ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗತಿಬಿಂಬ: ನಿಲ್ಲದ ಪೈಪೋಟಿ– ಯಾರಿಗೆ ಯಾರು ಸಾಟಿ?

ಪಕ್ಷಾಂತರಿಗಳು ಮತ್ತೆ ನೆಗೆಯುವುದಿಲ್ಲವೆಂಬ ‘ಗ್ಯಾರಂಟಿ’ ಕಾಂಗ್ರೆಸ್‌ಗೆ ಇದೆಯೇ?
Published 25 ಏಪ್ರಿಲ್ 2023, 20:35 IST
Last Updated 25 ಏಪ್ರಿಲ್ 2023, 20:35 IST
ಅಕ್ಷರ ಗಾತ್ರ

‘ಆಡಳಿತ ವಿರೋಧಿ ಅಲೆ, ಮುಖ್ಯಮಂತ್ರಿ ಬದಲಾವಣೆ, ಲಿಂಗಾಯತರ ಮುನಿಸು, ಭ್ರಷ್ಟಾಚಾರದ ಆರೋಪಗಳೇ ಬಿಜೆಪಿಗೆ ಮುಳುವಾಗಲಿವೆ’ ಎಂಬ ನಂಬುಗೆಯ ಹಾಯಿದೋಣಿಯಲ್ಲಿ ಕುಳಿತಿರುವ ಕಾಂಗ್ರೆಸ್‌ ನಾಯಕರು, ತಿಂಗಳು ಕಳೆಯುವಷ್ಟರಲ್ಲಿ ಅಧಿಕಾರದ ಗದ್ದುಗೆಗೆ ಏರಿ ಕುಳಿತಿರುತ್ತೇವೆ ಎಂಬ ಹೊಂಗನಸಿನಲ್ಲಿದ್ದಾರೆ.

10 ವರ್ಷ ಸ್ವತಂತ್ರವಾಗಿ ಅಧಿಕಾರ ನಡೆಸುವ ಅವಕಾಶ ಸಿಗದೆ ಕತ್ತಲದಾರಿಯಲ್ಲೇ ಸಾಗಿರುವ ಕಾಂಗ್ರೆಸ್‌ ನಾಯಕರಿಗೆ ಬೆಳಕಿನ ಗೆರೆಗಳು ಕಂಡಿರಬಹುದು. ಪ್ರಧಾನಿ ನರೇಂದ್ರ ಮೋದಿಯವರ ಜನಪ್ರಿಯತೆ, ಅಮಿತ್ ಶಾ– ಬಿ.ಎಲ್.ಸಂತೋಷ್ ಅವರು ರೂಪಿಸಿರುವ ದುರ್ಗಮ ಕೋಟೆಯನ್ನು ಒಡೆದು, ಅಧಿಕಾರ ಕೈವಶ ಮಾಡಿಕೊಳ್ಳುವುದು ಅಷ್ಟು ಸಲೀಸಲ್ಲ. 

ಕಾಂಗ್ರೆಸ್‌ ನಾಯಕರು ಬಹಿರಂಗವಾಗಿ ಹೇಳಿಕೊಳ್ಳುತ್ತಿರುವ ಲೆಕ್ಕಾಚಾರದಂತೆ ಒಂದು ವೇಳೆ ಪೂರ್ಣ ಬಹುಮತ ಬಂದರೂ ಮುಖ್ಯಮಂತ್ರಿ ಯಾರಾಗಬೇಕು ಎಂಬ ವಿಷಯದಲ್ಲಿ ಒಮ್ಮತದ ನಿರ್ಣಯಕ್ಕೆ ಬರುವುದು ಆ ಪಕ್ಷದನೇತಾರರ ಮುಂದಿರುವ ದೊಡ್ಡ ಸವಾಲು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಾವಿಬ್ಬರೂ ಒಂದೇ ಬಂಡಿಯ ಚಕ್ರಗಳು ಎಂದು ಬಿಂಬಿಸಿಕೊಳ್ಳಲು ನಾನಾ ರೀತಿಯ ಕಸರತ್ತು ನಡೆಸಿದ್ದಾರೆ. ಬಂಡಿ ಏರುವ ಅವಕಾಶ ದಕ್ಕಿದರೆ ಒಂಟೆತ್ತಿನ ಸವಾರಿಗೆ ಇಬ್ಬರೂ ಪೈಪೋಟಿ ನಡೆಸುವುದಿಲ್ಲ ಎಂಬುದಕ್ಕೆ ಯಾರೂ ಖಾತ್ರಿ ಕೊಡಲು ಸಾಧ್ಯವಿಲ್ಲ.

30 ವರ್ಷಗಳ ಹಿಂದೆ ದೇಶದಲ್ಲಿ ಅವಿಭಜಿತ ಜನತಾದಳ ಪ್ರಬಲವಾಗಿತ್ತು. 1994ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನತಾದಳದ ನೇತೃತ್ವವನ್ನು ಎಚ್‌.ಡಿ.ದೇವೇಗೌಡರು ವಹಿಸಿದ್ದರು. ಮೂವರು ಮುಖ್ಯಮಂತ್ರಿಗಳನ್ನು ಬದಲಾಯಿಸಿದ್ದು, ವೀರೇಂದ್ರ ಪಾಟೀಲರನ್ನು ಅಕಾಲಿಕವಾಗಿ ಅಧಿಕಾರದಿಂದ ಇಳಿಸಿದ್ದು ಕಾಂಗ್ರೆಸ್‌ಗೆ ಮರ್ಮಾಘಾತ ನೀಡಿತ್ತು. ದೇವೇಗೌಡರು ಮತ್ತು ಜನತಾದಳದಲ್ಲಿ ಅಂದು ಮುಂಚೂಣಿಯಲ್ಲಿದ್ದ ಹಲವರ ಸಂಘಟನಾ ಶಕ್ತಿ ಜನತಾದಳಕ್ಕೆ ಭಾರಿ ಬಹುಮತ ತಂದುಕೊಟ್ಟಿತ್ತು. ಆದರೆ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ವಿಷಯ ಬಂದಾಗ, 1983ರಲ್ಲಿ ರಂಗಕ್ಕೆ ಇಳಿದು ಅಧಿಕಾರದ ಚುಕ್ಕಾಣಿ ಹಿಡಿದ ರೀತಿಯಲ್ಲಿಯೇ ಮತ್ತೊಮ್ಮೆ ಕರ್ನಾಟಕದ ಅನಭಿಷಿಕ್ತ ನಾಯಕನಾಗಬೇಕು ಎಂಬ ಹಂಬಲಕ್ಕೆ ಬಿದ್ದ ರಾಮಕೃಷ್ಣ ಹೆಗಡೆ, ರಂಗ ಪ್ರವೇಶಿಸಿದರು.

ಕರ್ನಾಟಕದಲ್ಲಿನ ನಾಯಕತ್ವದ ಆಯ್ಕೆ ಉಸ್ತುವಾರಿ ಬಿಜು ಪಟ್ನಾಯಕ್ ಹೆಗಲೇರಿತ್ತು. ಗೌಡರ ನೇತೃತ್ವದಲ್ಲಿ ಚುನಾವಣೆ ಎದುರಿಸಿದ್ದರಿಂದ, ಅವರೇ ಮುಖ್ಯಮಂತ್ರಿಯಾಗಬೇಕು ಎಂಬುದು ಆ ಪಕ್ಷದ ದೆಹಲಿ ನಾಯಕರ ಅಪೇಕ್ಷೆಯಾಗಿತ್ತು. ಆದರೆ, ಹೆಗಡೆಯವರು ಹಟ ಬಿಡಲಿಲ್ಲ. ಹೆಗಡೆ ಮತ್ತು ದೇವೇಗೌಡರ ಜತೆ ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿದ ಬಿಜು ಪಟ್ನಾಯಕ್, ಈ ವಿಷಯ ಪ್ರಸ್ತಾಪಿಸಿದಾಗ ಹೆಗಡೆಯವರು ಕೆರಳಿ ಕೆಂಡವಾಗಿದ್ದರು. ಮಾರನೇ ದಿನ ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆದಿತ್ತು. ಗೌಡರಿಗೆ ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಅವಕಾಶ ತಪ್ಪಿಸಲಾಗುತ್ತದೆ ಎಂದು ಆಕ್ರೋಶಗೊಂಡಿದ್ದ ಅಭಿಮಾನಿಗಳು ವಿಧಾನಸೌಧದ ಎದುರು ನಾಯಕರ ಬಟ್ಟೆ ಎಳೆದಾಡಿ ಕಾರುಗಳನ್ನು ಗುದ್ದಿ ಸಿಟ್ಟು ತೋರಿದ್ದರು. ಗೌಡರು ರಾಮನಗರದಿಂದ ಆಯ್ಕೆಯಾಗಿದ್ದರು. ಅಲ್ಲಿಂದ ಮಾತ್ರವಲ್ಲದೆ, ಹಾಸನ ಹಾಗೂ ಬೆಂಗಳೂರು ಗ್ರಾಮಾಂತರದಿಂದ ಬಂದ ನೂರಾರು ಜನ ಅಲ್ಲಿ ಸೇರಿದ್ದರು. ಇಲ್ಲಿ ಇತ್ಯರ್ಥವಾಗುವ ವಿಷಯವಲ್ಲವೆಂದು ಮನವರಿಕೆಯಾದಾಗ, ಶಾಸಕರ ಮತ ಸಂಗ್ರಹಿಸುವ ಜತೆಗೆ, ತಮ್ಮ ಆಯ್ಕೆ ಗೌಡರು ಎಂದು ವರಿಷ್ಠರು ಹೇಳಿದ್ದರಿಂದಾಗಿ ವಿಷಯ ಅಲ್ಲಿಗೆ ತಣ್ಣಗಾಯಿತು.

ಕಾಂಗ್ರೆಸ್‌ಗೆ ಬಹುಮತ ಬಂದರೆ, ಮುಖ್ಯಮಂತ್ರಿ ಪಟ್ಟಕ್ಕೆ ಇಬ್ಬರೂ ನಾಯಕರು ತಮ್ಮದೇ ಆದ ತಂತ್ರಗಳನ್ನು ಹೆಣೆಯದೇ ಇರಲಾರರು. ಸಿದ್ದರಾಮಯ್ಯನವರು ಇದೇ ತಮ್ಮ ಕೊನೆ ಚುನಾವಣೆ ಎಂದು ಹೇಳಿಕೊಂಡಿದ್ದು, ಮತ್ತೊಮ್ಮೆ ಮುಖ್ಯಮಂತ್ರಿಯಾಗುವ ಇಂಗಿತದಲ್ಲಿದ್ದಾರೆ. ಚುನಾವಣೆ ಘೋಷಣೆಗೂ ಮೊದಲು ಅದನ್ನು ತಮ್ಮ ಆಪ್ತರಿಂದ ಅನೇಕ ಬಾರಿ ಹೇಳಿಸಿದ್ದಾರೆ. ಈಗ ರಾಮನಗರ ಜಿಲ್ಲೆ ಪ್ರತಿನಿಧಿಸುವ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರು. ಹಿಡಿದ ಪಟ್ಟನ್ನು ಅವರು ಕೂಡ ಬಿಡುತ್ತಿಲ್ಲ.

ಇತ್ತೀಚೆಗೆ ನಿಧನರಾದ ಮಾಜಿ ಶಾಸಕ ವೆಂಕಟಸ್ವಾಮಿಯವರ ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಲು ಹೋಗಿದ್ದ ಡಿ.ಕೆ. ಶಿವಕುಮಾರ್, ಸ್ಥಳೀಯ ಬಿಜೆಪಿ ಮುಖಂಡ ದೊಡ್ಡ ಬಸವರಾಜ್ ಹಾಗೂ ದೇವನಹಳ್ಳಿ ಕ್ಷೇತ್ರದ ಅಭ್ಯರ್ಥಿ ಕೆ.ಎಚ್. ಮುನಿಯಪ್ಪ ಜತೆಗಿನ ಮಾತುಕತೆ ವೇಳೆ, ‘ನನ್ನನ್ನು ಯಾವಾಗ ಸಿಎಂ ಮಾಡುತ್ತೀರಾ’ ಎಂದು ಕೇಳಿದ್ದರು. ಚುನಾವಣೆಗೆ ಸಿದ್ಧತೆ ಆರಂಭವಾದಾಗಿನಿಂದಲೂ ಫಲಿತಾಂಶದ ಬಳಿಕ ತಮ್ಮ ಪರವಾಗಿ ನಿಲ್ಲಬಲ್ಲವರಿಗೆ ಟಿಕೆಟ್ ಕೊಡಿಸಿ, ಅವರಿಗೆ ಬೇಕಾದ ‘ನೆರವು’ ಕೊಡಿಸುವಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್‌ ಬಹಳಷ್ಟು ಸಂಕಲನ– ವ್ಯವಕಲನದ ಕಸುಬು ನಡೆಸಿದ್ದಾರೆ.ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದರೆ ಮುಖ್ಯಮಂತ್ರಿ ಗಾದಿಗಾಗಿನ ಪೈಪೋಟಿ ಮತ್ತಷ್ಟು ತೀವ್ರಗೊಳ್ಳಲಿದೆ. ಇಬ್ಬರ ಮಧ್ಯದ ಗುದ್ದಾಟ ಮೂರನೆಯವರಿಗೆ ದಾರಿ ಮಾಡಿಕೊಡುತ್ತದೆಯೋ ಎಂಬ ಕುತೂಹಲವಂತೂ ಇದೆ.

ಜಗದೀಶ ಶೆಟ್ಟರ್ ಮತ್ತು ಲಕ್ಷ್ಮಣ ಸವದಿ ಅವರನ್ನು ಕಾಂಗ್ರೆಸ್‌ಗೆ ಕರೆತರುವ ಮಹತ್ವದ ನಿರ್ಧಾರದ ಹಿಂದೆ, ಭವಿಷ್ಯದ ಸ್ಪರ್ಧೆಯಲ್ಲಿ ತಮ್ಮ ಬೆಂಬಲಕ್ಕೆ ನಿಲ್ಲುವವರು ಯಾರು, ಪೈಪೋಟಿ ಒಡ್ಡಿದರೆ ‘ಚೆಕ್‌ಮೇಟ್’ ನೀಡಲು ಯಾರಿರಬೇಕು ಎಂಬ ಲೆಕ್ಕಾಚಾರವೂ ಇದೆ. ಇಬ್ಬರ ಸ್ಪರ್ಧೆಯ ಮಧ್ಯೆ, ಎಂ.ಬಿ.ಪಾಟೀಲರು ತಾವೂ ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೊಂಡಿದ್ದುಂಟು. ಸಿದ್ದರಾಮಯ್ಯ ಜತೆಗೆ ನಿಕಟ ಬಾಂಧವ್ಯ ಹೊಂದಿರುವ ಪಾಟೀಲರು ಮೂರನೇ ಹುರಿಯಾಳಾಗಿ ಬಂದರೆ, ಮತ್ತಿಬ್ಬರು ಲಿಂಗಾಯತರನ್ನು ಕಣಕ್ಕೆ ಇಳಿಸುವುದು, ಈ ಆಟ ಹೂಡಿದವರ ಹಿಂದಿನ ತರ್ಕ ಎಂಬುದು ರಹಸ್ಯವೇನಲ್ಲ.

ಗೆಲುವಿನ ಸಂಖ್ಯೆ 130ರ ಗಡಿ ದಾಟದಿದ್ದರೆ ಸರಳ ಬಹುಮತ ಸಿಕ್ಕಿದರೂ ಅಧಿಕಾರ ದಕ್ಕಿಸಿಕೊಳ್ಳುವುದು ಕಾಂಗ್ರೆಸ್‌ಗೆ ಅಷ್ಟೇನೂ ಸಲೀಸಲ್ಲ. ಕರ್ನಾಟಕದಲ್ಲಿ ಸಂಶೋಧಿಸಿ, ಇಲ್ಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಪ್ರಯೋಗಿಸಿದ ‘ಆ‍ಪರೇಷನ್ ಕಮಲ’ದ ಅಸ್ತ್ರವನ್ನು ಮತ್ತಷ್ಟು ಹರಿತಗೊಳಿಸಿರುವ ಬಿಜೆಪಿ ನಾಯಕರು ಅದನ್ನು ಮತ್ತೆ ಇಲ್ಲಿಯೇ ಉಪಯೋಗಿಸಲು ಹಿಂಜರಿಕೆ ತೋರುವುದಿಲ್ಲ. 

2019ರಲ್ಲಿ ನಡೆದ ಆಪರೇಷನ್ ಕಮಲ ಕಾರ್ಯಾಚರಣೆ 2023ರಲ್ಲಿ ಮತ್ತೆ ನಡೆಯಬಾರದೆಂಬ ಕಾರಣಕ್ಕೆ ಕಾಂಗ್ರೆಸ್‌ ಮುಖಂಡರು ಹಲವು ಕ್ರಮಗಳನ್ನು ಆರಂಭದಲ್ಲೇ ಕೈಗೊಂಡಿದ್ದರು. ಹೀಗಾಗಿ, ಮೂರು ತಿಂಗಳ ಮೊದಲೇ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸುವುದಾಗಿಯೂ ಹೇಳಿದ್ದರು. ಯಾವ ಕ್ಷೇತ್ರದಲ್ಲಿ ಎಷ್ಟು ಜನ ಆಕಾಂಕ್ಷಿಗಳಿದ್ದಾರೆ ಎಂಬುದನ್ನು ತಿಳಿಯಲು ಟಿಕೆಟ್‌ಗಾಗಿ ಅರ್ಜಿ ಆಹ್ವಾನಿಸಿದ್ದರು. 224 ಕ್ಷೇತ್ರಗಳಿಗೆ ಒಟ್ಟು 1,100 ಅರ್ಜಿಗಳು ಬಂದಿದ್ದವು. ಇದರ ಜತೆಗೆ, ಹಲವು ಸುತ್ತಿನ ಸಮೀಕ್ಷೆಗಳನ್ನು ಪಕ್ಷದ ವತಿಯಿಂದ ನಡೆಸಿ, ಮಾಹಿತಿಯನ್ನೂ ಸಂಗ್ರಹಿಸಿದ್ದರು. ಅದೆಲ್ಲ ನಡೆದರೂ ಗೆದ್ದು, ಅಧಿಕಾರ ಹಿಡಿಯುವ ಮಟ್ಟಕ್ಕೆ ಪಕ್ಷವನ್ನು ದಡ ಮುಟ್ಟಿಸಲು ಬೇಕಾದ ಸಂಖ್ಯೆಯಷ್ಟು ಅಭ್ಯರ್ಥಿಗಳು ಕಾಂಗ್ರೆಸ್‌ಗೆ ಸಿಗಲಿಲ್ಲ. ಸಂಕ್ರಾಂತಿಗೆ ಮೊದಲು ಪಟ್ಟಿ ಬಿಡುಗಡೆ, ಜನವರಿ ಅಂತ್ಯಕ್ಕೆ ಬಿಡುಗಡೆ ಎಂದರೂ ಕೊನೆಗೆ ಮೊದಲ ಪಟ್ಟಿ ಬಿಡುಗಡೆಯಾಗಿದ್ದು ಮಾರ್ಚ್‌ 29ಕ್ಕೆ. ಅದೂ ಪೂರ್ಣ ಪಟ್ಟಿಯಲ್ಲ.

ಏನೆಲ್ಲ ಕಸರತ್ತು, ಸಮೀಕ್ಷೆ ಮಾಡಿದರೂ ಕೆಲವು ಕ್ಷೇತ್ರಗಳ ಪಟ್ಟಿ ಪ್ರಕಟಿಸದೆ ಕಾಯ್ದರೂ, 15ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿ, ಜೆಡಿಎಸ್‌ನಿಂದ ಬಂದ ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್ ಕೊಟ್ಟಿದೆ. 2018ರಲ್ಲಿ ಕಾಂಗ್ರೆಸ್‌ಗೆ ಬಹುಮತ ಬರದೆ 79 ಸ್ಥಾನಗಳಲ್ಲಷ್ಟೇ ಗೆದ್ದಿತ್ತು. ಆರಂಭದಲ್ಲೇ ಆಪರೇಷನ್ ಮಾಡಬೇಕೆಂಬ ಯಡಿಯೂರಪ್ಪ ಪ್ರಯತ್ನ ಕೈಗೂಡಲಿಲ್ಲ. ಮೈತ್ರಿ ಸರ್ಕಾರ ಬಂದ ವರ್ಷದಲ್ಲೇ ಪಕ್ಷೇತರರಾಗಿ ಗೆದ್ದು ಕಾಂಗ್ರೆಸ್ ಜತೆ ಗುರುತಿಸಿಕೊಂಡಿದ್ದ ಇಬ್ಬರ ಜತೆಗೆ, ಕಾಂಗ್ರೆಸ್‌ನಿಂದ ಗೆದ್ದ 12 ಶಾಸಕರನ್ನು ಸೆಳೆದ ಬಿಜೆಪಿ, ಸರ್ಕಾರವನ್ನು ಉರುಳಿಸಿತು. ಅಂದು, ಯಡಿಯೂರಪ್ಪ ಆಪರೇಷನ್‌ಗೆ ಇಲ್ಲಿನ ಸರ್ಕಾರ ನಡುಗಿತು. ಈಗ ಹಾಗಲ್ಲ; ಸ್ವತಃ ಕೇಂದ್ರ ಗೃಹ ಸಚಿವರು, ಪಕ್ಷದ ಸಂಘಟನಾ ಕಾರ್ಯದರ್ಶಿಯೇ ‘ಕಮಲ’ ಹಿಡಿದು ನಿಂತಿದ್ದಾರೆ.

ತಮ್ಮದೇ ಪಕ್ಷದ ಸಿದ್ಧಾಂತವನ್ನು ನೆಚ್ಚಿಕೊಂಡವರು, ದಶಕಗಳಿಂದ ಪಕ್ಷದಲ್ಲಿ ಕೆಲಸ ಮಾಡಿದವರನ್ನು ಬಿಟ್ಟು ಕೊನೆಗಳಿಗೆಯಲ್ಲಿ ಹೊರಗಿನಿಂದ ಬಂದವರಿಗೆ ಕಾಂಗ್ರೆಸ್‌ ಟಿಕೆಟ್ ನೀಡಿದೆ. 2019ರಲ್ಲಿ ಪಕ್ಷಾಂತರ ಮಾಡಿ ಬಿಜೆಪಿಗೆ ಜಿಗಿದ ಹಲವರು ಸಿದ್ದರಾಮಯ್ಯನವರ ಜತೆಗೆ ಅತ್ಯಂತ ಸನಿಹದ ಸಂಬಂಧ ಹೊಂದಿದವರಾಗಿದ್ದರು. ಅಂತಹವರನ್ನೇ ಬಿಜೆಪಿ ಬಿಡಲಿಲ್ಲ. ಈ ಬಾರಿ, ಅನೇಕರು ಬಿಜೆಪಿಯಿಂದಲೇ ಬಂದಿದ್ದಾರೆ. ದಶಕಗಳ ಕಾಲ ಸಂಘದ ಗರಡಿಯಲ್ಲಿ ಬೆಳೆದವರನ್ನು ಕರೆತಂದು ಮಣೆ ಹಾಕಲಾಗಿದೆ. ಅವರು ಮಾತ್ರವಲ್ಲ, ಮೂಲ ಕಾಂಗ್ರೆಸಿಗರನ್ನೇ ಬಿಜೆಪಿ ಸೆಳೆಯಲಾರದು ಎಂಬುದಕ್ಕೆ ಏನೂ ಖಾತರಿ ಇಲ್ಲ. ಮತ ಸೆಳೆಯಲು ಮುಂದಾಗಿರುವ ಕಾಂಗ್ರೆಸ್ ನಾಯಕರು ಮನೆಯ ಯಜಮಾನಿಗೆ ತಿಂಗಳಿಗೆ ₹2 ಸಾವಿರ ನೀಡುವ ಗೃಹಲಕ್ಷ್ಮಿ, ಇನ್ನೂರು ಯುನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವ ಗೃಹಜ್ಯೋತಿ, ನಿರುದ್ಯೋಗಿಗಳಿಗೆ ಭತ್ಯೆ ನೀಡುವ ₹1 ಸಾವಿರ ನೀಡುವ ಯುವನಿಧಿ, ಅನ್ನಭಾಗ್ಯ ಯೋಜನೆಯಡಿ 10 ಕೆ.ಜಿ ಅಕ್ಕಿ ನೀಡುವ ‘ಕಾಂಗ್ರೆಸ್‌ ಗ್ಯಾರಂಟಿ’ಗಳನ್ನು ಘೋಷಿಸಿದ್ದಾರೆ. ಆದರೆ, ಚುನಾವಣೆಯಲ್ಲಿ ಗೆದ್ದವರು ಅನ್ಯಪಕ್ಷಕ್ಕೆ ನೆಗೆಯಲಾರರು ಎಂಬ ‘ಗ್ಯಾರಂಟಿ’ ಇದ್ದರಷ್ಟೇ ಕಾಂಗ್ರೆಸ್ ನಾಯಕರ ದಾರಿಯಲ್ಲಿ ಅಧಿಕಾರದ ಬೆಳಕು ಹರಿಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT