ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೀಮೋಲ್ಲಂಘನ | ಕ್ವಾಡ್: ಭಾರತದ ನಿಲುವಿಗೆ ಬಲ ತುಂಬಿತೇ?

ಶೃಂಗಸಭೆಯಲ್ಲಿ ಆಗಬಹುದೆಂದು ನಿರೀಕ್ಷಿಸಿದ್ದೇ ಬೇರೆ, ಆಗಿದ್ದೇ ಬೇರೆ
Last Updated 31 ಮೇ 2022, 19:30 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ಕ್ವಾಡ್ ಶೃಂಗಸಭೆ ಯಲ್ಲಿ ಭಾಗಿಯಾಗಲು ಇತ್ತೀಚೆಗೆ ಟೋಕಿಯೊಕ್ಕೆ ಹೊರಟು ನಿಂತಾಗ, ಈ ಶೃಂಗಸಭೆಯಲ್ಲಿ ಉಕ್ರೇನ್ ವಿಷಯ ಪ್ರಸ್ತಾಪವಾಗಬಹುದು, ರಷ್ಯಾ ಕುರಿತಂತೆ ಭಾರತ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು ಎಂಬ ಒತ್ತಡ ಅಮೆರಿಕದಿಂದ ಬರಬಹುದು ಎನ್ನಲಾಗಿತ್ತು. ರಷ್ಯಾ ವಿರುದ್ಧ ದಿಗ್ಬಂಧನ ಹೇರಿರುವ ಜಪಾನ್ ಮತ್ತು ಆಸ್ಟ್ರೇಲಿಯಾ ಕೂಡ ಅಮೆರಿಕದೊಂದಿಗೆ ಧ್ವನಿ ಸೇರಿಸಬಹುದು, ಹಾಗಾಗಿ ಕ್ವಾಡ್ ಒಕ್ಕೂಟದ ನಾಯಕರನ್ನು ಈ ಮುಖಾಮುಖಿ ಸಭೆಯಲ್ಲಿ ಎದುರಿಸುವುದು ಪ್ರಧಾನಿ ಮೋದಿ ಅವರಿಗೆ ಕಠಿಣವಾಗಬಹುದು ಎಂದು ವಿಶ್ಲೇಷಿಸಲಾಗಿತ್ತು. ಆದರೆ ಅಲ್ಲಿ ಆದದ್ದೇ ಬೇರೆ.

ಉಕ್ರೇನ್ ಮತ್ತು ರಷ್ಯಾದ ವಿಷಯ ಮುಖ್ಯ ಚರ್ಚೆಯ ಭಾಗವಾಗಲಿಲ್ಲ. ಜಂಟಿ ಹೇಳಿಕೆಯಲ್ಲಿ ನುಸುಳಲಿಲ್ಲ. ಕೊರೊನಾ ನಿರ್ವಹಣೆಯ ವಿಷಯದಲ್ಲಿ ಭಾರತಕ್ಕೆ ಮೆಚ್ಚುಗೆ ದೊರೆಯಿತು. ತೈವಾನ್ ಕುರಿತ ಚೀನಾದ ಧೋರಣೆಯ ಬಗ್ಗೆ ಮಾತು ಬಂತು. ಪತ್ರಿಕಾಗೋಷ್ಠಿಯ ವೇಳೆ ಅಮೆರಿಕದ ಅಧ್ಯಕ್ಷ ಜೋ ಬೈಡನ್ ‘ಬಲವಂತದಿಂದ ತೈವಾನ್ ವಶಪಡಿಸಿಕೊಳ್ಳಲು ಚೀನಾ ಮುಂದಾದರೆ, ತೈವಾನ್ ಬೆಂಬಲಕ್ಕೆ ಅಮೆರಿಕ ನಿಲ್ಲಲಿದೆ’ ಎಂದು ಘೋಷಿಸಿದರು. ಶೃಂಗಸಭೆ ಮುಗಿಸಿ ಮಂದಹಾಸದೊಂದಿಗೆ ಪ್ರಧಾನಿ ಮೋದಿ ಭಾರತಕ್ಕೆ ಹಿಂದಿರುಗಿದರು.

ಹಾಗಾದರೆ, ರಷ್ಯಾ ಕುರಿತ ಭಾರತದ ನಿಲುವಿನ ಬಗ್ಗೆ ಚರ್ಚೆ ಏಕೆ ನಡೆಯಲಿಲ್ಲ? ಜಪಾನ್ ಮತ್ತು ಆಸ್ಟ್ರೇಲಿಯಾದ ವಿಷಯ ಬಿಡಿ, ಉಕ್ರೇನ್ ಮೂಲಕ ರಷ್ಯಾಕ್ಕೆ ಪಾಠ ಕಲಿಸಲು ಟೊಂಕಕಟ್ಟಿ ನಿಂತಿರುವ ಅಮೆರಿಕದ ಅಧ್ಯಕ್ಷ ಬೈಡನ್ ಅವರಾದರೂ ಭಾರತದ ನಿಲುವನ್ನು ಟೀಕಿಸಬೇಕಿತ್ತು. ‘ನೀವು ಅಮೆರಿಕ ಮತ್ತು ರಷ್ಯಾ ಎರಡರ ಜೊತೆಗೂ ಉತ್ತಮ ಬಾಂಧವ್ಯ ಉಳಿಸಿಕೊಳ್ಳಲು ಸಾಧ್ಯವಿಲ್ಲ’ ಎಂಬ ಕಠಿಣ ಮಾತು ಆಡಬೇಕಿತ್ತು. ಆದರೆ ಹಾಗಾಗಲಿಲ್ಲ.

ಈ ಹಿಂದೆ ವಿಶ್ವಸಂಸ್ಥೆಯಲ್ಲಿ ರಷ್ಯಾ ವಿರುದ್ಧದ ನಿರ್ಣಯಗಳಿಗೆ ಮತ ಹಾಕದೇ ಭಾರತ ತಟಸ್ಥ ನಿಲುವು ಪ್ರಕಟಿಸಿದಾಗ, ಭಾರತ ಚಂಚಲ ನಿಲುವು ಹೊಂದಿದೆ ಎಂದು ಬೈಡನ್ ಪ್ರತಿಕ್ರಿಯಿಸಿದ್ದರು. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತವು ಉಕ್ರೇನ್ ಪರ ನಿಲ್ಲಬೇಕು, ಭಾರತದ ತಟಸ್ಥ ನಿಲುವು ಮುಂದೆ ದುಬಾರಿಯಾಗಲಿದೆ, ಭಾರತ ಮತ್ತು ಅಮೆರಿಕದ ನಡುವಿನ ಸಂಬಂಧದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಅಮೆರಿಕದ ಕೆಲವು ಸಂಸದರು ವ್ಯಾಖ್ಯಾನಿಸಿದ್ದರು. ಇದೇ ಅಭಿಪ್ರಾಯ ಭಾರತದ ಒಳಗೂ ಸಣ್ಣಗೆ ಪ್ರತಿಧ್ವನಿಸಿತ್ತು.

ಆದರೆ ಹಿರಿಯಣ್ಣನ ಅಂಗಳದಿಂದ ಎಷ್ಟೇ ಟೀಕೆ, ಒತ್ತಡ ಬಂದರೂ ಭಾರತ ತನ್ನ ನಿಲುವಿನ ಕುರಿತು ಮರುಯೋಚಿಸಲಿಲ್ಲ. ಉಕ್ರೇನ್ ಮತ್ತು ರಷ್ಯಾ ನಡುವಿನ ಬಿಕ್ಕಟ್ಟು ಆ ಎರಡು ದೇಶಗಳು ಸೃಷ್ಟಿಸಿಕೊಂಡದ್ದು, ಮಾತುಕತೆಯ ಮೂಲಕವೇ ಪರಿಹಾರ ಕಂಡುಕೊಳ್ಳಬೇಕು ಎಂಬ ಬಗ್ಗೆ ಭಾರತಕ್ಕೆ ಸ್ಪಷ್ಟತೆಯಿತ್ತು. ಮುಖ್ಯವಾಗಿ ಮೂರು ಕಾರಣಗಳಿಂದಾಗಿ ರಷ್ಯಾವನ್ನು ಬಿಟ್ಟುಕೊಡುವ ಸ್ಥಿತಿಯಲ್ಲಿ ಭಾರತ ಇರಲಿಲ್ಲ. ಮೊದಲನೆಯದು, ರಷ್ಯಾ-ಭಾರತದ ನಡುವಿನ ದಶಕಗಳ ಸಖ್ಯ. ಈ ಹಿಂದೆ ಅಮೆರಿಕವು ಪಾಕಿಸ್ತಾನದಲ್ಲಿ ಮಿಲಿಟರಿ ಆಡಳಿತವನ್ನು ಪ್ರೋತ್ಸಾಹಿಸುತ್ತಾ, ಪಾಕಿಸ್ತಾನದ ಬಗಲಿಗೆ ನಿಂತು ಭಾರತದೊಂದಿಗೆ ಅಂತರವನ್ನು ಕಾಯ್ದುಕೊಂಡಾಗ, 70ರ ದಶಕದಲ್ಲಿ ನಿಕ್ಸನ್ ಮತ್ತು ಕಿಸ್ಸಿಂಜರ್‌ದ್ವಯರು ಚೀನಾದ ಜೊತೆ ಹೆಣೆದುಕೊಳ್ಳುವ ಉಮೇದಿನಲ್ಲಿ ಭಾರತವನ್ನು ಕಡೆಗಣಿಸಿದಾಗ ನಮ್ಮ ಜೊತೆಗೆ ನಿಂತದ್ದು ರಷ್ಯಾ. ಕಾಶ್ಮೀರದ ವಿಷಯ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಪ್ರಸ್ತಾಪವಾಗಿ ಪಾಕಿಸ್ತಾನದ ಪರ ಚೀನಾ ವಕಾಲತ್ತು ವಹಿಸಿದ ಸಂದರ್ಭದಲ್ಲಿ ಬ್ರಿಟನ್, ಅಮೆರಿಕ, ಫ್ರಾನ್ಸ್ ದೇಶಗಳು ತಟಸ್ಥ ನಿಲುವು ತಳೆದಾಗ ತನ್ನ ವಿಟೊ ಅಧಿಕಾರ ಬಳಸಿ ಭಾರತದ ವಿರುದ್ಧ ಯಾವುದೇ ನಿರ್ಣಯ ಊರ್ಜಿತಗೊಳ್ಳದಂತೆ ತಡೆದದ್ದು ರಷ್ಯಾ. ಆ ಸಂಗತಿಗಳನ್ನು ನಾವು ಮರೆಯುವಂತಿರಲಿಲ್ಲ.

ಎರಡನೆಯದು, ಭದ್ರತಾ ಸಹಕಾರ. ನಮ್ಮ ಸೇನೆಗೆ ಬೇಕಾದ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿರು ವುದು, ಹಳೆಯ ಯುದ್ಧಯಂತ್ರಗಳ ದುರಸ್ತಿಗೆ ಬೇಕಾದ ಬಿಡಿ ಭಾಗಗಳನ್ನು ಪೂರೈಸುತ್ತಿರುವುದು ರಷ್ಯಾ. ನಿಜ, ಇದೀಗ ನಾವು ಶಸ್ತ್ರಾಸ್ತ್ರಗಳನ್ನು ಅಮೆರಿಕ, ಫ್ರಾನ್ಸ್, ಇಸ್ರೇಲ್ ದೇಶಗಳಿಂದಲೂ ತರಿಸಿಕೊಳ್ಳುತ್ತಿದ್ದೇವೆ. ಹಾಗಾಗಿ ಸಂಪೂರ್ಣವಾಗಿ ರಷ್ಯಾವನ್ನು ನೆಚ್ಚಿಕೊಳ್ಳ ಬೇಕಿಲ್ಲ. ಆದರೆ ರಷ್ಯಾವನ್ನು ಬಿಟ್ಟುಕೊಡದಿರಲು ಭಾರತ ನಿರ್ಧರಿಸಿದ್ದು ಮುಖ್ಯವಾಗಿ ಚೀನಾದ ದೃಷ್ಟಿಯಿಂದ. ಒಂದೊಮ್ಮೆ ಅಮೆರಿಕವನ್ನು ನೆಚ್ಚಿಕೊಂಡು ರಷ್ಯಾದ ವಿರುದ್ಧ ಭಾರತ ನಿಲುವು ತಳೆದರೆ, ಚೀನಾ ಮತ್ತು ರಷ್ಯಾ ನಡುವಿನ ಬಂಧ ಬಿಗಿಯಾಗಬಹುದು. ಚೀನಾ ಮತ್ತು ಅಮೆರಿಕದ ನಡುವಿನ ಶೀತಲ ಸಮರಕ್ಕೆ ಮತ್ತೊಂದು ಆಯಾಮ ಜೋಡಣೆಯಾಗಬಹುದು. ದೂರದ ಅಮೆರಿಕಕ್ಕೆ ಪಾಠ ಕಲಿಸಲು ಚೀನಾ-ರಷ್ಯಾ ನಿಂತರೆ, ಈ ರಾಷ್ಟ್ರಗಳಿಗೆ ಸನಿಹದಲ್ಲೇ ಇರುವ ಭಾರತ ಪ್ರತೀಕಾರದ ಅಂಗಳವಾಗಬಹುದು ಎಂಬ ವಾಸ್ತವದ ಅರಿವು ನಮಗಿತ್ತು. ಹಾಗಾಗಿಯೇ ಹಿರಿಯಣ್ಣನ ಒತ್ತಡದ ನಡುವೆಯೂ ಭಾರತ ತಟಸ್ಥ ಧೋರಣೆಗೆ ಅಂಟಿಕೊಂಡಿತು.

ಮಿಗಿಲಾಗಿ, ರಷ್ಯಾದ ಜೊತೆ ವ್ಯಾವಹಾರಿಕ ಸಂಬಂಧ ಇಟ್ಟುಕೊಳ್ಳುವ ತನ್ನ ಧೋರಣೆಯನ್ನು ಜಾಗತಿಕ ವೇದಿಕೆಗಳಲ್ಲಿ ಭಾರತ ಸಮರ್ಥಿಸಿಕೊಂಡಿತು. ‘ಕೇವಲ ನಾವಷ್ಟೇ ಅಲ್ಲ, ಪಶ್ಚಿಮ ಯುರೋಪಿನ ರಾಷ್ಟ್ರಗಳು ರಷ್ಯಾದಿಂದ ಭಾರತ ಖರೀದಿಸುವುದಕ್ಕಿಂತ ಹೆಚ್ಚಿನ ಇಂಧನವನ್ನು ಇಂದಿಗೂ ಖರೀದಿಸುತ್ತಿವೆ’ ಎಂದು ಟೀಕೆಗೆ ತಿರುಗೇಟು ನೀಡಿತು. ರಷ್ಯಾ ಮೇಲಿನ ಅವಲಂಬನೆಯನ್ನು ಒಮ್ಮೆಲೇ ಕಡಿದುಕೊಳ್ಳುವುದು ಸಾಧ್ಯವಿಲ್ಲ ಎಂಬುದು ಐರೋಪ್ಯ ರಾಷ್ಟ್ರಗಳಿಗೂ ಅರಿವಾಗತೊಡಗಿತು.
ಅವು ಭಾರತದ ವಿರುದ್ಧ ಮಾತನಾಡಲಿಲ್ಲ. ಮೋದಿ ಅವರು ಇತ್ತೀಚೆಗೆ ಜರ್ಮನಿಗೆ ಭೇಟಿ ಕೊಟ್ಟಾಗ, ರಷ್ಯಾ ಕುರಿತ ಭಾರತದ ಧೋರಣೆಯನ್ನು ಜರ್ಮನಿ ಅನುಮೋದಿಸಿತು. ಒತ್ತಡ ಹೇರಿ ಭಾರತದ ನಿಲುವನ್ನು ಬದಲಿಸಲಾಗದು ಎಂಬುದು ಮನವರಿಕೆಯಾದ ಮೇಲೆ ಅಮೆರಿಕವೂ ಪಟ್ಟು ಸಡಿಲಿಸಿತು. ಹಾಗಾಗಿ ಟೋಕಿಯೊದ ಕ್ವಾಡ್ ಶೃಂಗಸಭೆಯಲ್ಲಿ ರಷ್ಯಾ ಕುರಿತ ಭಾರತದ ನಿಲುವಿನ ಬಗ್ಗೆ ಚರ್ಚೆ ನಡೆಯಲಿಲ್ಲ.

ಹಾಗಾದರೆ ಈ ಬಾರಿಯ ಕ್ವಾಡ್ ಶೃಂಗಸಭೆ ರವಾನಿಸಿದ ಸಂದೇಶವೇನು? ಕ್ವಾಡ್ ಒಕ್ಕೂಟ ರಚಿಸುವ ಸಂದರ್ಭದಲ್ಲಿ ಅಮೆರಿಕ ಮತ್ತು ಜಪಾನ್ ಈ ಒಕ್ಕೂಟವನ್ನು ‘ಏಷ್ಯಾದ ಪ್ರಜಾಪ್ರಭುತ್ವದ ಕಮಾನು’ ಎಂದು ಕರೆದರೆ, ‘ಏಷ್ಯಾದ ನ್ಯಾಟೊ’ ಎಂದು ಚೀನಾ ಕರೆದಿತ್ತು. ಒಕ್ಕೂಟದ ಮುಖ್ಯ ಆಶಯ ಪ್ರಾಂತೀಯವಾಗಿ ಚೀನಾ ಒಡ್ಡುವ ಸವಾಲನ್ನು ಎದುರಿಸುವುದಾಗಿತ್ತು. ಈ ಬಾರಿಯೂ ಆ ಕುರಿತ ಚರ್ಚೆಗಳಾದವು. ಶೃಂಗಸಭೆಯ ಹೊರಗೆ ತೈವಾನ್ ಕುರಿತು ಅಮೆರಿಕದ ಅಧ್ಯಕ್ಷ ಬೈಡನ್ ಮಾತನಾಡಿದರು. ತೈವಾನ್ ಮೇಲೆ ದಾಳಿಗೆ ಮುಂದಾಗಲು ಚೀನಾದ ಸೇನೆ ಸಿದ್ಧತೆ ನಡೆಸುತ್ತಿದೆ ಎಂಬ ಮಾಹಿತಿ ಬಹಿರಂಗಗೊಂಡ ಹಿನ್ನೆಲೆಯಲ್ಲಿ ಬೈಡನ್ ಈ ಮಾತುಗಳನ್ನು ಆಡಿದರೇ? ಅಷ್ಟೇ ಇರಲಾರದು. ಉಕ್ರೇನ್ ಯುದ್ಧದಲ್ಲಿ ರಷ್ಯಾಕ್ಕೆ ಚೀನಾ ಪರೋಕ್ಷವಾಗಿ ಸಹಾಯ ಮಾಡುತ್ತಿದೆ, ಆ ಕಾರಣದಿಂದಲೇ ಆರ್ಥಿಕ ದಿಗ್ಬಂಧನಗಳನ್ನು ರಷ್ಯಾ ತಾಳಿಕೊಳ್ಳಲು ಸಾಧ್ಯವಾಗಿದೆ ಎಂಬ ಮಾತು ಪಶ್ಚಿಮ ಜಗತ್ತಿನಲ್ಲಿ ಕೇಳಿಬರುತ್ತಿದೆ. ಹಾಗಾಗಿ ಒಂದೊಮ್ಮೆ ನೀವು ಅದೇ ಹಾದಿಯಲ್ಲಿ ಮುಂದುವರಿದರೆ, ತೈವಾನ್ ವಿಷಯದಲ್ಲಿ ನಮ್ಮನ್ನು ಎದುರಿಸಬೇಕಾದೀತು ಎಂಬ ಎಚ್ಚರಿಕೆಯೂ ಬೈಡನ್ ಅವರ ಮಾತಿನಲ್ಲಿ ಇರಬಹುದು.

ಭಾರತದ ದೃಷ್ಟಿಯಿಂದ ನೋಡುವುದಾದರೆ, ರಷ್ಯಾದ ಜೊತೆ ಸಂಬಂಧ ಕಾಯ್ದುಕೊಂಡೂ, ಅಮೆರಿಕ ನೇತೃತ್ವದ ಯಾವುದೇ ಒಕ್ಕೂಟದಲ್ಲಿ ಭಾರತ ಆತ್ಮವಿಶ್ವಾಸದಿಂದ ಪಾಲ್ಗೊಳ್ಳಬಹುದು ಎಂಬುದನ್ನು ಈ ಶೃಂಗಸಭೆ ತೋರಿಸಿದೆ. ಕ್ವಾಡ್‌ನಂತಹ ಯಾವುದೇ ಒಕ್ಕೂಟದ ಭಾಗವಾಗಿದ್ದೇವೆ ಎಂದ ಮಾತ್ರಕ್ಕೆ ಭಾರತದ ಆಯ್ಕೆಗಳನ್ನು ಇತರ ರಾಷ್ಟ್ರಗಳು ನಿರ್ಧರಿಸಲು ಸಾಧ್ಯವಿಲ್ಲ ಎಂಬ ಸಂದೇಶ ರವಾನೆಯಾಗಿದೆ. ಉಕ್ರೇನ್ ಯುದ್ಧದ ವಿಷಯದಲ್ಲಿ ಭಾರತದ ತಟಸ್ಥ ನಿಲುವಿನ ಕುರಿತು ಮೊದಲಿಗೆ ಟೀಕೆಗಳು ಬಂದರೂ, ಇದೀಗ ಆ ನಿಲುವು ಪಶ್ಚಿಮ ಜಗತ್ತಿಗೂ ಒಪ್ಪಿತವಾದಂತೆ ಕಾಣುತ್ತಿದೆ. ಭಾರತದ ‘ದೇಶ ಮೊದಲು’ ನೀತಿಗೆ ಹೆಚ್ಚಿನ ಬಲ
ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT