ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಯವರೇ, ಇದ್ಯಾವ ಸಂಸ್ಕೃತಿ?

ಇಂದು ಬಂದು ನಾಳೆ ಸಂದು ಹೋಹ ಸಚಿವ ಮಂಡಲ ಎಂದು ಕುಟುಕಿದ್ದರು ಕುವೆಂಪು
Last Updated 10 ಜನವರಿ 2020, 3:42 IST
ಅಕ್ಷರ ಗಾತ್ರ

ಮುಚ್ಚುತ್ತಿರುವ ಕೈಗಾರಿಕೆಗಳು, ತಾಂಡವವಾಡುತ್ತಿರುವ ನಿರುದ್ಯೋಗ, ನಿತ್ಯ ಬಳಕೆಯ ಆಹಾರವಸ್ತುಗಳ ಬೆಲೆ ಹೆಚ್ಚಳದಿಂದ ಸಂಕಷ್ಟಕ್ಕೆ ತುತ್ತಾಗುತ್ತಿರುವ ಬಡ ಬೋರೇಗೌಡನ ಜೀವನ... ಇದು ಕರ್ನಾಟಕ ಮಾತ್ರವಲ್ಲ; ಇಂಡಿಯಾದ ಕನ್ನಡಿ.

ಇಂತಹ ಹೊತ್ತಿನಲ್ಲಿ ಸಂಕಟ ಪರಿಹರಿಸಲು ತಾವಿದ್ದೇವೆ ಎಂಬ ವಿಶ್ವಾಸ ಮೂಡಿಸಬೇಕಾದ ಸರ್ಕಾರ, ಜನಕಲ್ಯಾಣದ ಕಾಯಕ ಬಿಟ್ಟು ಬೇಡದ ಉಸಾಬರಿಗಳತ್ತ ಚಿತ್ತ ಹರಿಸಿರುವುದು ದುರಿತ ಕಾಲದ ವ್ಯಂಗ್ಯ. 2020ಕ್ಕೆ ಅಡಿಯಿಟ್ಟ ಗಳಿಗೆಯಲ್ಲಿ ಹೊಸ ನಾಡು ಕಟ್ಟುವ ಸಂಕಲ್ಪ ಮಾಡಬೇಕಾದ ಸರ್ಕಾರ ಮತ್ತು ಅದರ ಭಾಗೀದಾರರು ವಿವಾದಗಳಿಗೆ ಜನ್ಮವಿತ್ತು, ಜನರ ಮನೋದಿಕ್ಕನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ. ತಾವು ಹೇಳಿದ್ದೇ ನಡೆಯಬೇಕೆಂಬ ಮನಃಸ್ಥಿತಿ, ನಡೆಯದಿದ್ದರೆ ಕೊಚ್ಚು–ಕೊಲ್ಲು ಎಂಬ ನಡವಳಿಕೆಗಳೇ ರಾರಾಜಿಸುತ್ತಿವೆ. ಸರ್ವಜನಾಂಗದ ಶಾಂತಿಯ ತೋಟ ಎಂದು ಕುವೆಂಪು ಕಂಡಿದ್ದ ನಾಡೊಳಗಿನ ಈ ತೆರನ ವಿದ್ಯಮಾನ ಆತಂಕಕಾರಿ.

‘ನಮ್ಮ ದೇಶದಲ್ಲಿ ಇರಬೇಕಾದರೆ ನಾವು ಹೇಳಿದಂತೆ ಕೇಳಬೇಕು. ಖಡ್ಗ ಹಿಡಿದು ಬಂದರೆ ಯಾರೂ ಉಳಿಯುವುದಿಲ್ಲ’ ಎಂದು ಬಿಜೆಪಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ ಎಚ್ಚರಿಕೆ ಕೊಟ್ಟರು. ದೇಶಪ್ರೇಮದ ಈ ಪರಿ ಪ್ರವಾಹದ ಮುಂದೆ, ಇದೇ ರೆಡ್ಡಿ ಮತ್ತವರ ಸೋದರ ಜನಾರ್ದನ ರೆಡ್ಡಿ ಅವರು ಗಣಿ ಸಂಪತ್ತು ಲೂಟಿ ಹೊಡೆದ ಆರೋಪ ಮರೆಯಾಯಿತು. 2006ರಿಂದ 2010ರ ಜುಲೈವರೆಗಿನ ಅವಧಿಯಲ್ಲಿ ಕರ್ನಾಟಕದಿಂದ 12.57 ಕೋಟಿ ಟನ್‌ ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗಿತ್ತು. ಈ ಪೈಕಿ 2.98 ಕೋಟಿ ಟನ್‌ ಅದಿರು ಕಳ್ಳಸಾಗಣೆ ಮಾಡಿದ್ದಾಗಿತ್ತು. ಹೀಗೆ ಕಳ್ಳಸಾಗಣೆ ಮಾಡಿದ ಅದಿರಿನ ಮೌಲ್ಯ ₹ 12,228 ಕೋಟಿಗೂ ಹೆಚ್ಚು ಎಂದು ಲೋಕಾಯುಕ್ತ ವರದಿ ಅಂದಾಜು ಮಾಡಿತ್ತು. ಇದರ ಹಿಂದೆ, ಜನಾರ್ದನ ರೆಡ್ಡಿ ಒಡೆತನದ ಓಬಳಾಪುರಂ ಮೈನಿಂಗ್‌ ಕಂಪನಿಯ ಹೆಸರು ಕೇಳಿಬಂದಿತ್ತು. ಅಕ್ರಮವಾಗಿ ಗಣಿಗಾರಿಕೆ ನಡೆಸಲು ಇದೇ ರೆಡ್ಡಿ ಸೋದರರು, ಬಳ್ಳಾರಿ ಜಿಲ್ಲೆಯಲ್ಲಿದ್ದ ಗಡಿ ಕಲ್ಲುಗಳನ್ನೇ (ಬ್ರಿಟಿಷರ ಕಾಲದಲ್ಲಿ ಹಾಕಿದ್ದ ಬಾಂದ್ ಕಲ್ಲು) ಸರಿಸಿ ಕರ್ನಾಟಕದ ಒಂದಷ್ಟು ಭೂಪ್ರದೇಶವನ್ನು ಆಂಧ್ರಕ್ಕೆ ಸೇರಿಸಿದ್ದ ಆರೋಪವನ್ನೂ ಎದುರಿಸಿದ್ದರು. ಇಂತಹವರು ಈಗ ದೇಶಪ್ರೇಮದ ಗರ್ಜನೆ ಮೊಳಗಿಸುತ್ತಿರುವುದು ದೊಡ್ಡ ಚೋದ್ಯ.

ಸ್ವತಂತ್ರಾಧಿಕಾರ ಇರುವ ಕನ್ನಡ ಸಾಹಿತ್ಯ ಪರಿಷತ್ತು ನಡೆಸುವ ಸಮ್ಮೇಳನ ಈಗ ಚರ್ಚೆಯಲ್ಲಿದೆ. ಶೃಂಗೇರಿಯಲ್ಲಿ ನಡೆಯಲಿರುವ ಚಿಕ್ಕಮಗಳೂರು ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ‘ಮಂಗನ ಬ್ಯಾಟೆ’ ಪುಸ್ತಕದಿಂದ ಪರಿಚಿತರಾಗಿರುವ ಕಲ್ಕುಳಿ ವಿಠಲ ಹೆಗ್ಡೆ ಅವರನ್ನು ಆಯ್ಕೆ ಮಾಡಿರುವುದಕ್ಕೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ. ರವಿ ಅಸಹನೆ ತೋರಿದ್ದಾರೆ. ‘ಅಧ್ಯಕ್ಷರ ಆಯ್ಕೆಗೆ ಪರ–ವಿರೋಧ ವ್ಯಕ್ತವಾಗಿದೆ. ಸರ್ವಾನುಮತದ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದು ಜಿಲ್ಲಾಧ್ಯಕ್ಷರಿಗೆ ಸೂಚಿಸಿದ್ದೆ. ವಿವಾದ ತಿಳಿಯಾಗುವವರೆಗೆ ಸಮ್ಮೇಳನ ಮುಂದೂಡಲು ಹೇಳಿದ್ದೆ. ಹೀಗಾಗಿ, ಅನುದಾನ ಬಿಡುಗಡೆ ಮಾಡಿಲ್ಲ’ ಎಂದು ರವಿ ಹೇಳಿದ್ದಾರೆ.

2018ರಲ್ಲಿ ನಡೆದ ಚುನಾವಣೆಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ರವಿ ಪಡೆದ ಮತಗಳ ಪ್ರಮಾಣ ಶೇ 43.98. ಕಾಂಗ್ರೆಸ್‌ನ ಬಿ.ಎಲ್‌. ಶಂಕರ್‌ ಶೇ 27.65 ಹಾಗೂ ಜೆಡಿಎಸ್‌ನ ಬಿ.ಎಚ್. ಹರೀಶ್‌ ಶೇ 23.78ರಷ್ಟು ಮತಗಳನ್ನು ಪಡೆದಿದ್ದರು. ಇವರಿಬ್ಬರೂ ಸೇರಿದಂತೆ ಕಣದಲ್ಲಿದ್ದ ಎದುರಾಳಿ ಅಭ್ಯರ್ಥಿಗಳು ಪಡೆದ ಒಟ್ಟು ಮತದ ಪ್ರಮಾಣ ಶೇ 56.02. ಸರ್ವಾನುಮತ ಬಿಡಿ, ರವಿ ಅವರ ವಿರುದ್ಧ ಬಿದ್ದಿರುವ ಒಟ್ಟು ಮತಗಳೇ ಹೆಚ್ಚಿವೆ. ಆದರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬಹುಮತದ ಆಯ್ಕೆಗೆ ಪ್ರಾಶಸ್ತ್ಯ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಬಹುಮತದ ಆಧಾರದ ಮೇಲೆಯೇ ನಡೆದು ಬರುತ್ತಿರುವುದು ರೂಢಿ. ಪರಿಷತ್ತಿನೊಳಗಿದ್ದ ಪ್ರಜಾತಾಂತ್ರಿಕ ವ್ಯವಸ್ಥೆಯನ್ನು ನಿಗ್ರಹಿಸಿದ್ದಲ್ಲದೇ, ಪೊಲೀಸ್ ಬಲ ಬಳಸಿ ಸಮ್ಮೇಳನ ಮುಂದೂಡಲು ಯತ್ನಿಸಿದ್ದು ಸಚಿವರೊಬ್ಬರಿಗೆ ಶೋಭೆ ತರುವ ಕೆಲಸವಲ್ಲ.

ಅಷ್ಟಕ್ಕೂ ರವಿ ಅನುದಾನ ಕೊಡದಂತೆ ಸೂಚಿಸಿರುವುದು ಅವರ ಸ್ವಂತ ದುಡ್ಡನ್ನೇನೂ ಅಲ್ಲ. ಜನರು ನೀಡಿದ ತೆರಿಗೆ ಹಣದಲ್ಲಿನ ಅಲ್ಪಪಾಲನ್ನು ಸಮ್ಮೇಳನಗಳಿಗೆ ಸರ್ಕಾರ ನೀಡುತ್ತಾ ಬಂದಿದೆ. ಸಾಹಿತ್ಯ ಪರಿಷತ್ತು ಯಾರ ಮನೆಯ ತೊತ್ತಲ್ಲ. ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಪಕ್ಷವೊಂದರ ಸದಸ್ಯರಿಂದ ಆಯ್ಕೆಯಾದವರಲ್ಲ. ಮೂರು ಲಕ್ಷಕ್ಕೂ ಹೆಚ್ಚಿನ ಕನ್ನಡ ಮನಸ್ಸುಗಳಿಂದ ಆಯ್ಕೆಯಾದವರು. ಬಳಿಗಾರ್ ಅವರಿಗೆ ಋಣ ಮತ್ತು ಉತ್ತರದಾಯಿತ್ವ ಇರಬೇಕಾದುದು ಪರಿಷತ್ತಿನ ಸದಸ್ಯರಿಗೆ ವಿನಾ ಸರ್ಕಾರ ನಡೆಸುವ ಪಕ್ಷಕ್ಕಲ್ಲ. ಪರಿಷತ್ತಿನ ಸಾರಥ್ಯ ವಹಿಸಿಕೊಳ್ಳುವ ಮುನ್ನ ಬಳಿಗಾರರು ಕೆಎಎಸ್‌ ಅಧಿಕಾರಿಯಾಗಿದ್ದವರು. ಹೀಗಾಗಿ, ಸರ್ಕಾರದ ಮಾತು ಕೇಳುವ ಜಾಯಮಾನ ಅವರನ್ನು ಬಿಟ್ಟಂತಿಲ್ಲ. ಕನ್ನಡತನ ಮೈಗೂಡಿಸಿಕೊಂಡು ಪರಿಷತ್ತಿನ ಗಾದಿ ಹಿಡಿದಿದ್ದರೆ, ಹಿಂದಿನ ಅಧ್ಯಕ್ಷರು ಇಂತಹ ಸನ್ನಿವೇಶಗಳಲ್ಲಿ ನಡೆದುಕೊಂಡಂತೆ ಸರ್ಕಾರದ ಕಿವಿ ಹಿಂಡುತ್ತಿದ್ದರು.

ಯಡಿಯೂರಪ್ಪ ನೇತೃತ್ವದ ಸರ್ಕಾರ ರಚನೆಯಾದಾಗ ರವಿ ಅವರಿಗೆ ಪ್ರವಾಸೋದ್ಯಮ ಖಾತೆ ಕೊಟ್ಟರು. ಆದರೆ, ಅಂತಹ ‘ಕಿತ್ತು ಹೋದ’ ಖಾತೆ ಬೇಡ ಎಂಬ ನಿಲುವಿಗೆ ಬಂದಿದ್ದ ರವಿ, ಸರ್ಕಾರಿ ಕಾರನ್ನೇ ವಾಪಸ್‌ ಕಳಿಸುವ ‘ಔದಾರ್ಯ’ ತೋರಿದ್ದರು. ಖಾತೆಯಿಂದಲೇ ತಗಾದೆ ಆರಂಭಿಸಿರುವ ಅವರಿಗೆ ‘ಗಂಧ’ ಬಿಟ್ಟರೆ ಸಾಹಿತ್ಯವೇ ಗೊತ್ತಿಲ್ಲ. ಹೀಗಾಗಿಯೇ ಈ ವಿಷಯದಲ್ಲಿ ತಕರಾರು ಎತ್ತುವ ಮೂಲಕ ಯಡಿಯೂರಪ್ಪನವರಿಗೆ ಕೆಟ್ಟ ಹೆಸರು ತರುವ ಕೆಲಸ ಮಾಡುತ್ತಿದ್ದಾರೆಯೇ ಎಂಬ ಸಂಶಯ ಬಿಜೆಪಿಯಲ್ಲೇ ಇದೆ. ಏಕೆಂದರೆ, ಇವರ ಉಸ್ತುವಾರಿಯಲ್ಲೇ ಇರುವ ಕರ್ನಾಟಕ ನಾಟಕ ಅಕಾಡೆಮಿಯ ನೂತನ ಅಧ್ಯಕ್ಷರು, ಹಿಂದಿನ ಸಮಿತಿ ನೀಡಿದ್ದ ಪ್ರಶಸ್ತಿಗಳನ್ನೇ ರದ್ದುಪಡಿಸಿ, ರಂಗಲೋಕಕ್ಕೆ ಅವಮಾನ ಮಾಡಿದರು. ಇಂತಹ ನಡೆಗಳು ಪ್ರಜಾತಂತ್ರ ವಿರೋಧಿ ನಿಲುವಲ್ಲದೇ ಬೇರೇನೂ ಅಲ್ಲ.

ಸೈದ್ಧಾಂತಿಕ ಭೇದವೆಂಬುದು ಈ ನೆಲದ ಗುಣ. ಆದಿಕವಿ ಪಂಪನಾದಿಯಾಗಿ ಬಸವಾದಿ ಶರಣರು ಪ್ರಭುತ್ವದ ವಿರೋಧಿ ನೆಲೆಯಲ್ಲೇ ಕಾವ್ಯ ಕಾಯಕ ಮಾಡಿದವರು. 1949ರಲ್ಲಿ ಕುವೆಂಪು ಅವರು ಏಕೀಕರಣದ ಪರ ಮಾತನಾಡಿದ್ದಕ್ಕೆ ಅಂದಿನ ಸಚಿವರೊಬ್ಬರು ಅವರಿಗೆ ನೋಟಿಸ್ ಕೊಟ್ಟಿದ್ದರು. ಆಗ ‘ಅಖಂಡ ಕರ್ನಾಟಕ’ ಎಂಬ ಕವನ ಬರೆದಿದ್ದ ಕುವೆಂಪು, ‘ಅಖಂಡ ಕರ್ನಾಟಕ; ಅಲ್ತೊ ನಮ್ಮ ಬೂಟಾಟದ ರಾಜಕೀಯ ನಾಟಕ/ ಇಂದು ಬಂದು ನಾಳೆ ಸಂದು/ಹೋಹ ಸಚಿವ ಮಂಡಲ/... ನೃಪತುಂಗನೇ ಚಕ್ರವರ್ತಿ/ ಪಂಪನಲ್ಲಿ ಮುಖ್ಯಮಂತ್ರಿ/ ರನ್ನ ಜನ್ನ ನಾಗವರ್ಮ/ ರಾಘವಾಂಕ ಹರಿಹರ/ ಬಸವೇಶ್ವರ ನಾರಣಪ್ಪ/ಸರ್ವಜ್ಞ ಷಡಕ್ಷರ/ ಸರಸ್ವತಿಯೆ ರಚಿಸಿದೊಂದು/ ನಿತ್ಯ ಸಚಿವ ಮಂಡಲ...’ ಎಂದು ದಿಟ್ಟ ಉತ್ತರ ನೀಡಿದ್ದರು. ಈ ಸಾಲುಗಳು ಈಗಲೂ ಆಳುವವರ ಮುಖಕ್ಕೆ ಹಿಡಿಯುವಂತಿವೆ.

ವೈ.ಗ.ಜಗದೀಶ್‌

ರೈತರು, ವಿದ್ಯಾರ್ಥಿಗಳು, ಯುವಜನರು, ಕಾರ್ಮಿಕರು ಪರಿತಪಿಸುತ್ತಿರುವ ಕಾಲ ಇದು. ನೊಂದವರ ನೋವಿಗೆ ಕಿವಿಯಾಗಬೇಕಾದ ಸರ್ಕಾರ, ಕೆಲಸಕ್ಕೆ ಬಾರದ ವಿಷಯಾಸಕ್ತಿಗಳತ್ತ ಮುತುವರ್ಜಿ ವಹಿಸುವುದು ತರವಲ್ಲ. ಕುಂಭದ್ರೋಣ ಮಳೆಗೆ ಏಳೆಂಟು ಜಿಲ್ಲೆಗಳ ಲಕ್ಷಾಂತರ ಜನ ಭೂಮಿ–ಸೂರು ಕಳೆದುಕೊಂಡು ಬೀದಿಯಲ್ಲಿ ನಿಂತಿದ್ದಾರೆ. ಆರ್ಥಿಕ ಹಿಂಜರಿತವು ಜನರನ್ನು ಹಿಂಡುತ್ತಿದೆ. ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಬೆನ್ನಿಗೆ ನಿಲ್ಲುವ ಯುವ ಸಮುದಾಯವಂತೂ ದಿಕ್ಕೆಟ್ಟು ಕುಳಿತಿದೆ. ಮಾನವಿಕ ವಿಷಯಗಳನ್ನು ಓದಿದವರಿಗೆ ಕೆಲಸ ಸಿಗದೆ ದಶಕವೇ ಸಂದಿದೆ. ಎಂಜಿನಿಯರಿಂಗ್‌ ಓದಿದವರಿಗೆ ಉದ್ಯೋಗಗಳು ಸಿಗುತ್ತಿದ್ದವು. ಉತ್ಪಾದನಾ ವಲಯದ ಕುಸಿತದಿಂದಾಗಿ ಎಂಜಿನಿಯರಿಂಗ್‌ ಓದಿದರೂ ಕೆಲಸ ಸಿಗುತ್ತಿಲ್ಲ. ಈ ದಿನಗಳಲ್ಲಿ ಜನರ ಭಾವನೆ ಕೆರಳಿಸಿ, ಮಹಾ ಮರೆವಿಗೆ ಜನರನ್ನು ದೂಡುವ ಕೆಲಸ ಮಾಡುತ್ತಿರುವವರಿಗೆ ಯಡಿಯೂರಪ್ಪ ಬುದ್ಧಿ ಹೇಳಲೇಬೇಕಾದ ಕಾಲ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT