ಭಾನುವಾರ, ಏಪ್ರಿಲ್ 11, 2021
28 °C

PV Web exclusive |ಹಿಟ್ಸು, ಲೈಕುಗಳು ಮಾನದಂಡವಾದರೆ...?

ರಶ್ಮಿ ಎಸ್‌ Updated:

ಅಕ್ಷರ ಗಾತ್ರ : | |

Prajavani

ಪಾತ್ರ, ಪಾತ್ರಕ್ಕಾಗಿ ನಿಮ್ಮ ನೋಟ, ನಿಮ್ಮ ನಟನೆ, ಕಂಗಳ ಭಾಷೆ, ನಿಲುವು ಇವೆಲ್ಲವೂ ಒಂದು ಕಾಲಕ್ಕೆ ಪಾತ್ರಗಳ ಆಯ್ಕೆಯ ಮಾನದಂಡವಾಗಿದ್ದವು. ಈಗ ಎಷ್ಟು ಹಿಟ್ಸ್‌, ಲೈಕ್ಸ್‌, ಫಾಲೋವರ್ಸ್‌... ಈ ಭಾಷ್ಯವೇ ಬದಲಾಗಿದೆ– ಶಿಲಾಖಾ ಪವಾರ್

ಮರಾಠಿ ರಂಗಭೂಮಿ, ಟೆಲಿವಿಶನ್‌, ಒಟಿಟಿ ಹಾಗೂ ಸಿನಿಮಾಗಳಲ್ಲಿಯೂ ನಟಿಸಿರುವ ಶಿಲಾಖಾ ಮಾತಿಗಿಳಿದಾಗಲೇ ಬೇಸರದ ಧ್ವನಿಯಲ್ಲಿದ್ದರು. ಇದೀಗ ಪಾತ್ರಗಳು ಸಿಗಬೇಕೆಂದರೆ ಅವರು ನಮ್ಮ ನಟನೆ, ಮುಖಭಾವ, ನಿಲುವು, ಪಾತ್ರಕ್ಕೆ ಹೊಂದಾಣಿಕೆಯಾಗುತ್ತದೆಯೇ ಎಂದು ನೋಡುವುದಿಲ್ಲ. 

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆಯೇ? ಈ ಹಿಂದೆ ಅವರು ನಟಿಸಿದ ಯಾವ ಪಾತ್ರಗಳು ಟ್ರೆಂಡಿಂಗ್‌ ಆಗಿದ್ದವು? ಜನರು ಎಷ್ಟು ಲೈಕ್‌ ಕೊಟ್ಟಿದ್ದಾರೆ? ಇಂಥವುಗಳನ್ನು ಗಮನಿಸುತ್ತಿದ್ದಾರೆ.

ಈ ಟ್ರೆಂಡಿಂಗ್‌ ಅನ್ನುವ ಭೂತ... ನನಗಂತೂ ಇದು ಭೂತವೇ ಅನಿಸುತ್ತದೆ. ಕಲಾವಿದರ ಸಾಮರ್ಥ್ಯ ಗುರುತಿಸುವುದು ಹಿಂದುಳಿಯುತ್ತಿದೆ. ಅಳುವಾಗಲೂ ಚಂದ ಕಾಣಬೇಕು ಅಂತ ಬಯಸುವ ನಟನಟಿಯರು ಹೆಚ್ಚಾಗಿದ್ದಾರೆ ಈಗ. 

ಒಂದು ಪಾತ್ರ ತೆರೆಯ ಮೇಲೆ ಕಾಣುವವರೆಗೂ ಒಂದು ಕುತೂಹಲವನ್ನು ಸೃಷ್ಟಿಸಿರಬೇಕು. ಕಾಪಿಡಬೇಕು. ಆದರೆ ಇದೀಗ ಪರ್ಯಾಯ ಮಾಧ್ಯಮದಂತೆ ಈ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುತ್ತಾರೆ. 

ಪಾತ್ರದ ಗಾಂಭೀರ್ಯವೇ ಅವರ ಸೆಲ್ಫಿಗಳಲ್ಲಿ ಕಳೆದುಹೋಗುತ್ತವೆ. ನಿರುಪಾ ರಾಯ್‌ ಅವರನ್ನು ಯಾವುದೇ ಕಾರಣಕ್ಕೂ ಗ್ಲಾಮರಸ್‌ ಆಗಿ ಕಲ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಆದರೆ ಈಗ ಪಾತ್ರಪೋಷಣೆಯ ಹಂತದಲ್ಲಿಯೇ ಎಡವುತ್ತೇವೆ.

ಪಾತ್ರವನ್ನು ಧೇನಿಸಬೇಕು. ಆಗಲೇ ಪರಕಾಯ ಪ್ರವೇಶ ಸಾಧ್ಯ. ಒಂದು ಗಂಭೀರ ಪಾತ್ರ ನಿರ್ವಹಿಸುವಾಗ ಅದನ್ನೇ ಯೋಚಿಸಬೇಕು. ಹಾಗೆಯೇ ವರ್ತಿಸಬೇಕು. ಆಗಲೇ ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ಸಾಧ್ಯ. ಈಗ ಹಂಗಾಗುತ್ತಿಲ್ಲ. ಪಾತ್ರಗಳ ಆಳಕ್ಕೆ ಇಳಿಯುವುದು ಸಾಧ್ಯವೇ ಆಗುವುದಿಲ್ಲ. ಆ ಗಾಂಭೀರ್ಯ ಮಾಯವಾಗುತ್ತಿದೆ.

ನಟ, ನಟಿಯರಿಗೆ ಜನಪ್ರಿಯತೆಯ ಹುಚ್ಚು ಇದ್ದಷ್ಟು, ನಟನೆಯ ಬಗೆಗೆ ಆಸ್ಥೆ ಕಡಿಮೆಯಾಗುತ್ತಿದೆ. ಈ ಬೆಳವಣಿಗೆಯಿಂದಲೆ ಒಂದೇ ಒಂದು ಪಾತ್ರವೂ ಮನದ ಭಿತ್ತಿಯಲ್ಲಿ ಉಳಿಯುತ್ತಿಲ್ಲ. 

ಒಂದು ಪಾತ್ರಕ್ಕೆ ವ್ಯಕ್ತಿಯನ್ನು ಆಯ್ಕೆ ಮಾಡುವ ಮೊದಲು ಚಿತ್ರಗಳನ್ನು ಕಳುಹಿಸಬೇಕಿತ್ತು. ನಂತರ ಆಡಿಷನ್‌ ನೀಡಬೇಕಿತ್ತು. ಈಗಲೂ ಈ ಹಂತಗಳಿವೆ. ಆಡಿಷನ್‌ ಕೆಲವೊಮ್ಮೆ ಪ್ರಹಸನದ ಹಂತಕ್ಕೆ ಹೋಗುತ್ತದೆ. ಅದೆಷ್ಟೋ ಸಲ ಚಂದದ ಪಾತ್ರವೊಂದು, ಹೆಚ್ಚು ಫಾಲೋವರ್ಸ್‌ ಇರುವ ನಟಿಯ ಪಾಲಾದ ಉದಾಹರಣೆ ಸಾಕಷ್ಟಿವೆ.

ಮಹಿಳೆಯರು ನಟನೆಯ ಕ್ಷೇತ್ರದಲ್ಲಿ ಕಾಲೂರುವುದೆಂದರೆ ಅದು ಸದಾ ಸಂಘರ್ಷದ ಸಮಯವೇ. ನಮಗೆ ಕೇವಲ ವೃತ್ತಿ, ಕೆರಿಯರ್‌ ಅಂತ ಮಾತ್ರ ಇರುವುದಿಲ್ಲವಲ್ಲ. ಕುಟುಂಬದ ಜವಾಬ್ದಾರಿ ಇದ್ದೇ ಇರುತ್ತದೆ. ಮದುವೆ, ಮದುವೆಯ ನಂತರ ಬದಲಾಗುವ ಆದ್ಯತೆಗಳು, ಬದಲಾಗುವ ಸ್ವರೂಪ ಇವೆಲ್ಲವೂ ಸವಾಲುಗಳಾಗಿಯೇ ಇರುತ್ತವೆ. ಕೆಲವರು ಇವನ್ನು ಅಡೆತಡೆಗಳೆಂದು ಕ್ಷೇತ್ರದಿಂದಲೇ ದೂರವಾಗುತ್ತಾರೆ. 

ನನ್ನ ಮೊದಲ ಮಗು ಹಾಸ್ಯ ಹುಟ್ಟಿದಾಗ, ನಾನವಳನ್ನು ಥೇಟರ್‌ಗೆ ಕರೆದೊಯ್ಯುತ್ತಿದ್ದೆ. ಎರಡು ದೃಶ್ಯಗಳ ನಡುವೆ ಬಂದು ಹಾಲುಣಿಸುವ ದಿನಗಳೂ ಇದ್ದವು.  ಶಾಲೆಯಿಂದ ಬಂದ ಮೇಲೆ ನನ್ನೊಟ್ಟಿಗೆ ಬರುತ್ತಿತ್ತು. ಪರದೆಯ ಹಿಂದೆ ಕುಳಿತು ಹೋಂವರ್ಕ್‌ ಮಾಡಿಕೊಳ್ಳುತ್ತಿದ್ದಳು. ನಿದ್ದೆ ಬಂದರೆ ಅಲ್ಲೇ ಒರಗಿಕೊಳ್ಳುತ್ತಿದ್ದಳು.  ಹಾಸ್ಯ ಈಗ ಕಾಲೇಜಿಗೆ ಹೋಗುತ್ತಿದ್ದಾಳೆ. ಅವಳ ತಂಗಿ ಕಿಯಾಳನ್ನೂ ನೋಡಿಕೊಳ್ಳುತ್ತಿದ್ದಾಳೆ. ಮಹಿಳೆಯೊಬ್ಬಳು ರಂಗಭೂಮಿಯಲ್ಲಿ ಬಹುದಿನಗಳ ಕಾಲ ನೆಲೆಯೂರಿದರೆ ಅದು ಅವಳ ಆಸಕ್ತಿ ಮತ್ತು ಅಸ್ಥೆಯಿಂದಲೇ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ. 

ನಾನು ರಂಗಭೂಮಿಯ ಹಿನ್ನೆಲೆಯಿಂದ ಬಂದವಳು. ಆಸ್ಥೆ ಮತ್ತು ಪರಿಶ್ರಮಕ್ಕೆ ಪರ್ಯಾಯವಿಲ್ಲ ಎನ್ನುವುದು ನಮ್ಮ ನಂಬಿಕೆ. ಪರಕಾಯಪ್ರವೇಶವೆಂಬುದು, ಪಾತ್ರವನ್ನು ಧೇನಿಸಿದಾಗ, ಬದುಕಿದಾಗ ಸಾಧ್ಯ. ತೋರಿದಾಗ ಆಗುವುದಿಲ್ಲ. ಪಾತ್ರವನ್ನು ನೋಡುವುದಲ್ಲ. ಕಾಣಬೇಕು. ಹೀಗೆ ಕಾಣಲು ಸಾಕಷ್ಟು ತಯಾರಿ ಬೇಕು. ಅದ್ಯಾಕೆ ಒಂದೆರಡು ವರ್ಷಗಳಲ್ಲಿ ನಟನಟಿಯರು ಈ ಕ್ಷೇತ್ರದಲ್ಲಿ ಕಾಲೂರದಂತೆ ಆಗುತ್ತಿದೆ ಅಂದರೆ ಇದೇ ಕಾರಣಕ್ಕೆ. 

ಕ್ಷಿಪ್ರ ಜನಪ್ರಿಯತೆ, ಅಷ್ಟೇ ವೇಗವಾಗಿ ಕರಗಿಹೋಗುತ್ತದೆ. ಈ ಸತ್ಯವನ್ನು ಅರಿತುಕೊಂಡಷ್ಟೂ ಅಂತಃಶಕ್ತಿ ಹೆಚ್ಚುತ್ತದೆ. ಇಲ್ಲದಿದ್ದಲ್ಲಿ ಪಾತ್ರವೊಂದು ಆಂತರ್ಯದಲ್ಲಿ ಇಳಿಯುವುದೇ ಇಲ್ಲ. ನಮ್ಮಲ್ಲಿ ನಾಟಕಗಳೆಂದರೆ ನಾಟ್ಯ, ಗಾಯನ ಹಾಗೂ ನಟನೆ ಎಲ್ಲವೂ ಗೊತ್ತಿರಬೇಕು. ಇಲ್ಲಿ ಹೇಗಿದೆ?  ಎಂದು ಕಣ್ಣರಳಿಸುತ್ತ ಕೇಳಿದ ಶಿಲಾಖಾ, ಟ್ರೆಂಡಿಂಗ್‌ನ ಭಾಷ್ಯ ಬದಲಾದ ಬಗೆ ವಿವರಿಸುತ್ತ, ವಿಷಾದಿಸುತ್ತ ಹೋದರು.

ಯಾರು ಶಿಲಾಖಾ?

ಕಳೆದೆರಡು ದಶಕಗಳಿಂದ ಮರಾಠಿ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ಕಲಾವಿದೆ. ಟೆಲಿವಿಷನ್‌ ಒಪೆರಾಗಳಲ್ಲೂ ನಟಿಸುತ್ತಾರೆ. ಮರಾಠಿ ಜನಪದ ನೃತ್ಯಗಳ ಸಂಯೋಜನೆಯನ್ನೂ ಮಾಡುವ ಈ ನಟಿ, ನಿರ್ದೇಶಕ ಹಾಗೂ ನಾಟಕಕಾರ ಸಂತೋಷ ಪವಾರ್‌ ಅವರ ಸಂಗಾತಿಯೂ ಹೌದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು