ಭಾನುವಾರ, ಅಕ್ಟೋಬರ್ 25, 2020
22 °C
ಅರ್ಥಪೂರ್ಣ ಸುಧಾರಣೆಗಳಿಗೆ ತೆರೆದುಕೊಂಡು ಚುರುಕುತನ ಮೈಗೂಡಿಸಿಕೊಳ್ಳಬೇಕಿದೆ

ವಿಶ್ವಾಸ ಉಳಿಸಿಕೊಳ್ಳುವುದೇ ವಿಶ್ವಸಂಸ್ಥೆ?

ಸುಧೀಂದ್ರ ಬುಧ್ಯ Updated:

ಅಕ್ಷರ ಗಾತ್ರ : | |

UNO

ಇತ್ತೀಚೆಗೆ ನಡೆದ ವಿಶ್ವಸಂಸ್ಥೆಯ ವಾರ್ಷಿಕ ಅಧಿವೇಶನದಲ್ಲಿ, ಸದಸ್ಯ ರಾಷ್ಟ್ರಗಳ ಮುಖ್ಯಸ್ಥರು ವಿಡಿಯೊ ಸಂದೇಶದ ಮೂಲಕ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಅಧಿವೇಶನ ಎರಡು ಕಾರಣಗಳಿಂದ ಮುಖ್ಯವಾಗಿತ್ತು. ಮೊದಲನೆಯದು, ಕೊರೊನಾದ ಕಾರಣದಿಂದ ಜಗತ್ತು ಆರೋಗ್ಯ ಮತ್ತು ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಸಂದರ್ಭ ಇದು. ಎರಡನೆಯದು, ಇದು ವಿಶ್ವಸಂಸ್ಥೆಗೆ 75 ವರ್ಷ ತುಂಬಿದ ಸಂದರ್ಭ ಎಂಬುದು.

ಅಧಿವೇಶನದ ಆರಂಭದಲ್ಲಿ ಮಾತನಾಡಿದ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೊ ಗುಟೆರಸ್, ‘ಈ 75 ವರ್ಷಗಳ ಅವಧಿಯಲ್ಲಿ ಪ್ರಬಲ ರಾಷ್ಟ್ರಗಳ ನಡುವೆ ಮಿಲಿಟರಿ ಸಂಘರ್ಷ ಏರ್ಪಟ್ಟಿಲ್ಲ. ಅನೇಕರು ಭಯಭೀತರಾಗಿದ್ದ ಮೂರನೇ ಮಹಾಯುದ್ಧವನ್ನು ತಪ್ಪಿಸಿರುವುದು ವಿಶ್ವಸಂಸ್ಥೆಯ ದೊಡ್ಡ ಸಾಧನೆ’ ಎಂದರು. ಬಹುಶಃ ಈ ಚಾರಿತ್ರಿಕ ಅಧಿವೇಶನದಲ್ಲಿ ವಿಶ್ವಸಂಸ್ಥೆಯ ಸಾಧನೆಗಳ ಬಗ್ಗೆ ಚರ್ಚೆಯಾಗಲಿ ಎಂಬುದು ಅವರ ಆಶಯವಿದ್ದಿರ ಬೇಕು. ಆದರೆ ಎರಡನೆಯವರಾಗಿ ಮಾತನಾಡಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್, ಆಕ್ಷೇಪಗಳ ಕುರಿತಾಗಿಯೇ ಹೆಚ್ಚು ಮಾತನಾಡಿದರು. ಕೊರೊನಾವನ್ನು ಮತ್ತೊಮ್ಮೆ ‘ಚೀನಾ ವೈರಸ್’ ಎಂದು ಕರೆದು ‘ಕೊರೊನಾ ಸೋಂಕು ಜಗತ್ತನ್ನು ಸಂಕಷ್ಟಕ್ಕೆ ದೂಡಿದೆ. ಚೀನಾ ಇದರ ಹೊಣೆ ಹೊತ್ತುಕೊಳ್ಳಬೇಕು’ ಎಂದರು. ವಿಶ್ವ ಆರೋಗ್ಯ ಸಂಸ್ಥೆ ಮತ್ತು ಚೀನಾ ಸಖ್ಯದ ಬಗ್ಗೆ ಕಿಡಿಕಾರಿದರು.

ಅವರ ನಂತರ ಮಾತನಾಡಿದ ಬಹುತೇಕ ನಾಯಕರು, ವಿಶ್ವಸಂಸ್ಥೆಯ ಕಾರ್ಯವೈಖರಿ ಕುರಿತು ಆಕ್ಷೇಪದ ಮಾತು ಆಡಿದರು. ವಿಶ್ವಸಂಸ್ಥೆಯ ವಿಶ್ವಾಸಾರ್ಹತೆ ಹಾಗೂ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಎದ್ದವು. ಅದರ ಪಕ್ಷಪಾತಿ ಧೋರಣೆ ಹಾಗೂ ಅಸಮರ್ಪಕ ಕಾರ್ಯಶೈಲಿಯ ಬಗ್ಗೆ ಆಕ್ಷೇಪ ಕೇಳಿಬಂದಿತು.

ಹಾಗೆ ನೋಡಿದರೆ, ಈ 75 ವರ್ಷಗಳಲ್ಲಿ ವಿಶ್ವಸಂಸ್ಥೆ ಕೊಂಚವೂ ಬದಲಾಗಿಲ್ಲ. ಅದೇ ಅದರ ಸಮಸ್ಯೆ. ವಿಶ್ವಸಂಸ್ಥೆಗೆ ಅಡಿಗಲ್ಲು ಬಿದ್ದಾಗ, ಯುದ್ಧ ಸೃಷ್ಟಿಸಿದ ಭೀಕರ ವಾತಾವರಣವಿತ್ತು. 1942ರ ಜನವರಿ 1ರಂದು ಅಮೆರಿಕದ ಅಧ್ಯಕ್ಷ ಫ್ರಾಂಕ್ಲಿನ್ ರೂಸ್‌ವೆಲ್ಟ್, ಬ್ರಿಟನ್ ಪ್ರಧಾನಿ ವಿನ್ಸ್‌ಟನ್‌ ಚರ್ಚಿಲ್, ಸೋವಿಯತ್ ನಾಯಕ ಮ್ಯಾಕ್ಸಿಂ ಲಿಟ್ವಿನೋವ್, ಚೀನಾದ ಟಿ.ವಿ.ಸೂಂಗ್ ಸೇರಿ ‘ಎಲ್ಲ ದೇಶಗಳ ಜನ ಭಯದಿಂದ ಮುಕ್ತರಾಗಿ ಬದುಕುವ ವಾತಾವರಣ ನಿರ್ಮಿಸಬೇಕು’ ಎಂಬ ಘೋಷಣೆಗೆ ಸಹಿ ಹಾಕಿದರು. ಮರುದಿನ ಇಟಲಿ, ಜರ್ಮನಿ ಹಾಗೂ ಜಪಾನ್ ವಿರುದ್ಧ ಹೋರಾಡುತ್ತಿದ್ದ ಉಳಿದ 22 ರಾಷ್ಟ್ರಗಳ ಪ್ರತಿನಿಧಿಗಳು ಆ ಘೋಷಣಾ ಪತ್ರಕ್ಕೆ ಸಹಿ ಹಾಕಿದರು. ಹೀಗೆ ಒಟ್ಟು 26 ರಾಷ್ಟ್ರಗಳು ಒಟ್ಟಾಗಿ ನಿಂತವು. ಅದನ್ನು ರೂಸ್‌ವೆಲ್ಟ್ ‘ವಿಶ್ವಸಂಸ್ಥೆ’ ಎಂದು ಕರೆದರು. ನಂತರ 1943ರ ಡಿಸೆಂಬರ್ 1ರಂದು ರೂಸ್‌ವೆಲ್ಟ್, ಚರ್ಚಿಲ್ ಮತ್ತು ಸ್ಟಾಲಿನ್ ಇರಾನಿನ ರಾಜಧಾನಿಯಲ್ಲಿ ಭೇಟಿಯಾದರು. ಯುದ್ಧದ ಬಳಿಕ ಶಾಂತಿ ಸ್ಥಾಪನೆಯ ಸಲುವಾಗಿ ಏನೆಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು, ಎಲ್ಲ ದೇಶಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗಬಲ್ಲ ಒಂದು ಸಂಸ್ಥೆಯ ಅಗತ್ಯವೆಷ್ಟು ಎಂಬ ಬಗ್ಗೆ ಚರ್ಚೆಗಳು ನಡೆದವು. ಶಾಂತಿ ಸ್ಥಾಪನೆ ವಿಶ್ವಸಂಸ್ಥೆಯ ಮೂಲ ಧ್ಯೇಯವಾಯಿತು. ಅದರ ಜೊತೆಯಲ್ಲಿ ಇತರ ಬಾಧ್ಯತೆಗಳೂ ಸೇರಿಕೊಂಡವು. ಒಂದಿಷ್ಟು ಧ್ಯೇಯಗಳನ್ನು ಇಟ್ಟುಕೊಂಡು 1945ರ ಅಕ್ಟೋಬರ್ 24ರಂದು ವಿಶ್ವಸಂಸ್ಥೆ ಅಸ್ತಿತ್ವಕ್ಕೆ ಬಂತು. ಆಗ 50 ದೇಶಗಳು ಜೊತೆಯಾಗಿದ್ದವು.

ಆದರೆ ಸಾಂಸ್ಕೃತಿಕವಾಗಿ, ರಾಜಕೀಯವಾಗಿ, ಆರ್ಥಿಕವಾಗಿ ಭಿನ್ನ ಸ್ತರದಲ್ಲಿರುವ ದೇಶಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವುದು ಸುಲಭದ ಸಂಗತಿಯಲ್ಲ ಎಂಬುದು ವಿಶ್ವಸಂಸ್ಥೆಯ ಸ್ಥಾಪಕ ನಾಯಕರಿಗೆ ತಿಳಿದಿತ್ತು. ಮೊದಲ ಮಹಾಸಮರದ ಬಳಿಕ ಸ್ಥಾಪನೆಯಾಗಿದ್ದ ‘ಲೀಗ್ ಆಫ್ ನೇಷನ್ಸ್’ ಎರಡನೇ ಮಹಾಸಮರವನ್ನು ತಡೆಯಲು ವಿಫಲವಾಗಿತ್ತು. ಹಾಗಾಗಿಯೇ ವಿಶ್ವಸಂಸ್ಥೆ ಸ್ಥಾಪನೆಯಾದಾಗ ಅದಕ್ಕೆ ಭದ್ರತಾ ಮಂಡಳಿ ಎಂಬ ಪ್ರಬಲ ಅಂಗವನ್ನು ಜೋಡಿಸಲಾಯಿತು. ಎರಡನೇ ಮಹಾಸಮರದಲ್ಲಿ ವಿಜಯಿಯಾದ ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್, ರಷ್ಯಾ ಹಾಗೂ ಚೀನಾವು ಭದ್ರತಾ ಮಂಡಳಿಯಲ್ಲಿ ಕಾಯಂ ಸ್ಥಾನ ಪಡೆದವು.

ಕಾಲ ಸರಿದಂತೆ ಭದ್ರತಾ ಮಂಡಳಿಯ ಕಾಯಂ ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಯ ಎಲ್ಲ ನಿರ್ಣಯಗಳನ್ನು ತಮ್ಮ ಹಿತಾಸಕ್ತಿಗೆ ಪೂರಕವಾಗಿ ನೋಡಲು ಆರಂಭಿಸಿದವು. ವಿಟೊ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡವು. ಅದು ಆಕ್ಷೇಪಕ್ಕೆ ಕಾರಣವಾಯಿತು. ಅಷ್ಟಲ್ಲದೆ, ಈ ರಾಷ್ಟ್ರಗಳು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಆಯ್ಕೆಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಮತ್ತು ವಿಶ್ವಸಂಸ್ಥೆಗೆ ಹೆಚ್ಚಿನ ದೇಣಿಗೆ ನೀಡುತ್ತವೆ. ಆ ಕಾರಣದಿಂದಲೇ ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ ಕಾಯಂ ಸದಸ್ಯ ರಾಷ್ಟ್ರಗಳ ಕುರಿತು ಮೃದು ಧೋರಣೆ ತಳೆಯುತ್ತಾರೆ ಎಂಬ ಆರೋಪ ಕೇಳಿಬಂತು.

ವಿಶ್ವಸಂಸ್ಥೆಯ ಅಸಮರ್ಪಕ ಕಾರ್ಯಶೈಲಿ ಟೀಕೆಗೆ ಗುರಿಯಾಯಿತು. ಸಂಸ್ಥೆಯೊಳಗೇ ಉದ್ಭವಿಸುವ ಆಂತರಿಕ ಬಿಕ್ಕಟ್ಟನ್ನು ಶಮನಗೊಳಿಸುವುದು ವಿಶ್ವಸಂಸ್ಥೆಗೆ ಸಾಧ್ಯವಾಗಲಿಲ್ಲ. 2003ರಲ್ಲಿ ಇರಾಕ್ ಮೇಲೆ ಅಮೆರಿಕ ಯುದ್ಧ ಸಾರಿದಾಗ ಅದು ಏಕಪಕ್ಷೀಯ ನಿರ್ಧಾರವಾಗಿತ್ತು. ವಿಶ್ವಸಂಸ್ಥೆ ಅನುಮೋದಿಸಿದ ಗಡಿಯನ್ನು ದಾಟಿ ಕ್ರಿಮಿಯಾವನ್ನು ರಷ್ಯಾ ವಶಕ್ಕೆ ತೆಗೆದುಕೊಂಡಾಗ ವಿಶ್ವಸಂಸ್ಥೆ ಅಸಹಾಯಕತನ ಪ್ರದರ್ಶಿಸಿತು. ವಿಶ್ವಸಂಸ್ಥೆ ದಿಗ್ಬಂಧನ ಹೇರಿದರೂ ಉತ್ತರ ಕೊರಿಯಾ ಅಣ್ವಸ್ತ್ರ ಪರೀಕ್ಷೆಯ ಪ್ರಯತ್ನಗಳನ್ನು ಬಿಡಲಿಲ್ಲ, ತೆರೆಮರೆಯಲ್ಲಿ ಚೀನಾ ಅದರ ಬೆಂಬಲಕ್ಕೆ ನಿಂತಿತು. ಪರಿಸರಕ್ಕೆ ಮಾರಕ ಎನ್ನಲಾದ ಚೀನಾದ ಬೆಲ್ಟ್ ಆ್ಯಂಡ್‌ ರೋಡ್ ಯೋಜನೆ, ಭಾರತದ ಗಡಿಯಲ್ಲಿ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಅದು ತೋರುತ್ತಿರುವ ವಿಸ್ತರಣಾ ದಾಹವನ್ನು ವಿಶ್ವಸಂಸ್ಥೆ ಪ್ರಶ್ನಿಸುವುದನ್ನೇ ಮರೆಯಿತು. ಬಾಂಗ್ಲಾದೇಶದಲ್ಲಿ ಪಾಕಿಸ್ತಾನ ನಡೆಸಿದ ಜನಾಂಗೀಯ ಹತ್ಯೆಯ ವೇಳೆ, ಶ್ರೀಲಂಕಾದ ಅಂತರ್ಯುದ್ಧದ ಸಂದರ್ಭದಲ್ಲಿ, ಟಿಬೆಟ್, ತೈವಾನ್ ಮತ್ತು ಬ್ಯಾಂಕಾಕ್‍ನಲ್ಲಿ ಚೀನಾ ದೌರ್ಜನ್ಯ ಎಸಗಿದಾಗ ವಿಶ್ವಸಂಸ್ಥೆ ಯಾವ ಕಠಿಣ ನಿಲುವನ್ನೂ ತೆಗೆದುಕೊಳ್ಳಲಿಲ್ಲ. ಪ್ರತಿವರ್ಷ ವಿಶ್ವಸಂಸ್ಥೆಯ ಅಧಿವೇಶನದಲ್ಲಿ ಹಲವು ವಿಷಯಗಳು ಚರ್ಚೆಗೆ ಬಂದು ಕೊನೆಯಲ್ಲಿ ನಿರ್ಣಯವನ್ನು ಅಂಗೀಕರಿಸಲಾಗುತ್ತದೆ ನಿಜ. ಆದರೆ ಆ ನಿರ್ಣಯಗಳು ನಮ್ಮ ಕನ್ನಡ ಸಾಹಿತ್ಯ ಸಮ್ಮೇಳನ ಅಂಗೀಕರಿಸುವ ನಿರ್ಣಯಗಳಂತೆ ಕಡತಕ್ಕೆ ಸೀಮಿತ
ವಾಗುತ್ತವೆ. ಈ ಎಲ್ಲ ಅಂಶಗಳೂ ವಿಶ್ವಸಂಸ್ಥೆಯ ವಿಶ್ವಾಸಾರ್ಹತೆಯನ್ನು ಕಸಿದವು.

ವಿಶ್ವಸಂಸ್ಥೆ ಆರಂಭವಾದಾಗ ಸದಸ್ಯ ರಾಷ್ಟ್ರಗಳ ಸಂಖ್ಯೆ ಕಡಿಮೆಯಿತ್ತು. ಇಂದು 193 ಸದಸ್ಯ ರಾಷ್ಟ್ರಗಳಿವೆ. ಅದರ ಮುಂದಿರುವ ಆದ್ಯತೆಗಳು, ಸವಾಲುಗಳು ಬದಲಾಗಿವೆ. ರಾಷ್ಟ್ರಗಳ ಬಲಾಬಲದಲ್ಲಿ ವ್ಯತ್ಯಾಸವಾಗಿದೆ. ಜಾಗತಿಕವಾಗಿ ಮಹತ್ವದ ಪಾತ್ರ ನಿರ್ವಹಿಸಬಲ್ಲ ದೇಶಗಳು ಉದಯಿಸಿವೆ. ಆದರೂ ಭದ್ರತಾ ಮಂಡಳಿಯ ಸಂರಚನೆ ಮಾತ್ರ ಹಾಗೆಯೇ ಇದೆ! ಆ ಕಾರಣದಿಂದಲೇ ಪ್ರಧಾನಿ ನರೇಂದ್ರ ಮೋದಿ ‘ವಿಶ್ವಸಂಸ್ಥೆಯ ಬೆಳವಣಿಗೆ ಮತ್ತು ಬಲವರ್ಧನೆಗೆ ಅಪಾರ ಕೊಡುಗೆ ನೀಡುತ್ತಿರುವ ಭಾರತವನ್ನು, ಜಗತ್ತಿಗೆ ಸಂಬಂಧಿಸಿದ ಆಗುಹೋಗುಗಳ ಕುರಿತು ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಯಿಂದ ಎಷ್ಟು ದಿನ ದೂರ ಇಡುತ್ತೀರಿ?’ ಎಂದು ನೇರವಾಗಿಯೇ ಕೇಳಿದ್ದಾರೆ. ಭೌಗೋಳಿಕವಾಗಿ ಎಲ್ಲ ಭಾಗಗಳ ಪ್ರತಿನಿಧಿತ್ವ ಭದ್ರತಾ ಮಂಡಳಿಯಲ್ಲಿ ಇರುವಂತೆ ನೋಡಿಕೊಳ್ಳದಿದ್ದರೆ ಮತ್ತು ವಿಟೊ ಅಧಿಕಾರ ತೆಗೆದು ಬಹುಮತದ ನಿರ್ಣಯಕ್ಕೆ ಮನ್ನಣೆ ದೊರೆಯುವ ವ್ಯವಸ್ಥೆ ಬಾರದಿದ್ದರೆ, ಏಕಪಕ್ಷೀಯ ವರ್ತನೆಯ ಆರೋಪದಿಂದ ವಿಶ್ವಸಂಸ್ಥೆ ಹೊರಬರಲಾರದು.

ನಿಜ, ವಿಶ್ವಸಂಸ್ಥೆಯಂತಹ ಒಂದು ಸಂಸ್ಥೆಯ ಅಗತ್ಯ ಜಗತ್ತಿಗಿದೆ. ಅದು ಸದಸ್ಯ ರಾಷ್ಟ್ರಗಳಿಗೆ ತನ್ನ ಸಮಸ್ಯೆ ಹಾಗೂ ಸಂಕಟ ಹೇಳಿಕೊಳ್ಳಲು ವೇದಿಕೆಯನ್ನು ಒದಗಿಸಿದೆ. ಆದರೆ ಅರ್ಥಪೂರ್ಣ ಸುಧಾರಣೆಗಳಿಗೆ ತೆರೆದುಕೊಳ್ಳದಿದ್ದರೆ ವಿಶ್ವಸಂಸ್ಥೆ ವಿಶ್ವಾಸ ಕಳೆದುಕೊಳ್ಳುತ್ತದೆ. ಇದೀಗ ಕೊರೊನಾದಿಂದಾಗಿ ಹೊಸ ವಾಸ್ತವಕ್ಕೆ ಜಗತ್ತು ಒಗ್ಗಿಕೊಳ್ಳುತ್ತಿರುವಾಗ, ವಿಶ್ವಸಂಸ್ಥೆಯೂ ಚುರುಕುತನ ಮೈಗೂಡಿಸಿಕೊಳ್ಳಬೇಕಿದೆ. ಎಪ್ಪತ್ತೈದರ ಮೈಲುಗಲ್ಲು ಅಂತಹ ಬದಲಾವಣೆಗೆ ನಾಂದಿ ಹಾಡೀತೇ ನೋಡಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು