ಭಾನುವಾರ, 10 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ | ‘ಅಶೋಕ ಭಾರತ’ ನಾವು ಮರೆತೆವೇ?

ಸ್ವತಂತ್ರ ಭಾರತದ ಆಶಯ ಚಿತ್ರಿಸುವ ಜಿ.ಪಿ. ರಾಜರತ್ನಂರ ‘ಅಶೋಕಚಕ್ರ ಧ್ವಜ’
Last Updated 4 ಆಗಸ್ಟ್ 2022, 20:45 IST
ಅಕ್ಷರ ಗಾತ್ರ

‘ನಾಲ್ಕು ವರ್ಣಗಳ ಸಮರಸವಾದ ಮಿಳನ, ಮಧ್ಯದ ಚಕ್ರದ ಆ ಸರ್ವಪ್ರಭುತ್ವ, ಆರೋಹಣ ಮಾಡಿದಾಗ ಈ ಧ್ವಜ ಹಾರುವ ಲಹರೀ– ಇದರ ಆನಂದ ಕಣ್ಣಿನಿಂದ ಕಂಡು ಆನಂದಿಸಬೇಕಾದ್ದು’.

ಜಿ.ಪಿ. ರಾಜರತ್ನಂ ತಮ್ಮ ‘ಸ್ವತಂತ್ರ ಭಾರತದ ಅಶೋಕಚಕ್ರ ಧ್ವಜ’ ಕೃತಿಯಲ್ಲಿ ರಾಷ್ಟ್ರಧ್ವಜವನ್ನು ಕುರಿತು ಉದ್ಗರಿಸಿರುವುದು ಹೀಗೆ. ರಾಜರತ್ನಂ ಹೇಳುವ ಆ ಆನಂದ, ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ದೇಶದಾದ್ಯಂತ ಮೈದಳೆದಿರುವಾಗ, ನಮ್ಮ ಕಣ್ಣುಗಳ ಪುಣ್ಯ ಇನ್ನೆಷ್ಟು ದೊಡ್ಡದಿರಬೇಡ!

ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಲಾಂಛನಗಳ ಬಗೆಗಿನ ನಮ್ಮ ಬಹುತೇಕ ಮಾತುಗಳಲ್ಲಿ ‌ಭಾವೋತ್ಕರ್ಷದ ಪಾಲೇ ಹೆಚ್ಚು. ನಮ್ಮಲ್ಲಿ ಬಹುತೇಕರಿಗೆ, ರಾಷ್ಟ್ರೀಯ ದಿನಾಚರಣೆಗಳ ಸಂದರ್ಭದಲ್ಲಿ ನೆನಪಾಗುವ ಮತ್ತು ನಾವು ಹೊತ್ತು ಮೆರೆಸುವ ಈ ಸಂಕೇತಗಳ ಬಾಹ್ಯ ಸ್ವರೂಪದ ಅರಿವಿದೆಯೇ ಹೊರತು, ಆಕಾರದ ಹಿಂದಿನ ಆಶಯಗಳ ತಿಳಿವಳಿಕೆಯಿಲ್ಲ.

ಬಾಲ್ಯದಲ್ಲಿ ಆ ತಿಳಿವು ಮೂಡಿಸುವ ಕೆಲಸವನ್ನು ಶಾಲೆಗಳೂ ಮಾಡಿಲ್ಲ, ಮಾಡುತ್ತಿಲ್ಲ. ಮಕ್ಕಳ ಪಾಡಿಗೆ ಅವು ಉರು ಹೊಡೆಯಬೇಕಾದ ಸಂಗತಿಗಳು, ಒಂದಂಕದ ಪ್ರಶ್ನೆಗಳು. ‘ಅಮೃತ ಮಹೋತ್ಸವ’ ಸಂದರ್ಭದಲ್ಲಿ, ತಿರಂಗವನ್ನು ಮನೆಗಳಲ್ಲಿ ಹಾರಿಸಲು ಪ್ರೇರೇಪಣೆ ನೀಡುತ್ತಿರುವ ರಾಜಕಾರಣಿಗಳಿಗೆ, ತಿರಂಗದ ಆಶಯಗಳು ಮನದಲ್ಲೂ ಅನಾವರಣಗೊಳ್ಳಬೇಕು ಎನ್ನಿಸುತ್ತಿಲ್ಲ. ಅಂಥ ಅಗತ್ಯವೂ ಅವರಿಗೆ ಅರ್ಥವಾಗುವುದಿಲ್ಲ.

ರಾಷ್ಟ್ರೀಯ ಸಂಕೇತಗಳು ಮೊದಲು ಅನಾವರಣಗೊಳ್ಳಬೇಕಾಗಿರುವುದು ಹಾಗೂ ಅನವರತ ರಾರಾಜಿ ಸಬೇಕಿರುವುದು ಜನ ಮನ ಗಣದಲ್ಲಿ. ಈ ಸಂಕೇತಗಳು ನಿರ್ದಿಷ್ಟ ದಿನದಂದು ಉತ್ಸವಮೂರ್ತಿಗಳಾಗಿ ಕಂಗೊಳಿಸಿ, ಉಳಿದ ದಿನಗಳಲ್ಲಿ ಕಗ್ಗತ್ತಲ ಗರ್ಭ ಸೇರಬೇಕಾದ ಸಂಗತಿಗಳಲ್ಲ; ಅನುದಿನದ ಬದುಕಿನ ಚೆಲುವಿಗೆ ಪೂರಕವಾದ ದ್ರವ್ಯ ಅವುಗಳಲ್ಲಿದೆ. ಅದನ್ನು ಮನಗಾಣಿಸುವ ಪ್ರಯತ್ನ, ಜಿ.ಪಿ. ರಾಜರತ್ನಂ ಅವರ ‘ಸ್ವತಂತ್ರ ಭಾರತದ ಅಶೋಕಚಕ್ರ ಧ್ವಜ’ ಕೃತಿ.

1948ರ ಜುಲೈ 22ರಂದು ಮೊದಲ ಮುದ್ರಣವಾಗಿ ಪ್ರಕಟಗೊಂಡಿರುವ, ಒಂದೂವರೆ ರೂಪಾಯಿ ಮುಖಬೆಲೆಯ ಈ ಕೃತಿ, ‘ಹಿಂದ್‌ ಕಿತಾಬ್‌ ಲಿಮಿಟೆಡ್ಸ್‌’ (ಬೊಂಬಾಯಿ) ಪ್ರಕಟಣೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ವರ್ಷ ತುಂಬುವ ಸಂದರ್ಭದಲ್ಲಿ ಈ ಕೃತಿ ಪ್ರಕಟಗೊಂಡಿದೆ. ರಾಷ್ಟ್ರೀಯ ಸಂಕೇತಗಳನ್ನು ಅರ್ಥೈಸುವ ಪ್ರಯತ್ನ ಕನ್ನಡದಲ್ಲದು ಮೊದಲಿರಬೇಕು.

ರಾಜರತ್ನಂ ಅವರ ಕೃತಿ ಎರಡು ಕಾರಣಗಳಿಗಾಗಿ ಮುಖ್ಯವೆನ್ನಿಸುತ್ತದೆ. ಒಂದು, ರಾಷ್ಟ್ರಧ್ವಜ ಮತ್ತು ಲಾಂಛನಗಳನ್ನು ಸವಿವರವಾಗಿ, ಸಚಿತ್ರವಾಗಿ ಅರ್ಥೈಸುವ ಮೂಲಕ ಸ್ವತಂತ್ರ ಭಾರತದ ಆಶೋತ್ತರಗಳನ್ನು ಕೃತಿ ಮನದಟ್ಟು ಮಾಡುತ್ತದೆ. ನಮ್ಮ ರಾಷ್ಟ್ರೀಯ ಲಾಂಛನಗಳ ಆಶಯಗಳಿಗೆ ವಿರುದ್ಧವಾದ ಪರಿಕಲ್ಪನೆಯೊಂದು ದೇಶಪ್ರೇಮದ ಹೆಸರಿನಲ್ಲಿ ರೂಪುಗೊಂಡಿರುವುದನ್ನು ಹಾಗೂ ಆ ಪರಿಕಲ್ಪನೆಯಲ್ಲಿನ ‍ಪೊಳ್ಳುತನವನ್ನು ಕಾಣಿಸುವುದು ಕೃತಿ ಮುಖ್ಯವೆನ್ನಿಸಲಿಕ್ಕೆ ಎರಡನೆಯ ಕಾರಣ.

ಈ ಕೃತಿ ನಮ್ಮ ಕಣ್ಣ ಮುಂದಿರಿಸುವುದು ‘ಬುದ್ಧ ಭಾರತ’ವನ್ನು. ಈ ಕೃತಿಯ ಬಗ್ಗೆ ಕೆಲವರಲ್ಲಿ ಮಾತ
ನಾಡಿದಾಗ, ‘ಇದರಲ್ಲಿ ಬುದ್ಧನ ಪರಿಮಳವೇ ತುಂಬಿಕೊಂಡಿದೆ’ ಎನ್ನುವ ಪ್ರತಿಕ್ರಿಯೆ ಬಂದುದನ್ನು ಪ್ರಸ್ತಾಪಿಸುವ ರಾಜರತ್ನಂ – ‘ಬುದ್ಧನ ಸಂಬಂಧವಾದ ಚಿಹ್ನೆಯೊಂದನ್ನು ಸ್ವೀಕರಿಸಿರುವಾಗ ಆತನ ಪರಿಮಳ ಹರಡುವುದು ಸಹಜ ತಾನೆ?’ ಎಂದು ಪ್ರತಿಕ್ರಿಯಿಸಿದ್ದಾರೆ. ಬುದ್ಧನ ಪರಿಮಳವಷ್ಟೇ ಅಲ್ಲ, ಬುದ್ಧನ ಅನುಯಾಯಿ ಅಶೋಕನ ಪರಿಮಳವೂ ಸೇರಿಕೊಂಡು ಕೃತಿಯ ಹೊಳಪನ್ನು, ಘಮವನ್ನು ಹೆಚ್ಚಿಸಿದೆ. ‘ಅಶೋಕಚಕ್ರ ಧ್ವಜ’ ಎನ್ನುವ ಶೀರ್ಷಿಕೆಯೇ ‘ರಾಜರತ್ನಂರ ಭಾರತ’ ಯಾವುದು ಎನ್ನುವುದನ್ನು ಸೂಚಿಸುವಂತಿದೆ.

‘ಪ್ರಜೆಗಳೆಲ್ಲರೂ ನನ್ನ ಮಕ್ಕಳು’ ಎಂದು ತ್ರಿಕರಣಪೂರ್ವಕವಾಗಿ ನಂಬಿ, ನುಡಿದು, ನಡೆದು ತನ್ನ ಪುರುಷಾರ್ಥವನ್ನು ಸಾಧಿಸಿಕೊಂಡು ಕೃತಕೃತ್ಯನಾದ ಇವನ ಸಮ ಇನ್ನು ಇತಿಹಾಸದಲ್ಲಿ ಯಾರು?– ಅಶೋಕನನ್ನು ಕುರಿತು ರಾಜರತ್ನಂರ ಈ ಉದ್ಗಾರವನ್ನು ಗಮನಿಸಬೇಕು. ಇಂದಿನ ರಾಷ್ಟ್ರೀಯವಾದಿಗಳು ಶಿವಾಜಿ, ಸಾವರ್ಕರ್‌ ಅವರನ್ನು ಸ್ಮರಿಸುತ್ತಿರುವಾಗ, ಅಶೋಕನನ್ನು ಭಾರತದ ಚರಿತ್ರೆಯ ಪ್ರಾತಿನಿಧಿಕ ಚಕ್ರವರ್ತಿಯಾಗಿ ರಾಜರತ್ನಂ ಗುರ್ತಿಸಿರುವುದನ್ನು ಹೇಗೆ ಭಾವಿಸಬೇಕು? ಈ ಪ್ರಶ್ನೆಗೆ ಉತ್ತರವಾಗಿ – ‘ಅಶೋಕನ ಆಡಳಿತದಲ್ಲಿ ಭಾರತ ಸಾಧಿಸಿದ ರಾಜಕೀಯ ಐಕ್ಯತೆ ಮತ್ತು ನಿಜವಾಗಿಯೂ ‘ಅ–ಶೋಕ’ವೆನ್ನಿಸಿದ ಜನಜೀವನವನ್ನು ಸಾಧಿಸಿದವರು ಅವನಿಗೆ ಮೊದಲು ಇರಲಿಲ್ಲ, ನಂತರವೂ ಬರಲಿಲ್ಲ’ ಎನ್ನುವ ರಾಜರತ್ನಂರ ಮಾತನ್ನೇ ಗಮನಿಸಬೇಕು.

‘ರಾಜ್ಯವನ್ನು ವಿಸ್ತರಿಸಬೇಕು ಎಂಬ ಆಕಾಂಕ್ಷೆಯಿಲ್ಲ. ಲೋಕದ ಸುಖವನ್ನು ಸಾಧಿಸಬೇಕು ಎಂಬುದು ‍ಪ್ರಮುಖ ಆಕಾಂಕ್ಷೆ. ವಿಶುದ್ಧವಾದ ಮೈತ್ರಿಯಿಂದ ಸ್ವಜನರನ್ನೂ ಪರಜನರನ್ನೂ ಒಲಿಸಿಕೊಳ್ಳಬೇಕೆಂಬುದೇ ಇದರ ಹಿರಿಯ ಆಸೆ. ಈ ಆಸೆಯನ್ನು ಸಾಧಿಸುವುದರಲ್ಲಿ ಸದಾ ನಿರತನಾಗಿರಬೇಕು ಎಂಬುದನ್ನು ನೆನ‍ಪಿಸುವುದಕ್ಕಾಗಿಯೇ ರಾಷ್ಟ್ರಧ್ವಜದಲ್ಲಿ ಅಶೋಕಚಕ್ರವಿದೆ’ ಎನ್ನುವ ರಾಜರತ್ನಂ, ಸ್ವತಂತ್ರ ಭಾರತದ ಆದರ್ಶ ಹಾಗೂ ಅಶೋಕನ ಆದರ್ಶ ಬೇರೆಯಲ್ಲ ಎನ್ನುವುದನ್ನು ಬೇರೆ ಬೇರೆ ರೀತಿಯಲ್ಲಿ ಹೇಳಿದ್ದಾರೆ.

ಅಶೋಕನ ಸಾರನಾಥದ ಸ್ಮೃತಿಗಳು ಭಾರತದ ಆತ್ಮವಾಗಿ ಪರಿಣಮಿಸಿರುವುದನ್ನು ರಾಜರತ್ನಂ ಗುರ್ತಿಸಿ ರುವ ಬಗೆ ಕುತೂಹಲಕರವಾಗಿದೆ:

‘ಬೌದ್ಧರಿಗೂ ಜೈನರಿಗೂ ವೈದಿಕರಿಗೂ ಪುಣ್ಯಭೂಮಿಯೆನ್ನಿಸಿದ ಸಾರನಾಥಕ್ಕೆ ಅಕ್ಬರ್‌ನ ತಂದೆ ಹುಮಾಯೂನ್‌ ಭೇಟಿ ಕೊಟ್ಟು ಒಂದು ದಿನ ತಂಗಿದ್ದನಂತೆ. ಆ ಭೇಟಿಯ ನೆನಪಿಗಾಗಿ ಅಕ್ಬರ್‌, ಸಾರನಾಥದ ‘ಚೌಖಂಡಿ’ಯೆಂಬ ಮಣ್ಣು ದಿನ್ನೆಯ ಮೇಲೆ ಎಂಟು ಮೂಲೆಯ ಕಟ್ಟಡ ನಿರ್ಮಿಸಿ, ಅಲ್ಲೊಂದು ಶಾಸನ ಬರೆಸಿದ್ದಾನೆ. ಈ ರೀತಿಯಾಗಿ ಬೇರೆ ಬೇರೆ ಮತಗಳವರಿಗೂ– ಕಾರಣ ಬೇರೆ ಬೇರೆಯಾದರೂ– ಮಾನ್ಯವೆನ್ನಿಸಿದ ಸಾರನಾಥದ ಸಂಪರ್ಕವುಳ್ಳ ಅಶೋಕಚಕ್ರವನ್ನು ಕಣ್ಣೆದುರಿಗಿರಿಸಿಕೊಂಡ ಸ್ವತಂತ್ರಭಾರತ ‘ಎಲ್ಲ ಮತಗಳವರನ್ನೂ ಒಂದೇ ಸಮನಾಗಿ ನಡೆಸಿಕೊಳ್ಳುವೆ’ವೆಂಬ ತಮ್ಮ ಹಿರಿಯ ಆದರ್ಶವನ್ನು ಮರೆಯುವುದು ಸಾಧ್ಯವಿಲ್ಲ.

ನಾಲ್ಕು ಮಹಾಸಿಂಹಗಳನ್ನೊಳಗೊಂಡ ಶಿಲಾ ಸ್ತಂಭದ ಮೇಲೆ ಅಶೋಕ ಬರೆಸಿರುವ ಶಾಸನದಲ್ಲಿ – ‘ಒಂದೇ ಕೂಟವಾಗಿ ಬಾಳಬೇಕಾದ ಸಂಘದಲ್ಲಿ ಒಡಕನ್ನು ಉಂಟುಮಾಡಲು ಯಾವನಾದರೂ ಯತ್ನಿಸುವುದಾದರೆ, ಅಂತಹವನನ್ನು ಸಂಘದಿಂದ ಹೊರಗೆ ದೂಡಬೇಕು’ ಎನ್ನುವ ಮಾತಿದೆ. ಭಾರತದ ಸಂಘಭೇದನೆಗೆ ಸನ್ನಾಹ ನಡೆಯುವ ಸಂದರ್ಭದಲ್ಲಿ ಈ ಶಾಸನವನ್ನು ನೆನಪು ಮಾಡಿಕೊಡುವ ಚಕ್ರದ ಚಿಹ್ನೆಯೇ ಅಗತ್ಯ’

‘ಸ್ವತಂತ್ರ ಭಾರತದ ಅಶೋಕಚಕ್ರ ಧ್ವಜ’ ಈ ಕಾಲದ ಮಕ್ಕಳು ಓದಬೇಕಾದ, ಮುಖ್ಯವಾಗಿ– ಬೆಳವಣಿಗೆ ನಿಂತ ಮಕ್ಕಳು ಓದಲೇಬೇಕಾದ, ಅರಿಯಬೇಕಾದ ಕೃತಿಯಾಗಿದೆ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಮರು ಮುದ್ರಣಗೊಳ್ಳಬೇಕಾದ, ಎಲ್ಲ ಮನೆಗಳಿಗೆ ತಲುಪಬೇಕಾದ ಕೃತಿಯಿದು. ದೇಶಭಕ್ತಿ ಹೆಸರಿನ ಭಾವನೆಗಳ ಅಸಲಿಯತ್ತನ್ನು ಒರೆಗೆ ಹಚ್ಚಲು ಪುಸ್ತಕದ ಓದು ಒತ್ತಾಯಿಸುತ್ತದೆ. ಸ್ವತಂತ್ರ ಭಾರತದ ಆಶಯಗಳು ಯಾವುವಾಗಿದ್ದವು ಹಾಗೂ ಅವುಗಳ ಸ್ಥಿತಿ ಈಗ ಏನಾಗಿದೆ ಎನ್ನುವುದನ್ನು ರಾಷ್ಟ್ರಧ್ವಜ– ಲಾಂಛನಗಳ ಹಿನ್ನೆಲೆಯಲ್ಲಿ ಅರ್ಥ ಮಾಡಿಸುತ್ತದೆ. ಈಗ ಆ ಆಶಯಗಳು ವಿರೂಪಗೊಂಡಿರುವುದನ್ನು ನೋಡಿದರೆ, ದೇಶಭಕ್ತಿಯ ಹೆಸರಿನಲ್ಲಿ ನಾವು ರಾಷ್ಟ್ರೀಯ ಸಂಕೇತಗಳನ್ನೇ ಮುಕ್ಕುಗೊಳಿಸಿದ್ದೇವೆ ಎನ್ನಿಸುತ್ತದೆ.

ಅಮೃತ ಮಹೋತ್ಸವವು ದೇಶದ ಪಾಲಿಗೆ ‘ಅಮೃತ ಮಥನ’ವಾಗಿ ಪರಿಣಮಿಸಬೇಕು. ಈವರೆಗಿನ ಮಥನದಲ್ಲಿ ಕಾಲಕೂಟವನ್ನು ಸಾಕಷ್ಟು ಕಂಡಾಗಿದೆ. ಏಳೂವರೆ ದಶಕಗಳ ನಂತರವೂ ಅಮೃತದ ಸುಳಿವೇ ಇಲ್ಲದಿರುವುದನ್ನು ನೋಡಿದರೆ, ಮಥನದ ನಮ್ಮ ಉದ್ದೇಶವೇ ಕಾಲಕೂಟವಾಗಿರಬಹುದೇ ಎನ್ನುವ ಪ್ರಶ್ನೆ ಉಂಟಾಗುತ್ತದೆ. ಈ ಪ್ರಶ್ನೆಯನ್ನು ಮತ್ತಷ್ಟು ಗಾಢವಾಗಿಸುವ ವಿದ್ಯಮಾನಗಳು ನಿರಂತರವಾಗಿ ನಡೆಯುತ್ತಿರುವ ಸನ್ನಿವೇಶದಲ್ಲಿ, ‘ಅಮೃತದ ಅಪೇಕ್ಷೆ’ಯ ದಾರಿಯನ್ನು ನೆನಪಿಸುವ ಚೋದಕವಾಗಿ ರಾಜರತ್ನಂರ ಕೃತಿ ಕಾಣಿಸುತ್ತದೆ.

‘ಸ್ವತಂತ್ರ ಭಾರತದ ಅಶೋಕಚಕ್ರ ಧ್ವಜ’ ಪುಸ್ತಕದ ಆನ್‌ಲೈನ್‌ ಕೊಂಡಿ: bit.ly/3SntZkR

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT