ಮೇ 14ರಂದು ಅಮೆರಿಕ ತನ್ನ ಇಸ್ರೇಲ್ ರಾಯಭಾರ ಕಚೇರಿಯನ್ನು ಜೆರುಸಲೆಮ್ ನಗರಕ್ಕೆ ಸ್ಥಳಾಂತರಿಸಿತು. ನೂತನಕಚೇರಿಯ ಉದ್ಘಾಟನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುತ್ರಿ ಇವಾಂಕಾ, ಅಳಿಯ ಕುಶ್ನರ್ ಅವರು ಅಮೆರಿಕದ ಪ್ರತಿನಿಧಿಗಳಾಗಿ ಭಾಗವಹಿಸಿದ್ದರು. ಇಸ್ರೇಲ್ ಪ್ರಧಾನಿ ನೆತನ್ಯಾಹು, ಉಭಯ ದೇಶಗಳ ರಾಜತಾಂತ್ರಿಕ ಅಧಿಕಾರಿಗಳು ಉಪಸ್ಥಿತರಿದ್ದು, ಐತಿಹಾಸಿಕ ಘಟನೆಯೊಂದಕ್ಕೆ ಸಾಕ್ಷಿಯಾದರು. ಸುದ್ದಿವಾಹಿನಿಗಳು ಈ ಕಾರ್ಯಕ್ರಮವನ್ನು ವರದಿ ಮಾಡುವಾಗ ಪರದೆಯನ್ನು ಇಬ್ಭಾಗ ಮಾಡಿ ಒಂದು ಭಾಗದಲ್ಲಿ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮವನ್ನು, ಮತ್ತೊಂದು ಭಾಗದಲ್ಲಿ ಪ್ಯಾಲೆಸ್ಟೀನ್ ಮೂಲದ ಅರಬ್ಬರು ಗಾಜಾ ಪಟ್ಟಿಯುದ್ದಕ್ಕೂ ನಡೆಸಿದ ‘ಪುನರಾಗಮನ ನಡಿಗೆ’ಯ (ಗ್ರೇಟ್ ರಿಟರ್ನ್ ಮಾರ್ಚ್) ದೃಶ್ಯಗಳನ್ನು ಒಟ್ಟಿಗೇ ಪ್ರಸಾರ ಮಾಡಿದವು. ಆ ವಿವಾದಿತ ಪ್ರದೇಶ ಕುರಿತಾದ ಯಾವುದೇ ಸುದ್ದಿಯನ್ನು ಎರಡೂ ಮಗ್ಗುಲಿನಿಂದ ನೋಡಬೇಕು ಎಂಬುದನ್ನು ಆ ದೃಶ್ಯ ಒತ್ತಿ ಹೇಳುತ್ತಿತ್ತು.

ಅಮೆರಿಕ ತನ್ನ ರಾಯಭಾರ ಕಚೇರಿಯನ್ನು ಜೆರುಸಲೆಮ್ ನಗರಕ್ಕೆ ಸ್ಥಳಾಂತರಿಸಲು ಆಯ್ದುಕೊಂಡ ದಿನ ಪ್ಯಾಲೆಸ್ಟೀನ್ ಪಾಲಿಗೆ ಮತ್ತೊಂದು ರೀತಿಯಲ್ಲಿ ಐತಿಹಾಸಿಕವಾಗಿತ್ತು. ಎಪ್ಪತ್ತು ವರ್ಷಗಳ ಹಿಂದೆ ಅಂದರೆ 1948ರ ಮೇ 14ರಂದು ಇಸ್ರೇಲ್ ‘ಯಹೂದಿ ರಾಷ್ಟ್ರ’ ಎಂಬ ಮಾನ್ಯತೆ ಪಡೆದ ದಿನ. ಮರುದಿನ ಮೇ 15ರಂದು ಆ ಭಾಗದ ಪ್ಯಾಲೆಸ್ಟೀನ್ ಅರಬ್ಬರನ್ನು ಒಕ್ಕಲೆಬ್ಬಿಸಿ, ವಸತಿಗಳನ್ನು ಧ್ವಂಸಮಾಡಲಾಯಿತು. ಅದನ್ನು ಪ್ಯಾಲೆಸ್ಟೀನ್ ಜನ ‘ನಕ್ಭಾ’ (ಮಹಾವಿಪತ್ತು) ಎಂದು ಕರೆಯುತ್ತಾರೆ. ಆ ದಿನ ಅಂದಾಜು7 ಲಕ್ಷ ಪ್ಯಾಲೆಸ್ಟೀನ್ ಅರಬ್ಬರನ್ನು ಇಸ್ರೇಲ್ ಭಾಗದಿಂದ ಹೊರದಬ್ಬಲಾಯಿತು.

ಸಾಮಾನ್ಯವಾಗಿ ಪಶ್ಚಿಮ ದಿಣ್ಣೆ (ವೆಸ್ಟ್ ಬ್ಯಾಂಕ್) ಮತ್ತು ಗಾಜಾ ಪಟ್ಟಿಯಲ್ಲಿರುವ ಪ್ಯಾಲೆಸ್ಟೀನ್ ನಾಗರಿಕರು ‘ನಕ್ಭಾ ದಿನ’ದಂದು ಘೋಷಣೆ ಕೂಗುತ್ತಾ, ಮನೆಯ ಬೀಗದ ಕೈ ಎತ್ತಿಹಿಡಿದು ರಸ್ತೆಗಳಲ್ಲಿ ಸಾಗುತ್ತಾರೆ. ತಮ್ಮನ್ನು ಮನೆಯಿಂದ ಹೊರದಬ್ಬಿ, ಪ್ರವೇಶ ನಿರಾಕರಿಸಲಾಗಿದೆ ಎನ್ನುವುದನ್ನು ಬೀಗದ ಕೈ ಎತ್ತಿಹಿಡಿದು ಹೆಜ್ಜೆಹಾಕುವ ಮೂಲಕ ತೋರಿಸುತ್ತಾರೆ. ಈ ಬಾರಿ ನಕ್ಭಾಕ್ಕೆ 70 ವರ್ಷಗಳು ತುಂಬಿದ್ದರಿಂದ, ಸತತವಾಗಿ ಆರು ಶುಕ್ರವಾರ ಈ ನಡಿಗೆಯನ್ನು ಆಯೋಜಿಸಲಾಗಿತ್ತು. ‘ಪ್ಯಾಲೆಸ್ಟೀನ್ ಮೂಲದ ವಲಸಿಗರಿಗೆ ಇಸ್ರೇಲ್ ಪ್ರವೇಶಕ್ಕೆ ಅನುಮತಿ ದೊರೆಯಬೇಕು’ ಎಂಬ ಪ್ರಮುಖ ಹಕ್ಕೊತ್ತಾಯದ ಜೊತೆಗೆ ಗಾಜಾ ಪಟ್ಟಿಯಲ್ಲಿ ನಿರಂತರವಾಗಿ ಮುಂದುವರೆದಿರುವ ಹಿಂಸೆ ನಿಲ್ಲಬೇಕು, ರಾಯಭಾರ ಕಚೇರಿಯನ್ನು ಜೆರುಸಲೆಮ್‌ಗೆ ಸ್ಥಳಾಂತರಿಸುವ ನಿರ್ಧಾರವನ್ನು ಅಮೆರಿಕ ಬದಲಿಸಬೇಕು ಎಂಬ ಘೋಷಣೆಯೊಂದಿಗೆ ಪ್ರತಿಭಟನಾಕಾರರು ಹೆಜ್ಜೆ ಹಾಕಿದರು. ಹೀಗೊಂದು ಚಳವಳಿ ಆರಂಭವಾಗುತ್ತಿದ್ದಂತೇ ಉಗ್ರ ಸಂಘಟನೆ ಹಮಾಸ್ ನಡಿಗೆಗೆ ಜೊತೆಯಾಯಿತು. ಪ್ರತಿಭಟನಾಕಾರರನ್ನು ಇಸ್ರೇಲ್ ಗಡಿ ದಾಟಲು ಪ್ರಚೋದಿಸಿತು. ಸಂಘರ್ಷ ಉಲ್ಬಣವಾದಾಗ ಇಸ್ರೇಲ್ ಸೇನೆ ದಾಳಿಗೆ ಮುಂದಾಯಿತು. 110 ಮಂದಿ ಮೃತಪಟ್ಟರು. ಸಾವಿರಾರು ಜನರಿಗೆ ಪೆಟ್ಟಾಯಿತು. ಹಗೆಯ ಉರಿಗೆ ‘ಪುನರಾಗಮನ ನಡಿಗೆ’ ಉದ್ದೀಪಕವಾಗಿ ಪರಿಣಮಿಸಿತು.

ಹಾಗೆ ನೋಡಿದರೆ, ಈ ಏಳು ದಶಕಗಳಲ್ಲಿ ಆ ನೆಲನೆತ್ತರು ಕುಡಿದದ್ದೇ ಹೆಚ್ಚು. ಪ್ಯಾಲೆಸ್ಟೀನಿಯರ ಪಾಲಿಗೆ ಈಎಪ್ಪತ್ತು ವರ್ಷ ದೀರ್ಘ ದುಃಸ್ವಪ್ನವಾದರೆ, ಯಹೂದಿಗಳಿಗೆ ಅಭದ್ರತೆ ಕಾಡಿದ ದಿನಗಳು. ಅವರೂ ನೆಮ್ಮದಿಯಿಂದ ಮೈಚೆಲ್ಲಿ ನಿದ್ರಿಸಲಿಲ್ಲ. ಈ ಅವಧಿಯಲ್ಲಿ ಜಟಾಪಟಿ, ಕದನ ಉಭಯ ಸಮುದಾಯಗಳ ದಿನದ ವಾರ್ತೆಯಾಗಿ ಮಾರ್ಪಟ್ಟಿತು. ಸಾಮಾನ್ಯವಾಗಿ ಯಹೂದಿಗಳು ತಮ್ಮ ಮೂಲವನ್ನು ಬಗೆಯುವಾಗ ದೊರೆ ಡೇವಿಡ್ ಮತ್ತು ಸಾಲೊಮನ್ನರ ತನಕ ಹೋಗುತ್ತಾರೆ. ಇದೀಗ ಇಸ್ರೇಲ್-ಪ್ಯಾಲೆಸ್ಟೀನ್ ಎಂದು ಕರೆಯಲ್ಪಡುವ ಭೂಮಿ, ದೊರೆ ಡೇವಿಡ್ ಕಾಲದಲ್ಲಿ ಇಡಿಯಾಗಿ ಯಹೂದಿಗಳ ನಾಡಾಗಿತ್ತು. ನಂತರ ಈ ನೆಲದ ಮೇಲೆ ಸಾಕಷ್ಟು ಆಕ್ರಮಣಗಳು ನಡೆದವು, ಯಹೂದಿಗಳು ಗುಳೆ ಹೊರಟರು. ಅರಬ್ಬರು ನೆಲೆನಿಂತರು. ಬೆಬಿಲೋನಿಯನ್ನರು, ರೋಮನ್ನರು, ಕೊನೆಗೆ ಬ್ರಿಟಿಷರು ಬೀಡುಬಿಟ್ಟು ದೇಶ ಆಳಿದರು. 1896ರ ಬಳಿಕ ಯಹೂದಿಗಳಲ್ಲಿ ತಾಯ್ನೆಲದ ಕುರಿತಾಗಿ ಹೊಸ ಜಾಗೃತಿಯೊಂದು ಮೂಡಿತು. ಯುರೋಪಿನಲ್ಲಿ ನಡೆಯುತ್ತಿದ್ದ ಜನಾಂಗೀಯ ಹತ್ಯೆಗಳಿಂದಾಗಿ, ತಮ್ಮದೇ ದೇಶ ಹೊಂದಬೇಕು ಎಂಬ ಇಚ್ಛೆ ಉತ್ಕಟವಾಯಿತು. 66 ದೇಶಗಳಲ್ಲಿ ಹರಡಿಕೊಂಡಿದ್ದ ಯಹೂದಿಗಳು ಪ್ಯಾಲೆಸ್ಟೀನ್‌ನತ್ತ ಮುಖ ಮಾಡಿದರು.

ಯಹೂದಿ ರಾಷ್ಟ್ರ ನಿರ್ಮಾಣಕ್ಕೆ ಅಗತ್ಯವಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆ ಸಮುದಾಯದ ಮುಖಂಡರು ಚಿಂತಿಸಿದರು. ಸಹಾಯಕ್ಕಾಗಿ ಇತರ ದೇಶಗಳ ಮೊರೆಹೋದರು. ಈ ಕುರಿತಂತೆ ಮುಖ್ಯವಾಗಿ ಇಂಗ್ಲೆಂಡ್ ಮತ್ತು ಅಮೆರಿಕದ ಮನವೊಲಿಸುವುದು ತೀರಾ ಅಗತ್ಯವಾಗಿತ್ತು. 1917ರ ನವೆಂಬರ್ 2ರಂದು ಇಂಗ್ಲೆಂಡಿನ ವಿದೇಶಾಂಗ ಕಾರ್ಯದರ್ಶಿ ಆರ್ಥರ್ ಬಾಲ್ಫೋರ್, ಬ್ರಿಟನ್ನಿನ ಯಹೂದಿ ಸಮುದಾಯದ ಮುಖ್ಯಸ್ಥರಿಗೆ ಪತ್ರ ಬರೆದು ‘ರಾಜಾಡಳಿತವು ಪ್ರತ್ಯೇಕ ಯಹೂದಿ ರಾಷ್ಟ್ರದ ಪ್ರಸ್ತಾವಕ್ಕೆ ಒಪ್ಪಿಗೆ ಸೂಚಿಸಿದೆ’ ಎಂದು ತಿಳಿಸಿದರು. ಅದೇ‘ಬಾಲ್ಫೋರ್ ಘೋಷಣೆ’ಯಾಗಿ ಇತಿಹಾಸದಲ್ಲಿ ಉಳಿಯಿತು.
ಯಹೂದಿ ರಾಷ್ಟ್ರಕ್ಕೆ ಅಡಿಗಲ್ಲಾಯಿತು. ಅಂದಿನಿಂದ ಇಸ್ರೇಲ್ ರಚನೆಗೆ ಬೇಕಾದ ಸಿದ್ಧತೆಗಳು ತೀವ್ರಗೊಂಡವು.

ಆದರೆ ಅಮೆರಿಕದ ಮನವೊಲಿಸುವುದು ಸುಲಭವಾಗಿರಲಿಲ್ಲ. ಪ್ಯಾಲೆಸ್ಟೀನ್ ವಿಷಯದಲ್ಲಿ ಯಾವುದೇ ನಿರ್ಣಯ ಕೈಗೊಳ್ಳದಂತೆ ಅಮೆರಿಕದ ಮೇಲೆ ಸೌದಿ ಒತ್ತಡ ಹೇರಿತ್ತು. ತಾವು ಸಾಯುವ ಕೆಲವು ದಿನಗಳ ಮುಂಚೆ ಅಂದರೆ 1945ರ ಏಪ್ರಿಲ್ 5ರಂದು ಅಮೆರಿಕ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅಂದಿನ ಸೌದಿ ರಾಜನಿಗೆ ಪತ್ರ ಬರೆದು, ‘ಪ್ಯಾಲೆಸ್ಟೀನ್ ವಿಷಯದಲ್ಲಿ ಯಾವುದೇ ಆತುರದ ನಿರ್ಧಾರ ತಳೆಯುವುದಿಲ್ಲ’ ಎಂಬ ಭರವಸೆ ನೀಡಿದ್ದರು. ಆದರೆ ಏಪ್ರಿಲ್ 12ರಂದು ತೀರಿಕೊಂಡರು. ರೂಸ್ವೆಲ್ಟ್ ಅನಿರೀಕ್ಷಿತ ಸಾವಿನ ಬಳಿಕ ಉಪಾಧ್ಯಕ್ಷ ಹುದ್ದೆಯಲ್ಲಿದ್ದ ಟ್ರೂಮನ್ ಅಧ್ಯಕ್ಷ ಪದವಿಗೆ ನಿಯೋಜನೆಗೊಂಡರು. ಅಮೆರಿಕದ ಯಹೂದಿ ಸಮುದಾಯ ಟ್ರೂಮನ್ ಬೆನ್ನುಬಿತ್ತು. ಏಪ್ರಿಲ್ 18ರಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ‘ಯಹೂದಿ ಸಮುದಾಯದ ಮುಖಂಡರು ನಿಮ್ಮನ್ನು ಭೇಟಿಮಾಡಿ, ಯಹೂದಿ ರಾಷ್ಟ್ರ ನಿರ್ಮಾಣಕ್ಕೆ ಸಹಕಾರ ಕೋರಲಿದ್ದಾರೆ. ಯಹೂದಿಗಳೊಂದಿಗೆ ಅಮೆರಿಕ ನಿಲ್ಲುವುದು ಅಮೆರಿಕದ ಹಿತಾಸಕ್ತಿಗೆ ಪೂರಕವಾಗಿದ್ದರೂ, ಪ್ಯಾಲೆಸ್ಟೀನ್ ವಿಷಯ ಗಂಭೀರ ಸ್ವರೂಪದ್ದಾಗಿದ್ದು, ಎಚ್ಚರಿಕೆಯ ಹೆಜ್ಜೆ ಇಡುವ ಅಗತ್ಯವಿದೆ’ ಎಂದು ನೂತನ ಅಧ್ಯಕ್ಷರಿಗೆ ತಿಳಿಸಿದ್ದರು. ಆದರೆ ಟ್ರೂಮನ್ ಈ ಸಲಹೆಗೆ ವಿರುದ್ಧವಾಗಿ ನಿರ್ಣಯ ಕೈಗೊಂಡರು. ಪ್ಯಾಲೆಸ್ಟೀನ್ ಮತ್ತು ಯಹೂದಿ ರಾಷ್ಟ್ರ ಕುರಿತ ಅಮೆರಿಕದ ನಿಲುವು ರೂಸ್ವೆಲ್ಟ್ ತೀರಿಕೊಂಡ ಆರು ದಿನಗಳಲ್ಲಿ ಬದಲಾಗಿತ್ತು!

ಟ್ರೂಮನ್ ತಳೆದ ನಿರ್ಧಾರದ ಹಿಂದೆ ಅವರ ರಾಜಕೀಯ ಮಹತ್ವಾಕಾಂಕ್ಷೆ ಇತ್ತು. ಮುಂದಿನ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವು ಸಾಧಿಸಲು ಯಹೂದಿ ಸಮುದಾಯದ ನೆರವು ಬೇಕು ಎಂಬಷ್ಟು ಅದಾಗಲೇ ಅಮೆರಿಕದಲ್ಲಿ ಯಹೂದಿಗಳು ಪ್ರಭಾವಿಗಳಾಗಿದ್ದರು. ಆಯಕಟ್ಟಿನಸ್ಥಳಗಳಲ್ಲಿ ಯಹೂದಿ ಸಮುದಾಯದ ಪರ ಅನುಕಂಪ ಇದ್ದ ಅಧಿಕಾರಿಗಳಿದ್ದರು. ಅಮೆರಿಕದ ಸಮಸ್ತ ಯಹೂದಿಗಳೂ ಪ್ರತ್ಯೇಕ ಯಹೂದಿ ರಾಷ್ಟ್ರ ಬೇಡಿಕೆಯ ಜೊತೆಗಿದ್ದಾರೆ ಎಂದು ಟ್ರೂಮನ್ ಅವರ ತಲೆತುಂಬಲಾಯಿತು. ಅರಬ್ ಮೂಲದ ಲಕ್ಷಾಂತರ ಜನ ಅಮೆರಿಕದಲ್ಲಿದ್ದರಾದರೂ ರಾಜಕೀಯವಾಗಿ ಪ್ರಭಾವ ಬೀರುವಷ್ಟು ಸಂಘಟಿತರಾಗಿರಲಿಲ್ಲ. ಟ್ರೂಮನ್ ವ್ಯಕ್ತಿತ್ವ ರೂಪುಗೊಂಡಿದ್ದ ಬಗೆಯೂ ಇಸ್ರೇಲ್ ಕುರಿತ ಅವರ ನಿಲುವನ್ನು ನಿರ್ದೇಶಿಸಿತ್ತು. ವೈಯಕ್ತಿಕ ಮತ್ತು ರಾಜಕೀಯ ಜೀವನದಲ್ಲಿ ಕಠಿಣ ಹಾದಿ ತುಳಿದು, ಯಾರೂ ಊಹಿಸದ ಗೆಲುವು ಕಂಡಿದ್ದ ಟ್ರೂಮನ್,ಯಾವ ಸವಾಲನ್ನಾದರೂ ಜಯಿಸಬಲ್ಲೆ ಎಂಬ ಮನಸ್ಥಿತಿಯಲ್ಲಿದ್ದರು. ಹಾಗಾಗಿ ಅಧ್ಯಕ್ಷರಾಗುತ್ತಲೇ ಈ ಗಂಭೀರ ಜಾಗತಿಕ ಸಮಸ್ಯೆಯ ಕುರಿತು ಅಚಲ ನಿಲುವು ತಳೆದರು.

1946ರ ಅಕ್ಟೋಬರ್ 4ರಂದು ಯಹೂದಿಗಳ ಪವಿತ್ರ ದಿನದಂದು (ಯಾಮ್ ಕಿಪ್ಪೂರ್), ಅರಬ್ ರಾಷ್ಟ್ರಗಳನ್ನಾಗಲೀ, ಮಿತ್ರ ರಾಷ್ಟ್ರ ಇಂಗ್ಲೆಂಡನ್ನಾಗಲೀ ಪರಿಗಣಿಸದೆ ಪ್ರತ್ಯೇಕ ಯಹೂದಿ ರಾಷ್ಟ್ರದ ಬೇಡಿಕೆಗೆ ಟ್ರೂಮನ್ ಬೆಂಬಲಸೂಚಿಸಿ ಯಹೂದಿ ಸಮುದಾಯಕ್ಕೆ ಸಂದೇಶ ರವಾನಿಸಿದರು. ಅಮೆರಿಕವನ್ನು ಅನುಸರಿಸಿದರೆ, ಅರಬ್ ರಾಷ್ಟ್ರಗಳೊಂದಿಗಿನ ಸಂಬಂಧ ಹದಗೆಡಲಿದೆ ಎಂಬ ಅಂಜಿಕೆಯಿಂದ ಪ್ಯಾಲೆಸ್ಟೀನ್ ಚೆಂಡನ್ನು ಬ್ರಿಟನ್ ವಿಶ್ವಸಂಸ್ಥೆಯ ಅಂಗಳಕ್ಕೆ ಹಾಕಿತು. 1947ರಲ್ಲಿ ವಿಶ್ವಸಂಸ್ಥೆ ವಿಭಜನೆಯ ಪ್ರಸ್ತಾಪ ಮುಂದಿಟ್ಟಿತು.

ಈ ಸಂದರ್ಭದಲ್ಲಿ ಯಹೂದಿ ಸಮುದಾಯದ ಮುಖಂಡರು ‘ಪ್ಯಾಲೆಸ್ಟೀನ್ ವಿಭಜನೆ’ಗೆ ಬೆಂಬಲ ಕೋರಿವಿವಿಧ ದೇಶಗಳ ಮುಖಂಡರಿಗೆ ಪತ್ರ ಬರೆದರು. ಭಾರತದ ಬೆಂಬಲವನ್ನೂ ಕೋರಲಾಗಿತ್ತು. ಆಗ ಗಾಂಧೀಜಿ ವಿಭಜನೆಯನ್ನು ವಿರೋಧಿಸಿದ್ದರು. ‘ಧರ್ಮದ ಆಧಾರದಲ್ಲಿ ದೇಶದ ವಿಭಜನೆ ಕೂಡದು’ ಎಂಬ ನಿಲುವನ್ನು ಪ್ರತಿಪಾದಿಸುತ್ತಿದ್ದ ಗಾಂಧೀಜಿ, ಪ್ಯಾಲೆಸ್ಟೀನ್ ವಿಭಜನೆಯನ್ನು ವಿರೋಧಿಸಿದ್ದು ಸಹಜವಾಗಿತ್ತು. ಆದರೆ ಭಾರತ ವಿಭಜನೆಗೆ ಸಹಮತ ಸೂಚಿಸಿದ್ದ ನೆಹರೂ, ಪ್ಯಾಲೆಸ್ಟೀನ್ ವಿಭಜನೆಯನ್ನು ವಿರೋಧಿಸಿದರು. ನೆಹರೂ ಮನವೊಲಿಸಲು 1947ರ ಜೂನ್ 13ರಂದು ವಿಜ್ಞಾನಿ ಐನ್‌ಸ್ಟೀನ್ ನಾಲ್ಕು ಪುಟದ ದೀರ್ಘಪತ್ರ ಬರೆದಿದ್ದರು. ಆ ಪತ್ರಕ್ಕೆ 1947ರ ಜುಲೈ 11ರಂದು ಉತ್ತರಿಸಿದ್ದ ನೆಹರೂ, ಯಹೂದಿ ಸಮುದಾಯಕ್ಕೆ ಅನುಕಂಪ ಸೂಚಿಸಿ ‘ಪ್ರತಿ ದೇಶವೂ ಮೊದಲಿಗೆ ತನ್ನ ಹಿತಾಸಕ್ತಿಯನ್ನು ಗಮನಿಸುತ್ತದೆ. ಅಂತರರಾಷ್ಟ್ರೀಯ ನೀತಿ, ರಾಷ್ಟ್ರೀಯ ನೀತಿಗೆ ಪೂರಕವಾಗಿದ್ದಾಗ ಮಾತ್ರ, ಅದರ ಪರವಾಗಿ ದೇಶ ದನಿ ಏರಿಸಿ ಮಾತನಾಡುತ್ತದೆ. ಇಲ್ಲವಾದಲ್ಲಿ ವಿರೋಧಿಸಲು ನಾಲ್ಕಾರು ಕಾರಣಗಳನ್ನು ಹುಡುಕಿಕೊಳ್ಳುತ್ತದೆ’ ಎನ್ನುವ ಮೂಲಕ ಯಹೂದಿಗಳ ಪರ ನಿಲ್ಲಲು, ಭಾರತ ಅಸಹಾಯಕ ಸ್ಥಿತಿಯಲ್ಲಿದೆ ಎಂಬುದನ್ನು ವಿವರಿಸಿದ್ದರು. ಆ ಅಸಹಾಯಕತೆಗೆ ಕಾರಣಗಳೇನಿತ್ತು ಎಂಬುದು ಬೇರೆಯದೇ ಚರ್ಚೆ.

ಕೊನೆಗೆ ವಿಶ್ವಸಂಸ್ಥೆ, ಪ್ಯಾಲೆಸ್ಟೀನ್ ವಿಭಜನೆಯ ನಿರ್ಣಯ ಮಾನ್ಯಮಾಡಿತು. ವಿಭಜನೆಯನ್ನು ಯಹೂದಿಗಳು ಒಪ್ಪಿಕೊಂಡರು, ಅರಬ್ಬರು ತಿರಸ್ಕರಿಸಿದರು. ಈಜಿಪ್ಟ್, ಜೋರ್ಡನ್, ಇರಾಕ್ ಮತ್ತು ಸಿರಿಯಾ ಜೊತೆಯಾಗಿ ನಿಂತು ಇಸ್ರೇಲಿನ ಮೇಲೆ ಯುದ್ಧ ಸಾರಿದವು. ಮೂರು ದೊಡ್ಡ ಯುದ್ಧಗಳ ನಡುವೆ, ಲೆಕ್ಕವಿಲ್ಲದಷ್ಟು ಚಕಮಕಿ, ದಾಳಿ ಪ್ರತಿದಾಳಿಗಳು ನಡೆದವು. ಇಸ್ರೇಲ್ ಆಕ್ರಮಣಶೀಲ ರಾಷ್ಟ್ರವಾಗಿ ಬದಲಾಯಿತು. ಪ್ಯಾಲೆಸ್ಟೀನ್ ಮೂಲದ ಅರಬ್ಬರ ಬದುಕು ಅತಂತ್ರವಾಯಿತು. ತನ್ನ ದೇಶದ ಇತಿಹಾಸ ಪಠ್ಯದಲ್ಲಿ ‘ನಕ್ಭಾ’ದ ಉಲ್ಲೇಖ ಇರದಂತೆ ಇಸ್ರೇಲ್ ನೋಡಿಕೊಂಡಿತು. ‘ಗಾಜಾ ಪಟ್ಟಿ’ ಪ್ಯಾಲೆಸ್ಟೀನಿಯರ ಪಾಲಿಗೆ ಬಯಲು ಬಂದಿಖಾನೆಯಂತಾಯಿತು.

ಈ 70 ವರ್ಷಗಳಲ್ಲಿ ಅಭದ್ರತೆಯ ನಡುವೆಯೇ ಇಸ್ರೇಲ್ ಸಾಕಷ್ಟು ಬೆಳೆಯಿತು. ಬ್ರಿಟಿಷ್ ವಸಾಹತು ದೇಶಗಳ ಪೈಕಿ ಕಡಿಮೆ ಅವಧಿಯಲ್ಲಿ ಹೆಚ್ಚು ಅಭ್ಯುದಯ ಕಂಡ ದೇಶವಾಗಿ ಇಂದು ಇಸ್ರೇಲ್ ಜಗತ್ತಿನ ಗಮನ ಸೆಳೆದಿದೆ. ಇಸ್ರೇಲ್ ಅನ್ನು ಏಕಾಂಗಿಯಾಗಿಸುವ ಪ್ರಯತ್ನವನ್ನು ಪ್ಯಾಲೆಸ್ಟೀನ್ ಮತ್ತು ಅರಬ್ ರಾಷ್ಟ್ರಗಳು ಮಾಡುತ್ತಿವೆಯಾದರೂ, ಆ ದೇಶದ ಸಾಮರ್ಥ್ಯದಿಂದಾಗಿ 161 ರಾಷ್ಟ್ರಗಳು ಇಂದು ಇಸ್ರೇಲ್ ಅಸ್ತಿತ್ವವನ್ನು ಗುರುತಿಸಿವೆ.

ಒಟ್ಟಿನಲ್ಲಿ, ಅಂದು ಯಹೂದಿಗಳಿಗೆ ನಮ್ಮದು ಎಂದುಕೊಳ್ಳಲು ದೇಶ ಒಂದರ ಅವಶ್ಯಕತೆ ಇತ್ತು. ಐರೋಪ್ಯ ರಾಷ್ಟ್ರಗಳಲ್ಲಿ ಉಸಿರುಗಟ್ಟುವ ಸ್ಥಿತಿಯಲ್ಲಿದ್ದ ಅಸಂಖ್ಯ ಯಹೂದಿಗಳ ಪ್ರಾಣ ಉಳಿಯಿತು. ಪ್ಯಾಲೆಸ್ಟೀನಿಯರಿಗೂ ಅವರದ್ದೇ ಆದ ರಾಷ್ಟ್ರದ, ಭೀತಿ ಇರದ ವಾತಾವರಣದ ಅಗತ್ಯ ಇದೆ ಎಂಬುದನ್ನು ಇಸ್ರೇಲ್ ಇನ್ನಾದರೂ ಮನಗಾಣಬೇಕು. ಪ್ಯಾಲೆಸ್ಟೀನ್ ಜನರ ಬವಣೆ, ಸಂಕಷ್ಟಗಳನ್ನು ಅದು ಉಪೇಕ್ಷಿಸಬಾರದು. ಅಂತೆಯೇ ‘ದ್ವಿರಾಷ್ಟ್ರ ಸೂತ್ರ’ ಮಾತ್ರ ಬಿಕ್ಕಟ್ಟಿಗೆ ಪರಿಹಾರ ಎಂಬುದು ಪ್ಯಾಲೆಸ್ಟೀನಿಯರಿಗೆ ಮನವರಿಕೆ ಆಗಬೇಕು. ಹಿಂಸೆಗೆ ಇಂಬುಕೊಡುವ ಹಮಾಸ್‌ನಂತಹ ಸಂಘಟನೆಯ ಹಿಡಿತದಿಂದ ಪ್ಯಾಲೆಸ್ಟೀನ್ ಜನ ಹೊರಬರಬೇಕು. ಆಗ ಮಾತ್ರ ಮೆಡಿಟರೇನಿಯನ್ ಸಮುದ್ರದ ಗದ್ದಲದ ತೀರದಲ್ಲಿ ತಿಳಿಗಾಳಿ ಬೀಸಬಹುದು.

ನಿಜ, 1948ರ ಮೇ 15ರಂದು ಪ್ಯಾಲೆಸ್ಟೀನಿಯರ ಮೇಲೆ ನಡೆದ ಕ್ರೌರ್ಯ ಅಕ್ಷಮ್ಯ, ಅಮಾನವೀಯ. ಆದರೆ ಇತಿಹಾಸದ ದುಃಸ್ವಪ್ನ ವರ್ತಮಾನದ ಕನವರಿಕೆಯಾಗಿ ಮುಂದುವರಿದರೆ ಸುಖವಿಲ್ಲ. ಹಮಾಸ್, ಇರಾನ್ ಮತ್ತು ಸ್ವಹಿತಾಸಕ್ತಿಯನ್ನು ಮುಂದುಮಾಡುವ ಇತರ ಅರಬ್ ರಾಷ್ಟ್ರಗಳನ್ನು ಚರ್ಚೆಯ ಹೊರಗಿಟ್ಟು, ‘ದ್ವಿರಾಷ್ಟ್ರ ಸೂತ್ರ’ಕ್ಕೆ ಬದ್ಧ ಎಂಬ ಘೋಷಣೆಯೊಂದಿಗೆ ಪ್ಯಾಲೆಸ್ಟೀನಿಯರು ‘ಪುನರಾಗಮನದ ಹೆಜ್ಜೆ’ ಹಾಕಿದ್ದರೆ ಆಗ ಆ ನಡಿಗೆಗೆ ಹೆಚ್ಚಿನ ಅರ್ಥ ಬರುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.