ಮಂಗಳವಾರ, ಆಗಸ್ಟ್ 16, 2022
24 °C

ಮನೆಯ ಮುಖ್ಯಸ್ಥ ಮೃತಪಟ್ಟಾಗ ಹಣಕಾಸು ನಿರ್ವಹಣೆ ಹೇಗೆ?

ಪ್ರಮೋದ್ ಬಿ.ಪಿ. Updated:

ಅಕ್ಷರ ಗಾತ್ರ : | |

Prajavani

ಕೋವಿಡ್ ಸಾಂಕ್ರಾಮಿಕವು ಎಷ್ಟೋ ಜನರ ಬದುಕನ್ನು ಮೂರಾಬಟ್ಟೆ ಮಾಡಿದೆ, ಪುಟ್ಟ ಮಕ್ಕಳನ್ನು ಅನಾಥರನ್ನಾಗಿಸಿದೆ, ಕುಟುಂಬಗಳನ್ನು ಬೀದಿಗೆ ತಳ್ಳಿದೆ. ಈ ಮಹಾಮಾರಿ ಸೃಷ್ಟಿಸಿರುವ ನೋವು ಊಹಿಸಲಸಾಧ್ಯ. ಕೋವಿಡ್‌ನಿಂದಾಗಿ ಅಥವಾ ಇತರ ಯಾವುದೋ ಕಾರಣದಿಂದಾಗಿ ಮನೆಯ ಯಜಮಾನ/ಯಜಮಾನಿ ಮೃತಪಟ್ಟಾಗ ಆ ಕುಟುಂಬಕ್ಕೆ ದಿಕ್ಕು ತೋಚದಂತಹ ಸ್ಥಿತಿ ಎದುರಾಗುತ್ತದೆ. ಮನೆಯ ಮುಖ್ಯಸ್ಥರು ಹಠಾತ್ ಸಾವಿಗೀಡಾದಾಗ ಕುಟುಂಬದವರಿಗೆ ಎರಡು ರೀತಿಯ ನಷ್ಟ ಉಂಟಾಗುತ್ತದೆ. ಭಾವನಾತ್ಮಕ ನಷ್ಟ ಮತ್ತು ಆರ್ಥಿಕ ನಷ್ಟ.

ಭಾವನಾತ್ಮಕ ನಷ್ಟ ತುಂಬಿಕೊಡಲು ಯಾರಿಂದಲೂ ಸಾಧ್ಯವಿಲ್ಲ. ಆದರೆ, ಕೆಲವು ಹೆಜ್ಜೆಗಳನ್ನು ಸರಿಯಾಗಿ ಇರಿಸಿದರೆ ಆರ್ಥಿಕ ನಷ್ಟವನ್ನು ಒಂದಷ್ಟು ಕಡಿಮೆ ಮಾಡಿಕೊಳ್ಳಬಹುದು. ಮನೆಯ ಮುಖ್ಯಸ್ಥ ಸಾವನ್ನಪ್ಪಿದಾಗ ಹಣಕಾಸಿನ ವಿಚಾರದಲ್ಲಿ ನಿರ್ವಹಿಸಬೇಕಿರುವ ಜವಾಬ್ದಾರಿಗಳ ಬಗ್ಗೆ ಮಾಹಿತಿ ಇಲ್ಲಿದೆ.

1. ಮರಣ ಪ್ರಮಾಣ ಪತ್ರ ಬೇಗ ಪಡೆಯಿರಿ: ವ್ಯಕ್ತಿ ಮೃತಪಟ್ಟ 21 ದಿನಗಳ ಒಳಗಾಗಿ ಸ್ಥಳೀಯ ಆಡಳಿತ ಸಂಸ್ಥೆಗೆ, ಸಾವನ್ನಪ್ಪಿದ ವ್ಯಕ್ತಿಯ ಹೆಸರು ಮತ್ತು ಇತರ ದಾಖಲೆಗಳನ್ನು ನೀಡಿ ಮರಣ ಪ್ರಮಾಣ ಪತ್ರ ಪಡೆದುಕೊಳ್ಳಬೇಕು. ನಿಧನರಾದ ವ್ಯಕ್ತಿಯ ವಿಮೆ ಕ್ಲೇಮ್ ಸಲ್ಲಿಕೆಗೆ, ಬ್ಯಾಂಕ್ ಖಾತೆಯಲ್ಲಿನ ಹಣ ಪಡೆಯಲು, ಮ್ಯೂಚುವಲ್ ಫಂಡ್, ಷೇರು ಹೂಡಿಕೆಗಳನ್ನು ವರ್ಗಾಯಿಸಲು, ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿರುವ ಆಸ್ತಿ ಮಾರಾಟ ಮಾಡಲು ಹೀಗೆ ಅನೇಕ ಕೆಲಸಗಳಿಗೆ ಮರಣ ಪ್ರಮಾಣ ಪತ್ರ ಕೇಳುತ್ತಾರೆ. ಮರಣ ಪ್ರಮಾಣ ಪತ್ರದಲ್ಲಿ ಎಲ್ಲ ವಿವರಗಳು ಸರಿ ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

2. ಉಯಿಲು (ವಿಲ್) ಮಾಡಿದ್ದಾರಾ?: ವ್ಯಕ್ತಿಯ ನಿಧನದ ನಂತರ, ಆತನ ಆಸ್ತಿ ಯಾರಿಗೆ ಸಲ್ಲಬೇಕು ಎಂದು ತಿಳಿಸಿಕೊಡುವ ದಾಖಲೆಯೇ ಉಯಿಲು ಅಥವಾ ವಿಲ್. ಮೃತಪಟ್ಟ ವ್ಯಕ್ತಿ ವಿಲ್ ಬರೆದಿಟ್ಟಿದ್ದರೆ ಅದರಲ್ಲಿ ಹೇಳಿರುವಂತೆ ಆಸ್ತಿ ಹಂಚಿಕೆಯಾಗಬೇಕಾಗುತ್ತದೆ. ವಿಲ್ ಇಲ್ಲವೆಂದಾದರೆ ಕಾನೂನಿನ ಅನ್ವಯ ಆಸ್ತಿಯ ಪಾಲಾಗುತ್ತದೆ. ವಿಲ್ ಇಲ್ಲದಿದ್ದಾಗ ಕಾನೂನುಬದ್ಧ ಉತ್ತರಾಧಿಕಾರಿ ಪ್ರಮಾಣಪತ್ರ (Succession Certificate) ಪಡೆಯಬೇಕಾಗುತ್ತದೆ. ಈ ಕೆಲಸಕ್ಕೆ ವಕೀಲರ ನೆರವು ಪಡೆಯುವುದು ಒಳಿತು.

3. ದಾಖಲೆಗಳನ್ನು ಒಟ್ಟುಗೂಡಿಸಿ, ಮಾಹಿತಿ ಒದಗಿಸಿ, ನಾಮಿನಿ ಬಗ್ಗೆ ತಿಳಿಯಿರಿ: ಮೃತಪಟ್ಟ ವ್ಯಕ್ತಿಯ ಹೆಸರಿನಲ್ಲಿರುವ ಎಲ್ಲ ದಾಖಲೆಗಳನ್ನು ಒಟ್ಟುಗೂಡಿಸುವ ಕೆಲಸ ಜರೂರಾಗಿ ಆಗಬೇಕು. ಜೀವ ವಿಮೆ, ಆರೋಗ್ಯ ವಿಮೆ, ವಾಹನ ವಿಮೆ, ವಿವಿಧ ಹೂಡಿಕೆಗಳು, ಸಾಲದ ಕಂತುಗಳು, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ನೀರಿನ ಬಿಲ್, ವಿದ್ಯುತ್ ಬಿಲ್, ಎಲ್‌ಪಿಜಿ ನೋಂದಣಿ, ಆಸ್ತಿ ದಾಖಲೆಗಳು ಹೀಗೆ ಎಲ್ಲವನ್ನೂ ಪ್ರತ್ಯೇಕಿಸಿಕೊಳ್ಳಬೇಕು. ಎಲ್ಲಿಗೆ ಹಣ ಸಂದಾಯವಾಗಬೇಕು, ಎಲ್ಲಿಂದ ಹಣ ಬರಬೇಕಿದೆ ಎನ್ನುವುದನ್ನು ಅರಿತುಕೊಳ್ಳಬೇಕು. ನಂತರ ಆಯಾ ಸಂಸ್ಥೆಗಳಿಗೆ ನಿರ್ದಿಷ್ಟ ವ್ಯಕ್ತಿ ನಿಧನರಾಗಿರುವ ಬಗ್ಗೆ ಮಾಹಿತಿ ನೀಡಬೇಕು. ಕ್ಲೇಮ್ ಸಲ್ಲಿಸಲು, ಸಾಲದ ಬಾಕಿ ಪಾವತಿಸಲು ಮುಂತಾದ ಕಾರಣಗಳಿಗೆ ವ್ಯವಹರಿಸಬೇಕಿರುವುದರಿಂದ ವ್ಯಕ್ತಿಯ ನಿಧನದ ಬಗ್ಗೆ ಮಾಹಿತಿ ನೀಡುವುದು ಅಗತ್ಯ. ಇನ್ನು, ಬ್ಯಾಂಕ್ ಖಾತೆ, ವಿಮೆ, ಪಿಪಿಎಫ್, ಇಪಿಎಫ್, ಮ್ಯೂಚುವಲ್ ಫಂಡ್, ಷೇರು, ಎನ್‌ಪಿಎಸ್ ಮುಂತಾದ ಹೂಡಿಕೆಗಳಿದ್ದರೆ ಅವುಗಳಿಗೆ ನಾಮಿನಿ (ನಾಮ ನಿರ್ದೇಶನ) ಮಾಡಿದ್ದಾರಾ ಎಂಬುದನ್ನು ಗಮನಿಸಬೇಕು. ಇಲ್ಲವೆಂದಾದರೆ ಕಾನೂನು ಸಲಹೆ ಪಡೆದು ಮುಂದುವರಿಯಿರಿ.

4. ವಿಮೆ ಕ್ಲೇಮ್, ನಾಮಿನಿ ಅರ್ಜಿ ಸಲ್ಲಿಸಿ: ವಿಮೆ ಕ್ಲೇಮ್ ನೀಡಲು ವಿಮಾ ಕಂಪನಿಗಳು ಸುಮಾರು 45 ದಿನಗಳನ್ನು ತೆಗೆದುಕೊಳ್ಳುತ್ತವೆ. ಹಾಗಾಗಿ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಕ್ಲೇಮ್ ಅರ್ಜಿ ಸಲ್ಲಿಸಬೇಕು. ಪಿಪಿಎಫ್, ಎನ್‌ಪಿಎಸ್, ಇಪಿಎಫ್, ಮ್ಯೂಚುವಲ್ ಫಂಡ್ ಮತ್ತು ಷೇರು ಹೂಡಿಕೆಗಳ ಹಣವನ್ನು ನಾಮಿನಿಗಳು ಪಡೆದುಕೊಳ್ಳುವುದಕ್ಕೂ ಕೆಲವು ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಸಂಬಂಧಪಟ್ಟ ಇಲಾಖೆಗಳ ವೆಬ್‌ಸೈಟ್‌ನಲ್ಲಿ ಕ್ಲೇಮ್ ಮಾಹಿತಿ ಸಿಗುತ್ತದೆ.

5. ಸಾಲದ ಜವಾಬ್ದಾರಿ: ಜಂಟಿ ಖಾತೆಯಲ್ಲಿ ಮನೆ ಸಾಲ ಪಡೆದಿದ್ದು ಮುಖ್ಯ ಅರ್ಜಿದಾರ ಸಾವನ್ನಪ್ಪಿದರೆ ಸಹ ಅರ್ಜಿದಾರನಿಗೆ ಸಾಲದ ಹೊಣೆ ವರ್ಗಾವಣೆಯಾಗುತ್ತದೆ. ಸಹ ಅರ್ಜಿದಾರ ಸಾಲ ಕಟ್ಟುವುದಿಲ್ಲ ಎಂದರೆ ಬ್ಯಾಂಕಿನವರು ಕಾನೂನಿನ ಮೊರೆ ಹೋಗಬಹುದು. ಸಾಲಕ್ಕೆ ಒಬ್ಬನೇ ಅರ್ಜಿದಾರನಿದ್ದರೆ ವಿಲ್ ಅನುಷ್ಠಾನಕ್ಕೆ ತರುವ ವ್ಯಕ್ತಿಗೆ ಸಾಲ ತೀರಿಸುವ ಜವಾಬ್ದಾರಿ ಇರುತ್ತದೆ. ವಿಲ್ ಬರೆದಿಲ್ಲ ಎಂದರೆ ಕೋರ್ಟ್, ಆಡಳಿತಾಧಿಕಾರಿಯೊಬ್ಬರನ್ನು ನೇಮಿಸಿ ಸಮಸ್ಯೆಗೆ ಪರಿಹಾರ ಸೂಚಿಸುವಂತೆ ಹೇಳುತ್ತದೆ.

6. ಎಲ್ಲ ದಾಖಲೆಗಳಲ್ಲಿ ಹೆಸರು ಬದಲಿಸಿ: ಮನೆಯ ಮುಖ್ಯಸ್ಥರು ಮೃತಪಟ್ಟ ನಂತರದಲ್ಲಿ ಎಲ್ಲ ದಾಖಲೆಗಳನ್ನು ಉತ್ತರಾಧಿಕಾರಿಯ ಹೆಸರಿಗೆ ವರ್ಗಾಯಿಸಿಕೊಳ್ಳಬೇಕಾಗುತ್ತದೆ. ಆಸ್ತಿ ಪತ್ರ, ನೀರಿನ ಬಿಲ್, ವಿದ್ಯುತ್ ಬಿಲ್, ಆಸ್ತಿ ತೆರಿಗೆ ದಾಖಲೆಗಳು, ವಾಹನ ವಿಮೆ, ವಾಹನ ನೋಂದಣಿ, ಆರೋಗ್ಯ ವಿಮೆ ಮುಂತಾದ ದಾಖಲೆಗಳಲ್ಲಿ ಈ ತಿದ್ದುಪಡಿ ಅಗತ್ಯ.

ಸತತ 4ನೇ ವಾರ ಗಳಿಕೆ ಕಂಡ ಷೇರುಪೇಟೆ

ಷೇರುಪೇಟೆ ಸೂಚ್ಯಂಕಗಳು ಸತತ ನಾಲ್ಕನೇ ವಾರ ಗಳಿಕೆ ಕಂಡಿವೆ. ಕೋವಿಡ್ ಪ್ರಕರಣಗಳಲ್ಲಿ ಇಳಿಕೆ, ಮುಂಗಾರಿನ ಶುಭಾರಂಭ, ಲಸಿಕೆ ನೀಡುವಲ್ಲಿ ಪ್ರಗತಿ ಮತ್ತು ವೇಗದ ಆರ್ಥಿಕ ಚೇತರಿಕೆ ನಿರೀಕ್ಷೆ ಸೇರಿ ಹಲವು ಅಂಶಗಳು ಜಿಗಿತಕ್ಕೆ ಕಾರಣವಾಗಿವೆ. 52,474 ಅಂಶಗಳಿಗೆ ಏರಿಕೆ ಕಂಡಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.71ರಷ್ಟು ಗಳಿಕೆ ಕಂಡಿದೆ. 15,799 ಅಂಶಗಳಿಗೆ ಹೆಚ್ಚಳ ಕಂಡಿರುವ ನಿಫ್ಟಿ ಶೇ 0.82ರಷ್ಟು ಏರಿದೆ.

ವಲಯವಾರು ಪ್ರಗತಿಯಲ್ಲಿ ನಿಫ್ಟಿ ಮಾಹಿತಿ ತಂತ್ರಜ್ಞಾನ ಅತಿ ಹೆಚ್ಚು ಅಂದರೆ ಶೇ 4.5ರಷ್ಟು ಜಿಗಿದಿದೆ. ನಿಫ್ಟಿ ಮಾಧ್ಯಮ ವಲಯ ಶೇ 3.5ರಷ್ಟು ಸುಧಾರಿಸಿದೆ. ನಿಫ್ಟಿ ಫಾರ್ಮಾ ವಲಯ ಶೇ 2.5ರಷ್ಟು ಹೆಚ್ಚಳವಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ₹ 1,738.22 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶಿ ಸಾಂಸ್ಥಿಕ ಹೂಡಿಕೆದಾರರು ₹ 823.54 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ.

ಏರಿಕೆ-ಇಳಿಕೆ: ನಿಫ್ಟಿಯಲ್ಲಿ ಪವರ್ ಗ್ರಿಡ್ ಶೇ 9ರಷ್ಟು, ಎನ್‌ಟಿಪಿಸಿ ಶೇ 6.5ರಷ್ಟು, ಕೋಲ್ ಇಂಡಿಯಾ ಶೇ 6.5ರಷ್ಟು, ಎಚ್‌ಸಿಎಲ್ ಟೆಕ್ ಶೇ 5ರಷ್ಟು, ಟೆಕ್ ಮಹೀಂದ್ರ ಶೇ 5.5ರಷ್ಟು, ಟಿಸಿಎಸ್ ಶೇ 4ರಷ್ಟು ಇನ್ಫೊಸಿಸ್ ಶೇ 4.5ರಷ್ಟು, ಟಾಟಾ ಮೋಟರ್ಸ್ ಶೇ 5ರಷ್ಟು, ಟಾಟಾ ಕನ್ಸ್ಯೂಮರ್ ಶೇ 4ರಷ್ಟು, ಟಾಟಾ ಸ್ಟೀಲ್ ಶೇ 3ರಷ್ಟು ಮತ್ತು ಟೈಟಾನ್ ಶೇ 3ರಷ್ಟು ಹೆಚ್ಚಳವಾಗಿವೆ. ಎಚ್‌ಡಿಎಫ್‌ಸಿ ಶೇ 2.5ರಷ್ಟು, ಬಜಾಜ್ ಫಿನ್‌ಸರ್ವ್ ಶೇ 2ರಷ್ಟು, ಬಜಾಜ್ ಆಟೋ ಶೇ 2ರಷ್ಟು ಮತ್ತು ಒಎನ್‌ಜಿಸಿ ಶೇ 2ರಷ್ಟು ಇಳಿಕೆ ಕಂಡಿವೆ.

ಮುನ್ನೋಟ: ಕೋಲ್ ಇಂಡಿಯಾ, ಐಡಿಎಫ್‌ಸಿ, ಗ್ರೀನ್ ಪ್ಲೇ, ಈಸ್ ಮೈ ಟ್ರಿಪ್, ಎಲ್‌ಐಸಿ ಹೌಸಿಂಗ್ ಫೈನಾನ್ಸ್, ಎಚ್‌ಸಿಜಿ, ಪವರ್ ಗ್ರಿಡ್, ವರ್ಲ್ ಪೂಲ್, ಲೆಮನ್ ಟ್ರೀ, ಎನ್‌ಟಿಪಿಸಿ ಸೇರಿ ಪ್ರಮುಖ ಕಂಪನಿಗಳು ಈ ವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಲಿವೆ.

ಷೇರುಪೇಟೆ ಸತತ ನಾಲ್ಕು ವಾರ ಹೆಚ್ಚಳ ಕಂಡು ಸಾರ್ವಕಾಲಿಕ ಏರಿಕೆ ದಾಖಲಿಸಿದ್ದರೂ ಇದೇ ವೇಗದಲ್ಲಿ ಸೂಚ್ಯಂಕಗಳು ಮುಂದುವರಿಯುವ ಸಾಧ್ಯತೆ ಕಡಿಮೆ. ಸದ್ಯಕ್ಕೆ ಪೇಟೆಯಲ್ಲಿ ಏರಿಳಿತದ ಹಾದಿ ಇದ್ದೇ ಇರಲಿದೆ.

(ಲೇಖಕ: ಸುವಿಷನ್ ಹೋಲ್ಡಿಂಗ್ಸ್ ಪ್ರೈ.ಲಿ.,ನ ಸಂಶೋಧನಾ ವಿಭಾಗದ ಮುಖ್ಯಸ್ಥ)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು