ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ| ಪಿಂಚಣಿ ಹಣದ ಮೇಲಿನ ಬಡ್ಡಿಗೆ ತೆರಿಗೆ ವಿನಾಯಿತಿ ಪಡೆಯೋದು ಹೇಗೆ?

Last Updated 8 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಜಿ.ಸಿ. ಸಿದ್ದಪ್ಪರೆಡ್ಡಿ, ಜವನಗೊಂಡನಹಳ್ಳಿ

ಪ್ರಶ್ನೆ: ನಾನು ಜುಲೈ 2020ಕ್ಕೆ ನಿವೃತ್ತಿಯಾಗಿ, ಬಂದ ₹ 50 ಲಕ್ಷವನ್ನು ಬ್ಯಾಂಕ್‌ನಲ್ಲಿ ಠೇವಣಿ ಇರಿಸಿದ್ದೇನೆ. ನನ್ನ ಆದಾಯ ತೆರಿಗೆ, ಠೇವಣಿಗೆ ಬರುವ ಬಡ್ಡಿಗೆ ಆದಾಯ ತೆರಿಗೆ ವಿನಾಯಿತಿ ಪಡೆಯುವ ಬಗ್ಗೆ ತಿಳಿಸಿ.

ಪುರಾಣಿಕ್‌

ಉತ್ತರ: ನೀವು ಪಿಂಚಣಿದಾರರಿರಬಹುದು ಎಂದು ಭಾವಿಸುವೆ. ನೀವು ವಾರ್ಷಿಕವಾಗಿ ಪಡೆಯುವ ಪಿಂಚಣಿ ಹಾಗೂ ಬ್ಯಾಂಕ್‌ ಠೇವಣಿ ಮೇಲಿನ ಬಡ್ಡಿ ಸೇರಿಸಿದಾಗ ನಿಮ್ಮ ಒಟ್ಟು ಆದಾಯ ₹ 5 ಲಕ್ಷ ದಾಟಿದಲ್ಲಿ ನೀವು ₹ 3 ಲಕ್ಷದಿಂದಲೇ ಆದಾಯ ತೆರಿಗೆ ಕೊಡಬೇಕಾಗುತ್ತದೆ. ನಿಮಗಿರುವ ವಿನಾಯಿತಿಗಳು:

1) ಸೆಕ್ಷನ್‌ 16–1ಎ ಆಧಾರದ ಮೇಲೆ ಸ್ಟ್ಯಾಂಡರ್ಡ್‌ ಡಿಡಕ್ಷನ್‌ ₹ 50 ಸಾವಿರ.

2) ಸೆಕ್ಷನ್‌ 80ಟಿಟಿಬಿ ಆಧಾರದ ಮೇಲೆ ಬ್ಯಾಂಕ್‌ ಠೇವಣಿಯಲ್ಲಿ ಗರಿಷ್ಠ ₹ 50 ಸಾವಿರ

3) ಸೆಕ್ಷನ್‌ 80ಸಿ ಆಧಾರದ ಮೇಲೆ 5 ವರ್ಷಗಳ ಬ್ಯಾಂಕ್‌ ಠೇವಣಿ ಅಥವಾ ಅಂಚೆ ಕಚೇರಿ ಹಿರಿಯ ನಾಗರಿಕರ ಠೇವಣಿಯಲ್ಲಿ ವಾರ್ಷಿಕ ಗರಿಷ್ಠ ₹ 1.50 ಲಕ್ಷ.

ಈ ಮೂರು ಅವಕಾಶಗಳನ್ನು ಉಪಯೋಗಿಸಿ ನಿಮ್ಮ ವಾರ್ಷಿಕ ಪಿಂಚಣಿ ಹಾಗೂ ಬಡ್ಡಿ ಆದಾಯದಿಂದ ಕಳೆದಾಗ ಬರುವ ಮೊತ್ತ ₹ 5 ಲಕ್ಷಗಳ ಒಳಗಿದ್ದಲ್ಲಿ ನೀವು ಆದಾಯ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ನಿವೃತ್ತಿಯಿಂದ ಪಡೆದ ಮೊತ್ತಕ್ಕೆ ಆದಾಯ ತೆರಿಗೆ ಇಲ್ಲವಾದರೂ ಸೆಕ್ಷನ್‌ 10(10ಎಎ) ಆಧಾರದ ಮೇಲೆ ರಜಾ ಸಂಬಳ ನಗದೀಕರಿಸಿದಾಗ ಅದರಲ್ಲಿ ಗರಿಷ್ಠ ₹ 3 ಲಕ್ಷಗಳವರೆಗೆ ಮಾತ್ರ ತೆರಿಗೆ ವಿನಾಯಿತಿ ಇದೆ. ಉಳಿದ ಮೊತ್ತಕ್ಕೆ ತೆರಿಗೆ ಇದೆ. ನೀವು 30–11–2020ರ ಒಳಗಾಗಿ ಐ.ಟಿ ರಿಟರ್ನ್ಸ್‌ ಸಲ್ಲಿಸಿ.

ಸುನೀಲ್‌ ಕುಮಾರ್‌ ಎಚ್‌.ಎಂ. ತೋರಣಗಲ್ಲು

ಪ್ರಶ್ನೆ: ನಾನು ಜೆಎಸ್‌ಡಬ್ಲ್ಯು ಸ್ಟೀಲ್‌ ಲಿಮಿಟೆಡ್‌, ತೋರಣಗಲ್ಲು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ತಿಂಗಳ ಸಂಬಳ ₹ 40 ಸಾವಿರ. ವೈಯಕ್ತಿಕ ಸಾಲಕ್ಕೆ ₹ 14 ಸಾವಿರ ಇಎಂಐ ಕಟ್ಟುತ್ತಿದ್ದೇನೆ. ನನಗೆ ಮೂರು ವರ್ಷ ವಯಸ್ಸಿನ ಮಗಳಿದ್ದಾಳೆ. ನನ್ನ ಎಲ್‌ಐಸಿ ₹ 3 ಸಾವಿರ, ಎಸ್‌ಎಸ್‌ಎ ₹ 2 ಸಾವಿರ, ಎಪಿವೈ ₹ 900 ಇನ್ನೊಂದು ಎಪಿವೈ ₹ 400, ಎನ್‌ಎಸ್‌ಇ ₹ 5 ಸಾವಿರ, ಪಿಪಿಎಫ್‌ ₹ 1 ಸಾವಿರ. ನನ್ನೊಡನೆ 30X40 ಅಳತೆಯ ಮೂರು ನಿವೇಶನಗಳಿವೆ. ನನ್ನ ಅಭಿಲಾಷೆ ಎಂದರೆ ಮನೆ ಕಟ್ಟಬೇಕು. ನಿವೃತ್ತಿಯ ನಂತರ ಕನಿಷ್ಠ ₹ 30 ಸಾವಿರ ಆದಾಯ ಪಿಂಚಣಿ ರೂಪದಲ್ಲಿ ಪಡೆಯಬೇಕು.

ಉತ್ತರ: ನಿಮ್ಮ ಎಲ್ಲಾ ಉಳಿತಾಯಗಳು ಚೆನ್ನಾಗಿವೆ. ನಿವೇಶನ ಕೊಳ್ಳಲು ವೈಯಕ್ತಿಕ ಸಾಲ ಪಡೆದಂತೆ ಕಾಣುತ್ತಿದೆ. ಇಲ್ಲಿ ಬಡ್ಡಿ ಹೆಚ್ಚಿರಬಹುದು. ಈ ಸಾಲವನ್ನು ಆದಷ್ಟು ಬೇಗ ತೀರಿಸಿ. ಗೃಹ ಸಾಲ ಬೇಕಾದಲ್ಲಿ ಗರಿಷ್ಠ ₹ 20 ಲಕ್ಷ ದೊರೆಯುತ್ತದೆ. ಇಎಂಐ ₹ 20 ಸಾವಿರ ಬರುತ್ತದೆ. ನಿವೇಶನ ಇರುವುದರಿಂದ ಆದಷ್ಟೂ ಬೇಗ ಮನೆ ಕಟ್ಟಿಸಿ. ಮಗಳ ಸಲುವಾಗಿ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಸಾಧ್ಯವಾದಷ್ಟು ಹಣ ಉಳಿತಾಯ ಮಾಡಿ. ನೀವು ಬಯಸುವ ಸ್ವಯಂ ಪಿಂಚಣಿ ₹ 30 ಸಾವಿರ ತಿಂಗಳಿಗೆ ಪಡೆಯಲು ₹ 5 ಸಾವಿರ ಪ್ರತಿ ತಿಂಗಳೂ 25 ವರ್ಷ ಸತತವಾಗಿ ಉಳಿತಾಯ ಮಾಡಬೇಕಾಗುತ್ತದೆ. ನಿಮಗೆ ಶುಭ ಹಾರೈಸುತ್ತೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT