿಸುವುದು, ಮಕ್ಕಳ ಶಿಕ್ಷಣಕ್ಕಾಗಿ ಹಣ ಹೊಂದಿಸುವುದು, ನಿವೃತ್ತಿ ನಂತರದ ಜೀವನಕ್ಕಾಗಿ ಹೂಡಿಕೆ ಮಾಡುವುದು... ಹೀಗೆ ಹಲವು ಆಸೆಗಳು ಇರುತ್ತವೆ. ಹಣಕಾಸು ನಿರ್ವಹಣೆಯ ಭಾಷೆಯಲ್ಲಿ ಇವನ್ನು ‘ಆರ್ಥಿಕ ಗುರಿ’ಗಳು ಎಂದು ಕರೆಯುತ್ತಾರೆ. ವ್ಯಕ್ತಿ ತನ್ನ ಗುರಿಗಳನ್ನು ಪಟ್ಟಿ ಮಾಡಿದ ನಂತರ, ಯಾವ ಗುರಿಯನ್ನು ತಲುಪಲು ಎಷ್ಟು ಸಮಯವಿದೆ, ಹೂಡಿಕೆಗೆ ಎಷ್ಟು ಮೊತ್ತ ಲಭ್ಯವಿದೆ, ಎಷ್ಟು ವರ್ಷ ಹೂಡಿಕೆ ಮಾಡಬೇಕಾಗುತ್ತದೆ ಎಂಬುದನ್ನು ಅಂದಾಜು ಮಾಡಿಕೊಳ್ಳಬೇಕು.

ಉದಾಹರಣೆಗೆ, ನಿಮಗೆ 10 ವರ್ಷಗಳ ನಂತರ ಮಗಳ ವಿದ್ಯಾಭ್ಯಾಸಕ್ಕಾಗಿ ₹ 30 ಲಕ್ಷ ಬೇಕು ಎಂದಿಟ್ಟುಕೊಳ್ಳಿ. ಆ ₹ 30 ಲಕ್ಷ ಹೊಂದಿಸಲು ಈಗಿನಿಂದ ನೀವು ಎಷ್ಟು ಮೊತ್ತ ಹೂಡಿಕೆ ಮಾಡಬೇಕು ಎಂದು ಲೆಕ್ಕ‌ಹಾಕಿ ಅದನ್ನು ಅನುಷ್ಠಾನಕ್ಕೆ ತರಬೇಕು. ಹೂಡಿಕೆ ಗುರಿಗಳನ್ನು ಮೂರು ರೀತಿಯಲ್ಲಿ ವಿಂಗಡಿಸಿಕೊಳ್ಳುವುದು ಉತ್ತಮ. ಅಲ್ಪಾವಧಿ ಅಂದರೆ, ಒಂದು ವರ್ಷ ದೊಳಗಿನ ಗುರಿ; ಮಧ್ಯಮ ಅವಧಿ ಅಂದರೆ ಸುಮಾರು ಐದು ವರ್ಷಗಳೊಳಗಿನ ಗುರಿ ಮತ್ತು ದೀರ್ಘಾವಧಿ ಅಂದರೆ 10 ವರ್ಷ ಮೇಲ್ಪಟ್ಟು ಸಮಯವಿರುವ ಗುರಿ. ಹೀಗೆ ವಿಂಗಡಣೆ ಮಾಡಿಕೊಳ್ಳುವುದರಿಂದ ಹಣಕಾಸಿನ ಗುರಿ ತಲುಪಲು ಅನುಕೂಲ ಆಗುತ್ತದೆ.‌

2) ಗುರಿಗಳಲ್ಲಿ ಆದ್ಯತೆ ಇರಲಿ: ನಮಗೆ ಹತ್ತಾರು ಗುರಿಗಳಿದ್ದರೂ ಆ ಎಲ್ಲಾ ಗುರಿಗಳನ್ನು ಈಡೇರಿಸಿಕೊಳ್ಳಲು ಅಗತ್ಯ ಹಣ ಇಲ್ಲದಿರಬಹುದು. ಹಾಗಾಗಿ ಗುರಿಗಳಲ್ಲಿ ಯಾವುದಕ್ಕೆ ಆದ್ಯತೆ ಕೊಡಬೇಕು ಎನ್ನುವುದನ್ನು ಅರಿಯುವುದು ಮುಖ್ಯ. ಉದಾಹರಣೆಗೆ, ಅವಧಿಗೂ ಮುನ್ನ ಗೃಹಸಾಲ ಮರುಪಾವತಿಯೋ, ವಿದೇಶ ಪ್ರವಾಸವೋ ಎನ್ನುವ ಪ್ರಶ್ನೆ ಇದ್ದಾಗ ಗೃಹಸಾಲ ಮರುಪಾವತಿ ಮೊದಲ ಆದ್ಯತೆಯ ಗುರಿಯಾಗಬೇಕು. ಮಕ್ಕಳ ಶಿಕ್ಷಣ, ನಿವೃತ್ತಿ ನಂತರದ ಜೀವನಕ್ಕಾಗಿ ಹೂಡಿಕೆ ಮಾಡುವುದು ನಮ್ಮ ದೀರ್ಘಾವಧಿ ಗುರಿಗಳ ಭಾಗವಾಗಿರುವುದು ಮುಖ್ಯ.

‌3) ತಿಂಗಳ ಹೂಡಿಕೆ ಲೆಕ್ಕಾಚಾರ: ಒಮ್ಮೆ ಆದ್ಯತೆಯ ಗುರಿಗಳನ್ನು ಪಟ್ಟಿಮಾಡಿದ ಬಳಿಕ ಆ ಗುರಿ ಈಡೇರಿಸಿಕೊಳ್ಳಲು ಪ್ರತಿ ತಿಂಗಳು ಎಷ್ಟು ಹೂಡಿಕೆ ಮಾಡಬೇಕು ಎನ್ನುವ ಅಂದಾಜು ಮಾಡಬೇಕು. ಪ್ರತಿ ಗುರಿ ತಲುಪಲು ಎಷ್ಟು ಹಣ ಅಗತ್ಯವಿದೆ ಎಂದು ಲೆಕ್ಕಾಚಾರ ಮಾಡಿ ಹೂಡಿಕೆ ಶುರು ಮಾಡಬೇಕು. ಪಟ್ಟಿಯಲ್ಲಿರುವಂತೆ, ಉದಾಹರಣೆಗೆ ನಿಮ್ಮ ಮಾಸಿಕ ವೇತನ ₹ 60 ಸಾವಿರ ಎಂದು ಭಾವಿಸೋಣ. ನಿಮಗೆ ಮೂರು ಆದ್ಯತೆಯ ಗುರಿಗಳಿದ್ದು, ನಾಲ್ಕು ವರ್ಷಗಳ ನಂತರ ಕಾರು ಖರೀದಿಸಬೇಕು, 15 ವರ್ಷಗಳ ನಂತರ ಮಗಳ ಶಿಕ್ಷಣಕ್ಕೆ ಹಣ ಬೇಕು, 30 ವರ್ಷಗಳ ನಂತರ ನಿವೃತ್ತಿಗಾಗಿ ಹಣ ಬೇಕು ಎಂದು ಭಾವಿಸೋಣ. ಮಗಳ ಶಿಕ್ಷಣ ಮತ್ತು ನಿವೃತ್ತಿಗಾಗಿ ಹೂಡಿಕೆ ಮಾಡಲು ಸಾಕಷ್ಟು ಸಮಯ ಇರುವುದರಿಂದ ಶೇ 12ರಷ್ಟು ವಾರ್ಷಿಕ ಸರಾಸರಿ ಲಾಭಾಂಶ ಸಿಗಬಹುದು ಎಂಬ ಅಂದಾಜಿನಲ್ಲಿ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಪರಿಗಣಿಸಬಹುದು. ಕಾರು ಖರೀದಿಗೆ ಕಡಿಮೆ ಸಮಯ ಇರುವುದರಿಂದ ಶೇ 9ರಷ್ಟು ವಾರ್ಷಿಕ ಸರಾಸರಿ ಲಾಭಾಂಶ ಲಭಿಸಬಹುದು ಎಂಬ ಲೆಕ್ಕಾಚಾರದಲ್ಲಿ ಹೈಬ್ರೀಡ್ ಫಂಡ್ ಪರಿಗಣಿಸುವುದು ಒಳಿತು.

ಅದರಂತೆ ಕಾರು ಖರೀದಿಗಾಗಿ ₹ 8,500, ಮಗಳ ಉನ್ನತ ಶಿಕ್ಷಣಕ್ಕಾಗಿ ₹ 5,000 ಮತ್ತು ನಿವೃತ್ತಿ ನಂತರದ ಜೀವನಕ್ಕಾಗಿ ₹ 8,500 ಅಂದರೆ ಮಾಸಿಕ ಒಟ್ಟು ₹ 22 ಸಾವಿರವನ್ನು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬೇಕು. ಇನ್ನುಳಿದ ₹ 38 ಸಾವಿರದಲ್ಲಿ ತಿಂಗಳ ಖರ್ಚು-ವೆಚ್ಚ ನಿಭಾಯಿಸಿಕೊಳ್ಳಬೇಕು.

ಹೊಸ ದಾಖಲೆ ಬರೆದ ಸೂಚ್ಯಂಕಗಳು
ಷೇರುಪೇಟೆಯಲ್ಲಿ ಗೂಳಿ ಓಟ ಜೋರಾಗಿದೆ. ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಹೊಸ ದಾಖಲೆ ಬರೆದಿವೆ. ಸೆಪ್ಟೆಂಬರ್ 3ಕ್ಕೆ ಕೊನೆಗೊಂಡ ವಾರದಲ್ಲಿ 58,129 ಅಂಶಗಳಲ್ಲಿ ವಹಿವಾಟು ಮುಗಿಸಿದ ಸೆನ್ಸೆಕ್ಸ್ ಶೇಕಡ 3.57ರಷ್ಟು ಏರಿಕೆಯಾಗಿದ್ದರೆ, 17,323 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 3.70ರಷ್ಟು ಜಿಗಿದಿದೆ.

ಬಿಎಸ್‌ಇ ಮಿಡ್ ಕ್ಯಾಪ್ ಸೂಚ್ಯಂಕ ಶೇ 4.8ರಷ್ಟು ಮತ್ತು ಸ್ಮಾಲ್ ಕ್ಯಾಪ್ ಸೂಚ್ಯಂಕ ಶೇ 3.9ರಷ್ಟು ಹೆಚ್ಚಳವಾಗಿವೆ. ವಲಯವಾರು ಪ್ರಗತಿಯಲ್ಲಿ ನಿಫ್ಟಿ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 10ರಷ್ಟು ಜಿಗಿದಿದೆ. ತೈಲ-ಅನಿಲ ಸೂಚ್ಯಂಕ ಮತ್ತು ಮೂಲಸೌಕರ್ಯ ಸೂಚ್ಯಂಕ ಶೇ 5ರಷ್ಟು ಹೆಚ್ಚಳ ಕಂಡಿವೆ. ಕಳೆದ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 6,867.73 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,421.12 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ನಿಫ್ಟಿಯಲ್ಲಿ ಶ್ರೀ ಸಿಮೆಂಟ್ ಶೇ 13.29ರಷ್ಟು, ಏರ್‌ಟೆಲ್ ಶೇ 1.21ರಷ್ಟು, ಟೈಟನ್ ಶೇ 2.65ರಷ್ಟು, ಏಷ್ಯನ್ ಪೇಂಟ್ಸ್ ಶೇ 9.87ರಷ್ಟು ಮತ್ತು ಐಷರ್ ಮೋಟರ್ಸ್ ಶೇ 8.79ರಷ್ಟು ಜಿಗಿತ ಕಂಡಿವೆ.

ಮುನ್ನೋಟ: ಕಳೆದ ವಾರ ಷೇರುಪೇಟೆ ಸೂಚ್ಯಂಕಗಳು ದಾಖಲೆ ಮಟ್ಟಕ್ಕೆ ಏರಿಕೆ ಕಂಡಿದ್ದು ನಿಫ್ಟಿಯಲ್ಲಿರುವ 50 ಕಂಪನಿಗಳ ಪೈಕಿ 47 ಕಂಪನಿಗಳು ಜಿಗಿತ ಕಂಡಿವೆ. ನಿಫ್ಟಿ ಬ್ಯಾಂಕ್ ಸೂಚ್ಯಂಕ ಸತತ ಎರಡನೆಯ ವಾರ ಸಕಾರಾತ್ಮಕ ಫಲಿತಾಂಶ ಕೊಟ್ಟಿದೆ. ಜಾಗತಿಕ ವಿದ್ಯಮಾನಗಳು ಪೂರಕವಾಗಿರುವುದು, ಅರ್ಥ ವ್ಯವಸ್ಥೆಯಲ್ಲಿ ನಗದು ಹರಿವು ಉತ್ತಮವಾಗಿರುವುದು, ದೇಶದ ಜಿಡಿಪಿ ಬೆಳವಣಿಗೆ ದರ ಸುಧಾರಿಸಿರುವುದು, ಜಿಎಸ್‌ಟಿ ಸಂಗ್ರಹ ಆಗಸ್ಟ್‌ ತಿಂಗಳಲ್ಲಿ ₹ 1 ಲಕ್ಷ ಕೋಟಿ ದಾಟಿರುವುದು, ಲಸಿಕೆ ನೀಡುವ ಕೆಲಸಕ್ಕೆ ವೇಗ ಸಿಕ್ಕಿರುವುದು, ಕೋವಿಡ್ ಕಾರಣಕ್ಕಾಗಿ ಹೇರಿದ್ದ ಮಿತಿಗಳನ್ನು ಸಡಿಲಿಸಿರುವುದು ಸೇರಿದಂತೆ ಹಲವು ಬೆಳವಣಿಗೆಗಳು ಷೇರುಪೇಟೆ ಏರಿಕೆಗೆ ಕಾರಣವಾಗಿವೆ. ಸೂಚ್ಯಂಕಗಳು ನಿರೀಕ್ಷೆಗೂ ಮೀರಿ ಏರಿಕೆ ಕಾಣುತ್ತಿರುವಾಗ ಹೂಡಿಕೆಯಲ್ಲಿ ಅತಿ ಹೆಚ್ಚು ಎಚ್ಚರಿಕೆ ವಹಿಸಬೇಕು. ಆರ್ಥಿಕವಾಗಿ ಉತ್ತಮ ಸ್ಥಿತಿಯಲ್ಲಿದ್ದು, ಒಳ್ಳೆಯ ಭವಿಷ್ಯವಿರುವ ಕಂಪನಿಗಳನ್ನು ಮಾತ್ರ ಹೂಡಿಕೆಗೆ ಪರಿಗಣಿಸಬೇಕು.  ಐಪಿಒಗಳಲ್ಲಿ ಹೂಡಿಕೆ ಮಾಡುವಾಗ ಒಳ್ಳೆಯ ಕಂಪನಿಗಳಿಗೆ ಮಾತ್ರ ಬಿಡ್ ಸಲ್ಲಿಸಬೇಕು.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು