ಭಾನುವಾರ, ಜುಲೈ 3, 2022
27 °C
ಭಾಘ 83

ವೇದವ್ಯಾಸರ ಶಿವಪುರಾಣಸಾರ| ಶಿವನ ಎಡಪಾರ್ಶ್ವದಲ್ಲಿ ಹುಟ್ಟಿದ ವಿಷ್ಣು

ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ Updated:

ಅಕ್ಷರ ಗಾತ್ರ : | |

ಶಿವನ ಎಡಪಾರ್ಶ್ವದಿಂದ ಸೃಷ್ಟಿಯಾದ ಪುರುಷನ ಸೌಂದರ್ಯವನ್ನು ನಾರದನಿಗೆ ಬ್ರಹ್ಮ ಹೀಗೆ ವರ್ಣಿಸುತ್ತಾನೆ. ‘ಯಾರಿಗೂ ಸಾಟಿಯಾಗದ ಶ್ಯಾಮಲವಾದ ಶರೀರ. ಕಮಲದಂತಹ ನಯನ. ವಸ್ತ್ರಗಳು ಚಿನ್ನದ ಎಳೆಗಳ ಕುಸುರಿ ಕೆಲಸದಿಂದ ಶೋಭಿಸುತ್ತಿದ್ದವು. ಆತನ ನೀಳವಾದ ತೋಳುಗಳು ಬಹು ಬಲಿಷ್ಠವಾಗಿದ್ದವು.’

 ಆ ಸುಂದರಪುರುಷ ಶಿವನಿಗೆ ನಮಸ್ಕರಿಸಿ ‘ಎಲೈ ಸ್ವಾಮಿಯೇ! ನನ್ನ ಹೆಸರು ಏನು? ನಾನು ಮಾಡಬೇಕಾದ ಕೆಲಸ ಯಾವುದು?’ ಅಂತ ಕೇಳಿದ. ಆಗ ಶಂಕರ ‘ನೀನು ಎಲ್ಲಾ ಕಡೆಯಲ್ಲೂ ವ್ಯಾಪಿಸಿರುವುದರಿಂದ ವಿಷ್ಣು ಎಂಬುದಾಗಿ ನಿನ್ನ ಹೆಸರು ಪ್ರಸಿದ್ಧವಾಗುವುದು. ಭಕ್ತರಿಗೆ ಸೌಖ್ಯಗಳನ್ನುಂಟುಮಾಡುವಂಥ ಇನ್ನೂ ಅನೇಕ ಹೆಸರುಗಳು ನಿನಗೆ ಉಂಟಾಗುವುವು. ನೀನು ದೃಢವಾದ ಮನಸ್ಸಿನಿಂದ ಪರಮಸಾಧಕವಾದಂಥ ತಪಸ್ಸನ್ನಾಚರಿಸು’ ಎಂದು ಹೇಳಿ, ತನ್ನ ಶ್ವಾಸಮಾರ್ಗದಿಂದ ವೇದಗಳನ್ನು ವಿಷ್ಣುವಿಗೆ ಉಪದೇಶವಿತ್ತ. ಜ್ಯೋತಿರ್ಮಯನಾಗಿ ಪ್ರಕಾಶಿಸುತ್ತಿದ್ದ ಆ ಪರಮೇಶ್ವರನು ಶಕ್ತಿಯೊಡನೆ ಅಂತರ್ಧಾನವನ್ನು ಹೊಂದಿದ. ಹನ್ನೆರಡು ಸಹಸ್ರ ದೇವವರ್ಷಗಳ ಕಾಲ ತಪಸ್ಸು ಮಾಡಿದರೂ ವಿಷ್ಣುವು ತನಗೆ ಅಪೇಕ್ಷಿತವಾದ ಎಲ್ಲ ಇಷ್ಟಾರ್ಥಗಳನ್ನೂ ಕೊಡುವ ಶಿವನ ದರ್ಶನವನ್ನು ಪಡೆಯಲಾಗಲಿಲ್ಲ. ಇದರಿಂದ ವಿಷ್ಣುವಿನ ಮನಸ್ಸು ಚಿಂತೆಯಲ್ಲಿ ಬೇಯುತ್ತಾ, ಶಿವನನ್ನು ನೆನೆಯುತ್ತಾ ನಾನೀಗ ಏನು ಮಾಡಬೇಕು ಎಂದು ಯೋಚಿಸುತ್ತಿತ್ತು. ಅಷ್ಟರಲ್ಲಿಯೇ, ಈ ಸಂಶಯ ನಿವಾರಣೆಗಾಗಿ ಮರಳಿ ತಪಸ್ಸನ್ನಾಚರಿಸಬೇಕು – ಎಂಬ ಶುಭಕರವಾದ ಮಾತು ಶಿವನಿಂದ ಕೇಳಿಸಿತು.

ಆ ಮಾತನ್ನು ಕೇಳಿದ ವಿಷ್ಣುವು ಪರಬ್ರಹ್ಮಮೂರ್ತಿಯಲ್ಲೇ ನೆಟ್ಟ ಮನಸ್ಸುಳ್ಳವನಾಗಿ ಧ್ಯಾನಿಸುತ್ತಾ, ಬಹಳ ಕಾಲ ಘೋರವಾದ ತಪಸ್ಸನ್ನು ಆಚರಿಸಿದ. ಶಿವನಿಂದ ಸೃಷ್ಟಿಸಲ್ಪಟ್ಟ ಪುರುಷನಾದ ವಿಷ್ಣು ಧ್ಯಾನದಿಂದ ಎಚ್ಚೆತ್ತು ಪ್ರಸನ್ನವಾದ ಮನಸ್ಸಿನಿಂದ, ‘ಅಬ್ಬಾ! ಆ ತತ್ವವೆಂತಹುದು’ ಎಂದು ವಿಸ್ಮಯಪಟ್ಟ. ಹೀಗೆ ಬಹುಕಾಲ ತಪಸ್ಸುಮಾಡಿ, ಬಳಲಿ ಬೆಂಡಾಗಿಹೋದ ಆ ವಿಷ್ಣುವಿನ ಅವಯವಗಳಿಂದ ಬಹುವಿಧವಾದ ನೀರು ಧಾರಾಕಾರವಾಗಿ ಶಿವನ ಮಾಯೆಯಿಂದ ಹರಿಯತೊಡಗಿತು. ಆ ನೀರು ಸುತ್ತಲ ಪ್ರದೇಶವನ್ನೆಲ್ಲಾ ವ್ಯಾಪಿಸಿತು. ಮುಟ್ಟಿದೊಡನೆಯೇ ಪಾಪಗಳೆಲ್ಲವನ್ನೂ ಸಂಹರಿಸುವಂತಹ ಆ ನೀರು ಬ್ರಹ್ಮರೂಪವೆನಿಸಿತು. ಆಗ ವಿಷ್ಣುವೆಂಬ ಹೆಸರುಳ್ಳ ಆ ಪುರುಷನು ತುಂಬಾ ಬಳಲಿದವನಾಗಿ ಬಹಳ ಕಾಲ ಶಿವಮಾಯೆಯಿಂದ ಮೈಮರೆತು ಆ ನೀರಿನ ಮೇಲೆಯೇ ಮಲಗಿ ಬಿಟ್ಟ. ಆಗಲೇ ಆತನಿಗೆ ವೇದಪ್ರತಿವಾದಿತವಾದ ‘ನಾರಾಯಣ’ನೆಂಬ ಹೆಸರು ಉಂಟಾಯಿತು. (ನರನಿಂದ ಅಂದರೆ ಪುರುಷನಿಂದ ಹುಟ್ಟಿದ ನೀರು, ನಾರವೆನಿಸಿತು. ಆ ನಾರವೇ ಅಯನವಾಗಿ ಎಂದರೆ; ಮಾರ್ಗವಾಗಿ ಉಳ್ಳವನು ನಾರಾಯಣ). ಅಂದರೆ ಶಿವನ ಶಕ್ತಿಯಿಂದ ಹುಟ್ಟಿದ ನಾರಾಯಣ ಎಂದರ್ಥ.’

‘ಈ ನಡುವೆ, ಮಹಾತ್ಮನಾದ ಆ ಪ್ರಾಕೃತಪುರುಷನ ದೆಸೆಯಿಂದ ಇಪ್ಪತ್ತನಾಲ್ಕು ತತ್ವಗಳು ಹುಟ್ಟಿದವು. ಪ್ರಕೃತಿಯಿಂದ ಮಹತ್ತೆಂಬುದು ಹುಟ್ಟಿತು. ಆ ಮಹತ್ತಿನಿಂದ ಸತ್ವ, ರಜಸ್ಸು, ತಪಸ್ಸುಗಳೆಂಬ ಗುಣಗಳು ಹುಟ್ಟಿದವು. ಈ ಗುಣತ್ರಯದಿಂದ, ಸಾತ್ವಿಕಾಹಂಕಾರ, ರಾಜಸಾಹಂಕಾರ, ತಾಮಸಾಹಂಕಾರ ಎಂಬ ಮೂರು ಬಗೆಯ ಅಹಂಕಾರಗಳು ಹುಟ್ಟಿದವು. ಆ ಅಹಂಕಾರದಿಂದ ಶಬ್ದ, ಸ್ಪರ್ಶ, ರೂಪ, ರಸ, ಗಂಧಗಳೆಂಬ ಐದು ತನ್ಮಾತ್ರಗಳೂ; ಈ ತನ್ಮಾತ್ರಗಳಿಂದ ಆಕಾಶ, ವಾಯು, ತೇಜಸ್ಸು, ಜಲ, ಭೂಮಿ ಎಂಬ ಪಂಚಭೂತಗಳೂ ಹುಟ್ಟಿದವು. ಆಗಲೇ, ಪಂಚಭೌತಿಕಗಳಾದ ಶ್ರೋತ್ರ, ತ್ವಕ್, ಚಕ್ಷುಸ್ಸು, ಜಿಹ್ವಾ, ಘ್ರಾಣಗಳೆಂಬ ಐದು ಜ್ಞಾನೇಂದ್ರಿಯಗಳು ಹುಟ್ಟಿದವು. ಪ್ರಕೃತಿ, ಮಹತ್ತು, ಗುಣಗಳು, ಅಹಂಕಾರ ಮತ್ತು ತನ್ಮಾತ್ರಗಳೈದು, ಪಂಚಭೂತಗಳೈದು, ಜ್ಞಾನೇಂದ್ರಿಯಗಳೈದು, ಕರ್ಮೇಂದ್ರಿಯಗಳೈದು ಸೇರಿ ಇಪ್ಪತ್ತನಾಲ್ಕು ತತ್ವಗಳು. ಪುರುಷನೊಬ್ಬನ ಹೊರತು, ಪ್ರಕೃತಿ ಮೊದಲುಗೊಂಡು ಉಳಿದುದೆಲ್ಲವೂ ಜಡವಾಗಿವೆ ಅಂತ ತಿಳಿಯಬೇಕು. ಶಿವನ ಇಚ್ಛೆಯಿಂದ ನಾರಾಯಣನು ಇವೆಲ್ಲವನ್ನೂ ತೆಗೆದುಕೊಂಡು ಬ್ರಹ್ಮರೂಪದ ಆ ನೀರಿನ ಮೇಲೆ ಮಲಗಿದ್ದನು’ ಎಂದು ಬ್ರಹ್ಮ ಹೇಳುವಲ್ಲಿಗೆ ವಿಷ್ಣುವಿನ ಉತ್ಪತ್ತಿ ವರ್ಣನವೆಂಬ ಆರನೆಯ ಅಧ್ಯಾಯ ಮುಗಿಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು