ಸೋಮವಾರ, 4 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈ ತೊಳೆಯುತ್ತಲೇ ಇರಬೇಕಾದ ಕಾಲದಲ್ಲಿ...

ಕೊರೊನಾ ನೆನಪಿಸಿದ ಪಾಠ: ‘ಶುದ್ಧಹಸ್ತ’ ಸಮಾಜದ ಆರೋಗ್ಯಕ್ಕೂ ಹಿತ
Last Updated 19 ಮಾರ್ಚ್ 2020, 19:30 IST
ಅಕ್ಷರ ಗಾತ್ರ

ಕಳೆದೊಂದು ವಾರದಿಂದ ತಮ್ಮ ಕೈಗಳನ್ನು ತೊಳೆದುಕೊಂಡಷ್ಟು ಭಾರತೀಯರು ಹಿಂದೆಂದೂ ತೊಳೆದುಕೊಂಡಿರಲಾರರು. ನಮ್ಮಲ್ಲಿ ಮಾತ್ರವೇನು, ಇಡೀ ವಿಶ್ವವೇ ಕೈತೊಳೆಯುವ ಆಂದೋಲನದಲ್ಲಿ ಗಂಭೀರವಾಗಿ ತೊಡಗಿಕೊಂಡಿದೆ.

ಕೊರೊನಾ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸಾರ್ವಜನಿಕರು ಅನುಸರಿಸಬೇಕಾದ ಕ್ರಮಗಳಲ್ಲಿ ಕೈಗಳನ್ನು ಪದೇ ಪದೇ ತೊಳೆದುಕೊಳ್ಳುವುದೂ ಒಂದು. ಕೈ ತೊಳೆಯುವ ಕ್ರಿಯೆಗೆ ಇದ್ದಕ್ಕಿದ್ದಂತೆ ಬಂದಿರುವ ಈ ಮಹತ್ವದ ಜೊತೆಗೇ ಕರ್ನಾಟಕ ವಿಧಾನಸಭೆಯಲ್ಲಿ ನಡೆದ ಚುನಾವಣಾ ಭ್ರಷ್ಟಾಚಾರದ ಚರ್ಚೆಯನ್ನೂ ಗಮನಿಸಬೇಕು. ಇಡೀ ಚುನಾವಣಾ ಪ್ರಕ್ರಿಯೆ ಭ್ರಷ್ಟವಾಗಿದ್ದು, ಹಣವಿಲ್ಲದೆ ಗೆಲ್ಲುವುದು ಯಾರಿಗೂ ಸಾಧ್ಯವಿಲ್ಲ ಎನ್ನುವುದನ್ನು ಸದನದಲ್ಲಿ ಶಾಸಕರೇ ಒಪ್ಪಿಕೊಳ್ಳುವ ಮೂಲಕ ತಮ್ಮ ಕೈಗಳೆಷ್ಟು ಸ್ವಚ್ಛವಾಗಿವೆ ಎನ್ನುವುದನ್ನು ನಾಡಿಗೆ ಸಾರಿ ಹೇಳಿದ್ದಾರೆ. ಈ ಚರ್ಚೆ ಹಾಗೂ ಕೊರೊನಾ ವಿದ್ಯಮಾನದ ಹಿನ್ನೆಲೆಯಲ್ಲಿ, ನಮ್ಮೆಲ್ಲರ ಕೈಗಳು ಸ್ವಚ್ಛವಾಗಿಲ್ಲ ಎನ್ನುವ ಸರಳ ತೀರ್ಮಾನಕ್ಕೆ ಬರಬಹುದು ಹಾಗೂ ಕೈ ಶುದ್ಧವಾಗಿ ಇಟ್ಟುಕೊಳ್ಳುವುದು ವೈಯಕ್ತಿಕ ಆರೋಗ್ಯಕ್ಕೂ ಸಮಾಜದ ಆರೋಗ್ಯಕ್ಕೂ ಒಳ್ಳೆಯದೆನ್ನಬಹುದು.

‘ಶುದ್ಧ ಹಸ್ತ’ ಎನ್ನುವುದು ಸದ್ಯದ ಸಂದರ್ಭದಲ್ಲಿ ನೀರು–ಸೋಪಿನ ಒಂದು ಪ್ರಕ್ರಿಯೆಯಾಗಷ್ಟೇ ಉಳಿದಿಲ್ಲ; ಅದು ಸಮಾಜದ ಆರೋಗ್ಯದ ರೂಪಕವಾಗಿಯೂ ಮುಖ್ಯವೆನ್ನಿಸುತ್ತದೆ. ಇಲ್ಲಿ ಕೈ ಶುದ್ಧವಾಗಿ ಇಟ್ಟುಕೊಳ್ಳಬೇಕಾದವರು ಯಾರು? ವಿಧಾನಸಭೆಯಲ್ಲಿನ ಚರ್ಚೆಯ ಹಿನ್ನೆಲೆಯಲ್ಲಿ ಹೇಳುವುದಾದರೆ, ಚುನಾವಣೆಯಲ್ಲಿ ಸ್ಪರ್ಧಿಸುವ ರಾಜಕಾರಣಿಗಳ ಕೈಗಳೂ ಗಲೀಜಾಗಿವೆ, ಅವರಿಗೆ ಮತ ಚಲಾಯಿಸುವ ಪ್ರಜೆಗಳ ಕೈಗಳಿಗೂ ಕೊಳಕು ಮೆತ್ತಿಕೊಂಡಿದೆ. ಹೀಗೆ ಎಲ್ಲರ ಕೈಗಳೂ ಅಶುದ್ಧವಾಗಿರುವಾಗ, ತೊಳೆಯುವ ಪ್ರಕ್ರಿಯೆ ಒಂದು ಅಸಾಧಾರಣ ಆಂದೋಲನದ ರೂಪವನ್ನೇ ಪಡೆಯಬೇಕಾಗಿದೆ.

ವಿಧಾನಮಂಡಲದಾಚೆಗೆ ಕೂಡ ಕೈ ಕೊಳಕಿನ ಚಿತ್ರಗಳು ಕಾಣಿಸುತ್ತಿವೆ. ಬೆಂಗಳೂರಿನ ರೆಸಾರ್ಟೊಂದ ರಲ್ಲಿ ಅವಿತುಕೊಂಡಿರುವ ಮಧ್ಯಪ್ರದೇಶದ ಹಲವು ಶಾಸಕರು ತಮ್ಮ ಪಕ್ಷಕ್ಕೆ ಕೈಕೊಟ್ಟು ಬಂದು, ಹೊಸ ಹಸ್ತಲಾಘವಕ್ಕೆ ಸಿದ್ಧರಾಗಿದ್ದಾರೆ. ಅವರು ತಮ್ಮ ಪಕ್ಷಕ್ಕಷ್ಟೇ ಕೈಕೊಟ್ಟಿಲ್ಲ, ತಮ್ಮನ್ನು ಚುನಾಯಿಸಿದ ಮತದಾರರಿಗೂ ಕೈಕೊಟ್ಟಿದ್ದಾರೆ. ಪಕ್ಷವೊಂದರ ತತ್ತ್ವ, ಸಿದ್ಧಾಂತಗಳ ನೆಲೆಗಟ್ಟಿನಡಿ ಚುನಾವಣೆಗೆ ಸ್ಪರ್ಧಿಸಿ ಗೆದ್ದವರು, ಚುನಾವಣೋತ್ತರ ರಾಜಕಾರಣದಲ್ಲಿ ತಮ್ಮ ಪಕ್ಷನಿಷ್ಠೆ ಬದಲಿಸುವುದು ಮತದಾರರಿಗೆ ಮಾಡುವ ದ್ರೋಹ. ಆ ದ್ರೋಹರಾಜಕಾರಣದ ವೈರಸ್‌ ದೇಶದಲ್ಲಿ ಆಗಾಗ ಕಾಣಿಸಿಕೊಳ್ಳುವುದಕ್ಕೆ ಅಶುದ್ಧ ಹಸ್ತವೇ ಕಾರಣ. ರಾಜಕಾರಣದೊಂದಿಗೆ ನ್ಯಾಯಾಂಗ ಕೂಡ ಅಪನಂಬಿಕೆಗೀಡಾಗಿರುವ ಸಂದರ್ಭ ಇಂದಿನದು. ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ರಾಜ್ಯಸಭೆಗೆ ನಾಮಕರಣ ಹೊಂದಿದ್ದಾರೆ. ನಿವೃತ್ತಿ ಹೊಂದಿದ ನಾಲ್ಕು ತಿಂಗಳಲ್ಲೇ ಸಕ್ರಿಯ ರಾಜಕಾರಣದೊಂದಿಗೆ ಗುರ್ತಿಸಿಕೊಂಡಿರುವ ಅವರು, ತಮ್ಮ ವೃತ್ತಿಬದುಕನ್ನೇ ಸಾರ್ವಜನಿಕ ಚರ್ಚೆಗೊಡ್ಡಲು ಅವಕಾಶ ಕಲ್ಪಿಸಿದ್ದಾರೆ. ಈ ವಿದ್ಯಮಾನಗಳಲ್ಲಿ ಯಾರು ಯಾರ ಕೈ ಹಿಡಿದರು ಅಥವಾ ಯಾರಿಗೆ ಕೈ ಕೊಟ್ಟರು ಎನ್ನುವುದಕ್ಕಿಂತ, ಆ ಕೈಗಳು ಶುದ್ಧವಾಗಿವೆಯೇ ಎನ್ನುವುದು ಪ್ರಶ್ನೆ.

ಸಾರ್ವಜನಿಕ ಜೀವನದಲ್ಲಿ ಶುದ್ಧಹಸ್ತಕ್ಕೆ ಇನ್ನಿಲ್ಲದ ಮಹತ್ವ. ಇಲ್ಲಿ ಕೈ ಶುದ್ಧವಾಗಿ ಇಟ್ಟುಕೊಳ್ಳುವುದೆಂದರೆ, ಸೋಪಿನಿಂದ ತೊಳೆದುಕೊಳ್ಳುವುದು ಎಂದರ್ಥವಲ್ಲ. ವ್ಯಕ್ತಿತ್ವವನ್ನು, ಚಾರಿತ್ರ್ಯವನ್ನು ಶುದ್ಧವಾಗಿ ಇಟ್ಟುಕೊಳ್ಳುವುದು; ಪ್ರಾಮಾಣಿಕವಾಗಿ ಇರುವುದು ಎಂದರ್ಥ. ಕೈ, ಬಾಯಿ ಶುದ್ಧವಾಗಿರಬೇಕು ಎನ್ನುತ್ತದೆ ನಮ್ಮ ಪರಂಪರೆ. ಎರಡನ್ನೂ ಗಲೀಜು ಮಾಡಿಕೊಳ್ಳುವುದೇ ಆಧುನಿಕ ಸಂದರ್ಭದಲ್ಲಿ ಬದುಕುವ ರೀತಿ ಎನ್ನುವಂತಾಗಿದೆ.ಭ್ರಷ್ಟಾಚಾರವನ್ನು ಸದನದಲ್ಲೇ ಒಪ್ಪಿಕೊಳ್ಳಲಾಗುತ್ತದೆ, ಅಸಂಸದೀಯ ಪದಗಳನ್ನಲ್ಲಿ ಎಗ್ಗಿಲ್ಲದೆ ಬಳಸಲಾಗುತ್ತದೆ.

ಕೈ ಎನ್ನುವುದು ಭಾರತೀಯ ಸಂಸ್ಕೃತಿಯಲ್ಲಿ ವೈಯಕ್ತಿಕವಾದುದಲ್ಲ. ಅದು ಸಮಾಜದ ದುಃಖವನ್ನು ತೊಡೆಯಲು ಪ್ರಕೃತಿ ಅಥವಾ ಅಲೌಕಿಕ ಶಕ್ತಿ ನಮಗೆ ನೀಡಿರುವ ಒಂದು ಸಲಕರಣೆ. ಬುದ್ಧನ ಕೈಗಳು ಜಗತ್ತಿನ ಸಂಕಟ ತೊಡೆಯಲು ಬಳಕೆಯಾದವು. ಕಾಯಕ ತತ್ತ್ವದ ಮೂಲಕ ಕೈಗಳ ಪ್ರಾಮುಖ್ಯವನ್ನು ಬಸವಣ್ಣ ಎತ್ತಿಹಿಡಿದ. ಸ್ವಾತಂತ್ರ್ಯ ಚಳವಳಿಗೊಂದು ಅಪೂರ್ವ ನೈತಿಕ ಹಿನ್ನೆಲೆ ಒದಗಿಸಿದ ಗಾಂಧೀಜಿ ತಮ್ಮ ಕೈಯಲ್ಲಿ ಹಿಡಿದದ್ದು ಕತ್ತಿಯನ್ನೋ ಕೋವಿಯನ್ನೋ ಅಲ್ಲ, ಚರಕವನ್ನು. ಜಗತ್ತಿನ ಎಲ್ಲ ಮಹಾತ್ಮರೂ ತಮ್ಮ ಕೈಗಳನ್ನು ದೀನ ದುರ್ಬಲರ ಕಣ್ಣೀರು ಒರೆಸಲೇ ಬಳಸಿಕೊಂಡರು. ಆದರೆ, ಇವತ್ತಿನ ನಾಯಕರ ಕೈಗಳಿಗೆ ಕಣ್ಣೀರು ಒರೆಸಲು ಪುರಸತ್ತಿಲ್ಲ, ಆ ಕೈಗಳು ದುಃಖ ತೊಡೆಯುವಷ್ಟು ಶುದ್ಧವೂ ಆಗಿಲ್ಲ.

ಶರಣರಂತೂ ಕೈ ಮತ್ತು ಬಾಯಿ ಶುದ್ಧಿಯ ಸಮನ್ವಯ ವನ್ನು ತಮ್ಮ ಬದುಕಿನಲ್ಲೂ ಮಾತಿನಲ್ಲೂ ಸಾಧಿಸಿ ತೋರಿಸಿದರು. ‘ಸಮಯೋಚಿತದಲ್ಲಿ ಲಿಂಗಾರ್ಚನೆಯ ಮಾಡುತಿಪ್ಪನಾ ಭಕ್ತನು ಮಾಡಿದಡೆ ಮಾಡಲಿ, ಮಾಡಿದಡೆ ತಪ್ಪೇನು, ಆ ಜಂಗಮದ ಶಬ್ದವ ಕೇಳಿ ಪ್ರಸಾದಕ್ಕೆ ಕೈದುಡುಕಿದಡೆ ಅದು ಪ್ರಸಾದವಲ್ಲ, ಕಿಲ್ಬಿಷ’ ಎನ್ನುತ್ತಾನೆ ಬಸವಣ್ಣ. ಇವತ್ತಿನ ಸಾರ್ವಜನಿಕ ಕಾಯಕದಲ್ಲಿ ತೊಡಗಿಕೊಂಡಿರುವ ಬಹುತೇಕರ ಕೈಗಳು ಅರ್ಚನೆಗಿಂತಲೂ ಪ್ರಸಾದದತ್ತಲೇ ಹೆಚ್ಚು ತುಡಿಯುತ್ತವೆ. ಹೀಗಿರುವಾಗ ಕೈಗಳು ಸಹಜವಾಗಿಯೇ ಕಿಲುಬಾಗುತ್ತವೆ.

‘ಕೈ ಕೆಸರಾದರೆ ಬಾಯಿ ಮೊಸರು’ ಎನ್ನುತ್ತೇವೆ. ಇಲ್ಲಿನ ಕೆಸರು ಕೊಳಕಲ್ಲ, ಕಳಂಕವಲ್ಲ; ಅದು ಶ್ರಮದ ಫಲ. ಕೆಸರು ಮೊಸರಾಗುವಲ್ಲಿ, ಕೈ ಮತ್ತು ಬಾಯಿಯ ನಡುವೆ ನೈತಿಕತೆ ಕೆಲಸ ಮಾಡುತ್ತದೆ. ಆ ನೀತಿಸೇತುವೆ ಪ್ರಸ್ತುತ ದುರ್ಬಲವಾಗಿದೆ. ಕೆಸರು ಕೈಯಿಂದ ಬಾಯಿಗೂ ಮೈಗೂ ಮೆತ್ತಿಕೊಂಡರೂ, ತೊಳೆದುಕೊಳ್ಳಬೇಕೆಂದು ಯಾರಿಗೂ ಅನ್ನಿಸುವುದಿಲ್ಲ. ಏಕೆಂದರೆ, ಎಲ್ಲರೂ ಒಂದಲ್ಲ ಒಂದು ರೂಪದಲ್ಲಿ ಕೆಸರಿನ ಕಲೆ ಮೆತ್ತಿಕೊಂಡವರೇ. ಶುದ್ಧಹಸ್ತರಾಗಿ ಉಳಿದವರು ಅಲ್ಪಸಂಖ್ಯಾತರು; ಬಹುಸಂಖ್ಯಾತರ ಪಾಲಿಗವರು ಬದುಕಲು ಗೊತ್ತಿಲ್ಲದ ಜೀವವಿಶೇಷ. ಇಂಥ ವಿಲಕ್ಷಣ ವಿಷಮ ಸನ್ನಿವೇಶದಲ್ಲಿ ತಲೆದೋರಿರುವ ಕೊರೊನಾ ನಾವು ಮರೆತ ‘ಕೈ ತೊಳೆಯುವ’ ಪಾಠವನ್ನು ಮತ್ತೆ ನೆನಪಿಸುತ್ತಿದೆ. ಕೊರೊನಾ ಎನ್ನುವುದು ಪ್ರಾಕೃತಿಕ ಭಯೋತ್ಪಾದನೆ ಎಂದು ಭಾವಿಸುವುದಾದರೆ, ಭ್ರಷ್ಟಾಚಾರವು ಸಾಮಾಜಿಕ ಭಯೋತ್ಪಾದನೆ. ಎರಡನ್ನೂ ನಿಯಂತ್ರಿಸಲು ಇರುವ ಏಕೈಕ ಮಾರ್ಗ– ಕೈ ಶುದ್ಧವಾಗಿ ಇಟ್ಟುಕೊಳ್ಳುವುದು.

ಕೈತೊಳೆಯುವುದರಿಂದ ಆರೋಗ್ಯಕ್ಕೆ ಅನೇಕ ಲಾಭಗಳಿವೆ ಎನ್ನುತ್ತದೆ ವಿಜ್ಞಾನ. ಅತಿಸಾರಕ್ಕೆ ಬಹುಮುಖ್ಯವಾದ ಕಾರಣ ಅಶುದ್ಧ ಕೈ. ಕಣ್ಣಿನ ಸೋಂಕು, ಹೊಟ್ಟೆಯ ಸೋಂಕು, ಉಸಿರಾಟದ ಸಮಸ್ಯೆಗಳಿಗೂ ಕೊಳಕು ಕೈ ಕಾರಣವಾಗಬಲ್ಲದು. ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ, ಮೊಬೈಲ್‌ ಫೋನ್‌ಗಳಲ್ಲಿ ರೋಗಾಣುಗಳು ಹೆಚ್ಚು ಕಾಲ ಜೀವಂತವಾಗಿರುವ ಬಗ್ಗೆ ಚರ್ಚೆ ನಡೆಯುತ್ತಿದೆ. ಆ ಗಲೀಜಿನ ಮೂಲವಾದರೂ ಯಾವುದು? ನಮ್ಮ ಕೈಗಳೇ ಅಲ್ಲವೇ? ಮೊಬೈಲ್‌ ಮಾತ್ರವಲ್ಲ, ಕ್ರೆಡಿಟ್‌ ಕಾರ್ಡ್‌ ಹಾಗೂ ನೋಟುಗಳಲ್ಲೂ ಮನುಷ್ಯ ತ್ಯಾಜ್ಯ ಇರುವುದನ್ನು ‘ಹಾರ್ವರ್ಡ್‌ ಮೆಡಿಕಲ್ ಸ್ಕೂಲ್‌’ ಅಧ್ಯಯನ ಗುರ್ತಿಸಿದೆ. ಈ ಗಲೀಜು, ಮನುಷ್ಯನ ರೋಗನಿರೋಧಕ ಶಕ್ತಿ ದುರ್ಬಲವಾಗಿದ್ದಲ್ಲಿ ಅಪಾಯಕಾರಿಯಾಗಬಲ್ಲದು. ಹಾಗಾಗಿ, ಕೈಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಹೆಚ್ಚಿನ ಗಮನ ಕೊಡಿ ಎನ್ನುತ್ತದೆ ವಿಜ್ಞಾನ. ಸಮಾಜವಿಜ್ಞಾನ ಹೇಳುವುದೂ ಇದನ್ನೇ– ಕೈಗಳನ್ನು ಶುದ್ಧವಾಗಿ ಇಟ್ಟುಕೊಳ್ಳಿ.

ತಾಂತ್ರಿಕ ಉತ್ಕರ್ಷದ ಸಂದರ್ಭದಲ್ಲಿ ಕೈಗೆ, ಬೆರಳಿಗೆ ವಿಶೇಷ ಮಹತ್ವವಿದೆ. ಚಲನಶೀಲ ವಿಶ್ವದ ಕನ್ನಡಿಯ ರೂಪದಲ್ಲಿ ಮೊಬೈಲ್‌ ನಮ್ಮ ಕೈಗಳಲ್ಲಿದೆ. ಬೆರಳ ತುದಿಯಲ್ಲಿ ವಿಶ್ವರೂಪ ಅನಾವರಣಗೊಳ್ಳುತ್ತದೆ. ಮನಸ್ಸಿನಂತೆ, ನೋಟದಂತೆ ಬೆರಳುಗಳೂ ಚಂಚಲವಾಗಿರುವ ಕಾಲಘಟ್ಟದಲ್ಲಿ, ಕೈಗೆ–ಬೆರಳುಗಳಿಗೆ ಸಂಯಮವನ್ನೂ ವಿವೇಕವನ್ನೂ ಕಲಿಸುವುದು ಅಗತ್ಯ. ನಮ್ಮ ಕೈಯೀಗ ನಮ್ಮದಷ್ಟೇ ಆಗಿಲ್ಲ, ಅದು ಲೋಕದ ಚೆಲುವು ಅಥವಾ ಕೊಳಕನ್ನು ನಿರ್ಣಯಿಸುವ ಒಂದು ಕೈ ಕೂಡ ಹೌದು.

ಕೈಗಳನ್ನು ಮತ್ತೆ ಮತ್ತೆ ತೊಳೆಯುತ್ತಲೇ ಇರಬೇಕಾ ಗಿರುವ ಸಂದರ್ಭವಿದು. ಕೊರೊನಾ ತಡೆಗಟ್ಟಲಿಕ್ಕೆ ಸಾಬೂನು ಬಳಸಿ ಕೈತೊಳೆಯಬೇಕು. ಸಮಾಜದ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳುವ ಮಾರ್ಗದಲ್ಲಿ, ಕೈಗಳನ್ನು ಶುದ್ಧವಾಗಿ ಇಟ್ಟುಕೊಳ್ಳಲಿಕ್ಕಾಗಿ ನೈತಿಕತೆಯನ್ನೇ ಕ್ರಿಮಿನಾಶಕದ ರೂಪದಲ್ಲಿ ಬಳಸಬೇಕು. ಒಟ್ಟಿನಲ್ಲಿ ಕೈ ತೊಳೆಯುತ್ತಲೇ ಇರೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT