ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಲ್ಪು ಎಂಬ ಮರೆಯಬಾರದ ‘ಲಸಿಕೆ’

ಗಾಂಧಿಯ ಅಧ್ಯಾತ್ಮ ಹಾಗೂ ಅಂಬೇಡ್ಕರರ ದಲಿತಪ್ರಜ್ಞೆಯ ಸಮೀಕರಣ
Last Updated 26 ಜುಲೈ 2020, 20:46 IST
ಅಕ್ಷರ ಗಾತ್ರ

ಡಾ. ಪದ್ಮನಾಭನ್‌ ಪಲ್ಪು ಅವರದು ಇಬ್ಬಗೆಯ ವೈದ್ಯ ವೃತ್ತಿ. ರೋಗಿಗಳ ಜೊತೆಗೆ ಸಮಾಜದ ವ್ಯಾಧಿಗಳಿಗೂ ಮದ್ದು ನೀಡಿದ ಹೆಗ್ಗಳಿಕೆ ಅವರದು.

ಡಾಕ್ಟರ್‌ ಪಲ್ಪು ಮೂಲತಃ ಕೇರಳದವರು. ಸಿರಿವಂತಿಕೆಯ ಮೂಲಕ ವಿಶ್ವಪ್ರಸಿದ್ಧಿ ಪಡೆದಿರುವ ಅನಂತ ಪದ್ಮನಾಭನ ಮಣ್ಣಿನವರು. ಅನಂತ ಪದ್ಮನಾಭ ಭವರೋಗ ವೈದ್ಯ, ಶ್ರೇಣೀಕೃತ ವ್ಯವಸ್ಥೆಯ ರೂಪಕ. ಪಲ್ಪು ಪದ್ಮನಾಭರೋ ಹಿಂದುಳಿದ ವರ್ಗಗಳ ಅಸ್ಮಿತೆಯಂತಿರುವವರು ಹಾಗೂ ತಮ್ಮ ಜೀವನವನ್ನೆಲ್ಲ ದೀನದಲಿತರ ಹಿತಚಿಂತನೆಗಾಗಿ ಸವೆಸಿದವರು. ಗಾಂಧಿಯ ಅಧ್ಯಾತ್ಮ ಹಾಗೂ ಅಂಬೇಡ್ಕರರ ದಲಿತಪ್ರಜ್ಞೆಯ ಸಮೀಕರಣದಂತೆ ನೋಡಬಹುದಾದ ಪದ್ಮನಾಭನ್‌, ಆ ಇಬ್ಬರು ಮಹನೀಯರಿಗಿಂತಲೂ ಮೊದಲೇ ಜನಿಸಿದವರು. ಹತ್ತೊಂಬತ್ತನೇ ಶತಮಾನವನ್ನು ದಲಿತ ಜಾಗೃತಿಯ ಶಕೆಯನ್ನಾಗಿ ಅಂಬೇಡ್ಕರ್ ರೂಪಿಸುವುದಕ್ಕೆ ಅಗತ್ಯವಾದ ವೇದಿಕೆಯನ್ನು ದೇಶದ ವಿವಿಧ ಭಾಗಗಳಲ್ಲಿ ಸಿದ್ಧಪಡಿಸಿಕೊಟ್ಟವರಲ್ಲಿ ಪಲ್ಪು ಅವರನ್ನೂ ಗುರುತಿಸಬೇಕು.

‘ದೇಶದ ಪ್ರಮುಖ ಸಮಾಜ ಸುಧಾರಕರಲ್ಲೊಬ್ಬರು’ ಎಂದು ಸರೋಜಿನಿ ನಾಯ್ಡು ಅವರಿಂದ ಬಣ್ಣನೆಗೊಳಗಾದ ಪದ್ಮನಾಭನ್‌ಕೇರಳಿಗರಾದರೂ ಬೆಂಗಳೂರಿಗರ ಪಾಲಿಗೂ ಸ್ಮರಣೀಯರು.1898ರಲ್ಲಿ ಬೆಂಗಳೂರಿನಲ್ಲಿ ಪ್ಲೇಗು ಕಾಣಿಸಿಕೊಂಡಾಗ, ವೈದ್ಯಾಧಿಕಾರಿಯಾಗಿ ರೋಗಿಗಳ ಶುಶ್ರೂಷೆಗೆ ಹಾಗೂ ಸೋಂಕಿನ ನಿವಾರಣೆಗೆ ಅವರು ಕೈಗೊಂಡಿದ್ದ ಕ್ರಮಗಳು ಮಹಾರಾಜರ ಮೆಚ್ಚುಗೆಗೆ ಪಾತ್ರವಾಗಿದ್ದವು. ಆಧುನಿಕ ಬೆಂಗಳೂರಿನ ನಿರ್ಮಾಪಕರಲ್ಲೊಬ್ಬರಾಗಿಯೂ ಅವರನ್ನು ನೋಡಬಹುದಾಗಿದೆ. ಬೆಂಗಳೂರಿನ ನೈರ್ಮಲ್ಯಕ್ಕೆ ಒತ್ತು ನೀಡಿದ್ದ ಪದ್ಮನಾಭನ್, ಬಸವನಗುಡಿ ಮತ್ತು ಮಲ್ಲೇಶ್ವರ ಬಡಾವಣೆಗಳಿಗೆ ಚರಂಡಿ ವ್ಯವಸ್ಥೆ ಕಲ್ಪಿಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.ವಿಕ್ಟೋರಿಯಾ ಆಸ್ಪತ್ರೆ ಸ್ಥಾಪನೆಯಲ್ಲೂ ಪ್ರಮುಖ ಪಾತ್ರ ವಹಿಸಿದ್ದರು.ಲಂಡನ್‌ಗೆ ಹೋಗಿ, ಬ್ಯಾಕ್ಟೀರಿಯಾಲಜಿಯಲ್ಲಿ ಉನ್ನತ ಶಿಕ್ಷಣ ಪಡೆದುಬಂದಿದ್ದ ಅವರು, 19ನೇ ಶತಮಾನದ ಆರಂಭದಲ್ಲಿ ದೇಶದ ಗಣ್ಯ ವೈದ್ಯಾಧಿಕಾರಿಗಳಲ್ಲಿ ಒಬ್ಬರಾಗಿದ್ದರು.

ಡಾ. ಪದ್ಮನಾಭನ್‌ ಪಲ್ಪು (1863–1950) ಈಳವ ಸಮುದಾಯಕ್ಕೆ ಸೇರಿದವರು. ತಿರುವನಂತಪುರ ಸಂಸ್ಥಾನದ ಪೇಟ್ಟಾಯಿಲ್‌ನ ನೆಡುಂದೋಡಿಯ ಅವರ ಊರು. ಆರ್ಥಿಕವಾಗಿ ಉತ್ತಮ ಎನ್ನುವಂತಿದ್ದ ಕುಟುಂಬದಲ್ಲಿ ಜನಿಸಿದ್ದರೂ ಅಸ್ಪೃಶ್ಯತೆಯ ಅವಮಾನಗಳಿಗೆ ಗುರಿಯಾಗುವುದೇನೂ ತಪ್ಪಲಿಲ್ಲ. ಕ್ರೈಸ್ತ ಮಿಷನರಿಗಳ ಜೊತೆ ಕೆಲಸ ಮಾಡಿದ್ದರಿಂದಾಗಿ ಪಲ್ಪು ಅವರ ತಂದೆ ಇಂಗ್ಲಿಷ್‌ ಕಲಿತಿದ್ದರು.ಇಂಗ್ಲಿಷ್ ಕಲಿಯುವ ಮೂಲಕ ತಮ್ಮ ಮಕ್ಕಳ ಸಾಮಾಜಿಕ ಸ್ಥಾನಮಾನ ಸುಧಾರಣೆಯಾಗುತ್ತದೆ ಎನ್ನುವ ನಂಬಿಕೆ ಅವರದಾಗಿತ್ತು. ಆ ನಂಬಿಕೆಯೇ ಪದ್ಮನಾಭನ್ ಅವರನ್ನು ವೈದ್ಯಕೀಯ ಪದವಿಯ ದಾರಿಯಲ್ಲಿ ಕರೆದೊಯ್ದಿತು. ಆದರೆ, ಪದ್ಮನಾಭನ್ ವೈದ್ಯರಾಗುವುದು ಸುಲಭದ ಸಂಗತಿಯಾಗಿರಲಿಲ್ಲ. ತಿರುವಾಂಕೂರು ಸರ್ಕಾರ ನಡೆಸಿದ ವೈದ್ಯಕೀಯ ಕಾಲೇಜಿನ ಪ್ರವೇಶ ಪರೀಕ್ಷೆಯಲ್ಲಿ ರ‍್ಯಾಂಕ್‌ ಪಡೆದರೂ ಅವರಿಗೆ ಪ್ರವೇಶ ನಿರಾಕರಿಸಲಾಯಿತು. ಅಸ್ಪೃಶ್ಯ ವ್ಯಕ್ತಿಯೊಬ್ಬ ವೈದ್ಯನಾಗಿ ಔಷಧಿಗೆ ಸೇರಿಸುವ ನೀರನ್ನು ಸವರ್ಣೀಯರು ಸೇವಿಸುವುದಿಲ್ಲ ಎನ್ನುವುದು ಅವರ ಪ್ರವೇಶ ನಿರಾಕರಣೆಗೆ ಕಾರಣ. ಎದೆಗುಂದದ ಪಲ್ಪು, ಮದರಾಸಿಗೆ ಹೋಗಿ ಅಲ್ಲಿನ ಮೆಡಿಕಲ್‌ ಕಾಲೇಜಿನಲ್ಲಿ ಪ್ರವೇಶ ಪಡೆದುಕೊಂಡು ವೈದ್ಯರಾದರು.

ವೈದ್ಯ ಪದವಿ ಪಡೆದ ಈಳವ ಸಮುದಾಯದ ಮೊದಲಿಗ ಎನ್ನುವ ಹೆಮ್ಮೆಯೊಂದಿಗೆ ತವರಿಗೆ ಬಂದ ಪಲ್ಪು ಅವರಿಗೆ ದೊರೆತದ್ದು ಎಂದಿನದೇ ನಿರಾಕರಣೆಯ ಸ್ವಾಗತ. ಕೆಲಸವನ್ನು ಕೊಡಲೂ ಸಂಸ್ಥಾನ ನಿರಾಕರಿಸಿತು. ಮತ್ತೆ ಮದ್ರಾಸಿಗೆ ತೆರಳಿದ ಅವರು, ಅಲ್ಲಿನ ‘ವ್ಯಾಕ್ಸಿನೇಷನ್‌ ಇಲಾಖೆ’ಯಲ್ಲಿ ಸೂಪರಿಂಟೆಂಡೆಂಟ್‌ ಹುದ್ದೆಗೆ ಸೇರಿಕೊಂಡರು. ಆ ಇಲಾಖೆ ಬೆಂಗಳೂರಿಗೆ ಸ್ಥಳಾಂತರಗೊಳ್ಳುವ ಮೂಲಕ ಪಲ್ಪು ಕನ್ನಡನಾಡಿನ ಸಂಪರ್ಕಕ್ಕೆ ಬಂದರು.ಅಲ್ಲಿಂದ ಮುಂದೆ ಮೈಸೂರು ಸಂಸ್ಥಾನದ ಸೇವೆಗೆ ಸೇರಿ, ಸಂಸ್ಥಾನದ ವೈದ್ಯಕೀಯ ಹಾಗೂ ಆಡಳಿತ ವಿಭಾಗದಲ್ಲಿ ತಮ್ಮ ಛಾಪು ಮೂಡಿಸಿದ್ದರು ಹಾಗೂ ಅರಸರು– ದಿವಾನರ ವಿಶ್ವಾಸಕ್ಕೆ ಪಾತ್ರರಾಗಿದ್ದರು.

ಸೂಕ್ಷ್ಮಾಣುಜೀವಿತಜ್ಞನಾಗಿ ಜನರ ಆರೋಗ್ಯದ ಬಗ್ಗೆ ಮುತುವರ್ಜಿ ಹೊಂದಿದ್ದ ಅವರು, ಸಮಾಜದ ಆರೋಗ್ಯದ ಬಗ್ಗೆಯೂ ಅಪಾರ ಕಾಳಜಿ ಹೊಂದಿದ್ದರು. ವೈರಸ್‌ಗಳ ನಿಯಂತ್ರಣಕ್ಕೆ ಲಸಿಕೆ ಬಳಸುವಂತೆ, ಜಾತಿಯ ರೋಗಕ್ಕೂ ಲಸಿಕೆ ಅಗತ್ಯವೆಂದು ಅವರು ಭಾವಿಸಿದಂತಿತ್ತು. ಆ ಕಾರಣಕ್ಕಾಗಿ, ಬೆಂಗಳೂರಿನಲ್ಲಿದ್ದಾಗಲೂ ಅವರ ಮನಸ್ಸು ತವರಿನ ಈಳವ ಸಮುದಾಯದ ಸಂಕಷ್ಟಗಳ ಕುರಿತು ಮರುಗುತ್ತಿತ್ತು. ‘ಈಳವ ಮಹಾಜನಸಂಘ’ ರಚಿಸುವ ಮೂಲಕ ತಿರುವಾಂಕೂರು ಸಂಸ್ಥಾನದಲ್ಲಿ ಈಳವರನ್ನು ಸಂಘಟಿಸುವ ಪ್ರಯತ್ನ ನಡೆಸಿದ್ದರು. 13,176 ಈಳವರ ಸಹಿಗಳನ್ನು ಸಂಗ್ರಹಿಸಿ, ಹಿಂದುಳಿದ ವರ್ಗದವರಿಗೆ ಸರ್ಕಾರಿ ಶಾಲೆಗಳಲ್ಲಿ ಪ್ರವೇಶ ಹಾಗೂ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ಸಂಸ್ಥಾನದ ಮಹಾರಾಜರಿಗೆ ಮತ್ತು ದಿವಾನರಿಗೆ ಪತ್ರ ಬರೆದರು. ಅವರ ಒತ್ತಾಯದ ಫಲವಾಗಿಯೇ ತಿರುವಾಂಕೂರು ಸಂಸ್ಥಾನ ತನ್ನ ಸಾಮಾಜಿಕ ನೀತಿಯನ್ನು ಪರಾಮರ್ಶೆಗೆ ಒಡ್ಡುವುದು ಅನಿವಾರ್ಯವಾಯಿತು.

ಈಳವರ ಏಳಿಗೆಗೆ ಪದ್ಮನಾಭನ್ ಅವರು ನೆಚ್ಚಿಕೊಂಡಿದ್ದುದು ಶೈಕ್ಷಣಿಕ ಹಾಗೂ ಆಧ್ಯಾತ್ಮಿಕ ಮಾರ್ಗಗಳನ್ನು. ಹಿಂದುಳಿದ ವರ್ಗಗಳಿಗೆ ಶಿಕ್ಷಣವು ವಿಮೋಚನೆಯ ರೂಪದಲ್ಲಿ ಪರಿಣಮಿಸುವುದನ್ನು ಅನೇಕ ಸಮಾಜ ಸುಧಾರಕರು ಒಪ್ಪಿಕೊಂಡು, ಆ ನಿಟ್ಟಿನಲ್ಲಿ ಪ್ರಯತ್ನಿಸಿದ್ದಾರೆ. ಆದರೆ, ಸುಧಾರಣೆಯ ರೂಪದಲ್ಲಿ ಶಿಕ್ಷಣದ ಜೊತೆಗೆ ಆಧ್ಯಾತ್ಮಿಕ ಮಾರ್ಗವನ್ನು ಬಳಸಿಕೊಂಡವರು ಕಡಿಮೆ. ಆ ಮಾರ್ಗದಲ್ಲಿ ಪಲ್ಪು ಅವರಿಗೆ ವಿವೇಕಾನಂದ ಹಾಗೂ ನಾರಾಯಣಗುರುಗಳು ಮಾರ್ಗದರ್ಶಕ
ರಾಗಿದ್ದರು. 1892ರಲ್ಲಿ ವಿವೇಕಾನಂದರು ಬೆಂಗಳೂರಿಗೆ ಬಂದಿದ್ದಾಗ, ಪಲ್ಪು ಅವರ ಮನೆಯಲ್ಲಿ ಉಳಿದು
ಕೊಂಡಿದ್ದರು. ತಿರುವಾಂಕೂರು ಸಂಸ್ಥಾನದಲ್ಲಿನ ಈಳವರ ದುಃಸ್ಥಿತಿಯ ಬಗ್ಗೆ ವಿವೇಕಾನಂದರ ಗಮನಸೆಳೆದಿದ್ದ ಪಲ್ಪು, ತಿರುವಾಂಕೂರು ಸಂಸ್ಥಾನಕ್ಕೆ ಭೇಟಿ ನೀಡುವಂತೆ ವಿವೇಕಾನಂದರನ್ನು ಕೋರಿದ್ದರು. ಅಲ್ಲಿಗೆ ಭೇಟಿ ನೀಡಿದ ವಿವೇಕಾನಂದರಿಗೆ ಸಾಮಾಜಿಕ ಅಸಮಾನತೆಗಳ ಪ್ರದರ್ಶನಶಾಲೆಯಂತಿದ್ದ ತಿರುವಾಂಕೂರು ಸಂಸ್ಥಾನ ಹುಚ್ಚಾಸ್ಪತ್ರೆಯಂತೆ ಕಾಣಿಸಿತ್ತು.

ನಾರಾಯಣಗುರುಗಳೊಂದಿಗೆ ಪಲ್ಪು ಅವರದು ನಿಕಟ ಸಂಬಂಧ. ‘ಶ್ರೀ ನಾರಾಯಣ ಧರ್ಮ ಪರಿಪಾಲನಾ ಯೋಗಂ’ ವೇದಿಕೆ ಸ್ಥಾಪಿಸಿ, ಅದರ ಉಪಾಧ್ಯಕ್ಷರಾಗಿ (ನಾರಾಯಣಗುರುಗಳು ಅಧ್ಯಕ್ಷರು, ಕವಿ ಕುಮಾರನ್ ಆಶಾನ್ ಕಾರ್ಯದರ್ಶಿ) ಗುರುಗಳ ತತ್ವ–ಆದರ್ಶಗಳನ್ನು ಅನುಷ್ಠಾನಕ್ಕೆ ತರಲು ಶ್ರಮಿಸಿದರು. ನಿವೃತ್ತಿಯ ನಂತರ ಕೇರಳಕ್ಕೆ ಮರಳಿದ ಅವರು, ಸಾಮಾಜಿಕ ಚಟುವಟಿಕೆಗಳಲ್ಲಿ ಪೂರ್ಣಾವಧಿ ತೊಡಗಿಸಿಕೊಂಡರು. ಪ್ರಸ್ತುತ ಇಡೀ ದೇಶಕ್ಕೆ ಕೇರಳವು ವೈಚಾರಿಕ ಜಾಗೃತಿಯ ಮಾದರಿ ರಾಜ್ಯಗಳಲ್ಲೊಂದಾಗಿ ರೂಪುಗೊಂಡಿರುವ ಹಿನ್ನೆಲೆಯಲ್ಲಿ ಪಲ್ಪು ಅವರ ಕೊಡುಗೆಯೂ ಇದೆ. ಪಲ್ಪು ಅವರ ಮತ್ತೊಂದು ಮುಖ್ಯ ಕೊಡುಗೆ, ಅವರ ಪುತ್ರ– ನಾರಾಯಣ ಗುರುಗಳ ತತ್ವಪರಂಪರೆಯ ಭಾಗವಾಗಿ ಗುರುತಿಸಬಹುದಾದ ನಟರಾಜ ಗುರು.

ಪ್ರಸ್ತುತ ಕೊರೊನಾ ಬಿಕ್ಕಟ್ಟಿನ ಸಂದರ್ಭದಲ್ಲಿ ಅಧಿಕಾರಶಾಹಿ ಹೇಗಿರಬೇಕು ಎನ್ನುವುದಕ್ಕೆ ಮಾದರಿಯನ್ನಾಗಿ ಪಲ್ಪು ಅವರನ್ನು ನೆನಪಿಸಿಕೊಳ್ಳಬೇಕು. ಪ್ಲೇಗ್‌ ಸಂದರ್ಭವನ್ನು ಬೆಂಗಳೂರಿನ ವೈದ್ಯಾಧಿಕಾರಿಯಾಗಿ ಅವರು ನಿಭಾಯಿಸಿದ ರೀತಿ ದೇಶದ ಗಮನಸೆಳೆದಿತ್ತು. ಆದರೆ, ಕೊರೊನಾ ಬಿಕ್ಕಟ್ಟನ್ನು ನಿಭಾಯಿಸುತ್ತಿರುವ ಶಾಸಕಾಂಗ ಹಾಗೂ ಕಾರ್ಯಾಂಗ ಭ್ರಷ್ಟಾಚಾರದ ಆರೋಪ ಎದುರಿಸುತ್ತಿವೆ.‘ನಾವೆಲ್ಲರೂ ಸಮಾಜಸೇವಕರು. ನನ್ನ ಎಲ್ಲ ಸೊತ್ತು, ಸಂಪಾದನೆಗಳನ್ನು,
ನನ್ನ ಹೆಂಡತಿ ಮಕ್ಕಳಿಗೆ ಸಿಗಬೇಕಾದ ಸೊತ್ತುಗಳನ್ನೆಲ್ಲ ಸಮಾಜದ ಒಳಿತಿಗಾಗಿ ಮೀಸಲಿಡುತ್ತಿದ್ದೇನೆ’ ಎಂದು ಉಯಿಲು ಬರೆದಿದ್ದ ಪಲ್ಪು, ರಾಜಕಾರಣವನ್ನೂ ಸಮಾಜ ಸುಧಾರಣೆಯನ್ನೂ ವೈಯಕ್ತಿಕ ಸುಧಾರಣೆಯ ರೂಪದಲ್ಲಿ ನೋಡುವ ನಾಯಕರಿಗೆ ಅಪಥ್ಯದಂತೆ ಕಾಣಿಸಿದಲ್ಲಿ ಆಶ್ಚರ್ಯವೇನೂ ಇಲ್ಲ.

ಮಹಾನಗರದ ವರ್ಚಸ್ಸಿನ ಈ ಹೊತ್ತಿನ ಬೆಂಗಳೂರಿಗೆ ಪದ್ಮನಾಭನ್‌ ಪಲ್ಪು ಅವರ ನೆನಪಿನ ಹಂಗು ಇದ್ದಂತಿಲ್ಲ. ಡಿವಿಜಿ ಅಂಥವರ ಕೆಲವು ಸಾಂದರ್ಭಿಕ ಟಿಪ್ಪಣಿಗಳನ್ನುಹೊರತುಪಡಿಸಿದರೆ ಬೆಂಗಳೂರಿನ ಬೆಳವಣಿಗೆಯ ದಾಖಲಾತಿಗಳಲ್ಲಿ, ಸಾಮಾಜಿಕ ಚಳವಳಿಗಳ ಕಥನಗಳಲ್ಲಿ ಪಲ್ಪು ಅವರಿಗೆ ದೊರಕಬೇಕಾದ ಸ್ಥಾನ ದೊರೆತಿಲ್ಲ. ಯಾಕೆ ಈ ವಿಸ್ಮೃತಿ? ಜಾತಿರೋಗದ ಪ್ರಮುಖ ಲಕ್ಷಣಗಳಲ್ಲಿ ಮರೆವೆಯೂ ಒಂದಾಗಿರುವುದಕ್ಕೆ ಸಾವಿರಾರು ಉದಾಹರಣೆಗಳು ಇತಿಹಾಸದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT