ಬುಧವಾರ, ಜೂನ್ 29, 2022
24 °C

ಪ್ರಶ್ನೋತ್ತರ| ಸಹಕಾರಿ ಬ್ಯಾಂಕ್‌ಗಳಲ್ಲಿ ಹಣ ಇಡುವುದು ಅಪಾಯವೇ?

ಪ್ರಮೋದ ಶ್ರೀಕಾಂತ ದೈತೋಟ Updated:

ಅಕ್ಷರ ಗಾತ್ರ : | |

ರಂಗಸ್ವಾಮಿ ಸಿ.ಜೆ.

l ಪ್ರಶ್ನೆ: ನಾನೊಬ್ಬ ನಿವೃತ್ತ ಅಧಿಕಾರಿ, 5 ಎಕರೆ ಕೃಷಿ ಜಮೀನು ಹೊಂದಿದ್ದೇನೆ. ಅದರಲ್ಲಿ ತೆಂಗು, ಅಡಿಕೆ ಮತ್ತು ಬಾಳೆ ಇದೆ. ಪ್ರತೀ ತಿಂಗಳು ಅಥವಾ ಎರಡು ತಿಂಗಳಿಗೊಮ್ಮೆ ಎಳನೀರು, ತೆಂಗಿನಕಾಯಿ, ಬಾಳೆ ಇತ್ಯಾದಿ ಮಾರುತ್ತೇನೆ. ಗರಿಷ್ಠ ₹ 10,000ತನಕ ಗಳಿಸುತ್ತೇನೆ. ಖರೀದಿಸುವವರು ಹಣವನ್ನು ಬ್ಯಾಂಕ್ ಖಾತೆಗೆ ಹಾಕುತ್ತಾರೆ ಅಥವಾ ಕೆಲವು ಸಲ ನಾನೇ ಅದನ್ನು ಜಮಾ ಮಾಡುತ್ತೇನೆ. ತೆರಿಗೆ ವಿವರ ಸಲ್ಲಿಸುವಾಗ ಈ ಮೊತ್ತವನ್ನು ಸಾಲವೆಂದು ತೋರಿಸಬಹುದು ಎಂದು ನನ್ನ ಸ್ನೇಹಿತರೊಬ್ಬರು ಹೇಳುತ್ತಿದ್ದಾರೆ. ಏನು ಮಾಡಲಿ?


ಪ್ರಮೋದ ಶ್ರೀಕಾಂತ ದೈತೋಟ

ಉತ್ತರ: ನೀವು ನಿವೃತ್ತ ಅಧಿಕಾರಿಯಾಗಿರುವುದರಿಂದ, ನಿಮಗೆ ಕೃಷಿ ಆದಾಯದೊಡನೆ ಪಿಂಚಣಿ ಆದಾಯವೂ ಬರುತ್ತಿರಬಹುದು. ಕೃಷಿ ಆದಾಯಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಇದೆ. ನಿಮ್ಮ ಒಟ್ಟು ಕೃಷಿ ಆದಾಯ ನಿಖರವಾಗಿ ಇಲ್ಲದಿದ್ದರೂ, ಇದಕ್ಕೆ ಸಂಪೂರ್ಣ ತೆರಿಗೆ ವಿನಾಯಿತಿ ಸಿಗುತ್ತದೆ.

ನೀವು ಕೃಷಿ ಉತ್ಪನ್ನಗಳ ಮಾರಾಟದ ಹಣವನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವ ಬಗ್ಗೆ ಒಂದಿಷ್ಟು ಮಾಹಿತಿ. ನೀವು ಜಮಾ ಮಾಡುವ ಆದಾಯ, ನಿಮ್ಮದೇ ಕೃಷಿ ಉತ್ಪನ್ನದಿಂದ ನಿಮಗೆ ಬರುವ ನ್ಯಾಯಸಮ್ಮತ ಆದಾಯ. ಹೇಗಿದ್ದರೂ ಕೃಷಿ ಆದಾಯ ಯಾವುದೇ ಮಿತಿ ಇಲ್ಲದೆ ತೆರಿಗೆ ವಿನಾಯಿತಿ ಹೊಂದಿದೆ. ಹೀಗಾಗಿ ಮೇಲೆ ಉಲ್ಲೇಖಿಸಿದ ಮೊತ್ತದೊಳಗಿನ ಮಿತಿಯಲ್ಲಿ ನಗದು ಜಮಾ ಮಾಡುವುದರಲ್ಲಿ ತೊಂದರೆ ಇಲ್ಲ. ನೀವು ಯಾವುದೇ ಕಾರಣಕ್ಕೆ ವಿವರ ಸಲ್ಲಿಸುವುದೇ ಆಗಿದ್ದಲ್ಲಿ, ನಿಜವಾದ ಆದಾಯವನ್ನು, ಪಡೆದ ಸಾಲವೆಂದು ಘೋಷಿಸುವುದಕ್ಕಿಂತ ಆದಾಯದ ಸೂಕ್ತ ವಿವರಗಳನ್ನು ನಿಮ್ಮ ಮಾಹಿತಿಗೆ ಇರಿಸಿಕೊಂಡು, ವಿನಾಯಿತಿ ಇರುವ ಕೃಷಿ ಆದಾಯ ಎಂದೇ ಘೋಷಿಸುವುದು ಒಳ್ಳೆಯದು. ಇದು ನಿಮಗೆ ಮುಂದೆ ಯಾವುದೇ ಹೂಡಿಕೆಯ ಸಂದರ್ಭದಲ್ಲೂ ಆದಾಯವೆಂದೇ ಪರಿಗಣಿಸಲ್ಪಡುತ್ತದೆ.

ತೆರಿಗೆಗೊಳಪಡುವ ಕೃಷಿಯೇತರ ಆದಾಯವಿದ್ದಾಗ ನಿಖರವಾಗಿ ತೆರಿಗೆ ಲೆಕ್ಕ ಹಾಕಲು, ನಿಮ್ಮ ಎಲ್ಲಾ ಆದಾಯಗಳ ಮಾಹಿತಿಯೊಂದಿಗೆ ಸಮೀಪದ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಿ.

ಚಂದ್ರಮೌಳಿ, ಮಧುಗಿರಿ

l ಪ್ರಶ್ನೆ: ನಾನು ಹಿರಿಯ ನಾಗರಿಕ. ನಮ್ಮ ಜಿಲ್ಲೆಯ ಆರೇಳು ಬ್ಯಾಂಕ್‌ಗಳಲ್ಲಿ ಠೇವಣಿ ಹೊಂದಿದ್ದೇನೆ. ಇವು ಸಹಕಾರಿ ಬ್ಯಾಂಕ್‌ಗಳು. ಅಲ್ಲಿನ ಅಧಿಕಾರಿಗಳ ಪರಿಚಯ ಹಾಗೂ ಅವರು ಕೊಡುವ ತುಸು ಹೆಚ್ಚಿನ ಬಡ್ಡಿಯ ಕಾರಣದಿಂದಾಗಿ ಅಲ್ಲಿ ಠೇವಣಿ ಹೊಂದಿದ್ದೇನೆ. ಕೆಲವು ಬ್ಯಾಂಕ್‌ಗಳಲ್ಲಿ ₹ 5 ಲಕ್ಷಕ್ಕಿಂತ ಅಧಿಕ ಠೇವಣಿ ಇದೆ. ಇತ್ತೀಚಿನ ಒಂಡೆರಡು ವರ್ಷಗಳಲ್ಲಿ ಕೆಲವು ಸಹಕಾರಿ ಬ್ಯಾಂಕ್‌ಗಳು ಭಾರೀ ತೊಂದರೆಗೆ ಒಳಗಾಗಿರುವುದರಿಂದ ಇಂತಹ ಸಂಸ್ಥೆಗಳಲ್ಲಿ ಹಣ ಇಡುವುದು ಅಪಾಯ ಎಂದು ತೋರುತ್ತದೆ. ಈ ಬಗ್ಗೆ ಸಲಹೆ ನೀಡಿ.

ಉತ್ತರ: ಬ್ಯಾಂಕ್ ಠೇವಣಿದಾರರ ಹಣಕಾಸಿನ ಸುರಕ್ಷತೆಯ ಭಾಗವಾಗಿ ಸರ್ಕಾರ ಕಾನೂನು ರೂಪಿಸಿದೆ. ಹೀಗಾಗಿ ಬ್ಯಾಂಕ್ ಆರ್ಥಿಕ ಸಂಕಷ್ಟಕ್ಕೀಡಾಗಿ ಠೇವಣಿದಾರರ ಹಣ ಮರಳಿಸಲು ವಿಫಲವಾದರೆ ‘ಠೇವಣಿ ವಿಮೆ ಮತ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್’ ಬ್ಯಾಂಕ್‌ಗಳಿಗೆ ನೆರವಾಗುತ್ತದೆ. ಗ್ರಾಹಕರು ₹ 5 ಲಕ್ಷದವರೆಗಿನ ಠೇವಣಿ ನಷ್ಟಕ್ಕೆ ಪರಿಹಾರ ಪಡೆಯಲು ವಿಮೆಯ ನೆರವು ಇರುತ್ತದೆ. ಈ ಸೌಲಭ್ಯಕ್ಕೆ ಅಗತ್ಯ ಪ್ರೀಮಿಯಂ ಮೊತ್ತವನ್ನು ಬ್ಯಾಂಕ್ ತನ್ನ ಕಡೆಯಿಂದ ಪಾವತಿ ಮಾಡುತ್ತದೆ. ಒಂದು ವೇಳೆ ₹ 5 ಲಕ್ಷಕ್ಕಿಂತ ಅಧಿಕ ಮೊತ್ತದ ಠೇವಣಿ ಇಟ್ಟಿದ್ದು ಆರ್ಥಿಕ ಬಿಕ್ಕಟ್ಟಿನಿಂದಾಗಿ ಬ್ಯಾಂಕಿಗೆ ಹಣ ಮರಳಿಸಲಾಗದ ಸಂದರ್ಭ ಬಂದಾಗ ಪರಿಹಾರ ಮೊತ್ತವನ್ನು ₹ 5 ಲಕ್ಷಕ್ಕೆ ಮೊಟಕು ಮಾಡಲಾಗುತ್ತದೆ. ಇದಕ್ಕಿಂತ ಹೆಚ್ಚುವರಿ ಠೇವಣಿ ಮೊತ್ತ ವಿಮಾ ವ್ಯಾಪ್ತಿಗೆ ಬರದ ಕಾರಣ, ವಿರಳ ಸಂದರ್ಭಗಳಲ್ಲಿ ಗ್ರಾಹಕನಿಗೆ ನಷ್ಟವಾಗುವ ಸಾಧ್ಯತೆಯೂ ಇದೆ.

ಬ್ಯಾಂಕಿನ ಸುರಕ್ಷತೆಯ ಬಗ್ಗೆ ಹೇಳುವುದಾದರೆ, ಪ್ರತಿ ಸಹಕಾರಿ ಬ್ಯಾಂಕಿನ ಗ್ರಾಹಕನೂ ಅದರ ಸದಸ್ಯನಾಗಿರುತ್ತಾನೆ. ಪ್ರತಿ ಸದಸ್ಯರಿಗೂ ಕೆಲವು ಕರ್ತವ್ಯಗಳು ಹಾಗೂ ಅಧಿಕಾರಗಳಿರುತ್ತವೆ. ಇವನ್ನು ಬ್ಯಾಂಕಿನ ಉಪನಿಯಮಗಳಲ್ಲಿ ಉಲ್ಲೇಖಿಸಿರುತ್ತಾರೆ. ಸರ್ವ ಸದಸ್ಯರ ಸಭೆಗೆ ಹಾಜರಾಗುವುದು, ಆರ್ಥಿಕ ವಿಚಾರದಲ್ಲಿನ ಸಂದೇಹಗಳನ್ನು ಅಧಿಕಾರಿಗಳಲ್ಲಿ ಅಥವಾ ಆಡಳಿತ ಮಂಡಳಿಯ ಪದಾಧಿಕಾರಿಗಳ ಮುಂದಿಟ್ಟು ಪರಿಹರಿಸಿಕೊಳ್ಳುವ ಜಾಣತನ ಎಲ್ಲ ಸದಸ್ಯರು, ಠೇವಣಿದಾರರಲ್ಲಿ ಇರಬೇಕು. ಪ್ರತಿ ವರ್ಷದ ಆರ್ಥಿಕ ವ್ಯವಹಾರ ತಖ್ತೆ ಹಾಗೂ ಲಾಭ–ನಷ್ಟ ವ್ಯವಹಾರ ಖಾತೆಯನ್ನು ಅರ್ಥೈಸುವುದು, ಅದರಲ್ಲಿ ನೀಡಲಾಗುವ ನಗದು ಮೀಸಲು ಅನುಪಾತದ ವಿವರ, ಶಾಸನಬದ್ಧ ದ್ರವ್ಯತೆ ಅನುಪಾತದ ವಿವರ ಇವನ್ನೆಲ್ಲ ತಿಳಿದುಕೊಳ್ಳುವ ಯತ್ನ ಮಾಡಿ. ಎನ್‌ಪಿಎ, ಆಡಳಿತ ಮಂಡಳಿಯ ನಿಷ್ಕ್ರಿಯತೆ ಇತ್ಯಾದಿಗಳೂ ಬ್ಯಾಂಕುಗಳನ್ನು ನಿಧಾನವಾಗಿ ಆರ್ಥಿಕ ಸಂಕಷ್ಟದತ್ತ ತಳ್ಳುತ್ತವೆ. ಹೀಗಾಗಿ ಗ್ರಾಹಕರು ಹಾಗೂ ಗ್ರಾಹಕರಾಗುವವರು ಈ ಬಗ್ಗೆ ಕನಿಷ್ಠ ಪರಿಶೀಲನೆಯನ್ನಾದರೂ ನಡೆಸಿ ವ್ಯವಹರಿಸುವುದು ಒಳಿತು.

ನೀವು ₹ 5 ಲಕ್ಷಕ್ಕಿಂತ ಅಧಿಕ ಠೇವಣಿಯನ್ನು ಯಾವುದಾದರೂ ಸಹಕಾರ ಬ್ಯಾಂಕ್‌ನಲ್ಲಿ ಈಗಾಗಲೇ ಹೊಂದಿದ್ದರೆ, ಮೇಲಿನ ಮಾಹಿತಿಯೊಂದಿಗೆ ಪುನಃ ಯೋಚನೆ ಮಾಡಬಹುದು. ಈ ಮೊತ್ತ ಪ್ರತಿ ಬ್ಯಾಂಕಿಗೆ ಸಂಬಂಧಿಸಿದ ಒಟ್ಟು ಮೊತ್ತವೇ ಹೊರತು ಪ್ರತಿ ಶಾಖೆಗೆ ಸಂಬಂಧಿಸಿದ ವಿಮಾ ಪರಿಹಾರ ಮೊತ್ತವಲ್ಲ. ಹೀಗಾಗಿ ಒಂದೇ ಬ್ಯಾಂಕಿನ ಅನೇಕ ಶಾಖೆಗಳಲ್ಲಿನ ಒಟ್ಟು ಮೊತ್ತ ₹ 5 ಲಕ್ಷದೊಳಗಿರುವಂತೆ ಕ್ರಮೇಣ ನೋಡಿಕೊಳ್ಳುವ ಬಗ್ಗೆ ಆಲೋಚಿಸಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು