ಭಾನುವಾರ, ಆಗಸ್ಟ್ 14, 2022
21 °C
ಸಮಾಜದಲ್ಲಿ ಧ್ರುವೀಕರಣ ಸೃಷ್ಟಿಸುವುದರಿಂದ ಚುನಾವಣೆಯಲ್ಲಿ ಲಾಭ ಆಗಬಹುದು. ಆದರೆ...

ಜನರಾಜಕಾರಣ | ಚುನಾವಣೆ: ಯಾರ ನಡೆ ಹೇಗೆ?

ಪ್ರೊ. ಸಂದೀಪ್ ಶಾಸ್ತ್ರಿ Updated:

ಅಕ್ಷರ ಗಾತ್ರ : | |

ರಾಜ್ಯದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಮೂರು ವರ್ಷ ತುಂಬಿದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ತುಂಬಿದೆ. ಈ ಹಂತದಲ್ಲಿ ಬಿಜೆಪಿಯು ಹೆಚ್ಚು ಅನುಕೂಲಕರ ರಾಜಕೀಯ ವಾತಾವರಣವನ್ನು ನಿರೀಕ್ಷಿಸುತ್ತಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಚೆಗೆ ನಡೆದ ಸರಣಿ ಹತ್ಯೆಗಳಿಂದಾಗಿ ಉಂಟಾಗಿರುವ ಬಿಗುವಿನ ಸನ್ನಿವೇಶವನ್ನು ಪಕ್ಷವು ಈ ಹೊತ್ತಿನಲ್ಲಿ ಖಂಡಿತ ಬಯಸಿರಲಿಲ್ಲ.

ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರವು ಒಂದು ವರ್ಷ ‍ಪೂರ್ಣಗೊಳಿಸಿದ ಆಚರಣೆಯನ್ನು, ಹತ್ಯೆ ಪ್ರಕರಣಗಳ ಹಿನ್ನೆಲೆಯಲ್ಲಿ ರದ್ದುಪಡಿಸಲಾಯಿತು. ಬಿಜೆಪಿ ಕಾರ್ಯಕರ್ತರ ಹತ್ಯೆಗಳನ್ನು, ಹೆಚ್ಚುತ್ತಿರುವ ಕೋಮು ಉದ್ವಿಗ್ನತೆಯನ್ನು ತಡೆಯಲು ಸರ್ಕಾರಕ್ಕೆ ಆಗುತ್ತಿಲ್ಲ ಎಂದು ಪಕ್ಷದ ಕಾರ್ಯಕರ್ತರು ಹಾಗೂ ಪಕ್ಷವನ್ನು ಬೆಂಬಲಿಸುವ ಇತರ ಸಂಘಟನೆಗಳ ಕಾರ್ಯಕರ್ತರು ಬೇಸರಗೊಂಡಿರುವುದು ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಸವಾಲುಗಳನ್ನು ಇನ್ನಷ್ಟು ಹೆಚ್ಚು ಮಾಡಿದೆ.

ವಿಸ್ತೃತ ನೆಲೆಯಲ್ಲಿ ಗಮನಿಸಿದಾಗ, ಒಂದು ಹತ್ಯೆಯು ಇನ್ನೊಂದು ಹತ್ಯೆಗೆ ಕಾರಣವಾಗಿದೆ ಮತ್ತು ಹತ್ಯೆಗಳ ಸರಣಿಯು ಕೆಲವು ಸಮಯದಿಂದ ಮುಂದುವರಿದಿದೆ ಎಂಬುದು ಗೊತ್ತಾಗುತ್ತದೆ. ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ವಿಶ್ವಾಸ ಹೆಚ್ಚಿಸುವ ಕೆಲಸಗಳನ್ನು ಸರ್ಕಾರವು ಮಾಡಲಿ ಎಂದು ಜನ ಬಯಸುತ್ತಿದ್ದಾರೆ.

ಇನ್ನು ಒಂದು ವರ್ಷಕ್ಕೂ ಮೊದಲೇ ರಾಜ್ಯದಲ್ಲಿ ಚುನಾ ವಣೆ ನಡೆಯಲಿದೆ. ಹೀಗಾಗಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ. ಹಲವು ಕಾರಣಗಳಿಂದಾಗಿ ಈ ಚುನಾವಣೆಯು ತೀವ್ರ ಹಣಾಹಣಿಗೆ ಸಾಕ್ಷಿಯಾಗಲಿದೆ. ಆಡಳಿತದಲ್ಲಿ ಇರುವ ಪಕ್ಷವು ರಾಜ್ಯದಲ್ಲಿ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದ ನಿದರ್ಶನವು ರಾಜ್ಯದಲ್ಲಿ ಸರಿಸುಮಾರು ನಾಲ್ಕು ದಶಕಗಳಿಂದ ಇಲ್ಲ.

ಹಾಲಿ ವಿಧಾನಸಭೆಯು ಒಂದು ವರ್ಷ ಪೂರ್ಣ ಗೊಂಡ ನಂತರದಲ್ಲಿ ಬಿಜೆಪಿಯು ವಿಧಾನಸಭೆಯಲ್ಲಿ ಬಹುಮತ ಪಡೆದುಕೊಂಡಿತು. ಅಂದರೆ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಕೆಲವು ಶಾಸಕರು ತಮ್ಮ ಪಕ್ಷ ಹಾಗೂ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ, ಬಿಜೆಪಿ ಯಿಂದ ಟಿಕೆಟ್ ಪಡೆದು ಉಪಚುನಾವಣೆಯಲ್ಲಿ ಗೆದ್ದು ಬಂದ ನಂತರದಲ್ಲಿ ಬಿಜೆಪಿಗೆ ಬಹುಮತ ದೊರೆಯಿತು. ಬಿಜೆಪಿಯ ಮೂರು ವರ್ಷಗಳ ಅಧಿಕಾರ ಅವಧಿಯಲ್ಲಿ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದು, ಬೊಮ್ಮಾಯಿ ಅವರಿಗೆ ಹುದ್ದೆ ಬಿಟ್ಟುಕೊಟ್ಟರು.

ಈಗಿನ ಮುಖ್ಯಮಂತ್ರಿ ಹಾಗೂ ಹಿಂದಿನ ಮುಖ್ಯಮಂತ್ರಿಯ ನಾಯಕತ್ವದ ಶೈಲಿಯು ಬಹಳ ಭಿನ್ನ. ಯಡಿಯೂರಪ್ಪ ಅವರು ರಾಜಕೀಯದಲ್ಲಿ ಬಹಳ ಹಿರಿಯ ವ್ಯಕ್ತಿ. ರಾಜ್ಯದಲ್ಲಿ ಬಿಜೆಪಿ ಬೆಳೆಯಲು ಅವರು ಮುಖ್ಯ ಪಾತ್ರ ವಹಿಸಿದ್ದಾರೆ. ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ಮುಕ್ತಹಸ್ತ ಇತ್ತು. 2011ರಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾದ ಸಂದರ್ಭವೊಂದು ಇದಕ್ಕೆ ಅಪವಾದ. ಆದರೆ 2019ರಲ್ಲಿ ಮುಖ್ಯಮಂತ್ರಿ ಆದ ಸಂದರ್ಭದಲ್ಲಿ, ಪ್ರಮುಖ ತೀರ್ಮಾನಗಳನ್ನು ಪಕ್ಷದ ಕೇಂದ್ರ ನಾಯಕತ್ವವು ಕೈಗೊಳ್ಳುತ್ತದೆ ಎಂಬ ಸ್ಪಷ್ಟ ಸೂಚನೆಗಳು ಇದ್ದವು. ಹೀಗಿದ್ದರೂ, ಸರ್ಕಾರದ ಸೇವೆಗಳನ್ನು ಜನರಿಗೆ ತಲುಪಿಸುವಲ್ಲಿ ಹಾಗೂ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳುವಲ್ಲಿ ಯಡಿಯೂರಪ್ಪ ಅವರಿಗೆ ಮುಕ್ತ ಸ್ವಾತಂತ್ರ್ಯ ಇತ್ತು.

ಬೊಮ್ಮಾಯಿ ಅವರು ಕೇಂದ್ರ ನಾಯಕತ್ವವು ಬಹಳ ಪ್ರಜ್ಞಾಪೂರ್ವಕವಾಗಿ ಆಯ್ಕೆ ಮಾಡಿರುವ ವ್ಯಕ್ತಿ. ಅವರ ನಾಯಕತ್ವದ ಶೈಲಿಯನ್ನು ತೀರ್ಮಾನಿಸುವಲ್ಲಿ ಮೂರು ಅಂಶಗಳು ಮಹತ್ವದ ಕೆಲಸ ಮಾಡಿವೆ. ಮೊದಲನೆಯದಾಗಿ, ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ತಮ್ಮ ನಾಯಕತ್ವವನ್ನು ಸಾಬೀತು ಮಾಡ ಬೇಕಿತ್ತು. ಅದರಲ್ಲೂ, ಅತ್ಯಂತ ಕಿರು ಅವಧಿಯಲ್ಲಿ ಅವರು ಈ ಕೆಲಸ ಮಾಡಬೇಕಿತ್ತು. ಬೊಮ್ಮಾಯಿ ಅವರು ಮುಖ್ಯಮಂತ್ರಿ ಆದ ನಂತರದಲ್ಲಿ ವಿಧಾನಸಭಾ ಚುನಾವಣೆ ಎದುರಾಗಲು ಎರಡು ವರ್ಷಗಳಿಗಿಂತ ಕಡಿಮೆ ಅವಧಿ ಇತ್ತು.

ಎರಡನೆಯದಾಗಿ, ಹಲವು ಹಿತಾಸಕ್ತಿಗಳು ಹಾಗೂ ಹಲವು ವರ್ಗಗಳ ಒತ್ತಡಗಳನ್ನು ಅವರು ನಿಭಾಯಿಸಬೇಕಿತ್ತು. ವಿಭಿನ್ನ ನಿಲುವುಗಳ ಶಾಸಕರನ್ನು, ಬಗೆಬಗೆಯ ಮಹತ್ವಾಕಾಂಕ್ಷೆಗಳು ಇರುವ ಕಾರ್ಯಕರ್ತರನ್ನು ಅವರು ಜೊತೆಗೆ ಕರೆದೊಯ್ಯಬೇಕಿತ್ತು. ಮೂರನೆಯದಾಗಿ, ಬೊಮ್ಮಾಯಿ ಅವರು ಪಕ್ಷದ ನಾಯಕತ್ವದ ನಿರೀಕ್ಷೆಗಳಿಗೆ ತಕ್ಕಂತೆ ಕೆಲಸ ಮಾಡಬೇಕಿತ್ತು. ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಪದೋನ್ನತಿ ಹೊಂದಲು ಈ ನಾಯಕತ್ವ ಕಾರಣ. ತಮ್ಮ ಮಾರ್ಗದರ್ಶಕ ಹಾಗೂ ನಿಕಟಪೂರ್ವ ಮುಖ್ಯಮಂತ್ರಿಯ ದೈತ್ಯ ಛಾಯೆಯಿಂದ ಹೊರಬಂದು, ಸ್ವತಂತ್ರವಾಗಿ ಮತ್ತು ನಿರ್ಣಾಯಕವಾಗಿ ಕೆಲಸ ಮಾಡುತ್ತಿರುವಂತೆ ಅವರು ತೋರಿಸಿಕೊಳ್ಳಬೇಕಿತ್ತು.

ಈ ಒಂದು ವರ್ಷದಲ್ಲಿ ಮುಖ್ಯಮಂತ್ರಿಯ ಬಹುತೇಕ ಅವಧಿಯು ಬಿಕ್ಕಟ್ಟುಗಳ ನಿರ್ವಹಣೆ
ಯಲ್ಲಿ ಕಳೆದುಹೋಗಿದೆ. ರಾಜ್ಯದಲ್ಲಿ ಕೋಮು ನೆಲೆಯ ಬಿಕ್ಕಟ್ಟಿನ ಸಂದರ್ಭಗಳು ಹೆಚ್ಚಾಗುತ್ತಿರುವುದು ಸ್ಪಷ್ಟ. ಕಾಲಕಾಲಕ್ಕೆ ರಾಜ್ಯದಲ್ಲಿ ಧಾರ್ಮಿಕವಾಗಿ ಬಿಕ್ಕಟ್ಟಿನ ಸ್ಥಿತಿಗಳು ಉದ್ಭವಿಸಿವೆ. ಅನಿವಾರ್ಯ ಎನ್ನಬಹುದಾದ ರಾಜಕೀಯ ಆರೋಪ–ಪ್ರತ್ಯಾರೋಪಗಳು ನಡೆಯುತ್ತವೆ ಯಾದರೂ ದ್ವೇಷ, ಅನುಮಾನ ಮತ್ತು ಶತ್ರುತ್ವದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಆಡಳಿತ ಯಂತ್ರವು ಇನ್ನಷ್ಟು ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತದೆ ಎಂದು ಹಲವರು ನಿರೀಕ್ಷೆ ಮಾಡಿದ್ದರು.

ಚುನಾವಣೆ ಹತ್ತಿರವಾಗುತ್ತಿರುವ ಕಾರಣ ರಾಜಕೀಯ ಪ್ರಮುಖರೆಲ್ಲ ಅಲ್ಪಾವಧಿಯ ರಾಜಕೀಯ ಲಾಭದ ಹಾದಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಅದರ ದೀರ್ಘಾವಧಿ ಸಾಮಾಜಿಕ ‍ಪರಿಣಾಮಗಳು ಏನಿರುತ್ತವೆ ಎಂಬ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಸಮಾಜದಲ್ಲಿ ‘ನಾವು’ ಮತ್ತು ‘ಅವರು’ ಎಂಬ ಧ್ರುವೀಕರಣ ಸೃಷ್ಟಿಸುವುದರಿಂದ ಚುನಾವಣೆಯಲ್ಲಿ ಲಾಭ ಆಗಬಹುದು. ಆದರೆ, ಇಂತಹ ವಿಭಜನೆಗಳಿಗೆ ತೆರಬೇಕಾದ ಸಾಮಾಜಿಕ ಬೆಲೆಯು ಸಾಮಾನ್ಯವಾಗಿ ಕಾಣಿಸುವುದಿಲ್ಲ.

ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಿನಲ್ಲಿ ಪ್ರಮುಖ ರಾಜಕೀಯ ಪಕ್ಷಗಳು ಮತದಾರರ ಬೆಂಬಲ ಗಳಿಸಲು ಏನು ಮಾಡಬಹುದು? ಬಿಜೆಪಿಯು ಹಾಲಿ ಅಧಿಕಾರ ಅವಧಿಯಲ್ಲಿ ಸರ್ಕಾರದ ಸೇವೆಗಳನ್ನು ಒದಗಿಸಿ ದ್ದನ್ನು ಆಧಾರವಾಗಿ ಇರಿಸಿಕೊಳ್ಳಬಹುದೇ? ‘ಡಬಲ್ ಎಂಜಿನ್ ಸರ್ಕಾರ’ ಎಂಬ ಸಂದೇಶವನ್ನು ಅವರು ಯಾವ ಬಗೆಯಲ್ಲಿ ರವಾನಿಸಬಹುದು? ಧಾರ್ಮಿಕ ಧ್ರುವೀಕರಣವನ್ನೇ ಅವರು ಮುಂದೆ ನೆಚ್ಚಿಕೊಳ್ಳುವರೇ? ಈ ಮೂರನ್ನೂ ಬಳಸಿಕೊಳ್ಳಲಾಗುತ್ತದೆ ಎಂದಾದರೆ, ಯಾವುದಕ್ಕೆ ಎಷ್ಟು ಆದ್ಯತೆ ನೀಡಲಾಗುತ್ತದೆ?

ಇದು ರಾಜ್ಯದಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವ್ಯತ್ಯಾಸವಾಗುತ್ತದೆಯೇ? ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್ ತನ್ನ ಕಾರ್ಯತಂತ್ರವನ್ನು ಯಾವ ಬಗೆಯಲ್ಲಿ ರೂಪಿಸುತ್ತದೆ? ತಮ್ಮ ಅಸ್ತಿತ್ವವನ್ನು ಗಟ್ಟಿಯಾಗಿ ಹೇಳಿಕೊಳ್ಳಲು ಹಾಗೂ ಮುಂದೆ ರಾಷ್ಟ್ರಮಟ್ಟ ದಲ್ಲಿ ಪುನಶ್ಚೇತನ ಕಾಣಲು ಕಾಂಗ್ರೆಸ್ ಪಕ್ಷಕ್ಕೆ ಕರ್ನಾಟಕದಲ್ಲಿ ಒಳ್ಳೆಯ ಸಾಧನೆ ತೋರುವುದು ಅಗತ್ಯವೂ ಹೌದು. ಕಾಂಗ್ರೆಸ್ ಪಕ್ಷವನ್ನು ಯಾರೂ ಸೋಲಿಸುವುದಿಲ್ಲ, ಪಕ್ಷವು ತನ್ನನ್ನು ತಾನೇ ಸೋಲಿಸಿಕೊಳ್ಳುತ್ತದೆ ಎಂಬ ಮಾತು ಇದೆ. ಚುನಾವಣೆ ಹತ್ತಿರವಾದಂತೆಲ್ಲ ಪಕ್ಷದಲ್ಲಿ ಒಗ್ಗಟ್ಟು ಉಳಿದುಕೊಳ್ಳುತ್ತದೆಯೇ ಅಥವಾ ಪಕ್ಷದಲ್ಲಿನ ಬಣ ಕಿತ್ತಾಟವು ಪಕ್ಷದ ಸೋಲಿಗೆ ಕಾರಣವಾಗುತ್ತದೆಯೇ? ಗೆಲುವು ಖಚಿತವಾಗಿದ್ದಾಗಲೂ ಸೋಲು ಅನುಭವಿಸುವ ಕಲೆಯು ಕಾಂಗ್ರೆಸ್ಸಿಗೆ ಹಿಂದಿನಿಂದಲೂ ಪರಿಚಿತ! ಹಿಂದೆ ಮಾಡಿರುವಂತೆ ಸಾಮಾಜಿಕ ಮೈತ್ರಿಯೊಂದನ್ನು ಪಕ್ಷವು ಕಟ್ಟಲಿದೆಯೇ?

ಯಾವ ಪಕ್ಷಕ್ಕೂ ಬಹುಮತ ಸಿಗದಿದ್ದರೆ ತನಗೆ ಒಳ್ಳೆಯದು ಎಂಬ ಧೋರಣೆಯಲ್ಲಿ ಜೆಡಿಎಸ್‌ ಇದೆ. ಈ ಪರಿಸ್ಥಿತಿಯು 2018 ರಲ್ಲಿಯೂ ನಿರ್ಮಾಣವಾಗಿತ್ತು. ಅಲ್ಪ ಅವಧಿಯ ಮೈತ್ರಿ ಸರ್ಕಾರದ ರಚನೆಗೆ ಕಾರಣವಾಗಿತ್ತು. ಹೀಗಿದ್ದರೂ, ಪಕ್ಷ ದೊಳಗೆ ಬಿಗಿಯಾದ ಬಂಧ ಇಲ್ಲದಿರುವುದು, ‘ಆಳುವ ಕುಟುಂಬದ’ ಪ್ರಾಬಲ್ಯ ಇರುವುದೇ ಪಕ್ಷಕ್ಕೆ ದೊಡ್ಡ ಮಿತಿಯಾಗಬಹುದು.

ಅಧಿಕಾರದಲ್ಲಿ ಇರುವ ಪಕ್ಷವಾಗಿ ಬಿಜೆಪಿ ಇರಿಸುವ ಹೆಜ್ಜೆಗಳು ಮತ್ತು ಮುಖ್ಯಮಂತ್ರಿ ಕೈಗೊಳ್ಳುವ ತೀರ್ಮಾನ ಗಳನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತದೆ. ಹಾಗೆಯೇ ಕಾಂಗ್ರೆಸ್ ಪಕ್ಷದ ನಡೆಗಳನ್ನು ಕೂಡ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು