ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ಸಾಕ್ಷರತೆ: ಕೋಟ್ಯಧಿಪತಿಯಾಗಲು ಈ 6 ಗುಣ ಬೇಕು

ಅಕ್ಷರ ಗಾತ್ರ

ಕೋಟ್ಯಧಿಪತಿ ಆಗಬೇಕು ಎನ್ನುವ ಕನಸನ್ನು ಅನೇಕರು ಕಾಣುತ್ತಾರೆ. ಆದರೆ ಅದರಲ್ಲಿ ಸಫಲರಾಗುವವರು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಕೋಟ್ಯಧಿಪತಿ ಎನ್ನುವುದು ಒಂದು ಮನಸ್ಥಿತಿ. ಅದರ ಬೆನ್ನುಹತ್ತಿ ಹಣಕಾಸು ಶಿಸ್ತಿನಿಂದ ಕಾರ್ಯಪ್ರವೃತ್ತರಾದರೆ ಮಾತ್ರ ಯಶಸ್ಸು ಸಿಗುತ್ತದೆ. ಬಹುತೇಕ ಕೋಟ್ಯಧಿಪತಿಗಳಲ್ಲಿ ಕಂಡುಬರುವ 6 ಪ್ರಮುಖ ಗುಣಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

ತೋರಿಕೆ ಶ್ರೀಮಂತಿಕೆಯಿಂದ ದೂರವಿರುವುದು: ‘ನೀವೆಷ್ಟು ಶ್ರೀಮಂತರು ಎಂದು ತೋರಿಸಿಕೊಳ್ಳುವ ಸಲುವಾಗಿ ಮಾಡುವ ಖರ್ಚು, ನಿಮ್ಮನ್ನು ಅತ್ಯಂತ ವೇಗವಾಗಿ ಬಡವರನ್ನಾಗಿಸುತ್ತದೆ’ ಎಂದು ‘ದಿ ಸೈಕಾಲಜಿ ಆಫ್ ಮನಿ’ ಪುಸ್ತಕದ ಲೇಖಕ ಮೋರ್ಗನ್ ಹೌಸೆಲ್ ಹೇಳುತ್ತಾರೆ. ಪಕ್ಕದ ಮನೆಯವರು ದುಬಾರಿ ಕಾರು ಖರೀದಿಸಿದರು, ಸ್ನೇಹಿತರು ಹೊಸ ಮೊಬೈಲ್ ಕೊಂಡರು ಎನ್ನುವ ಕಾರಣಕ್ಕೆ ಯಾವುದೋ ಹೊಸ ವಸ್ತುವಿನ ಖರೀದಿ ಮಾಡುತ್ತೀರಿ ಎಂದಾದಲ್ಲಿ ನೀವು ತೋರಿಕೆ ಶ್ರೀಮಂತಿಕೆಯ ಹಂಗಿನಲ್ಲಿದ್ದೀರಿ ಎನ್ನುವುದು ಖಚಿತ. ಏನನ್ನಾದರೂ ಕೊಳ್ಳುವ ಮೊದಲು ನಮ್ಮ ಅಗತ್ಯ, ಆದ್ಯತೆ ಮತ್ತು ಆರ್ಥಿಕ ಪರಿಸ್ಥಿತಿಯ ಬಗೆಗೆ ಸ್ಪಷ್ಟ ಕಲ್ಪನೆ ಇಟ್ಟುಕೊಂಡಿರಬೇಕು. ಸಾಧ್ಯವಾದಷ್ಟೂ ಕ್ರೆಡಿಟ್ ಕಾರ್ಡ್, ಇಎಂಐ ಸಾಲಗಳಿಂದ ದೂರವಿದ್ದು, ಉಳಿತಾಯದಿಂದ ಮಾತ್ರ ನಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳಬೇಕು.

ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವುದು: ಬಹುತೇಕರು ಜೀವನ ನಿರ್ವಹಣೆಗಾಗಿ ನೌಕರಿಯಿಂದ ಬರುವ ಸಂಬಳ, ಇಲ್ಲ ಸಣ್ಣ ಬಿಸಿನೆಸ್‌ನಿಂದ ಬರುವ ಆದಾಯ ನೆಚ್ಚಿಕೊಂಡಿರುತ್ತಾರೆ. ಆದರೆ ಯಾವುದೇ ಸಂಕಷ್ಟದ ಕಾಲದಲ್ಲೂ ನಮ್ಮ ಆರ್ಥಿಕ ಸ್ಥಿತಿ ಹಳಿತಪ್ಪದಂತೆ ಎಚ್ಚರ ವಹಿಸಲು ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳುವ ಅವಶ್ಯಕತೆಯಿದೆ. ಸಂಭಾವನೆ, ಸ್ವಂತ ವ್ಯವಹಾರದ ಆದಾಯ,ಬಾಡಿಗೆ ಆದಾಯ, ಹೂಡಿಕೆ ಮೇಲಿನ ಗಳಿಕೆ, ಹಕ್ಕುಸ್ವಾಮ್ಯ ಮತ್ತು ಪುನರಾವರ್ತನೆ... ಹೀಗೆ ಯಾವುದೇ ನಿರ್ದಿಷ್ಟ ಕಾರ್ಯಕ್ಷೇತ್ರದಲ್ಲಿ ಆದಾಯದ ಮೂಲಗಳನ್ನು ಹೆಚ್ಚಿಸಿಕೊಳ್ಳಲು ಏಳು ಮಾರ್ಗಗಳಿವೆ. ಅವುಗಳನ್ನು ಕಂಡುಕೊಂಡರೆ ನೀವು ಭವಿಷ್ಯದ ಆದಾಯದ ಬಗ್ಗೆ ಚಿಂತಿಸಬೇಕಿಲ್ಲ. ಡಿಜಿಟಲ್ ಯುಗದಲ್ಲಿ ಪರ್ಯಾಯ ಆದಾಯದ ಮೂಲಗಳನ್ನು ಕಂಡುಕೊಳ್ಳುವುದಕ್ಕೆ ಹಲವು ಆಯ್ಕೆಗಳಿವೆ. ಉದಾಹರಣೆಗೆ ಬ್ಲಾಗ್ ಬರವಣಿಗೆ, ಕಂಟೆಂಟ್ ರೈಟಿಂಗ್, ವಿಡಿಯೊ ಎಡಿಟಿಂಗ್, ಡಿಜಿಟಲ್ ಮಾರ್ಕೆಟಿಂಗ್, ಯುಟ್ಯೂಬ್‌ ಆರಂಭಿಸುವುದು, ಆನ್‌ಲೈನ್ ಟೀಚಿಂಗ್... ಹೀಗೆ ಅನೇಕ ಅವಕಾಶಗಳಿವೆ.

ಹಣಕಾಸು ಯೋಜನೆ ರೂಪಿಸುವುದು: ‘ಯಾವ ವ್ಯಕ್ತಿ ಕುಟುಂಬದವರ, ಸಂಬಂಧಿಕರ ಮುಲಾಜಿಗೆ ಸಿಕ್ಕಿ ಹಣ ವ್ಯಯಿಸುವ ಬಗ್ಗೆ ತೀರ್ಮಾನಿಸುತ್ತಾನೋ ಆ ವ್ಯಕ್ತಿ ಆರ್ಥಿಕ ಹಿನ್ನಡೆ ಅನುಭವಿಸುತ್ತಾನೆ’ ಎಂದು ಖ್ಯಾತ ಹೂಡಿಕೆ ತಜ್ಞ ವಾರನ್ ಬಫೆಟ್ ಹೇಳುತ್ತಾರೆ. ಕ್ರಮಬದ್ಧವಾದ ಉಳಿತಾಯ ಮತ್ತು ಹೂಡಿಕೆಗೆ ಸೂಕ್ತ ಹಣಕಾಸು ಯೋಜನೆ ರೂಪಿಸುವುದು ಬಹಳ ಮುಖ್ಯ. ಮೊದಲು ಯಾವ ಕಾರಣಕ್ಕೆ ಅಂದರೆ, ಮಕ್ಕಳ ವಿದ್ಯಾಭ್ಯಾಸ, ನಿವೃತ್ತಿ ಜೀವನ, ಕಾರು ಖರೀದಿ, ಮನೆ ಕಟ್ಟಲು, ಹೀಗೆ ಉದ್ದೇಶ ನಿರ್ಧರಿಸಿದ ಬಳಿಕ ಎಲ್ಲಿ ಹಣ ತೊಡಗಿಸಬೇಕು ಎನ್ನುವ ಬಗ್ಗೆ ತೀರ್ಮಾನಿಸಬೇಕು. ಆ ನಂತರದಲ್ಲಿ ಕ್ರಮಬದ್ಧವಾಗಿ ಹೂಡಿಕೆ ಮುನ್ನಡೆಸಿಕೊಂಡು ಹೋಗಬೇಕು. ಹೂಡಿಕೆ ಮಾಡುವಾಗ ಮ್ಯೂಚುವಲ್ ಫಂಡ್, ಷೇರು ಮಾರುಕಟ್ಟೆ, ರಿಯಲ್ ಎಸ್ಟೇಟ್ ಹೂಡಿಕೆಯನ್ನು ಕಡೆಗಣಿಸಬಾರದು. ಬೆಲೆ ಏರಿಕೆ ಅಂದರೆ ಹಣದುಬ್ಬರವನ್ನು ಮೀರಿ ಗರಿಷ್ಠ ಲಾಭಾಂಶ ನೀಡುವ ಶಕ್ತಿ ಈ ಹೂಡಿಕೆಗಳಿಗಿದೆ.

ಹೂಡಿಕೆ ಮೊದಲು, ಖರ್ಚು ಆಮೇಲೆ ಎನ್ನುವುದು: ಉಳಿತಾಯ ಒಂದು ಮನಸ್ಥಿತಿ. ಹೆಚ್ಚು ಆದಾಯ ಇರುವವರು ಮಾತ್ರ ಉಳಿತಾಯ, ಹೂಡಿಕೆ ಮಾಡಬಹುದು ಎನ್ನುವುದು ಒಪ್ಪುವ ಮಾತಲ್ಲ. ಬಹುತೇಕರ ಲೆಕ್ಕಾಚಾರದಲ್ಲಿ ಗಳಿಸಿದ ಆದಾಯದಲ್ಲಿ ಖರ್ಚು ಮಾಡಿದ ನಂತರ ಉಳಿಯುವ ಹಣವೇ ಉಳಿತಾಯ. ಆದರೆ ಉಳಿತಾಯದ ಈ ಲೆಕ್ಕಾಚಾರ ಬದಲಾಗಬೇಕು. ಗಳಿಸಿದ ಆದಾಯದಲ್ಲಿ ಉಳಿಸಿ, ಹೂಡಿಕೆ ಮಾಡಬೇಕು. ನಂತರ ಪ್ಲಾನ್ ಮಾಡಿಕೊಂಡು ಖರ್ಚು ಮಾಡಿದರೆ ಖಂಡಿತ ಹಣವಂತರಾಗಲು ಸಾಧ್ಯ. ವ್ಯಕ್ತಿಯೊಬ್ಬ ತಾನು ಗಳಿಸುವ ಆದಾಯದಲ್ಲಿ ಕನಿಷ್ಠ ಶೇಕಡ 20 ರಿಂದ 30 ರಷ್ಟು ಹಣವನ್ನಾದರು ಹೂಡಿಕೆ ಮಾಡಲೇಬೇಕು. ಆದಾಯ–ಹೂಡಿಕೆ = ಖರ್ಚು ಎನ್ನುವ ಲೆಕ್ಕಾಚಾರ ನಿಮ್ಮದಾಗಬೇಕು.

ಇನ್ಶುರೆನ್ಸ್‌ಗೆ ಆದ್ಯತೆ ಕೊಡುವುದು: ಬಹಳಷ್ಟು ಮಂದಿ 22ನೇ ವಯಸ್ಸಿಗೆ ಬರುವಷ್ಟರಲ್ಲಿ ಕೆಲಸಕ್ಕೆ ಸೇರಿರುತ್ತಾರೆ. ಆದರೆ ವರ್ಷಗಳೇ ಕಳೆದರೂ ಆರೋಗ್ಯ ವಿಮೆ ಮತ್ತು ಟರ್ಮ್ ಲೈಫ್ ಇನ್ಶುರೆನ್ಸ್ ಪಡೆಯುವ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ವೈಯಕ್ತಿಕ ಹಣಕಾಸು ಯೋಜನೆಯಲ್ಲಿ ಉಳಿತಾಯ ಮತ್ತು ಹೂಡಿಕೆಗಿಂತಲೂ ಮುಖ್ಯವಾದದ್ದು ಸುರಕ್ಷತೆ. ಹಾಗಾಗಿ ಇನ್ಶುರೆನ್ಸ್ ಬಹಳ ಮುಖ್ಯವಾದ ಅಂಶ. ಕೆಲಸಕ್ಕೆ ಸೇರಿದ ಕೂಡಲೇ ಒಂದು ಆರೋಗ್ಯ ವಿಮೆ ಮತ್ತು ಟೈರ್ಮ್ ಲೈಫ್ ಇನ್ಶುರೆನ್ಸ್ ಪಡೆದುಕೊಳ್ಳುವುದು ಉತ್ತಮ. ನಿಮ್ಮ ವಾರ್ಷಿಕ ಆದಾಯದ 15 ರಿಂದ 20 ಪಟ್ಟು ಟರ್ಮ್ ಲೈಫ್ ಇನ್ಶೂರೆನ್ಸ್ ಖರೀದಿ ಮಾಡಿದರೆ ಒಳಿತು.

ರಾಜೇಶ್ ಕುಮಾರ್ ಟಿ.ಆರ್.
ರಾಜೇಶ್ ಕುಮಾರ್ ಟಿ.ಆರ್.

ತುರ್ತುನಿಧಿ ಕಡೆಗಣಿಸದಿರುವುದು: ವೈದ್ಯಕೀಯ ತುರ್ತು, ಉದ್ಯೋಗ ನಷ್ಟ, ಉದ್ಯಮ ನಷ್ಟ ಹೀಗೆ ಅನೇಕ ಕಾರಣಗಳಿಗೆ ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಆರ್ಥಿಕ ಮುಗ್ಗಟ್ಟು ಎದುರಿಸುವುದು ಸರ್ವೇ ಸಾಮಾನ್ಯ. ಇಂತಹ ಅನಿರೀಕ್ಷಿತ ಸಂದರ್ಭಗಳಿಗಾಗಿ ತುರ್ತು ನಿಧಿ ಅಂದರೆ ಎಮರ್ಜೆನ್ಸಿ ಫಂಡ್ ಅಗತ್ಯ. ಕಷ್ಟಕಾಲದಲ್ಲಿ ಇದು ನಮ್ಮನ್ನು ಕಾಪಾಡುವ ಜತೆಗೆ, ಹೂಡಿಕೆಗಳಿಗೆ ಅಗತ್ಯ ಆರ್ಥಿಕ ಸಂಪನ್ಮೂಲವನ್ನು ಒದಗಿಸಿಕೊಡುತ್ತದೆ. ಕನಿಷ್ಠ 6 ತಿಂಗಳ ವೇತನವನ್ನು ತುರ್ತು ನಿಧಿಯಲ್ಲಿ ಇಟ್ಟುಕೊಳ್ಳುವುದು ಒಳಿತು. ಸ್ವಂತ ಉದ್ಯೋಗ ಹೊಂದಿರುವವರು ಕನಿಷ್ಠ 12 ತಿಂಗಳ ಆದಾಯವನ್ನು ತುರ್ತು ನಿಧಿಗೆ ಮೀಸಲಿಡಬಹುದು.

ನೆನಪಿಡಿ: ಮೇಲೆ ಕೊಟ್ಟಿರುವ 6 ಅಂಶಗಳು ಕೋಟ್ಯಧಿಪತಿ ಆಗಬೇಕು ಎನ್ನುವ ಮನಸ್ಥಿತಿಯವರು ರೂಢಿಸಿಕೊಳ್ಳಲೇಬೇಕಾದ ವಿಚಾರಗಳು. ಇನ್ನೂ ಇಂತಹ ಅನೇಕ ಶಿಸ್ತಿನ ಅಂಶಗಳನ್ನು ಹಣಕಾಸು ನಿರ್ವಹಣೆಯಲ್ಲಿ ಅಳವಡಿಸಿಕೊಂಡಾಗ ಕೋಟ್ಯಧಿಪತಿಯ ಕನಸು ಸಾಕಾರಗೊಳ್ಳುತ್ತದೆ.

(ಲೇಖಕ ಚಾರ್ಟರ್ಡ್ ಅಕೌಂಟೆಂಟ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT