ಶನಿವಾರ, ಜೂನ್ 6, 2020
27 °C
ಕಷ್ಟಕಾಲದಲ್ಲಿ ಕೈ ಹಿಡಿಯದ ಮೋದಿ – ಶಾ: ತಪಸ್ಸಿಗೆ ಕುಳಿತಿಹರು‌‌‌‌ ಬಹುತೇಕ ಸಚಿವರು

ಗತಿಬಿಂಬ | ಕಷ್ಟಕಾಲದಲ್ಲಿ ಕೈ ಹಿಡಿಯದ ಮೋದಿ, ಶಾ: ಯಡಿಯೂರಪ್ಪ ಏಕಾಂಗಿ ಹೋರಾಟ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

ನಿಜವಾದ ಜನನಾಯಕ ದೇವರಾಗಿರುವುದಿಲ್ಲ. ದೇವರಾದರೆ ಆತ ಜನರ ಕೈಗೂ ಸಿಗುವುದಿಲ್ಲ; ಆತನನ್ನು ಟೀಕಿಸಿದರೆ ಭಕ್ತಗಣ ಭುಸುಗುಡುತ್ತದೆ; ಮೊಕದ್ದಮೆಗಳು ಬೆನ್ನ ಮೇಲೆ ಬೀಳತೊಡಗುತ್ತವೆ. ಈಗ ದೇಶದಲ್ಲಿ ಆಗಿರುವುದು ಅದೇ. ಕೊರೊನಾ ಆವರಿಸಿಕೊಂಡ ಬಳಿಕ ಇಂತಿಪ್ಪ ನಮ್ಮ ‘ದೇವರ’ ಮಹಿಮೆ ಅರಿವಿಗೆ ಬರುತ್ತಿದೆ.


ವೈ.ಗ. ಜಗದೀಶ್‌

ಇತ್ತ ಕರ್ನಾಟಕದಲ್ಲಿ ಎರಡು ತಿಂಗಳ ಹಿಂದೆ ಕೇಳಿಸುತ್ತಿದ್ದ ಸರ್ಕಾರದಲ್ಲಿ ‘ಬಿರುಗಾಳಿ’ ಎಬ್ಬಿಸುವ ತಂಟೆಕೋರರ ಸದ್ದು ಸದ್ಯಕ್ಕೆ ಅಡಗಿದೆ. ‘77 ವರ್ಷ ದಾಟಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಅಧಿಕಾರ ನಡೆಸುವ ತ್ರಾಣವಿಲ್ಲ, ಅವರು ರಾಜಕೀಯ ವಿಶ್ರಾಂತಿ ಪಡೆಯುವುದು ಸೂಕ್ತ. ಅವರನ್ನು ಬದಲಿಸಿದರೆ ಮಾತ್ರ ಸಮರ್ಥ ಸರ್ಕಾರ  ಸಾಧ್ಯ’ ಎಂಬಂತಹ ವಾದಸರಣಿಗಳನ್ನು ಬಿಜೆಪಿಯಲ್ಲೇ ಇರುವ ‘ಪಟ್ಟಭದ್ರ’ರು ಹರಿಯಬಿಟ್ಟಿದ್ದರು. ಪತ್ರಗಳು ಬಾಣದಂತೆ ಹೊರಬರತೊಡಗಿದ್ದವು. ಯಾವಾಗ ಕೊರೊನಾ ಕಾಲಿಟ್ಟಿತೋ ಎಲ್ಲ ರಾಜಕೀಯ ಲೆಕ್ಕಾಚಾರಗಳು ಸೂತ್ರ ಹರಿದ ಗಾಳಿಪಟವಾಗಿಬಿಟ್ಟವು. ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟವರು, ಲಾಭಕಟ್ಟಿನ ಖಾತೆಗೆ ಆಸೆಪಟ್ಟವರು, ಅಧಿಕಾರದ ಮೇಟಿಕಂಬ ಹಿಡಿಯಲು ಹವಣಿಸಿದವರು... ಹೀಗೆ ಹಲವು ಕನಸುಗಳನ್ನು ಹೊತ್ತಿದ್ದ ಗುಂಪಿನ ನೇತಾರರು ಎಲ್ಲ ಜವಾಬ್ದಾರಿಯನ್ನೂ ಯಡಿಯೂರಪ್ಪ ಅವರ ‘ವಯೋವೃದ್ಧ–ನಿಶ್ಶಕ್ತ’ ಹೆಗಲು ಮೇಲೆ ಹಾಕಿ
ವಿರಮಿಸಿಬಿಟ್ಟರು.

ಕೊರೊನಾ ರಾಜ್ಯಕ್ಕೆ ಕಾಲಿಟ್ಟು ಎರಡು ತಿಂಗಳು ಕಳೆದಿದೆ. ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿದ್ದು, ಸರ್ಕಾರ ನಡೆಸುವುದೇ ಕಷ್ಟ ಎಂಬಂತಹ ದಯನೀಯ ಸ್ಥಿತಿ ಬಂದೊದಗಿದೆ. ಜಿಎಸ್‌ಟಿ ಜಾರಿಯ ಬಳಿಕ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರೂಪಿಸಿದ ಕೆಲವು ನೀತಿಗಳಿಂದಾಗಿ ರಾಜ್ಯ ಸರ್ಕಾರಗಳು ತಮ್ಮ ಆರ್ಥಿಕ ಸ್ವಾಯತ್ತತೆ ಕಳೆದುಕೊಂಡಿವೆ. ಪ್ರತಿಯೊಂದಕ್ಕೂ ಕೇಂದ್ರದ ಮುಂದೆ ಕೈಯೊಡ್ಡುವ ದೈನೇಸಿ ಸ್ಥಿತಿ ಬಂದೊದಗಿದೆ. ತಮ್ಮದೇ ಪಕ್ಷ ಅಧಿಕಾರದಲ್ಲಿರುವ ಬೇರೆ ರಾಜ್ಯಗಳಿಗೆ ಕೊಡುವಷ್ಟು ಅನುದಾನ ಹಾಗೂ ನೆರವನ್ನು ಕರ್ನಾಟಕಕ್ಕೆ ಕೊಡುವ ಔದಾರ್ಯವನ್ನು ಮೋದಿ ಈ ದುರಿತ ಕಾಲದಲ್ಲೂ ತೋರಲೇ ಇಲ್ಲ.

ಆರ್ಥಿಕ ನಿಕೃಷ್ಟ ಸ್ಥಿತಿಯಲ್ಲೂ ಜನರ ಕಷ್ಟಕ್ಕೆ ಮಿಡಿವ ಅಂತಃಕರಣವನ್ನು ಯಡಿಯೂರಪ್ಪ ತೋರಿರುವುದು ಅವರಲ್ಲಿರುವ ಜನಪರ ಕಾಳಜಿಯ ದ್ಯೋತಕ. 

ದೇಶದ ಯಾವುದೇ ರಾಜ್ಯವೂ ಲಾಕ್‌ಡೌನ್‌ ಹಾಗೂ ಅದರಿಂದ ಎದುರಾಗಬಹುದಾದ ತಾಪತ್ರಯಗಳನ್ನು ಎದುರಿಸಲು ಸಿದ್ಧವಿರಲಿಲ್ಲ. ಇಡೀ ದೇಶದಲ್ಲಿ ಲಾಕ್‌ಡೌನ್‌ ಘೋಷಣೆಯಾಗುವ ಮೊದಲೇ (ಮಾರ್ಚ್‌ 23ರಿಂದಲೇ) 9 ಜಿಲ್ಲೆಗಳಲ್ಲಿ ಲಾಕ್‌ಡೌನ್‌ ಘೋಷಿಸಿದ ಯಡಿಯೂರಪ್ಪ ಎಚ್ಚರಿಕೆಯ ಹೆಜ್ಜೆ ಇಟ್ಟರು. 

ಇರುವ ಆರ್ಥಿಕ ಪರಿಮಿತಿ, ಸಂಪುಟ ಸಹೋದ್ಯೋಗಿಗಳ ಅಸಹಕಾರದ ಮಧ್ಯೆಯೂ ಈ ಸಂಕಷ್ಟದ ಕಾಲದಲ್ಲಿ ಯಡಿಯೂರಪ್ಪ ನಡೆದುಕೊಂಡ ರೀತಿಗೆ ಅವರ ವಿರೋಧಿಗಳೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. ಕೆಲವೊಮ್ಮೆ ಅವರು ಕೈಗೊಂಡ ನಿರ್ಧಾರ ವಿಳಂಬ
ವಾಗಿರಬಹುದು. ಆದರೆ, ಕೋಟೆ ಕೊಳ್ಳೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕುವಷ್ಟು ದಡ್ಡತನ ತೋರಲಿಲ್ಲ. ವಿವಿಧ ಸಮುದಾಯಗಳಿಗೆ ಅವರು ಘೋಷಿಸಿದ ‘ಪ್ಯಾಕೇಜ್‌’ ಸಮುದ್ರಕ್ಕೆ ಹಾಕಿದ ಹಿಡಿ ಉಪ್ಪೇ ಆಗಿರಬಹುದು. ಆದರೆ, ಏನೂ ಇಲ್ಲದ  ಬಾಳುವೆಯ ವೇಳೆಯಲ್ಲಿ ಸಪ್ಪೆ ನೀರಿಗಿಂತ ಉಪ್ಪು ನೀರೇ ಲೇಸು ಎನ್ನಲಂತೂ ಅಡ್ಡಿಯಿಲ್ಲ.

ನರೇಂದ್ರ ಮೋದಿ ಅವರು ಘೋಷಿಸುವ ಮೊದಲೇ ರೈತರಿಗೆ‌ ನೆರವಿನ ಘೋಷಣೆ ಮಾಡಿದರು. ಅನ್ನಭಾಗ್ಯದ ಅಡಿ ಎರಡು ತಿಂಗಳು ಅಕ್ಕಿಯನ್ನು ಮುಂಗಡವಾಗಿ ಕೊಟ್ಟರು. ವಿಧವಾ, ವೃದ್ಧಾಪ್ಯ, ಅಂಗವಿಕಲರಿಗೆ ನೀಡುವ ಸಾಮಾಜಿಕ ಭದ್ರತಾ ಪಿಂಚಣಿಯನ್ನು ತಿಂಗಳ ಮೊದಲೇ ಪಾವತಿಸುವ ನಿರ್ಧಾರ ಕೈಗೊಂಡರು.

ಸಾಗಣೆ ಸಮಸ್ಯೆಯಿಂದಾಗಿ ಹೈನುಗಾರರು ಹಾಲನ್ನು ಕಂಡಕಂಡಲ್ಲಿ ಚೆಲ್ಲಲಾರಂಭಿಸಿದಾಗ ಸರ್ಕಾರದಿಂದಲೇ ಖರೀದಿಸಿ ಬಡವರಿಗೆ ಉಚಿತವಾಗಿ ಹಂಚುವ ನಿರ್ಧಾರ ಪ್ರಕಟಿಸಿದರು. ಚಾಲಕರು, ಚಮ್ಮಾರರು, ನೇಕಾರರು, ಅಗಸರು ಹಾಗೂ ಕ್ಷೌರಿಕ ವೃತ್ತಿನಿರತರಿಗೆ ನೆರವಿನ ಪ್ಯಾಕೇಜ್ ಘೋಷಿಸಿದರು. ಈ ಸಮುದಾಯದವರಲ್ಲದೆ, ಕುರಿಗಾಹಿಗಳು, ಅಲೆಮಾರಿಗಳು, ಮನೆಗೆಲಸದವರು
ಸೇರಿದಂತೆ ಅಂದಂದಿನ ಕೂಳಿಗೆ ದುಡಿಮೆಯನ್ನೇ ನಂಬಿಕೊಂಡ ದುಡಿಮೆಗಾರರ ಸಂಖ್ಯೆ ಬಹಳಷ್ಟಿದೆ. ಇಂತಹ ಕಷ್ಟಕಾಲದಲ್ಲಿ ಅವರ ಕೈ ಹಿಡಿಯುವ ಕೆಲಸ ಸರ್ಕಾರದಿಂದಲೇ ಆಗಬೇಕಿದೆ. ಕಾರ್ಮಿಕರ ವಿಷಯಕ್ಕೆ ಬರುವುದಾದರೆ, ಆರಂಭದಲ್ಲೇ  ₹2 ಸಾವಿರ ನೀಡುವ ನಿರ್ಧಾರ ಪ್ರಕಟಿಸಿದರು. ಈಗ ಅದನ್ನು ₹5 ಸಾವಿರಕ್ಕೆ ಹೆಚ್ಚಿಸಿದ್ದಾರೆ.

ಉತ್ತರ ಹಾಗೂ ಕಲ್ಯಾಣ ಕರ್ನಾಟಕದ ಜಿಲ್ಲೆಗಳಿಂದ, ಉತ್ತರದ ರಾಜ್ಯಗಳಿಂದ ಬದುಕು ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದವರನ್ನು ವಾಪಸ್ ಕಳುಹಿಸಿಕೊಡುವ ವಿಷಯದಲ್ಲಿ ಮಾತ್ರ ಸರ್ಕಾರ ಎಡವಿತು. ನಮ್ಮದೇ ನಾಡಿನ ಬಡ ಅಕ್ಕ–ಅಣ್ಣಂದಿರು ಒಂದೂವರೆ ತಿಂಗಳು ಸರಿಯಾಗಿ ಕೂಳಿಲ್ಲದೆ, ದುಡಿಮೆಯೂ ಇಲ್ಲದೆ ನರಳಿದ್ದರು. ಊರಿಗೆ ಹೋಗಲು ಅವಕಾಶ ಸಿಗುತ್ತದೆ ಎಂದು ಘೋಷಿಸಿದ ಕೂಡಲೇ ಹತ್ತಾರು ಕಿ.ಮೀ ನಡೆದುಬಂದರು. ಇಂತಹ ಕಾರ್ಮಿಕರಿಗೆ ಒಡಲಕ್ಕಿ ತುಂಬಿ ಊರಿಗೆ ಕಳುಹಿಸಬೇಕಾಗಿತ್ತು. ಆದರೆ, ಸಾರಿಗೆ ಮಂತ್ರಿ ಲಕ್ಷ್ಮಣ ಸವದಿ, ಕಾರ್ಮಿಕ ಸಚಿವ ಶಿವರಾಂ ಹೆಬ್ಬಾರ್‌ರಂತಹವರ ಬೇಜವಾಬ್ದಾರಿ ನಡೆಯಿಂದ ಯಡಿಯೂರಪ್ಪ ಇಲ್ಲಿಯವರೆಗೆ ಮುಡಿಗೇರಿಸಿಕೊಂಡಿದ್ದ ಔದಾರ್ಯದ ಕಿರೀಟ ಮಣ್ಣಿಗೆ ಬಿತ್ತು. ಹಾಗಂತ ಯಡಿಯೂರಪ್ಪ ಅದನ್ನೇನೂ ಒರೆಸಿಕೊಂಡು ಸುಮ್ಮನೆ ಕೂರಲಿಲ್ಲ. ತಕ್ಷಣವೇ ಎಚ್ಚೆತ್ತ ಅವರು, ಒಂದು ಪೈಸೆಯನ್ನೂ ವಸೂಲಿ ಮಾಡದೆ ಉಚಿತವಾಗಿ ಊರಿಗೆ ಕಳುಹಿಸಿ ಎಂದು ಆದೇಶಿಸಿದರು.

ಅನ್ಯರಾಜ್ಯಗಳ ಕಾರ್ಮಿಕರನ್ನು ಊರಿಗೆ ಕಳುಹಿಸಲು ರೈಲು ವ್ಯವಸ್ಥೆ ಮಾಡಿದರೆ ನಿರ್ಮಾಣ ಕಾಮಗಾರಿ ಸ್ಥಗಿತವಾಗುತ್ತದೆ ಎಂದು ರಿಯಲ್ ಎಸ್ಟೇಟ್‌ ಉದ್ಯಮಿಗಳು, ಅವರ ಬೆನ್ನಿಗೆ ನಿಂತವರು ಊದಿದ್ದೇ ತಡ, ರೈಲು ತಡೆಯುವ ಆದೇಶ ಹೊರಬಿತ್ತು. ಆ ತಪ್ಪು
ಯಡಿಯೂರಪ್ಪನವರಿಗೆ ಗೊತ್ತಾಗಿದ್ದೇ ತಡ ಮತ್ತೆ ರೈಲು ಬಿಡಿಸುವ ವ್ಯವಸ್ಥೆ ಮಾಡಿದರು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಕಂಡರಿಯದ ವಿಚಿತ್ರ ಸನ್ನಿವೇಶದಲ್ಲಿ 78ರ ಏರು ವಯಸ್ಸಿನ ಯಡಿಯೂರಪ್ಪ ಒಬ್ಬರೇ ಬಡಿದಾಡುತ್ತಿದ್ದಾರೆ. ಸರ್ಕಾರ ಬರುತ್ತಿದ್ದಂತೆ ಆಯಕಟ್ಟಿನ ಸಚಿವ ಸ್ಥಾನಕ್ಕೆ ಕೈಚಾಚಿ ಲಾಬಿ ಮಾಡಿದವರು ಈಗ ತಮ್ಮ ಪಾಡಿಗೆ ತಾವು ಇದ್ದು ಬಿಟ್ಟಿದ್ದಾರೆ. ಕೆಲವರಿಗೆ ಅನುಭವವೇ ಇಲ್ಲ; ಅನುಭವ ಇದ್ದವರು ‘ಬೈಗುಳ ತಿನ್ನಲು ಯಡಿಯೂರಪ್ಪ ಇದ್ದಾರೆ. ಇಲ್ಲದ ಉಸಾಬರಿ ನಮಗೇಕೆ’ ಎಂಬ ಭಾವನೆ ಇಟ್ಟುಕೊಂಡು ತಪಸ್ಸಿಗೆ ಕುಳಿತಂತಿದ್ದಾರೆ. ಬಿಜೆಪಿಯಲ್ಲೇ ಇದ್ದು ಸಚಿವರಾದವರ ಪೈಕಿ ಕೆಲವರು ಹಾಗೂ ವಲಸೆ ಬಂದು ಸಚಿವರಾದವರ ಪೈಕಿ ನಾಲ್ಕೈದು ಜನ ಮಾತ್ರ ಯಡಿಯೂರಪ್ಪ ಬೆನ್ನಿಗೆ ನಿಂತು ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಕಷ್ಟಕಾಲವನ್ನು ನಿರ್ವಹಿಸುವ ವಿಷಯದಲ್ಲಿ ಸರ್ಕಾರ ನಡೆಸುವವರಲ್ಲಿ ಒಗ್ಗಟ್ಟು ಕಾಣಿಸುತ್ತಿಲ್ಲ.

ವೃದ್ಧಾಪ್ಯ ತರುವ ಮರೆವು, ವಯೋಸಹಜ ಕಾರಣಕ್ಕೆ ಹಿಡಿದಿದ್ದೆಲ್ಲವನ್ನೂ ಬಿಡದೇ ಸಾಧಿಸುವ ಸಾಮರ್ಥ್ಯ ಕುಂದಿರುವುದು, ಆರೋಗ್ಯದ ಆತಂಕ, ಪಕ್ಷ–ಸಚಿವರ ಬೆಂಬಲ ಇಲ್ಲದ ಕೊರತೆಗಳೆಂಬ ಸಮುದ್ರದಲ್ಲಿ ಕೋವಿಡ್ ಅಲೆಯನ್ನೂ ಲೆಕ್ಕಿಸದೆ ಯಡಿಯೂರಪ್ಪ ದುಡಿಯುತ್ತಿದ್ದಾರೆ. ಬೇರೆ ಬೇರೆ ಇಲಾಖೆಗಳಲ್ಲಿರುವ ದಕ್ಷ–ಪ್ರಾಮಾಣಿಕ ಅಧಿಕಾರಿಗಳನ್ನು ತಮ್ಮ ತಂಡಕ್ಕೆ ಸೇರಿಸಿಕೊಂಡು, ದುಡ್ಡು ಹೊಡೆಯುವ ಅಧಿಕಾರಿಗಳನ್ನು ಯಾತಕ್ಕೂ ಬೇಡದ ಇಲಾಖೆಗೆ ಅಟ್ಟಿದರೆ ಇನ್ನಷ್ಟು ಪರಿಣಾಮಕಾರಿಯಾದ ಆಡಳಿತ ಕೊಡಲು ಸಾಧ್ಯವಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು