ಸೋಮವಾರ, ನವೆಂಬರ್ 30, 2020
20 °C
ಹಣ ಒದಗಿಸಿದರೆ, ಅಪಾಯಕಾರಿ ವೈರಸ್‌ಗಳ ಪಂಚಾಂಗವನ್ನೇ ಬಿಚ್ಚಿಡುತ್ತೇವೆ ಎನ್ನುತ್ತಾರೆ ತಜ್ಞರು

ನಾಳಿನ ವೈರಸ್ ದಾಳಿ ತಡೆಗೆ ಇಂದೇ ಸಿದ್ಧತೆ

ಟಿ.ಆರ್.ಅನಂತರಾಮು Updated:

ಅಕ್ಷರ ಗಾತ್ರ : | |

ವಿಶ್ವ ಆರೋಗ್ಯ ಸಂಸ್ಥೆ ಈಗ ಹಲವು ಲೆಕ್ಕಾಚಾರಗಳನ್ನು ಹಾಕುತ್ತಿದೆ. ಇದರಲ್ಲಿ ಆತಂಕವೂ ಸೇರಿದೆ. ಪ್ರತಿವರ್ಷವೂ ಜಗತ್ತನ್ನು ಯಾವ ಕಾಯಿಲೆ ಹೆಚ್ಚು ಬಾಧಿಸಬಹುದು ಎಂಬುದರ ಪಟ್ಟಿ ತಯಾರಿಸುತ್ತದೆ. ಅದು ಸಂಭವನೀಯ ಪಟ್ಟಿಯೇ ಹೊರತು ಅಂತಿಮವಲ್ಲ. ಆಗಾಗ ಅಂಥ ಪಟ್ಟಿಗಳನ್ನು ಪರಿಷ್ಕರಿಸಲಾಗುತ್ತದೆ.


ಟಿ.ಆರ್.ಅನಂತರಾಮು

ಈ ಪಟ್ಟಿ ಸ್ವತಂತ್ರವಾಗಿ ತಯಾರಾಗುವುದಿಲ್ಲ. ಜಗತ್ತಿನ ಪ್ರಮುಖ ವೈರಸ್ ಅಧ್ಯಯನ ಸಂಸ್ಥೆಗಳ ಸಲಹೆ ಪಡೆಯುತ್ತದೆ. ಅದರಲ್ಲೂ ವಿಶೇಷವಾಗಿ ವೈರಸ್ ಬಗ್ಗೆ ದೊಡ್ಡ ಮಾಹಿತಿ ಸಂಗ್ರಹವಿರುವ ‘ಗ್ಲೋಬಲ್ ವೈರೋಮ್ ಪ್ರಾಜೆಕ್ಟ್’ನ ತಜ್ಞರನ್ನು ಸಂಪರ್ಕಿಸುತ್ತದೆ. ಈ ಸಂಸ್ಥೆ, ಪ್ರಾಣಿ ಪಕ್ಷಿಗಳಿಂದ ಹಾರಿ ಮನುಷ್ಯನ ಮೇಲೆ ಎರಗುವ ವೈರಸ್‍ಗಳ ಬಹು ದೊಡ್ಡ ಮಾಹಿತಿಯ ಸಂಗ್ರಹವನ್ನೇ ಇಟ್ಟುಕೊಂಡಿದೆ. ಪ್ರಾಣಿಗಳಲ್ಲಿ ಆಶ್ರಯ ಪಡೆದಿರುವ ಸುಮಾರು ಆರು ಲಕ್ಷಕ್ಕಿಂತ ಹೆಚ್ಚು ವೈರಸ್‍ಗಳು ಯಾವ ಗಳಿಗೆಯಲ್ಲಾದರೂ ಮನುಷ್ಯನ ಮೇಲೆ ದಾಳಿ ಮಾಡಬಹುದು ಎಂಬ ಮಾಹಿತಿ ಅಲ್ಲಿದೆ. ಸದ್ಯಕ್ಕೆ ಅಂದಾಜು 400 ವೈರಸ್‍ಗಳ ಬಗ್ಗೆ ಸ್ಪಷ್ಟ ವಿವರಗಳೂ ಲಭ್ಯವಿವೆ. ಇದರ ಅರ್ಥ ಇನ್ನೂ ಶೇ 99ರಷ್ಟು ವೈರಸ್‍ಗಳ ಕುರಿತು ಅಧ್ಯಯನ ಮಾಡಬೇಕಿದೆ. ಹೀಗಾಗಿ ವಿಶ್ವಸಂಸ್ಥೆಯು ಸಂಶೋಧನೆ ಮತ್ತು ಅಭಿವೃದ್ಧಿಯ ಅಂಶಕ್ಕೆ ಹಿಂದೆಂದಿಗಿಂತ ಈಗ ಹೆಚ್ಚು ಗಮನಹರಿಸಿದೆ.

ಈಗ ತಯಾರಾಗಿರುವ ಪಟ್ಟಿಯಲ್ಲಿ ಕೋವಿಡ್-19 ಮೊದಲ ಸ್ಥಾನದಲ್ಲಿದ್ದರೂ ಇದರ ಜೊತೆಗೆ ಈಗಾಗಲೇ ಮನುಷ್ಯನನ್ನು ಪೀಡಿಸುತ್ತಿರುವ, ಮತ್ತೆ ಪೀಡಿಸಬಹುದಾದ ಕಾಂಗೋ ಜ್ವರ, ಎಬೊಲಾ ವೈರಸ್ ಕಾಯಿಲೆ, ಪಶ್ಚಿಮ ಆಫ್ರಿಕಾದಲ್ಲಿ ಹುಟ್ಟಿ ಇಡೀ ಖಂಡವನ್ನೇ ಕಾಡಿದ, ಸೊಳ್ಳೆಗಳಿಂದ ಹರಡುವ ಜಿಕಾ ವೈರಸ್ ಕಾಯಿಲೆ, ಒಂಟೆಗಳಿಂದ ಹರಡುವ ಸಾರ್ಸ್ ವೈರಸ್ ಕಾಯಿಲೆ- ಇವೆಲ್ಲವನ್ನು ಈಗಲೂ ಗಮನಿಸಬೇಕಾಗಿದೆ. ಇದರ ಜೊತೆಗೆ ‘ಎಕ್ಸ್ ಕಾಯಿಲೆ’ ಎಂಬ ಹೆಸರೂ ಪಟ್ಟಿಯಲ್ಲಿದೆ. ಎಕ್ಸ್‌ ಎಂದರೆ ಗೊತ್ತಿರದ ಎಂಬರ್ಥವಿದೆ. ಅಂದರೆ ಯಾವುದೋ ಅಪರಿಚಿತ ಸೂಕ್ಷ್ಮಜೀವಿ, ಹೆಚ್ಚಿನ ಪಾಲು ವೈರಸ್ ಯಾವ ರೀತಿಯಲ್ಲಿ, ಯಾವ ಪ್ರಮಾಣದಲ್ಲಿ ದಾಳಿ ಮಾಡಬಹುದು ಎಂಬುದಕ್ಕೆ ಈಗಲೇ ಹೆಸರಿಡಲು ಸಾಧ್ಯವಿಲ್ಲ. ಎಕ್ಸ್ ಕಿರಣವನ್ನು ರಾಂಟ್‍ಜೆನ್ ಪತ್ತೆ ಹಚ್ಚಿದಾಗ, ಆಗ ಅದೇನೆಂದು ತಿಳಿದಿರಲಿಲ್ಲ, ಅದಕ್ಕಾಗಿ ‘ಎಕ್ಸ್’ ಎಂದ. ನಾವು ನಿರ್ದಿಷ್ಟ ವ್ಯಕ್ತಿಯ ಹೆಸರು ಹೇಳುವುದನ್ನು ತಪ್ಪಿಸಲು ವೆಂಕ, ಸೀನ ಎಂದ ಹಾಗೆ.

ಈ ಕುರಿತು ಸಂಶೋಧನೆ ಹಾಸ್ಯಾಸ್ಪದ ಎಂದು ಯಾರೂ ಹೇಳುವುದಿಲ್ಲ. ಏಕೆಂದರೆ ಎಲ್ಲ ರೋಗಕಾರಕ ವೈರಸ್ಸುಗಳ ಪರಿಚಯ ನಮಗಿಲ್ಲ. ಆದರೆ ಅವು ದಿಢೀರೆಂದು ಪೀಡಿಸಬಹುದು. ಅದರ ಮೂಲ ಯಾವುದಾಗಿರಬಹುದು ಎಂದು ವೈಜ್ಞಾನಿಕವಾಗಿ ಅಂದಾಜು ಮಾಡಬಹುದು. ಇದಕ್ಕಾಗಿ ಜಗತ್ತಿನ ಯಾವ ದೇಶ ಬಹು ಬೇಗ ಸಾಂಕ್ರಾಮಿಕ ರೋಗಕ್ಕೆ ಗುರಿಯಾಗಬಹುದು ಎಂಬುದರ ಕುರಿತು ನಂಬಲರ್ಹ ನಕ್ಷೆ ತಯಾರಿಸಬೇಕಾಗುತ್ತದೆ. ಅದೂ ಮುಗಿದಿದೆ.

ಜನಸಂಖ್ಯಾ ಸ್ಫೋಟದಿಂದ ಈಗಾಗಲೇ ಒತ್ತಡ ಎದುರಿಸುತ್ತಿರುವ ಬಾಂಗ್ಲಾದೇಶ, ಭಾರತ, ಆಫ್ರಿಕಾ ಖಂಡದ ಹಲವು ದೇಶಗಳು ಈ ನಕ್ಷೆಯಲ್ಲಿ ಸ್ಥಾನ ಗಳಿಸಿವೆ. ಆದರೆ ವೈದ್ಯಕೀಯ ಸಂಶೋಧನೆಯಲ್ಲಿ ಚೀನಾ ತುಂಬಾ ಮುಂದಿರುವುದರಿಂದ ಅದು ದಟ್ಟ ಜನಸಂದಣಿಯನ್ನು ಎದುರಿಸಿದರೂ ಈ ನಕ್ಷೆಯಲ್ಲಿ ಸೇರಿಲ್ಲ. ಮನುಷ್ಯ-
ವನ್ಯಜೀವಿಗಳ ಸಂಪರ್ಕ, ಸಲೀಸಾಗಿರುವ ಸಾರಿಗೆ ಸಂಪರ್ಕ ಹೆಚ್ಚಳ, ತೀವ್ರ ಕಾಡುನಾಶ, ದಟ್ಟ ಜನಸಂದಣಿ, ನೈರ್ಮಲ್ಯದ ಕಡೆಗೆ ಹೆಚ್ಚು ಗಮನ ಕೊಟ್ಟಿರದ ದೇಶಗಳು, ಹಾಗೆಯೇ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಅವ್ಯವಸ್ಥೆ ಯಾಗಿರುವ ದೇಶಗಳು ಸಾಂಕ್ರಾಮಿಕ ರೋಗಗಳಿಗೆ ಬಹು ಬೇಗ ಗುರಿಯಾಗುತ್ತವೆಯಲ್ಲದೆ ಜಾಗತಿಕವಾಗಿ ಶೀಘ್ರವೇ ಹರಡಲು ಕಾರಣವಾಗುತ್ತವೆ ಎಂಬುದು ಈಗ ಸ್ಥೂಲವಾಗಿ ತಿಳಿದಿದೆ.

ಗ್ಲೋಬಲ್ ವೈರೋಮ್ ಪ್ರಾಜೆಕ್ಟಿನಲ್ಲಿ ಕೆಲಸ ಮಾಡುತ್ತಿರುವ ತಜ್ಞರು ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ‘ಫಂಡ್ ಕೊಡುವುದರಲ್ಲಿ ಸರ್ಕಾರಗಳಾಗಲೀ ಸಾರ್ವಜನಿಕರಾಗಲೀ ಹಿಡಿತ ಮಾಡಬೇಡಿ. ಮುಂದಿನ ಹತ್ತು ವರ್ಷಗಳಲ್ಲಿ, ಪ್ರಾಣಿಗಳಲ್ಲಿರುವ 16 ಲಕ್ಷ ವೈರಸ್‍ಗಳ ಪೈಕಿ ಶೇ 71ರಷ್ಟು ವೈರಸ್‍ಗಳ ಪಂಚಾಂಗವನ್ನು ಬಿಚ್ಚಿಡುತ್ತೇವೆ’ ಎಂದಿದ್ದಾರೆ. ಈ ಮಹತ್ಕಾರ್ಯಕ್ಕೆ ತಗಲುವ ಖರ್ಚು ಭಾರತದ ಲೆಕ್ಕದಲ್ಲಿ ₹ 8,840 ಕೋಟಿ ಅಷ್ಟೇ ಎಂದಿದ್ದಾರೆ. ಬಹುಶಃ ಜಾಗತಿಕ ಮಟ್ಟದಲ್ಲಿ ಇದೇನೂ ದೊಡ್ಡ ಮೊತ್ತವಲ್ಲ. 2009ರಲ್ಲಿ ಎಚ್-1ಎನ್-1 ರೋಗ ನಿಯಂತ್ರಣಕ್ಕಾಗಿ ಅಪಾರ ಹಣ ಖರ್ಚು ಮಾಡಿರುವುದನ್ನು ಗಮನಿಸಿದರೆ, ಇದು ನಗಣ್ಯ ಎಂಬುದನ್ನು ಜನಸಾಮಾನ್ಯರೇ ಒಪ್ಪುತ್ತಾರೆ. ಒಂದರ್ಥದಲ್ಲಿ ರೋಗಕಾರಕ ವೈರಸ್‍ಗಳ ಆಶ್ರಯಜೀವಿಗಳನ್ನು ಜಾಲಾಡಿ, ವೈರಸ್‍ಗಳ ಅಡಗುತಾಣ ಪತ್ತೆಹಚ್ಚುವ ನೇರ ಕ್ರಮ, ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಗಂಡಾಂತರ ತಡೆಗೆ ಪೂರ್ವಸಿದ್ಧತೆ.

1918ರಲ್ಲಿ ಜಗತ್ತಿನ ಬಹು ಭಾಗಗಳಲ್ಲಿ ಹರಡಿದ ಫ್ಲೂ ಬಗ್ಗೆ ಆ ಮೊದಲು ಏನೂ ತಿಳಿದಿರಲಿಲ್ಲ. ಆ ಕಾಲಕ್ಕೆ ಅದು ಕೂಡ ‘ಎಕ್ಸ್’ ಎಂಬ ಪಟ್ಟಿಗೇ ಸೇರಿತ್ತು. ಅದು ಅತಿಯಾಗಿ ಹರಡಿದ ಮೇಲೆಯೇ ಅದರ ಪೂರ್ವಾಪರ ಹುಡುಕಿದ್ದು. ಏಡ್ಸ್ ಕಾಯಿಲೆ ಜಗತ್ತಿಗೆ ಈಗ ಪರಿಚಯವಾಗಿದೆ. ಮಧ್ಯ ಆಫ್ರಿಕಾದಲ್ಲಿ ಚಿಂಪಾಂಜಿಯ ಸಂಪರ್ಕಕ್ಕೆ ಮನುಷ್ಯ ಬಂದಾಗ, ವೈರಸ್ ಅಲ್ಲಿಂದ ಮನುಷ್ಯನ ಮೇಲೆ ಎರಗಿತ್ತು. ಮುಂದೆ ಲೈಂಗಿಕ ಸಂಪರ್ಕಗಳಿಂದ ಒಬ್ಬರಿಂದ ಒಬ್ಬರಿಗೆ ದಾಟಿತು. ಈಗಲೂ ಇದರಿಂದ ಜಾಗತಿಕವಾಗಿ ನಾಲ್ಕು ಕೋಟಿ ಮಂದಿ ನರಳುತ್ತಿದ್ದಾರೆ. ಲಸಿಕೆ ಲಭ್ಯವಿಲ್ಲ. ಒಂದುವೇಳೆ ಮನುಷ್ಯ ಮತ್ತು ವನ್ಯಜೀವಿಗಳ ಸಂಪರ್ಕದಿಂದ ಆಗಬಹುದಾದ ಅನಾಹುತಗಳ ಬಗ್ಗೆ ಬಹು ಗಂಭೀರ ಶೋಧನೆಗಳಾಗಿದ್ದರೆ ಇಂಥ ರೋಗವನ್ನು ನಿಭಾಯಿಸಬಹುದಾಗಿತ್ತು. ಹಾಗೆಯೇ ಫ್ಲೂಗೂ. ಸಾರ್ವತ್ರಿಕ ಲಸಿಕೆ ತಯಾರಿಕೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಸಂಶೋಧನೆಗೆ ಒತ್ತುಕೊಟ್ಟಿದೆ. 2018ರಲ್ಲಿ ಫ್ಲೂ ಬಾಧಿಸಿದ ಒಂಬತ್ತು ಲಕ್ಷ ರೋಗಿಗಳು ಅಮೆರಿಕದಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಸಮುದಾಯದ ನಡುವೆಯೇ ಫ್ಲೂ ವೈರಸ್ ಈಗಲೂ ಹರಿದಾಡುತ್ತಿದೆ.

ಇಂಥ ಕ್ಲಿಷ್ಟ ಸಮಯದಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ವಿಶ್ವ ಆರೋಗ್ಯ ಸಂಸ್ಥೆಗೆ ನೀಡುತ್ತಿದ್ದ ದೇಣಿಗೆಯನ್ನು ನಿಲ್ಲಿಸುವುದಾಗಿ ಘೋಷಿಸಿದಾಗ ಜಗತ್ತಿನ ಪ್ರಜ್ಞಾವಂತರು ಇದನ್ನು ತೀವ್ರವಾಗಿ ಖಂಡಿಸಿದರು. ಕಳೆದ ವರ್ಷ ಅಮೆರಿಕ ಒಂದೇ 40 ಕೋಟಿ ಡಾಲರನ್ನು (ಸುಮಾರು ₹ 2,946 ಕೋಟಿ) ದೇಣಿಗೆಯಾಗಿ ಕೊಟ್ಟಿದೆ. ಎಂಟು ತಿಂಗಳ ಅವಧಿಯಲ್ಲಿ ಕೋವಿಡ್-19ರಿಂದ ಅಮೆರಿಕದಲ್ಲಿ ಸತ್ತವರ ಸಂಖ್ಯೆ ಎರಡೂಕಾಲು ಲಕ್ಷ. ಈ ಮಧ್ಯೆ ಯಾವುದೇ ದೇಶ ಕೋವಿಡ್-19ಕ್ಕೆ ಲಸಿಕೆ ಕಂಡುಹಿಡಿಯಲಿ, ಅದು ಜಗತ್ತಿನ ಎಲ್ಲ ರಾಷ್ಟ್ರಗಳಿಗೂ ತಲಪಬೇಕೆಂಬುದು ವಿಶ್ವ ಆರೋಗ್ಯ ಸಂಸ್ಥೆಯ ಆಶಯ. ಇಂಥ ಸಂದರ್ಭದಲ್ಲಿ ಸ್ವಾಮ್ಯವನ್ನು ಮಂದೆ ಇಟ್ಟುಕೊಂಡು ಹಣ ಮಾಡುವುದು ಸರಿಯಲ್ಲ ಎಂಬ ತನ್ನ ನಿಲುವನ್ನೂ ಪ್ರಕಟಿಸಿದೆ. ಈ ಮಧ್ಯೆ ನಾರ್ವೆಯ ಮಾಜಿ ಪ್ರಧಾನಿ ಹಾಗೂ ಜಾಗತಿಕ ಸಿದ್ಧತಾ ಉಸ್ತುವಾರಿ ಮಂಡಲಿಯ ಉಪಾಧ್ಯಕ್ಷೆ ಗ್ರೋ ಬ್ರಾಟ್‍ಲೆಂಡ್ ಇನ್ನೊಂದು ಅನುಷ್ಠಾನಯೋಗ್ಯ ಉಪಾಯವೊಂದನ್ನು ಹೇಳಿದ್ದಾರೆ. ಅದು ಪ್ರತೀ ದೇಶದ, ಪ್ರತೀ ಪ್ರಜೆಯೂ ವರ್ಷಕ್ಕೆ ಐದು ಡಾಲರ್‌ನಂತೆ (368 ರೂಪಾಯಿ) ಐದು ವರ್ಷ ದೇಣಿಗೆ ಕೊಟ್ಟರೂ ಸಾಕು, ಮುಂದಿನ ಐದು ವರ್ಷಗಳಲ್ಲಿ ಯಾವುದೇ ವೈರಸ್ ಕಾಯಿಲೆ ಹರಡುವುದನ್ನು ತಡೆಯಲು, ಲಸಿಕೆಯನ್ನು ಕಂಡುಹಿಡಿಯಲು ಈ ನಿಧಿ ನೆರವಾಗುತ್ತದೆ. ಬಹುಶಃ ಯಾವುದೇ ದೇಶದ ಪ್ರಜೆಗೂ ಈ ಮೊತ್ತ ನೀಡಲು ಹೊರೆಯಾಗದು ಎಂಬುದು ಆಕೆ
ನೀಡುವ ಲೆಕ್ಕಾಚಾರ. ಇದು ಅತ್ಯಂತ ಆದರ್ಶ ಯೋಜನೆ  ನಿಜ. ಆದರೆ ಅನುಷ್ಠಾನದ ಪ್ರಶ್ನೆ ಬಂದಾಗ ಇಡೀ ಜಗತ್ತು ಬೆಂಬಲಿಸುತ್ತದೆಯೇ?

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು