ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶ್ನೋತ್ತರ| ಉಯಿಲು, ದಾನಪತ್ರಗಳ ಗೊಂದಲಕ್ಕೆ ಇಲ್ಲಿದೆ ಪರಿಹಾರ

Last Updated 27 ಜನವರಿ 2021, 3:25 IST
ಅಕ್ಷರ ಗಾತ್ರ

ಚಂದ್ರಶೇಖರ್‌, ಬೆಂಗಳೂರು

l ಪ್ರಶ್ನೆ: ಉಯಿಲು, ದಾನಪತ್ರ ಇವುಗಳ ವಿಚಾರದಲ್ಲಿ ನನಗೆ ಬಹಳ ಗೊಂದಲ ಇದೆ. ನನ್ನ ಹೆಸರಿನಲ್ಲಿ ಮನೆ, ಹೆಂಡತಿ ಹೆಸರಿನಲ್ಲಿ ಬೇರೆ ಬೇರೆ ಊರುಗಳಲ್ಲಿ ಎರಡು ನಿವೇಶನ ಇವೆ. ನಮಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ನನ್ನ ವಯಸ್ಸು 72 ವರ್ಷ. ಹೆಂಡತಿ ವಯಸ್ಸು 63 ವರ್ಷ. ನಮ್ಮ ಕಾಲಾನಂತರ ನಾವು ಗಳಿಸಿದ ಸ್ಥಿರ ಆಸ್ತಿ ಹಾಗೂ ಬ್ಯಾಂಕ್‌ ಠೇವಣಿ ನಮ್ಮ ಮಕ್ಕಳು ಏನೂ ತೊಂದರೆ, ತಾಪತ್ರಯ ಇಲ್ಲದೇ ಪಡೆಯಲು ನಿಮ್ಮ ಮಾರ್ಗದರ್ಶನ ಬೇಕಾಗಿದೆ. ನನ್ನ ಪ್ರಶ್ನೆಯಲ್ಲಿ ಕೆಲವೊಂದು ವಿಚಾರ ತಿಳಿಸಲು ಆಗುತ್ತಿಲ್ಲ. ಫೋನ್ ಮುಖಾಂತರ ಬಗೆಹರಿಯುತ್ತದೆಯೋ ತಿಳಿಯದು. ತಾವು ಒಪ್ಪಿದಲ್ಲಿ ಸ್ವತಃ ಬಂದು ಭೇಟಿಯಾಗಬಹುದೇ?

ಉತ್ತರ: ಉಯಿಲು (ಮರಣಪತ್ರ–will) ಓರ್ವ ವ್ಯಕ್ತಿ ತನ್ನ ಸ್ಥಿರ–ಚರ ಆಸ್ತಿ ವಿಚಾರದಲ್ಲಿ ತನ್ನ ಕಾಲಾನಂತರ ವಾರಸುದಾರರು ಪಡೆಯಲು ಬರೆಯುವ ಶಾಸನ. ದಾನಪತ್ರವು ಕ್ರಯಪತ್ರಕ್ಕೆ ಸಮಾನ. ರಕ್ತ ಸಂಬಂಧಿಗಳಲ್ಲಿ ಸ್ಥಿರ–ಚರ ಆಸ್ತಿ ಹಸ್ತಾಂತರಿಸುವ ಸಂದರ್ಭ ಬಂದಾಗ ದಾನಪತ್ರ ಬರೆಯುವುದು ಸೂಕ್ತ. ಈ ವಿಚಾರದಲ್ಲಿ ಬಹಳಷ್ಟು ಜನರು ಗೊಂದಲಪಡುತ್ತಿರುವುದು ಸಹಜ. ಆದರೆ ಈ ಎರಡೂ ವಿಚಾರ ಅಷ್ಟೇನು ಕಠಿಣವಾದ ಸಮಸ್ಯೆಯಲ್ಲ. ನಿಮ್ಮ ಮಕ್ಕಳಿಗೆ ನೀವು, ನಿಮ್ಮ ಹೆಂಡತಿ ಬಯಸಿದಂತೆ ಉಯಿಲು ಅಥವಾ ದಾನಪತ್ರ ಮಾಡಬಹುದು. ಇವುಗಳಿಗೆ ಮಾಡಬೇಕಾದ ಕಾಗದಪತ್ರ ಕೂಡಾ ತುಂಬಾ ಸರಳ. ಓರ್ವ ವ್ಯಕ್ತಿಯ ಮರಣಾನಂತರ, ವಾರಸುದಾರರು, ವಾರಸುದಾರರ ಹಕ್ಕು ಪತ್ರ ಪಡೆಯಲು ಪರದಾಡುವಂತಾಗಬಾರದು. ಈ ಕಾರಣದಿಂದ ಉಯಿಲು ಬರೆಯುವ ಅವಶ್ಯವಿದೆ. ದಾನಪತ್ರದಲ್ಲಿ ತಕ್ಷಣ ಆಸ್ತಿ ಹಸ್ತಾಂತರವಾಗುವುದರಿಂದ ಈ ತೊಂದರೆ ಬರುವುದಿಲ್ಲ. ನನ್ನನ್ನು ಫೋನ್‌ ಮೂಲಕ ಸಂಪರ್ಕಿಸಿ. ಅವಶ್ಯ ಬಿದ್ದಲ್ಲಿ ಮೊದಲು ಕರೆ ಮಾಡಿ ಬಳಿಕ ಭೇಟಿ ಮಾಡಿರಿ.

ಭಾಗ್ಯಲಕ್ಷ್ಮಿ, ಊರುಬೇಡ

l ಪ್ರಶ್ನೆ: ನಾನು ಗೃಹಿಣಿ. ವಯಸ್ಸು 47 ವರ್ಷ. ನಾನು ₹ 2 ಲಕ್ಷದಿಂದ ಬಂಗಾರ ಖರೀದಿಸಬೇಕೆಂದಿದ್ದೇನೆ. ಇದಕ್ಕೆ ಎಷ್ಟು ತೆರಿಗೆ ಬರುತ್ತದೆ? ತೆರಿಗೆ ಬಾರದಿರಲು ಎಷ್ಟು ಬಂಗಾರ ಕೊಳ್ಳಬಹುದು?

ಉತ್ತರ: ಬಂಗಾರ ಮಾತ್ರವಲ್ಲ, ಯಾವುದೇ ಸ್ಥಿರ–ಚರ ಆಸ್ತಿ ಕೊಳ್ಳುವಾಗ ಆದಾಯ ತೆರಿಗೆ ಅಥವಾ ಬಂಡವಾಳವೃದ್ಧಿ ತೆರಿಗೆ ಬರುವುದಿಲ್ಲ. ಈ ವ್ಯವಹಾರದಲ್ಲಿ ಲಾಭದ ಪ್ರಶ್ನೆ ಉದ್ಭವಿಸುವುದಿಲ್ಲ. ಲಾಭ ಬಾರದೆ ತೆರಿಗೆ ಮಾತಿರುವುದಿಲ್ಲ. ಇದೇ ವೇಳೆ, ಬಂಗಾರ ಅಥವಾ ಇತರ ಸ್ಥಿರ ಆಸ್ತಿ ಮಾರಾಟ ಮಾಡುವಾಗ ಬರುವ ಲಾಭಕ್ಕೆ ತೆರಿಗೆ ಕೊಡಬೇಕಾಗುತ್ತದೆ. ಹೀಗೆ ತೆರಿಗೆ ಕೊಡುವಾಗ ಕೊಂಡ ತಾರೀಕಿನಿಂದ ಮಾರಾಟ ಮಾಡುವ ಅವಧಿಯ ತನಕದ ಹಣದುಬ್ಬರದ ಪ್ರಮಾಣವನ್ನು ಲಾಭದಿಂದ ಕಳೆದು, ತೆರಿಗೆ ಕೊಡಬಹುದಾಗಿದೆ. ಒಟ್ಟಿನಲ್ಲಿ ಓದುಗರು ಗಮನಿಸಬೇಕಾದ ವಿಚಾರವೆಂದರೆ ಮಾರಾಟ ಮಾಡಿ ಬರುವ ಲಾಭಕ್ಕೆ ಮಾತ್ರ ತೆರಿಗೆ ಬರುತ್ತದೆ. ಕೊಳ್ಳುವಾಗ ತೆರಿಗೆ ಕೊಡುವ ಅವಶ್ಯ ಇರುವುದಿಲ್ಲ.

ಚಂದ್ರಶೇಖರ್, ರಾಣೆಬೆನ್ನೂರು

l ಪ್ರಶ್ನೆ: ನಮ್ಮ ತಂದೆಯವರು ₹ 40 ಲಕ್ಷ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದಾರೆ. ಅವರ ವಯಸ್ಸು 72 ವರ್ಷ. ಅವರು ಹಳ್ಳಿಯಲ್ಲಿ ಜಮೀನು ನೋಡಿಕೊಂಡಿದ್ದಾರೆ. ನಾವು 3 ಜನ ಮಕ್ಕಳು, ಅವರ ಕಾಲಾನಂತರ ಬ್ಯಾಂಕ್‌ನಿಂದ ಈ ಹಣ ಪಡೆಯಲು ಏನೂ ತೊಂದರೆಯಾಗದಂತೆ ಮಾಡುವುದು ಹೇಗೆ?

ಉತ್ತರ: ನೀವು ತಿಳಿಸಿದಂತೆ ನಿಮ್ಮ ತಂದೆಯವರ ಕಾಲಾನಂತರ ಅವರು ಕೂಡಿಟ್ಟ ಠೇವಣಿ ನಿಮ್ಮ ಮೂರೂ ಮಕ್ಕಳಿಗೆ ಯಾವುದೇ ತೊಂದರೆ ಇಲ್ಲದೆ ಪಡೆಯಲು ಮೂರು ಮಾರ್ಗಗಳಿವೆ.

1) ನಿಮ್ಮ ತಂದೆಯವರ ಒಟ್ಟು ಠೇವಣಿ ಅವಧಿ ಮುಗಿಯದಿದ್ದರೂ ಹಿಂದೆ ಪಡೆದು ಸರಿಸಮಾನ ಮೂರು ಭಾಗ ಮಾಡಿ ಪುನಃ ಠೇವಣಿ ಮಾಡಿ, ಮೂರು ಜನರ ಹೆಸರಿನಲ್ಲಿ ಪ್ರತ್ಯೇಕವಾಗಿ ಇಡಿ ಉದಾ: ಒಂದು ಠೇವಣಿ ಬಾಂಡು ಒಬ್ಬರ ಹೆಸರಿನಲ್ಲಿ ನಾಮನಿರ್ದೇಶನ ಮಾಡಿ ಇಡುವುದು.

2) ನಿಮ್ಮ ತಂದೆಯವರು ಒಪ್ಪಿದಲ್ಲಿ ಈಗಾಲೇ ಠೇವಣಿ ಹಿಂಪಡೆದು ಸಮನಾಗಿ ಹಂಚಿ ಮೂರೂ ಜನರು ಪ್ರತ್ಯೇಕವಾಗಿ ಠೇವಣಿ ಇಡುವುದು

3) ನಿಮ್ಮ ತಂದೆಯವರು ಈ ಠೇವಣಿ ವಿಚಾರದಲ್ಲಿ ಉಯಿಲು ಬರೆದು ಠೇವಣಿಯನ್ನು ಮೂರೂ ಮಕ್ಕಳು ಹಂಚಿಕೊಳ್ಳುವಂತೆ ಉಯಿಲಿನಲ್ಲಿ ನಮೂದಿಸುವುದು. ಈ ಮೂರು ಮಾರ್ಗಗಗಳಲ್ಲಿ ಒಂದನೇ ಮಾರ್ಗ, ಪ್ರತ್ಯೇಕ ಮೂರು ಬಾಂಡ್‌ ಮೂವರ ಹೆಸರಿನಲ್ಲಿ ಪ್ರತ್ಯೇಕವಾಗಿ ನಾಮ ನಿರ್ದೇಶನ ಮಾಡುವುದು ಸೂಕ್ತ.

***

ಹಣಕಾಸು, ತೆರಿಗೆ ಸಮಸ್ಯೆಗೆ ಪರಿಹಾರ

ಹಣಕಾಸಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪತ್ರದಲ್ಲಿ (ದೂರವಾಣಿ ಸಂಖ್ಯೆ ಸಹಿತ) ಬರೆದು ಕಳುಹಿಸಿ. ವಿಳಾಸ: ಪ್ರಶ್ನೋತ್ತರ, ವಾಣಿಜ್ಯ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು–56001.
ಇ–ಮೇಲ್‌: businessdesk@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT