ವಿಧಾನಸಭೆ ಚುನಾವಣೆಯ ನಂತರ ಎರಡೂವರೆ ವರ್ಷ ಮಲಗಿದಂತಿದ್ದ ವಿರೋಧ ಪಕ್ಷ ಬಿಜೆಪಿ ಈಗ ಎದ್ದು ಕುಳಿತಿದೆ. ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಮೈಚಳಿ ಬಿಟ್ಟು ನಾಡಿನಾದ್ಯಂತ ಓಡಾಡಲು ಶುರು ಮಾಡಿದ್ದಾರೆ. 136 ಸ್ಥಾನಗಳ ದೊಡ್ಡ ಗೆಲುವು, ಮೂವರು ಸ್ವತಂತ್ರ ಶಾಸಕರ ಬೆಂಬಲ ಪಡೆದಿದ್ದ ಆಡಳಿತ ಪಕ್ಷ ಕಾಂಗ್ರೆಸ್ ಎದುರು ಬಡಿದಾಡುವುದು ಅಷ್ಟು ಸುಲಭವೇನಲ್ಲ. ಆದರೆ, ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಪ್ರತಿ ಸೋಲು ಕೂಡ, ಗೆಲುವಿನ ಕಡೆಗಿನ ನಡೆಯನ್ನು ಮತ್ತಷ್ಟು ಹದಗೊಳಿಸಿ, ಹುರಿಗೊಳಿಸುವ ರಹದಾರಿ. ಕೇಂದ್ರದಲ್ಲಿ ತಮ್ಮದೇ ಪಕ್ಷದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವಿದ್ದು, ಸಾಂವಿಧಾನಿಕ ಸಂಸ್ಥೆಗಳೆಲ್ಲವೂ ತಮ್ಮ ಕೈಯಳತೆಯಲ್ಲೇ ಇರುವ ಕಾಲದಲ್ಲಿ ನಾಲ್ಕು ವರ್ಷ ಅಧಿಕಾರ ನಡೆಸಿಯೂ ರಾಜ್ಯದಲ್ಲಿ ಹೀನಾಯ ಸೋಲನ್ನು ಬಿಜೆಪಿ ಕಂಡಿತು. ಆ ಬಳಿಕ ಮತ್ತೆ ತಲೆ ಎತ್ತಿ ನಿಲ್ಲುವತ್ತ ಬಿಜೆಪಿ ನಾಯಕರು ಕ್ರಿಯಶೀಲರಾಗಿರಲಿಲ್ಲ. ಹೀಗಾಗಿಯೇ, ರಾಜ್ಯದಲ್ಲಿ ವಿರೋಧ ಪಕ್ಷವೇ ಇಲ್ಲದಂತಹ ಸ್ಥಿತಿ ನಿರ್ಮಾಣವಾಗಿಬಿಟ್ಟಿತು. ಈಗ ಮೈಗೆ ತುಸು ಕಸುವು ಏರಿಸಿಕೊಂಡಂತಿರುವ ಬಿಜೆಪಿ ನಾಯಕರು, ವಿರೋಧ ಪಕ್ಷವೊಂದು ರಾಜ್ಯದಲ್ಲಿ ಇದೆ ಎಂಬಂತಹ ವಾತಾವರಣ ಸೃಷ್ಟಿ ಮಾಡಲು ಅಣಿಯಾದಂತಿದೆ.

ಪ್ರಜಾಪ್ರಭುತ್ವ ವ್ಯವಸ್ಥೆಯೊಳಗೆ ಆಡಳಿತ ಪಕ್ಷಕ್ಕೆಇರುವಷ್ಟೇ ಮಹತ್ವ ವಿರೋಧ ಪಕ್ಷಕ್ಕೂ ಇದೆ. ಈ ಕಾರಣಕ್ಕಾಗಿಯೇ, ವಿರೋಧ ಪಕ್ಷದ ನಾಯಕರನ್ನು ಛಾಯಾ (ಶಾಡೋ) ಮುಖ್ಯಮಂತ್ರಿ ಎಂದು ಗುರುತಿಸುವ ಪರಿಪಾಟವಿದೆ. ಚುನಾಯಿತ ಸರ್ಕಾರವೊಂದು ಎಸಗುವ ಅನಾಹುತ, ಆಡಳಿತ ವೈಫಲ್ಯದಿಂದಾಗುವ ಪರಿಣಾಮ, ಸರ್ಕಾರಿ ಕಚೇರಿಗಳಲ್ಲಿನ ಅವ್ಯಾಹತ ಭ್ರಷ್ಟಾಚಾರ, ನೈಸರ್ಗಿಕ ವಿಕೋಪಗಳಾದಾಗ ಆಡಳಿತಾರೂಢರು ಮರೆವಿಗೆ ಜಾರುವುದು,ಅಭಿವೃದ್ಧಿಯ ವಿಷಯದಲ್ಲಿ ತೀವ್ರ ನಿರ್ಲಕ್ಷ್ಯ... ಇವೆಲ್ಲದರ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾದವರು ಯಾವ ಪಕ್ಷದ ಹಂಗೂ ಇಲ್ಲದೇ ತಮ್ಮ ಪಾಡಿಗೆ ತಾವಿರುವ ಬಹುಜನ ವರ್ಗ. ಪಕ್ಷದ ಕಾಲಾಳುಗಳು ಯಾವುದೇ ಪಕ್ಷದ ಸರ್ಕಾರ ಅಧಿಕಾರದಲ್ಲಿ ಇದ್ದರೂ ತಮ್ಮ ಕೆಲಸ ಆಗುವಂತೆ ನೋಡಿಕೊಳ್ಳುತ್ತಾರೆ ಅಥವಾ ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಮಾಡಿಟ್ಟಿದ್ದ ಆಸ್ತಿಯಲ್ಲಿ ಸ್ವಲ್ಪ ಕರಗಿಸಿ, ರಾಜಕಾರಣ ನಡೆಸುತ್ತಾರೆ. ಸರ್ಕಾರದ ದುರ್ಬಲ ನಡೆಯಿಂದಾಗಿ, ನೇರವಾಗಿ ಬಸವಳಿಯುವವರು ನಿತ್ಯದ ಅನ್ನವನ್ನು ದುಡಿದು ತಿನ್ನಲೇಬೇಕಾದ ಬಹುಸಂಖ್ಯಾತರು. ಜನವಿರೋಧಿ ಸರ್ಕಾರವನ್ನು ಚುನಾವಣೆ ವೇಳೆ ಬದಲಿಸುವ ದೊಡ್ಡ ಶಕ್ತಿಯೂ ಇವರದ್ದೇ. ಒಂದು ಕಾಲದಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಇರುವವರು, ಮತ್ತೊಂದು ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯಬೇಕಾದರೆ ಆಳುವವರ ದುರಾಡಳಿತ ಪರಿ–ಪರಿಣಾಮವನ್ನು ಜನರಿಗೆ ಪರಿಚಯಿಸುವ, ಜನರನ್ನು ಎಚ್ಚರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಿದರೆ ಸಾಕು.

ವಿರೋಧ ಪಕ್ಷ ಸಮರ್ಥವಾಗಿದ್ದರೆ, ಆಳುವಪಕ್ಷದವರು ಅಂದಾದುಂದಿ ದರ್ಬಾರು ಮಾಡುವುದಿಲ್ಲ. ಅಡಿಗಡಿಗೂ ಎಚ್ಚರದಿಂದ ಹೆಜ್ಜೆ ಇಡುತ್ತಾರೆ. ತುಸು ಯಾಮಾರಿದರೂ ವಿರೋಧ ಪಕ್ಷದವರು ಜನಾಂದೋಲನ ರೂಪಿಸುತ್ತಾರೆ ಎಂಬ ಭಯದಲ್ಲಿ ಜನವಿರೋಧಿ ಕೆಲಸಗಳನ್ನು ಮಾಡಲು ಆಡಳಿತ ನಡೆಸುವವರು ಅಂಜುತ್ತಾರೆ. ಆಡಳಿತ ಪಕ್ಷದ ನೇತಾರರು, ಮಂತ್ರಿಗಳು ಎರಡಲುಗಿನ ಕತ್ತಿನ ಮೇಲೆ ನಡೆಯುವಂತಹ ವಾತಾವರಣವನ್ನು ಸದಾ ಕಾಪಿಟ್ಟುಕೊಳ್ಳುವುದು ಸಂವಿಧಾನರೀತ್ಯ ವಿರೋಧ ಪಕ್ಷಗಳ ಹೊಣೆಗಾರಿಕೆ.

ದೇಶದ ಪ್ರಗತಿಪಥದಲ್ಲಿ ಕರ್ನಾಟಕವನ್ನು ಮುಂಚೂಣಿ ಹಾಗೂ ಮಾದರಿ ರಾಜ್ಯವಾಗಿಸುವ ಮುನ್ನೋಟದ ಮಹತ್ತರ ಯೋಜನೆಗಳನ್ನು ಈ ಎರಡೂವರೆ ವರ್ಷಗಳಲ್ಲಿ ಸರ್ಕಾರ ಕೈಗೆತ್ತಿಕೊಂಡಿಲ್ಲ. ಪಂಚ ಗ್ಯಾರಂಟಿಗಳ ಯಶಸ್ಸಿನ ಧಾರೆಯಡಿ, ಒಂದಿಷ್ಟು ಜನಪರ ಕಾಯ್ದೆಗಳನ್ನು ಜಾರಿಗೊಳಿಸಿದ್ದಷ್ಟೇ ಸರ್ಕಾರದ ಸಾಧನೆ. ನಾಯಕತ್ವದ ವಿಷಯದಲ್ಲಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರ ಬಣ ಜಗಳದಿಂದಾಗಿ, ಆಡಳಿತ ಹಳಿ ತಪ್ಪಿಹೋಗಿದೆ. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿರುವುದಕ್ಕೆ ಲೋಕಾಯುಕ್ತ ದಾಳಿಗಳು, ರಕ್ಷಕ ಪೊಲೀಸರೇ ಭಕ್ಷಕರಾಗಿರುವುದಕ್ಕೆ ಹಲವಾರು ಪ್ರಕರಣಗಳು ಸಾಕ್ಷಿಯಾಗುತ್ತವೆ.

ಇಂತಹ ಹೊತ್ತಿನಲ್ಲಿ ಸರ್ಕಾರದ ಕಾರ್ಯವೈಖರಿಯ ಬಗ್ಗೆ ಜನರನ್ನು ಜಾಗೃತಗೊಳಿಸುವ, ಸರ್ಕಾರದ ಕಿವಿಹಿಂಡುವ ಜವಾಬ್ದಾರಿ ಪ್ರತಿಪಕ್ಷಗಳದ್ದಾಗಿದೆ. ಕಾಂಗ್ರೆಸ್ನಲ್ಲಿ ಎರಡು ಬಣಗಳಿದ್ದರೆ, ವಿರೋಧಪಕ್ಷವಾಗಿ ಸಂಘಟಿತ ಹೋರಾಟ ನಡೆಸಬೇಕಾದ ಬಿಜೆಪಿಯಲ್ಲಿ ಪಂಚ ಬಣಗಳಿವೆ. ಯಾರಿಗೂ ಯಾರಮೇಲೂ ವಿಶ್ವಾಸವಿಲ್ಲ. ಸರ್ಕಾರದ ವಿರುದ್ಧ ನಿರ್ಣಾಯಕ ಹೋರಾಟ ಮಾಡಬೇಕಾದ ಸಂದರ್ಭ

ಒದಗಿದಾಗಲೆಲ್ಲ, ದಾಯಾದಿ ಕಲಹದಲ್ಲಿರುತ್ತಾರೆ. ಸರ್ಕಾರದ ವಿರುದ್ಧ ಹೋರಾಟ ಮಾಡಿದರೆ ಅದರ ಲಾಭ ಯಾರ ಪಾಲಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ಎಲ್ಲ ನಾಯಕರು ಮುಳುಗಿರುವುದರಿಂದಾಗಿ, ಯಾರೊಬ್ಬರೂ ನೇತೃತ್ವ ವಹಿಸಲು ಸಿದ್ಧರಾಗುತ್ತಿಲ್ಲ. ಇದು, ಬಿಜೆಪಿಯ ಸದ್ಯದ ಸಮಸ್ಯೆ.

ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವುದಿಲ್ಲ ಎಂಬ ಟೀಕೆ ಹೊತ್ತ ಬಿ.ವೈ. ವಿಜಯೇಂದ್ರ ಅವರದ್ದೇ ಒಂದು ಬಣ. ಯಡಿಯೂರಪ್ಪ ಅವರೊಂದಿಗೆ ಅಂತರ ಇಟ್ಟುಕೊಂಡೇ ಬಂದಿರುವ ಹಿರಿಯರದ್ದು ಒಂದು ಬಣ. ಕರ್ನಾಟಕದ ಮೇಲೆ ತಮ್ಮ ಹಿಡಿತ ಇರಬೇಕೆಂದು ಬಯಸುವ ಬಿ.ಎಲ್. ಸಂತೋಷ್ ಅವರದ್ದು ಮತ್ತೊಂದು ಕೂಟ. ವಿಜಯೇಂದ್ರರನ್ನು ಇಳಿಸಿಯೇ ತೀರಬೇಕೆಂಬ ಮತ್ತೊಂದು ಗುಂಪು. ಇದೆಲ್ಲದರ ಜತೆಗೆ ನಿರ್ಲಿಪ್ತರದ್ದು ಮಗದೊಂದು ಗುಂಪು. ಹೀಗೆ ಹರಿದು ಹಂಚಿಹೋಗಿರುವ ಬಿಜೆಪಿ,

ಸರ್ಕಾರದ ವಿರುದ್ಧ ಒಂದೇ ಒಂದು ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲೇ ಇಲ್ಲ. ಭ್ರಷ್ಟಾಚಾರ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ವೈಫಲ್ಯ, ಪೊಲೀಸರ ದಬ್ಬಾಳಿಕೆ, ಅಭಿವೃದ್ಧಿಯಲ್ಲಿ ಹಿನ್ನಡೆ ಯಾವುದನ್ನೂ ಬಿಜೆಪಿ ನಾಯಕರು ತೀವ್ರ ತರದ ಹೋರಾಟವಾಗಿ ರೂಪಿಸಲೇ ಇಲ್ಲ. ಮುಡಾ ನಿವೇಶನ ಹಾಗೂ ವಾಲ್ಮೀಕಿ ನಿಗಮದ ಹಗರಣದ ಬಗ್ಗೆ ತುಸು ಸದ್ದು ಮಾಡಿದ್ದು ಬಿಟ್ಟರೆ, ಬೇರೆ ಯಾವತ್ತೂ ದೃಢವಾಗಿ ಧ್ವನಿ ಎತ್ತಿದ್ದೇ ಇಲ್ಲ.

ಬಳ್ಳಾರಿಯಲ್ಲಿ ಈಚೆಗೆ ನಡೆದ ಗುಂಡು ಹಾರಿಸಿದ ಘಟನೆ ಆಡಳಿತಾರೂಢರ ದರ್ಪಕ್ಕೆ ಉದಾಹರಣೆ. ಇದರ ವಿರುದ್ಧ ಸಂಘಟಿತ ಹೋರಾಟ ನಡೆಸಬಹುದಾದ ಅವಕಾಶಗಳಿದ್ದರೂ ಬಿಜೆಪಿ ಕೈಚೆಲ್ಲಿ ಕುಳಿತು, ಪ್ರತಿಭಟನೆಗಷ್ಟೇ ಸೀಮಿತವಾಗಿದೆ.

ಆರ್ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣದಲ್ಲಿ ಪತ್ರಿಕಾಗೋಷ್ಠಿ, ಜಾಲತಾಣಗಳ ಹೇಳಿಕೆಗಳಷ್ಟೇ ಬಿಜೆಪಿ ಸಾಧನೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಕೆಲವು ಸಚಿವರು, ಐಎಎಸ್, ಐಪಿಎಸ್ ಅಧಿಕಾರಿಗಳ ಘನ ಗಂಭೀರ ಲೋಪವನ್ನು ಮುಂದಿಟ್ಟು ಹೋರಾಟ ಮಾಡಬಹುದಾದ ಅವಕಾಶವನ್ನು ಬಿಜೆಪಿ ಕೈಬಿಟ್ಟಿತು.

ಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ರಚನಾತ್ಮಕ ಹೋರಾಟ ನಡೆಸಿ, ಸರ್ಕಾರದ ಲೋಪವನ್ನು ಬಿಂಬಿಸಬಹುದಾದ ತನ್ನ ಜವಾಬ್ದಾರಿಯಿಂದ ನುಣುಚಿಕೊಂಡಿತು. ತನ್ನ ಯಾವತ್ತಿನ ವಿಭಜಕ ರಾಜಕಾರಣಕ್ಕೆ ಪೂರಕವಾದ ಕೋಮುದ್ವೇಷ ಉಲ್ಬಣಗೊಳಿಸುವವಿಷಯಗಳ ಮೇಲೆಯೇ ಕೇಂದ್ರೀಕರಿಸಿತು. ಯಾವುದೇ ಪ್ರಕರಣದಲ್ಲಿ ಮುಸ್ಲಿಂ ಸಮುದಾಯದವರು ಆರೋಪಿಗಳಾಗಿದ್ದರಷ್ಟೇ ಬಿಜೆಪಿ ಅದನ್ನು ಹೋರಾಟಕ್ಕೆ ತೆಗೆದುಕೊಳ್ಳುತ್ತದೆ ವಿನಃ, ಕೃತ್ಯ ಎಸಗಿದವರು ಹಿಂದೂ ಧರ್ಮದ ಯಾವುದೇ ಜಾತಿಗೆಸೇರಿದವರಾದರೂ ಚಕಾರವನ್ನೇ ಎತ್ತುವುದಿಲ್ಲ. ಅಂಕೋಲಾದಲ್ಲಿನ ಮಹಿಳೆಯೊಬ್ಬರ ಹತ್ಯೆ ಅಮಾನವೀಯ. ಆದರೆ, ಅದರಲ್ಲಿ ಭಾಗಿಯಾದ ಆರೋಪಿ ಮುಸ್ಲಿಂ ಎಂಬ ಕಾರಣಕ್ಕೆ ರಾಜ್ಯವ್ಯಾಪಿ ಗದ್ದಲ ಎಬ್ಬಿಸಿತು. ಕೋಗಿಲು ಬಡಾವಣೆಯಲ್ಲಿ ಅಕ್ರಮವಾಗಿ ಗುಡಿಸಲು ಕಟ್ಟಿಕೊಂಡವರನ್ನು ತೆರವು ಮಾಡಿದಾಗ ಅದನ್ನು ವಿರೋಧಿಸಿದ ಬಿಜೆಪಿ, ಮತ್ತೆ ಮನೆ ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿತು. ಅಲ್ಲಿದ್ದವರ ಪೈಕಿ ಕೆಲವರು ಕೇರಳದವರು, ಮುಸ್ಲಿಮರು ಎಂಬ ವಿಷಯ ಹೊರಗೆ ಬರುತ್ತಿದ್ದಂತೆ, ‘ಬಾಂಗ್ಲಾ’ದ ಬಣ್ಣ ಕಟ್ಟಿ ವಿವಾದ ಎಬ್ಬಿಸಿತು.

2019–2023ರ ಅಧಿಕಾರ ಅವಧಿಯಲ್ಲೂ ಜನರ ಕೆರಳಿಸುವ ಧಾರ್ಮಿಕ ವಿವಾದಗಳಿಗೆ ಆದ್ಯತೆ ಕೊಟ್ಟಿತ್ತು. ಬಿಜೆಪಿಯವರಿಗೆ ಜನರ ಹೋರಾಟವೆಂದರೆ ಅವರ ನಿತ್ಯದ ಬದುಕಿನ ಸಂಕಷ್ಟಗಳ ಪರಿಹಾರಕ್ಕಾಗಿ ಸರ್ಕಾರವನ್ನು ಕಟ್ಟಿಹಾಕುವುದು ಎಂಬ ಪರಿವೆ ಇಲ್ಲ. ಪ್ರಾರ್ಥನೆಗೆ ಅಡ್ಡಿ, ಗಲಭೆ, ಮಕ್ಕಳ ಕಲ್ಲೆಸೆತ, ಯಾವುದೋ ಕಾರಣಕ್ಕೆ ಕೊಲೆ ಇಂತಹ ಪ್ರಕರಣಗಳಲ್ಲಿ ಮುಸ್ಲಿಮರು ಭಾಗಿಯಾಗಿದ್ದರಷ್ಟೇ ಬಿಜೆಪಿಯವರಿಗೆ ಹೋರಾಟದ ವಸ್ತು. ಅದೇ, ದಲಿತ, ಹಿಂದುಳಿದ ಸಮುದಾಯದ ಯುವತಿ, ಮಹಿಳೆಯರ ಮೇಲಾಗುವ ಪ್ರಬಲ ಜಾತಿಯವರ ದೌರ್ಜನ್ಯ, ಕೊಲೆಗಳ ವಿಷಯ ಮುಖ್ಯವಾಗುವುದೇ ಇಲ್ಲ.

ಕರ್ನಾಟಕದ ಜನ ಇಂತಹ ಕೋಮು ಪ್ರಚೋದನೆಯ ಸಂಗತಿಗಳನ್ನು ಆಧರಿಸಿ ಮತ ಹಾಕುವವರಲ್ಲ, ಅಭಿವೃದ್ಧಿಯ ಪಥ– ಭ್ರಷ್ಟಾಚಾರ ರಹಿತ, ಜನಸ್ನೇಹಿ ಆಡಳಿತ ಬಯಸುವವರು ಎಂಬುದನ್ನು ಅರ್ಥ ಮಾಡಿಕೊಳ್ಳದೇ ಸೋಲಾಯಿತು ಎಂಬ ಪಾಠವನ್ನು ಬಿಜೆಪಿ ಕಲಿತಂತಿಲ್ಲ. ಹೀಗಾಗಿಯೇ, ಈಗಲೂ ಅದೇ ಹಾದಿಯನ್ನು ನಾಯಕರು ಹಿಡಿದಿದ್ದಾರೆ.

ದೆಹಲಿಯಲ್ಲಿ ವರಿಷ್ಠರನ್ನು ಭೇಟಿಯಾದ ಬಳಿಕ ವಿಜಯೇಂದ್ರ ಸಕ್ರಿಯರಾಗಿದ್ದಾರೆ. ಪಕ್ಷದ ಎಲ್ಲ ಸ್ತರದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದಡಿ ಇಡಲು ಸಜ್ಜಾಗಿದ್ದಾರೆ. 136 ಸ್ಥಾನಗಳನ್ನು ಗೆಲ್ಲಿಸಿಕೊಟ್ಟರೂ ಸಿದ್ದರಾಮಯ್ಯ, ಶಿವಕುಮಾರ್ ತಮ್ಮ ಬಣಕಟ್ಟಿಕೊಂಡು ನಡೆಸುತ್ತಿರುವ ಕಚ್ಚಾಟದಿಂದ ರಾಜ್ಯದಜನ ರೋಸಿ ಹೋಗಿದ್ದಾರೆ. ನಾಯಕತ್ವ ಬದಲಾದರೆಹೊಸ ಸಚಿವರು ಬರುತ್ತಾರೆ ಎಂಬ ಲೆಕ್ಕಾಚಾರದಲ್ಲಿರುವ ಅಧಿಕಾರಿಗಳು ಕೆಲಸ ಮಾಡುವುದನ್ನೇ ಮರೆತು ಬಿಟ್ಟಿದ್ದಾರೆ. ಲಂಚ ಕೊಡದೇ ಯಾವುದೇ ಇಲಾಖೆಯಲ್ಲಿ ಒಂದೇ ಒಂದು ಕಡತವೂ ಇರುವಜಾಗದಿಂದ ಅಲುಗಾಡುತ್ತಿಲ್ಲ. ಕೊಲೆ–ಸುಲಿಗೆ,ಮಹಿಳೆಯರ ಮೇಲಿನ ದೌರ್ಜನ್ಯಗಳ ಪ್ರಕರಣಗಳಂತೂ ಬೆಚ್ಚಿ ಬೀಳಿಸುತ್ತಿವೆ. ಇಂತಹ ಹೊತ್ತಿನಲ್ಲಿ, ವಿರೋಧ ಪಕ್ಷದವರು ಎದ್ದು ಕುಳಿತರಷ್ಟೇ ಸಾಲದು;ಮೈಕೊಡವಿ ಜನರ ಪರ ನಿಲ್ಲುವುದನ್ನು ರೂಢಿಸಿಕೊಳ್ಳಬೇಕಿದೆ. ಸರ್ಕಾರ ನಡೆಸುವವರು ಮೈ ಮರೆಯದಂತೆ ವಿರೋಧ ಪಕ್ಷದವರು ಕಾಡಿದರಷ್ಟೇ,ರಾಜ್ಯದ ಜನರು ನೆಮ್ಮದಿಯಿಂದ ನಿದ್ರಿಸಬಲ್ಲರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.