ಶುಕ್ರವಾರ, ಅಕ್ಟೋಬರ್ 7, 2022
27 °C

ಹಣಕಾಸು ಸಾಕ್ಷರತೆ: ಉಚಿತ ಸಲಹೆ, ಸಮಸ್ಯೆ ಖಚಿತ

ರಾಜೇಶ್ ಕುಮಾರ್ ಟಿ. ಆರ್ Updated:

ಅಕ್ಷರ ಗಾತ್ರ : | |

ವಾರದ ಹಿಂದೆ ಕಾಲೇಜು ದಿನಗಳ ಸ್ನೇಹಿತ ಸಿಕ್ಕಿದ್ದ. ಟೀ ಕುಡಿಯುತ್ತಾ ವಿದ್ಯಾರ್ಥಿ ಜೀವನದ ದಿನಗಳನ್ನು ಮೆಲುಕು ಹಾಕುತ್ತಿದ್ದೆವು. ಮಾತು ಮುಂದುವರಿದಾಗ ಅವನು ಕ್ರಿಪ್ರೊ ಕರೆನ್ಸಿಯೊಂದರಲ್ಲಿ ₹ 1 ಲಕ್ಷ ನಷ್ಟ ಮಾಡಿಕೊಂಡಿರುವ ಬಗ್ಗೆ ತಿಳಿಸಿದ. ಕ್ರಿಪ್ರೊ ಬಗ್ಗೆ ತಿಳಿದು ಹೂಡಿಕೆ ಮಾಡಿದೆಯಾ ಎಂದು ಪ್ರಶ್ನೆ ಹಾಕಿದೆ. ಯುಟ್ಯೂಬ್ ಚಾನಲ್‌‌ವೊಂದರಲ್ಲಿ ಕ್ರಿಪ್ರೊ ಹೂಡಿಕೆಯಿಂದ ಭಾರೀ ಹಣ ಗಳಿಸಲು ಸಾಧ್ಯವಿದೆ ಎಂದು ಹೇಳಿದರು. ಇದಲ್ಲದೆ ಕ್ರಿಪ್ರೊ, ಭವಿಷ್ಯದ ಸೂಪರ್ ಕರೆನ್ಸಿ ಆಗುತ್ತದೆ ಎಂಬ ಬಗ್ಗೆ ವಿವಿಧ ವೆಬ್‌‌ಸೈಟ್‌ಗಳಲ್ಲಿ ಲೇಖನಗಳನ್ನೂ ಓದಿದೆ. ಹೀಗಿರುವಾಗ ನಾನೇಕೆ ರಿಸ್ಕ್ ತೆಗೆದುಕೊಳ್ಳಬಾರದು ಅಂತ ₹ 1 ಲಕ್ಷ ಹೂಡಿಕೆ ಮಾಡಿದೆ. ಆದ್ರೆ ಲಾಭದ ವಿಚಾರ ಹಾಗಿರಲಿ ಈಗ ಅಸಲಿನ ಮೊತ್ತವೂ ಖೋತಾ ಆಗಿದೆ ಎಂದು ಅಲವತ್ತುಕೊಂಡ. ಇದು ಅವನೊಬ್ಬನ ಕಥೆಯಲ್ಲ. ಹೂಡಿಕೆ ಮಾಡುವಾಗ ಪುಕ್ಕಟೆ ಸಲಹೆ ಪಡೆದು ಮುನ್ನಡೆದವರೆಲ್ಲರೂ ಇದೇ ಮಾದರಿಯಲ್ಲಿ ಆರ್ಥಿಕ ನಷ್ಟ ಅನುಭವಿಸುತ್ತಾರೆ.

ವಹಿವಾಟು ಸ್ಥಗಿತಗೊಳಿಸಿವೆ ಹಲವು ಕ್ರಿಪ್ಟೊಗಳು: ಆರ್ಥಿಕ ಸಂಕಷ್ಟದ ಕಾರಣ ನೀಡಿ ಸಿಂಗಾಪುರ ಮೂಲದ ಕ್ರಿಪ್ಟೊ ಎಕ್ಸ್‌ಚೇಂಜ್ ವಾಲ್ಟ್‌ ವಹಿವಾಟನ್ನು ಸ್ಥಗಿತಗೊಳಿಸಿದೆ. ಥಾಯ್ಲೆಂಡ್‌, ಇಂಡೊನೇಷ್ಯಾ ಮತ್ತು ಆಸ್ಟ್ರೇಲಿಯಾದಲ್ಲಿ ಕಾರ್ಯಾ
ಚರಣೆ ನಡೆಸುತ್ತಿದ್ದ ಜಿಪ್ ಮೆಕ್ಸ್ ಕಂಪನಿ ಕೂಡ ವಹಿವಾಟು ನಿಲ್ಲಿಸಿದೆ. ಇದಲ್ಲದೆ ಅಮೆರಿಕದ ಪೇಮೆಂಟ್ಸ್ ಡಾಟ್ ನೆಟ್ ಕೂಡ ಬಿಕ್ಕಟ್ಟಿನಲ್ಲಿದ್ದು ವ್ಯವಹಾರ ಸ್ಥಗಿತಕ್ಕೆ ಮುಂದಾಗಿದೆ. ಆಳ ಅಗಲ ತಿಳಿಯದೆ ಬೆವರು ಸುರಿಸಿ ಸಂಪಾದಿಸಿದ ದುಡ್ಡನ್ನು ಕ್ರಿಪ್ಟೊ ಕರೆಸಿಗಳ ಮೇಲೆ ಹಾಕಿ ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಕಾಣುತ್ತಿದ್ದವರು ಈಗ ಹೂಡಿಕೆಯ ಮೂಲ ಬಂಡವಾಳವನ್ನೇ ಕಳೆದು
ಕೊಂಡು ತಮಗೆ ತಾವೇ ಹಿಡಿಶಾಪ ಹಾಕಿಕೊಳ್ಳುತ್ತಿದ್ದಾರೆ. ಕ್ರಿಪ್ಟೊ ಬಗ್ಗೆ ಅರೆ ಬರೆ ಮಾಹಿತಿ ನೀಡುವ ಯುಟ್ಯೂಬ್, ಇನ್‌ಸ್ಟಾಗ್ರಾಂ ವಿಡಿಯೊಗಳು, ಉಚಿತ ಹಣಕಾಸು ಸಲಹೆ, ವೆಬ್‌ಸೈಟ್‌ನಲ್ಲಿ ಕಂಡುಬರುವ ಪ್ರಾಯೋಜಿತ ಲೇಖನಗಳು ಹೀಗೆ ಪಕ್ವವಲ್ಲದ ಮೂಲಗಳಿಂದ ಮಾಹಿತಿ ಪಡೆದು ಹಣಕಾಸು ತೀರ್ಮಾನಗಳನ್ನು ತೆಗೆದುಕೊಂಡರೆ ಏನಾಗುತ್ತದೆ ಎನ್ನುವುದಕ್ಕೆ ಮೇಲಿನ ಬೆಳವಣಿಗೆಗಳು ತಾಜಾ ಉದಾಹರಣೆ.

ಇದು ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳ ಜಮಾನ: ಕನ್ನಡದ ಕೆಲ ಹೆಸರಾಂತ ಚಿತ್ರನಟರು, ಬಾಲಿವುಡ್ ಖ್ಯಾತ
ನಾಮರು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸೆಲೆಬ್ರೆಟಿ ಸ್ಟೇಟಸ್ ಇರುವ ಹಲವು ಮಂದಿ ಕ್ರಿಪ್ಟೊ ಕರೆನ್ಸಿಗಳ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದನ್ನು ಕೇಳಿರಬಹುದು. ಕ್ರಿಪ್ಟೊ ನಿಮ್ಮ ಭವಿಷ್ಯದ ಎಲ್ಲ ಹಣಕಾಸಿನ ಅಗತ್ಯಗಳನ್ನು ಪೂರೈಸುವ ಕಾಮಧೇನು ಎನ್ನುವ ಮಟ್ಟಿಗೆ ಅವೆರೆಲ್ಲರೂ ಕ್ರಿಪ್ಟೊ ಜಾಹಿರಾತುಗಳನ್ನು ತಮ್ಮ ಇನ್‌ಸ್ಟಾಗ್ರಾಂ, ಫೇಸ್ ಬುಕ್ ಮತ್ತು ಯುಟ್ಯೂಬ್ ಫ್ಲಾಟ್ ಫಾರಂಗಳಲ್ಲಿ ಪಸರಿಸಿದರು. ಜನಸಾಮಾನ್ಯರು ಕೂಡ ಆಲೋಚನೆ ಮಾಡದೆ ಅಷ್ಟೇ ವೇಗವಾಗಿ ಕ್ರಿಪ್ಟೊ ಹೂಡಿಕೆಗಳಿಗೆ ಮುಂದಾಗಿ ಕೈ ಸುಟ್ಟುಕೊಂಡರು.

ಇನ್‌ಫ್ಲುಯೆನ್ಸರ್‌ಗಳು ಹೇಗೆ ಹಣ ಗಳಿಸುತ್ತಾರೆ ಗೊತ್ತಾ:? ಉದಾಹರಣೆಗೆ ವ್ಯಕ್ತಿಯೊಬ್ಬ ಹಣಕಾಸು ಸಲಹೆ ಕ್ಷೇತ್ರದಲ್ಲಿ ಒಳ್ಳೆಯ ಹೆಸರು ಮಾಡಿದ್ದು ಆತನ ಯುಟ್ಯೂಬ್ ಚಾನಲ್‌ಗೆ ಸುಮಾರು 20 ಲಕ್ಷ ಮಂದಿ ಚಂದಾದಾರರನ್ನು ಗಳಿದ್ದಾರೆ ಎಂದುಕೊಳ್ಳಿ. ಈತನೊಂದಿಗೆ ಕ್ರಿಪ್ಟೊ ಕರೆನ್ಸಿ ಕಂಪನಿಯೊಂದು ಮಾತುಕತೆ ನೆಡೆಸಿ ಜಾಹಿರಾತು ಒಪ್ಪಂದ ಮಾಡಿಕೊಳ್ಳುತ್ತದೆ. ಕ್ರಿಪ್ಟೊ ಕರೆನ್ಸಿ ಒಳ್ಳೆಯ ಹೂಡಿಕೆ ಎಂದು ವಿಡಿಯೊ ಮಾಡಿ ಅದನ್ನು ಚಾನಲ್‌ನಲ್ಲಿ ಅಪ್ಲೋಡ್‌ ಮಾಡಿದರೆ ಪ್ರತಿ ವಿಡಿಯೊಗೆ ₹ 1 ರಿಂದ ₹ 2 ಲಕ್ಷ ರೂಪಾಯಿವರೆಗೆ ಕಮಿಷನ್ ಕೊಡುವುದಾಗಿ ಹೇಳುತ್ತದೆ. ಇದನ್ನು ಆಧರಿಸಿ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಕ್ರಿಪ್ಟೊ ಕರೆನ್ಸಿಗಳ ಬಗ್ಗೆ ಸಕಾರಾತ್ಮಕ ವಿಡಿಯೊ ಮಾಡುತ್ತಾರೆ.

ಕ್ರಿಪ್ಟೊ ಕರೆನ್ಸಿ ಕಂಪನಿಯೊಂದರಿಂದ ಜಾಹಿರಾತಿಗಾಗಿ ಹಣ ಪಡೆದು ಚಂದಾದಾರರಿಗೆ ಬೇಕಾದ ನಿಸ್ಪಕ್ಷಪಾತ ಮಾಹಿತಿಯನ್ನು ಯುಟ್ಯೂಬರ್ ಹೇಗೆ ತಾನೇ ಒದಗಿಸಲು ಸಾಧ್ಯ ಅಲ್ವಾ? ಹಾಗೆಂದ ಮಾತ್ರಕ್ಕೆ ಎಲ್ಲಾ ಯುಟ್ಯೂಬರ್‌ಗಳು ಸುಳ್ಳು ಹೇಳುತ್ತಾರೆ ಎಂದಲ್ಲ. ಕೆಲ ಯುಟ್ಯೂಬರ್‌ಗಳು ಇದು ಪ್ರಾಯೋಜಿತ ವಿಡಿಯೊ ಎಂದು ನೇರವಾಗಿ ಹೇಳುತ್ತಾರೆ. ಜೊತೆಗೆ ಹೂಡಿಕೆ ಮಾಡುವಾಗ ನೀವು ಎಚ್ಚರಿಕೆವಹಿಸಿ ಎನ್ನುವ ಡಿಸ್‌ಕ್ಲೇಮರ್ (ಎಚ್ಚರಿಕೆ) ಅನ್ನು ನೀಡುತ್ತಾರೆ. ಆದರೆ ಇನ್ನು ಕೆಲವರು ಇದ್ಯಾವುದನ್ನೂ ನೀಡಿದೆ ಅಮಾಯಕ ಹೂಡಿಕೆದಾರರನ್ನು ದಿಕ್ಕುತಪ್ಪಿಸುತ್ತಾರೆ.

ಇನ್‌ಫ್ಲುಯೆನ್ಸರ್‌ಗಳ ಹಿನ್ನೆಲೆ ಮತ್ತು ಪರಿಣತಿ ಗಮನಿಸಿ: ಯುಟ್ಯೂಬ್, ಇನ್‌ಸ್ಟಾಗ್ರಾಂ, ಫೇಸ್‌ಬುಕ್ ಸೇರಿ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಕಂಡುಬರುವ ಇನ್‌ಫ್ಲುಯೆನ್ಸರ್‌ಗಳ ಹಿನ್ನೆಲೆ ಮತ್ತು ಪರಿಣತಿ ಗಮನಿಸುವುದು ಬಹಳ ಮುಖ್ಯ. ಕೆಲವು ಇನ್‌ಫ್ಲುಯೆನ್ಸರ್‌ಗಳು ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಟ್‌ಗಳಾಗಿರುತ್ತಾರೆ, ಮತ್ತೆ ಕೆಲವರು ರಾಷ್ಟ್ರೀಯ ಷೇರುಮಾರುಕಟ್ಟೆ ಸಂಸ್ಥೆ (NISM) ನಡೆಸುವ ಪರೀಕ್ಷೆಯಲ್ಲಿ ತೆರ್ಗಡೆ ಹೊಂದಿ ಹಣಕಾಸು ಪರಿಣತರಾಗಿರುತ್ತಾರೆ, ಮ್ಯೂಚು
ಯಲ್ ಫಂಡ್ ಹೌಸ್‌ಗಳಲ್ಲಿ ಕೆಲವರು ಫಂಡ್ ಮ್ಯಾನೇಜರ್‌ಗಳಾಗಿಯೂ ಕೆಲಸ ಮಾಡುತ್ತಿರು
ತ್ತಾರೆ. ಹೀಗೆ ಒಂದು ಸೂಕ್ತ ಹಿನ್ನೆಲೆ ಇರುವವರಿಗೆ ಹಣಕಾಸು ಸಲಹೆ ನೀಡುವ ಸಾಮರ್ಥ್ಯವಿರುತ್ತದೆ.

ಷೇರು ಮಾರುಕಟ್ಟೆ ಹೂಡಿಕೆಯಲ್ಲೂ ಇದಾಗುತ್ತೆ: ಇನ್‌ಫ್ಲುಯೆನ್ಸರ್‌ಗಳ ಸ್ಟಾಕ್ ಟಿಪ್ಸ್ ನಂಬಿ ಷೇರು ಹೂಡಿಕೆ ಮಾಡಿ ಅನೇಕ ಜನಸಾಮಾನ್ಯರು ಕೈ ಸುಟ್ಟುಕೊಂಡಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ನೇರವಾಗಿ ಹೂಡಿಕೆ ಮಾಡುವಾಗ ಅಥವಾ ಟ್ರೇಡಿಂಗ್ ಮಾಡುವಾಗ ಅದರ ಬಗ್ಗೆ ಒಂದಿಷ್ಟು ಜ್ಞಾನ ಹೊಂದಿರಬೇಕು. ಅದಿಲ್ಲದಿದ್ದರೆ ಇನ್‌ಫ್ಲುಯೆನ್ಸರ್‌ಗಳ ಸ್ಟಾಕ್ ಟಿಪ್ಸ್ ನಂಬಿ ಅಂದಾಜಿಗೆ ಹೂಡಿಕೆ ನಿರ್ಧಾರ ಮಾಡಬಾರದು.

ಮೋಸದ ಮಾರಾಟದ ಬಗ್ಗೆ ಎಚ್ಚರಿಕೆ: ಕೆಲ ವಿಮಾ ಏಜೆಂಟ್‌ಗಳು, ಬ್ಯಾಂಕ್ ಎಕ್ಸಿಕ್ಯೂಟಿವ್‌ಗಳು ತಮ್ಮ ಲಾಭಕ್ಕೆ ಅನುಕೂಲವಾಗುವಂತಹ ಕೆಲ ಹಣಕಾಸಿನ ಉತ್ಪನ್ನಗಳನ್ನು ನಿಮಗೆ ಮಾರಾಟ ಮಾಡಲು ಮುಂದಾಗುತ್ತಾರೆ. ಈ ವಿಮೆ ತೆಗೆದುಕೊಂಡರೆ ಅಷ್ಟು ಲಾಭವಾಗುತ್ತೆ, ಈ ಫಂಡ್‌ನಲ್ಲಿ ಸಿಕ್ಕಾಪಟ್ಟೆ ಲಾಭಾಂಶ ಇದೆ ಎಂದೆಲ್ಲಾ ಬಣ್ಣ ಬಣ್ಣದ ಮಾತುಗಳನ್ನಾಡಿ ನಿಮಗೆ ವಾಸ್ತವದಲ್ಲಿ ಅನುಕೂಲ ಮಾಡಿಕೊಡದ ಉತ್ಪನ್ನಗಳ ಮಾರಾಟಕ್ಕೆ ಮುಂದಾಗುತ್ತಾರೆ. ಈ ಬಗ್ಗೆ ನೀವೇ ಎಚ್ಚರಿಕೆವಹಿಸಬೇಕು.

ಅನಿಶ್ಚಿತತೆ ನಡುವೆ ಭಾರೀ ಜಿಗಿತ

ಜುಲೈ 22 ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಉತ್ತಮ ಗಳಿಕೆ ಕಂಡಿವೆ. 56,072 ಅಂಶಗಳಲ್ಲಿ ವಹಿವಾಟು ಮುಗಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 4.29 ರಷ್ಟು ಗಳಿಸಿಕೊಂಡಿದೆ. 16,719 ಅಂಶಗಳಲ್ಲಿ ವಹಿವಾಟು ಪೂರ್ಣಗೊಳಿಸಿರುವ ನಿಫ್ಟಿ ಶೇ 4.17 ರಷ್ಟು ಜಿಗಿದಿದೆ. ತ್ರೈಮಾಸಿಕ ಫಲಿತಾಂಶಗಳಲ್ಲಿ ಕಂಪನಿಗಳ ಉತ್ತಮ ಸಾಧನೆ, ಉತ್ತಮ ಮುಂಗಾರು, ಜಾಗತಿಕ ಮಾರುಕಟ್ಟೆಗಳಲ್ಲಿ ಹೆಚ್ಚಿದ ಸಕಾರಾತ್ಮಕತೆ, ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಖರೀದಿ ಭರಾಟೆ ಸೇರಿ ಹಲವು ಅಂಶಗಳು ಷೇರುಪೇಟೆ ಜಿಗಿತಕ್ಕೆ ಕಾರಣವಾಗಿವೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಶೇ 7.7, ಮಾಹಿತಿ ತಂತ್ರಜ್ಞಾನ ಸೂಚ್ಯಂಕ ಶೇ 6.3, ಬ್ಯಾಂಕ್ ವಲಯ ಶೇ 6 , ಲೋಹ ಸೂಚ್ಯಂಕ ಶೇ 5.4 ರಷ್ಟು ಜಿಗಿದಿವೆ. ಮಿಡ್ ಕ್ಯಾಪ್ ,ಸ್ಮಾಲ್ ಕ್ಯಾಪ್ ಮತ್ತು ಲಾರ್ಜ್ ಕ್ಯಾಪ್ ಸೂಚ್ಯಂಕಗಳು ಶೇ 3.5 ರಿಂದ ಶೇ 4 ರಷ್ಟು ಹೆಚ್ಚಳ ದಾಖಲಿಸಿವೆ.

ಏರಿಕೆ–ಇಳಿಕೆ: ನಿಫ್ಟಿಯಲ್ಲಿ ಅಲ್ಟ್ರಾಟೆಕ್ ಸಿಮೆಂಟ್ ಶೇ 5.35, ಗ್ರಾಸಿಮ್ ಶೇ 3.87, ಯುಪಿಎಲ್ ಶೇ 2.84, ಎಚ್‌ಡಿಎಪ್‌ಸಿ ಶೇ 2.39, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 2.33, ಐಷರ್ ಮೋಟರ್ಸ್ ಶೇ 2.16, ಆಕ್ಸಿಸ್ ಬ್ಯಾಂಕ್ ಶೇ 2.12, ಐಸಿಐಸಿಐ ಶೇ 1.79 ರಷ್ಟು ಜಿಗಿದಿವೆ. ಇನ್ಫೊಸಿಸ್ ಶೇ 1.74, ಟಾಟಾ ಕನ್ಸ್ಯೂಮರ್ ಶೇ 1.74, ಎನ್‌ಟಿಪಿಸಿ ಶೇ 1.26 ಮತ್ತು ಪವರ್ ಗ್ರಿಡ್ ಶೇ 1.08 ರಷ್ಟು ಇಳಿಕೆ ದಾಖಲಿಸಿವೆ.


ರಾಜೇಶ್‌ ಕುಮಾರ್‌ ಟಿ.ಆರ್‌.

ಮುನ್ನೋಟ: ಬಜಾಜ್ ಫೈನಾನ್ಸ್, ಬಜಾಜ್ ಫಿನ್‌ಸರ್ವ್, ವಿ ಗಾರ್ಡ್, ಟಾಟಾ ಮೋಟರ್ಸ್, ಮಾರುತಿ ಸುಜುಕಿ, ಟಾಟಾ ಸ್ಟೀಲ್, ಎಕ್ಸಿಸ್ ಬ್ಯಾಂಕ್, ಕೆನರಾ ಬ್ಯಾಂಕ್, ಬಜಾಜ್ ಆಟೋ, ಏಶಿಯನ್ ಪೇಂಟ್ಸ್, ಟಾಟಾ ಪವರ್ ಸೇರಿದಂತೆ ಪ್ರಮುಖ ಕಂಪನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ. ಜಾಗತಿಕ ವಿದ್ಯಮಾನಗಳು ಸೇರಿದಂತೆ ದೇಶಿಯ ಮಾರುಕಟ್ಟೆಯಲ್ಲಾಗುವ ಬದಲಾವಣೆಗಳು ಸೂಚ್ಯಂಕಗಳ ಮೇಲೆ ಪರಿಣಾಮ ಬೀರಲಿವೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು