ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಗತಿಬಿಂಬ | ಬ್ರಾಹ್ಮಣ್ಯಕ್ಕೆ ಬಲ: ಕನಲಿದ ಕಮಲ

ಎರಡು ದಶಕದ ಹಿಂದಿನ ‘ಭೂತ’: ವರ್ತಮಾನದಲ್ಲಿ ಕುಣಿತ
Published : 17 ಏಪ್ರಿಲ್ 2023, 23:00 IST
ಫಾಲೋ ಮಾಡಿ
Comments

2003–2023; ಸರಿಯಾಗಿ ಇಪ್ಪತ್ತು ವರ್ಷಗಳ ಹಿಂದೆ ಬಿಜೆಪಿಯೊಳಗೆ ಇದೇ ರೀತಿಯ ಕಿಚ್ಚು ಹೊತ್ತಿಕೊಂಡಿತ್ತು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಎಚ್‌.ಎನ್.ಅನಂತಕುಮಾರ್‌ ಅವರು 2004ರಲ್ಲಿ ನಡೆಯಬೇಕಿದ್ದ ವಿಧಾನಸಭೆ ಚುನಾವಣೆಗೆ ರಂಗ ಸಜ್ಜುಗೊಳಿಸತೊಡಗಿದ್ದರು.

ದೆಹಲಿ ರಾಜಕಾರಣದಲ್ಲಿ ಅಷ್ಟೊತ್ತಿಗೆ ಪಳಗಿದ್ದ ಅನಂತಕುಮಾರ್‌, ರಾಜ್ಯದ ಚುಕ್ಕಾಣಿ ಹಿಡಿಯಲೇ ಬೇಕೆಂಬ ಛಲಹೊತ್ತ ಅನಂತಕುಮಾರ್‌ ತಮ್ಮ ಎಲ್ಲ ಅಸ್ತ್ರಗಳನ್ನು ಬಳಸತೊಡಗಿದರು. ಇದರಿಂದ ಸಿಟ್ಟಿಗೆದ್ದ ಕೆಲವರು, ಲಿಂಗಾಯತರನ್ನು ತುಳಿಯಲಾಗುತ್ತಿದೆ ಎಂದು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದುಂಟು. ಬ್ರಾಹ್ಮಣರಾಗಿದ್ದ ಅನಂತಕುಮಾರ್‌ ಅವರನ್ನೇ ಗುರಿಯಾಗಿಸಿ, ‘ಲಿಂಗಾಯತ ರಾಜಕಾರಣ’ ದೊಡ್ಡ ಸದ್ದು ಮಾಡಿತು.

ಧಾರವಾಡ ಲೋಕಸಭಾ ಕ್ಷೇತ್ರದಿಂದ ಮೂರು ಬಾರಿ ಬಿಜೆಪಿ ಸಂಸದರಾಗಿ ಆರಿಸಿಬಂದಿದ್ದ ಉದ್ಯಮಿ ವಿಜಯಸಂಕೇಶ್ವರ ಅವರು ಪಕ್ಷ ತೊರೆದು, ತಮ್ಮದೇ ‘ಕನ್ನಡನಾಡು’ ಪಕ್ಷ ಕಟ್ಟಿದರು. ಅಧಿಕಾರ ಹಿಡಿದೇ ಬಿಡುವ ಗುಂಗಿನಲ್ಲಿದ್ದ ಅನಂತಕುಮಾರ್‌, ಎಸ್.ಎಂ.ಕೃಷ್ಣ ಅವರ ನಡೆಯಿಂದ ಬೇಸತ್ತಿದ್ದ, ಹಿಂದುಳಿದ ಸಮುದಾಯ ಮಾತ್ರವಲ್ಲದೆ ಎಲ್ಲರನ್ನೂ ಮೋಡಿ ಮಾಡುವ ಶಕ್ತಿ ಹೊಂದಿದ್ದ ಎಸ್.ಬಂಗಾರಪ್ಪ ಅವರ ಮನವೊಲಿಸಿ ಬಿಜೆಪಿಗೆ ಕರೆತರುವಲ್ಲಿ ಯಶಸ್ವಿಯಾದರು. ‌ಅಲ್ಲಿಯವರೆಗೆ ಬಂಗಾರಪ್ಪನವರ ಎದುರು ಸ್ಪರ್ಧಿಸಿ ಸೋತು–ಗೆದ್ದಿದ್ದ ಆಯನೂರು ಮಂಜುನಾಥ್‌ ಅವರು ಲಿಂಗಾಯತರಿಗೆ ಪಕ್ಷದಲ್ಲಿ ಬೆಲೆ ಇಲ್ಲ ಎಂದು ಹೊರನಡೆದರು. ಉದ್ಯಮಿ ವಿಜಯ ಮಲ್ಯ ಆಗಷ್ಟೇ ಜನತಾ ಪಕ್ಷವನ್ನು ಖರೀದಿಸಿದ್ದರು. ಪಕ್ಷ ತೊರೆದಿದ್ದ ಆಯನೂರು, ಜನತಾ ಪಕ್ಷ ಸೇರಿ, ರಾಜ್ಯ ಘಟಕದ ಅಧ್ಯಕ್ಷರೂ ಆದರು. ಇದೇ ಬಗೆಯ ವ್ಯಾಕುಲದಲ್ಲಿದ್ದ ಬಿ.ಎಸ್.ಯಡಿಯೂರಪ್ಪ, ಬಂಗಾರಪ್ಪನವರು ಪಕ್ಷಕ್ಕೆ ಬಂದಿದ್ದೇ ತಡ, ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ತರ್ಕದಲ್ಲಿ ಪಕ್ಷದಲ್ಲೇ ಉಳಿದರು.

ತಮ್ಮ ಜನಪ್ರಿಯತೆಯನ್ನು ಪಣಕ್ಕಿಡುವ ಜತೆಗೆ, ಲೋಕಸಭೆ ಚುನಾವಣೆ ನಡೆಯುತ್ತಿರುವಾಗಲೇ ವಿಧಾನಸಭೆ ಚುನಾವಣೆಗೆ ಹೋದರೆ ಗೆಲುವು ಸಲೀಸು ಎಂದು ಜ್ಯೋತಿಷಿಯೊಬ್ಬರು ಹೇಳಿದ ಮಾತನ್ನು ನಂಬಿದ ಎಸ್.ಎಂ.ಕೃಷ್ಣ, ಅವಧಿ ಮುಗಿಯುವ ಆರು ತಿಂಗಳ ಮೊದಲೇ ಚುನಾವಣೆಗೆ ಹೋದರು. ಕರ್ನಾಟಕದಲ್ಲಿ ತಮಗಿಂತ ಒಂದು ಗುಲಗಂಜಿ ತೂಕದಷ್ಟು ಹೆಚ್ಚಿನ ಪ್ರಭಾವಳಿ ಹೊಂದಿರುವ ಎಸ್.ಬಂಗಾರಪ್ಪನವರು ಪಕ್ಷ ಬಿಟ್ಟು ಹೋಗುತ್ತಾರೆ ಎಂಬ ಅರಿವು ಕೃಷ್ಣರಿಗೆ ಇದ್ದಿರಲಿಕ್ಕಿಲ್ಲ. ಆದರೆ, ಅನಂತಕುಮಾರ್‌ ಉರುಳಿಸಿದ ದಾಳ, ಆಟದಲ್ಲಿ ಕಾಂಗ್ರೆಸ್ಸನ್ನು ಕಟ್ಟಿಹಾಕಿತು. ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಮೊದಲ ಬಾರಿ ಬಿಜೆಪಿಗೆ 79 ಸ್ಥಾನಗಳು ದಕ್ಕಿ, ಸಂಖ್ಯಾಬಲದಲ್ಲಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅಧಿಕಾರಾರೂಢ ಕಾಂಗ್ರೆಸ್ 65 ಸ್ಥಾನ ಪಡೆದರೆ, ಘಟಾನುಘಟಿ ನಾಯಕರಿದ್ದ ಜೆಡಿಎಸ್‌ 58ಕ್ಕೆ ಸೀಮಿತಗೊಂಡಿತು. ಬಳಿಕ, ಅನಂತಕುಮಾರ್ ಕರ್ನಾಟಕ ರಾಜಕಾರಣದಿಂದ ದೂರವಾದರು.

2008ರಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕವಷ್ಟೇ ಮತ್ತೆ ಕರ್ನಾಟಕದ ರಾಜಕಾರಣದ ಮೇಲೆ ಅನಂತಕುಮಾರ್‌ ಅವರಿಗೆ ಆಸೆ ಮೊಳೆಯಿತು. ಅಷ್ಟರಲ್ಲೇ, ಪಕ್ಷವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡಿದ್ದ ಯಡಿಯೂರಪ್ಪ ಅದಕ್ಕೆ ಅವಕಾಶವನ್ನೇ ಕೊಡಲಿಲ್ಲ. ಈ ಜಿದ್ದು, 2011ರಲ್ಲಿ ಸಮಾಪ್ತಿಯಾಗಿ, ಯಡಿಯೂರಪ್ಪ ರಾಜೀನಾಮೆ ಕೊಟ್ಟು ಮನೆಯಲ್ಲಿ ಕೂರುವ ಪರಿಸ್ಥಿತಿ ನಿರ್ಮಾಣವಾಯಿತು. 2013ರ ಚುನಾವಣೆಗೆ ಮುನ್ನ (2012ರ ಡಿಸೆಂಬರ್‌) ಅವರು ಪಕ್ಷ ತೊರೆದು ಕೆಜೆಪಿ ಕಟ್ಟಿದರು. ಇದು ಮೊದಲ ಅಧ್ಯಾಯ.

ಎರಡನೇ ಅಧ್ಯಾಯ; ಮುಖ್ಯಮಂತ್ರಿ ಕುರ್ಚಿಯಿಂದ ಇಳಿಯಲು ವರಿಷ್ಠರೇ ಕಾರಣ ಎಂಬುದು ಸ್ಪಷ್ಟವಾಗಿ ಗೊತ್ತಿದ್ದ ಯಡಿಯೂರಪ್ಪ ಕೆಜೆಪಿ ಕಟ್ಟಿ, ಚುನಾವಣೆಗೆ ನುಗ್ಗಿ ಕೈಸುಟ್ಟುಕೊಂಡರು. 2014ರ ಲೋಕಸಭೆ ಚುನಾವಣೆ ಹೊತ್ತಿಗೆ, ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಾಯಿತು. ತಾವು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಅನಂತಕುಮಾರ್ ತಮಗೆ ಅಸಹಕಾರ ನೀಡಿದ್ದನ್ನು ಮೋದಿಯವರು ಮರೆತಿರಲಿಲ್ಲ. ಅವರನ್ನು ಬದಿಗೆ ಸರಿಸುವ ಸಂಕಲ್ಪವನ್ನೂ ಹೊಂದಿದ್ದರು. ಆದರೆ, ಪ್ರಧಾನಿಯಾಗಬೇಕಾದರೆ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಂಸದರು ಗೆಲ್ಲುವುದು ಬೇಕಿತ್ತು. ಇದರ ಪರಿಣಾಮ ಯಡಿಯೂರಪ್ಪ ಮತ್ತೆ ಬಿಜೆಪಿಗೆ ವಾಪಸ್ ಆದರು.

2018ರ ಹೊತ್ತಿಗೆ ನರೇಂದ್ರ ಮೋದಿಯವರ ಪ್ರಭಾವಳಿ ಪ್ರಜ್ವಲಿಸುತ್ತಿತ್ತು. ಯಡಿಯೂರಪ್ಪನವರ ಲಿಂಗಾಯತ ರಾಜಕಾರಣದ ಜತೆಗೆ, ಮೋದಿಯವರ ಜನಪ್ರಿಯತೆಯ ಊರುಗೋಲು ಕರ್ನಾಟಕದಲ್ಲಿ ಕೈಹಿಡಿಯಬಹುದು ಎಂಬ ಲೆಕ್ಕಾಚಾರ ಬಿಜೆಪಿ ವರಿಷ್ಠರ
ದ್ದಾಗಿತ್ತು. ಆದರೆ, ಅದು ಕೈಗೂಡಲಿಲ್ಲ. ಹಾಗಂತ ಯಡಿಯೂರಪ್ಪ ಸುಮ್ಮನೆ ಕೂರಲಿಲ್ಲ. ‘ಆಪರೇಷನ್ ಕಮಲ’ ನಡೆಸಿ 2019ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರವನ್ನು ಅಧಿಕಾರಕ್ಕೆ ತಂದರು. ಆ ಖುಷಿ ಪೂರ್ಣಾವಧಿ ಇರಲಿಲ್ಲ. ಮಗನ ವಿರುದ್ಧ ಕೇಳಿಬಂದ ಭ್ರಷ್ಟಾಚಾರದ ಆರೋಪ, ವಯಸ್ಸಿನ ಕಾರಣ ನೀಡಿ, ಅವರಿಂದ ರಾಜೀನಾಮೆ ಕೊಡಿಸಲಾಯಿತು. ಕಣ್ಣೀರಿಡುತ್ತಲೇ ಅವರು ಮುಖ್ಯಮಂತ್ರಿ ಗಾದಿಯಿಂದ ಇಳಿದರು. ಅದಾದ ಬಳಿಕ ಮಗ ಬಿ.ವೈ.ವಿಜಯೇಂದ್ರ ಅವರನ್ನು ಬಸವರಾಜ ಬೊಮ್ಮಾಯಿ ಸಂಪುಟಕ್ಕೆ ಸೇರಿಸಬೇಕೆಂಬ ಅವರ ಪ್ರಯತ್ನವೂ ಈಡೇರಲಿಲ್ಲ.

ಬಿಜೆಪಿಯೆಂದರೆ ಲಿಂಗಾಯತರ ಪಕ್ಷ ಎಂಬ ನಂಬುಗೆಯ ಜಾಗದಲ್ಲಿ ಪ್ರಖರ ಹಿಂದುತ್ವವಾದಿ ಪಕ್ಷವೆಂದು ಬಿಂಬಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಯಿತು. ಬೊಮ್ಮಾಯಿ ಮುಖ್ಯಮಂತ್ರಿಯಾದ ಬಳಿಕ ಒಂದೊಂದೇ ಅಸ್ತ್ರಗಳು ‘ವರಿಷ್ಠ’ರ ಬತ್ತಳಿಕೆಯಿಂದ ಹೊರಬಿದ್ದವು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅನುಷ್ಠಾನವಾಗದ ಕಾರ್ಯಸೂಚಿಗೆ ಬೊಮ್ಮಾಯಿ ನೇತೃತ್ವದ ಸರ್ಕಾರ ಸಕಲ ಬೆಂಬಲ ನೀಡಿತು. ಬಿಜೆಪಿಯ ಲಿಂಗಾಯತ ವರ್ಚಸ್ಸನ್ನು ಕಳೆದು, ಹಿಂದುತ್ವವಾದಿಗಳ ಪಕ್ಷ ಎಂಬುದನ್ನು ದೃಢಪಡಿಸುವ ಯತ್ನದ ಹಿಂದೆ ಬಿ.ಎಲ್.ಸಂತೋಷ್ ಅವರು ಇರುವುದು ರಹಸ್ಯವೇನಲ್ಲ.

ಕರ್ನಾಟಕದಲ್ಲಿ ತಮ್ಮದೇ ಪ್ರಭಾವ ಹೊಂದಿರುವ ಸಂತೋಷ್, 2018ರ ವಿಧಾನಸಭೆ, 2019ರ ಲೋಕಸಭೆ ಚುನಾವಣೆಯ ಅಭ್ಯರ್ಥಿ ಆಯ್ಕೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು. 2023ರ ಚುನಾವಣೆಗೆ ಮುನ್ನ ಬಿಜೆಪಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡ ಸಂತೋಷ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಟಿಕೆಟ್ ಹಂಚಿಕೆಯಲ್ಲಿ ತಮ್ಮ ಮಾತು ನಡೆಯುವಂತೆ ನೋಡಿಕೊಂಡರು. ವಯಸ್ಸಿನ ಕಾರಣ ನೀಡಿ, ಹಿಂದುಳಿದ ಕುರುಬ ಸಮುದಾಯದ ಕೆ.ಎಸ್.ಈಶ್ವರಪ್ಪ, ದಲಿತ ಸಮುದಾಯದ ಎಸ್.ಅಂಗಾರ ಅವರಿಗೆ ನಿವೃತ್ತಿಯಾಗುವಂತೆ ಸೂಚಿಸಲಾಯಿತು. ಅವರೇನೋ ಒಪ್ಪಿಕೊಂಡರು; ತಿರುಗಿಬಿದ್ದ ಜಗದೀಶ ಶೆಟ್ಟರ್, ಲಕ್ಷ್ಮಣ ಸವದಿ, ‘ಲಿಂಗಾಯತರನ್ನು ವ್ಯವಸ್ಥಿತ
ವಾಗಿ ತುಳಿಯಲಾಗುತ್ತಿದೆ’ ಎಂದು ಆರೋಪಿಸಿದರು.

ಒಂದುವೇಳೆ ಬಿಜೆಪಿಗೆ ಅಧಿಕಾರ ಸಿಗುವಷ್ಟು ಬಹುಮತ ದೊರೆತರೆ ಮುಖ್ಯಮಂತ್ರಿಯಾಗುವ ಹಂಬಲ ಬಿ.ಎಲ್.ಸಂತೋಷ್‌ ಮತ್ತು ಪ್ರಲ್ಹಾದ ಜೋಶಿ ಅವರಿಗೆ ಇದೆ. ಈ ಬಾರಿ ಟಿಕೆಟ್‌ ಕೊಡುವುದರಲ್ಲಿ ನಿರ್ಣಾಯಕ ಪಾತ್ರ ವಹಿಸಿದವರು ಸಂತೋಷ್. ಬಿಜೆಪಿಗೆ ಬಹುಮತ ಸಿಕ್ಕಿ, ಶಾಸಕಾಂಗ ಪಕ್ಷದ ನಾಯಕನ ಆಯ್ಕೆಗೆ ಸಭೆ ನಡೆದರೆ, ಟಿಕೆಟ್ ಕೊಟ್ಟ ಸಂತೋಷ್ ಬೆಂಬಲಕ್ಕೆ ಶಾಸಕರು ನಿಲ್ಲುವುದು ದಿಟ. ಇದು ಗೊತ್ತಾಗಿಯೇ, ಮುಖ್ಯಮಂತ್ರಿ ಗಾದಿಗೆ ಬೇಡಿಕೆ ಇಡುವಷ್ಟು ಜಾತಿ ಹಾಗೂ ರಾಜಕೀಯ ಪ್ರಭಾವ ಇರುವವರಿಗೆ ಟಿಕೆಟ್ ನೀಡಿಲ್ಲ ಅಥವಾ ನಿವೃತ್ತಿಯಾಗುವಂತೆ ಸೂಚಿಸಲಾಗಿದೆ. ಕಿರಿಯರಿಗೆ ಅವಕಾಶ ಕೊಟ್ಟು ಹಿರಿಯರು ಹಿಂದಕ್ಕೆ ಸರಿಯಿರಿ ಎಂಬ ಸೂತ್ರ ಎಲ್ಲರಿಗೂ ಅನ್ವಯವಾಗಿಲ್ಲ.

ಯಡಿಯೂರಪ್ಪನವರಿಗೆ ಸಂಸದೀಯ ಮಂಡಳಿಯ ಸದಸ್ಯತ್ವ ನೀಡಿ, ‘ಉನ್ನತ’ ಸ್ಥಾನ ಕಲ್ಪಿಸಲಾಯಿತು ಎಂದು ಬಿಂಬಿಸಲಾಯಿತಾದರೂ ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸುವ ಪ್ರಮುಖ ಸಭೆಯಿಂದ ಅವರನ್ನು ಹೊರಗಿಡಲಾಯಿತು. ಹೀಗೆ, ಹಿರಿಯರನ್ನೆಲ್ಲ ಬದಿಗೆ ಸರಿಸುವಲ್ಲಿ ‘ಪುರೋಹಿತ’ರು ಪಾರಮ್ಯ ಮೆರೆದಿದ್ದಾರೆ. ಮೋದಿ–ಅಮಿತ್ ಶಾ ಜೋಡಿಯ ಪ್ರಭಾವದಿಂದಲಾದರೂ ಅರಳಬಹುದಾಗಿದ್ದ ಕಮಲ, ಬ್ರಾಹ್ಮಣರ ಹಟಕ್ಕೆ ಕನಲುತ್ತಿದೆ. ಇಷ್ಟೆಲ್ಲ ಆದರೂ ‘ಶೆಟ್ಟರ್–ಸವದಿಯವರು ದ್ರೋಹ ಎಸಗಿದ್ದಾರೆ’ ಎಂದು ಕೊರಳುಬ್ಬಿ ಅಬ್ಬರಿಸುವ ಯಡಿಯೂರಪ್ಪನವರ ಬೆನ್ನ ಹಿಂದಿನ ‘ಈಟಿ’ ಯಾವುದು ಎಂಬುದು ನಿಗೂಢ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT