ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫ್ರಾನ್ಸ್‌ನಲ್ಲಿ ಹಳದಿ ನಡುವಂಗಿಯ ಹರತಾಳ: ಭಾರತಕ್ಕೇನು ಪಾಠ

ಫ್ರಾನ್ಸ್‌ನಲ್ಲಿ ಆಗುತ್ತಿರುವ ಬೆಳವಣಿಗೆಯಲ್ಲಿ ಭಾರತದ ನಾಯಕರಿಗೂ ಪಾಠವಿದೆ
Last Updated 21 ಡಿಸೆಂಬರ್ 2018, 1:54 IST
ಅಕ್ಷರ ಗಾತ್ರ

ಕಳೆದ ಕೆಲವು ವಾರಗಳಿಂದ ಫ್ರಾನ್ಸ್‌ನಲ್ಲಿ ಪ್ರತಿಭಟನೆಯೊಂದು ನಡೆಯುತ್ತಿದೆ. ಮೊದಲಿಗೆ ನವೆಂಬರ್ 17ರಂದು ಫ್ರಾನ್ಸ್ ಜನ ಸ್ವಯಂಪ್ರೇರಿತರಾಗಿ ಹಳದಿನಡುವಂಗಿ ತೊಟ್ಟು ರಸ್ತೆಗಿಳಿದಿದ್ದರು. ತಮ್ಮ ವಾಹನಗಳನ್ನು ಹೆದ್ದಾರಿಗಳಲ್ಲಿ ತಾಸುಗಟ್ಟಲೆ ನಿಲ್ಲಿಸಿ ಪ್ರತಿಭಟಿಸಿ
ದರು. ಈ ಗುಂಪಿಗೆ ನಾಯಕರಾರೂ ಇರಲಿಲ್ಲ.

ಯಾವುದೇ ನೋಂದಾಯಿತ ಸಂಘಟನೆ ಈ ಹರತಾಳಕ್ಕೆ ಕರೆ ಕೊಟ್ಟಿರಲಿಲ್ಲ. ಕಳೆದ ಮೇ ತಿಂಗಳಿನಲ್ಲಿ ಮ್ಯಾಕ್ರನ್‌ ಆಡಳಿತದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಣ್ಣಗೆ ಎದ್ದ ಆಕ್ರೋಶ, ಆರು ತಿಂಗಳ ಅವಧಿಯಲ್ಲಿ ಹಿರಿದಾಗಿ ಬೆಳೆದು ಜನ ರಸ್ತೆಗಿಳಿಯುವಂತೆ ಮಾಡಿತ್ತು. ಪ್ಲಕಾರ್ಡುಗಳಲ್ಲಿ ಮ್ಯಾಕ್ರನ್ ರಾಜೀನಾಮೆ ನೀಡಬೇಕು ಎಂಬ ಆಗ್ರಹವಿತ್ತು. ಎರಡು ವರ್ಷಗಳ ಹಿಂದೆ ಜನಪ್ರಿಯತೆಯ ಉತ್ತುಂಗಕ್ಕೇರಿದ್ದ ಮ್ಯಾಕ್ರನ್‌, ಅದೇ ವೇಗದಲ್ಲಿ ಜನಮಾನಸದಿಂದ ದೂರವಾಗಿದ್ದಾರೆ ಎಂಬುದನ್ನು ಪ್ರತಿಭಟನೆ ಧ್ವನಿಸುತ್ತಿತ್ತು. ಇದೀಗ ಪ್ರತಿಭಟನೆ ಹಲವು ನಗರಗಳಿಗೆ ವ್ಯಾಪಿಸಿಕೊಂಡಿದೆ. ಮ್ಯಾಕ್ರನ್‌ ಆಡಳಿತಕ್ಕೆ ಸವಾಲಾಗಿ ಪರಿಣಮಿಸಿದೆ.

ನಿಮಗೆ ನೆನಪಿರಬಹುದು, 2017ರ ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆಯಲ್ಲಿ ಎಮ್ಯಾನುಯಲ್ ಮ್ಯಾಕ್ರನ್ ರಾಜಕೀಯ ಪಂಡಿತರ ಊಹೆ ಸುಳ್ಳು ಮಾಡಿ ಜಯಗಳಿಸಿದವರು. ಅದಾಗ ಅಮೆರಿಕ ಮತ್ತು ಯುರೋಪ್‌ಗಳಲ್ಲಿ ರಾಷ್ಟ್ರೀಯವಾದ ಮುನ್ನೆಲೆಗೆ ಬಂದಿತ್ತು. ಐರೋಪ್ಯ ಒಕ್ಕೂಟ ತೊರೆಯುವ ನಿರ್ಧಾರವನ್ನು ಬ್ರಿಟನ್ ಕೈಗೊಂಡಿತ್ತು. ಸಮಾನತೆ, ಸ್ವಾತಂತ್ರ್ಯ, ಸಹೋದರತ್ವ ಮತ್ತು ಮಾನವ ಹಕ್ಕುಗಳಿಗೆ ಪ್ರಾಶಸ್ತ್ಯ ಕೊಟ್ಟ ಫ್ರಾನ್ಸ್ ಕೂಡ ಸ್ಥಳೀಯರಿಗೆ ಮೊದಲ ಆದ್ಯತೆ ಎಂಬ ನವರಾಷ್ಟ್ರೀಯವಾದದ ಘೋಷಣೆಗೆ ಮೊರೆ ಹೋಯಿತು. ಒಕ್ಕೂಟ ವಿರೋಧಿ ನಿಲುವನ್ನು ಪ್ರತಿಪಾದಿಸುತ್ತಿದ್ದ ಮೆರಿನ್ ಲೆ ಪೆನ್ ಅಧ್ಯಕ್ಷ ಪದವಿಯ ಪ್ರಬಲ ಉಮೇದುವಾರರಾಗಿ ಕಾಣಿಸಿಕೊಂಡಿದ್ದರು.

ತಮ್ಮ ಆಡಳಿತದಲ್ಲಿ ಆರ್ಥಿಕ ಅಧಃಪತನಕ್ಕೆ ಆಸ್ಪದ ಕೊಟ್ಟ, ನಿರುದ್ಯೋಗ ಸಮಸ್ಯೆಗೆ ಅಂಕುಶ ಹಾಕುವಲ್ಲಿ ಸೋತ ಎಡ ಪಕ್ಷಗಳು ಜನಪ್ರಿಯತೆ ಕಳೆದುಕೊಂಡಿದ್ದವು. ಆ ಹೊತ್ತಿನಲ್ಲಿ ಬಲಕ್ಕೂ ಹೊರಳದೆ, ಎಡಕ್ಕೂ ವಾಲದೆ ಮಧ್ಯಮ ಮಾರ್ಗ ಆಯ್ದುಕೊಂಡ ಮ್ಯಾಕ್ರನ್ ನಾಯಕನಾಗಿ ಹೊರಹೊಮ್ಮಿದರು. ಚುನಾವಣೆ ಸನಿಹವಾದಂತೆ ಸೋಷಿಯಲಿಸ್ಟ್ ಮತ್ತು ರಿಪಬ್ಲಿಕನ್ ಪಕ್ಷಗಳು ಮ್ಯಾಕ್ರನ್‌ ಅವರನ್ನು ಬೆಂಬಲಿಸಿದ್ದರಿಂದ ಗೆದ್ದರು.

ಚುನಾವಣೆಯ ಸಂದರ್ಭದಲ್ಲಿ ಮ್ಯಾಕ್ರನ್, ಫ್ರಾನ್ಸ್ ಆರ್ಥಿಕತೆಗೆ ಪುಷ್ಟಿ ತುಂಬಲು ಕೆಲವು ಬದಲಾವಣೆ ತರುವುದಾಗಿ ಹೇಳಿದ್ದರು. ಆಡಳಿತದ ಅನವಶ್ಯಕ ಖರ್ಚುಗಳಿಗೆ ಕಡಿವಾಣ ಹಾಕುವ, ಹೊಸ ನೇಮಕಾತಿಗಳಿಗೆ ತಡೆಯೊಡ್ಡುವ, ನಿವೃತ್ತಿ ವಯೋಮಾನ ಸಡಿಲಿಸುವ, ಉದ್ಯಮಗಳ ಮೇಲಿನ ತೆರಿಗೆ ಕಡಿತಗೊಳಿಸುವ ಬಗ್ಗೆ ಆಶ್ವಾಸನೆ ನೀಡಿದ್ದರು. ಅಧಿಕಾರಕ್ಕೆ ಬಂದ ಮೇಲೆ ಸರ್ಕಾರದ ಬೊಕ್ಕಸ ತುಂಬುವ ಸಲುವಾಗಿ ಮೊದಲಿಗೆ ತೆರಿಗೆ ನೀತಿ ಬಿಗಿಗೊಳಿಸುವ ಕ್ರಮ ಕೈಗೊಂಡರು. 1981ರಲ್ಲಿ ಅಂದಿನ ಸೋಷಿಯಲಿಸ್ಟ್ ಸರ್ಕಾರ 13 ಲಕ್ಷ ಯುರೋಗಿಂತ ಹೆಚ್ಚು ಸಂಪತ್ತು ಉಳ್ಳವರಿಗೆ ಮಾತ್ರ ಆಸ್ತಿ ತೆರಿಗೆಯನ್ನು (ISF) ಜಾರಿಗೆ ತಂದಿತ್ತು. ನಂತರ 86ರಲ್ಲಿ ಅಧಿಕಾರಕ್ಕೆ ಬಂದ ಬಲಪಂಥೀಯ ಸರ್ಕಾರ ಈ ತೆರಿಗೆ ನೀತಿಯನ್ನು ಮಾರ್ಪಡಿಸಿತ್ತು ಮತ್ತು ಜನಾಕ್ರೋಶಕ್ಕೆ ತುತ್ತಾಗಿತ್ತು. ಹಾಗಾಗಿ ನಂತರ ಬಂದ ಎಲ್ಲ ಸರ್ಕಾರಗಳೂ ISF ತೆರಿಗೆ ನೀತಿಗೆ ಅಂಟಿಕೊಂಡಿದ್ದವು. ಆದರೆ ಮ್ಯಾಕ್ರನ್ 2017ರ ಸೆಪ್ಟೆಂಬರ್‌ನಲ್ಲಿ ತೆರಿಗೆ ನೀತಿಯ ಸುಧಾರಣೆಗೆ ಕ್ರಮ ಕೈಗೊಂಡರು ಮತ್ತು IFI ಎಂಬ ಆಸ್ತಿಯ ಗರಿಷ್ಠ ಮೊತ್ತ ಪರಿಗಣಿಸದೇ ಎಲ್ಲ ವಿಧದ ಆಸ್ತಿಗಳಿಗೂ ಏಕರೂಪ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದರು. ಇದನ್ನು ಮಧ್ಯಮವರ್ಗ ತಮ್ಮ ಮೇಲೆ ಹೇರಲಾದ ಹೆಚ್ಚಿನ ಹೊರೆ ಎಂದೇ ಪರಿಗಣಿಸಿತು.

ಜೊತೆಗೆ ಬಂಡವಾಳ ಹೂಡಿಕೆಗೆ ಆದ್ಯತೆ ಕೊಡುವ ನಿಟ್ಟಿನಲ್ಲಿ ಕೆಲವು ಉದ್ಯಮಗಳಿಗೆ ತೆರಿಗೆಯಲ್ಲಿ ವಿಶೇಷ ರಿಯಾಯಿತಿ ನೀಡಲಾಯಿತು. ಇದರಿಂದಾಗಿ ಮ್ಯಾಕ್ರನ್ ‘ಧನಿಕರ ಅಧ್ಯಕ್ಷ’ ಎಂಬ ಅನಿಸಿಕೆ ಬೆಳೆಯಿತು. ಕುಂಠಿತ ಆರ್ಥಿಕ ಪ್ರಗತಿ ಮತ್ತು ಹೆಚ್ಚುತ್ತಿರುವ ನಿರುದ್ಯೋಗ ಜನರ ಹತಾಶೆಯನ್ನು ಹೆಚ್ಚಿಸಿತು. ‘ಕಾರ್ಬನ್ ಟ್ಯಾಕ್ಸ್’ ಹೆಸರಿನಲ್ಲಿ ಏರಿಸಲಾದ ತೈಲದ ಮೇಲಿನ ಸುಂಕ ಜನರನ್ನು ಬಂಡಾಯದ ಹಾದಿಗೆ ತಂದಿತು. ಎಷ್ಟರಮಟ್ಟಿಗೆ ಎಂದರೆ ನವೆಂಬರ್ 24 ಮತ್ತು ಡಿಸೆಂಬರ್ 1ರಂದು ನಡೆದ ಪ್ರತಿಭಟನೆ ಉಗ್ರರೂಪ ತಾಳಿತು. ಹೆದ್ದಾರಿಗಳು ಬಂದ್ ಆದ ಪರಿಣಾಮ, ಸಾರಿಗೆ ವ್ಯವಸ್ಥೆ ಸ್ಥಗಿತಗೊಂಡಿತು. ಡಿಸೆಂಬರ್ 8ರಂದು ನಡೆದ ಪ್ರತಿಭಟನೆಯ ಆಕ್ರೋಶಕ್ಕೆ ಪ್ಯಾರಿಸ್ ಒಂದರಲ್ಲೇ ನೂರು ಕಾರುಗಳು ಭಸ್ಮವಾದವು.

ಕೊನೆಗೆ ಡಿಸೆಂಬರ್ 10ರಂದು ರಾಷ್ಟ್ರ ಉದ್ದೇಶಿಸಿ ಮ್ಯಾಕ್ರನ್ ದೂರದರ್ಶನದಲ್ಲಿ ಮಾತನಾಡಿದರು. ಕನಿಷ್ಠ ವೇತನವನ್ನು ಹೆಚ್ಚಿಸುವ, ಪಾಳಿ ಮೀರಿದ ದುಡಿಮೆಗೆ ನಿರ್ದಿಷ್ಟ ವೇತನ ಮತ್ತು ಆ ಮೊತ್ತಕ್ಕೆ ತೆರಿಗೆ ವಿನಾಯಿತಿ ನೀಡುವ, ವರ್ಷಾಂತ್ಯದ ಬೋನಸ್ ಹಣ ಎಲ್ಲರಿಗೂ ಸಂದಾಯವಾಗುವಂತೆ ನೋಡಿಕೊಳ್ಳುವ ಭರವಸೆ ನೀಡಿದರು. ಪಿಂಚಣಿದಾರರಿಗೆ ಹೆಚ್ಚಿನ ತೆರಿಗೆ ವಿನಾಯಿತಿ ನೀಡುವ ಬಗ್ಗೆ ಆಶ್ವಾಸನೆ ಇತ್ತರು. ಹೊಸ ಕರ ಪದ್ಧತಿಯ ಕುರಿತು ನಾಗರಿಕ ಸಂಸ್ಥೆಗಳು, ಉದ್ಯಮಿಗಳು ಮತ್ತು ಪ್ರತಿಭಟನಕಾರರ ಜೊತೆ ಚರ್ಚಿಸಿ ನಂತರ ಅನುಷ್ಠಾನಗೊಳಿಸುವ ಭರವಸೆ ಇತ್ತರು. ಆದರೂ ಪ್ರತಿಭಟನೆಯ ಕಾವು ಪೂರ್ಣ ಇಳಿದಿಲ್ಲ.

ಫ್ರಾನ್ಸ್‌ನಲ್ಲಿ ಆರಂಭವಾದ ಈ ಹಳದಿ ನಡುವಂಗಿಯ ಪ್ರತಿಭಟನೆ ಆಗ್ರಹ ಬದಲಿಸಿಕೊಂಡು ಇದೀಗ ಇತರ ದೇಶಗಳಿಗೂ ಹರಡಿದೆ. ಬೆಲ್ಜಿಯಂ ಪ್ರಧಾನಿ ಚಾರ್ಲ್ಸ್ ಮೈಕೆಲ್ ರಾಜೀನಾಮೆಗೆ ಆಗ್ರಹಿಸಿ ಅಲ್ಲಿನ ಜನ ದಂಗೆ ಎದ್ದಿದ್ದಾರೆ. ಸರ್ಕಾರದ ಒಟ್ಟಾರೆ ಧೋರಣೆ, ನಿರುದ್ಯೋಗ, ವಲಸೆ ನೀತಿಯಲ್ಲಿರುವ ಲೋಪ ಇವು ಜನರನ್ನು ಬೀದಿಗಿಳಿಯುವಂತೆ ಮಾಡಿವೆ. ಇತ್ತ ಅಮೆರಿಕದಲ್ಲಿ ಹೆಚ್ಚುತ್ತಿರುವ ಆರ್ಥಿಕ ಅಸಮಾನತೆ ಮತ್ತು ನಿರುದ್ಯೋಗದ ವಿರುದ್ಧ ಅಲ್ಲಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಅಮೆರಿಕದ ಶೇಕಡ 63ರಷ್ಟು ಜನ ಕೆಲವೇ ನಗರಗಳಲ್ಲಿ (ಶೇಕಡ 3.5ರಷ್ಟು ಭೂಪ್ರದೇಶದಲ್ಲಿ) ಸಾಂದ್ರಗೊಂಡಿದ್ದಾರೆ. ಅಮೆರಿಕದ ಒಟ್ಟು ಸಂಪತ್ತಿನ ಶೇಕಡ 72ರಷ್ಟು ಜಮೆಯಾಗಿರುವುದು ಈ ನಗರಗಳಲ್ಲೇ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ. ಕಳೆದ ವಾರ ಕೆನಡಾಕ್ಕೂ ಈ ಆಂದೋಲನ ಪಸರಿಸಿದೆ. ಅಕ್ರಮ ವಲಸೆ ತಡೆಗಟ್ಟಬೇಕು, ತೆರಿಗೆ ಕಡಿತಗೊಳಿಸಬೇಕು, ಉದ್ಯೋಗದ ಅಭಾವ ನೀಗಿಸಬೇಕು ಎಂಬ ಆಗ್ರಹದೊಂದಿಗೆ ಜನ ಪ್ರತಿಭಟಿಸುತ್ತಿದ್ದಾರೆ.

ರೋಬೋಟ್‌ಗಳು ಮನುಷ್ಯನ ಕೆಲಸ ಕದಿಯುತ್ತಿರುವ ಕಾಲಘಟ್ಟ ಇದು. ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಗ್ರಾಮೀಣ ಭಾಗಗಳು ಹತಾಶೆಯ ತಾಣಗಳಾಗಿ ಮಾರ್ಪಡುತ್ತಿವೆ. ಶೈಕ್ಷಣಿಕ ಪದವಿ ಇಲ್ಲದ, ಬಂಡವಾಳ ಹೂಡುವ ಸಾಮರ್ಥ್ಯವಿಲ್ಲದ ಸಾಮಾನ್ಯರು ಎಲ್ಲೂ ಸಲ್ಲದವರಾಗಿ ಬಳಲುತ್ತಿರುವುದು ಜಾಗತಿಕ ವಿದ್ಯಮಾನ. ಈ ತಬ್ಬಲಿತನ ವ್ಯಾಪಿಸಿಕೊಂಡಷ್ಟೂ ಹತಾಶೆ, ಆಕ್ರೋಶ ಗಟ್ಟಿಯಾಗುತ್ತಿದೆ. ನಾಯಕನ ಕುರಿತು ನಿರೀಕ್ಷೆ ಬೆಳೆಯುತ್ತಿದೆ. ದೀರ್ಘಕಾಲೀನ ಲಾಭಕ್ಕಿಂತ, ತಕ್ಷಣದ ಸೌಕರ್ಯ ಆದ್ಯತೆಯಾಗಿದೆ.

ಫ್ರಾನ್ಸ್ ವಿಷಯದಲ್ಲೇ ನೋಡುವುದಾದರೆ, ಮ್ಯಾಕ್ರನ್ ತಾವು ರೋಮನ್ ದೇವತೆ ‘ಜ್ಯೂಪಿಟರ್’ ಮಾದರಿಯಲ್ಲಿ ಆಡಳಿತ ಮಾಡುವುದಾಗಿ ಹೇಳಿಕೊಂಡಿದ್ದರು. ಐರೋಪ್ಯ ಒಕ್ಕೂಟದ ಕೊನೆಯ ಆಶಾಕಿರಣವಾಗಿ ಕಂಡಿದ್ದರು. ಜರ್ಮನಿಯ ಏಂಜೆಲಾ ಮರ್ಕೆಲ್ ಬಳಿಕ ಒಕ್ಕೂಟದ ಪ್ರಭಾವಿ ನಾಯಕನ ಸ್ಥಾನಕ್ಕೆ ಏರಿದ್ದರು. ಇದೀಗ ಜನರಿಂದ ದೂರವಿರುವ, ಅಹಂಕಾರಿ ಅಧ್ಯಕ್ಷ ಎಂಬ ವಿಶೇಷಣ ಮ್ಯಾಕ್ರನ್ ಕೊರಳಿಗೆ ಜೋತುಬಿದ್ದಿದೆ. ಅವರ ಬ್ಯಾಂಕಿಂಗ್ ಕ್ಷೇತ್ರದ ಪರಿಣತಿ ಪ್ರಶ್ನಾರ್ಥಕ ಚಿಹ್ನೆಯಾಗಿ ಮಾರ್ಪಟ್ಟಿದೆ.

ತನ್ನ ದೇಶವನ್ನು ಸುಧಾರಣೆಯ ಹಾದಿಯಲ್ಲಿ ಕೊಂಡೊಯ್ಯಲಾಗದ ನಾಯಕ, ಐರೋಪ್ಯ ಒಕ್ಕೂಟವನ್ನು ಮುನ್ನಡೆಸಬಲ್ಲನೇ ಎಂಬ ಪ್ರಶ್ನೆ ಹಿರಿದಾಗಿ ಕಾಣುತ್ತಿದೆ. ಫ್ರಾನ್ಸ್‌ನಲ್ಲಿ ಆಗುತ್ತಿರುವ ಬೆಳವಣಿಗೆ ಮತ್ತು ಮ್ಯಾಕ್ರನ್ ಜನಪ್ರಿಯತೆಯ ಏರಿಳಿತದಲ್ಲಿ ಭಾರತದ ನಾಯಕರಿಗೂ ಪಾಠವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT