ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಸಾಲೆ ಅಂಕಣ: ‘ಕನ್ನಡದ ಕಣ್ವ’ರ ಮರೆಯಬಹುದೇ?

ಕಣ್ಣುಗಳಿಗೆ ಪೊರೆ ಕವಿಸುವವರ ಅಬ್ಬರದಲ್ಲಿ ಪೊರೆ ತೆಗೆದವರು ಮರೆಯಾಗಬಾರದು
Published 10 ನವೆಂಬರ್ 2023, 23:30 IST
Last Updated 10 ನವೆಂಬರ್ 2023, 23:30 IST
ಅಕ್ಷರ ಗಾತ್ರ

‘ಬಾಹುಬಲಿ’ ಎಂದಕೂಡಲೇ ನಮ್ಮ ನೆನಪಿಗೆ ಬರುವುದು, ರಾಜಮೌಳಿ ನಿರ್ದೇಶನದ ಸಿನಿಮಾ. ಆದರೆ, ‘ಬಾಹುಬಲಿ’ ಎಂದೊಡನೆ ನಮಗೆ ನೆನಪಾಗಬೇಕಾದುದು ಶ್ರವಣಬೆಳಗೊಳದ ಗೊಮ್ಮಟ. ದುರದೃಷ್ಟವಶಾತ್‌, ಬಾಹುಬಲಿಯ ರೂಪದಲ್ಲಿ ಜಿಮ್‌ಗಳಲ್ಲಿ ರೂಪುಗೊಂಡ ಪ್ರಭಾಸ್‌ ಎನ್ನುವ ಸಿನಿಮಾ ನಟ ‍ಪರಿಚಿತನೇ ಹೊರತು, ಗೊಮ್ಮಟ ಮೂರ್ತಿಯಲ್ಲ. ಗೊಮ್ಮಟನನ್ನಷ್ಟೇ ಅಲ್ಲ– ಈ ನೆಲದ ಅನೇಕ ಅಸ್ಮಿತೆಗಳ ಕುರಿತು ನಮಗೆ ವಿಸ್ಮೃತಿ ಆವರಿಸಿಕೊಂಡಿದೆ; ಎಂದೂ ಮರೆಯಬಾರದ ವ್ಯಕ್ತಿತ್ವಗಳನ್ನು ಮರೆವೆಯ ಮಡಿಲಿಗೆ ದೂಡಿದ್ದೇವೆ. ಹಾಗೆ, ಮರೆವಿನ ಕಣಿವೆಯ ಅಂಚಿನಲ್ಲಿರುವ ‘ಮರೆಯಬಾರದ ಮಹಾನುಭಾವ’ರಲ್ಲೊಬ್ಬರು ಡಾ. ಎಂ.ಸಿ.ಮೋದಿ.

ಡಾ. ಮುರಿಗೆಪ್ಪ ಚನ್ನವೀರಪ್ಪ ಮೋದಿ (ಅ. 4, 1916 – ನ. 11, 2005) ಭಾರತದ ಪ್ರಖ್ಯಾತ ನೇತ್ರತಜ್ಞರಲ್ಲೊಬ್ಬರು. ತಾರಾವರ್ಚಸ್ಸು ಪಡೆದು, ಜನಮನಕ್ಕೆ ಹತ್ತಿರವಾದ ಕರ್ನಾಟಕದ ಮೊದಲ ವೈದ್ಯರು. ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮೊದಲ ವೈದ್ಯರೂ ಹೌದು. ‘ಕಣ್ಣು ಕೊಡುವ ಅಣ್ಣ’ ಎಂದು
ಪ್ರಸಿದ್ಧರಾಗಿದ್ದ ಡಾ. ಮೋದಿ ಒಂದು ತಲೆಮಾರಿನ ಕಣ್ಣು ತೆರೆಸಿದವರು, ಕಣ್ಣುಗಳ ಪೊರೆ ನೀಗಿದವರು. ತಮ್ಮ ಸೇವಾಕಾರ್ಯಕ್ಕೆ ಕ್ಯಾಮೆರಾಗಳ ಪ್ರಭಾವಳಿ ಇಲ್ಲದಿದ್ದ ಸಂದರ್ಭದಲ್ಲೂ ದಿನಕ್ಕೆ ಹದಿನೆಂಟು ತಾಸು ದುಡಿದ ಕಾಯಕಜೀವಿ. ಭಾರತದಲ್ಲಿ ಸಾಮೂಹಿಕ ನೇತ್ರ ಶಸ್ತ್ರಚಿಕಿತ್ಸೆ ಹಾಗೂ ಸಂಚಾರಿ ಘಟಕಗಳನ್ನು ಆರಂಭಿಸಿದ ಮೊದಲ ವೈದ್ಯ. ಮಂದಿರಗಳನ್ನು ಕಟ್ಟುವ ಮೂಲಕ ಜನರಿಗೆ ಹತ್ತಿರವಾಗಲು ಮೋದಿಯವರು ಬಯಸಲಿಲ್ಲ. ಜನರನ್ನೇ ದೇವರೆಂದು ಭಾವಿಸಿದರು. ‘ನನ್ನ ಆಸ್ಪತ್ರೆಯೇ ದೇವಾಲಯ. ರೋಗಿಗಳೇ ದೇವರು. ಅವರ ಸೇವೆಯೇ ದೇವರ ಪೂಜೆ’ ಎಂದು ಹೇಳುತ್ತಿದ್ದರು.

ಮೋದಿಯವರ ಪಾಲಿಗೆ ಮಹಾತ್ಮ ಗಾಂಧಿ ಪ್ರಚಾರದ ಸಲಕರಣೆಯಾಗಿರಲಿಲ್ಲ, ಬದುಕಿನ ದಾರಿಗೆ ಬೆಳಕಾಗಿದ್ದರು. 1942ರ ‘ಕ್ವಿಟ್‌ ಇಂಡಿಯಾ’ ಚಳವಳಿಯಲ್ಲಿ ಬೀಳಗಿಗೆ ಬಂದಿದ್ದ ಮಹಾತ್ಮನ ಭಾಷಣ ಕೇಳಿದ್ದು ಅವರ ಬದುಕಿನ ದಿಕ್ಕನ್ನೇ ಬದಲಿಸಿತು, ಮಾಡಬೇಕಾದ ಕೆಲಸ ಯಾವುದೆನ್ನುವುದನ್ನು ನಿಚ್ಚಳಗೊಳಿಸಿತು. ಭಿಕ್ಷೆ ಬೇಡುತ್ತಿದ್ದ ಕುರುಡರನ್ನು ಕಂಡು ಮಮ್ಮಲ ಮರುಗಿದರು. ಜನಸಾಮಾನ್ಯರ ಬದುಕಿನ ಅಕಾಲಿಕ ಕತ್ತಲೆಗೆ ಉತ್ತರ ಹುಡುಕುತ್ತಾ, ಸ್ವಯಂಸೇವಕರೊಂದಿಗೆ ಹಳ್ಳಿಗಳಿಗೆ ಹೋಗಿ ಉಚಿತ ಶಸ್ತ್ರಚಿಕಿತ್ಸಾ ಶಿಬಿರಗಳನ್ನು ನಡೆಸತೊಡಗಿದರು. ಕರ್ನಾಟಕ ಮಾತ್ರವಲ್ಲ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದಲ್ಲೂ ಅವರ ಶಿಬಿರಗಳು ನಡೆದವು. ಶಸ್ತ್ರಚಿಕಿತ್ಸೆ ನಡೆಸಲು ಅತ್ಯಾಧುನಿಕ ಉಪಕರಣಗಳು ಹಾಗೂ ಸುಸಜ್ಜಿತ ಕಟ್ಟಡಗಳು ಇರಬೇಕೆನ್ನುವ ನಂಬಿಕೆಗಳನ್ನು ಅವರು ಮುರಿದರು. ಗ್ರಾಮಗಳಲ್ಲಿನ ಶಾಲಾಕಾಲೇಜುಗಳು ಹಾಗೂ ಛತ್ರಗಳನ್ನು ಶಸ್ತ್ರಚಿಕಿತ್ಸಾ ಕೊಠಡಿಗಳಾಗಿ ಬಳಸಿಕೊಂಡರು; ಅಲ್ಲಿನ ಮೇಜು, ಕುರ್ಚಿಗಳೇ ಶಸ್ತ್ರಚಿಕಿತ್ಸೆಗೆ ಒದಗಿಬಂದವು.

ಆರು ದಶಕಗಳಿಗೂ ಹೆಚ್ಚಿನ ಕಾಲ ವೈದ್ಯ ವೃತ್ತಿ ನಡೆಸಿದ ಮೋದಿಯವರು, 5.79 ಲಕ್ಷಕ್ಕೂ ಹೆಚ್ಚು
ಶಸ್ತ್ರಚಿಕಿತ್ಸೆಗಳನ್ನು ನಡೆಸಿದರು ಹಾಗೂ ಸುಮಾರು 1 ಕೋಟಿ ಜನರ ಕಣ್ಣು ತಪಾಸಣೆ ನಡೆಸಿದರು. ನಡೆಸಿದ ಶಸ್ತ್ರಚಿಕಿತ್ಸೆಗಳ ಯಶಸ್ಸಿನ ಪ್ರಮಾಣ ಶೇ 99.5ರಷ್ಟು ಎನ್ನುವುದು ವಿಶೇಷ. 1968ರಲ್ಲಿ, ತಿರುಪತಿಯಲ್ಲಿ ನಡೆಸಿದ ಶಿಬಿರದಲ್ಲಿ ಸತತ 14 ತಾಸು 833 ಶಸ್ತ್ರಚಿಕಿತ್ಸೆ ನಡೆಸಿದ್ದು ವಿಶ್ವದಾಖಲೆಯಾಗಿ ಗಿನ್ನೆಸ್‌ ಪುಸ್ತಕಕ್ಕೆ ಸೇರ್ಪಡೆಯಾಗಿದೆ. ಅಂದು ತಿರುಪತಿಯಲ್ಲಿ ನೆರೆದಿದ್ದ ಜನರ ಆಕರ್ಷಣೆಯ ಕೇಂದ್ರ ತಿಮ್ಮಪ್ಪನಾಗಿರದೆ, ಮೋದಿಯವರೇ ಆಗಿದ್ದರು.

ಬಿಜಾಪುರ ಜಿಲ್ಲೆಯ ಬೀಳಗಿ (ಬೀಳಗಿ ಈಗ ಬಾಗಲಕೋಟೆ ಜಿಲ್ಲೆಯಲ್ಲಿದೆ) ಮೋದಿಯವರ ಹುಟ್ಟೂರು. ಅವರು ಹುಟ್ಟಿದ್ದು ಬಡ ಕುಟುಂಬದಲ್ಲಿ. ಅಪ್ಪನನ್ನು ಬಾಲ್ಯದಲ್ಲೇ ಕಳೆದುಕೊಂಡರು. ವಿದ್ಯಾಭ್ಯಾಸ ನಡೆದುದು ಸೋದರಮಾವನ ಆಸರೆಯಲ್ಲಿ. ಬೆಳಗಾವಿ ಆಯುರ್ವೇದ ಕಾಲೇಜಿನಲ್ಲಿ ವೈದ್ಯಕೀಯ ಪದವಿ ಪೂರೈಸಿದರು. 1930ರಲ್ಲಿ, ಮುಂಬೈಯ ಖಾನ್‌ಬಹದ್ದೂರ್‌ ಹಾಜಿ ಬಚ್ಚೂಪಾಲಿ ಕಣ್ಣಿನ ಆಸ್ಪತ್ರೆಯು ಆಯುರ್ವೇದ ವಿದ್ಯಾರ್ಥಿಗಳಿಗೂ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿತು. ಈ ಅವಕಾಶವನ್ನು ಬಳಸಿಕೊಂಡ ಮೋದಿಯವರು, ನೇತ್ರಚಿಕಿತ್ಸಾ ಕ್ಷೇತ್ರದಲ್ಲಿ ಪರಿಣತಿ ಪಡೆದರು. ಕಲಿತ ಆಸ್ಪತ್ರೆಯಲ್ಲಿಯೇ ಪರಿಣತ ವೈದ್ಯರೆಂದು ಹೆಸರು ಮಾಡಿದರು.

ನೇತ್ರಚಿಕಿತ್ಸಾ ಶಿಬಿರಗಳಿಗೆ ಹೋಗಲು ಮೋದಿಯವರು ಸಿಕ್ಕ ವಾಹನ ಬಳಸುತ್ತಿದ್ದರು. ಸೈಕಲ್‌, ಎತ್ತಿನಗಾಡಿ, ಬಸ್ಸುಗಳಲ್ಲಿ ಪಯಣಿಸುತ್ತಿದ್ದರು. 1944ರಲ್ಲಿ ಧಾರವಾಡ ಜಿಲ್ಲೆಯ ನರೇಗಲ್‌ನಲ್ಲಿ ಉಚಿತ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ನಡೆದಾಗ, ಕಿಟ್‌ನೊಂದಿಗೆ ಎತ್ತಿನಗಾಡಿಯಲ್ಲಿ ಬಂದಿದ್ದರು. ‘ಎತ್ತಿನಗಾಡಿ ವೈದ್ಯ’ನನ್ನು ಜನ ಅನುಮಾನದಿಂದ ನೋಡಿದ್ದರು. ಆರಂಭದಲ್ಲಿ ಹೀಗೆ ಅನುಮಾನದಿಂದ ಕಾಣುವವರ ಸಂಖ್ಯೆ ದೊಡ್ಡದಿತ್ತು. ಮೋದಿಯವರ ಚಿಕಿತ್ಸಾಕ್ರಮದ ಬಗ್ಗೆ ವೈದ್ಯರಿಂದಲೂ ಅಪಪ್ರಚಾರಗಳು ನಡೆದವು. ಒಮ್ಮೆ ಧಾರವಾಡದ ಸಿವಿಲ್‌ ಸರ್ಜನ್‌, ಶಿಬಿರವೊಂದಕ್ಕೆ ಭೇಟಿ ಕೊಟ್ಟು, ರೋಗಿಗಳು ಸಂಪೂರ್ಣ ಗುಣಮುಖರಾಗಿರುವುದನ್ನು ದೃಢೀಕರಿಸಿದ್ದರು.

ಮೋದಿ ಅವರ ಶಸ್ತ್ರಚಿಕಿತ್ಸಾ ಶಿಬಿರಗಳು ಒಂದು ವರ್ಷದ ಮೊದಲೇ ನಿಗದಿಯಾಗಿರುತ್ತಿದ್ದವು. ಬೆಳಗಿನಿಂದ ಸಂಜೆಯವರೆಗೂ ಶಸ್ತ್ರಚಿಕಿತ್ಸೆಗಳು ನಡೆಯುತ್ತಿದ್ದವು.ಗಂಟೆಗೆ 40 ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದೂ ಇದೆ. ಹಳ್ಳಿಗಳನ್ನು ಯಾತ್ರಾಸ್ಥಳಗಳೆಂದು ಬಣ್ಣಿಸುತ್ತಿದ್ದ ಅವರು, ದೇವರನ್ನು ನೋಡಲು ಬರುವ ಪೂಜಾರಿ–ಭಕ್ತನೆಂದು ತಮ್ಮನ್ನು ಕರೆದುಕೊಳ್ಳುತ್ತಿದ್ದರು. ಹೀಗೆ ದೇವರುಗಳನ್ನು ಹುಡುಕಿಕೊಂಡು ತಮ್ಮ ವೃತ್ತಿಜೀವನದಲ್ಲಿ ಅವರು ಸುಮಾರು 45 ಸಾವಿರ ಹಳ್ಳಿಗಳಿಗೆ ಭೇಟಿ ಕೊಟ್ಟಿದ್ದಾರೆ. ಈ ಸುತ್ತಾಟದಿಂದ ಪತ್ನಿ, ಮಗನನ್ನು ಭೇಟಿ ಮಾಡಲಿಕ್ಕೂ ಪುರಸತ್ತು ಇರುತ್ತಿರಲಿಲ್ಲ. ವೈದ್ಯವೃತ್ತಿಗಾಗಿ ಜೀವನವನ್ನೇ ಸಮರ್ಪಿಸಿಕೊಂಡಿದ್ದ ಅವರ ಬದುಕು ಫಕೀರನ ಜೀವನಕ್ಕೆ ಹತ್ತಿರವಾಗಿತ್ತು.

ಮೋದಿಯವರು ವೈದ್ಯ ವೃತ್ತಿ ಆರಂಭಿಸಿದ ಸಂದರ್ಭದಲ್ಲಿ ಕಣ್ಣುಗಳ ಶಸ್ತ್ರಚಿಕಿತ್ಸೆಯ ಬಗ್ಗೆ ಜನರಿಗೆ ಅರಿವಿರಲಿಲ್ಲ. ಕಣ್ಣುಗಳಿಗೆ ‍ಪೊರೆ ಬರುವುದೆಂದರೆ ಜೀವನ ಮುಗಿಯಿತೆಂದೇ ಭಾವಿಸುತ್ತಿದ್ದ ದಿನಗಳವು. ಶಸ್ತ್ರಚಿಕಿತ್ಸೆಯ ದುಬಾರಿ ವೆಚ್ಚವನ್ನು ಭರಿಸುವುದು ಬಡಬಗ್ಗರಿಗೆ ಸುಲಭವೂ ಆಗಿರಲಿಲ್ಲ. ಆ ಕಾರಣದಿಂದಾಗಿಯೇ ಊರುಕೇರಿಗಳಲ್ಲಿ ಕುರುಡರು ಸಾಮಾನ್ಯವಾಗಿರುತ್ತಿದ್ದರು. ಆ ಸಂದರ್ಭವನ್ನು ಬದಲಿಸಲು ಮೋದಿ ‘ದೃಷ್ಟಿ ಕ್ರಾಂತಿ’ಯನ್ನೇ ಆರಂಭಿಸಿದರು. ಆಪರೇಷನ್‌ ಎಂದರೆ ಹೆದರಿ ಓಡುತ್ತಿದ್ದವರ ಮನವೊಲಿಸಿ, ಚಿಕಿತ್ಸೆ ನೀಡಿದರು. ರೈಲುಪ್ರಯಾಣದ ವೇಳೆಯನ್ನೂ ವ್ಯರ್ಥವಾಗಿ ಕಳೆಯಲು ಬಯಸದ ಅವರು, ಪ್ರಯಾಣಿಕರ ಕಣ್ಣುಗಳ ತಪಾಸಣೆ ನಡೆಸಿ, ಸಲಹೆ ನೀಡುತ್ತಿದ್ದರಂತೆ.

ಮೈಸೂರು, ಕರ್ನಾಟಕ ಹಾಗೂ ಪುಣೆ ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ ನೀಡಿ ಗೌರವಿಸಿವೆ. ಭಾರತ ಸರ್ಕಾರವು ಪದ್ಮಶ್ರೀ, ಪದ್ಮಭೂಷಣ ಪುರಸ್ಕಾರಗಳನ್ನು ನೀಡಿದೆ. ತಮಗೆ ದೊರೆತ ಎಲ್ಲ ಪುರಸ್ಕಾರಗಳ ಹಣವನ್ನು ಮೋದಿಯವರು ಬಡಜನರ ಸೇವೆಗೆ ವಿನಿಯೋಗಿಸುತ್ತಿದ್ದರು. ಕೆಂಗಲ್‌ ಹನುಮಂತಯ್ಯನವರಿಗಂತೂ ಮೋದಿಯವರ ಬಗ್ಗೆ ಅಪಾರ ಅಭಿಮಾನ. ಹನುಮಂತಯ್ಯನವರು ಮುಖ್ಯಮಂತ್ರಿಯಾಗಿದ್ದಾಗ ಮೋದಿಯವರನ್ನು ‘ಸರ್ಕಾರಿ ಅತಿಥಿ’ ಎಂದು ಗುರುತಿಸಿ, ಅವರು ನಡೆಸುತ್ತಿದ್ದ ಶಿಬಿರಗಳಿಗೆ ಎಲ್ಲ ಸವಲತ್ತುಗಳನ್ನು ಕಲ್ಪಿಸಿದ್ದರು. ವಿಧಾನ ಪರಿಷತ್ತಿನ ಸದಸ್ಯರಾಗಿಯೂ ಮೋದಿಯವರು ನಾಮಕರಣಗೊಂಡಿದ್ದರು.

‘ಏಕ ವ್ಯಕ್ತಿಯ ಯುದ್ಧ’ (One Man's war) ಎನ್ನುವುದು ಮೋದಿಯವರ ಬಗ್ಗೆ ಕರ್ನಾಟಕ ಸರ್ಕಾರ ನಿರ್ಮಿಸಿರುವ ಸಾಕ್ಷ್ಯಚಿತ್ರ (ನಿರ್ದೇಶನ: ಎಂ.ಎಸ್‌. ಸತ್ಯು). ಜನರ ದೃಷ್ಟಿದೋಷವನ್ನು ನಿವಾರಿಸುವಲ್ಲಿ ಅವರು ನಡೆಸಿದ್ದು ಅಕ್ಷರಶಃ ಯುದ್ಧವೇ. ನೇತ್ರದಾನ ಮಾಡುವ ಮೂಲಕ, ಕಣ್ಣುಗಳ ದಾನದ ಬಗ್ಗೆ ಅರಿವು ಮೂಡಿಸುವ ಪ್ರಯತ್ನವನ್ನೂ ನಡೆಸಿದ್ದರು.

ಕನ್ನಡನಾಡಿಗೆ ಕರ್ನಾಟಕವೆಂದು ನಾಮಕರಣವಾದ ಚಾರಿತ್ರಿಕ ಘಟನೆಗೆ ಐವತ್ತು ವರ್ಷಗಳು ತುಂಬಿರುವ ಸಂದರ್ಭದಲ್ಲಿ, ಕನ್ನಡಿಗರು ಹೆಮ್ಮೆಯಿಂದ ನೆನಪಿಸಿಕೊಳ್ಳಬೇಕಾದ ಹೆಸರು ಡಾ. ಎಂ.ಸಿ. ಮೋದಿ ಅವರದು. ‘ಬಾಹುಬಲಿ’ ಅಥವಾ ‘ಮೋದಿ’ ಎನ್ನುವುದು ಬರಿಯ ಹೆಸರುಗಳಲ್ಲ, ಕನ್ನಡನಾಡಿನ ಅಸ್ಮಿತೆಗಳು. ಈ ಅಸ್ಮಿತೆಗಳಿಗೆ ಪರ್ಯಾಯವೂ ಇಲ್ಲ. ಕಣ್ಣುಗಳ ಪೊರೆಗೆ ಕಾರಣವಾಗುವವರನ್ನೇ ನಾಯಕರೆಂದು ಮೆರೆಸುವ ವರ್ತಮಾನದ ವಿಸ್ಮೃತಿಯಲ್ಲಿ, ಕಣ್ಣುಗಳ ಪೊರೆ ತೆಗೆಯುವ ‘ದೃಷ್ಟಿ ಕ್ರಾಂತಿ’ ನಡೆಸಿದ ವೈದ್ಯರತ್ನರ ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT