ಗುರುವಾರ, 22 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ರಾಜ್ಯಗಳ ಚುನಾವಣಾ ಫಲಿತಾಂಶ: ಮತ ಎಣಿಕೆಯ ಮುನ್ನಾ ದಿನ...

ಸ್ಥೂಲ ನೋಟ ಕೊಟ್ಟ ಮತಗಟ್ಟೆ ಸಮೀಕ್ಷೆಗಳು
Published 1 ಡಿಸೆಂಬರ್ 2023, 23:29 IST
Last Updated 1 ಡಿಸೆಂಬರ್ 2023, 23:29 IST
ಅಕ್ಷರ ಗಾತ್ರ

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಏನಾಗಬಹುದು ಎಂಬ ತೀರ್ಪನ್ನು ವಿವಿಧ ಮತಗಟ್ಟೆ ಸಮೀಕ್ಷೆಗಳು ಕೊಟ್ಟುಬಿಟ್ಟಿವೆ. ಜನರ ತೀರ್ಪು ಭಾನುವಾರ ಪ್ರಕಟವಾಗಲಿದೆ. ಈಗ ಪ್ರಕಟವಾಗಿರುವ ಅಂದಾಜು ಮತ್ತು ನಿಜವಾದ ಫಲಿತಾಂಶವನ್ನು ಹೋಲಿಸಿ ನೋಡುವ ಅವಕಾಶ ಭಾನುವಾರ ಸಿಗಲಿದೆ.

ಫಲಿತಾಂಶ ಯಾವ ರೀತಿ ಇರಬಹುದು ಎಂಬ ಸ್ಥೂಲ ನೋಟವೊಂದನ್ನು ಮತಗಟ್ಟೆ ಸಮೀಕ್ಷೆಗಳು ಕೊಟ್ಟಿವೆ. ಆದರೆ, ವಿವಿಧ ಸಮೀಕ್ಷೆಗಳ ಅಂದಾಜಿನ ನಡುವೆ ದೊಡ್ಡ ಮಟ್ಟದ ವ್ಯತ್ಯಾಸವೂ ಕಂಡುಬಂದಿದೆ. ಅಂದಾಜುಗಳ ನಡುವಣ ವ್ಯತ್ಯಾಸ ಯಾವ ರೀತಿಯಲ್ಲಿದೆ ಎಂದರೆ, ಸಮೀಕ್ಷೆಗಳ ಅಂದಾಜುಗಳ ಸರಾಸರಿ ತೆಗೆದುಕೊಳ್ಳುವುದು ಕೂಡ ಅವಾಸ್ತವಿಕ ಅನ್ನುವ ರೀತಿಯಲ್ಲಿದೆ. ಸಂಖ್ಯೆಗಳನ್ನು ಆಚೆಗಿಟ್ಟು, ವಿವಿಧ ರಾಜ್ಯಗಳಲ್ಲಿ ಯಾವ ‍‍ಪ್ರವೃತ್ತಿ ಇದೆ ಎಂಬುದನ್ನು ನೋಡೋಣ. ಛತ್ತೀಸಗಢ ಮತ್ತು ತೆಲಂಗಾಣವು ಕಾಂಗ್ರೆಸ್‌ ಪಕ್ಷದ ಪರವಾಗಿದ್ದರೆ, ಮಿಜೋರಾಂನಲ್ಲಿ ಜಡ್‌ಪಿಎಂ ನೇತೃತ್ವದ ಮೈತ್ರಿಕೂಟವು ಮುನ್ನಡೆ ಸಾಧಿಸಬಹುದು. ರಾಜಸ್ಥಾನ ಮತ್ತು ಮಧ್ಯಪ್ರದೇಶದಲ್ಲಿ ಅತ್ಯಂತ ನಿಕಟ ಸ್ಪರ್ಧೆ ಉಂಟಾಗಬಹುದು. ಎರಡು ಪ್ರಮುಖ ಪಕ್ಷಗಳ ಮತ ಪ್ರಮಾಣದ ಅಂತರವು ಬಹಳ ಕಡಿಮೆ ಇರಬಹುದು. 

ಮತಗಟ್ಟೆ ಸಮೀಕ್ಷೆಗಳು ತೋರಿಸಿಕೊಟ್ಟ ಪ್ರವೃತ್ತಿ ಮತ್ತು ಸ್ವತಂತ್ರ ತಳಮಟ್ಟದ ವರದಿಗಳನ್ನು ನಂಬುವುದಾದರೆ, ಭಾನುವಾರದ ಮತ ಎಣಿಕೆಯಲ್ಲಿ ಅತ್ಯಂತ ಕುತೂಹಲ ಕೆರಳಿಸಿರುವುದು ತೆಲಂಗಾಣ. ಕಾಂಗ್ರೆಸ್‌ ಪಕ್ಷಕ್ಕೆ ಸ್ಪಷ್ಟ ಮುನ್ನಡೆ ಇದೆ ಎಂದು ಹೆಚ್ಚಿನ ಸಮೀಕ್ಷೆಗಳು ಹೇಳಿವೆ. ಒಂದು ಸಮೀಕ್ಷೆ ಮಾತ್ರ, ಬಿಆರ್‌ಎಸ್‌ಗಿಂತ ಕಾಂಗ್ರೆಸ್‌ಗೆ ಅಲ್ಪ ಮುನ್ನಡೆ ಸಿಗಲಿದೆ ಎಂದಿದೆ. ಭಾನುವಾರದ ಫಲಿತಾಂಶದಲ್ಲಿ ತೆಲಂಗಾಣದಲ್ಲಿ ಕಾಂಗ್ರೆಸ್‌ ಗೆದ್ದರೆ ಅದು ಆ ಪಕ್ಷದ ಗತಿಯನ್ನೇ ಬದಲಿಸಬಹುದು. ಮೊದಲನೆಯದಾಗಿ, ಕರ್ನಾಟಕದಲ್ಲಿ ಸಿಕ್ಕ ಗೆಲುವನ್ನು ಕಾಂಗ್ರೆಸ್‌ ಪಕ್ಷವು ವಿಸ್ತರಿಸಿಕೊಂಡಿದೆ ಮತ್ತು ದಕ್ಷಿಣದಲ್ಲಿ ತನ್ನ ಅಸ್ತಿತ್ವವನ್ನು ಮರುಸ್ಥಾ‍ಪಿಸಿದೆ ಎಂಬುದನ್ನು ಇದು ಸೂಚಿಸಲಿದೆ. ತೆಲಂಗಾಣ ರಾಜ್ಯವು ರಚನೆಗೊಂಡು ಒಂಬತ್ತು ವರ್ಷಗಳ ನಂತರ ರಾಜ್ಯ ರಚನೆಯ ಭಾವನಾತ್ಮಕತೆಯಿಂದ ಮತದಾರ ಹೊರ ಬಂದಿದ್ದಾನೆ ಎಂಬುದನ್ನೂ ಇದು ದೃಢಪಡಿಸುತ್ತದೆ.

ನಗರ–ಗ್ರಾಮೀಣ ಪ್ರದೇಶದ ನಡುವಣ ವ್ಯತ್ಯಾಸ ಏನಿದೆ ಮತ್ತು ಕಾಂಗ್ರೆಸ್‌ ಯಾವ ರೀತಿಯ ಸಾಮಾಜಿಕ ಸಮೀಕರಣ ರೂಪಿಸಿದೆ ಎಂಬುದು ಕೂಡ ಆಸಕ್ತಿಕರ ಅಂಶವಾಗಿದೆ. ಕಾಂಗ್ರೆಸ್‌ ಗೆಲುವು ಎಂದರೆ, ಅದು ಆ ಪಕ್ಷದ ಪರವಾಗಿ ಇರುವ ಸ್ಪಷ್ಟ ಅಲೆಯ ಉಪ ಉತ್ಪನ್ನ ಎನ್ನಬಹುದು. ತೆಲಂಗಾಣದ ಗ್ರಾಮೀಣ ಪ್ರದೇಶಗಳಲ್ಲಿ ಓಡಾಡಿ ವರದಿ ತಯಾರಿಸಿದವರ ಪ್ರಕಾರ, ಅಲ್ಲಿ ಇಂತಹ ಭಾವ ಇದೆ. 

ಛತ್ತೀಸಗಢದಲ್ಲಿ ಕಾಂಗ್ರೆಸ್‌ ಪಕ್ಷವು ಪುನರಾಯ್ಕೆ ಆಗಬಹುದು ಎಂದು ಎಲ್ಲ ಮತಗಟ್ಟೆ ಸಮೀಕ್ಷೆಗಳು ಹೇಳಿವೆ. ಕಾಂಗ್ರೆಸ್‌ ಪಕ್ಷಕ್ಕೆ ಎಷ್ಟು ಅಂತರದ ಗೆಲುವು ಸಿಕ್ಕಬಹುದು ಎಂಬ ವಿಚಾರದಲ್ಲಿ ವಿವಿಧ ಸಮೀಕ್ಷೆಗಳ ನಡುವೆ ಸಹಮತ ಇಲ್ಲ. ಕಾಂಗ್ರೆಸ್‌ ಪಕ್ಷದ ಪಾಲಿಗೆ ಛತ್ತೀಸಗಢವು ಸರಳವಾದ ಒಂದು ಕಾರಣಕ್ಕಾಗಿ ಭಿನ್ನ. ಬಹಳ ಕಾಲದ ನಂತರ, ಕಾಂಗ್ರೆಸ್‌ ಪಕ್ಷವು ಸತತವಾಗಿ ಎರಡನೇ ಅವಧಿಗೆ ಪುನರಾಯ್ಕೆಗೊಂಡಂತಾಗುತ್ತದೆ. ಮತಗಟ್ಟೆ ಸಮೀಕ್ಷೆಯ ರೀತಿಯಲ್ಲಿಯೇ ಫಲಿತಾಂಶವು ಬಂದರೆ, ಸ್ಥಳೀಯ ವಿಚಾರಗಳು ಮತ್ತು ನಾಯಕತ್ವವೇ ವಿಧಾನಸಭೆ ಚುನಾವಣೆಯಲ್ಲಿ ಪ್ರಭಾವ ಬೀರುತ್ತವೆ ಎಂಬುದು ದೃಢಪಡುತ್ತದೆ. ಕಾಂಗ್ರೆಸ್‌ ಪಕ್ಷವು (ಕರ್ನಾಟಕ ವಿಧಾನಸಭೆ ಚುನಾವಣೆಯ ಪ್ರಚಾರದ ಮಾದರಿಯನ್ನು ಅನುಸರಿಸಿತು) ‍ಪ್ರಚಾರವನ್ನು ಸಾಧ್ಯವಾದಷ್ಟು ಸ್ಥಳೀಯವಾಗಿಸಿದೆ. ಮತದಾನಕ್ಕೆ ಸಾಕಷ್ಟು ಮುನ್ನವೇ, ನಾಯಕತ್ವದ ವಿಚಾರವನ್ನು ಪಕ್ಷವು ಬಗೆಹರಿಸಿಕೊಂಡಿತು (ಕರ್ನಾಟಕದಲ್ಲಿ ಮಾಡಿದ ಹಾಗೆಯೇ). ಕಾಂಗ್ರೆಸ್‌ ಪಕ್ಷವು ಗೆದ್ದರೆ ಈ ನಾಯಕತ್ವ ವಿಚಾರವು ಏನಾಗಬಹುದು ಎಂಬುದು ಬೇರೆಯೇ ವಿಚಾರ. ಆಡಳಿತ ಪಕ್ಷಕ್ಕೆ ಸವಾಲು ಒಡ್ಡುವಲ್ಲಿ ಬಿಜೆಪಿ ವಿಳಂಬ ಮಾಡಿತು ಎಂಬುದೂ ಕಾಂಗ್ರೆಸ್‌ ಗೆದ್ದರೆ ದೃಢಪಡುತ್ತದೆ. ಸ್ಥಳೀಯ ನಾಯಕತ್ವವನ್ನು ಮುನ್ನೆಲೆಗೆ ತಾರದೆಯೇ ಬಿಜೆಪಿ ಚುನಾವಣೆ ಎದುರಿಸಿತು (ಕರ್ನಾಟಕದಲ್ಲಿಯೂ ಹೀಗೆಯೇ ಮಾಡಲಾಗಿತ್ತು). ಇದು ಬಿಜೆಪಿಗೆ ಪ್ರತಿಕೂಲ ಆಗಬಹುದು. ಛತ್ತೀಸಗಢದಲ್ಲಿ, ಪ್ರಚಾರದ ಆರಂಭದಲ್ಲಿ ಭಾವಿಸಿದ್ದಕ್ಕಿಂತ ಸ್ಪರ್ಧೆಯು ಹೆಚ್ಚು ನಿಕಟವಾಗಿದೆ. ಪಕ್ಷದಲ್ಲಿನ ಒಗ್ಗಟ್ಟಿಗೆ ಸವಾಲೊಡ್ಡುವ ಅಂಶಗಳು ಇವೆ ಎಂದು ಉಪಮುಖ್ಯಮಂತ್ರಿಯು ಸುದ್ದಿವಾಹಿನಿ ಸಂವಾದದಲ್ಲಿ ಒಪ್ಪಿಕೊಂಡಿದ್ದರು. 

ಮಿಜೋರಾಂನಲ್ಲಿ ಜಡ್‌ಪಿಎಂ ಮೈತ್ರಿಕೂಟವು ಮುನ್ನಡೆ ಸಾಧಿಸಲಿದೆ ಎಂದು ಮತಗಟ್ಟೆ ಸಮೀಕ್ಷೆಗಳು ಭವಿಷ್ಯ ನುಡಿದಿವೆ. ಈ ಹಿಂದಿನ ವಿಧಾನಸಭೆ ಚುನಾವಣೆಯಲ್ಲಿ ಈ ಕೂಟವು ಪ್ರಮುಖ ವಿರೋಧ ಪಕ್ಷವಾಗಿ ಮೂಡಿಬಂದಿತ್ತು. ಮೈತ್ರಿಕೂಟವು ಜಯ ಗಳಿಸಿದರೆ ರಾಜ್ಯದಲ್ಲಿ ಈ ಕೂಟದ ಅಸ್ತಿತ್ವವು ದೃಢಪಟ್ಟಂತಾಗುತ್ತದೆ. ಜೊತೆಗೆ, ಮತಗಟ್ಟೆ ಸಮೀಕ್ಷೆಗಳ ಭವಿಷ್ಯವೂ ನಿಜವಾದಂತಾಗುತ್ತದೆ. ಜಡ್‌ಪಿಎಂ ನಾಯಕ ಈ ಹಿಂದೆ ಕಾಂಗ್ರೆಸ್‌ನಲ್ಲಿ ಇದ್ದವರು. ದೊಡ್ಡ ಗುಂಪಿನೊಂದಿಗೆ ಅವರು ಪಕ್ಷ ಬಿಟ್ಟಿದ್ದರಿಂದಾಗಿ ಕಾಂಗ್ರೆಸ್‌ ಪಕ್ಷವು ದುರ್ಬಲವಾಗಿ, ಮೂರನೇ ಸ್ಥಾನಕ್ಕೆ ಹೋಗುವಂತಾಯಿತು. ಕಾಂಗ್ರೆಸ್‌ ಪಕ್ಷವು ಏನಾದರೂ ಪುನಶ್ಚೇತನ ಕಂಡಿದೆಯೇ ಎಂಬುದನ್ನೂ ಈ ಚುನಾವಣೆಯು ತೋರಿಸಿಕೊಡಲಿದೆ. ಆಡಳಿತಾರೂಢ ಎಂಎನ್‌ಎಫ್‌, ಎನ್‌ಡಿಎಯ ಭಾಗ. ಆದರೆ, ಚುನಾವಣೆಯ ಸಂದರ್ಭದಲ್ಲಿ ತಂತ್ರದ ಭಾಗವಾಗಿ ಎನ್‌ಡಿಎ ಜೊತೆಗೆ ಅಂತರ ಕಾಯ್ದುಕೊಂಡಿದೆ. ಅದರ ಪರಿಣಾಮ ಏನು ಎಂಬುದನ್ನು ಫಲಿತಾಂಶವು ತೋರಿಸಿಕೊಡಲಿದೆ. 

ನಿಕಟ ಸ್ಪರ್ಧೆಯು ಚುನಾವಣಾ ವಿಶ್ಲೇಷಕರಿಗೆ ಸದಾ ‘ದುಃಸ್ವಪ್ನವೇ’ ಆಗಿರುತ್ತದೆ. ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಅದೇ ಸ್ಥಿತಿ ಇದೆ. ಮತ ಎಣಿಕೆಯ ಕೊನೆಯ ಕ್ಷಣದವರೆಗೂ ಈ ಜಿದ್ದಾಜಿದ್ದಿ ಮುಂದುವರಿಯಬಹುದು. ಎರಡೂ ರಾಜ್ಯಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವಣ ಮತ ಗಳಿಕೆಯ ನಡುವೆ ಅಲ್ಪ ಅಂತರವಷ್ಟೇ ಇರಬಹುದು. ಮಧ್ಯಪ್ರದೇಶದ ಮತಗಟ್ಟೆ ಸಮೀಕ್ಷೆಗಳ ಫಲಿತಾಂಶವು ಭಿನ್ನವಾಗಿದೆ. ಎರಡು ಸಮೀಕ್ಷೆಗಳು ಬಿಜೆಪಿಗೆ ಸ್ಪಷ್ಟ ಮುನ್ನಡೆ ಕೊಟ್ಟಿವೆ. ಇತರ ಸಮೀಕ್ಷೆಗಳು ನಿಕಟ ಸ್ಪರ್ಧೆ ಎಂದು ಹೇಳಿವೆ. ಚುನಾವಣೆಯನ್ನು ಕೇಂದ್ರದ ನಾಯಕತ್ವ ಮತ್ತು ಸಾಮೂಹಿಕ ನಾಯಕತ್ವದ ಮೂಲಕ ಎದುರಿಸುವ ಕಾರ್ಯತಂತ್ರವನ್ನು ಬಿಜೆಪಿ ಅನುಸರಿಸಿದೆ. ದೀರ್ಘಕಾಲ ಅಧಿಕಾರದಲ್ಲಿ ಇರುವ ಕಾರಣ ಜನರಲ್ಲಿ ಉಂಟಾಗಿರುವ ಅಸಡ್ಡೆಯನ್ನು ಹೋಗಲಾಡಿಸಲು ಈ ತಂತ್ರ ಅನುಸರಿಸಲಾಗಿದೆ. ಚುನಾವಣಾ ‍ಪ್ರಚಾರ ಆರಂಭಗೊಂಡ ಬಳಿಕ, ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಅವಲಂಬಿಸಬೇಕು ಎಂಬುದನ್ನು ಬಿಜೆಪಿ ಅರ್ಥ ಮಾಡಿಕೊಂಡಿತು. ಜೊತೆಗೆ, ಸರ್ಕಾರವು ಜಾರಿಗೊಳಿಸಿದ ಅಭಿವೃದ್ಧಿ ಯೋಜನೆಗಳ ಅನುಕೂಲವನ್ನೂ ಪಡೆಯಲು ನಿರ್ಧರಿಸಿತು. ಕಾಂಗ್ರೆಸ್‌ ಪಕ್ಷವು ಕಮಲನಾಥ್‌ ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿತು. ಕಾಂಗ್ರೆಸ್‌ನ ಪ್ರಚಾರವು ಬೇಗನೆ ಆರಂಭಗೊಂಡು ಬೇಗನೆ ಮುಕ್ತಾಯವಾದಂತೆ ತೋರಿತು. 

ರಾಜಸ್ಥಾನವು ಸಾಂಪ್ರದಾಯಿಕವಾದ ಪರ್ಯಾಯ ಆಳ್ವಿಕೆ ಮಾದರಿಗೇ ಅಂಟಿಕೊಳ್ಳಬಹುದೇ? ಬಿಜೆಪಿಗೆ ಮುನ್ನಡೆ ಎಂಬುದನ್ನು, ಒಂದನ್ನು ಬಿಟ್ಟು ಇತರ ಎಲ್ಲ ಸಮೀಕ್ಷೆಗಳೂ ಹೇಳಿವೆ. ರಾಜಸ್ಥಾನದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದ ನೇತೃತ್ವವನ್ನು ಕೇಂದ್ರ ನಾಯಕರೇ ವಹಿಸಿಕೊಂಡಿದ್ದರು. ರಾಜ್ಯ ಮಟ್ಟದ ನಾಯಕರಲ್ಲಿ ಇದ್ದ ಮುಸುಕಿನ ಗುದ್ದಾಟ ಸ್ಪಷ್ಟವಾಗಿ ಗೋಚರಿಸುವಂತಿತ್ತು. ರಾಜ್ಯಮಟ್ಟದ ಇಬ್ಬರು ಉನ್ನತ ಮಟ್ಟದ ನಾಯಕರ ನಡುವೆ ಇದ್ದ ಭಿನ್ನಮತಕ್ಕೆ ತೇಪೆ ಹಚ್ಚಿ ಕಾಂಗ್ರೆಸ್‌ ಚುನಾವಣೆ ಎದುರಿಸಿದೆ. ತೇಪೆ ಎಂಬ ಪದವನ್ನು ಇಲ್ಲಿ ಉದ್ದೇಶಪೂರ್ವಕವಾಗಿಯೇ ಬಳಸಲಾಗಿದೆ. ಏಕೆಂದರೆ, ಉನ್ನತಮಟ್ಟದಲ್ಲಿ ಆಗಿರುವ ಭಿನ್ನಮತ ಶಮನವು ತಳಮಟ್ಟಕ್ಕೆ ಇಳಿದಿದೆಯೇ ಎಂಬುದರ ಕುರಿತು ಅನುಮಾನ ಇದೆ. ಮುಖ್ಯಮಂತ್ರಿ ಅಶೋಕ ಗೆಹಲೋತ್‌ ಅವರು ಪ್ರಚಾರದ ನೇತೃತ್ವ ವಹಿಸಿದ್ದರು. ಪಕ್ಷವು ಗೆದ್ದರೆ ಅದರ ಶ್ರೇಯವು ಅವರ ನಾಯಕತ್ವಕ್ಕೆ ಸಲ್ಲಬೇಕು. ರಾಜ್ಯ ಮಟ್ಟದ ನಾಯಕರ ಬೆಂಬಲದಲ್ಲಿ ಕಣಕ್ಕೆ ಇಳಿದಿರುವ ಬಂಡಾಯಗಾರರು ಎರಡೂ ಪಕ್ಷಗಳಿಗೆ ತಲೆನೋವಾಗಬಹುದು. ಜಿದ್ದಾಜಿದ್ದಿ ಸ್ಪರ್ಧೆಯಲ್ಲಿ ಈ ‘ಪಕ್ಷೇತರರು’ ಈ ಹಿಂದಿನಂತೆ ಮುಖ್ಯ ಪಾತ್ರ ವಹಿಸಬಹುದು. 

ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮೂರು ರೀತಿಯ ಸ್ಪರ್ಧೆಗಳನ್ನು ಗಮನಿಸಬಹುದು. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಢದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ಇದೆ. ತೆಲಂಗಾಣದಲ್ಲಿ, ಅಲ್ಲಿಗೆ ಸೀಮಿತವಾದ ಆಡಳಿತಾರೂಢ ಪಕ್ಷಕ್ಕೆ ಹಲವು ರಾಜ್ಯಗಳಲ್ಲಿ ಅಸ್ತಿತ್ವ ಇರುವ ಪಕ್ಷಗಳು (ಬಿಜೆಪಿ ಮತ್ತು ಕಾಂಗ್ರೆಸ್‌) ಸವಾಲು ಒಡ್ಡಿವೆ. ಮಿಜೋರಾಂನಲ್ಲಿ ಆ ರಾಜ್ಯಕ್ಕಷ್ಟೇ ಸೀಮಿತವಾದ ಎರಡು ಪಕ್ಷಗಳ ನಡುವೆ ಸ್ಪರ್ಧೆ ಇದೆ. ಚುನಾವಣಾ ಸ್ಪರ್ಧೆಯಲ್ಲಿ ದೇಶದ ವಿವಿಧ ಭಾಗಗಳಲ್ಲಿ ಕಂಡುಬರುವ ಮಾದರಿಗಳನ್ನೇ ಈ ಮಾದರಿಗಳೂ ಹೋಲುತ್ತವೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT